ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೈಲು ಬಂತು ರೈಲು..

-ವೆಂಕಟೇಶ ಚಾಗಿ

“ಈ ವರ್ಷ ನಮ್ಮೂರ ಜಾತ್ರೆಯಲ್ಲಿ ನನಗೆ ಒಂದು ರೈಲು ಕೊಡಿಸಲೇಬೇಕು.. ಇಲ್ಲದಿದ್ದರೆ ನಾನು ಶಾಲೆಗೆ ಹೋಗೋದಿಲ್ಲ.. ಊಟನೂ ಮಾಡೋದಿಲ್ಲ.. ಯಾರ ಜೊತೆನೂ ಮಾತಾಡೋದಿಲ್ಲ..” ಎಂದು ಪಿಂಕು ಮನೆಯಲ್ಲಿ ಹಠ ಹಿಡಿದು ಕುಳಿತಿದ್ದ. ಕಳೆದ ವರ್ಷ  ಒಂದು ಪ್ಲಾಸ್ಟಿಕ್ ರೈಲು ಕೊಡಿಸಲಾಗಿತ್ತು. ಆದರೆ ಎರಡು ಮೂರು ದಿನಗಳಲ್ಲಿ ಪ್ಲಾಸ್ಟಿಕ್ ರೈಲು ಮೂರ್ನಾಲ್ಕು ತುಂಡುಗಳಾಗಿತ್ತು. 

“ದುಡ್ಡು ಕೊಟ್ಟು ಕೊಂಡು ತಂದ ರೈಲನ್ನು ಹೀಗೆ ತುಂಡು ತುಂಡು ಮಾಡಿದರೆ ಮುಂದಿನ ಸಾರಿ ನಿನಗೆ ಯಾವುದೇ ಆಟಿಕೆಗಳನ್ನು ಕೊಡಿಸುವುದಿಲ್ಲ” ಎಂದು ಅಪ್ಪ ಗದರಿಸಿದ್ದರು. ಅಮ್ಮ ಕೂಡ “ನಿನಗೆ ಯಾವುದೇ ಆಟಿಕಗಳನ್ನು ಕೊಡಿಸಬಾರದು.. ಚೆನ್ನಾಗಿ ಇಟ್ಟುಕೊಳ್ಳುವುದಿಲ್ಲ” ಎಂದು ಬೈದಿದ್ದರು.  ಆದರೂ ಪಿಂಕು ಅದೇ ರೈಲನ್ನು ದಾರದಿಂದ ಕಟ್ಟಿ ಅದರ ಮೇಲೆ ದೊಡ್ಡ ದೊಡ್ಡ ಕಲ್ಲುಗಳನ್ನು ಇಟ್ಟು ಮಣ್ಣಿನಲ್ಲಿ ಆಟವಾಡುತ್ತಿದ್ದ. ಒಮ್ಮೆಯಂತೂ ತಾನು ರೈಲಿನ ಮೇಲೆ  ಹತ್ತಿ ನಿಂತುಬಿಟ್ಟಿದ್ದ. ಇದರಿಂದಾಗಿ ರೈಲು ಮೂರು ಚೂರುಗಳು ಇದ್ದದ್ದು ನೂರು ಚೂರುಗಳಾಗಿತ್ತು. ಆದರೂ ಅದೇ ಚೂರುಗಳನ್ನು ಬಳಸಿಕೊಂಡು ಆಟವಾಡುತ್ತಿದ್ದ. ಆದರೆ ಈಗ ಜಾತ್ರೆ ಹತ್ತಿರ ಬರುತ್ತಿದ್ದರಿಂದ ನನಗೆ ಹೊಸದೊಂದು ರೈಲು ಬೇಕೇ ಬೇಕು ಎದು ಹಠ ಹಿಡಿದಿದ್ದ. 

ಒಮ್ಮೆ ಕುಟುಂಬದೊಂದಿಗೆ ಸಿನಿಮಾ ನೋಡಲು ಹೋದಾಗ ಸಿನಿಮಾದಲ್ಲಿ ಬಂದಂತಹ ಟ್ರೈನ್ ಅನ್ನು ಕಂಡು “ಅದು ಬೇಕೇ ಬೇಕು” ಎಂದು ಅಂದಿದ್ದ.

 “ಆ ಟ್ರೈನು ಬಹಳ ದೊಡ್ಡದಿರುತ್ತದೆ ಅದು ತುಂಬಾ ಸದ್ದು ಮಾಡುತ್ತೆ ಹಾಗೂ ಅದು ತುಂಬಾ ಅಪಾಯಕಾರಿ” ಎಂದು ಅಪ್ಪ ಅಮ್ಮ ಅವನಿಗೆ ಸಮಜಾಯಿಸಿ ನೀಡಿದ್ದರು. 

ರೈಲಿನ ಬಗ್ಗೆ ಪಿಂಕು ತುಂಬಾ ಹಚ್ಚಿಕೊಂಡಿದ್ದ . ತನ್ನ ಪುಸ್ತಕದ ಒಂದು ಪುಟದಲ್ಲಿ ಆ ರೈಲಿಗಾಗಿ ವಿಶೇಷವಾಗಿ ಒಂದು ಚಿತ್ರವನ್ನು ಬರೆದಿದ್ದ. ಅಪ್ಪ ತರಸುತ್ತಿದ್ದ ಪತ್ರಿಕೆಯಲ್ಲಿ ರೈಲಿನ ಚಿತ್ರ ಬಂದಾಗಲೆಲ್ಲ ಆ ಚಿತ್ರವನ್ನು ಕತ್ತರಿಸಿ ತನ್ನ ನೋಟು ಪುಸ್ತಕಕ್ಕೆ ಅಂಟಿಸಿಕೊಳ್ಳುತ್ತಿದ್ದ. ಅವನ ನೋಟು ಪುಸ್ತಕಗಳಲ್ಲಿ ಹಾಗೂ ಪಠ್ಯ ಪುಸ್ತಕಗಳಲ್ಲಿ ಯಾವುದಾದರೂ ಒಂದು ಪುಟದೊಳಗೆ ರೈಲಿನ ಚಿತ್ರ ಇದ್ದೇ ಇರುತ್ತಿತ್ತು. ತಾನು ನಿಜವಾದ ರೈಲು ನೋಡದಿದ್ದರೂ ರೈಲಿನ ಬಗ್ಗೆ  ತನ್ನ ಕಲ್ಪನೆ ಹಾಗೂ ಕನಸುಗಳನ್ನು ತನ್ನ ಸ್ನೇಹಿತರೊಂದಿಗೆ ಹಾಗೂ ತನ್ನ ಅಮ್ಮನೊಂದಿಗೆ ಹಂಚಿಕೊಳ್ಳುತ್ತಿದ್ದ.  ಮುಂದೆ ತಾನು ದೊಡ್ಡವನಾದ ನಂತರ ರೈಲನ್ನು ಓಡಿಸುವ ಡ್ರೈವರ್ ಆಗಿ ಕೆಲಸಕ್ಕೆ ಸೇರುವೆ ಎಂದು ಅನ್ನುತ್ತಿದ್ದ. ಅವನ ಮಾತುಗಳನ್ನು ಕೇಳಿ ಮನೆಯಲ್ಲಿ ನಗುತ್ತಿದ್ದರು. 

ಅಂದು ಬೆಳಗ್ಗೆ  ಪಿಂಕುವಿನ ತಂದೆ ಪತ್ರಿಕೆಯನ್ನು ಓದುತ್ತಿರುವಾಗ ಪತ್ರಿಕೆಯಲ್ಲಿ ತಮ್ಮ ಊರಿಗೆ ರೈಲು ಬರುವುದಾಗಿ ದಿನಾಂಕವನ್ನು ಘೋಷಣೆ ಮಾಡಲಾಗಿತ್ತು. ಆಗ “ಪಿಂಕು ಪಿಂಕು ಎಲ್ಲಿದ್ದೀಯಾ ಬಾ ಇಲ್ಲಿ..” ಎಂದು ಅಪ್ಪ ಕರೆದರು . ಪಿಂಕು ತಂದೆ ಕರೆದೊಡನೆ ಓಡಿಬಂದು,

“ಏನಪ್ಪಾ ..?”ಎಂದು ಕೇಳಿದ. 

“ಪಿಂಕು ನೋಡಿಲ್ಲಿ ನಮ್ಮೂರಿಗೆ ಕೆಲವೇ ದಿನಗಳಲ್ಲಿ ರೈಲು ಬರ್ತದಂತೆ. ನೀನು ರೈಲನ್ನು ನಮ್ಮ ಊರಲ್ಲೇ ನೋಡಬಹುದು. ನಮ್ಮ ಊರಿಗೆ ಬಂದಂತ ರೈಲಿನಲ್ಲಿ ಹತ್ತಿ ಬೇರೆ ಊರಿಗೆ ಹೋಗಬಹುದು” ಎಂದರು. 

ಪಿಂಕುವಿಗೆ ತುಂಬಾ ಖುಷಿಯಾಯಿತು. “ಹೌದಾ…? ರೈಲು ನಮ್ಮೂರಿಗೆ ಬರುತ್ತದೆಯಾ …? ಅಪ್ಪ ಯಾವಾಗ ಬರುತ್ತೆ ..? ಎಲ್ಲಿ ಬರುತ್ತೆ…?” ಎಂದು ಪಿಂಕು ತಂದೆಗೆ ಮೇಲಿಂದ ಮೇಲೆ ಪ್ರಶ್ನೆ ಹಾಕಿದ. 

“ಸ್ವಲ್ಪ ಇರು ..ನಮ್ಮ ಊರಿಗೆ ಆಗಲೇ ರೈಲ್ವೆ ಹಳಿ ಹಾಕಲಾಗಿದೆ. ಆದರೆ ಬಹಳ ದಿನಗಳಿಂದ ನಮ್ಮೂರಿಗೆ ರೈಲು ಬಂದೇ ಇಲ್ಲ. ಈಗ ರೈಲು ಓಡಿಸಲು ದಿನಾಂಕ ನಿಗದಿಪಡಿಸಲಾಗಿದೆ. ಮುಂದಿನ ತಿಂಗಳು ಒಂದನೇ ತಾರೀಕಿಗೆ ಮಿನಿಸ್ಟ್ರು ಬಂದು ರೈಲಿಗೆ ಹಸಿರು ನಿಶಾನೆ ತೋರಿಸುವರು. ಅಂದಿನಿಂದ ಪ್ರತಿದಿನ ರೈಲು ದೂರದ ಊರಿಗೆ ಹೋಗುತ್ತದೆ” ಎಂದರು . 

“ನಾನು ಕೂಡ ರೈಲಿನಲ್ಲಿ ಹೋಗಬಹುದಾ..?” ಎಂದು ಪಿಂಕು ಕೇಳಿದ. “ಹೌದು ನೀನು ಅಜ್ಜಿಯ ಊರಿಗೆ ಹೋಗಬೇಕಾದರೆ ರೈಲಿನಲ್ಲಿ  ಹೋಗಬಹುದು*  ಎಂದರು. 

ಪಿಂಕು ರೈಲು ಬರುವ ದಿನಾಂಕವನ್ನು ಪ್ರತಿದಿನ ನೋಡುತ್ತಾ ಇದ್ದ. ಪ್ರತಿದಿನ ಬೆಳಗಾಗುತ್ತಿದ್ದಂತೆ ರೈಲು ಬರುವ …ಆರಂಭವಾಗುವ , ಆರಂಭವಾಗಲು ಉಳಿದಿರುವ ದಿನಗಳನ್ನು ಲೆಕ್ಕ ಹಾಕುತ್ತಿದ್ದ. ತನ್ನ ಸ್ನೇಹಿತರಿಗೆಲ್ಲ ಇನ್ನು ಕೆಲವೇ ದಿನಗಳಲ್ಲಿ ನಮ್ಮ ಊರಿಗೆ  ಬರ್ತದಂತೆ, ನಾವು ರೈಲಿನಲ್ಲಿ ನಮ್ಮ ಅಜ್ಜಿಯ ಊರಿಗೆ ಹೋಗುವೆವು” ಎಂದು ತನ್ನ ಸ್ನೇಹಿತರಿಗೆಲ್ಲ  ಹೇಳಿದ. 

“ನಾವು ಇನ್ನು ಮುಂದೆ ಅಜ್ಜಿಯ ಊರಿಗೆ ರೈಲಿನಲ್ಲಿಯೇ ಹೋಗಬೇಕು” ಎನ್ನುತ್ತಿದ್ದ. 

ರೈಲು ಉದ್ಘಾಟನೆಯಾಗುವ ದಿನ ಬಂದೇ ಬಿಟ್ಟಿತು . ಪಿಂಕು ತಂದೆಯ ಜೊತೆ ಮಾಳಿಗೆಯ ಮೇಲೆ ನಿಂತು ದೂರದಲ್ಲಿ ಕಾಣುತ್ತಿದ್ದ ರೈಲ್ವೆ ಹಳಿಯನ್ನೇ ನೋಡುತ್ತಾ ನಿಂತ. 

“ಪಿಂಕು.. ಇನ್ನೂ ರೈಲ್ವೆ ಉದ್ಘಾಟನೆ ಆಗುವುದು ತುಂಬಾ ಸಮಯ ಹಿಡಿಯುತ್ತೆ. ಉದ್ಘಾಟನೆ ನಂತರ ರೈಲ್ವೆ ಹೋಗುವುದನ್ನು ನೀನು ನೋಡಬಹುದು. ಆಮೇಲೆ ಬರೋಣ ಬಾ”  ಎಂದರು ಅಪ್ಪ.  “ನಾನು ಈ ದಿನ ರೈಲ್ವೆ ಬರೋದನ್ನು ನೋಡಲೇಬೇಕು. ಅದೆಷ್ಟೇ ಸಮಯ ಆಗಲಿ ನಾನು ಇಲ್ಲಿ ನಿಂತು ರೈಲನ್ನು ನೋಡುತ್ತೇನೆ. ನೀವು ಹೋಗಿ ಅಪ್ಪ” ಎಂದನು. 

ಪಿಂಕು ರೈಲ್ವೆ ಬರುವುದನ್ನು ನಿರೀಕ್ಷಿಸುತ್ತಾ ನಿಂತನು. 

ಕೆಲವು ನಿಮಿಷಗಳ ನಂತರ ದೂರದಲ್ಲಿ ರೈಲಿನ ಸದ್ದು ಉಂಟಾಯಿತು. “ಅಮ್ಮ… ಬೇಗ ಬನ್ನಿ ರೈಲು ಬರುತ್ತಿದೆ. ರೈಲು  ಬರುವ ಶಬ್ದ ಕೇಳುತ್ತಿದೆ” ಎಂದ. 

ಪಿಂಕುವಿನ ಕೂಗಾಟವನ್ನು ಕಂಡು ಅಪ್ಪ- ಅಮ್ಮ ಮಾಳಿಗೆಯ ಮೇಲೆ ಬಂದರು. ದೂರದಲ್ಲಿ ರೈಲಿನಲ್ಲಿ ಹಳೆಯ ಮೇಲೆ ರೈಲು ಇನ್ನೂ ಬಂದಿರಲಿಲ್ಲ . “ರೈಲು ಬರುವುದು ಇನ್ನೂ ತಡವಾಗಬಹುದು ಇಷ್ಟು ಬೇಗ ನಮ್ಮನ್ನು ಏಕೆ ಕರೆದೆ …?”ಎಂದು ಅಮ್ಮ ಅಂದರು. “ರೈಲು ಕೂಗುವುದು ಕೇಳಿಸಿತು ಅದಕ್ಕೆ ಕರೆದೆ. ನೀವು ರೈಲನ್ನು ನೋಡಿರಲ್ಲ.. ಈಗಲಾದರೂ ನೋಡಿ ರೈಲು ಹೇಗಿರುತ್ತದೆ ಎಂದು” ಎಂದು ಪಿಂಕು ಅಂದ. “ಆಗಲಪ್ಪ ನಾವು ನಿನ್ನ ಜೊತೆ ನೋಡುವ.. ಬೇಗ ರೈಲು ತೋರಿಸು” ಎಂದರು ಅಪ್ಪ.

ಕೆಲವೇ ನಿಮಿಷಗಳಲ್ಲಿ ಶೃಂಗಾರಗೊಂಡ ರೈಲು ದೂರದಿಂದ ಬಂದೇ ಬಿಟ್ಟಿತು. ಪಿಂಕು “ರೈಲು ಬಂತು …ರೈಲು ಬಂತು” ಎಂದು ಜೋರಾಗಿ ಕೂಗು ತೊಡಗಿದ. ರೈಲು  ಕೂಗುತ್ತಾ ಹಳೆಗಳ ಮೇಲೆ ಬಂದೇಬಿಟ್ಟಿತು. “ತುಂಬಾ ಸುಂದರವಾದ ರೈಲು ..ತುಂಬಾ ದೊಡ್ಡದಾದ ರೈಲು.. ನಮ್ಮೂರ ರೈಲು…” ಎನ್ನುತ್ತಾ ಕೂಗಾಡಿದನು. ಅವನ ಕೂಗು ಮನೆಯ ಸುತ್ತಮುತ್ತಲೇ ಇರುವ ಜನಗಳೆಲ್ಲ ಕೇಳಿಸಿತು. ಕೆಲವರು ಮಾಳಿಗೆಯ ಮೇಲೆ ಹತ್ತಿ ರೈಲನ್ನು ನೋಡಿದರು . .  ಪಿಂಕು ಎಲ್ಲ ಸ್ನೇಹಿತರ ಜೊತೆ ಸೇರಿ “ರೈಲು ಬಂತು ರೈಲು…” ಎಂದು ಕೂಗುತ್ತಾ ಸಂತಸಗೊಂಡನು.

‍ಲೇಖಕರು Admin

12 May, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading