ಲಂಕೇಶರು ಹೇಳಿದ ರೈತನ ಕಥೆ..

310925_287754464584819_600554537_n

ಜಗದೀಶ್ ಕೊಪ್ಪ

ನನಗೆ ನೆನಪಿರುವಂತೆ 1980ರ ಜುಲೈ ಅಥವಾ ಸೆಪ್ಟಂಬರ್ ತಿಂಗಳಿನಲ್ಲಿ ಮೇಷ್ಟ್ರು “ಲಂಕೇಶ್ ಪತ್ರಿಕೆಯನ್ನು ಆರಂಭಿಸಿದರು. ನಂತರ ಮರುವರ್ಷ ಒಂದು ವಾರ ತಮ್ಮ ಕಾಲಂ ಒಂದರಲ್ಲಿ ಶಿವಮೊಗ್ಗನ ರೈತನ ಕಥೆಯನ್ನು ಹಾಸ್ಯದ ದಾಟಿಯಲ್ಲಿ ಬರೆದಿದ್ದರು. ಆ ಕಥೆಗೆ ಆ ಕಾಲಘಟ್ಟದ ಗ್ರಾಮಾಂತರ ರೈತರ ಬವಣೆಗಳನ್ನು ಹಿನ್ನಲೆಯಾಗಿಟ್ಟುಕೊಂಡಿದ್ದರು. ಆ ಬವಣೆ ಏನೆಂದರೆ, ಗ್ರಾಮಾಂತರ ಪ್ರದೇಶದ ನಮ್ಮ ಮನೆಗಳು ಮಣ್ಣಿ ಗೋಡೆಗಳಿಂದ ಕೂಡಿರುತ್ತಿದ್ದವು. ಜೊತೆಗೆ ನೆಲ ಕೂಡ ಮಣ್ಣಿನಾದಾಗಿದ್ದು ಪ್ರತಿ ಸೋಮವಾರ ನಮ್ಮ ಅವ್ವಂದಿರು ಇಲ್ಲವೆ ಅಕ್ಕ ತಂಗಿಯರು ಸಗಣೆಯಿಂದ ಸಾರಿಸಿ, ದೂಳು ಹೇಳದಂತೆ ಚೊಕ್ಕಟ ಮಾಡುತ್ತಿದ್ದರು. ಆದರೆ ಸಗಣಿ ಸಾರಿಸಿದ ಎರಡು ಮೂರು ದಿನಕ್ಕೆ ನೆಲದಲ್ಲಿ ಚಕ್ಕೆ ಏಳುತ್ತಿದ್ದವು.

ಏನಾದರೂ ಮಾಡಿ ನೆಲಕ್ಕೆ ಮತ್ತು ಬಚ್ಚಲು ಮನೆಗೆ ಸೀಮೆಂಟಿನಿಂದ ಗಿಲಾವ್ ಮಾಡಿಸಬೇಕೆಂಬುದು ನಮ್ಮ ಅಪ್ಪಂದಿರ ಆಸೆಯಾಗಿರುತ್ತಿತ್ತು. 1970 ರ ದಶಕದಲ್ಲಿ 50 ಕೆ.ಜಿ. ಸಿಮೆಂಟ್ ಚೀಲಕ್ಕೆ ನಾಲ್ಕು ರೂಪಾಯಿ ಬೆಲೆ ಇತ್ತು. ಆದರೆ ಸಿಮೆಂಟ್ ಸುಲಭವಾಗಿ ಮಾರಾಟಕ್ಕೆ ದೊರೆಯುತ್ತಿರಲಿಲ್ಲ. ಮನೆ ದುರಸ್ತಿಗೆ ಸಿಮೆಂಟ್ ಬೇಕಾದರೆ, ರೈತರು ಶ್ಯಾನುಭೋಗನ (ವಿಲೇಜ್ ಅಕೌಂಟೆಂಟ್) ಬಳಿ ಅರ್ಜಿಗೆ ಶಿಪಾರಸ್ಸು ಬರೆಸಿಕೊಂಡು ಅದನ್ನು ತಾಲ್ಲೂಕು ಕೇಂದ್ರಕ್ಕೆ ಹೋಗಿ ತಹಸಿಲ್ದಾರ್ ಗೆ ಕೊಡಬೇಕಿತ್ತು. ತಿಂಗಳು ನಂತರ ನಮಗೆ ಒಂದೊ, ಎರಡು ಚೀಲ ಸಿಮೇಂಟ್ ಕೊಳ್ಳಲಿಕ್ಕೆ ಅನುಮತಿ ಚೀಟಿ ದೊರೆಯುತ್ತಿತ್ತು. ಆ ಚೀಟಿಯನ್ನು ಮಾರಾಟಗಾರರಿಗೆ ಕೊಟ್ಟು ಸಿಮೆಂಟ್ ಪಡೆಯಬೇಕಿತ್ತು. ಹಾಗಾಗಿ ಆ ಕಾಲದಲ್ಲಿ ಲೆವಿ ಸಿಮೆಂಟ್ ಎಂದು ಅದನ್ನು ಕರೆಯುತ್ತಿದ್ದರು. ಹೀಗೆ ಸಿಕ್ಕ ಸಿಮೆಂಟ್ ನಲ್ಲಿ ನೆಲಕ್ಕೆ ರೆಡ್ ಆಕ್ಸೈಡ್ ನಿಂದ ಗಾರೆ ನೆಲ ಮಾಡಿಕೊಂಡು, ಉಳಿದದ್ದನ್ನು ಬಚ್ಚಲು ಮನೆಯಲ್ಲಿ ನೀರು ಸರಾಗವಾಗಿ ಹರಿಯಲು ನೆಲ ಮತ್ತು ಗೋಡೆಗೆ ಸಿಮೇಂಟ್ ಸವರುತ್ತಿದ್ದರು. ( ವಾರಕ್ಕೆ ಒಂದೇ ಸ್ನಾನ)

13GFP__LANKESH_2338892g

ರೈತರ ಇಂತಹ ಬವಣೆಗಳ ಅರಿವಿದ್ದ ಲಂಕೇಶರು ಶಿವಮೊಗ್ಗ ರೈತನ ಕಥೆ ಬರೆದರು. ( ಟಿಪ್ಪಣಿ) ಒಬ್ಬ ರೈತನ ಜಮೀನಿಗೆ ಕಾಡು ಪ್ರಾಣಿಗಳ ಕಾಟ ವಿಪರೀತ ಎನಿಸಿದಾಗ, ಇವುಗಳ ನಿಗ್ರಹಕ್ಕಾಗಿ ನನಗೆ ಒಂದು ಪಿರಂಗಿ ಕೊಳ್ಳಲು ಲೈಸನ್ಸ್ ನೀಡಬೇಕೆಂದು ತಹಸಿಲ್ದಾರ್ ಗೆ ಅರ್ಜಿ ಸಲ್ಲಿಸಿದ. ಅರ್ಜಿ ನೋಡಿ ತಹಸಿಲ್ದಾರ್ ಗೆ ತಲೆ ಕೆಟ್ಟು ಹೋಯಿತು. ರೈತನನ್ನು ಕರೆಸಿ ವಿಚಾರಣೆ ನಡೆಸಿದರು. ಅವರಿಬ್ಬರ ಸಂಭಾಷಣೆ ಹೀಗಿತ್ತು.

ಏನಯ್ಯಾ ನೀನಾ ಪಿರಂಗಿಗೆ ಅರ್ಜಿ ಸಲ್ಲಿಸಿರೋದು?

ರೈತ- ಹೌದು ಸ್ವಾಮಿ

ಪಿರಂಗಿ ಮೋಡಿದ್ದೀಯಾ?

ರೈತ- ನೋಡಿದ್ದೀನಿ ಸ್ವಾಮಿ.

ಹೇಗಿದೆ ಹೇಳು?

ರೈತ- ಕೊಳವೆ ಆಕಾರದಲ್ಲಿ ಏಳೆಂಟು ಅಡಿ ಉದ್ದವಿರುತ್ತೆ ಸ್ವಾಮಿ. ಹಿಂದೆ ರಾಜ ಮಹರಾಜರು ಯುದ್ಧದಲ್ಲಿ ಅದನ್ನು ಬಳಸುತ್ತಿದ್ದರು.
ಮತ್ತೇ ಕಾಡು ಪ್ರಾಣಿ ನಿಗ್ರಹಕ್ಕೆ ಪಿರಂಗಿ ಬೇಕು ಎಂದು ಅರ್ಜಿ ಬರೆದಿದ್ದೀಯಾ ಏಕೆ?

ರೈತ- ಇನ್ನೇನು ಮಾಡ್ಲಿ ಸ್ವಾಮಿ? ಹೋದ ವರ್ಷ ಹತ್ತು ಮೂಟೆ ಸಿಮೆಂಟ್ ಬೇಕು ಅಂತ ಅರ್ಜಿ ಕೊಟ್ಟಿದ್ದೆ. ನೀವು ಎರಡು ಚೀಲ ಕೊಟ್ಟಿರಿ. ಅದಕ್ಕೆ ಪಿರಂಗಿ ಬೇಕು ಅಂತ ಅರ್ಜಿ ಸಲ್ಲಿಸಿದ್ದೀನಿ. ಕೊನೆಗೆ ಬಂದೂಕನಾದ್ರು ಸಿಗಲಿ ಅಂತಾ. ನಾನು ಬಂದೂಕಿಗೆ ಅರ್ಜಿ ಸಲ್ಲಿಸಿದಾಗ, ನೀವು ದೀಪಾವಳಿ ಹಬ್ಬದಲ್ಲಿ ಚಿನಕುರುಳಿ ಪಟಾಕಿ ಹೊಡಿಯುವ ಗನ್ ಕೊಟ್ರೆ ಏನು ಮಾಡೋದು?

ನಂತರ ತಹಸಿಲ್ದಾರ್ ನಗುತ್ತಾ ಲೈಸನ್ಸ್ ಕೊಟ್ಟನಂತೆ. ರೈತರು ದಿಕ್ಕೆಟ್ಟು ಆತ್ಮ ಹತ್ಯೆಯ ಮೂಲಕ ತರಗೆಲೆಗಳಂತೆ ನೆಲಕ್ಕೆ ಉರುಳುತ್ತಿರುವ ಈ ಸಂದರ್ಭದಲ್ಲಿ ಲಂಕೇಶರು ಸೃಷ್ಟಿಸಿದ ಬುದ್ಧಿವಂತ ರೈತ ನೆನಪಾದ. ನಮ್ಮ ದುರಂತವೆಂದರೆ, ರೈತರಿಗೆ ಮಾರ್ಗದರ್ಶನ ಮಾಡಲು ಲಂಕೇಶರೂ ಇಲ್ಲ, ಪ್ರೊಫೆಸರ್ ನಂಜುಂಡಸ್ವಾಮಿಯವರೂ ಇಲ್ಲ. ಇಲ್ಲಿನ ಭೂಮಿ ಹೇಗೆ ಬರಡಾಗಿದೆಯೋ, ಅದೇ ರೀತಿ ನಮ್ಮಗಳ ಎದೆ ಕೂಡ ಬರಡಾಗಿದೆ.

ಇದನ್ನು ಮೊದಲೇ ಊಹಿಸಿದವರಂತೆ ಲಂಕೇಶರು 1980 ರಲ್ಲಿ ನನ್ನ ಹಿರಿಯ ಮಿತ್ರ ಮಂಗ್ಳೂರ ವಿಜಯ ಸಂಪಾದಕತ್ವದಲ್ಲಿ ಹೊರತಂದಿದ್ದ “ ಕಪ್ಪು ಜನರ ಕೆಂಪು ಕಾವ್ಯ” ಎಂಬ ಕವನ ಸಂಕಲನಕ್ಕೆ ಕವಿತೆಯ ರೂಪದಲ್ಲಿ ಮುನ್ನುಡಿ ಬರೆದಿದ್ದರು. ಅದರ ಒಂದೆರೆಡು ಸಾಲುಗಳು ನನಗೆ ಈಗಲೂ ನೆನಪಿವೆ.
ಗೆಳೆಯರೇ, ಈ ಜನರ ಎದೆಗೆ ಕವಿತೆಯಿರಲಿ

ಕತ್ತಿ ಕೂಡ ತಲುಪಲಾಗದ ಸ್ಥಿತಿ.

(ರೈತರ ಸಾವಿನ ಸೂತಕದ ಹಾಗೂ ಸಂಕಟದ ಸಮಯದಲ್ಲಿ ಸುಮ್ಮನೆ ಮೇಷ್ಟ್ರು ನೆನಪಾದರು. ಅದಕ್ಕಾಗಿ ಈ ಬರಹ)

‍ಲೇಖಕರು Admin

March 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ , ಬರಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: