ಇಷ್ಟಾದರೂ ಈ ಲಂಕೇಶ್ ನಮಗೆ ಪೂರ್ತಿ ದಕ್ಕಿದಂತಾಗುವುದಿಲ್ಲ..

ಹೃದಯ ಶಿವ

ಲಂಕೇಶರನ್ನು ನಾನು ಹತ್ತಿರದಿಂದ ಬಲ್ಲವನಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ಅವರ ‘ಸಂಕ್ರಾಂತಿ’ ನಾಟಕದ ಮೂಲಕ ಒಬ್ಬ ನಾಟಕಕಾರರಾಗಿ ನನಗೆ ಪರಿಚಯವಾದವರು. ಆಮೇಲೆ ಅನೇಕ ವರ್ಷಗಳ ಬಳಿಕ ನಾನು ಗೌರೀಶ್ ಅಕ್ಕಿಯವರ ಮನೆಗೆ ಹೋಗಿದ್ದಾಗ ಅಲ್ಲಿ ಲಂಕೇಶರ ಪದ್ಯಗಳ ಗುಚ್ಛ ‘ಚಿತ್ರ ಸಮೂಹ’ ಕಣ್ಣಿಗೆ ಬಿತ್ತು; ಆ ಪುಸ್ತಕ ಲಂಕೇಶ್ ಪತ್ರಿಕೆ ಕಚೇರಿಯಿಂದಲೇ ಪ್ರೀತಿ ಪೂರ್ವಕವಾಗಿ ಗೌರೀಶ್ ಅವರು ಪಡೆದದ್ದು ಎಂದು ನನಗೆ ತಿಳಿಯಿತು. ಆ ಪುಸ್ತಕವನ್ನು ನಾನು ಮನೆಗೆ ಕೊಂಡುಹೋಗಿ ಓದಲು ಗೌರೀಶ್ ಒಪ್ಪಿಗೆ ನೀಡಿದರು. ಆ ಪುಸ್ತಕದ ಮೂಲಕ ಲಂಕೇಶರೊಳಗಿನ ಕವಿಯನ್ನು ಅರಿಯಲು ಪ್ರಯತ್ನಿಸಿದೆ; ಆದರೆ ಲಂಕೇಶರು ಸುಲಭವಾಗಿ ಗ್ರಹಿಕೆಗೆ ಸಿಕ್ಕದೆ “ಸಾಹಿತ್ಯ ಕೊನೆಗೂ ಸಾಹಿತಿಗಳಿಂದ ನಿರೀಕ್ಷಿಸುವುದು ನ್ಯಾಯವಂತಿಕೆ, ನಿಷ್ಠುರತೆಯನ್ನು; ಅದು ಇದ್ದಾಗ ನಿರೂಪಣೆ, ವರ್ಣನೆ ಇತ್ಯಾದಿಗಳು ತಾವಾಗಿಯೇ ಬರುತ್ತವೆ. ನಿಷ್ಠುರತೆಯ ಸೂತ್ರದಲ್ಲಿಯೇ ಪ್ರೀತಿ, ಮಾನವೀಯತೆ ಎಲ್ಲವೂ ಇವೆ; ಪ್ರೀತಿ, ಮಾನವೀಯತೆಯ ನಿರರ್ಥಕತೆ ಕೂಡ” ಎಂದು ಹೇಳುವ ಮೂಲಕ ಲಂಕೇಶ್ ಮತ್ತೆ ಚಿಂತನೆಗೆ ಹಚ್ಚುತ್ತಾರೆ.

ಕ್ರಮೇಣ ನಾನು ಅರಿತಂತೆ ಲಂಕೇಶರು ನೇರನಡೆ, ನೇರನುಡಿಯ ಪ್ರಾಮಾಣಿಕ ನಿಷ್ಠುರವಾದಿ; ಅದನ್ನೇ ಅವರು ತಮ್ಮ ಪತ್ರಿಕೆಯಲ್ಲಿ, ಕೃತಿಗಳಲ್ಲಿ, ಭಾಷಣಗಳಲ್ಲಿ ತರಲು ಯತ್ನಿಸುತ್ತಿದ್ದುದರಿಂದ ಮೇಲುನೋಟಕ್ಕೆ ಕೆಲವರಿಗೆ ಗರ್ವಿಯಂತೆ ಕಂಡಿದ್ದರೂ ಅಚ್ಚರಿ ಪಡುವಂವಂಥಾದ್ದೇನೂ ಇಲ್ಲ. ಅವರು ವ್ಯಕ್ತಿಗಿಂತಲೂ ವ್ಯಕ್ತಿತ್ವವನ್ನು ಗೌರವಿಸುತ್ತಿದ್ದರು; ಶೋಷಿತರು, ಉದಯೋನ್ಮುಖ ಸಾಹಿತಿಗಳು, ಸಾಮಾನ್ಯ ಓದುಗರು ಈ ಕಾರಣಕ್ಕಾಗಿಯೇ ಇವರನ್ನು ಅಚ್ಚಿಕೊಳ್ಳುತ್ತಿದ್ದರು. ಇದೇ ಗುಣ ಅವರ ಅಧಿಕಾರಶಾಹಿವರ್ಗವನ್ನು ಅನುಮಾನದಿಂದ ನೋಡುವಲ್ಲಿನ ನೋಟದಲ್ಲಿ ಒಳಗೊಳ್ಳುತ್ತಿತ್ತು. ಯಾವ ಮುಲಾಜೂ ಇಲ್ಲದೆ ಭ್ರಷ್ಟರಾಜಕಾರಣಿಗಳನ್ನು ತಮ್ಮ ಅಕ್ಷರಗಳ ಮೂಲಕ ಬೆತ್ತಲುಗೊಳಿಸುತ್ತಿದ್ದರು, ಜಾತಿಧರ್ಮದ ಹೆಸರಿನಲ್ಲಿ ಶ್ರೇಷ್ಠತೆಯ ಸೋಗು ಹಾಕಿಕೊಂಡು ಮೆರೆಯುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದರ ಬಗ್ಗೆ ಆಮೇಲೆ ಚರ್ಚಿಸೋಣ.

ಲಂಕೇಶರು ಸಮಾಜದ ಸ್ವಾಸ್ಥ್ಯಕ್ಕಾಗಿ ಬರೆದಿದ್ದಾರೆ; ಅವರ ಚಿಂತನೆಯ ನೂರಾರು ಆಯಾಮಗಳು, ಪ್ರಯೋಗಗಳು, ಚಿಕಿತ್ಸಕ ನೋಟ ಎಲ್ಲರಿಗೂ ಗೊತ್ತಿರುವಂಥದ್ದೇ. ಅವುಗಳಲ್ಲಿ ಒಂದಿಷ್ಟು ಮೆಲುಕು ಹಾಕಿ ಹೇಳಬೇಕಿರುವ ವಿಷಯದೆಡೆಗೆ ಗಮನ ಹರಿಸಬಹುದು. ಸಮಾಜಕ್ಕೆ ಏನಾದರೂ ಹೇಳಬೇಕು ಎಂಬ ಉದ್ದೇಶದಿಂದ ಕ್ಲಾಸ್ ರೂಮಿನಲ್ಲಿ ಬೋಧಿಸುವ ಕೆಲಸಕ್ಕೆ ರಾಜೀನಾಮೆ ಕೊಟ್ಟು ಪತ್ರಿಕೆ ಆರಂಭಿಸಿದರು; ಬೋಧನೆಯ ಜೊತೆಗೆ ರಂಜಿಸುವ ಮೂಲಕ, ಪ್ರಚೋದಿಸುವ ಮೂಲಕ ಕನ್ನಡಿಗರು ಜಾಗೃತರಾಗುವಂತೆ ಮಾಡಿದರು. ರಾಜಕಾರಣ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿ ಕುರಿತಾದ ಚಿಂತನೆಗಳನ್ನು ಏಕಕಾಲಕ್ಕೆ ಜಗತ್ತಿನ ಮುಂದಿಡುವ ಸಾಹಸಕ್ಕೆ ಕೈ ಹಾಕಿದರು. ತಾವೇ ಕಟ್ಟಿ, ತಾವೇ ಒಡೆಯುವ ಮೂಲಕ ತಾವು ಹೇಗೆ ಎಂಬುದು ಯಾರಿಗೂ ಅರ್ಥವಾಗದ ಹಾಗೆ ಅಚ್ಚರಿಯಾಗಿ ಅರಳಿಕೊಂಡರು. ಸರ್ಕಾರದ ತಪ್ಪುಗಳನ್ನು, ಧಾರ್ಮಿಕ ಮೂಢತನವನ್ನು, ಮನುಷ್ಯನ ಸಣ್ಣತನವನ್ನು ಪ್ರಶ್ನಿಸಬೇಕಾಗುದು ನ್ಯಾಯಪರ, ಜೀವಪರ ಪತ್ರಿಕೆಯೊಂದರ ಬಹುಮುಖ್ಯ ಜವಾಬ್ಧಾರಿ ಎಂದು ಅರಿತಿದ್ದರು; ಆ ದಿಕ್ಕಿನಲ್ಲಿ ಅವರು ಗೆದ್ದದ್ದು ಈಗ ಚರಿತ್ರೆ.

ಲಂಕೇಶರ ವೈಚಾರಿಕ ಪ್ರಜ್ಞೆಯನ್ನು ಕೂಡ ಇಲ್ಲಿ ಗಮನಿಸಬಹುದು. ವೈಚಾರಿಕತೆ ಒಂದು ಬೆಳಕಾಗಿ ಕೆಲಸ ಮಾಡಿದಾಗ, ಒಂದು ಸಾಮುದಾಯಿಕ ಮನಸ್ಥಿತಿಯಾಗಿ ಹೊಮ್ಮಿದಾಗ ಅಲ್ಲೊಂದು ಕ್ರಾಂತಿ ಸಂಭವಿಸುತ್ತದೆ. ಈ ಕ್ರಾಂತಿಯ ಭಾಗವಾಗಿ ಬುದ್ಧ, ಬಸವಣ್ಣ, ಕನಕದಾಸ, ಅಂಬೇಡ್ಕರ್, ಪೆರಿಯಾರ್, ನಾರಾಯಣಗುರು, ಕುವೆಂಪು ಮುಂತಾದವರು ಬಂದದ್ದು ನಿಮಗೆ ಗೊತ್ತಿದೆ. ಭಾರತದಂತಹ ದೇಶದಲ್ಲಿ ಹೊಸತಿನೆಡೆಗೆ ಮುಖಮಾಡುವ ಆಸಕ್ತಿಯೇ ಇಲ್ಲದಾಗ, ವಿದ್ಯಾವಂತ ಯುವಜನತೆಯೂ ತಾತ ಮುತ್ತಾತಂದಿರ ಭೂತಕಾಲವನ್ನೇ ಧ್ಯಾನಿಸುವಾಗ ನಾವಿನ್ನೂ ಎಲ್ಲಿದ್ದೇವೆ? ಎಂಬ ಪ್ರಶ್ನೆಯನ್ನಷ್ಟೇ ಕೇಳಿಕೊಳ್ಳಲು ಇಲ್ಲಿ ಸಾಧ್ಯವಾಯಿತು. ಲಂಕೇಶರು ಶುದ್ಧ ವೈಚಾರಿಕತೆ ಮತ್ತು ಸಮಾಜವಾದ ಮಾರ್ಗಗಳ ಬಗ್ಗೆ ಬರೆದದ್ದೂ ಕೂಡ ಈ ಪ್ರಶ್ನೆಯ ಫಲವೇ. ಆದರೆ ವೈಚಾರಿಕತೆ ಬಗೆಗಿನ ಲಂಕೇಶರ ಹಪಾಹಪಿ ನಮ್ಮಲ್ಲಿ ಚಿಂತನೆಯನ್ನು ಹಚ್ಚಿತು; ತನ್ನ ಸ್ವಂತದ ಅನುಭವಕ್ಕೆ ದಕ್ಕದ, ತಾನು ಕಂಡಿರದ ಯಾವುದನ್ನೂ ಮನುಷ್ಯ ಅನುಮಾನದಿಂದಲೇ ನೋಡಬೇಕೆಂಬ ಪ್ರಜ್ಞೆ ಬೆಳೆಯಿತು. ಆದರೆ ಲಂಕೇಶರ ಸೃಜನಶೀಲ, ಕ್ರಿಯಾಶೀಲ ಮನಸ್ಸಿಗೆ ತಿಳಿದಿದ್ದ ಅಂಶವೆಂದರೆ ವಿಚಾರವಾದ, ವಿಜ್ಞಾನ, ಸಾಹಿತ್ಯ ಕಂಡುಕೊಳ್ಳದ ಅದೆಷ್ಟೋ ನಂಬಿಕೆ, ಬದುಕಿನ ದ್ರವ್ಯ ಈ ಪ್ರಪಂಚದಲ್ಲಿವೆ. ಮನುಷ್ಯನ ಹುಟ್ಟು-ಸಾವು, ಸೃಷ್ಟಿಯ ಅಚ್ಚರಿಗಳ ಬಗ್ಗೆ ಕವಿ ಏನು ಹೇಳುತ್ತಾನೆ? ಹಾಗೆಯೇ ಇವತ್ತಿನ ವಿಜ್ಞಾನಿ ಒಂದು ಕವಿತೆ ಅರಳಿಕೊಳ್ಳುವುದನ್ನು ಹೇಗೆ ವ್ಯಾಖ್ಯಾನಿಸುತ್ತಾನೆ?

ಇಷ್ಟೇ ಪ್ರಬಲವಾದದ್ದು ಮಾನವ ಅಪ್ಪಿಕೊಂಡಿರುವ ವೈಚಾರಿಕತೆ ಆತನನ್ನು ಸಾಕಷ್ಟು ತುಮುಲದಲ್ಲಿ ಸಿಲುಕಿಸಿ ಅವನ ಅದೆಷ್ಟೋ ನಿಲುಕದ ಬದಲಾವಣೆಗಳಿಗೆ ಕಾರಣವಾಗಿ ಆತನನ್ನು ಒಂದು ಬಗೆಯ ದ್ವಂದ್ವದ ವರ್ತುಲದೊಳಗೆ ಸುತ್ತುವಂತೆ ಮಾಡುತ್ತದೆ. ವೈಚಾರಿಕತೆಯಿಂದಲೇ ದೇವಸ್ಥಾನಗಳು ಮಹತ್ವ ಕಳೆದುಕೊಂಡವು; ಸಮಾನತೆ ವೃದ್ಧಿಸಿತು; ಪುರೋಹಿತರ, ಧರ್ಮಗ್ರಂಥಗಳ ನೆರವಿಲ್ಲದೆ ಆತ್ಮಸಾಕ್ಷಾತ್ಕಾರಕ್ಕೆ ದಾರಿಯಾಯಿತು. ತರ್ಕ, ಜಿಜ್ಞಾಸೆ, ಹೊಸ ಸಂವೇದನೆ, ಸ್ವಂತಿಕೆಯ ಕನಸು, ಪುರಾತನರ ನೆರಳಿನ ಗೋಜಿಲ್ಲದ ಬೆಳಕು ಸಾಧ್ಯವಾಯಿತು; ಒಡೆಯ-ಅಡಿಯಾಳು, ಶ್ರೇಷ್ಠ-ಕನಿಷ್ಠ, ಶಿರ-ಪಾದ, ಮೇಲು-ಕೀಳು ಎಂಬ ನಿಲುವುಗಳು ಅರ್ಥ ಕಳೆದುಕೊಂಡು ತಬ್ಬಲಿಯಾಗತೊಡಗಿದವು. ಲಂಕೇಶರು ವೈಚಾರಿಕತೆ ಮತ್ತು ಸಮಾಜವಾದದ ಕುರಿತು ವ್ಯಕ್ತಪಡಿಸುವ ಸಂಗತಿಗಳನ್ನು ಈ ದಿಶೆಯಲ್ಲಿ ಚರ್ಚಿಸಬಹುದು.

ಇಲ್ಲಿ ಲಂಕೇಶರು ಸಿನಿಮಾಗಳನ್ನು ಮಾಡಿದುದರ ಬಗ್ಗೆ ಚರ್ಚಿಸುವುದು ಬೇಡ. ಆದರೆ ತಮ್ಮ ‘ಪಲ್ಲವಿ’, ‘ಅನುರೂಪ’, ‘ಎಲ್ಲಿಂದಲೋ ಬಂದವರು’ ಚಿತ್ರಗಳ ಮೂಲಕ ಜನತೆಗೆ ಹೇಳಿದ್ದು, ಲಂಕೇಶರೇ ನಟಿಸಿದ ‘ಸಂಸ್ಕಾರ’ ಚಿತ್ರದ ನಾರಣಪ್ಪನ ಪಾತ್ರ, ಅವರು ನೋಡಿದ ‘ಸಿಟಿಜನ್ ಕೇನ್’, ‘ಸೋಪಿಯೊಂಜೆ’, ‘ಪ್ಯಾಸೇಜ್ ಟು ಇಂಡಿಯ’, ‘ಬಾಂಬೆ’, ‘ಬೆಳ್ಳಿ ಮೋಡ’, ‘ಟೈಟಾನಿಕ್’, ‘ಹಿರೋಶಿಮಾ’, ‘ಲಾಸ್ಟ್ರಾಡ’, ‘ಡೈಮಂಡ್ಸ್ ಅಂಡ್ ಆಶಸ್’, ‘ಬ್ರೆಥ್ ಲೆಸ್’, ‘400 ಬ್ಲೋಸ್’, ‘ಗೆಜ್ಜೆಪೂಜೆ’, ‘ಮಾನಸ ಸರೋವರ’ ತರಹದ ಸಿನಿಮಾಗಳು, ಅವರಿಂದ ಲೇಖನಗಳಾದ ರೀಟಾ ಹೇವರ್ತ್, ಪುಟ್ಟಣ್ಣ ಕಣಗಾಲ್, ಲಾರೆನ್ಸ್ ಒಲಿವಿಯರ್, ರಾಜ್ ಕಪೂರ್, ವ್ಯಾನೇಸಾ, ಕ್ಯಾಂಡೀಸ್ ಬರ್ಗನ್, ಎಂ.ಜಿ.ರಾಮಚಂದ್ರನ್, ಡಾ.ರಾಜಕುಮಾರ್, ಕ್ಲೈ ಸ್ಲೋವ್ ಸ್ಕಿ, ಕುರೋಸಾವಾ, ಆಡ್ರೆ ಹೆರ್ಬನ್, ಮರ್ಲನ್ ಬ್ರಾಂಡೋ, ಶಂಕರ್ ನಾಗ್ ಮುಂತಾದವರು ನಮ್ಮನ್ನು ಕಾಡದೆ ಬಿಡುವುದಿಲ್ಲ- ಅವರ ಸಿನಿಮಾ ಬರಹಗಳ ಸಂಗ್ರಹ ‘ಈ ನರಕ ಈ ಪುಲಕ’.

ಇನ್ನು ಲಂಕೇಶರ ಕತೆಗಳ ಬಗ್ಗೆ… ಎರಡು ಮಾತಿನಲ್ಲಿ ಹೇಳಲು ಆಗುವುದಿಲ್ಲ. ಆದರೆ ‘ಬದುಕು’ ಎಂದರೆ ವಿಸ್ಮಯ, ವಿಚಿತ್ರ ಎಂಬ ಅರ್ಥವಿದೆ; ಈ ದೃಷ್ಟಿಯಿಂದ ಲಂಕೇಶರಿಗೆ ಅವರ ಚಿಂತನಾಕ್ರಮ, ಒಳನೋಟ, ಸೂಕ್ಷ್ಮ ಗ್ರಹಿಕೆ ಒಂದಲ್ಲ ಒಂದು ಬಗೆಯಲ್ಲಿ ಅನಾವರಣಗೊಂಡಿವೆ ಎಂಬುದಂತೂ ಸತ್ಯ. ನನಗೆ ವಿಶೇಷವಾಗಿ ಲಂಕೇಶರ ‘ಕಲ್ಲು ಕರಗುವ ಸಮಯ’ ಇಷ್ಟ. ಇದು ಅವರ ಬಹುಮುಖ್ಯ ಕಥಾಸಂಕಲನವಿರಬೇಕು; ಇದರಲ್ಲಿನ ಒಂದೊಂದು ಕಥೆಗಳೂ ನನ್ನಲ್ಲಿ ನಾಟಿ ಬೆರಗು ಮೂಡಿಸಿವೆ. ನಾನು ಯಾವುದೋ ಕಾಲೇಜು ಕಾರ್ಯಕ್ರಮದಲ್ಲಿ ಮಾತಾಡುತ್ತ ‘ಕಲ್ಲು ಕರಗುವ ಸಮಯ’ ಕಥಾ ಸಂಕಲನ ಬದುಕಿನ ಅನೇಕ ಮುಖಗಳನ್ನು ತೆರೆದಿಡುವ ಸ್ವತಃ ತಾನೇ ಒಂದು ವಿಶಿಷ್ಟ ಜಗತ್ತು ಎಂದು ಹೇಳಿದ್ದ ನೆನಪು. ‘ಸುಭದ್ರ’ಳ ಬದುಕು ಕಟ್ಟಿಕೊಡುವ ಮನುಷ್ಯನ ದ್ವಂದ್ವ, ತಬ್ಬಲಿತನ, ‘ಸ್ಟೆಲ್ಲಾ ಎಂಬ ಹುಡುಗಿ’ಯ ತಲೆಯನ್ನು ತುಂಬಿಕೊಳ್ಳುವ ಸುಬ್ಬಣ್ಣನ ಕತೆ, ‘ತೋಟದವನು’ ಮಾಡಿಸುವ ಬದುಕಿನ ದರ್ಶನ… ಇತ್ಯಾದಿಗಳು ‘ಕಲ್ಲು ಕರಗುವ ಸಮಯ’ಕ್ಕೆ ಮನಸು ಒಗ್ಗಿಕೊಳ್ಳುವಂತೆ ಮಾಡುತ್ತವೆ. ನನಗೆ ಲಂಕೇಶರು ‘ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ನಾನಲ್ಲ’ಗಿಂತಲೂ ವಿಶೇಷವಾಗಿ ಸೆಳೆಯುವುದು, ಕವಿಯುವುದು ‘ಕಲ್ಲು ಕರಗುವ ಸಮಯ’ದಲ್ಲಿ; ಕಥನ ಎನ್ನುವುದು ಉಸಿರಿನ ವೇಗಕ್ಕೆ ಪೂರಕ ಎನ್ನುವುದು ಅರ್ಥವಾಗುವುದು ಈ ಹದಿನೇಳು ಕತೆಗಳ ಕಟ್ಟಿನಲ್ಲಿ. ಹೆಣ್ಣಿನ ತಳಮಳ, ಜಾತೀಯ ಮನಸ್ಥಿತಿ, ಗುಪ್ತವಾದ ವಾಂಛೆ, ಬದುಕಿನ ಗುಟ್ಟುಗಳೆಲ್ಲ ಕಲೆಯ ವ್ಯಾಪ್ತಿಯೊಳಗೆ ಪಡಿಮೂಡಿದ್ದು ಇಲ್ಲಿ.

ಲಂಕೇಶರು ನನ್ನನ್ನು ವಿಶೇಷವಾಗಿ ಕಾಡಿದ್ದು ಅವರ ಅಂಕಣ ಬರಹಗಳ ಸಂಗ್ರಹಗಳಾದ ‘ಟೀಕೆ ಟಿಪ್ಪಣಿ’ಗಳಲ್ಲಿ. ಇಲ್ಲಿ ಉದ್ದೇಶಪೂರ್ವಕವಾಗಿ ಈ ಕೃತಿಗಳ ಬಗ್ಗೆ ಚರ್ಚಿಸಲು ನಿರ್ಧರಿಸುತ್ತಿದ್ದೇನೆ. ಇವು ಹಲವು ಕೋನಗಳಲ್ಲಿ ವಿಶಿಷ್ಟ ಪುಸ್ತಕಗಳು. ಇಲ್ಲಿ ಚಿಂತನೆಯ ಕಿರಣಗಳು ಫಳಾರನೆ ಕಣ್ಣೆದುರು ಹೊಳೆಯುತ್ತವೆ; ವಿವಿಧ ಸಂದರ್ಭಗಳಲ್ಲಿ ಬರೆಸಿಕೊಂಡ ಇಲ್ಲಿಯ ಒಂದೊಂದು ಬರಹಕ್ಕೂ ತನ್ನದೇ ಆದ ಉಡುಗೆ ತೊಡಿಗೆ, ಬೆತ್ತಲುತನಗಳು ಇವೆ. ಹಾಗೆಯೇ ‘ಟೀಕೆ-ಟಿಪ್ಪಣಿ’ಯ ವ್ಯಾಪ್ತಿ ದೊಡ್ಡದು; ಇಲ್ಲಿಯ ಬರಹಗಳು ಬದುಕಿಗೆ ಹತ್ತಿರವಾಗಿದ್ದು ತಮ್ಮ ಸಾರ್ವಕಾಲಿಕ ಸತ್ಯವನ್ನು, ಜೀವಂತಿಕೆಯನ್ನು ಎತ್ತಿ ಹಿಡಿಯುತ್ತವೆ. ಇಲ್ಲಿಯ ರಾಜಕೀಯ ವಿಶ್ಲೇಷಣೆ, ಸಾಮಾಜಿಕ ಪ್ರಜ್ಞೆ, ಚರಿತ್ರೆಯ ಮೆಲುಕು, ವ್ಯಕ್ತಿ ಚಿತ್ರಣ, ಬದುಕಿನ ಚೋದ್ಯಗಳು ನಮ್ಮನ್ನು ವಿಚಿತ್ರ ಧ್ಯಾನಕ್ಕೆ ಒಡ್ಡಿ ನಮ್ಮೊಳಗೇ ಬೆರೆತು ಪರಿಭಾವಿಸುವುದು ಲಂಕೇಶರ ಅನುಭವ, ನೋಟ, ಚಿಂತನೆ, ಗ್ರಹಿಕೆಗಳಿಂದಾಗಿಯೇ. ಈ ಲೇಖನಗಳ ಆತ್ಮವೇ ಆ ಬಗೆಯದ್ದೇ? ಒಂದು ರೀತಿಯಲ್ಲಿ ಲಂಕೇಶರು ಚಿಂತಿಸಿದ, ಧ್ಯಾನಿಸಿದ ಒಟ್ಟು ಕಾಲವನ್ನು ಹಿಡಿದಿಟ್ಟಂತಿರುವ ಈ ಹೊತ್ತಿಗೆಗಳು ಯಾವ ಕಾಲದ ಓದುಗನನ್ನೂ ಬೆಚ್ಚಿ ಬೀಳಿಸಬಲ್ಲವು. ಮೂರು ಬೇರೆ ಬೇರೆ ಸಂಗ್ರಹಗಳಲ್ಲಿ ಪ್ರಕಟವಾದ ಇಲ್ಲಿಯ ಬರಹಗಳು ಲಂಕೇಶರ ಅಪಾರ ನಿಷ್ಟುರತೆ, ನೇರ ನಿಲುವಿಗೆ ಹಿಡಿದ ಕನ್ನಡಿಯಂತೆ ಕಾಣುತ್ತವೆ. “ಎಂಥ ಸಂಕೀರ್ಣ ವಿಷಯವನ್ನಾದರೂ ಎಲ್ಲರಿಗೂ ಮುಟ್ಟುವಂತೆ ಹೇಳುವ ಕಲೆಯನ್ನು ಲಂಕೇಶರಿಂದ ಕಲಿತೆ” ಎಂದು ಟೀಕೆ-ಟಿಪ್ಪಣಿ ಕುರಿತು ಡಿ.ಆರ್.ನಾಗರಾಜ ಥರದವರಿಂದ ಹೇಳಿಸಿಕೊಳ್ಳುವ ಇವು “ಉದಾರವಾದಿ ಮಾನವತಾವಾದದಿಂದ ಹಿಡಿದು ಗಾಂಧಿವಾದ, ಲೋಹಿಯಾವಾದದವರೆಗೆ ಅನೇಕ ಮುಖ್ಯ ರಾಜಕೀಯ-ಸಾಂಸ್ಕೃತಿಕ ಬಗೆಯ ಅಸ್ಪಷ್ಟವಾದ ‘ಲಂಕೇಶ್ ವಾದ'” ಎಂಬುದಾಗಿ ನಟರಾಜ್ ಹುಳಿಯಾರ್ ತರಹದವರ ಅಭಿಪ್ರಾಯ ಪಡೆಯುತ್ತವೆ. ಉಪದೇಶ ನೀಡಿದರೂ ಜಗದ್ಗುರುಗಳ ಜಡತ್ವ ಕಾಣದಂತೆ, ಆತಂಕ ವ್ಯಕ್ತ ಪಡಿಸಿದರೂ ನಿರಾಶಾವಾದಿತ್ವ ಇಲ್ಲದಂತೆ, ನಾಯಕನ ಜವಾಬ್ಧಾರಿ ಹೊತ್ತರೂ ಸರ್ವಾಧಿಕಾರಿ ಧೋರಣೆ ವ್ಯಕ್ತವಾಗದಂತೆ, ಸದಾ ಹುಡುಕಾಟದ ಹಾದಿಯಲ್ಲಿ ಸಾಗುವ ಇಲ್ಲಿಯ ಲಂಕೇಶ್ ಅಷ್ಟು ಸುಲಭದಲ್ಲಿ ಗ್ರಹಿಕೆಗೆ ದಕ್ಕದ ಚಿಂತಕ, ಲೇಖಕ.

ಲಂಕೇಶರ ‘ಬಿರುಕು’, ‘ಮುಸ್ಸಂಜೆಯ ಕಥಾ ಪ್ರಸಂಗ’, ‘ಅಕ್ಕ’ ಎಂಬ ಮೂರು ವಿಭಿನ್ನ ನೆಲೆಯ ಕಾದಂಬರಿಗಳನ್ನು ಅವರು ಕಾದಂಬರಿಗೆ ವಸ್ತುಗಳನ್ನು ಆಯ್ದುಕೊಳ್ಳುತ್ತಿದ್ದ ಬಗೆ, ಅವುಗಳನ್ನು ಅನುಭವದೊಟ್ಟಿಗೆ ಕೃತಿಯಾಗಿಸುತ್ತಿದ್ದ ಕಥನಗಾರಿಕೆಯ ರೀತಿಯನ್ನು ಅರಿಯಲು ಇಲ್ಲಿ ಚರ್ಚಿಸಬಹುದು. ಆದರೆ ಇಲ್ಲಿ ನಾವು ಲಂಕೇಶರ ಬರವಣಿಗೆಯ ಜೊತೆಗೆ ಅವರು ಬದುಕಿದ ರೀತಿಯನ್ನು ಧ್ಯಾನಿಸಬೇಕು. ಲಂಕೇಶರ ಬರವಣಿಗೆಯಲ್ಲಿ ಇದ್ದಷ್ಟೇ ಪ್ರಾಮಾಣಿಕತೆ, ನಿಷ್ಠುರತೆ ಅವರ ಬದುಕಿನುದ್ದಕ್ಕೂ ಇದ್ದದ್ದು ವಿಸ್ಮಯಕಾರಿ ಅಂಶ. ತಾವು ಬರೆಯುವ ಕತೆ, ಕವಿತೆ, ಕಾದಂಬರಿ, ಲೇಖನಗಳಲ್ಲಿ ತಮ್ಮ ವ್ಯಕ್ತಿತ್ವವನ್ನೆಲ್ಲ ಬಸಿದುಕೊಂಡು ತಾವು ಇರುವುದು ಹೀಗೇ ಎಂದು ತಮ್ಮನ್ನು ಸಂಪೂರ್ಣವಾಗಿ ನಗ್ನಗೊಳಿಸಿಕೊಳ್ಳುತ್ತಿದ್ದರು. ಅದೇ ರೀತಿ ಲಂಕೇಶರ ನಾಟಕಗಳು ಕೂಡ ತಪಸ್ಸಿನ ಮನಸ್ಥಿತಿಯಿಂದಾಗಿ ನೈಜ ಕಲಾಕೃತಿಗಳು ಎನಿಸುತ್ತವೆ; ಕೃತಕ ಅನ್ನಿಸುವುದಿಲ್ಲ. ಅವರ ಬಹುಪಾಲು ನಾಟಕಗಳು ವ್ಯಂಗ್ಯ, ವಿಡಂಬನೆ, ಬೆರಗುಗಳಿಂದ ಕೂಡಿರುವಂಥವು; ಧ್ಯಾನಿಯೊಬ್ಬನ ಮುಕ್ತ ಮಾತುಗಳು. ‘ಗುಣಮುಖ’ ಲಂಕೇಶರನ್ನು ಭಿನ್ನವಾಗಿ ತೋರುವ ನಾಟಕ.

ಲಂಕೇಶರು ಅನುವಾದವನ್ನೂ ಮಾಡಿದರು; ಅವರ ‘ಪಾಪದ ಹೂವುಗಳು’ ಪ್ರಖ್ಯಾತ ಅನುವಾದಿತ ಕೃತಿ, ‘ದೊರೆ ಈಡಿಪಸ್ ಮತ್ತು ಅಂತಿಗೊನೆ’ ಕನ್ನಡಕ್ಕೆ ಬೇರೆ ಬಗೆಯ ಪುಸ್ತಕ. ಅವರು ಅನುವಾದಿಸಿದ ನೆರೂಡನ, ಡಬ್ಲ್ಯೂ.ಬಿ.ಯೇಟ್ಸನ, ಆಂಡ್ರೂ ಮಾರ್ವೆಲ್ಲನ, ಎಜ್ರಾ ಪೌಂಡನ ಕೆಲವೊಂದಿಷ್ಟು ಪದ್ಯಗಳು ಕನ್ನಡ ಸಾಹಿತ್ಯಾಸಕ್ತರಿಗೆ ಯಾವತ್ತಿಗೂ ಮುಖ್ಯ.

ಒಂದು ಬಗೆಯಲ್ಲಿ ಲಂಕೇಶರು ಸಮಾಜಸುಧಾರಕರಾಗಿ ಕಾಣುತ್ತಿದ್ದರು; ರಾಜಕಾರಗಳ ಸಖ್ಯ ಹೊಂದಿದ್ದರೂ ಅಂಥವರ ಗುಣಗಳು ತಮಗೆ ತಾಕದಂತೆ ನೋಡಿಕೊಂಡಿದ್ದರು. ಈ ಸಮಾಜಕ್ಕೆ ಏನು ಬೇಕು, ಏನು ಬೇಡ, ಯಾವುದನ್ನು ಒಪ್ಪಿಕೊಳ್ಳಬೇಕು, ಯಾವುದನ್ನು ಬಿಟ್ಟು ಬಿಡಬೇಕು, ಯಾವುದು ಸರಿ, ಯಾವುದು ತಪ್ಪು- ಎನ್ನುವುದರ ಕುರಿತು ಸ್ಪಷ್ಟ ನಿಲುವು ಇದ್ದವರಂತೆ ಲಂಕೇಶ್ ತೋಚುತ್ತಿದ್ದರು. ಇಲ್ಲಿ ನನ್ನನ್ನು ಗಾಬರಿಪಡಿಸುವ ಸಂಗತಿಯೆಂದರೆ ಲಂಕೇಶರ ಒಟ್ಟು ಗದ್ಯಬರಹಗಳ ಆಳಕ್ಕೆ ಇಳಿಯುತ್ತಾ ಹೋದಂತೆಲ್ಲಾ ಅವರ ಅಭಿಪ್ರಾಯಗಳು, ನಿಲುವುಗಳು, ಧೋರಣೆಗಳು, ಸಿದ್ಧಾಂತಗಳು ಮತ್ತು ಅವುಗಳಲ್ಲಿನ ಅವರ ಸ್ಪಷ್ಟತೆ ಹಾಗೂ ಧೃಡತೆ ಬೆರಗು ಮೂಡಿಸುವಂಥದ್ದು. ‘ಹೌದಲ್ಲ !’ ಎನ್ನುವಂತೆ ತಮ್ಮ ತೆಕ್ಕೆಗೆ ಎಳೆದುಕೊಳ್ಳುವಂಥದ್ದು; ಇದಕ್ಕೆ ಕಾರಣ ಲಂಕೇಶರು ಇವನ್ನು ತಮ್ಮ ಸ್ವಂತ ಅನುಭವ, ಅಧ್ಯಯನ, ಒಳನೋಟಗಳಿಂದ ಕಂಡುಕೊಂಡು, ದೂರದೃಷ್ಟಿ ಇಟ್ಟುಕೊಂಡು ಬರೆದಂಥವು. ಹಾಗಾಗಿ ಈ ಕೃತಿಗಳಲ್ಲಿ ತಾವು ಬೆಳೆದು ಬಂದ, ಕಂಡುಕೊಂಡ, ಪರಿಕಲ್ಪಿಸಿಕೊಂಡ ಸತ್ಯಗಳ, ಅನುಭವಗಳ ಒಟ್ಟು ಸಮಗ್ರತೆ ಅಡಕಗೊಂಡಿರುತ್ತದೆ. ಆದ್ದರಿಂದಲೇ ಅವರ ಸರಳ ಭಾಷೆಯ, ಲೀಲಾಜಾಲವಾಗಿ ಹರಿಯುವ ಲಯಬದ್ಧ ಬರಹಗಳು ಮತ್ತು ಕತೆ, ಕಾದಂಬರಿಗಳು ಬೋರು ಹೊಡೆಸುವ ಬದಲು ಓದುಗನನ್ನು ಚಿಂತನೆಗೆ ಹಚ್ಚುವುದು ಮತ್ತು ಬೆಳಕು ಚೆಲ್ಲುವುದು.

ಈ ಬರಹಗಳು… ಲಂಕೇಶರು ಸದಾ ಲವಲವಿಕೆಯ, ಕ್ರಿಯಾಶೀಲತೆಯ ಬದುಕು ಕಾಣಲು ದಾರಿಯಾಗಿತ್ತು ಅನ್ನಬಹುದು. ‘ಇಟ್ಟಿಗೆ ಪವಿತ್ರವಲ್ಲ; ಜೀವ ಪವಿತ್ರ’ ಎಂದು 1989ರಲ್ಲೇ ಬರೆಯುತ್ತಾ, “ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿಯ ಬಗ್ಗೆ ವಿವಾದ ಎಬ್ಬಿಸಿರುವ ಜನಕ್ಕೆ ಸರಳ ವ್ಯವಹಾರ ಜ್ಞಾನ- ಕಾಮನ್ ಸೆನ್ಸ್- ಕೂಡ ಇಲ್ಲವೆನ್ನುವುದು ಸತ್ಯ. ಅದೆಷ್ಟೇ ಮೌಡ್ಯದಿಂದ ಕಲ್ಪಿಸಿಕೊಂಡರೂ ರಾಮಾಯಣ ಮತ್ತು ಮಹಾಭಾರತಗಳು ಚರಿತ್ರೆ ಎಂದು ವಾದಿಸುವುದು ಸಾಧ್ಯವಿಲ್ಲ; ಅವು ಈ ದೇಶದ ಎಲ್ಲ ಜಾತಿಯ, ಎಲ್ಲ ವರ್ಗದ ಜನರ ಹೆಮ್ಮೆಯ ಮಹಾಕಾವ್ಯಗಳು. ರಾಮಾಯಣ ನಡೆದ ಕತೆ ಎನ್ನುವುದು ನಿಜವಾದರೆ ‘ಕಾನೂರು ಹೆಗ್ಗಡಿತಿ’ಯ ಹೂವಯ್ಯನ ಕೃತ್ಯಗಳು ನಡೆದ ಸ್ಥಳಗಳಿಗಾಗಿ ಹುಡುಕಬೇಕಾಗುತ್ತದೆ; ಪುಷ್ಪಕ ವಿಮಾನದ ಚಾಲಕರಿಂದ ಚೆಡ್ಡಿಗಳು ತರಬೇತಿ ಪಡೆಯಬೇಕಾಗುತ್ತದೆ. ಮಹಾಕಾವ್ಯದ ಘಟನೆಗಳನ್ನು ಮೆಚ್ಚಿ ಸ್ಥಳಗಳಿಗೆ ಅವುಗಳ ಹೆಸರಿಟ್ಟಿರುವುದನ್ನು ನೆನೆದು ಇವತ್ತು ಭಾರತದ ರಾಮ, ಲಕ್ಷ್ಮಣರನ್ನೆಲ್ಲ ಮಹಾಕಾವ್ಯದ ರಾಮಲಕ್ಷ್ಮಣರ ಆಧುನಿಕ ಅವತಾರಗಳೆಂದು ಪರಿಗಣಿಸಬೇಕಾಗುತ್ತದೆ. ಇಷ್ಟನ್ನು ತಿಳಿದುಕೊಳ್ಳಲಾರದ ಮೂರ್ಖರು ಈಚಿನ ಮೂರು ವರ್ಷದಲ್ಲಿ ನಡೆಸಿರುವ ದುರ್ವ್ಯವಹಾರ ವಿವೇಕಿಗಳೆಲ್ಲರೂ ತಲೆ ತಗ್ಗಿಸುವಂತೆ ಮಾಡಿದೆ. ಬಾಬರಿ ಮಸೀದಿಯಲ್ಲಿ ಒಂದಾನೊಂದು ಕಾಲಕ್ಕೆ ರಾಮಮಂದಿರ ಇತ್ತೆಂದು ಹೇಳಿ ಆ ಮಸೀದಿಯನ್ನೇ ಕೆಡವಲು ಯತ್ನಿಸುವುದಾದರೆ ಶಂಕರಾಚಾರ್ಯರು ದೇಶದ ಉದ್ದಗಲಕ್ಕೆ ತಿರುಗಾಡಿ ಬೌದ್ಧ ಮಠಮಂದಿರಗಳನ್ನು ಬೀಳಿಸಿ ದೇವಸ್ಥಾನ ಕಟ್ಟಿಸಿದ್ದು, ವೈಷ್ಣವರು ಉತ್ತರ ಭಾರತದಲ್ಲಿ ಶೈವರ- ಅಂದರೆ ಶಂಕರಾಚಾರ್ಯರ ಅನುಯಾಯಿಗಳ- ದೇವಾಲಯಗಳನ್ನು ಬೀಳಿಸಿದ್ದು ಎಲ್ಲವನ್ನೂ ಸರಿಪಡಿಸುತ್ತಾ ಹೋಗಬೇಕಾಗುತ್ತದೆ” ಎಂಬ ಪ್ರಾಥಮಿಕ ತಿಳುವಳಿಕೆ ನೀಡುವ ಮೂಲಕ ಧರ್ಮಾಂಧರ, ಮತಾಂಧರ ಕಣ್ಣು ತೆರೆಸಲು ಯತ್ನಿಸುತ್ತಾರೆ.

ಲಂಕೇಶರ ಎಲ್ಲಾ ಸಾಧ್ಯತೆಗಳಲ್ಲಿ ಪ್ರಮುಖವಾದುದು ಅವರೊಳಗಿನ ವಿಮರ್ಶಕ. ಮೂಲತಃ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿಯೂ ಬರೆದು ಸೈ ಎನ್ನಿಸಿಕೊಂಡಿದ್ದ ಲಂಕೇಶರು ನಿಜಕ್ಕೂ ವಿಶಿಷ್ಟ, ನಿಷ್ಠುರ ವಿಮರ್ಶಕ; ಸುಮಾರು ಇಪ್ಪತ್ತು ವರ್ಷಗಳಿಗೂ ಮಿಕ್ಕ ಅವಧಿಯಲ್ಲಿ ಅವರು ಬರೆದ ವಿಮರ್ಶಾ ಲೇಖನಗಳ ಸಂಗ್ರಹ ‘ಸಾಹಿತಿ ಸಾಹಿತ್ಯ ವಿಮರ್ಶೆ’ ಈ ಮಾತನ್ನು ಬೊಟ್ಟು ಮಾಡಿ ತೋರುತ್ತದೆ. ಕುವೆಂಪು ಅವರನ್ನು ಅಂಕುಶಗಳ ವಿರುದ್ಧ ಸಿಡಿದೆದ್ದ ರಸಋಷಿ ಎಂದು ಕರೆಯುತ್ತಲೇ ಕಾರಂತರನ್ನು ಕಾರಂಜಿ ಎನ್ನುತ್ತಾರೆ. ವಿಮರ್ಶೆ ಎಂಬುದು ಹೀಗೇ ಇರಬೇಕು ಎಂಬ ಮಾನದಂಡವಿದ್ದ ಕಾಲದಲ್ಲಿ ಅವೆಲ್ಲವನ್ನು ಮುರಿಯುತ್ತಲೇ ಲಂಕೇಶ್ ತಮ್ಮದೇ ಆದ ‘ಲಂಕೇಶ್ ವಿಮರ್ಶಾ ಮೀಮಾಂಸೆ’ಯನ್ನು ಕಟ್ಟಿಕೊಡುತ್ತಾ ಸೃಜನಾತ್ಮಕವಾಗಿ ತಮ್ಮ ಓದು, ಗ್ರಹಿಕೆ, ಅವಲೋಕನಗಳನ್ನು ಬಿಚ್ಚಿಡುವ ಮುಖೇನ ಒಂದು ಸಾಹಿತ್ಯ ಕೃತಿಯನ್ನು ಓದಲು ಕೈಗೆತ್ತಿಕೊಂಡಾಗ ಬೇಕಾದ ಸಿದ್ಧತೆಗೆ ಮಾರ್ಗ ಒದಗಿಸುತ್ತಾರೆ. ಕೃತಿಯೊಂದು ಕೇವಲ ತಂತ್ರ ಅಥವಾ ವರದಿಯಾಗದೆ ಓದುಗನ ಮನಸಿನ ಮೇಲೆ ಹೇಗೆ ಪರಿಭಾವಿಸಬೇಕು? ಎಂಬುದರ ಬಗ್ಗೆ ಪ್ರಶ್ನೆಗಳನ್ನು ಹಾಕಿಕೊಂಡು ಆ ಪ್ರಶ್ನೆಗಳಿಗೆ ತಾವೇ ಉತ್ತರ ಕಂಡುಕೊಳ್ಳುತ್ತಾ ಹೋಗುವುದು ಆವರ ವಿಮರ್ಶಾ ಬರಹಗಳ ವೈಶಿಷ್ಟ್ಯ ಅನ್ನಬಹುದು. ಹೇಗೆ ವೈದಿಕ ಸಂಸ್ಕೃತಿಯ ಕಂದಾಚಾರವನ್ನು ಕಟುವಾಗಿ ಟೀಕಿಸುತ್ತಾರೋ ಹಾಗೆಯೇ ಅವೈದಿಕ ಎಂಬ ಕಾರಣಕ್ಕೆ ಆ ಬಗೆಯ ಎಲ್ಲ ಕೃತಿಗಳನ್ನೂ ಲಂಕೇಶ್ ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳುತ್ತಾರೆ ಅಂತೇನೂ ಇಲ್ಲ. ಮಾಸ್ತಿಯವರ ಕತೆಗಳನ್ನು, ರಾಮಾನುಜನ್, ಬಿಳಿಗಿರಿಯವರ ಕವಿತೆಗಳನ್ನು, ಕಾರ್ನಾಡರ ನಾಟಕಗಳನ್ನು ಇಷ್ಟ ಪಡುವ ಲಂಕೇಶ್ ಸಿದ್ಧಲಿಂಗಯ್ಯ ಅವರ ಆತ್ಮಕಥನ ‘ಊರು ಕೇರಿ’ಯನ್ನು ಅಪ್ರಾಮಾಣಿಕ ದೊಂಬರಾಟ ಎನ್ನುವಂತೆಯೇ ದೇವುಡು, ಸತ್ಯಕಾಮ ಮುಂತಾದವರ ಭಾಷಾಪಾಂಡಿತ್ಯ ಪ್ರದರ್ಶನವನ್ನು ಒಪ್ಪುವುದಿಲ್ಲ.

ಅನಂತಮೂರ್ತಿಯವರ ‘ಭವ’ವನ್ನು ಜಡ ಜಗತ್ತು ಎನ್ನುತ್ತಲೇ ಅವರ ಕೆಲವು ಕತೆಗಳನ್ನು ಮೆಚ್ಚಿಕೊಳ್ಳುತ್ತಾರೆ. ಅಡಿಗರ ಕವಿತೆಗಳ ಬಗ್ಗೆ ಗೌರವ ಇರಿಸಿಕೊಳ್ಳುತ್ತಲೇ ಅದೇ ಅಡಿಗರು ಜನಸಂಘದಲ್ಲಿ ಗುರ್ತಿಸಿಕೊಂಡದ್ದನ್ನು ಅನುಮಾನದಿಂದ ನೋಡುವುದು ಲಂಕೇಶರಿಗಿದ್ದ ಬದ್ದತೆ, ಪೂರ್ವಾಗ್ರಹವಲ್ಲದ ಮನಸ್ಸಿನ ಸಂಕೇತ. ಹಾಗೆಯೇ ‘ಮನಕೆ ಕಾರಂಜಿಯ ಸ್ಪರ್ಶ’, ‘ರೂಪಕ ಲೇಖಕರು’ ಎಂಬ ಕೃತಿಗಳ ಮೂಲಕ ಪಾಬ್ಲೊ ನೆರೂಡ, ಟಿ. ಎಸ್.ಎಲಿಯಟ್, ಜೆಫ್ರಿ ಬರ್ನಾರ್ಡ್, ಜೇಮ್ಸ್ ಜಾಯ್ಸ್, ಲಿಯೋ ಟಾಲ್ ಸ್ಟಾಯ್, ಆಲ್ಬರ್ಟ್ ಕ್ಯಾಮು, ಪುಷ್ಕಿನ್ ಶೇಕ್ಸ್ ಪಿಯರ್, ಡಬ್ಲ್ಯೂ.ಬಿ.ಯೇಟ್ಸ್, ಪೀಟರ್ ಬ್ರೂಕ್, ಜಿಮ್ ಕಾರ್ಬೆಟ್, ರಾಬರ್ಟ್ ಬರ್ನ್ಸ್, ಹೆನ್ರಿ ಥೋರೋ ಗೇಬ್ರಿಯಲ್ ಗಾರ್ಸಿಯ ಮಾರ್ಕ್ವೆಸ್ ಮುಂತಾದ ವಿಶ್ವಮಟ್ಟದ ಸಾಹಿತಿಗಳನ್ನು ಕನ್ನಡಕ್ಕೆ ಪರಿಚಯಿಸಿಕೊಟ್ಟ ಕ್ರೆಡಿಟ್ ಲಂಕೇಶರಿಗೆ ಸಲ್ಲುತ್ತದೆ.

ಇಷ್ಟಾದರೂ ಈ ಲಂಕೇಶ್ ನಮಗೆ ಪೂರ್ತಿ ದಕ್ಕಿದಂತಾಗುವುದಿಲ್ಲ, ಎಲ್ಲ ಕ್ರಿಯಾಶೀಲ ಜೀವಗಳಂತೆ. ಇವರ ಇನ್ನೊಂದು ಅಚ್ಚರಿ ಮೂಡಿಸುವ ಸಂಗತಿಯೆಂದರೆ ತಮ್ಮ ಪತ್ರಿಕೆಯ ಪುಟಗಳ ಲೇ ಔಟ್ ಆದ ನಂತರ ಅಲ್ಲಲ್ಲಿ ಉಳಿದುಹೋಗುತ್ತಿದ್ದ ಖಾಲಿ ಜಾಗವನ್ನು ತುಂಬಲು ಕೆಲವು ಸಣ್ಣ ಪುಟ್ಟ ಪದ್ಯಗಳನ್ನು ಬರೆಯುತ್ತಿದ್ದರು; ನೀಲು ಕಾವ್ಯನಾಮದಲ್ಲಿ. ಆ ನೀಲುಕಾವ್ಯ ಓದುಗವಲಯದಲ್ಲಿ ಯಾವ ಮಟ್ಟಕ್ಕೆ ಜನಪ್ರಿಯತೆ ಗಳಿಸಿತ್ತು ಎಂದರೆ ಖುಷಿ, ದುಃಖ, ನೋವು, ಕಾಮ, ವಿರಹ, ವ್ಯಂಗ್ಯ, ವಿಡಂಬನೆ ಮೂಲಕ ಬದುಕಿನ ಆಳದಲ್ಲಿ ಅಡಗಿರಬಹುದಾದ ಸತ್ಯಗಳನ್ನು ಹಾಗೇ ಹನಿಹನಿ ರೂಪದಲ್ಲಿ ಮೊಗೆಮೊಗೆದು ಕೊಡುತ್ತಿದ್ದ ಆ ತುಂಟಿ, ತತ್ವಜ್ಞಾನಿ, ಕಾಡುವ ಹೆಣ್ಣು ನೀಲುವನ್ನೊಮ್ಮೆ ಹೇಗಾದರೂ ಮಾಡಿ ಭೇಟಿ ಮಾಡಬೇಕು ಅನ್ನುವಷ್ಟರ ಮಟ್ಟಿಗೆ. ಆ ಕೆಲವೊಂದು ಕವಿತೆಗಳಲ್ಲಿನ ರೋಮಾಂಚನಕಾರಿ ಹಸಿಬಿಸಿ ಸಾಲುಗಳು ಓದುಗರು ಹಾಗೆಲ್ಲಾ ಅಂದುಕೊಳ್ಳಲು, ನೀಲುವಿನ ಧ್ಯಾನದಲ್ಲಿ ತಮ್ಮೊಳಗಿನ ರಸಿಕತೆಗೆ ಕಾವು ಕೊಟ್ಟುಕೊಳ್ಳಲು ಕಾರಣವಾಗಿತ್ತು ಅನ್ನಬಹುದು ಕೂಡ. ಕ್ರಮೇಣ ಈ ಕವಿತೆಗಳ ಕರ್ತೃ ಸ್ವತಃ ಲಂಕೇಶರೇ ಅಂತ ಗೊತ್ತಾಗಿದ್ದು ಬೇರೆ ಮಾತು.

ಮೂರು ಪುಸ್ತಕಗಳಾಗಿ ಹೊರಬಂದಿರುವ ಈ ನೀಲು ಕಾವ್ಯದ ಪ್ರಥಮ ಸಂಗ್ರಹಕ್ಕೆ ಮುನ್ನುಡಿ ಬರೆಯುತ್ತಾ ಕಿ.ರಂ.ನಾಗರಾಜ ಅವರು, “ನೀಲು ಕಾವ್ಯದ ನಿರೂಪಕನಿಗೆ ವೈವಿಧ್ಯದಿಂದ ಕೂಡಿದ ಲೋಕದ ಅಸಂಖ್ಯ ಸಂಗತಿಗಳೊಂದಿಗೆ ಗಂಭೀರವಾದ ಆಸಕ್ತಿ ಇದೆ. ಚರಿತ್ರೆ, ಪುರಾಣ, ರಾಜಕೀಯ, ನೀತಿ-ಅನೀತಿ, ಸೃಜನಶೀಲತೆ, ಸಾಹಸ, ಆಟ, ಆಟದ ವಿವಿಧ ಬಗೆ-ಭಂಗಿಗಳು, ಯುದ್ಧ, ಜೂಜು, ಹಾದರ, ಬಡತನ, ಸಿರಿತನ ಹೀಗೇ ಅನೇಕ. ಆದರೆ ಇದ್ಯಾವುದೂ ನೆರವೂ ಅಲ್ಲ, ಸರಳವೂ ಅಲ್ಲ. ಈ ಎಲ್ಲಾ ಆಸಕ್ತಿಯಿಂದ ಕೂಡಿದ ಸಂಗತಿಗಳನ್ನು, ಅದರಿಂದ ಹುಟ್ಟಿದ ಅನುಭೂತಿಗಳನ್ನು ಸೂಕ್ಷ್ಮಪರಿಶೀಲನೆಗೆ ಒಡ್ಡಿ ರೂಪಕಗೊಳಿಸುವ, ಸಂಕೇತಗೊಳಿಸುವ ಪರಿಣಿತಿಯನ್ನು ಇಲ್ಲಿ ಕಾಣುತ್ತೇವೆ. ಯಾವುದೇ ಸಂಗತಿ, ವಿಷಯವನ್ನು ಮುಖಾಮುಖಿಯಾಗಿಸುವುದರಿಂದ ಸಿದ್ಧಿಸುವ ಪರಿಣಾಮವನ್ನು ನಿರೂಪಕ ಚೆನ್ನಾಗಿ ಬಲ್ಲ” ಎಂದು ಬರೆಯುವಲ್ಲಿ ನೀಲುಕಾವ್ಯವನ್ನು ಇನ್ನೂ ಬೇರೆ ಬೇರೆ ಆಯಾಮಗಳಿಂದ ದಕ್ಕಿಸಿಕೊಳ್ಳಲು ದಾರಿ ಮಾಡಿಕೊಡುತ್ತಾರೆ. ಈಗಾಗಲೇ ಈ ಬರಹ ಉದ್ದವಾಗುತ್ತಿರುವುದರಿಂದ ಲಂಕೇಶರ ಇಂಥದೊಂದು ಪುಟ್ಟ ನೀಲುಕವಿತೆಯೊಂದಿಗೆ ಈ ಬರಹವನ್ನು ಮುಗಿಸುತ್ತೇನೆ.

ಹುಟ್ಟು ಹಠವಾದಿಯೊಬ್ಬ

ಕವಿಯಾಗಲು ಪಣತೊಟ್ಟು

ನಿತ್ಯ ಪದಭೇದಿಯಲ್ಲಿ ಬಳಲಿ

ಹಲ್ಲು ಕಡಿಯುತ್ತಿದ್ದಾಗ

ವಸಂತದ ಮಾವಿನ ಮರ

ಕೋಗಿಲೆಯ ಕಂಠದಲ್ಲಿ ಹಾಡಿ

ತನಗೆ ಗೊತ್ತಿಲ್ಲದೆ

ಕವಿಯಾಯಿತು

 

 

‍ಲೇಖಕರು g

March 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Kantha

    “Teeke Tippani” is a mandatory for Kannada readers,a good reader will not miss it. If anyone excluding “Teeke Tippani” is missing a lot.

    ಪ್ರತಿಕ್ರಿಯೆ
  2. ಕಿರಣ್

    ಲಂಕೇಶರ ಮಿತಿಗಳನ್ನು ಚರ್ಚಿಸುವುದು ಪಾಪಕಾರ್ಯವೇನೋ ಎನ್ನುವಂತೆ ಅವರನ್ನು ವೈಭವೀಕರಿಸಲಾಗುತ್ತಿದೆ. ಇದನ್ನು ಲಂಕೇಶರು ಬಾಹ್ಯವಾಗಿ ಎಂದಿಗೂ ಒತ್ತಾಸೆ ನೀಡಲಿಲ್ಲ. ಲಂಕೇಶರ ಪೂರ್ವಾಗ್ರಹಗಳು ಇನ್ನೂ ಪೂರ್ಣವಾಗಿ ಚರ್ಚೆಗೆ ಬಂದಿಲ್ಲ. ಯಾವುದೋ ಒಂದು ಉದಾಹರಣೆ ನೀಡಿ ಲಂಕೇಶರು ಮುಕ್ತ ಮನಸ್ಸಿನವರು ಎಂದು ನಿರೂಪಿಸಲು ಸಾಧ್ಯವಿಲ್ಲ. ಅವರನ್ನು ಮೆಚ್ಚಿದಂತೆಯೇ ಅವರ ಮಿತಿಗಳನ್ನು ವಿಮರ್ಶೆಗೆ ಒಳಪಡಿಸುವುದು ನಡೆಯಬೇಕು. ಅದನ್ನು ಅವರೂ ಅನುಮೋದಿಸುತ್ತಿದ್ದರು ಎಂದು ಭಾವನೆ.

    ಪ್ರತಿಕ್ರಿಯೆ
  3. Venkataswamy

    ಹೃದಯಶಿವರ ಲಂಕೇಶರನ್ನು ಕುರಿತ ಲೇಖನ ಅವರ ಎಂಭತ್ತನೆಯ ಹುಟ್ಟುಹಬ್ಬದ ಸಂಧರ್ಭಕ್ಕೆ ಸೂಕ್ತವಾಗಿದೆ. ಅವರು ಲಂಕೇಶರ ಎಲ್ಲ ಮುಖಗಳನ್ನು ಕಾಣುವ ಕಾಣಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಲಂಕೇಶರ ‘ಕರ್ನಾಟಕ ಪ್ರಗತಿರಂಗ’ ಮತ್ತು ‘ಹುಳಿಮಾವಿನಮರ’ವನ್ನು ಮರೆತಿದ್ದಾರೆ.

    ಪ್ರತಿಕ್ರಿಯೆ
  4. vageesha JM

    ಯಾರಿಗೂ ಪೂರ್ತಿಯಾಗಿ ದಕ್ಕದ ಲಂಕೇಶರನ್ನು ನಿಮ್ಮ ಬರಹ ಪೂರ್ತಿಯಾಗಿ ದಕ್ಕಿಸಿಕೊಟ್ಟಿದೆ.. ಇನ್ನು ಓದಿಕೊಳ್ಳುವ ಆಸೆ ಲಂಕೇಶ್ ಅವರನ್ನು.. A big thank you “Hridaya Shiva sir”

    ಪ್ರತಿಕ್ರಿಯೆ
  5. mallikarjun talwar

    mungaru male seridante halavu chitragalige nivu baraeda hadugalnnu evattiguu keluttene. hesare soagsu HRUDAYASHIAVA. lankesh avrannu hidiyagai againadage odhalagade hodaddkke bijaride. yakanadre avaru bareyuvaga naninnu yalasu. adre lankesh mestru andakashana evattigu yeno kushi. avara shisyaru anta helikoolluvavru hagu nijakku avarannu aradhisuva, vimarshisuva, avara tatva siddhantagallii nambike ittavru, adannu ondu andolanavgi tegedukondu hoguttiruva pramnikarannu kandaha nijakku mattontara kushi agatte.ega bidi lankesh pakkadalle iddareno anno lekkakke avru namma talege pustkagala moolaka hadavada MEVU odagisiddare. avrobba SAARVAKALIKA CHINTAKA annodu nann bhavane. anyway gd write up. haadu bariri “ARALUTIRU JEEVADA GELAYA…” trahada akshrad aslai bhava matte ukkali. nimma leknigondu salam.

    ಪ್ರತಿಕ್ರಿಯೆ
  6. kusumabaale

    ಲಂಕೇಶ್ ಅನ್ನೋ ಹೆಸರು ಎಲ್ಲಿ ಸಿಕ್ಕಿದರೂ ಹುಡಕಿ ಓದುವವಳು ನಾನು.ಇದನ್ನೂ ಓದಿದೆ ಪ್ರತಿ ಸಲ ಓದಿದಾಗಲೂ ಅವರು ‘ಉಳಿದವರು ಕಂಡಂತೆ ‘ ಅನಿಸುತ್ತದೆ.ದಕ್ಕುವುದಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: