ಲಂಕೇಶ್ ಅವರ 'ಅಕ್ಷರ ಹೊಸಕಾವ್ಯ' ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು

1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ ‘ಅಕ್ಷರ ಹೊಸಕಾವ್ಯ’ ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ. ಫೇಬರ್ ಅಂಡ್ ಫೇಬರ್ ಸಂಸ್ಥೆಯು ಇಂಗ್ಲಿಷ್ನಲ್ಲಿ ಪ್ರಕಟಿಸಿದ ಆಧುನಿಕ ಕಾವ್ಯ ಸಂಗ್ರಹವನ್ನೇ ಮಾದರಿಯಾಗಿಟ್ಟುಕೊಂಡು ಲಂಕೇಶ್ ಅವರು ರೂಪಿಸಿದ್ದ ‘ಅಕ್ಷರ ಹೊಸಕಾವ್ಯ’ ಆಧುನಿಕ ಕನ್ನಡ ಕಾವ್ಯದ, ವಿಶೇಷವಾಗಿ ನವ್ಯ ಕಾವ್ಯದ ಗುಣಲಕ್ಷಣಗಳನ್ನು, ಸಂವೇದನೆಯ ಸ್ವರೂಪವನ್ನು ಸಮರ್ಥವಾಗಿ ಮಂಡಿಸಿದ ಆಂಥಾಲಜಿ. ನವ್ಯ ಕಾವ್ಯ ಉತ್ತುಂಗ ಸ್ಥಿತಿಯನ್ನು ಮುಟ್ಟಿದ ಸಂದರ್ಭದಲ್ಲಿ ಪ್ರಕಟಗೊಂಡ ಈ ಸಂಗ್ರಹ ನವ್ಯ ಮನಸ್ಸುಗಳನ್ನು, ಅವುಗಳ ಸೂಕ್ಷ್ಮ ಸ್ಫಂದನವನ್ನು ಸರಿಯಾದ ರೀತಿಯಲ್ಲಿ ತೋರಿಸಿಕೊಟ್ಟಿತು. ಈ ಸಂಗ್ರಹದಲ್ಲಿ ಸ್ಥಾನ ದೊರೆತದುದನ್ನೇ ದೊಡ್ಡ ಗೌರವವೆಂದು ಪರಿಭಾವಿಸುವ ಸಾಂಸ್ಕೃತಿಕ ಸನ್ನಿವೇಶವೂ ಆಗ ಉಂಟಾಗಿತ್ತು. ‘ಅಕ್ಷರ ಹೊಸಕಾವ್ಯ’ದಲ್ಲಿ ಜಾಗ ಸಿಕ್ಕದ ಕೆಲವರು ಪರ್ಯಾಯ ಸಂಚಯವನ್ನು ತರುವ ಪ್ರಯತ್ನಗಳನ್ನೂ ಮಾಡಿದರು.

akshara hosa kavyaಪರ್ಯಾಯ ಸಂಚಯಗಳು ಬೇರೆ ಬೇರೆ ಹೆಸರಿನಲ್ಲಿ ಪ್ರಕಟವಾದವು. ಆದರೆ ಅವು ಯಾವುವೂ ‘ಅಕ್ಷರ ಹೊಸಕಾವ್ಯ’ ಉಂಟುಮಾಡಿದ ಸಂಚಲನವನ್ನು ಕನ್ನಡ ಓದುಗರಲ್ಲಿ ಉಂಟುಮಾಡಲಿಲ್ಲ. ಅಕ್ಷರ ಹೊಸ ಕಾವ್ಯಕ್ಕೆ ಲಂಕೇಶರು ಕವಿಗಳನ್ನು ಆಯ್ಕೆಮಾಡಿದ ಕ್ರಮದ ಬಗ್ಗೆಯೇ ವಾಚಕರ ವಾಣಿಯಲ್ಲಿ ಚರ್ಚೆಗಳು ನಡೆದವು. ಸಮರ್ಥನೆ, ಪ್ರತಿಪಾದನೆ, ಪರ ವಿರೋಧ ಹೀಗೆ ಚರ್ಚೆಯ ಸ್ವರೂಪ ವಿಭಿನ್ನ ಆಯಾಮಗಳನ್ನು ಪಡೆದುಕೊಂಡಿತು. ಇವತ್ತಿಗೂ ಈ ‘ಅಕ್ಷರ ಹೊಸಕಾವ್ಯ’ ಕನ್ನಡದಲ್ಲಿ ಒಂದು ಮೈಲಿಗಲ್ಲು. ಕಾವ್ಯಾಭ್ಯಾಸಿಗಳ ಗಂಭೀರ ಅಧ್ಯಯನಕ್ಕೆ ಅತ್ಯಂತ ಯೋಗ್ಯವಾದ ಸಂಚಯ ಇದೆಂಬುದರಲ್ಲಿ ಯಾವ ಅನುಮಾನವೂ ಇರಲಾರದು.

ಇಷ್ಟೇ ಮಹತ್ವವಾದ, ಒಂದರ್ಥದಲ್ಲಿ ಸಮಗ್ರ ಸ್ವರೂಪದ ಇನ್ನೊಂದು ಕಾವ್ಯ ಸಂಚಯವೂ ಇದೆ. ಇದನ್ನು ಸಂಪಾದಿಸಿದವರು ವಿಮರ್ಶಕ ಪ್ರೊ.ಜಿ.ಎಚ್.ನಾಯಕ. ಇದು ಪ್ರಕಟವಾದದ್ದು 1985ರಲ್ಲಿ; ಕನ್ನಡ ಸಾಹಿತ್ಯ ಪರಿಷತ್ತಿನಿಂದ. ಇದರ ಹೆಸರು-ಹೊಸಗನ್ನಡ ಕವಿತೆ. ಹೊಸಗನ್ನಡದ ಆರಂಭ ಕಾಲದಿಂದ ಹಿಡಿದು 1980ರ ವರೆಗೆ ಕನ್ನಡ ಕಾವ್ಯ ನಡೆದು ಬಂದ ರೀತಿಯನ್ನು ಈ ಸಂಗ್ರಹ ದಕ್ಷ ರೀತಿಯಲ್ಲಿ, ಸಮರ್ಪಕ ಎಂದು ಹೇಳಬಹುದಾದ ರೀತಿಯಲ್ಲಿ ಮಂಡಿಸುತ್ತದೆ. ಹೊಸಗನ್ನಡ ‘ಕಾವ್ಯದ ಮಾರ್ಗ, ಪ್ರಯೋಗ, ಪ್ರಕಾರ, ವಸ್ತು, ಭಾಷೆ, ಛಂದಸ್ಸು, ತಂತ್ರ, ಧೋರಣೆ ಚಾರಿತ್ರಿಕತೆ’ ಮಂತಾದ ದೃಷ್ಟಿಕೋನಗಳಿಂದ ಈ ಸಂಚಯದ ಕವಿತೆಗಳನ್ನು ಆಯ್ಕೆಮಾಡಲಾಗಿದೆ. ‘ಹೊಸಗನ್ನಡ ಕವಿತೆ ಮುಟ್ಟಿದ ಅತ್ಯುನ್ನತ ನೆಲೆಯನ್ನು ಸಮರ್ಥವಾಗಿ ಪ್ರತಿನಿಧಿಸುವಂತಿರುವ ಕವನ ಮತ್ತು ಕಾವ್ಯಭಾಗ ಇಲ್ಲಿ ಸೇರಿವೆ’ ಎಂದು ಸಂಪಾದಕ ಪ್ರೊ.ನಾಯಕ ಅವರು ತಮ್ಮ ಆಯ್ಕೆಯ ಮಾನದಂಡವನ್ನು ಸೂಚಿಸಿದ್ದಾರೆ.

ಹೊಸಗನ್ನಡ ಕಾವ್ಯ ಮಾರ್ಗವನ್ನು ತಿಳಿಯಬಯಸುವ ಎಲ್ಲ ಕಾವ್ಯಾಭ್ಯಾಸಿಗಳೂ ಅಗತ್ಯವಾಗಿ ಓದಬೇಕಾದ ಈ ಗ್ರಂಥ ಅನೇಕ ವರ್ಷಗಳ ಕಾಲ ಐಎಎಸ್ ಮತ್ತು ಕೆಎಎಸ್. ಪರೀಕ್ಷೆಗಳಿಗೆ ಪಠ್ಯವಾಗಿತ್ತು. ತಮ್ಮ ಪರೀಕ್ಷೆಯ ಪಠ್ಯದ ಆಚೆಗೆ ಹೋಗಿ ಕಾವ್ಯವನ್ನು ತಿಳಿಯಬಯಸಿದ ಅನೇಕರು ಈ ಕೃತಿಯಿಂದ ತೀರ ಪ್ರಭಾವಿತರಾದದ್ದೂ ನಿಜ.

ಹೊಸಗನ್ನಡ ಕಾವ್ಯವೆಂಬುದು ಹಲವಾರು ಕುತೂಹಲ ಘಟ್ಟಗಳನ್ನು ಹಾದುಬಂದ, ಅನೇಕ ಮಹತ್ವದ ಬೆಳವಣಿಗೆಗಳನ್ನು ಕಂಡ ಸಾಹಿತ್ಯ ವಾಹಿನಿ. ಸಮೃದ್ಧ ಫಸಲು, ವಿಭಿನ್ನ ಪ್ರಯೋಗಗಳು, ಸ್ಥಿತ್ಯಂತರಗಳು, ಪ್ರತಿಭಾವಂತ ಮನಸ್ಸುಗಳು, ಸಾಧನೆಯ ಶಿಖರಗಳು ಹೀಗೆ ಅನೇಕ ಸಂಗತಿಗಳು ಕಾಣಸಿಗುವ ಈ ಕಾವ್ಯ ಪ್ರಕಾರ ಇವತ್ತಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಶಿಶುನಾಳ ಶರೀಫ, ಸಕ್ಕರಿ ಬಾಳಾಚಾರ್ಯ (ಶಾಂತಕವಿ), ಪಂಜೆ, ಎಂ.ಗೋವಿಂದ ಪೈ, ಬಿಎಂಶ್ರೀ, ಡಿವಿಜಿ, ಮಾಸ್ತಿ, ಆನಂದಕಂದ, ವಿ.ಸೀ., ಬೇಂದ್ರೆ, ಮಧುರಚೆನ್ನ, ಕಡೆಂಗೋಡ್ಲು, ಕುವೆಂಪು, ಗೋಕಾಕ, ಅಡಿಗ, ಪುತಿನ, ಕೆಎಸ್ನ., ಎಕ್ಕುಂಡಿ, ಗಂಗಾಧರ ಚಿತ್ತಾಲ, ಜಿಎಸ್. ಶಿವರುದ್ರಪ್ಪ, ಕಣವಿ, ಜಿ.ಪಿ.ರಾಜರತ್ನಂ, ದಿನಕರ ದೇಸಾಯಿ, ಸಿದ್ದಯ್ಯ ಪುರಾಣಿಕ, ಕಯ್ಯಾರ, ಎಸ್.ವಿ.ಪರಮೇಶ್ವರ ಭಟ್ಟ ಮೊದಲಾದ ಅನೇಕರು ಹೊಸಗನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಇವರೆಲ್ಲರ ಹಾಗೂ ಇಂಥ ಅನೇಕರ ಕಾವ್ಯವನ್ನು ಶ್ರದ್ಧೆಯಿಂದ ಪರಿಶೀಲಿಸಿ ಈ ಸಂಚಯದಲ್ಲಿ ಸೇರಿಸಿರುವುದು ಹೊಸಗನ್ನಡ ಕಾವ್ಯಾಭ್ಯಾಸಕ್ಕೆ ಅಗತ್ಯ ನೆರವನ್ನು ನೀಡುವಂತಿದೆ. ಈ ಆಯ್ಕೆಯೇ ಒಂದು ರೀತಿಯ ವಿಮರ್ಶೆಯೂ ಆಗಿರುವುದು ಇಲ್ಲಿನ ವಿಶೇಷ. ಇನ್ನೊಂದು ದಿಕ್ಕಿನಿಂದ ನೋಡಿದರೆ ಇದು ಒಂದು ಶತಮಾನದ ಕನ್ನಡ ಕಾವ್ಯದ ಅವಲೋಕನ ಮತ್ತು ವಿಮರ್ಶೆಯೂ ಆಗಿ ಕಾಣಿಸುತ್ತದೆ. ಇಂಥ ಸಂಚಯ ಗ್ರಂಥಗಳು ಕನ್ನಡದಲ್ಲಿ ಹೆಚ್ಚಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿಗೇ ಈ ಗ್ರಂಥದ ಮಹತ್ವ ತಿಳಿದಂತೆ ಕಾಣುವುದಿಲ್ಲ. 1985ರಲ್ಲಿ ಪ್ರಕಟವಾದ ಈ ಗ್ರಂಥ ಮತ್ತೆ ಮುದ್ರಣವನ್ನು ಕಂಡಿಲ್ಲ. ಈ ಸಂಚಯದ ಪ್ರತಿಗಳು ಮುಗಿದು ಹೋಗಿ ಎಷ್ಟೋ ಕಾಲವಾಗಿದೆ; ಪ್ರತಿಗಾಗಿ ಓದುಗರ ಹುಡುಕಾಟವಂತೂ ನಿರಂತರವಾಗಿದೆ. ಆದರೂ ಇದರ ಮರುಮುದ್ರಣದ ಬಗ್ಗೆ ಪರಿಷತ್ತು ಚಿಂತಿಸಿದಂತೆ ಕಾಣುವುದಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಸಂದರ್ಭದಲ್ಲೆಲ್ಲ ಹೊಸ ಹೊಸ ಗ್ರಂಥಗಳನ್ನು ಪ್ರಕಟಿಸುತ್ತಲೇ ಇರುತ್ತದೆ. ಸಮ್ಮೇಳನದ ಸಂಖ್ಯೆಯನ್ನು ಪರಿಗಣಿಸಿ ಅಷ್ಟೇ ಸಂಖ್ಯೆಯ ಪುಸ್ತಕಗಳನ್ನು ಪ್ರಕಟಿಸುವ ಹೊಸ ಪರಿಪಾಠವನ್ನೂ ಪರಿಷತ್ತು ರೂಢಿಸಿಕೊಂಡಿದೆ. ಗ್ರಂಥಗಳು ಪ್ರಕಟವಾಗುತ್ತವೆ ಎಂಬುದನ್ನು ಬಿಟ್ಟರೆ ಈ ಗ್ರಂಥಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯುವುದಿಲ್ಲ. ಸಾರ್ವಜನಿಕ ಹಣವಂತೂ ಪೋಲಾಗುತ್ತಿರುತ್ತದೆ. ಪರಿಷತ್ತು ಸಂಖ್ಯೆಯನ್ನು ಬೆನ್ನಟ್ಟುವ ಕೆಲಸವನ್ನು ಕೈಬಿಟ್ಟು ತಾನೇ ಹಿಂದೆ ಪ್ರಕಟಿಸಿದ ಒಳ್ಳೆಯ ಕೃತಿಗಳನ್ನು ಪ್ರಕಟಿಸುವ ದಿಕ್ಕಿನಲ್ಲಿ ಯೋಚಿಸುವುದು ಉತ್ತಮ. ಅಂಥ ಪುನರ್ ಮುದ್ರಣಕ್ಕೆ ಯೋಗ್ಯವಾದ ಕೃತಿಗಳಲ್ಲಿ ‘ಹೊಸಗನ್ನಡ ಕವಿತೆ’ ಮುಖ್ಯವಾದದ್ದು ಮತ್ತು ಓದುಗರ ಬೇಡಿಕೆಯನ್ನು ಪಡೆದದ್ದು ಎಂಬುದರಲ್ಲಿ ಸಂಶಯವಿಲ್ಲ.

color pencilsಈ ಗ್ರಂಥವನ್ನು ಮತ್ತೆ ಮುದ್ರಿಸುವುದರ ಜೊತೆಗೆ ಪರಿಷತ್ತು ಇನ್ನೊಂದು ಚಿಂತನೆಯನ್ನೂ ನಡೆಸಬಹುದು: 1900 ರಿಂದ ಆರಂಭಿಸಿ 1980ರ ವರೆಗಿನ ಹೊಸಗನ್ನಡ ಕವಿತೆಯ ಪ್ರಾತಿನಿಧಿಕ ರೂಪ ಈ ಸಂಚಯದಲ್ಲಿ ಸಿಕ್ಕುತ್ತದೆ. ಇನ್ನು 20 ವರ್ಷಗಳ ಕಾವ್ಯವನ್ನೂ ಇದರೊಳಕ್ಕೆ ತರುವುದು ಸಾಧ್ಯವಾದರೆ, ನೂರು ವರ್ಷಗಳ ಕನ್ನಡ ಕಾವ್ಯದ ಒಂದು ಸಮಗ್ರ ಹಾಗೂ ಪ್ರಾತಿನಿಧಿಕ ಚಿತ್ರ ದೊರಕುವಂತಾಗುತ್ತದೆ. ಈ ಗ್ರಂಥಕ್ಕೆ ಇನ್ನೊಂದು ಆಯಾಮವೂ ದೊರೆಯುವಂತಾಗುತ್ತದೆ.

1980ರಿಂದ ಕನ್ನಡ ಕಾವ್ಯ ಪಡೆದುಕೊಂಡ ಚೈತನ್ಯ ತುಂಬ ವೈವಿಧ್ಯಮಯವಾದದ್ದು. ಅನೇಕ ಹೊಸ ಹೊಸ ಧ್ವನಿಗಳು ಈ ಅವಧಿಯಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಂಡಿವೆ. ಮಹಿಳಾ ಲೋಕದಿಂದ ಬಂದಿರುವ ಧ್ವನಿಗಳಂತೂ ಹೊಸಗನ್ನಡ ಸಾಹಿತ್ಯಕ್ಕೆ ವೈವಿಧ್ಯತೆಯನ್ನು, ಹೊಸ ಕಾಂತಿಯನ್ನು ತಂದುಕೊಟ್ಟಿವೆ. ಈವರೆಗೂ ಸಾಹಿತ್ಯ ಲೋಕವನ್ನು ಪ್ರವೇಶಿಸದ, ಸಮಾಜದ ಅಲಕ್ಷಿತ ವರ್ಗಗಳ ವಿದ್ಯಾವಂತರೂ ತಮ್ಮ ಅನುಭವದ ಅಭಿವ್ಯಕ್ತಿಗೆ ಕಾವ್ಯ ಪ್ರಕಾರವನ್ನು ಅವಲಂಬಿಸಿರುವುದು ಕಾವ್ಯದ ಲಯ, ಗತಿಗಳನ್ನು ಪಲ್ಲಟಗೊಳಿಸಿವೆ. ಹಲವರ ಅನುಭವ ಲೋಕವೇ ಬೆಚ್ಚಿಬೀಳಿಸುವಂತಿದೆ. ಹೊಸ ನೀರಿನಿಂದಾಗಿ ಕನ್ನಡ ಕಾವ್ಯ ವಾಹಿನಿ ಹೊಸ ಚೈತನ್ಯವನ್ನು, ಹುರುಪು ಹುಮ್ಮಸ್ಸುಗಳನ್ನು ಪಡೆದುಕೊಂಡಿರುವುದು ನಿಜ.

ಕಾವ್ಯ ಸಂಚಯಗಳು ಕನ್ನಡದಲ್ಲಿ ಹಲವು ಬಂದಿವೆ. ಮುಖ್ಯವಾಗಿ ಸಾಹಿತ್ಯ ಅಕಾಡೆಮಿ ಶತಮಾನದ ಕಾವ್ಯ, ಕಥೆ, ವಿಮರ್ಶೆ, ಪ್ರಬಂಧ ಹೀಗೆ ವಿವಿಧ ಪ್ರಕಾರಗಳಲ್ಲಿ ಸಂಚಯ ಗ್ರಂಥಗಳನ್ನು ಪ್ರಕಟಿಸಿದೆ. ‘ಶತಮಾನದ ಕಾವ್ಯ’ ಸಂಚಯ ಗಮನಸೆಳೆಯುವಂತೆಯೂ ಇದೆ. ಆದರೆ ಅನೇಕ ಮಿತಿಗಳ ಮಧ್ಯೆ ಈ ಗ್ರಂಥ ರೂಪಗೊಂಡಿರುವುದು ಸ್ಪಷ್ಟ. ಲಂಕೇಶರಂತೆ ಅಥವಾ ಜಿ.ಎಚ್.ನಾಯಕರಂತೆ ನಿಷ್ಠುರವಾಗಿ ಕವಿತೆಗಳನ್ನು ಆಯ್ಕೆಮಾಡಿ, ಆಯ್ಕೆಯಲ್ಲಿಯೇ ವಿಮರ್ಶೆಯೂ ಒಳಗೊಂಡಿರುವಂತೆ ಗ್ರಂಥಗಳನ್ನು ರೂಪಿಸಿದವರು ಕಡಿಮೆ. ಲಂಕೇಶರು ಅಕ್ಷರ ಹೊಸಕಾವ್ಯಕ್ಕೆ ಮತ್ತು ನಾಯಕರು ಹೊಸಗನ್ನಡ ಕವಿತೆಗೆ ಬರೆದಿರುವ ಪ್ರಸ್ತಾವನೆಗಳು ತುಂಬ ಮೌಲಿಕವೂ ಆಗಿರುವುದು ಮತ್ತು ಅವರ ರುಚಿಪ್ರಜ್ಞೆ ಮತ್ತು ವಿಮರ್ಶನಪ್ರಜ್ಞೆಯನ್ನೂ ಒಳಗೊಂಡಿರುವುದು ಗಮನಿಸುವಂತಿದೆ. ಈ ದೃಷ್ಟಿಯಿಂದಲೂ ಈ ಎರಡು ಸಂಚಯಗ್ರಂಥಗಳಿಗೆ ಮಹತ್ವದ ಸ್ಥಾನವೇ ಇದೆ.

ಇದನ್ನೆಲ್ಲ ಹಿನ್ನೆಲೆಯಲ್ಲಿಟ್ಟುಕೊಂಡು ಕನ್ನಡ ಸಾಹಿತ್ಯ ಪರಿಷತ್ತು ಹೊಸಗನ್ನಡ ಕವಿತೆಯ ಸಮಗ್ರ ರೂಪವನ್ನು ಪ್ರಕಟಿಸುವ ದಿಕ್ಕಿನಲ್ಲಿ ಮುಂದಾಗಬೇಕು. ನಾಯಕರು ಇನ್ನೂ ಕಾವ್ಯದ ಬಗ್ಗೆ ಉತ್ಸಾಹ ಉಳ್ಳವರಾಗಿರುವ ಕಾರಣ, ಅವರಿಗೇ ಈ ಕಾರ್ಯವನ್ನು ಒಪ್ಪಿಸುವ ಅವಕಾಶವೂ ಪರಿಷತ್ತಿಗಿದೆ. ಇಂಥ ಯೋಜನೆಯೊಂದನ್ನು ಪರಿಷತ್ತು ಕೈಗೆತ್ತಿಕೊಳ್ಳುವುದು ಸಾಧ್ಯವಾದರೆ ಅದು ಕಾವ್ಯಪ್ರಿಯರಿಗೆ ದೊಡ್ಡ ಪ್ರಯೋಜವಾಗುತ್ತದೆ.

(13.6.2013ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಿತ)

‍ಲೇಖಕರು avadhi

March 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. mallikarjuna kalamarahalli

    tamma aashayadante ee eraduu moulika krutigalu .maru mudranavagabeku. UTTAMA SALAHE.

    ಪ್ರತಿಕ್ರಿಯೆ
  2. ಅಳಗುಂಡಿ ಅಂದಾನಯ್ಯ

    ಕನ್ನಡ ಕಾವ್ಯ ನಡೆದುಬಂದ ದಾರಿಯಲ್ಲಿ; ಅನೇಕ ಉತ್ಕೃಷ್ಟ ಕೃತಿಗಳು ಆಸಕ್ತರಿಗೆ ಗೋಚರಿಸಬಹುದು.ಆದರೆ,ಈ ಎರಡೂ ಕೃತಿಗಳು ಉಂಟುಮಾಡಿದ ಸಂಚಲನೆ ಮಾತ್ರ ಅನುಭವ ವೇದ್ಯ! ಇದಕ್ಕೆ,ಲಂಕೇಶರ ಅವರನ್ನು ಮತ್ತು ಜಿ ಎಚ್ ನಾಯಕ ಅವರನ್ನು ಅಭಿನಂದಿಸಲೇ ಬೇಕು.

    ಪ್ರತಿಕ್ರಿಯೆ
  3. ಅಳಗುಂಡಿ ಅಂದಾನಯ್ಯ

    ಖಂಡಿತಾ.ಹೊಸ ಕಾಲದ ಕವಿಗಳಿಗೆ ಮತ್ತು ಕಾವ್ಯಾಸಕ್ತರಿಗೆ, ಇಂಥ ವಿಶೇಷ ಕಾವ್ಯ ಶಕ್ತಿ ನೆಲೆಗಳು; ನವ ಚೈತನ್ಯ ತುಂಬುತ್ತವೆ.

    ಪ್ರತಿಕ್ರಿಯೆ

Trackbacks/Pingbacks

  1. ಜಿ ಪಿ ಕಾಲಂ ಗೆ ಹೇಮಾ ಹೆಬ್ಬಗೋಡಿ ಪ್ರತಿಕ್ರಿಯೆ « ಅವಧಿ / avadhi - [...] ಪಿ ಬಸವರಾಜು ಅವರ ಬರಹಕ್ಕೆ (ಬರಹಕ್ಕೆ ಇಲ್ಲಿ ಕ್ಲಿಕ್ಕಿಸಿ) ಹೇಮಾ ಹೆಬ್ಬಗೋಡಿ ಅವರು ಬರೆದಿರುವ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: