ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಖಾ ರಂಗನಾಥ ಕವಿತೆ – ಋತು…

ರೇಖಾ ರಂಗನಾಥ 

ನೋಡು! ನಾವಿಬ್ಬರೇ
ಹೆಜ್ಜೆಯೂರಿದ ಹಾದಿ
ಹಗಲು ಸುರಿ ಸುರಿದು
ನೀಲಿ ಅಂಗಳದ ತುಂಬೆಲ್ಲ
ಮಗ್ಗಲು ಮಗ್ಗಲು ಬೆಳೆದ
ಗಿಡ ಗಂಟಿ ಹೀಚು ಹೂವು ಹಣ್ಣು
ತೂಗಿ ತೊನೆವ ರಂಬೆ ಕೊಂಬೆ
ಉಸಿರಾದ ಹಸಿರಿತ್ತು!

ತಿಮಿರು ಸೀಳದ ಹಗಲು
ಜಿನಗುವ ಮಳೆ ಹನಿ
ನಡು ಹಾದಿಯಲಿ ಅಡ್ಡಲಾಗಿ
ಹಾದು ಹೋದ ಕಾಡು ಮೃಗಗಳ
ಪಾದ ಗುರುತುಗಳು
ಹೆಜ್ಜೆ ಹಾಕದೆ ದಣಿವಾರಿಸಬೇಕಿತ್ತೇನೋ?

ನೋಡು! ಹೇಗೆ!?
ಅಬ್ಬರಿಸಿದ ಸಿಡಿಲಿಗೆ
ನೀರೆರದ ವೃಕ್ಷವೊಂದು
ಬೆಂಕಿ ತಗುಲಿಸಿಕೊಂಡಿದೆ
ನೆಲ ಕಚ್ಚಿದ ಹೂವು ಹಣ್ಣು ಗೊಂಚಲು
ಮರಣ ಶಯನಕೆ
ಪಾದದಡಿ ಶರಣಾಗಿವೆ

ತೂರಿದ ಸುಂಟರಗಾಳಿ ಕೊಚ್ಚಿ ಹೋಯ್ದ ಮಳೆ
ಕದಡಿದ ಕೆಂಪು ನೀರಲಿ
ಕೆರೆ ಕಟ್ಟೆಯೊಂದು ಆರ್ಭಟಿಸುತಿದೆ
ಆ ಹಾದಿ ಆ ಗುಡಿಸಲು
ದೇವನ ಜಗುಲಿ ತಲುಪಿದ
ಬೊಗಸೆ ಹೂವು ಹಣ್ಣು
ತಳದ ಕೆರೆಯಲಿ ಕಳೇಬರ ಗೀಚುತಿವೆ.

ಈಗ ದಂಡೆಯ ಮೇಲೊಬ್ಬ ಕಾವಲುಗಾರನಿದ್ದಾನೆ
ಬಂಡೆ ಕೊರಕಲಿನ ಗೀಚು ಗಾಯಗಳಿರದಂತೆ
ಕೆಂಪು ನೀರು ತಿಳಿಗೊಂಡಿದೆ
ಕೊನರದ ಕೊರಡಿನಾಚೆಗೂ
ಚಿಗುರೊಡೆದು ಹಸಿರು
ಕೂತ ಹಕ್ಕಿ ಪಿಕ್ಕಿಗಳು
ದಣಿದ ಹಾದಿಕೋರರಿಗೆ ಜೀವರಸವಾಗಿ
ಕೆರೆ ತನ್ನೆಡೆ ಬಂದವರ ತಣಿಸುತಿದೆ
ಇದೆ ನೋಡು ಋತುವಿನಾಟ!

‍ಲೇಖಕರು Admin

21 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading