ಡಾ ಕೆ ಎಸ್ ಚೈತ್ರಾ ಅಂಕಣ – ಕ್ಯಾರೆಟ್ ಬೆರಳುಗಳಿಂದ ಮೇಣದ ಕೆತ್ತನೆ !

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

9

ದಂತವೈದ್ಯಕೀಯ ಎನ್ನುವುದು ಕಲೆ ಮತ್ತು ವಿಜ್ಞಾನ ಎಂಬುದನ್ನು ಮೊದಲನೇ ದಿನದಿಂದಲೇ ಎಲ್ಲರೂ ಹೇಳುತ್ತಲೇ ಬಂದಿದ್ದರು. ವಿಜ್ಞಾನ ಏಕೆಂದರೆ ಅದರಲ್ಲಿ ವೈಜ್ಞಾನಿಕವಾದ ಆಧಾರಗಳನ್ನು ಆಧರಿಸಿ ಚಿಕಿತ್ಸೆ ಮಾತ್ರವಲ್ಲ, ಪ್ರತೀ ಹಂತವನ್ನೂ ಯೋಜಿಸಲಾಗುತ್ತದೆ (ಬಳಸುವ ವಸ್ತು, ಸಮಸ್ಯೆಗೆ ಕಾರಣ, ರೋಗ ಪತ್ತೆ ಹಚ್ಚುವ ವಿಧಾನ, ವಿವಿಧ ರೀತಿ ಚಿಕಿತ್ಸೆಗಳು ಇವೆಲ್ಲವೂ ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿದೆ ಮತ್ತು ವಿವರಣೆ ಹೊಂದಿದೆ.) ಕಲೆ, ಏಕೆಂದರೆ ಇದರಲ್ಲಿ ವ್ಯಕ್ತಿಯ ಕೌಶಲ್ಯ- ಕಲ್ಪನೆಯನ್ನು ಬಳಸಿ ಕಲಾತ್ಮಕವಾದುದನ್ನು ಸೃಷ್ಟಿಸಲಾಗುತ್ತದೆ.

ಹಾಗಾಗಿ ದಂತವೈದ್ಯರಿಗೆ ಕೌಶಲ್ಯ-ನೈಪುಣ್ಯತೆಯೂ ಮುಖ್ಯ. ಇದನ್ನು ರೂಢಿಸಿಕೊಳ್ಳಲು ಆಸಕ್ತಿ, ಶ್ರದ್ಧೆ ಮತ್ತು ಸಾಧನೆ ಅಗತ್ಯ. ಈ ಸಾಧನೆಯ ಅಂಗವಾಗಿ ನಾವು ಕಲಿಯಬೇಕಾದದ್ದು ವ್ಯಾಕ್ಸ್ ಕಾರ್ವಿಂಗ್( ಮೇಣದ ಕೆತ್ತನೆ). ಆದರೆ ಬಹಳಷ್ಟು ವಿದ್ಯಾರ್ಥಿಗಳ ಪಾಲಿಗೆ ಈ ಸಾಧನೆ ದೊಡ್ಡ ರೋದನೆ!!

ಈ ಮೇಣದ ಕೆತ್ತನೆ ಮಾಡುವ ಮುಖ್ಯ ಉದ್ದೇಶಗಳು ಹೀಗಿವೆ

• ಹಲ್ಲಿನ ವಿವಿಧ ಭಾಗ, ಸಣ್ಣ ರಚನೆಗಳ ಬಗ್ಗೆ ಮೇಣದಲ್ಲಿ ಕೊರೆದು ಅಂದರೆ ಸ್ವತಃ ಮಾಡಿ ತಿಳಿಯುವುದು
• ಹಲ್ಲನ್ನು ಮೂರು ಆಯಾಮದಿಂದ ನೋಡಲು ಕಲಿಯುವುದು (ಥ್ರೀ ಡೈಮೆನ್ಶನಲ್)
• ಉಪಕರಣಗಳನ್ನು ಹಿಡಿದು ಸೂಕ್ಷö್ಮ ಕೆತ್ತನೆ ಮಾಡುವುದರಿಂದ ಬೆರಳುಗಳ ಹಿಡಿತ, ನಿಖರವಾದ ಜಾಗ, ಕೈ ದೃಢತೆ ಹೀಗೆ ಮುಂದೆ ರೋಗಿಗಳ ಬಾಯಿಯಲ್ಲಿ ಕೆಲಸ ಮಾಡಲು ತರಬೇತಿ
• ಎಲ್ಲಕ್ಕಿಂತ ಮುಖ್ಯವಾಗಿ ಸಹನಾಶಕ್ತಿ ಹೆಚ್ಚಳ !!

ಬ್ರೆಡ್ ಪೀಸು
ಈ ಮೇಣದ ಕೆತ್ತನೆ ಕೆಲಸಕ್ಕೆ ಹೆಚ್ಚೇನೂ ಸಾಮಗ್ರಿ ಬೇಕಿರಲಿಲ್ಲ. ವ್ಯಾಕ್ಸ್ ಬ್ಲಾಕ್ (ಮೇಣದ ಆಯತಾಕಾರದ ತುಂಡು) , ಸ್ಕೇಲ್, ಕೆತ್ತಲು ಲೆಕ್ರಾನ್ ಕಾರ್ವರ್ ಮತ್ತು ಪಾಲಿಶ್ ಮಾಡಲು ಮಸ್ಲಿನ್ ಬಟ್ಟೆ ಇಷ್ಟೇ. ಪ್ರತಿ ಹಲ್ಲಿಗೂ ಇಷ್ಟಿಷ್ಟೇ ಎನ್ನುವ ನಿರ್ದಿಷ್ಟ ಅಳತೆಯಲ್ಲಿ ಮೇಣದ ತುಂಡನ್ನು ಕೆತ್ತಬೇಕಿತ್ತು. ಮೊದಲ ಬಾರಿ ಸಕಲ ಸಿದ್ಧತೆಯೊಂದಿಗೆ ಕೆತ್ತನೆಗೆ ಕುಳಿತಾಗ ಜಕಣ-ಡಂಕಣರ ಸ್ಟೈಲು, ಮುಖದ ತುಂಬಾ ಸ್ಮೈಲು ! ಮೇಣದ ತುಂಡಿನ ಮೇಲೆ ಸ್ಕೇಲಿನಿಂದ ಮಧ್ಯದಲ್ಲಿ ಗೆರೆ ಹಾಕಿ ಅಳತೆಗೆ ಸರಿಯಾಗಿ ಕೆತ್ತಲು ಆರಂಭಿಸಿದೆವು. ಕೆತ್ತುವುದು ಹಾಗಿರಲಿ , ಕಾರ್ವರ್ ಹಿಡಿಯುವುದೇ ಕಷ್ಟವಾಗಿತ್ತು. ಪದೇ ಪದೇ ಉಪಕರಣ ಕೈಯ್ಯಿಂದ ಜಾರುತ್ತಿತ್ತು, ಮೇಣದ ತುಂಡು ಕೆಳಗೆ ಬೀಳುತ್ತಿತ್ತು. ಹಲ್ಲಿನಲ್ಲಿ ಮುಖ್ಯವಾಗಿ ಎರಡು ಭಾಗಗಳು. ಮುಕುಟ ಮತ್ತು ಬೇರು.

ನಾವು ಮೊದಲು ಹಲ್ಲಿನ ಮುಕುಟ ಭಾಗ ಅಂದರೆ ಬಾಯಿಯಲ್ಲಿ ಕಾಣುವ ಭಾಗವನ್ನು ಕೆತ್ತಿ ನಂತರ ಬೇರನ್ನು ಕೆತ್ತಬೇಕಿತ್ತು. ಚೌಕಾಕಾರವಾಗಿ ಕಾಣುವ ಬಾಚಿ ಹಲ್ಲಿನಿಂದ ಕೆತ್ತನೆ ಆರಂಭ. ಸರಿಯಾಗಿ ಕಾರ್ವರ್ ಹಿಡಿಯಲೇ ಕೆಲವು ದಿನಗಳ ಸಮಯ ಹಿಡಿದಿತ್ತು. ಅಂತೂ ಹೇಗೋ ಮಾಡಿ ಮೇಣದ ತುಂಡಿನಲ್ಲಿ ನಾಲ್ಕು ಮೂಲೆ ಕೆತ್ತಿ ಹಲ್ಲಿನ ಆಕಾರ ಬಂದಿದೆ ಎಂದು ತೋರಿಸಲು ಒಯ್ದರೆ ಅಲ್ಲಿದ್ದ ಮೇಡಂ ಇದೇನು ಬ್ರೆಡ್ ಪೀಸು ಎಂದದ್ದೇ ಪಕ್ಕದಲ್ಲಿದ್ದ ಕಸದಬುಟ್ಟಿಗೆ ನನ್ನ ಕಲಾಕೃತಿ ರವಾನಿಸಿದ್ದರು.

ಅಯ್ಯೋ ಗಂಟೆಗಟ್ಟಲೇ ಬೆನ್ನು ಬಗ್ಗಿಸಿ ಕುಳಿತು ಈ ರೀತಿ ಕೆತ್ತನೆ ಮಾಡಿದ್ದು ಹೀಗಾಯಿತಲ್ಲಾ ಎಂದು ದುಃಖದಿಂದ ಬಗ್ಗಿ ನೋಡಿದರೆ ಕಸದ ಬುಟ್ಟಿ ತುಂಬಾ ಇದೇ ರೀತಿ ಅರೆ-ಬರೆ ಶಿಲ್ಪಗಳು ! ಹೊಸದೊಂದು ಮೇಣದ ತುಂಡು ಹಿಡಿದು ಮತ್ತೆ ಕೆತ್ತಿದ್ದೇ ಕೆತ್ತಿದ್ದು… ಸಾಕಷ್ಟು ಸಮಯದ ನಂತರ ಸುಮಾರಾಗಿ ಹಲ್ಲನ್ನು ಹೋಲುವ ಪ್ರತಿಕೃತಿ ತಯಾರಾಗಿ ಒಪ್ಪಿಗೆಯೂ ದೊರೆತು ಕಡೆಯ ಹಂತವಾಗಿ ಪಾಲಿಶ್ ಮಾಡುವಾಗ ಏನೋ ಯೋಚಿಸುತ್ತಾ ಜೋರಾಗಿ ಉಜ್ಜಿದ್ದೇ ತಡ ಹಲ್ಲಿನ ಎರಡೂ ಭಾಗ ಭಿನ್ನವಾಗಿತ್ತು ! ಅಳು ಬರುವುದೊಂದೇ ಬಾಕಿ. ಆದರೆ ಕಣ್ಣೀರೆಲ್ಲಾ ಸುರಿಸಿದರೂ ವ್ಯರ್ಥವೇ. ನಗು, ಅಳು, ಸಿಟ್ಟು, ಬೇಸರ ಏನಿದ್ದರೂ ಸರಿಯಾದ ಅಳತೆಯಲ್ಲಿ ಹಲ್ಲಿನ ಪ್ರತಿಕೃತಿ ತೋರಿಸಿ ಸೈನ್ ಪಡೆದರಷ್ಟೇ ಮುಂದಿನ ಕಲಿಕೆ. ಛೇ, ಇನ್ನಷ್ಟು ಗಮನ ಕೊಡಬೇಕಿತ್ತು ಎಂದು ನನ್ನನ್ನೇ ನಾನು ಬೈದುಕೊಂಡು ಮತ್ತೆ ಕೆತ್ತನೆಗೆ ಕುಳಿತಾಗ ನೆನಪಾದವರು ಆ ಅಜ್ಜ-ಮೊಮ್ಮಗ!

ಗ್ಯಾನ- ಜ್ಞಾನ!
ಬೇಲೂರು-ಹಳೇಬೀಡಿಗೆ ಕುಟುಂಬದವರೆಲ್ಲಾ ಪ್ರವಾಸ ಹೋಗಿದ್ದ ಸಂದರ್ಭ. ಹೊಯ್ಸಳರ ಕಾಲದ ಅಪರೂಪದ ದೇಗುಲದ ಅದ್ಭುತ ಶಿಲ್ಪಕಲೆಯನ್ನು ಮೆಚ್ಚಿ ಹೊರಗೆ ಬರುವಾಗ ಕಂಡಿದ್ದು ರಸ್ತೆಯ ಬದಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಕಲ್ಲಿನಲ್ಲಿ ಕೆತ್ತಿದ ಆನೆಗಳು ಮತ್ತು ಶಿವಲಿಂಗ. ಅದನ್ನು ಖರೀದಿಸುತ್ತಿರುವಾಗಲೇ ಅಲ್ಲೇ ಸ್ವಲ್ಪ ದೂರದಲ್ಲಿ ಹರೆಯದ ಹುಡುಗನೊಬ್ಬ ಉಳಿ ಹಿಡಿದು ಏನನ್ನೋ ಕೆತ್ತುತ್ತಿದ್ದ. ವಯಸ್ಸಾದ ಅಜ್ಜ ಅದರ ಮೇಲ್ವಿಚಾರಣೆ ನಡೆಸಿದ್ದ . ಬಹುಶಃ ಅಜ್ಜ-ಮೊಮ್ಮಗ ಇರಬೇಕು; ಇಬ್ಬರೂ ತಮ್ಮ ಲೋಕದಲ್ಲೇ ತಲ್ಲೀನರಾಗಿದ್ದರು.

ಕುತೂಹಲದಿಂದ ನಾವೂ ಅದನ್ನೇ ನೋಡುತ್ತಾ ನಿಂತೆವು. ಬಿಸಿಲಿನ ಝಳ ಹೆಚ್ಚಿತ್ತು. ಇಬ್ಬರ ಮುಖದಿಂದ ಬೆವರು ಸುರಿಯುತ್ತಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ಹೆಂಗಸು (ತಾಯಿ ಇರಬಹುದು) ಲೋಟದಲ್ಲಿ ಏನನ್ನೋ ಇಬ್ಬರಿಗೂ ಕೊಡಲು ತಂದಳು. ಇವರು ಗಮನಿಸಲಿಲ್ಲ. ಒಂದೆರಡು ನಿಮಿಷ ಹಾಗೇ ನಿಂತು ನಂತರ ಜೋರಾಗಿ ಕೆಮ್ಮಿದಳು ಅಷ್ಟೇ! ಬೆಚ್ಚಿಬಿದ್ದ ಹುಡುಗ ತಿರುಗಿದ, ಉಳಿಯ ತುದಿ ಎಲ್ಲೋ ತಾಗಿತು. ಮಾಡುತ್ತಿದ್ದ ಆನೆಯ ಸೊಂಡಿಲು ತುಂಡಾಯಿತು. ಅಜ್ಜ ‘ ಏನವ್ವಾ ನೀನು, ಅವ್ನ ಕೆಲ್ಸಾ ಮುಗಿಯೋಗಂಟ ಸುಮ್ಕೆ ಇರಬಾರದಿತ್ತಾ? ಈಗ ಆನೆ ಸೊಂಡ್ಲು ಮುರೀತು ಹೆಂಗೋ ಆಯ್ತದೆ. ಅದೇ ಅವ್ನ ಕೈಮ್ಯಾಲೆ ಬಿದ್ದಿದ್ರೆ ಯಾನಾ ಮಾಡೋದು? ಈ ಕೆಲ್ಸ ಮಾಡಬೇಕಾದ್ರೆ ಮಳೆ-ಛಳಿ-ಬಿಸ್ಲು-ಗದ್ಲಾ ಎಲ್ಲಾ ಬಿಟ್ಟಾಕಿ ಮೈತುಂಬಾ ಗ್ಯಾನಾ ಮಡಗ್ಬೇಕವ್ವಾ ! ‘ ಎಂದು ಆ ಆನೆಯ ಮೂರ್ತಿ ಪಕ್ಕಕ್ಕೆ ಬಿಸಾಡಿದ್ದ. ನನಗೆ ಇವನೆಂಥ ಅಜ್ಜ, ಮೊಮ್ಮಗನಿಗೆ ಬಿಸಿಲಲ್ಲಿ ನೀರೋ-ಮಜ್ಜಿಗೆಯೋ ಕುಡಿಯಲೂ ಬಿಡದ ಕ್ರೂರಿ ಅನ್ನಿಸಿ ಸಿಟ್ಟೇ ಬಂದಿತ್ತು ವಿನಃ ಅವನ ಮಾತಲ್ಲಿ ಅಡಗಿದ್ದ ಏಕಾಗ್ರತೆಯ ಮಹತ್ವ ಹೊಳೆದಿರಲಿಲ್ಲ. ಈಗ ಈ ಮೆತ್ತಗಿನ ಮೇಣವನ್ನು ಕೆತ್ತುವಾಗ ಅವನ ಗ್ಯಾನಾ-ಧ್ಯಾನ ನನಗೆ ಜ್ಞಾನ ಮೂಡಿಸಿತ್ತು!

ಬೀನ್ಸ್ ಬೆರಳು
ಇದೆಲ್ಲಾ ಸರಿ; ಆಶ್ಚರ್ಯವೆಂದರೆ ನಮ್ಮಲ್ಲಿ ವಿಶೇಷವಾಗಿ ಚೀನಿ ಮೂಲದ ವಿದ್ಯಾರ್ಥಿಗಳು ಈ ಕೆತ್ತನೆಯನ್ನು ಸುಲಭವಾಗಿ ಮತ್ತು ಚೆನ್ನಾಗಿ ಮಾಡುತ್ತಿದ್ದರು. ಇದರ ಬಗ್ಗೆ ಚರ್ಚಿಸುತ್ತಿದ್ದಾಗ ಹಸ್ತಜ್ಞಾನ ಓದಿ ತಿಳಿದುಕೊಂಡ ಬುದ್ಧಿವಂತೆ ಗೆಳತಿ ಅದಕ್ಕೆ ಕಾರಣ ಹೇಳಿದಳು. ಚೀನಿಯರ ಬೆರಳು ಮತ್ತು ಉಗುರು ಉದ್ದವಾಗಿರುತ್ತದೆ. ಹೀಗಿದ್ದವರಿಗೆ ಕರಕುಶಲ ಕಲೆಗಳಲ್ಲಿ ನೈಪುಣ್ಯ ಹೆಚ್ಚು. ಇವರು ಸಂಗೀತ, ನೃತ್ಯ, ವಾದ್ಯಗಳು, ಕವಿತೆ, ಈ ರೀತಿ ಕೆತ್ತನೆ ಇವುಗಳಲ್ಲಿ ಸಹಜವಾಗಿಯೇ ನಿಪುಣರಾಗಿರುತ್ತಾರೆ. ನನಗೆ ಇದನ್ನು ಕೇಳಿ ಎಲ್ಲಿಲ್ಲದ ಸಿಟ್ಟು ಬಂದಿತ್ತು.

ನನ್ನ ಜತೆಗಿದ್ದ ಚೀನಿ ವಿದ್ಯಾರ್ಥಿಗಳ ಬೆರಳು-ಉಗುರು ನೀಳವಾಗಿ ಬೀನ್ಸ್ ಥರ ಇದ್ದದ್ದು ಮತ್ತು ಅವರು ಸುಲಭವಾಗಿ ಈ ಕೆತ್ತನೆಯನ್ನು ಮಾಡುತ್ತಿದ್ದದ್ದು ನಿಜವೇ. ಆದರೆ ಭರತನಾಟ್ಯ ಕಲಾವಿದೆಯಾಗಿದ್ದ, ಸಂಗೀತ-ಸಾಹಿತ್ಯದಲ್ಲಿ ಆಸಕ್ತಿ -ಪರಿಶ್ರಮ ಹೊಂದಿದ್ದ ನನ್ನದು ಸಣ್ಣ ಕ್ಯಾರೆಟ್‌ನಂಥಹ ಬೆರಳು, ಚೌಕಾಕಾರದ ಪುಟ್ಟ ಉಗುರು ! ಸರಿ, ಈ ಬೆರಳು-ಉಗುರುಗಳ ಆಕಾರವೇ ನನಗೆ ಕೆತ್ತನೆ ಕಷ್ಟವಾಗುವುದಕ್ಕೆ ಕಾರಣ ಎಂದು ಅಸಹನೆ ಮೂಡಿತ್ತು. ಅದಕ್ಕೂ ಮುನ್ನ ಉಗುರಿಗೆ ನೇಲ್ ಪಾಲಿಶ್ ಹಾಕಲು ಜಾಗವೇ ಇಲ್ಲ ಎಂಬ ಅಸಮಾಧಾನವೂ ಒಳಗೊಳಗೇ ಇತ್ತು.

ಮುಂದಿನ ಸಲ ಹಲ್ಲಿನ ಕೆತ್ತನೆ ಸರಿಯಿಲ್ಲ ಎಂದಾಗ ಮೇಡಂ ಬಳಿ ನನ್ನ ಬೆರಳು- ಉಗುರು ತೋರಿಸಿ ನನ್ನ ತಪ್ಪಿಲ್ಲ ಎಂದು ಅತ್ತರೆ ರಿಯಾಯಿತಿ ಸಿಗಬಹುದೇ ಎಂಬ ಆಲೋಚನೆಯೂ ಬಂದಿತ್ತು. ತಪ್ಪು ಕೆತ್ತನೆಯ ತುಂಡನ್ನು ನಿರ್ದಾಕ್ಷಿಣ್ಯವಾಗಿ ಬಿಸಾಡುತ್ತಿದ್ದ ಮೇಡಂ ನನ್ನನ್ನೂ ಎತ್ತಿ ಬಿಸಾಡಿದರೆ ಎಂಬ ಹೆದರಿಕೆಯಿಂದಾಗಿ ಸುಮ್ಮನಿದ್ದೆ. ಆದರೂ ಒಮ್ಮೆ ಹೀಗೆ ಅವರೊಡನೆ ‘ಬೆರಳು ನೀಳವಾಗಿದ್ದರೆ ಕೆತ್ತನೆ ಸುಲಭವೇ ಮೇಡಂ?’ ಎಂದು ಮುಗ್ಧತೆಯ ಸೋಗು ಹಾಕಿ ಪ್ರಶ್ನಿಸಿದ್ದೆ. ಅವರು ನಗುತ್ತಲೇ ‘ ಬೆರಳು ಹೇಗಿದ್ದರೂ ಪರವಾಗಿಲ್ಲ, ಒಂದೆರಡು ಕಡಿಮೆ ಇದ್ದರೂ ಓಕೆ. ಎಷ್ಟು ಅಭ್ಯಾಸ ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ಕೆತ್ತನೆಯ ಕೌಶಲ್ಯ ನಿರ್ಧಾರವಾಗುತ್ತದೆ. ನಾನೀಗ ರಾತ್ರಿ ನಿದ್ದೆಯಲ್ಲೂ ಯಾವುದೇ ಹಲ್ಲಿನ ಪ್ರತಿಕೃತಿ ಕೆತ್ತಬಲ್ಲೆ’ ಎನ್ನುತ್ತಾ ತಮ್ಮ ಕೈ ತೋರಿಸಿದ್ದರು.

ಅರೆ, ನನ್ನಂಥದ್ದೇ ಬೆರಳು, ಉಗುರು !! ಹೇಳುವುದೇನೂ ಉಳಿದಿರಲಿಲ್ಲ..ಅವರ ಮಾತು ಸ್ಪಷ್ಟವಾಗಿತ್ತು ಪ್ರಾಕ್ಟಿಸ್ ಮೇಕ್ಸ್ ಎ ಪರ್ಸನ್ ಪರ್ಫೆಕ್ಟ್ ! ಅಂದಿನಿ೦ದ ಬಿಡುವಿನ ವೇಳೆಯಲ್ಲೆಲ್ಲಾ ಅಲ್ಲಲ್ಲಿ ಕುಳಿತು ಕೆತ್ತನೆ ಆರಂಭ. ಒಬ್ಬರಿಗೊಬ್ಬರು ಕಲಿಸುವುದು, ಸುಲಭ ಉಪಾಯ ಕಲಿಯುವುದು ಹೀಗೆ ಒಂದೆರಡು ತಿಂಗಳಲ್ಲಿ ನಮಗೇ ಆಶ್ಚರ್ಯವಾಗುವಂತೆ ಕೈ ಪಳಗಿತ್ತು. ನನ್ನ ಬ್ರೆಡ್‌ಪೀಸು ಹಲ್ಲಿನ ಪ್ರತಿಕೃತಿಯಾಗಿ ಬದಲಾಗಿತ್ತು. ಹುಡುಗರಂತೂ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಹೂವು, ಹೃದಯಾಕಾರಗಳನ್ನು ಕೆತ್ತಿ ಕಂಡಕ೦ಡವರಿಗೆ ನೀಡತೊಡಗಿದ್ದರು! (ಹೌ ನೈಸ್, ವಾವ್ ಎಂಬ ಆಶ್ಚರ್ಯಸೂಚಕ ಉದ್ಗಾರ ಸೂಚಿಸುತ್ತಲೇ ಹುಡುಗಿಯರು ಅದನ್ನು ಕಸದ ಬುಟ್ಟಿಗೆ ಬಿಸಾಡುತ್ತಿದ್ದರು ಎನ್ನುವುದು ಬೇರೆ ವಿಷಯ).

ಇಷ್ಟೆಲ್ಲಾ ಇದ್ದರೂ ವಿದ್ಯಾರ್ಥಿಗಳು ಮತ್ತು ಬೋಧಕರಲ್ಲಿ ಈ ಮೇಣದ ಕೆತ್ತನೆಯಿಂದ ಪ್ರಯೋಜನ ಇದೆಯೇ; ಅದನ್ನು ಪಠ್ಯಕ್ರಮದಿಂದ ತೆಗೆದರೇ ಒಳ್ಳೆಯದು ಎಂಬ ಅಭಿಪ್ರಾಯವಿದೆ; ಮಾತ್ರವಲ್ಲ ಸಾಕಷ್ಟು ಚರ್ಚೆಯೂ ನಡೆದಿದೆ. ವೈಯಕ್ತಿಕವಾಗಿ ಹೇಳುವುದಾದರೆ ಇದನ್ನು ಪೂರ್ತಿ ಕೈಬಿಡದೇ, ಹಾಗೆಂದು ಅನಗತ್ಯ ಮಹತ್ವವನ್ನೂ ನೀಡದೇ ಕೈಚಳಕ ವೃದ್ಧಿಗೊಳಿಸಲು ಅಲ್ಪ ಸಮಯದ ಅಭ್ಯಾಸವನ್ನಾಗಿ ಇಡಬೇಕು ಎನಿಸುತ್ತದೆ. ನನಗಂತೂ ಈ ತರಗತಿಗಳು ಕಷ್ಟಪಟ್ಟರೆ ಕ್ಯಾರೆಟ್ ಬೆರಳುಗಳೂ ಸುಂದರ ಕೆತ್ತನೆ ಮಾಡಲು ಸಾಧ್ಯ ಎಂಬ ಅರಿವನ್ನು ಪ್ರಾಯೋಗಿಕವಾಗಿ ಮೂಡಿಸಿವೆ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

May 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: