ನನ್ನ ಅವ್ವನ ಹೆಮ್ಮೆ- ಎಮ್ಮೆ…

ಕರೀಗೌಡ ಸಿ ಎಸ್

ನನ್ನ ತಾಯಿಯ ಹೆಸರು ಜಯಮ್ಮ. ನಮ್ಮೂರಿನಲ್ಲಿ ಹಿರಿಯರು ಕರೆಯುವುದು ದೊಡ್ಡಿಜಯ್ಯ.. ಕಿರಿಯರು ಮತ್ತು ಸಮವಯಸ್ಕರು ದೊಡ್ಡಿಜಯಕ್ಕ ಎಂದು. ದೊಡ್ಡಿ ಎಂಬುದು ತವರೂರಿನ ಉಪಮೇಯ. ನನ್ನಪ್ಪ ಕರೆಯುವುದು ಮಾತ್ರ ದೊಡ್ಡಿ ಎಂದು. ಮನುಷ್ಯರಿಗೆ ಜೀವವಿಲ್ಲದ ಊರಿನ ಹೆಸರಿನ ಸಂಭೋದನೆ. ಪುರುಷಶಾಹಿ ಕುಟುಂಬಗಳ ಜವಾಬ್ದಾರಿ ಮನಸ್ಥಿತಿಯ ಪ್ರತೀಕ.

ಐವತ್ತು ವರ್ಷಗಳ ಹಿಂದೆ ನನ್ನೂರಿನಲ್ಲಿ ಚಾಲ್ತಿ ಇದ್ದ ಹೆಸರುಗಳೆಂದರೆ ಗಂಡಸರಿಗೆ ಸಿದ್ದ, ಭೈರ, ಕೆಂಪ, ಕರಿಯ, ಬಿಳಿಯ, ಕೆಂಚ, ದೊಡ್ಡೋನು, ಚಿಕ್ಕೋನು, ಬೋರ ಇತ್ಯಾದಿ. ಭೈರವನ ಒಕ್ಕಲಾದ್ದರಿಂದ ಸಿದ್ದ ಮತ್ತು ಭೈರ ಹೆಚ್ಚು. ಹೆಂಗಸರ ಹೆಸರುಗಳೆಂದರೆ ಬೋರಮ್ಮ, ಕರಿಯಮ್ಮ, ಕೆಂಚಮ್ಮ, ಜಯಮ್ಮ, ಕಾಳಮ್ಮ ಎಂದು. ಬಹುತೇಕ ಎಲ್ಲರಿಗೂ ಅಮ್ಮ ಎಂಬ ಜೋಡಣೆ. ತುಂಬಾ ಆಧುನಿಕವಾದ ಹೆಸರುಗಳಿಲ್ಲ. ಉಭಯ ಲಿಂಗದ ಹೆಸರುಗಳಲ್ಲಿ ಬಹುವಚನದ ಸಂಭೋದನೆ ಇಲ್ಲಾ. ನನ್ನೂರಿಗೂ ಮತ್ತು ನನ್ನ ತಾಯಿಯ ತವರೂರು ದೊಡ್ಡಿಗೆ ಎರಡು ಕಿ.ಮೀ ದೂರ ಮಾತ್ರ.

ಐವತ್ತು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಮದುವೆ ಮತ್ತು ಇತರೆ ಸಂಬಂಧದ ಪರಿಧಿ ಹತ್ತು ಕಿ.ಮೀ ಮಾತ್ರ ಇತ್ತು. ಹೆಚ್ಚೆಂದರೆ ಆಕಸ್ಮಾತ್ ವಿದ್ಯಾವಂತರು ಮತ್ತು ಊರು ಬಿಟ್ಟು ಬೆಂಗಳೂರು ಸೇರಿದ್ದ ಪುರುಷರ ಜೊತೆ ಮದುವೆಯಾದ ಪ್ರಕರಣಗಳು ಮಾತ್ರ. ನಮ್ಮ ಗ್ರಾಮದಲ್ಲಿ ಒಂದು ಕುಟುಂಬ ಮಾತ್ರ ಹತ್ತು ಕಿ.ಮೀ ರೇಡಿಯಸ್ ಹೊರಗೆ ಸಂಬಂಧ ಹೊಂದಿತ್ತು. ಉಳಿದಂತೆ ಎಲ್ಲಾ ಬಂಧು ಬಳಗದ ಊರು ಅಕ್ಕ ಪಕ್ಕದ ಹಳ್ಳಿಗಳು.

ನಮ್ಮೂರಿಗೆ ಅಕ್ಕಪಕ್ಕದ ಒಂದೇ ಹಳ್ಳಿಯಿಂದ ಬಂದವರ ಸಂಖ್ಯೆ ಐದಕ್ಕಿಂತ ಹೆಚ್ಚು. ಹಾಗಾಗಿ ಹೆಸರಿನ ಪೂರ್ವದಲ್ಲಿ ಊರಿನ ಹೆಸರು ಸೇರಿಸಿ ಕರೆಯುವುದು ವಾಡಿಕೆ. ಇನ್ನು ಕೆಲವರಿಗೆ ಅವಿಭಕ್ತ ಕುಟುಂಬದಲ್ಲಿ ಹೆಸರು ಕರೆಯುವ ಬದಲು ಊರಿನ ಹೆಸರಿನ ಜೊತೆ ಅಜ್ಜಿ, ಅವ್ವ, ಅಕ್ಕ ಎಂದು ಕರೆಯುತ್ತಿದ್ದು, ಸಾಮಾನ್ಯವಾಗಿತ್ತು. ತಗ್ಗಳ್ಳಿ ಅಜ್ಜಿ, ದೊಡ್ಡಿಜಯಮ್ಮ ಇತ್ಯಾದಿ. ನಮ್ಮೂರಿನಲ್ಲಿ ಜಯ ಎನ್ನುವರು ಮೂವರು ಗುರುತಿಸಲು ಸುಲಭವಾಗುವಂತೆ ಹೆಸರಿನ ಹಿಂದೆ ತವರೂರಿನ ಹೆಸರು ಜೋಡಣೆ ಗುರುತಿಸಲು ಸರಳ. ಹಾಗಾಗಿ ನಮ್ಮವ್ವನ ಹೆಸರಿನ ಜೊತೆಗೆ ದೊಡ್ಡಿ ಸೇರಿಕೊಂಡಿತು. ಅವರ ತಂದೆ ತಾಯಿಯವರು ಇಟ್ಟ ಹೆಸರು ಜಯಮ್ಮ.

ಮದುವೆಯಾದ ನಂತರ ನಮ್ಮೂರಿನವರು ಜಯಮ್ಮನಿಗೆ ದೊಡ್ಡಿಜಯಮ್ಮ ಎಂದು ಮರು ನಾಮಕರಣ ಮಾಡಿದರು. ವಿಶೇಷವೆಂದರೆ ತೊಂಭತ್ತರ ದಶಕದವರೆಗೆ ನನ್ನವ್ವನ ಹೆಸರಿನಲ್ಲಿ ಯಾವುದೇ ಸರ್ಕಾರಿ ದಾಖಲೆಗಳು ಇರಲಿಲ್ಲ. ಚುನಾವಣಾ ಆಯೋಗದ ಗುರುತಿನ ಚೀಟಿ ನನ್ನವ್ವನಿಗೆ ಒಂದು ರೀತಿಯ ಹೆಸರಿನ ದಾಖಲೆಗೆ ಮುದ್ರೆ ಒತ್ತಿತು. ನನ್ನವ್ವನದು ಬಾಲ್ಯ ವಿವಾಹ. ಐದು ಕಾಲು ಅಡಿಯ, ಗೋಧಿ ಮೈಬಣ್ಣದ ನೀಳಕಾಯದ ನನ್ನವ್ವ ಹಳ್ಳಿ ಸುಂದರಿ. ಇಂದಿಗೂ 75 ವರ್ಷ ದಾಟಿದರೂ ತಲೆಕೂದಲು ಕಿವಿ ಪಕ್ಕ ಕೆಲವು ಬಿಳಿ ಕೂದಲು ಹೊರತುಪಡಿಸಿದರೆ ಪೂರ್ತಿ ಕಪ್ಪು. ಮಂದಹಾಸವೆಂಬುದು ಆಕೆಯ ಸೌಂದರ್ಯ.

ಮುಖಕ್ಕೆ ವಾರಕ್ಕೊಮ್ಮೆ ಸ್ನಾನದ ದಿನ ಸೀಗೆಕಾಯಿ ಬಳಕೆ ಬಿಟ್ಟರೆ ಪ್ರತಿದಿನ ನೀರಿನಿಂದ ಮುಖ ತೊಳೆದಿದ್ದು ಅಷ್ಟೆ. ಆದರೂ ಮಾಸಿಲ್ಲ, ಆಕೆಯ ಮುಖದ ಸೌಂದರ್ಯ ಈಗ ಕೆಳಗಿನ ಎರಡು ಹಲ್ಲುಗಳು ಬಿದ್ದಿವೆ ಅಷ್ಟೆ. ಮದುವೆಯ ದಿನ ಅವರಣ್ಣ ಎತ್ತಿಕೊಂಡು ಒಡಾಡಿದ್ದರಂತೆ. ನಮ್ಮ ಅಜ್ಜಿ ಸತ್ತ ನಂತರ ನನ್ನಪ್ಪ ಮನೆಗೆ ಹಿರಿಯ ಮಗನೆಂದು ಪಕ್ಕದೂರಿನ ನನ್ನವ್ವನ ತಂದು ಮದುವೆ ಮಾಡಲಾಯಿತು. ಸೋ ಎಂದು ಸೋಬಾನೆ ಪದ ಆಡಿಸಿಕೊಂಡು ಬಂದ ದಾನದಿಂದ ಅಯ್ಯೋ ಶಿವನೇ ಎಂಬುದು ತಪ್ಪಿಲ್ಲ ಎಂಬುದು ಅವ್ವನ ಕೊರಗು. ಏಕೆಂದರೆ ಅವ್ವ ಬಾಲ್ಯ ವಿವಾಹ ಆಗಿ ಬಂದಾಗಿನಿಂದ ಕಷ್ಟವೆಂಬ ಬೆಂಕಿಯ ಕೊಂಡದಲ್ಲಿ ನಡೆದಿದ್ದೆ ಹೆಚ್ಚು ಯಂತ್ರದಂತೆ ಸತತ ಪರಿಶ್ರಮ ಆಕೆಯ ವೈಶಿಷ್ಟ್ಯ.

ಸುಮಾರು ಅರವತ್ತು ವರ್ಷಗಳ ಕಾಲ ಎತ್ತಿನ ಗಾಣದಂತೆ ಕೆಲಸ ಮಾಡಿದ್ದಾಳೆ. ನನಗೆ ಬುದ್ದಿ ಬಂದಾಗಿನಿಂದ ಇಂದಿನವರೆಗೆ ನನ್ನವ್ವ ಎಲ್ಲರಿಗಿಂತ ಮೊದಲೇ ಏಳುವಳು. ಎಲ್ಲರಿಗಿಂತ ಕೊನೆಯಲ್ಲಿ ಮಲಗುವಳು. ಈ ದಿನಚರಿ ಒಂದು ದಿನವು ತಪ್ಪಲ್ಲ. ನನ್ನವ್ವ ಒಂದು ದಿನವು ವಿಶ್ರಾಂತಿಗೆಂದು ಐದು ನಿಮಿಷ ವಿಶ್ರಮಿಸಿದ್ದು ನನಗೆ ನೆನಪಿಲ್ಲ. ಒಮ್ಮೆ ಮಾತ್ರ ಹುಷಾರಿಲ್ಲದ ಸಂದರ್ಭದಲ್ಲಿ ಆಸ್ಪತ್ರೆಯ ಬೆಡ್ ಮೇಲೆ ವಿಶ್ರಾಂತಿ ತೆಗೆದುಕೊಂಡಿದ್ದಷ್ಟೆ. ಅವ್ವನಿಗೆ ಮೊದಲು ಅಣ್ಣ ಹುಟ್ಟಿದ್ದ. ಎರಡು ವರ್ಷದ ಅಂತರದಲ್ಲಿ ಅಕ್ಕ ಮತ್ತು ನನ್ನ ಜನನ. ನನ್ನ ನಂತರ ಹುಟ್ಟಿದ ತಂಗಿ ಮಂಜುಳ 5 ವರ್ಷ ತೀರುವಷ್ಟರಲ್ಲಿ ಕಾಲವಾದಳು. ಸಂತಾನ ಹರಣ ಚಿಕಿತ್ಸೆ ಈಗಿನ ಕಾಲದಷ್ಟು ಜನಮನ್ನಣೆ ಗಳಿಸಿರಲಿಲ್ಲ.

ನಂತರ ತಂಗಿ ಮತ್ತು ತಮ್ಮ ಹುಟ್ಟಿದರು. ನನಗೆ ಅಣ್ಣ, ತಮ್ಮ, ತಂಗಿ ಎಲ್ಲರೊಂದಿಗೆ ಸಂಬಂಧ ಹಂಚಿಕೊಂಡ ಜೀವನ, 6 ಮಕ್ಕಳು ಹೆತ್ತ/ಹಡೆದ ಅವ್ವನಿಗೆ ಸುಸ್ತು ಎಂಬುದು ಅನ್ನಿಸಲೇ ಇಲ್ಲ. ಹಾಲು ಕುಡಿಯುವ ಮಕ್ಕಳಿಗೆ ಹಾಲು ಕುಡಿಸಿ ಮರಕ್ಕೆ ಸೀರೆಯಲ್ಲಿ ತೂಗು ಹಾಕಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. ಬೇರೆಯವರ ಹೊಲಗದ್ದೆಗಳಲ್ಲಿ ನಾಟಿ ಮಾಡುತ್ತಿದ್ದಳು. ಕಳೆ ಕೀಳುವ, ಕೊಯ್ಲು ಮಾಡಲು ನಿತ್ಯಕಾಯಕದಲ್ಲಿ ಕಾರ್ಯಯೋಗಿಯಂತೆ ಕೆಲಸ ಮಾಡಿದಳು. ನಮಗೆ ಬುದ್ದಿ ಕಂಡ ದಿನದಿಂದ ನೋಡಿದ್ದೇನೆ. ಬೆಳಿಗ್ಗೆ ಅಡಿಗೆ ಮಾಡಿ ಹೊಲದಲ್ಲಿ ಕೆಲಸ ಮಾಡುವ ಅಪ್ಪನಿಗೆ ಊಟದ ಜೊತೆಗೆ ಹೊಗೆಯುವ ಬಟ್ಟೆ ಇದ್ರೆ ತೆಗೆದುಕೊಂಡು ಎಮ್ಮೆ, ಕುರಿ/ಮೇಕೆಗಳನ್ನು ಹೊಡೆದುಕೊಂಡು ಹೊರಡುತ್ತಿದ್ದಳು.

ತಲೆ ಮೇಲೆ ಊಟದ ಮಂಕರಿ, ಕಂಕುಳಲ್ಲಿ ಬಟ್ಟೆಯ ಬುಟ್ಟಿ, ಕೈಯಲ್ಲಿ ಎಮ್ಮೆ/ಕುರಿ, ಮೇಕೆಯ ಹಗ್ಗ, ಹೊರಟರೆ ಒಂದು ರೀತಿ ಝಡ್ ಪ್ಲಸ್ ಸೆಕ್ಯೂರಿಟಿ ತರಹ, ರಕ್ಷಣೆಗೆ ಹಿಂದೆ ಒಂದು ನಾಯಿ. ಹೊಲದಲ್ಲಿ ಉಣಬಡಿಸಿ, ಅಪ್ಪನೊಡನೆ ಕೃಷಿ ಕೆಲಸ ಮಾಡಿ, ಬಟ್ಟೆ ಒಗೆದು ಒಣಗಿಸುತ್ತಿದ್ದಳು. ಎಮ್ಮೆ ಮೇಯಿಸಿಕೊಂಡು ಬರುವಾಗ ರಾತ್ರಿ ಮೇಯಲು ಹಸಿರು ಹುಲ್ಲಿನ ಪಿಂಡಿ ಜೊತೆ ಮನೆಗೆ ಬರುತ್ತಿದ್ದಳು. ಬರುವಾಗ ತಲೆಯ ಮೇಲೆ ಊಟದ ಮಂಕರಿ ಬದಲು ಹುಲ್ಲಿನ ಹೊರೆ, ಕಂಕುಳಲ್ಲಿ ಊಟದ ಮತ್ತು ಬಟ್ಟೆಯ ಮಂಕರಿ, ಹಿಂದೆ ಮುಂದೆ ಎಮ್ಮೆ ಮತ್ತು ಕುರಿ ಮೇಕೆಗಳ ಝಡ್ ಪ್ಲಸ್ ಸೆಕ್ಯೂರಿಟಿ.

ಎಮ್ಮೆ, ಕುರಿ, ಮೇಕೆಗಳನ್ನು ಬಿಟ್ಟರೆ ರಸ್ತೆ ಬದಿಯ ಬೆಳೆಗಳನ್ನು ತಿಂದು ಬಿಟ್ಟಾವ ಎಂಬ ಭಯ. ಒಮ್ಮೊಮ್ಮೆ ಎಮ್ಮೆ, ಕುರಿ/ಮೇಕೆಗಳು ಹಿಂದು ಮುಂದಾಗಿ ಹಗ್ಗ ಸೊಂಟ ಕಾಲಿಗೆ ಸಿಕ್ಕಿಸಿಕೊಂಡು ಬಿದ್ದು ಊಟವೆಲ್ಲ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗುವ ಸಂಭವ ಇರುತ್ತದೆ. ಆದರೆ ಅವ್ವ ಒಮ್ಮೆಯೂ ಊಟ ಚೆಲ್ಲಿಲ್ಲ. ಕೆಲಸದ ಮೇಲಿನ ಏಕಾಗ್ರತೆ ಅಂತಹದ್ದು. ನನ್ನವ್ವನಿಗೆ ಮರಗಳ ಮೇಲೆ ಬಹಳ ಪ್ರೀತಿ. ಆಕೆ ಮದುವೆಯಾಗಿ ಬಂದ ನಂತರ ನಮ್ಮ ಹೊಲದ ಬದುಗಳಲ್ಲಿ ಅನೇಕ ರೀತಿಯ ಮರಗಳನ್ನು ನೆಟ್ಟಳು. ಬೇಸಿಗೆ ಕಾಲದಲ್ಲಿ ದೂರದಿಂದ ಬಿಂದಿಗೆಯಲ್ಲಿ ನೀರು ತಂದು ನೀರುಣಿಸಿ ಮೊದಲ ಮೂರು ವರ್ಷ ಪೋಷಿಸಿದಳು.

ನನ್ನ ಪದವಿ ವ್ಯಾಸಂಗದ ವೆಚ್ಚ ಅವ್ವ ನೆಟ್ಟಿ ಬೆಳೆಸಿದ ಮರಗಳನ್ನು ಮಾರಿ ಬಂದ ಹಣದಿಂದ. ನಮ್ಮವ್ವನ ಹೆಮ್ಮೆ ಎಂದರೆ ಎಮ್ಮೆಗಳು. ಮನುಷ್ಯನಿಗಿಂತ ಹೆಚ್ಚಿನ ಒಡನಾಟ ಎಮ್ಮೆಗಳ ಜೊತೆಗೆ ಕಳೆದಿದ್ದಾಳೆ. ಎಮ್ಮೆ ಎಂದರೆ ಮೇಯಿಸುವುದು, ಮೈ ತೊಳೆಯುವುದು, ಹಾಲು ಕರೆಯುವುದು, ಮೊಸರು ಮಾಡುವುದು, ಬೆಣ್ಣೆ ತೆಗೆಯುವುದು, ಊರಿನ ಡೈರಿ ಬರುವ ಮುನ್ನ ಬೆಣ್ಣೆ ಮಾಡಿ ಮಾರುತ್ತಿದ್ದಳು. ಈಗ ಡೈರಿಗೆ ಹಾಲು ಹಾಕ್ತಾಳೆ. ಮನುಷ್ಯರಿಗಿಂತ ಮೂಕ ಪ್ರಾಣಿ ಎಮ್ಮೆಯ ಜೊತೆಗಿನ ಹೆಚ್ದಿಗೆ ಮೂಕ ಸಂವಾದ. ಎಮ್ಮೆ ಆಕೆಗೆ ಒಂದು ರೀತಿಯ ಇನ್ಪೂರೆನ್ಸ್ ಇದ್ದ ಹಾಗೆ.

ಪ್ರತಿ ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಕೈಗೆ ಕಾಸು ಸಿಗುತ್ತದೆ. ಮನೆಯ ವ್ಯವಹಾರ ಸಾಗುತ್ತದೆ. ಈಗ ವಯಸ್ಸು 75 ದಾಟಿದ್ದರು ಎಮ್ಮೆ ಮಾರಲು ಒಪ್ಪಳು. ಈಗ ಮೊದಲಿನಂತೆ ತಲೆ ಮೇಲೆಯ ಭಾರ, ಝಡ್ ಪ್ಲಸ್ ಸೆಕ್ಯೂರಿಟಿಗಳಿಲ್ಲ. ಪ್ರಸ್ತುತ ವೈಪ್ಲಸ್ ಸೆಕ್ಯೂರಿಟಿ. ಈಗ ಏನಿದ್ದರೂ ಮುಂದೆ ಎರಡು ಎಮ್ಮೆ ಮತ್ತು ಹಿಂದೆ ಒಂದು ನಾಯಿ ಮಾತ್ರ. ಮೂರು ವರ್ಷದಿಂಧ ಕುರಿ/ಮೇಕೆ ಸಾಕುತ್ತಿಲ್ಲ. ಎಮ್ಮೆಯೊಡನೆ ಎಷ್ಟು ಒಡನಾಟವೆಂದರೆ ಆ ಎಮ್ಮೆಗಳಿಗೆ ಆಕೆಯೇ ಹಾಲು ಕರೆಯಬೇಕು. ಬೇರೆಯವರು ಹಾಲು ಕರೆಯಲು ಹೋದರೆ ಒದೆಯುತ್ತವೆ.

ಹಾಗಾಗಿ ನಮ್ಮ ಅವ್ವ ಯಾವ ಊರಿಗೆ ಹೋದರು ಬೆಳಗ್ಗೆ ಹಾಲು ಕರೆದು ಸಂಜೆ ಹಾಲು ಕರೆಯುವ ಹೊತ್ತಿಗೆ ವಾಪಸ್ ಬಂದಿರಬೇಕು. ಮೇಲಾಗಿ ಅವ್ವನಿಗೆ ಪ್ರಪಂಚವೆಂದರೆ ಮನೆ, ಹೊಲ, ಎಮ್ಮೆ, ಕುರಿ, ಮೇಕೆಗಳಷ್ಟೆ. ಯಾವುದೇ ಊರಿಗೆ ಹೋಗಿ ಎರಡು ದಿನ ಉಳಿದ ಸಂದರ್ಭಗಳೇ ಇಲ್ಲ. ತವರು ಮನೆಗೆ ಹೋದ್ರು ಕೂಡ ಸಂಜೆಯೆ ವಾಪಸ್. ಹಾಲು, ಬೆಣ್ಣೆ ಮಾರುವ ಅವ್ವನ ಆರ್ಥಿಕತೆಗೆ ನೂರರ ಒಳಗಿನ ಎಣಿಕೆಗಷ್ಟೆ ಸೀಮಿತ, ನೂರರ ನಂತರ ಲೆಕ್ಕವು ಗೊತ್ತಿಲ್ಲ. ನೂರಕ್ಕಿಂತ ಹೆಚ್ಚಿನ ನೋಟುಗಳು ಗೊತ್ತಿಲ್ಲ. ಬಂದ ಹಣವನ್ನೆಲ್ಲಾ ಅಪ್ಪನ ಕಿಸೆಗೆ ತುಂಬಿಸಿದರೆ ಅಲ್ಲಿಗೆ ಆಕೆಗೆ ಆ ಕೆಲಸ ಸಮಾಪ್ತಿ. ಕಾಯಕವೇ ದೇವರು ಎಂದು ನಂಬಿರುವ ಅವ್ವನ ವೈಯುಕ್ತಿಕ ಸಂಪತ್ತು ಒಂದು ಕರಿಮಣಿ ಸರ, ಮಾಂಗಲ್ಯ, ಎರಡು ಒಲೆ, ಎರಡು ಮೂಗುತಿ, ಕೈಗೆ ಯಾವಾಗಲು ಹಸಿರು ಗಾಜಿನ ಬಳೆಗಳು.

ಬೆಂಗಳೂರಿನಲ್ಲಿರುವ ಅಕ್ಕನ ಮಗಳು ಕೊಟ್ಟ ಸೆಕೆಂಡ್ ಹ್ಯಾಂಡ್ ರೇಷ್ಮೆ ಸೀರೆ 25 ವರ್ಷದಿಂದ ಹೆಚ್ಚೆಂದರೆ ಹತ್ತು ಬಾರಿ ಹಾಕಿದ್ದಷ್ಟೆ. ಈಗಾಲಾದ್ರು ನಾಲ್ಕೈದು ಸೀರೆ, ಕುಪ್ಪಸಗಳಿವೆ. ಮೊದಲೆಲ್ಲ ಮೂರು ಜನತಾ ಸೀರೆ ಅಷ್ಟೆ ಇದ್ದದ್ದು. ಜನತಾ ಸೀರೆಯಲ್ಲೇ ಅವ್ವ ಅರ್ಧ ಬದುಕು ಮುಗಿಸಿದ್ದಾಳೆ. ಹೊಲದಿಂದ ಸಂಜೆ ಬಂದರೆ, ಮನೆಯಲ್ಲಿ ಮತ್ತೆ ಚಾಕರಿ ಶುರು. ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ಜನ ಬೆಳಗ್ಗೆ ಉಂಡರೆ ಮತ್ತೆ ರಾತ್ರಿ ಮಾತ್ರ ಊಟ. ಅವ್ವನದು ಎರಡು ಹೊತ್ತಿನ ಊಟದವಳು. ಅಷ್ಟೊಂದು ಕೆಲಸ ಮಾಡುವ ಆಕೆಗೆ ಎಲ್ಲಿಂದ ಶಕ್ತಿ ಬರುತ್ತದೆಯೋ ಗೊತ್ತಿಲ್ಲ. ಆದರೆ, ಆಕೆಗೆ ಕಾಫಿ ಪಂಚಪ್ರಾಣ. ಕಾಫಿಯದು ಒಂದು ದೊಡ್ಡ ಕಥೆ. ಕಾಫಿ ಎಂದರೆ ಒಂದು ಲೋಟದ ಹಾಲಿಗೆ ಹತ್ತು ಲೋಟ ನೀರು ಮಿಶ್ರಣ ಮಾಡಿ ಕಾಯಿಸಿದ ಬೆಲ್ಲದ ನೀರಿಗೆ ಹಾಲು ಸೇರಿಸಿ ಕಾಫಿ ಪುಡಿ ಹಾಕುವುದು.

ಹಾಲು ಕರೆಯುವ ಯಾವುದೇ ರೈತನ ಪರಿಸ್ಥಿತಿ ಅಂದರೆ ಲೀಟರ್ಗಟ್ಟಲೆ ಹಾಲು ಕರೆದರು ರೈತರು ತಿನ್ನುವುದು, ಸೇವಿಸುವುದು ಬಹಳ ಕಡಿಮೆ. ಇಂತಹ ಊರಿಗೆ ಡೈರಿ ಬಂದ ಮೇಲೆ ಅತಿಯಾಗಿದೆ. ಡೈರಿ ಬರುವ ಮುನ್ನ ಮೆನಯ ಮಕ್ಕಳು ಮೊಸರು, ಬೆಣ್ಣೆ, ಮಜ್ಜಿಗೆ ಸೇವಿಸುತ್ತಿದ್ದರು. ಈಗ ಹಣ ಗಳಿಸುವ ಉದ್ದೇಶವೇ ಮುಖ್ಯವಾಗಿದೆ. ಯಾರಿಗೂ ಆರೋಗ್ಯದ ಕಾಳಜಿ ಬೇಡವಾಗಿದೆ. ಅವ್ವನಿಗೆ ಈಗಲೂ ಕಾಫಿ ಮಾಡುವಾಗ ಛೇಡಿಸುತ್ತೇನೆ. ನೀರಿಗೆ ಹಾಲು ಹಾಕಬೇಡ, ಹಾಲಿಗೆ ಸ್ವಲ್ಪವೇ ನೀರು ಹಾಕಿ ಕಾಫಿ ಮಾಡು ಎಂದು. ಅದಕ್ಕವಳು ಹೇಳುವುದು ಎಮ್ಮೆ ಹಾಲು ಗಟ್ಟಿ, ಜೀರ್ಣ ಆಗುವುದು ಕಷ್ಟ. ಅದಕ್ಕಾಗಿ ಹಾಲಿಗೆ ಸ್ವಲ್ಪ ನೀರು ಹಾಕ್ತೀನಿ ಅಂತ. ಜೀವನ ಪೂರ್ತಿ ಬಸವತತ್ವದ ಕಾಯಕ ಯೋಗಿಯಂತೆ ಕೆಲಸ ಮಾಡಿರುವ ಅವ್ವ ಈಗಲೂ ಸ್ವಾಭಿಮಾನಿಯೆ.

ಬೆಳೆದ ಮಕ್ಕಳು ಜೀವನ ಹುಡುಕುತ್ತಾ ಊರಿಂದ ದೂರ. ಕಿರಿ ಮಗಳ ಸಾವಿನ ಗಾಯದ ನೆನಪಿನಲ್ಲಿ ಎರಡು ಎಮ್ಮೆ ಜೊತೆ ಊರಿನಲ್ಲೆ ದುಡಿಯುತ್ತಾ ಜೀವನ ಸಾಗಿಸುತ್ತಿದ್ದಾಳೆ. ಉದರ ನಿಮಿತ್ತ ಮಕ್ಕಳು ಜೀವನ ಹುಡುಕುತ್ತಾ ಮಕ್ಕಳು ಬೇರೆ ಊರಿನಲ್ಲಿ ಇರುವುದರಿಂದ ಸದ್ಯ ಊರಿನಲ್ಲಿ ಇರುವುದು ಅಪ್ಪ ಅಮ್ಮ ಮಾತ್ರ. ಹಲವು ಬಾರಿ ನಮ್ಮ ಜೊತೆ ಇರುವಂತೆ ಕೇಳಿದರು ಕೂಡಾ ಒಪ್ಪಿಲ್ಲ. ತನ್ನ ಕೈಕಾಲುಗಳಲ್ಲಿ ಶಕ್ತಿ ಇರುವರೆಗೂ ತಾನೆ ದುಡಿದು ಬದುಕುತ್ತೇನೆ. ನಂತರ ನೋಡೊಣ ಎಂದು ಒಪ್ಪಿಲ್ಲ. ಸದ್ಯ ಹುಲ್ಲಿನ ಹೊರೆ ಹೊರಲು ಕಷ್ಟ ಎಂದು ಎರಡು ಎಮ್ಮೆ ಮಾತ್ರ ಇವೆ.

ಅವ್ವ ಎಮ್ಮೆ ಹಾಲಿನ ಹಣದಿಂದ ಅಪ್ಪನನ್ನು ಕೂಡಾ ಸಾಕುತ್ತಿದ್ದಾಳೆ. ಮಕ್ಕಳಿಂದ ಇದುವರೆಗೆ ಯಾವುದೇ ನಿರೀಕ್ಷೆ ಇಲ್ಲ. ಊರಿಗೆ ಹೋದಾಗ ಹಣ ಕೊಟ್ಟರೂ ನಿರಾಕರಿಸಿರುತ್ತಾರೆ. ಮಕ್ಕಳ ಮುಂದಿನ ಜೀವನ ಮುಖ್ಯ ತನಗೆ ಯಾವುದೇ ಹಣದ ಅವಶ್ಯಕತೆ ಇಲ್ಲ ಎಂಬ ಭಾವ. ಕಳೆದ ವಾರ ನಾನು ಊರಿಗೆ ಬರುತ್ತೇನೆಂದು ಮೊದಲೇ ಫೋನ್ ಮಾಡಿ ತಿಳಿಸಿದ್ದರೂ ಅಷ್ಟೊತ್ತಿಗೆ ಎಮ್ಮೆ ಮೇಯಿಸಿಕೊಂಡು ಬರಲು ಹೋಗಿದ್ದರು. ಅವ್ವನ್ನನ್ನು ನೋಡಲು ಅಲ್ಲೇ ಹೋದಾಗ ಅವ್ವನ ಜೊತೆ ಫೋಟೋ ಕ್ಲಿಕ್ಕಿಸಿದೆ. ಸದಾ ಎಮ್ಮೆಯ ಜೊತೆ ಕಾಯಕ ಯೋಗಿಯಂತೆ ಸ್ವಾಭಿಮಾನಿ ಬದುಕು ನಡೆಸುತ್ತಿರುವ ನನ್ನವ್ವ ನನ್ನ ಮಾದರಿ. ಲಂಕೇಶರ “ಅವ್ವ” ಕವನದಂತೆ ನನ್ನವ್ವ ಕೂಡ. ಕಳೆದ ವಾರ ವಿಶ್ವ ಅಮ್ಮಂದಿರ ದಿನಾಚರಣೆ ಇತ್ತು. ನನ್ನವ್ವನ ಬದುಕೇ ಒಂದು ಸುಂದರ ಸುಸ್ಥಿರ ಜಗತ್ತು.

‍ಲೇಖಕರು Admin

May 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಶ್ರೀರಾಮ್ ಬಿದರಕೋಟೆ

    ಎಷ್ಟೊಂದು ಅದ್ಭುತವಾದ ಬರಹ ಕರೀಗೌಡರೆ…. ನೀವು ಯಾವ ಮೂಲಾಜಿಲ್ಲದೇ ಇಂತಹ ನೆನಪುಗಳನ್ನು ದಾಖಲಿಸಬಹುದು… ಒಂದು ಆರೋಗ್ಯಕರ ಅವ್ವನ ಬರಹಕ್ಕೆ ಥ್ಯಾಂಕ್ಸ್.. .

    ಪ್ರತಿಕ್ರಿಯೆ
  2. ಶ್ರೀರಾಮ್ ಬಿದರಕೋಟೆ

    ಎಷ್ಟೊಂದು ಅದ್ಭುತವಾದ ಬರಹ ಕರೀಗೌಡರೇ…. ನೀವು ಯಾವ ಮೂಲಾಜಿಲ್ಲದೇ ಇಂತಹ ನೆನಪುಗಳನ್ನು ಬರೆಯುತ್ತಾ ಹೋಗಬಹುದು… ಹಳ್ಳಿಗಾಡಿನ
    ಒಂದು ಹೆಮ್ಮೆಯ ಅವ್ವನ ಪರಿಚಯ ಮಾಡಿಕೊಟ್ಟಿದ್ದಕ್ಕೆ ಥ್ಯಾಂಕ್ಸ್..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: