ಹೆಚ್ ಆರ್ ಬಸವರಾಜಪ್ಪ ಕಥನ…

ನೆಂಪೆ ದೇವರಾಜ್

ಹೆಚ್.ಆರ್ ಬಸವರಾಜಪ್ಪನವರಿಗಾಗ ಹದಿನಾಲ್ಕು
ವರುಷ :ಪಣತ ಒಡೆದು ಭತ್ತ ಹೊತ್ತೊಯ್ದಿದ್ದ ಲೆವಿ ಅಧಿಕಾರಿಗಳು.
‘ಹಸಿರು ಹಾದಿಯ ಕಥನ’ದಲ್ಲಿ ಹತ್ತಾರು ವಿಚಾರಗಳು

ರೈತರೆಂದರೆ ಎರಡನೆ ದರ್ಜೆಯ ಪ್ರಜೆಗಳು. ಅವರೆಲ್ಲ ದೇಶಕ್ಕೆ ಬಾರ ಎಂಬ ಭಾವನೆ ಉಕ್ಕುಕ್ಕಿ ಬರುತ್ತಿದ್ದ ಕಾಲ.ಬೆನ್ನು ಬಾಗಿದವನ ಮೇಲೆ ಮತ್ತಷ್ಟು ಸುತ್ತಿಗೆ ಪೆಟ್ಟು ನೀಡಲು ನೌಕರಶಾಹಿ ಮತ್ತು ರಾಜಕಾರಣ ಎರಡೂ ಒಟ್ಟು ಗೂಡಿತ್ತು.ಪ್ರಕೃತಿಯೂ ಒಮ್ಮೊಮ್ಮೆ ಇವರ ಜೊತೆ ಸೇರುತ್ತಿತ್ತು.ಬಾಗಿದ ಬೆನ್ನಿಗೆ ದಬ್ಬೆ ಕಟ್ಟಿ ನಿಲ್ಲಿಸಬೇಕಿದ್ದ ಆರ್ಥಿಕ ಯೋಜನೆಗಳು ಬಡಕಲು ಬಂಡವಾಳ ಶಾಹಿಯ ಸುತ್ತ ಗಿರಕಿ ಹೊಡೆಯುತ್ತಿದ್ದವು. ಬಿಳಿ ಗಡ್ಡದೊಂದಿಗೆ‌ ಎಪ್ಪತ್ತು ವರ್ಷಗಳನ್ನು ಹೊತ್ತುಕೊಂಡಿರುವ ಬಸವರಾಜಪ್ಪನವರಿಗೆ ಆಗ ಕೇವಲ ಹದಿನಾಲ್ಕು ವರ್ಷಗಳು.

ಬೂಟುಗಾಲಿನೊಂದಿಗೆ ಬಂದಿದ್ದ ಅಧಿಕಾರಿಗಳು ಮನೆಯಲ್ಲಿ ಭತ್ತವನ್ನು ತುಂಬಿಟ್ಟಿದ್ದ ಪಣತ ಒಡೆಯುತ್ತಾರೆ..ಆ ಕಾಲದಲ್ಲಿ ಜಾರಿಯಲ್ಲಿದ್ದ ಅವೈಜ್ಙಾನಿಕ ಮತ್ತು ಕಿರುಕುಳದ ಕಾನೂನಾದ ಲೆವಿ ಕಟ್ಟಿಲ್ಲದ ಕಾರಣಕ್ಕೆ ಇವರು ಉಣ್ಣಲು ಇಟ್ಟುಕೊಂಡಿದ್ದ ಭತ್ತವನ್ನೆತ್ತಿಕೊಂಡು ಅಧಿಕಾರಿಗಳು ಮನೆ ಮಂದಿ ನೋಡು ನೋಡುತ್ತಿದ್ದಂತೆ ಹೋಗುತ್ತಾರೆ.. ಬಾಗಿಲು ತೆರೆದಿದ್ದ ಪಣತ ಹಾಗೂ ಅಂಗಳದ ತುಂಬಾ ಬಿದ್ದಿದ್ದ ಭತ್ತ ನೋಡಿ ಉಪಾಧ್ಯಾಯರಾಗಿದ್ದ ಬಸವರಾಜಪ್ಪನವರ ತಂದೆ ರುದ್ರಪ್ಪನವರ ಕಣ್ಣಿನ ಕೊನೆಯಲ್ಲಿ ಹನಿಯೊಂದು ಉದುರುತ್ತದೆ.

ಹದಿನಾಲ್ಕರ ಹರೆಯದ ಬಸವರಾಜಪ್ಪನವರು ಆ ದಿನದಿಂದ ಕಣ್ಣೀರುಗರೆದು ಕೈಚೆಲ್ಲಿ ಕೂರಲಿಲ್ಲ. ರೋಷದ ನಡೆಗೆ ಕೈ ಹಿಡಿದು ನಡೆಸಬಲ್ಲ ತಾಯ್ತನವನ್ನು ಹುಡುಕುತ್ತಿದ್ದಾಗ ಅಂದು ಇವರ ಕಣ್ಣಿಗೆ ಬಿದ್ದದ್ದು ಅಶೋಕ ನಗರಲ್ಲಿದ್ದ ದಿವಂಗತ ಎನ್.ಡಿ ಸುಮದರೇಶ್ ಮತ್ತು ಭಗವತಿಕೆರೆಯಲ್ಲಿದ್ದ ಕಡಿದಾಳು ಶಾಮಣ್ಣ! ಬಸವರಾಜಪ್ಪನವರು ಉಣ್ಣಲು ಇಟ್ಟುಕೊಂಡಿದ್ದ ಭತ್ತ ತುಂಬಿದ್ದ ಪಣತದ ಮೇಲಾದ ದಾಳಿಯ ನಂತರ ಸರ್ಕಾರದ ಲೆವಿ ನೀತಿಯ ವಿರುದ್ದ ದೊಡ್ಡ ಸಮರವನ್ನೇ ಸಾರುತ್ತಾರೆ. ಲೆವಿ ಚೀಟಿಗೆ ಬೆಂಕಿ ಇಟ್ಟು ಸುಟ್ಟಿದ್ದು ಮಾತ್ರವಲ್ಲ. ಜಫ್ತಿ ಮಾಡಲು ಬಂದ ತಹಸಿಲ್ದಾರನ ಮನೆಯ ಮರು ಜಫ್ತಿಯ ವರೆಗೂ ಇವರ ಹೋರಾಟದ ಹಾದಿಗಳು ಮುಂದುವರಿಯುತ್ತವೆ.

ಕಡಿದಾಳು ಶಾಮಣ್ಣ ಮತ್ತು ಸುಂದರೇಶ್ ರವರ ನಡೆಗಳು ಸಮ ಸಮಾಜ ಕಟ್ಟುವ ಆಸೆಗಳನ್ನು ಹೊರ ಹೊಮ್ಮಿಸಿದಾಗ ಅದಕ್ಕೆ ಹೆಗಲು ಕೊಡಲು ಸಿದ್ದರಾದವರಿವರು.ಲೆವಿ ವಿರೋಧೀ ಹೋರಾಟದ ನಂತರ ಬಸವರಾಜಪ್ಪ ಹಿಂತಿರುಗಿ ನೋಡಿದ್ದೇ ಇಲ್ಲ. ನರಗುಂದ ನವಲಗುಂದದ ರೈತರ ಮೇಲಾದ ಗೋಲೀಬಾರಿನಿಂದ ಕನಲಿ ಹೋದ ಬಸವರಾಜಪ್ಪನವರು ಸುಂದರೇಶ್ ಮತ್ತು ಶಾಮಣ್ಣನವರ ಜೊತೆ ಹುಬ್ಭಳ್ಳಿ ಧಾರವಾಡದತ್ತ ಹೋದವರು ಬೆನ್ನು ಬಾಗಿಸಿಕೊಂಡಿದ್ದ ರೈತನನ್ನು ದಬ್ಬೆ ಕಟ್ಟಿಯಾದರೂ ನೆಟ್ಟಗೆ ನಿಲ್ಲಿಸಬೇಕೆಂಬ ಭರವಸೆ ಹೊರುತ್ತಾರೆ.

ಸಾಲದ ನೆವದಲ್ಲಿ ಟ್ರಾಕ್ಟರ್ ಟಿಲ್ಲರುಗಳ ನ್ನು ಬ್ಯಾಂಕಿನ ಅಧಿಕಾರಿಗಳು ಜಫ್ತಿ ಮಾಡಿದಾಗ ನೂರಾರು ಮರು ಜಫ್ತಿ ಕಾರ್ಯಕ್ರಮಗಳು ಇವರ ನೇತೃತ್ವದಲ್ಲಿ ನಡೆಯುತ್ತವೆ. ಇವರ ಮೇಲೆ ಹಾಗು ಇವರ ಸಹಚರರ ಮೇಲೆ ಬ್ಯಾಂಕು, ಕಂದಾಯ, ಅರಣ್ಯ ಇಲಾಖೆಯವರು ಹಾಕಿದ್ದ ಅದೆಷ್ಟೋ ಕೇಸುಗಳು ಇನ್ನೂ ತಮ್ಮ ನಡುಗೆಯನ್ನು ಬಿಟ್ಟಿಲ್ಲ. ಹಸಿರು ಶಾಲು ಹೆಗಲೇರಿಸಿಕೊಂಡ ಮೇಲಿನ ಇವರ ಓಡಾಟ ಕಲ್ಯಾಣ ಕ್ರಾಂತಿಯ ನಂತರ ಶರಣರು ಬಸವನ ತತ್ವಗಳನ್ನು ಬಿತ್ತಲು ಇಡೀ ಕರ್ನಾಟಕದ ಸುತ್ತುವಿಕೆ ನೆನಪಿಸುತ್ತದೆ. ಜಿಲ್ಲೆಯ ಈ ಹಳ್ಳಿಗೆ ಬಸವರಾಜಪ್ಪ ಈ ನಲವತ್ತು ವರ್ಷಗಳಲ್ಲಿ ಬಂದಿಲ್ಲವೆಂದಿಲ್ಲ.

ಸಾವಿರದ ಒಂಬೈನೂರ ಎಂಭತ್ತರ ಅಕ್ಟೋಬರ್ ಎರಡರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆಸಿದ ರೈತರ ಸಮಾವೇಶಕ್ಕೆ ಪ್ರೊಫೆಸರ್ ನಂಜುಂಡಸ್ವಾಮಿಯವರನ್ನು ಕರೆತರಲು ಹೋಗಿದ್ದ ಎನ್.ಡಿ ಸುಂದರೇಶ್ ಮತ್ತು ಶಾಮಣ್ಣನವರಿದ್ದ ತಂಡದಲ್ಲಿ ಬಸವರಾಜಪ್ಪನವರಿನ್ನೂ ರಕ್ತ ಚಿಮ್ಮುವಂತಿದ್ದ ಯುವಕ. ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ವಿರಾಟ್ ಸಮಾವೇಶವೋ ರೈತ ಸಮೂಹಕ್ಕೆ ಇನ್ನಿಲ್ಲದ ಸ್ವಾಭಿಮಾನ ತುಂಬಲು ಹುಟ್ಟಿಕೊಂಡ ವೇದಿಕೆಯಾಗಿತ್ತು. ಅಲ್ಲಿದ್ದ ಹುರುಪು ಉಲ್ಲಾಸ ಉತ್ಸಾಹಗಳು ನಿದ್ದೆಯಲ್ಲಿದ್ದ ವಿಧಾನ ಸೌಧಕ್ಕೆ ಹಾರೆ ಗುದ್ದಲಿಗಳನ್ನುಪಯೊಗಿಸಿ ಮೀಟಿ ಕೆಡವಿ ಹೊಸ ಕರ್ನಾಟಕ ಕಟ್ಟಲು ಪುಟಿದೇಳುತ್ತಿದ್ದ ಆ ಕಾಲದ ಯುವ ಬುಗ್ಗೆಗಳ ನೇತೃತ್ವ ಬಸವರಾಜಪ್ಪನವರ ಹೆಗಲೇರಿತ್ತು. ಸಿಡಿ ಗುಂಡುಗಳಂತಿದ್ದ ತನ್ನ ಸರಳವಾದ ಭಾಷಣಗಳ ಮೂಲಕ ಸಮೂಹ ಸಮೂಹಗಳನ್ನೇ ಸಂಚಲನಕ್ಕೊಳಪಡಿಸುತ್ತಿದ್ದ ಜಾರ್ಜ್ ಫರ್ನಾಂಡೀಸ್ ತರಹದ ಕಾಂಗ್ರೆಸ್ ವಿರೋಧೀ ನಾಯಕರು ರೈತ ಸಮೂಹ ನೋಡಿ ಜಿಲ್ಳಾಧಿಕಾರಿಗಳ ಕಛೇರಿ ಹತ್ತಿರ ಬಂದು ಭಾಷಣ ಮಾಡ ಬಯಸುತ್ತಾರೆ. ಅವರ ಬೆಂಬಲಿಗರು ಜಾರ್ಜ್ ಪರ್ನಾಂಡೀಸ್ ರವರವರಿಗೆ ವೇದಿಕೆ ಹತ್ತಲು ಅವಕಾಶ ಕೋರುತ್ತಾರೆ. ಆದರೆ ರೈತ ಹೋರಾಟದಲ್ಲಿ ರಾಜಕೀಯ ಪಕ್ಷಗಳ ನುಸುಳುವಿಕೆಯನ್ನು ಕಟು ಶಬ್ಧಗಳ ಮೂಲಕ ವಿರೋಧಿಸುತ್ತಿದ್ದ ಸುಂದರೇಶ್, ನಂಜುಂಡ ಸ್ವಾಮಿ ರುದ್ರಪ್ಪನವರ ತಂಡದಲ್ಲಿ ಇದ್ದ ಬಸವರಾಜಪ್ಪ ಅಂದು ಸ್ಪಷ್ಟ ವಿಚಾರಧಾರೆಯನ್ನು ಹೊತ್ತಿದ್ದ ಯುವ ಗುಂಪುಗಳ ಸಮರೋತ್ಸಾಹದ ಕಲಿಯಾಗಿ ಕಂಗೊಳಿಸುತ್ತಾರೆ.

ಶಿವಮೊಗ್ಗದಲ್ಲಿ ಆಂದು ನಡೆದ ರೈತ ಸಮಾವೇಶದ ನಂತರ ಬಸವರಾಜಪ್ಪ ಹಿಂತಿರುಗಿ ನೋಡಿದ್ದೇ ಇಲ್ಲ. ಶಿವಮೊಗ್ಗ ಜಿಲೆಯಲ್ಲಿ ಅವರು ನೋಡದ ಹಳ್ಳಿ ಇಲ್ಲ. ಮುಟ್ಟದ ರೈತನಿಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇವರು ನಡೆಸಿದ ಹೋರಾಟಗಳಿಗೆ ಲೆಕ್ಕವಿಲ್ಲ. ಮಾಡಿದ ಭಾಷಗಳಿಗೆ ಕಿವಿಗೊಡದ ರೈತನಿಲ್ಲ. ನಿಧಾನ ದನಿಯಲ್ಲಿ ಮಾತಾಡುತ್ತಾ ಮಾತಾಡುತ್ತಾ ಇವರ ಮಾತು ತೆಗೆದುಕೊಳ್ಳುತ್ತಿದ್ದ ಲಯವನ್ನು ಲಕ್ಷಾಂತರ ರೈತರು ಬೆರಗು ಕಣ್ಣಿನಿಂದ ನೋಡಿದ್ದಾರೆ. ಪ್ರತಿ ಭಾಷಣವೂ ಹತ್ತಾರು ವಿಚಾರಧಾರೆಗಳ ಹಂದರ. ಈ ಮನುಷ್ಯನನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯನವರಂತಹ ಘಟಾನುಗಟಿಗಳು ನಡೆಸಿದ ಪ್ರಯತ್ನಗಳಿಗೆ ಲೆಕ್ಕವಿಲ್ಲ.ಪ್ರತಿ ಚುನಾವಣೆಯ ಸಂದರ್ಭದಲ್ಲೂ ಇವರ ಮನೆಯತ್ತ ಮುಖಂಡರುಗಳು ಇಡುತ್ತಿದ್ದ ದಾಳಿಗೆ, ತೋರಿಸುತ್ತಿದ್ದ ಆಮಿಷಗಳಿಗೆ ಬಲಿಯಾಗದಿರಲು ಸಾದ್ಯವೆ ಇಲ್ಲ ಎಂಬ ವಾತಾವರಣವಿರುತ್ತಿತ್ತು.

ಪತ್ರಿಕೆಗಳಂತೂ ನಾಳೆ ರೈತ ಸಂಘ ಬಿಡುತ್ತಾರೆ ನಾಡಿದ್ದು ಬಿಡುತ್ತಾರೆಂಬ ರೀತಿಯಲ್ಲಿ ಬರೆಯ ತೊಡಗಿದ್ದವು.ಆದರೆ ಬಸವರಾಜಪ್ಪ ಹೋರಾಟದ ಧೀಕ್ಷೆ ತೆಗೆದುಕೊಂಡಿದ್ದು ಹೆಚ್.ಎಸ್ ರುದ್ರಪ್ಪವರಿಂದ. ಅನುಸರಿಸಿದ್ದು ದಿವಂಗತ ಎನ್.ಡಿ ಸುಂದರೇಶ್ ಇಟ್ಟ ಹೆಜ್ಜೆಯನ್ನು. ಕಡಿದಾಳು ಶಾಮಣ್ಣನವರನ್ನು ಮನಸ್ಸು ಮನಸ್ಸಲ್ಲೂ ಧ್ಯಾನಿಸಿದವರು.ಪ್ರಭಾವಕ್ಕೊಳಗಾಗಿದ್ದು ಪ್ರೊ. ಎಂ.ಡಿ ನಂಜುಂಡ ಸ್ವಾಮಿಯವರ ವೈಜ್ಙಾನಿಕ ಚಿಂತನೆಗಳಿಂದ ಎಂಬುದನ್ನು ಸಾಬೀತು ಪಡಿಸಿದವರು ಎಂಬುದು ಕೆಲವರಿಗೆ ಶಾಶ್ವತವಾಗಿ ಅರ್ಥವಾಗದಂತದ್ದು.

ರಾಜಕೀಯ ಪಕ್ಷಗಳು ಇವರನ್ನು ಸೆಳೆಯಲು ಇವರ ಹಿಂದೆ ಮುಂದೆ ಓಡಾಡಲು ಕಾರಣವೂ ಇದೆ. ಅದು ಸಾವಿರದ ಎಂಭತ್ತೊಂಭತ್ತು. ಅಂದು ನಡೆದಿದ್ದ ವಿಧಾನ ಸಭಾ ಚುನಾವಣೆಯಲ್ಲಿ ಬಸವರಾಜಪ್ಪನವರು ರೈತ ಸಂಘದ ಅಭ್ಯರ್ಥಿ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೂರ ಎಂಭತ್ತೊಂಭತ್ತು ಸೀಟು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಅಂತಹ ಕಾಂಗ್ರೆಸ್ಸಿನ ಅಲೆಯಲ್ಲೂ ಬಸವರಾಜಪ್ಪವರು ಕಾಂಗ್ರೆಸ್ಸಿನ ಬಿ. ಸ್ವಾಮಿರಾಯರ ಎದುರು ಸೋತಿದ್ದು ಕೇವಲ ಒಂದು ಸಾವಿರದ ನಾನೂರು ಮತಗಳ ಅಂತರದಿಂದ. ಫಲಿತಾಂಶ ಬಂದಾಗ ಇಡೀ ಜಿಲ್ಲೆ ಬಸವರಾಜಪ್ಪನವರತ್ತ ನೋಡಿತ್ತು.

ಪ್ರಚಾರದ ಅಭ್ಬರವಿಲ್ಲದೆ , ರೊಟ್ಟಿ ಬುತ್ತಿ ಕಟ್ಟಿಕೊಂಡು ಚುನಾವಣೆ ಎದುರಿಸಬಹುದು ಎಂಬುದನ್ನು ರೈತ ಕಾರ್ಯಕರ್ತರು ಅಂದೇ ತೋರಿಸಿಕೊಟ್ಟಿದ್ದರು.. ಇಂದು ನಾವು ಪ್ರಶಾಂತ್ ಕಿಶೋರ್ ರವರ ಚುನಾವಣಾ ತಂತ್ರದ ಬಗ್ಗೆ ಮಾತಾಡುತ್ತೇವೆ. ಪುಟಗಟ್ಟಲೆ ಬರೆಯುತ್ತೇವೆ. ಅವರಿಗಾಗಿ ರಾಜಕೀಯ ಪಕ್ಷಗಳು ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟು ತಮ್ಮತನ ಬಿಟ್ಟು ಗೋಗರೆಯುತ್ತವೆ. ಅರವಿಂದ ಕೇಜ್ರಿವಾಲ್ ರವರ ಅಮ್ ಅದ್ಮಿ ಪಕ್ಷದ ದೆಹಲಿ ಡೈಲಾಗಿನ ಬಗ್ಗೆ ಮಾತಾಡುತ್ತೇವೆ. ಇದನ್ನೆಲ್ಲ ೧೯೮೯ ರ ಚುನಾವಣೆಯಲ್ಲೇ ರೈತ ಸಂಘ ಮಾಡಿತ್ತು ಎಂಬುದನ್ನು ಮರೆಯುತ್ತೇವೆ. ಮಾಧ್ಯಮಗಳು ಎಂದಿನಂತೆ ತಮ್ಮ ಲಾಗಾಯ್ತಿನ ನಿರ್ಲಕ್ಷ್ಯ ತೋರಿಸುತ್ತವೆ.

ಅಂದಿನ ಹೊಸನಗರ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ರೈತ ಸಂಘ ತನ್ನ ಪ್ರಾಬಲ್ಯವನ್ನಿಟ್ಟುಕೊಂಡಿದೆ ಎಂಬುದನ್ನು ಯಾವ ಪತ್ರಿಕೆಯೂ ಬರೆದಿರಲಿಲ್ಲ.ಗುಪ್ತಗಾಮಿನಿಯಾಗಿ ಹರಿದ ರೈತ ದನಿ ಸಾಗರವಾಗುವ ಕುರುಹು ಫಲಿತಾಂಶ ಬಂದಾಗಲೇ ಗೊತ್ತಾಗಿದ್ದು.. ಹೆಚ್ಚೂ ಕಡಿಮೆ ಇಂದಿನ ದೆಹಲಿ ರಾಜ್ಯದ ಅರ್ಧ ಭಾಗದಷ್ಟು ವಿಸ್ತಾರತೆ ಪಡೆದಿದ್ದ ಹೊಸನಗರ ಕ್ಷೇತ್ರವನ್ನು ರಾಜಕೀಯ ಪಕ್ಷಗಳ ಅಬ್ಬರದ ಎದುರು ಕೇವಲ ಎರಡೋ ಮೂರೋ ವಾಹನಗಳ ಮೂಲಕ ಮುಟ್ಟುತ್ತಿದ್ದ ರೀತಿಗೆ ಇಂದು ಸ್ವತಃ ಬಸವರಾಜಪ್ಪನವರೆ ಬೆರಗಿನಿಂದ ನೆನಪಿಸಿಕೊಳ್ಳುತ್ತಾರೆ.

೧೯೯೯ರ ವಿಧಾನಸಭಾ ಚುನಾವಣೆಯ ಸೋಲಿನ ಅಂತರ ಇನ್ನೂ ಆಶ್ಚರ್ಯವನ್ನು ಹೊರಹೊಮ್ಮಿಸುತ್ತದೆ. ಕೇವಲ ಮುನ್ನೂರ ಐವತ್ತು ಓಟುಗಳ ಅಂತರದಿಂದ ಸೋಲುತ್ತಾರೆ. ಹೊಳೆ ಹೊನ್ನೂರಿನಿಂದ ಕೊಲ್ಲೂರಿನವರೆಗೆ ವಿಸ್ತರಿಸಿದ್ದ ಹೊಸನಗರ ಕ್ಷೇತ್ರದಲ್ಲಿ ಇವರ ಕಾರ್ಯಕರ್ತರ ಪಡೆ ನಡೆಸಿದ ಚುನಾವಣಾ ಕಾರ್ಯ ತಂತ್ರಗಳತ್ತ ಕಣ್ಣು ಹೊರಳಿಸಿದರೆ ಹಣ ಹೆಂಡ ವಿಲ್ಲದೆ ಚುನಾವಣೆ ನಡೆಸಬಹುದು ಎಂಬುದನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತದೆ.

೨೦೦೪ರ ನಾಲ್ಕರ ವಿದಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಾತಿ ಮತ್ತು ಧರ್ಮಗಳು ಪೋಲರೈಸ್ ಅಗಿದ್ದವು. ರೈತ ಸಂಘ ಎರಡು ಹೋಳಾಗಿತ್ತು. ಆದರೂ ಬಸವರಾಜಪ್ಪನವರ ಸೋಲಿನ ಅಂತರ ಕೇವಲ ಎರಡು ಸಾವಿರದ ಇನ್ನೂರು ಮಾತ್ರ. ‌ಮೂರು ವಿಧಾನಸಭಾ ಚುನಾವಣೆ ಎದುರಿಸಿಯೂ ಎದೆಗುಂದದೆ ರೈತ ಸಂಘದ ಮೂಲಕ ಜನರ ಜೊತೆ ಜೊತೆ ಯಾಗಿಯೇ ಹೋರಾಟ ಮಾಡುತ್ತಲೆ ಜೀವ ಸವೆಸಿದ ಬಸವರಾಜ್ ಎಂದೂ ಧರ್ಮ ಮತ್ತು ಜಾತಿಯನ್ನವಲಂಭಿಸಿ ಚುನಾವಣೆ ಮಾಡಿದವರಲ್ಲ. ಇವರನ್ನು ಎತ್ತರಕ್ಕೆ ಏರಿಸಿದ್ದೆ ಇವರ ಹೋರಾಟಗಳು.

ನಿರರ್ಗಳ ಅಸ್ಖಲಿತ ಬಾಷಣಗಳೋ ಹೊಳೆ ಹೊನ್ನೂರಿನಿಂದ ಕೊಲ್ಲೂರಿನ ಕಗ್ಗಾಡಿನಲ್ಲೂ ಮಾರ್ದನಿಸಿದಂತವುಗಳು. ಅನ್ಯಾಯ ಕಂಡಾಗ ಎಂದೂ ಸುಮ್ಮನಿರದವರು. ಇಂದೂ ಈ ಲೇಖನ ಬರೆಯುವಾಗ ಜಿಲ್ಲಾಧಿಕಾರಿಗಳ ಕಚೇರಿಯ ನೌಕರನೋರ್ವ ಇಪ್ಪತ್ತೈದು ಸಾವಿರ ರೂಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟು ಕಡತ ವಿಲೇವಾರಿ ಮಾಡದೆ ಇಟ್ಟುಕೊಂಡಿದ್ದವನನ್ನು ಬಲಿ ಬಿಡಿಸಿ ಬಂದದ್ದನ್ನು ಅವರ ಬಾಯಿಂದ ಕೇಳಿದರೇ ಚಂದತಮ್ಮ ಐದು ದಶಕಗಳ ಹೊರಾಟದ ಹಿಂದೆ ಪ್ರೊ.ನಂಜುಂಡಸ್ವಾಮಿಯವರು ರೂಪಿಸಿದ ವಿಚಾರಗಳಿಗೆ ಚ್ಯುತಿ ತಂದವರಲ್ಲ. ದಿವಂಗತ ಎನ್.ಡಿ ಸುಂದರೇಶ್ ತೋರುತ್ತಿದ್ದ ತಾಯ್ತನವನ್ನು ಮರೆತವರಲ್ಲ.

ಕಡಿದಾಳು ಶಾಮಣ್ಣನವರ ಸಂತಪ್ಯಾಟ್ರಿಕ್ಕರತ್ವದ ಮಹತ್ವಕ್ಕೆ ಬೆಲೆಕೊಡದವರಲ್ಲ. ೧೯೮೫ ರಲ್ಲಿ ಅಂದಿನ ರಾಮಕೃಷ್ಣ ಹೆಗಡೆಯವರು ಜಾರಿಗೆ ತಂದಿದ್ದ ‘೧೦೧ ಸಿ’ ಎಂಬ ಕಾನೂನಿನ ವಿರುದ್ದ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದಾಗ ನಾನು ಇವರ ಜೊತೆ ಹೆಜ್ಜೆ ಹಾಕಿದ್ದವ.ಅಂದು ಇವರ ಶಕ್ತಿ, ಸಂಪರ್ಕ, ಸಾಮರ್ಥ್ಯಗಳು ನನಗೆ ಹೆಚ್ಚು ಪರಿಚಯವಾಗಲು ಸಾದ್ಯವಾಯಿತು. ಅದೊಂದು ಅಪೂರ್ವ ಗಳಿಗೆ. ಇದೇ ಇಪ್ಪತ್ತೈದರಂದು ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ತಮ್ಮ ಐದು ದಶಕಗಳ ಹೋರಾಟಕ್ಕೆ ಸಂಬಂಧಿಸಿದಂತೆ ರಣ ರೋಚಕ ಘಟನೆಗಳನ್ನಾಧರಿಸಿದ ‘ಹಸಿರು ಹಾದಿಯ ಕಥನ’ ಎಂಬ ಹೊತ್ತಿಗೆಯ ಬಿಡುಗಡೆ ಕಾರ್ಯಕ್ರಮವಿದೆ. ತಾವೆಲ್ಲ ಬರಬೇಕು. ಐದು ದಶಕಗಳಲ್ಲಿ ರೈತ ಸಂಘ ಸವೆಸಿದಹೋರಾಟಗಳ ನೈಜ ದರುಶನ ಈ ಪುಸ್ತಕದಲ್ಲಿದೆ. ಇವೆಲ್ಲ ಇತಿಹಾಸದಲ್ಲಿ ದಾಖಲಾಗಲಿ .

‍ಲೇಖಕರು Admin

May 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: