ಸತೀಶ್ ಶೆಟ್ಟಿ ವಕ್ವಾಡಿ ಅವರ ಕಾದಂಬರಿ ‘ಸುಳಿ’
ಬಿ.ಬಿ.ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಡಾ. ಟಿ.ಎಸ್.ಗೊರವರ ಅವರ ಬರಹ ಇಲ್ಲಿದೆ.
ಡಾ. ಟಿ.ಎಸ್.ಗೊರವರ
ಈಗಾಗಲೇ ಎರಡು ಕಥಾ ಸಂಕಲನಗಳನ್ನು ರಚಿಸಿರುವ ಸತೀಶ್ ಶೆಟ್ಟಿ ವಕ್ವಾಡಿ ಅವರು ಈಗ ‘ಸುಳಿ’ ಎನ್ನುವ ಕಾದಂಬರಿ ಪ್ರಕಟಿಸುತ್ತಿದ್ದಾರೆ. ಸೃಜನಶೀಲ ಬರಹಗಾರರು ಹೀಗೆ ಪ್ರಕಾರಗಳನ್ನು ಬದಲಿಸುತ್ತ, ತಾವೇ ಸೃಷ್ಟಿಸಿದ ಹಳೆಯ ಮಾದರಿಗಳನ್ನು ಮೀರುತ್ತ, ತಾವೇ ಹಾಕಿಕೊಂಡ ಎಲ್ಲೆಗಳನ್ನು ದಾಟುತ್ತ ತಮ್ಮೊಳಗಿನ ಬರಹಗಾರನನ್ನು ಆಗಾಗ ಪರೀಕ್ಷಿಸುತ್ತಲೇ ಇರಬೇಕು. ಆವಾಗಲೇ ಸಂವೇದನೆಯ ಹೊಸ ದಿಗಂತಗಳನ್ನು ಮುಟ್ಟಿ ನೋಡಲು ಸಾಧ್ಯವಾಗುವುದು. ಈ ಕಾದಂಬರಿಯ ಮೂಲಕ ಸತೀಶ್ ಅಂತಹದೊ೦ದು ಸಾಹಸದ ಹಾದಿಯನ್ನು ತುಳಿದಿದ್ದಾರೆ.
‘ಸುಳಿ’ ಕಾದಂಬರಿ ತಾನು ಒಳಗೊಂಡ ಕಥಾವಸ್ತು, ವಿವರಗಳು, ಕುತೂಹಲ ಕೆರಳಿಸುವ ನಿರೂಪಣೆಯ ಕ್ರಮದಿಂದಾಗಿ ಗಮನ ಸೆಳೆಯುತ್ತದೆ. ಉಪನದಿಗಳು ಒಂದೊ೦ದಾಗಿ ನದಿಗೆ ಸೇರಿ, ಆ ನದಿ ಮತ್ತೆ ಮೈದುಂಬಿಕೊ೦ಡು ಹರಿಯುವ ಹಾಗೆ ಈ ಕಾದಂಬರಿಯ ಓಘವಿದೆ. ನೆನಪಿನೊಳಗೊಂದು ನೆನಪು ಬಿಚ್ಚಿಕೊಳ್ಳುತ್ತ ವಾಸ್ತವದಿಂದ ಭೂತಕಾಲಕ್ಕೆ, ಭೂತಕಾಲದಿಂದ ವರ್ತಮಾನಕ್ಕೆ ಜೀಕು ಹೊಡೆಯುವ ಇಲ್ಲಿನ ಕಥನ ಓದುಗನನ್ನು ಥಟ್ಟನೆ ಸೆಳೆಯುತ್ತದೆ. ಈ ಗುಣ ತಂತ್ರಗಾರಿಕೆಯ೦ತೆ ತೋರಿದರೂ ಹೀಗೆ ಕಥನವನ್ನು ವಿನ್ಯಾಸಗೊಳಿಸಿ ನಿರೂಪಿಸುವುದು ಕೂಡ ಬಹಳ ಸವಾಲಿನ ಕೆಲಸ. ಮೂರು ಧಾರೆಗಳಲ್ಲಿ, ಮೂರು ದಿಕ್ಕುಗಳಿಂದ ಚಲಿಸುವ ಪಾತ್ರಗಳನ್ನು ಹಿಡಿದುಕೊಂಡು ಸೂಜಿಯಲ್ಲಿ ದಾರ ಪೋಣಿಸಿ ಚೆಂದದೊ೦ದು ಕುಸುರಿಯ ನೇಯ್ಗೆ ಮಾಡಿದಂತೆ ಇಲ್ಲಿನ ಕಥನದ ವಿನ್ಯಾಸವಿದೆ.
“ಮುಖ್ಯಮಂತ್ರಿ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ. ಎಲ್ಲಿದ್ರು ಬೇಗ ಬಂದ್ಬಿಡು” ಎನ್ನುವ ಸಂಭಾಷಣೆಯೊ೦ದಿಗೆ ಆರಂಭವಾಗುವ ಈ ಕಥನ ಅಪ್ಪಟ ರಾಜಕೀಯ ಕಾದಂಬರಿಯಾಗಿ ರೂಪ ತಾಳಿದೆ. ರಾಜಕೀಯ ಪ್ರಜ್ಞೆ ಕನ್ನಡ ಕಾದಂಬರಿ ಲೋಕಕ್ಕೆ ಹೊಸದಲ್ಲವಾದರೂ ಆ ಪ್ರಜ್ಞೆಯ ನೋಟಕ್ರಮ ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಪಿ.ಲಂಕೇಶ್ ಅವರ ಕಥನಕ್ರಮದಲ್ಲಿ ರಾಜಕೀಯ ಪ್ರಜ್ಞೆ ಢಾಳವಾಗಿಯೇ ಕಾಣಿಸುತ್ತದೆ. ಕನ್ನಡದ ಬಹಳಷ್ಟು ಲೇಖಕರು ನಿಜ ರಾಜಕಾರಣಿಗಳ ಬದುಕಿನ ವಿವರಗಳನ್ನು ತಮ್ಮ ಬರಹಗಳಲ್ಲಿ ಕಡೆದು ನಿಲ್ಲಿಸಿದ್ದಾರೆ. ಯು.ಆರ್.ಅನಂತಮೂರ್ತಿಯವರ ‘ಅವಸ್ಥೆ’ ಕಾದಂಬರಿಯಲ್ಲಿ ರಾಜಕೀಯ ಮುತ್ಸದ್ದಿ ಶಾಂತವೇರಿ ಗೋಪಾಲಗೌಡರನ್ನು ಹೋಲುವ ಪಾತ್ರವಿದೆ. ನಟರಾಜ್ ಹುಳಿಯಾರ್ ಅವರ ‘ಕಾಮನ ಹುಣ್ಣಿಮೆ’ ಕಾದಂಬರಿ ಹಾಗೂ ‘ಡೆವಿಡ್ ಸಾಹೇಬರು ಮತ್ತು ಬಸವಲಿಂಗಪ್ಪನವರು’ ಕಥಾ ಸಂಕಲನಗಳಲ್ಲೂ ಭಿನ್ನ ಬಗೆಯ ರಾಜಕಾರಣದ ನೋಟಕ್ರಮವಿದೆ. ಇವರೆಲ್ಲ ಆಯಾ ಕಾಲದ ರಾಜಕಾರಣವನ್ನೊಳಗೊಂಡ ವಸ್ತುವನ್ನು ಹೇಗೆ ನಿಭಾಯಿಸಿದ್ದಾರೆ? ಕಲೆಯಾಗಿಸಿದ್ದಾರೆ? ಎಂಬುದು ಈಗಾಗಲೇ ಬಹಳಷ್ಟು ಚರ್ಚೆಯಾಗಿರುವ ಸಂಗತಿ. ಈ ರಾಜಕೀಯ ವಸ್ತುವನ್ನು ಕಥಾ ಹಂದರವಾಗಿಸಿಕೊ೦ಡಿರುವ ಕಾದಂಬರಿಗಳ ಸಾಲಿನಲ್ಲಿ ಈಗ ‘ಸುಳಿ’ ಕಾದಂಬರಿ ಕೂಡ ಸೇರ್ಪಡೆಯಾಗುತ್ತಿದೆ.

‘ಸುಳಿ’ ಕಾದಂಬರಿ ಸಮಕಾಲೀನ ರಾಜಕಾರಣವನ್ನು ವಸ್ತುವನ್ನಾಗಿ ಅನಾಮತ್ತು ಎತ್ತಿಕೊಂಡಿದೆ. ಅದನ್ನು ಸೂಕ್ಷ್ಮವಾಗಿ ನಿಭಾಯಿಸುತ್ತ, ವಾಚ್ಯವಾಗಿ ಕಳೆದು ಹೋಗಬಹುದಾಗಿದ್ದ ವಿವರಗಳನ್ನು ಕಲೆಯಾಗಿಸಲು ಯತ್ನಿಸಿದೆ. ಇಲ್ಲಿ ಮುಖ್ಯಮಂತ್ರಿ ಚಂದ್ರಹಾಸ ಎನ್ನುವ ರಾಜಕಾರಣಿಯ ಪಾತ್ರ ವಿಶಿಷ್ಟವಾಗಿ ಚಿತ್ರಿತವಾಗಿದೆ. ಈ ಪಾತ್ರಕ್ಕೆ ಪೂರಕವಾಗಿ ದೇವೇಗೌಡ, ರಾಮಕೃಷ್ಣ ಹೆಗಡೆ, ವಾಜಪೇಯಿ, ಐ.ಕೆ.ಗುಜ್ರಾಲ್, ಐ.ಜಿ.ಸನದಿ, ಎಸ್.ಎಂ.ಕೃಷ್ಣ, ವಿಜಯ ಸಂಕೇಶ್ವರ ಮೊದಲಾದ ರಾಜಕಾರಣಿಗಳ ವಿವರಗಳು ಪ್ರಾಸಂಗಿಕವಾಗಿ ಬರುತ್ತವೆ. ಈ ರಾಜಕಾರಣಿಗಳ ಕಾಲಘಟ್ಟದ ವಿವರಗಳನ್ನು ಇಲ್ಲಿ ಪೂರ್ತಿಯಾಗಿ ಶೋಧಿಸದಿದ್ದರೂ, ಚಂದ್ರಹಾಸನ ಪಾತ್ರದ ಅಗತ್ಯಕ್ಕೆ ಬೇಕಾದ ಸಂಗತಿಗಳನ್ನು ಪ್ರಸ್ತಾಪಿಸುತ್ತಾ, ರಾಜಕಾರಣದ ಪಲ್ಲಟಗಳನ್ನು ಕಾಣಿಸುತ್ತಾರೆ.
ಗುತ್ತಿಗೆ ಕಾರ್ಮಿಕನ ಮಗನಾದ ಚಂದ್ರಹಾಸ ಪ್ರೇಮಿಸಿದ ಹುಡುಗಿಯೊಂದಿಗೆ ತಿರಸ್ಕೃತನಾಗಿ, ಊರಲ್ಲಿ ಅವಮಾನಿತಗೊಂಡು ಅರ್ಧಕ್ಕೆ ಕಾಲೇಜು ಬಿಟ್ಟು ಕುಂದಾಪುರದಿ೦ದ ಹುಬ್ಬಳ್ಳಿಗೆ ಬಂದು ನೆಲೆಸುತ್ತಾನೆ. ಇಲ್ಲಿ ಹೊಟೇಲ್ ಉದ್ಯಮದಲ್ಲಿ ಯಶ ಕಂಡು, ರಾಮಕೃಷ್ಣ ಹೆಗಡೆಯವರ ಅಭಿಮಾನಿಯಾಗಿ ರಾಜಕಾರಣದ ಪಡಸಾಲೆಯಲ್ಲಿ ಬೆಳೆಯುತ್ತಾ, ಮುಂದೆ ಮುಖ್ಯಮಂತ್ರಿಯಾಗಿ ರೂಪಗೊಳ್ಳುವ ಕಥನದ ಹರಿವು ರೋಚಕವಾಗಿದೆ.
ಅಧಿಕಾರದ ಸವಿಯುಂಡ ಚಂದ್ರಹಾಸ ಮುಖ್ಯಮಂತ್ರಿಯಾಗಿದ್ದು, ಸ್ವತಃ ರಾಜೀನಾಮೆ ನೀಡಲು ಮುಂದಾಗಿರುವ ಪ್ರಕರಣ ಅಸಂಗತವಷ್ಟೇ ಅಲ್ಲ ಅಪರೂಪದ್ದೂ ಆಗಿದೆ. ಅದೂ ರಾಜಕಾರಣಕ್ಕೆ ಬರುವ ಮೊದಲು ನಡೆದ ಜಾತ್ರೆಯ ಗಲಭೆ ಪ್ರಕರಣಕ್ಕೆ ತಾನೇ ಹೊಣೆ ಎಂದರಿತು, ಪಾಪಪ್ರಜ್ಞೆಯನ್ನು ಅನುಭವಿಸುತ್ತ ಅಧಿಕಾರವನ್ನು ತಿರಸ್ಕರಿಸುವುದು ಕಷ್ಟ. ಈ ಹೊತ್ತು ಅಧಿಕಾರಕ್ಕಾಗಿ ಒಂದೇ ಕಣ್ಣಿನಿಂದ ಅಳುವ ರಾಜಕಾರಣಿಗಳನ್ನು ನಾವೆಲ್ಲ ಗಮನಿಸಿದ್ದೇವೆ. ರಾಜಕಾರಣಕ್ಕೆ ನೈತಿಕತೆಯಾಗಲಿ, ಪಾಪಪ್ರಜ್ಞೆಯಾಗಲೀ ಕಾಡುವುದೇ ಇಲ್ಲ. ವಾಮಮಾರ್ಗ ಹಿಡಿದಾದರೂ ಸರಿಯೇ ಅಧಿಕಾರದ ಗದ್ದುಗೆ ಏರುವುದೇ ಮುಖ್ಯ ಗುರಿಯಾಗಿರುವಾಗ, ಚಂದ್ರಹಾಸನ ಪಾತ್ರ ಅಂತಹ ನಂಬಿಕೆಗಳನ್ನು ಛಿದ್ರಗೊಳಿಸುತ್ತದೆ.
ಜೊತೆಗೆ ಅಧಿಕಾರಕ್ಕೆ ಏರಲು ಸೃಷ್ಟಿಯಾಗುವ ಕೋಮು ಧೃವೀಕರಣ, ಗಲಭೆಗಳ ವಿವರಗಳು ಜೀವತುಂಬಿಕೊ೦ಡ೦ತೆ ಮೂಡಿ ಬಂದಿವೆ. ಪರಸ್ಪರ ಮನುಷ್ಯ ಸಂಬ೦ಧಗಳನ್ನು ಪ್ರತ್ಯೇಕಿಸುತ್ತಲೇ ಅಮಾನವೀಯ ನಡುವಳಿಕೆಯ ಹಿನ್ನಲೆಯ ರಾಜಕಾರಣವನ್ನು ಕಂಡರಿಸುತ್ತದೆ. ಚಂದ್ರಹಾಸ ಪಾತ್ರದ ಜೊತೆಗೆ ಅನಿಕೇತನ, ನಟರಾಜ, ವೆಂಕಟೇಶ್, ಸುಕನ್ಯಾ, ಸ್ಪೂರ್ತಿ, ಸಾಧಿಕ್, ರಫಿ ಪಾತ್ರಗಳು ಕೂಡ ನಾಯಕನ ಪಾತ್ರದಷ್ಟೇ ಸಮರ್ಥವಾಗಿ ಚಿತ್ರಿತಗೊಂಡಿವೆ.
ಈ ಕಾದಂಬರಿ ತಾತ್ವಿಕವಾಗಿ ನೈತಿಕತೆ ಮತ್ತು ಪಾಪಪ್ರಜ್ಞೆಯ ಪ್ರಶ್ನೆಗಳನ್ನು ಎದುರಿಸುತ್ತಾ ಅವುಗಳಿಗೆ ಮುಖಾಮುಖಿಯಾಗುತ್ತ ಸಾಗುತ್ತದೆ. ಪ್ರಜ್ಞಾಪೂರ್ವಕವೋ, ಅಪ್ರಜ್ಞಾಪೂರ್ವಕವಾಗಿಯೋ ಘಟಿಸಿದ ತಪ್ಪುಗಳಿಗೆ ಪ್ರಾಯಶ್ಚಿತವನ್ನು ಬಯಸುತ್ತದೆ. ಬುದ್ಧ ಪ್ರತಿಪಾದಿಸುವ ಪ್ರಾಯಶ್ಚಿತದ ಮಾದರಿಯನ್ನು ಇಲ್ಲಿನ ಕೆಲ ಪಾತ್ರಗಳು ಪಾಲಿಸುವಂತೆ ತೋರುತ್ತದೆ. ಬುದ್ಧ ಹೇಳುತ್ತಾನೆ “ಮುಚ್ಚಿಡದೆ ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು. ತಪ್ಪು ಮಾಡಿದೆ ಎಂದು ಮನಸ್ಸಿನಿಂದ ವಿಷಾದಿಸುವುದು. ಯಾರಿಗಾದರೂ ತನ್ನಿಂದ ಹಾನಿಯಾಗಿದ್ದರೆ ಅದನ್ನು ಸರಿಪಡಿಸಲು ಪ್ರಯತ್ನಿಸುವುದು. ಭವಿಷ್ಯದಲ್ಲಿ ಆ ತಪ್ಪನ್ನು ಮತ್ತೆ ಮಾಡುವದಿಲ್ಲ ಎಂದು ಗಟ್ಟಿ ನಿರ್ಧಾರ ಮಾಡುವುದು” ಎಂದು ಪ್ರಾಯಶ್ಚಿತದ ಕುರಿತು ವಿವರಿಸುತ್ತಾನೆ. ಇಲ್ಲಿನ ಕೆಲ ಪಾತ್ರಗಳು ಬುದ್ಧಮಾರ್ಗದಲ್ಲಿ ನಡೆಯಲೆತ್ನಿಸುವಂತೆ ಎಸಗಿದ ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತವೆ. ತಪ್ಪಿನ ಅರಿವಾಗಿ ಪ್ರಾಯಶ್ಚಿತವನ್ನು ಅನುಭವಿಸುತ್ತವೆ.
ರಾಜಕಾರಣದ ಎಳೆಗಳೊಂದಿಗೆ ದಿನದ ಬದುಕಿನ ಕೌಟುಂಬಿಕ ವಿಘಟನೆಗಳನ್ನು, ಆಧುನಿಕ ಕಾಲ ತಂದೊಡ್ಡಿದ ಕೊಳ್ಳುಬಾಕ ಸಂಸ್ಕೃತಿಯ ಭಾಗವಾಗಿ ಹುಟ್ಟಿದ ದಿಢೀರ್ ಶ್ರೀಮಂತರಾಗಬೇಕೆನ್ನುವ ಭ್ರಮೆಗಳನ್ನೂ ಕಾದಂಬರಿ ಕಟ್ಟಿಕೊಡುತ್ತದೆ. ಕುಂದಾಪೂರ, ಹುಬ್ಬಳ್ಳಿ, ಬೆಂಗಳೂರು ಪರಿಸರಗಳಲ್ಲಿ ಸಾಗುವ ಕಾದಂಬರಿಯಲ್ಲಿನ ಭಾಷೆಯ ಬಳಕೆಯನ್ನು ಎಲ್ಲೂ ವಾಚ್ಯವಾಗದಂತೆ ಲೇಖಕರು ನಿರ್ವಹಿಸಿದ್ದಾರೆ. ಸಮಕಾಲೀನ ರಾಜಕೀಯ ವಿವರಗಳು ಬಂದಾಗ ಅಲ್ಲಲ್ಲಿ ಚೂರು ವಾಚ್ಯತೆ ನುಸುಳಿದಂತೆ ತೋರಿದರೂ ಅದನ್ನು ನಿರ್ವಹಿಸಿದ ಕುಸುರಿತನ ಎದ್ದು ಕಾಣುತ್ತದೆ. ಹಲವು ಬಗೆಯಲ್ಲಿ ಬಿಚ್ಚಿಕೊಳ್ಳುವ ‘ಸುಳಿ’ ಕಾದಂಬರಿ ಬಲೆಯಲ್ಲಿ ಸಿಲುಕಿದ ಜೇಡ ಅದರಿಂದ ಬಿಡಿಸಿಕೊಳ್ಳಲು ಯತ್ನಿಸುವ ಸೆಣಸಾಟದಂಥ ಬದುಕು ಒಡ್ಡಿದ ಕಾಠಿಣ್ಯದ ಸವಾಲು, ಅದರ ವಿಲವಿಲವನ್ನೂ ಕಾಣಿಸುತ್ತದೆ.
ಕಥೆ ಹೇಳುವ ಕಲೆ, ಪಾತ್ರಗಳ ಆಂತರ್ಯವನ್ನು ಶೋಧಿಸುವ ರೀತಿ, ಭಾಷೆಯನ್ನು ಹದವಾಗಿ ಬಳಸಿಕೊಳ್ಳುವುದನ್ನು ಅರಿತಿರುವ ಸತೀಶ್ ಅವರು ಮತ್ತಷ್ಟು ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಲಿ ಎಂದು ಬಯಸುತ್ತೇನೆ.






0 Comments