-ಮಂಜುಳ
ಮಾರ್ನಿಂಗ್ ವಾಕ್
ಇಂದೇಕೋ ಓಡಬೇಕೆನಿಸಲಿಲ್ಲ
ತುಸುವೇಗದ ನಡಿಗೆ ಹಿತವೆನಿಸಿತು
ತಂಪು ಎಂದಿಗಿಂತ ಇಂದು ಹೆಚ್ಚೇ ಇದೆ
ಇಬ್ಬನಿಗಳ ಸಿಂಚನ ಮರದೆಲೆಗಳಿಂದ
ಪಾರ್ಕ್ ಅದಾಗಲೇ ನೂರಾರು ಭಾವಗಳ
ಮನಗಳಿಂದ ಅಲಂಕರಗೊಂಡಂತೆ
ಪಾತ್ ವೇ ತುಂಬಾ ಓಡುವವರು, ಬಿರುಸು-
ಮೃದು ನಡುಗೆಯವರು ಹೀಗೆ ಸಾಗಿದೆ ಭಾವಯಾನ
ಅಲ್ಲಲ್ಲಿ ಇರುವ ಚಂದದ ಬೆಂಚುಗಳ
ಕಥೆ ಇನ್ನಷ್ಟು ರೋಚಕ;
ಕೊಡೆ ಅಡ್ಡಲಾಗಿಸಿದ ಪ್ರಣಯದ ಜೋಡಿ,
ಮುನಿಸಿ ಮುಖ ತಿರುವಿಕೊಂಡ ಮಗದೊಂದು ಜೋಡಿ
ರಾಜ್ಯ ರಾಜಕೀಯದ ಮುಖ್ಯ ಕಛೇರಿ
ಅನಿಸುವ ಬಿರುಸಿನ ಚರ್ಚೆಯ
ಹಿರಿಯರ ಗುಂಪು; ಮಕ್ಕಳೆಲ್ಲಾ ಹೊರದೇಶದಲ್ಲಿ
ಎನ್ನುವ ಅಮ್ಮಂದಿರ ಗುಂಪು
ನೀರವತೆಯ ಪದತಲದಲ್ಲಿ ನೇವರಿಕೆ
ಅರಸಿ ಬಂದಂತೆ ಒಬ್ಬರೇ ಕುಳಿತವರೆಷ್ಟೋ,
ಬದುಕು ಹೀಗೆ ಇರುತ್ತದೆಂಬ ಕನವರಿಕೆಯ
ನವಜೋಡಿಗಳ ಆಲಾಪ
ಬದುಕನ್ನು ಒಬ್ಬರೇ ಎದುರಿಸಿ ಈಜಿ ಬಂದಂತೆ,
ನಿರ್ಭರವಾಗಿ ನಡೆಯುತ್ತಿರುವ ಧೃಡತೆ ಕೆಲವರಿಗೆ,
ತಲೆಗೂದಲು ಬೆಳ್ಳಗಾದರೂ ಮಾತುಗಳ ಮಧ್ಯೆದ ಜಗಳದೊಂದಿಗೆ ಜೊತೆ ನಡೆಯುವವರೆಷ್ಟೋ
ಮರಗಿಡಗಳ ಬೆರಳಿಂದ ನೇವರಿಸುತ್ತಾ
ನಿಧಾನವಾದ ನಡುಗೆ ತಡವರಿಸಿ ನಿಂತಿತು, ಮರವೊಂದರ ಮೇಲಿನ ಹಾರ್ಟ್ ಶೇಪ್ ಸಿಂಬಲ್ ಒಳಗೆ ಕೆತ್ತಿದ ಎರಡು ಇಂಗ್ಲಿಷ್ ಇನಿಷಿಯಲ್ ಗಳ ಮುಂದೆ
ಇಂದಿಗೂ ಇವರು ಒಟ್ಟಿಗಿದ್ದಾರೆಯೇ?
ಅಂದು ಮಾಡಿದ ಆಣೆ ಪ್ರಮಾಣದ ಟೋಕನ್
ಅದೆಲ್ಲಿ ಹೋದವೋ? ನಗುಮೊಗದ ವಧುವರರ ವೇದಿಕೆಯಡಿ ಅದೆಷ್ಟು ಭಾವಗಳ ಸಮಾಧಿಯಾಗಿದೆಯೋ?
ತಾತನೊಬ್ಬ ಮೊಮ್ಮಗನನ್ನು ಉಯ್ಯಾಲೆಯಲ್ಲಿ
ತೂಗುತ್ತಿರುವ; ಒಮ್ಮಲೇ ರತನ್ ಟಾಟಾ ನೆನಪಾದರು , ಬದುಕೆಂದರೆ ರೇಸಿಗೆ ಬಿದ್ದಂತೆ
ಒಂದಷ್ಟು ಓದು ಹಟಕ್ಕೆ ಬಿದ್ದಂತೆ ಒಂದು ನೌಕರಿ
ಅಳೆದು ತೂಗಿ ವ್ಯವಹಾರದಂತೆ ಮಾಡಿಕೊಂಡ ವಿವಾಹ ಒಂದೆರಡು ಮನೆ ಕಟ್ಟಿ, ಒಂದೆರಡು ಮಕ್ಕಳ ಹೆತ್ತು, ಮತ್ತವರನ್ನ ದಾಟಿಸುವುದು ಇಷ್ಟೆಯೇ?
ಇದರಲ್ಲೇ ಸಾಗಿ ಮಕ್ಕಳ ಮಕ್ಕಳ ಕಂಡು ಕೊನೆಯಾಗುವುದೇ?
ಪಾಥ್ ವೇ ಪಾರ್ಕ್ ಸುತ್ತಣ ಬೆಂಚ್ ಗಳು
ಇದಷ್ಟೇ ಸಾರಿದವು; ಕಾಣದ್ದು ಬಹಳಷ್ಟು ಇದೆ,
ಬದುಕು ಸಾಕೆನಿಸುವ ದುರ್ಬರ ಗಳಿಗೆಳೆಲ್ಲಾ ದಾಟಿ
ಪಾಲಿಗೆ ಬಂದ ಕರ್ಮಗಳ ಎದುರಿಸಿ ಸಾಗಿದ /ಸಾರ್ಥಕತೆ!
ಪ್ರತಿ ಜೀವಿತದ ಮಾಪನ ಬೇರೆಯವರ ಜೀವಿತದೊಂದಿಗೆ ಹೋಲಿಕೆಯಲ್ಲ,
ಪ್ರತಿ ಜೀವಿಗೂ ಪ್ರತ್ಯೇಕ ಪ್ರಶ್ನೆಪತ್ರಿಕೆ
ಎದುರಿಸಿದ ರೀತಿಯೇ ಬರೆವ ಉತ್ತರ
ಕೊನೆಯ ರೌಂಡ್ ಮುಗಿಸಿ ಗೇಟ್ ತಲುಪುವ
ಗಳಿಗೆ; ತುಸುವೇ ಉಳಿದ ಬಿಳಿಕೂದಲು, ಕಿವಿಗೆ ಶ್ರವಣ ಸಾಧನ,ಬಿರುಸು ನಡುಗೆಯ ವಯಸ್ಸಾದ
ಆತನನ್ನೇ ನೋಟ ತಿಳಿವಿಗೆ ಬರದೇ ಹಿಂಬಾಲಿಸಿತು
ಇಷ್ಟು ವಯಸ್ಸಾದಾಗ ನೀ ಒಂಟಿಯಾದರೆ ನಾ ಜೊತೆಯಿರಬೇಕಲ್ಲವೇ ಎಂಬ ಆಲೋಚನೆ ಅರಿವಿಲ್ಲದೇ ಸುಳಿಯಿತು..






ಆಹಾ… ಇದು ಕೇವಲ “ಮಾರ್ನಿಂಗ್ ವಾಕ್” ಅಲ್ಲ, ಇದು *ಬದುಕಿನ ಒಂದು ಸುಂದರ ಪ್ರಯಾಣ ವಾಗಿದೆ.
ನೀವು ಬರೆದ ಪ್ರತಿಯೊಂದು ಸಾಲು ಓದುಗನ ಸ್ವಂತ ಅನುಭವದ ಮೇಲಕು ಹಾಕುವಂತೆ ಮಾಡುತ್ತದೆ.
ಮನುಷ್ಯನ ನಾನಾ ಜೀವನದ ನಾನಾ ಹಂತವನ್ನು ಕವನದಲ್ಲಿ ಒಂದು ಅದ್ಭುತ ದೃಶ್ಯ ಕಾವ್ಯವಾಗಿ ಅರವಮಿದೆ.
ಪಾರ್ಕ್ ಬೆಂಚ್ ನಂತೆ ಮನಸ್ಸಲ್ಲಿ ಕೂರಿಸಿಬಿಟ್ಟಿತು.
“ಪಾರ್ಕ್ ಅದಾಗಲೇ ನೂರಾರು ಭಾವಗಳ ಮನಗಳಿಂದ ಅಲಂಕರಗೊಂಡಂತೆ”* ಒಂದು ಬೆಂಚ್‌ಗೆ ಸಾವಿರ ಕಥೆ. ಪ್ರಣಯ, ಕೋಪ, ಏಕಾಂಗಿತನ, ರಾಜಕೀಯ ಚರ್ಚೆ… ಎಲ್ಲವೂ ಒಂದೇ ಪಾತ್ ವೇಯಲ್ಲಿ.
*”ಮರವೊಂದರ ಮೇಲಿನ ಹಾರ್ಟ್ ಶೇಪ್ ಸಿಂಬಲ್ ಒಳಗೆ ಕೆತ್ತಿದ ಎರಡು ಇಂಗ್ಲಿಷ್ ಇನಿಷಿಯಲ್ ಗಳ ಮುಂದೆ”*
ಇದು ಚುಚ್ಚಿತು. ಅಂದು ಮಾಡಿದ ಆಣೆ-ಪ್ರಮಾಣ ಇವತ್ತು ಎಲ್ಲಿದೆ? ವೇದಿಕೆಯಡಿ ಸಮಾಧಿಯಾದ ಭಾವಗಳೆಷ್ಟು? ಪ್ರಶ್ನೆ ಬಿಟ್ಟು ಹೋಗುತ್ತೆ.
*”ಪ್ರತಿ ಜೀವಿಗೂ ಪ್ರತ್ಯೇಕ ಪ್ರಶ್ನೆಪತ್ರಿಕೆ, ಎದುರಿಸಿದ ರೀತಿಯೇ ಬರೆವ ಉತ್ತರ”*
ಇದೇ ಕೊನೆಯ ಸತ್ಯ. ಹೋಲಿಕೆ ಬೇಡ. ರೇಸ್ ಬೇಡ. ರತನ್ ಟಾಟಾ ನೆನಪು ಬಂದು “ಬದುಕು ಹಟ” ಅಂತ ಹೇಳಿದ್ದು ಗಟ್ಟಿ ಹೊಡೆತ.
ಮತ್ತು ಕೊನೆಯಲ್ಲಿ ಆ ವಯಸ್ಸಾದ ತಾತನನ್ನು ನೋಡಿ ಬಂದ “ನೀ ಒಂಟಿಯಾದರೆ ನಾ ಜೊತೆಯಿರಬೇಕಲ್ಲವೇ” ಅನ್ನೋ ಆಲೋಚನೆ…
ಇದೇ ಪ್ರೀತಿಯ ಅತ್ಯುನ್ನತ ರೂಪ. ಮಾತಿಲ್ಲ, ಡ್ರಾಮಾ ಇಲ್ಲ, ಕೇವಲ ಜವಾಬ್ದಾರಿ.
ನಿಮ್ಮ ಬರಹದಲ್ಲಿ ಬೆಂಗಳೂರಿನ ಯಾವುದೋ ಪಾರ್ಕ್‌ನ ಬೆಳಗಿನ ವಾಸನೆ, ತಂಪು, ಇಬ್ಬನಿ ಎಲ್ಲಾ ಇದೆ.
ಮುಂದಿನ ವಾಕ್‌ನಲ್ಲಿ ಇನ್ನೇನು ಕಾಣಿಸಿತು ಅಂತೂ ಹೇಳಿ ಕೇಳೋಣ.