
-ಸಂಕೇತ್ ಗುರುದತ್ತ
ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ಚಿತ್ರಕಲಾ ಶಿಲ್ಪಿ ಶ್ರೀ ಡಿ ವ್ಹಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.

ಈ ಟ್ರಸ್ಟಿನ ಮೂಲಕ ಹಾಲಭಾವಿ ಅವರ ಹೆಸರಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಹಾಲಭಾವಿ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಾ ಬಂದಿದೆ.
ಈಗ ಈ ಟ್ರಸ್ಟ್ ಮತ್ತೊಂದು ಹೆಜ್ಜೆ ಮುಂದಿಟ್ಟು ನಾಡಿನ ಶ್ರೇಷ್ಟ ಚಿತ್ರಕಲಾವಿದರನ್ನು ಆಹ್ವಾನಿಸಿ ಅವರ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಈಗ ಮೊಟ್ಟ ಮೊದಲ ಬಾರಿಗೆ ನಾಡಿನ ಖ್ಯಾತ ಚಿತ್ರಕಲಾವಿದರು, ನಗುಮೊಗದ ಸಹೃದಯಿ ಪ್ರೊ.ಬಾಬು ಜತ್ತಕರ್ ಅವರನ್ನು ಆಹ್ವಾನಿಸಿದ್ದಾರೆ. ಇದೇ ೨೦೨೬ರ ಆಗಸ್ಟ್ ೨೦, ೨೧ ಹಾಗೂ ೨೨ ರಂದು ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ `ಸಾಧಕರೊಂದಿಗೆ ಚಿಂತನ ಮಂಥನ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾದ ರಂಜಾನ್ ದರ್ಗಾ ಅವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಾಲಭಾವಿ ಟ್ರಸ್ಟಿನ ಅಧ್ಯಕ್ಷರಾದ ಬಿ ಮಾರುತಿ ಅವರು ವಹಿಸುತ್ತಾರೆ. ಪ್ರಾಸ್ತಾವಿಕ ನುಡಿಯನ್ನು ಟ್ರಸ್ಟಿನ ಸದಸ್ಯರಾದ ಸುರೇಶ್ ಹಾಲಭಾವಿ ಅವರು ಆಡಲಿದ್ದಾರೆ. ಟ್ರಸ್ಟಿನ ಸದಸ್ಯರೆಲ್ಲರೂ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಮೂರೂ ದಿನಗಳೂ ಜತ್ತಕರ್ ಅವರ ಕಲಾಕೃತಿಗಳ ಪ್ರದರ್ಶನವಿರುತ್ತದೆ. ಎರಡೂ ಮತ್ತು ಮೂರನೆಯ ದಿನಗಳಲ್ಲಿ ಸ್ಲೈಡ್ ಶೋ ಹಾಗೂ ಸಂವಾದಗಳು ನಡೆಯಲಿವೆ. ಈ ಅವಕಾಶವು ಬಾಬು ಜತ್ತಕರ್ ಅವರಲ್ಲಿನ ಕಲಾ ನೈಪುಣ್ಯತೆಗೆ ಸಿಕ್ಕ ಗೌರವವಾಗಿದೆ.

ಹಾಲಭಾವಿ ಅವರಂತಹ ಹಿರಿಯ ಕಲಾವಿದರ ಟ್ರಸ್ಟಿನ ಅಧ್ಯಕ್ಷರಾದ ಬಿ.ಮಾರುತಿ ಅವರು ತಮ್ಮ ಟ್ರಸ್ಟಿನ ಸದಸ್ಯರಾದ ಸುರೇಶ್ ಹಾಲಭಾವಿ, ಎಫ್.ವ್ಹಿ ಚಿಕ್ಕಮಠ, ಡಿ ಎಂ ಬಡಿಗೇರ, ಡಾ. ಬಿ.ಎಲ್ ಚವ್ಹಾಣ, ಡಾ. ಬಿ.ಎಚ್, ಕುರಿಯವರ, ಎಸ್.ಕೆ ಪತ್ತಾರ, ಡಾ. ರೇಣುಕಾ ಮಾರ್ಕಂಡೇಯ, ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಹಾಗೂ ಟ್ರಸ್ಟಿಗೆ ಸಂಬಂಧಿಸಿದವರೆಲ್ಲರ ಒಮ್ಮತದ ಈ ಆಯ್ಕೆಗೆ ಸಮ್ಮತಿ ಸೂಚಿಸಿದ್ದಾರೆ. ಜತ್ತಕರ್ ಅವರ ರೇಖೆಗಳಲ್ಲಿನ ಹಿಡಿತ ಹಾಗೂ ಕಪ್ಪು-ಬಿಳುಪಿನಲ್ಲಿನ ಕಲಾಗಾರಿಕೆಯನ್ನು ಇವರು ಗುರುತಿಸಿದ್ದಾರೆ. ಅಲ್ಲದೇ ಜತ್ತಕರ್ ಅವರಲ್ಲಿನ ಸಾಮರಸ್ಯದ ಭಾವ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಗುಣಗಳೂ ಇಲ್ಲಿ ಪ್ಲಸ್ ಆಗಿವೆ.
ಶ್ರೇಷ್ಟ ಕಲಾವಿದರ ಈ ಟ್ರಸ್ಟಿನ ಮೊದಲ ಅವಕಾಶ ತಮಗೆ ದೊರಕಿದ್ದು ತಮ್ಮ ಪುಣ್ಯವೆನ್ನುತ್ತಾರೆ. ಚಿಂತನ-ಮಂಥನಕ್ಕೆ ಒಪ್ಪಿಕೊಂಡ ಜತ್ತಕರ್ ಅವರು ಟ್ರಸ್ಟಿನ ಅಧ್ಯಕ್ಷರಾದ ಬಿ ಮಾರುತಿ ಅವರಿಗೂ ಹಾಗೂ ಸದಸ್ಯರೆಲ್ಲರಿಗೂ ಕೃತಜ್ಞತೆಯನ್ನು ತಿಳಿಯ ಬಯಸುತ್ತಾರೆ.
ಇಂತಹ ಬಹುಮುಖ ಪ್ರತಿಭೆಯ ಕಲಾವಿದರನ್ನು ನಮ್ಮ ಭಾಗದ ಕಲಾ ವಿದ್ಯಾರ್ಥಿಗಳಿಗೆ ಹಾಗೂ ಕಲಾಸಕ್ತರಿಗೆ ಪರಿಚಯಿಸುವುದಕ್ಕಾಗಿಯೇ ಪ್ರೊ.ಬಾಬು ಜತ್ತಕರ್ ಅವರ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕೆಂಬುದು ಟ್ರಸ್ಟಿನವರ ಆಶಯ.
ಹಿರಿಯ ಕಲಾವಿದ ಜತ್ತಕರ್‌ರ ಬಗ್ಗೆ

ಸರಳ-ಸಜ್ಜನಿಕೆಯ ಸ್ನೇಹಮಯಿ ಹಿರಿಯ ಕಲಾವಿದ ಪ್ರೊಫೆಸರ್ ಬಾಬು ಜತ್ತಕರ್ ಅವರು ಕರ್ನಾಟಕ ಚಿತ್ರಕಲಾ ಪರಿಷತ್ತಿನ ದೃಶ್ಯಕಲಾ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರು.
ಅನ್ವಯಕಲಾ ವಿಭಾಗಕ್ಕೆ ಮುಖ್ಯಸ್ಥರಾಗಿದ್ದರು. ಸುಮಾರು ಮುವತ್ತು ವರ್ಷಗಳು ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಅನೇಕ ಜಾಹೀರಾತು ಸಂಸ್ಥೆ ಹಾಗೂ ನಾನಾ ಪತ್ರಿಕೆಗಳಿಗೆ ಕಲಾವಿನ್ಯಾಸಕರಾಗಿ ಶ್ರಮಿಸಿದ ಹೆಗ್ಗಳಿಕೆ ಇವರಿಗಿದೆ. ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದಲ್ಲಿ ಸಕ್ರಿಯರಾಗಿದ್ದು ಪ್ರಸ್ತುತ ಈ ಸಂಘದ ಉಪಾಧ್ಯಕ್ಷರಾಗಿದ್ದಾರೆ.
ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಅನೇಕ ಕಲಾ ಪ್ರದರ್ಶನಗಳನ್ನು ಏರ್ಪಡಿಸಿ ಕಲೆಗೆ ಸಂಬಂಧಿಸಿದ ಉಪನ್ಯಾಸಗಳನ್ನು ನೀಡಿ ಕಲಾಸಕ್ತರ ಮತ್ತು ಕಲಾವಿರ್ಮಶಕರ ಮೆಚ್ಚುಗೆಯನ್ನು ಪಡೆದವರು. ಇವರ ಕಲಾಕೃತಿಗಳು ನೋಡುಗರಿಗೆ ವಿಶಿಷ್ಠ ಅನುಭವವನ್ನು ನೀಡುತ್ತವೆ.
ನವದೆಹಲಿಯ ಇಂಡಿಯ ಇಂಟರ್ ನ್ಯಾಷನಲ್ ಫ್ರೆಂಡ್ಯಿಪ್ ಸೊಸೈಟಿಯ ‘ಭಾರತ ಜ್ಯೋತಿ’ ಪ್ರಶಸ್ತಿ, ಆಂಧ್ರ ಪ್ರದೇಶದ ‘ನವರಂಗ್ ಆರ್ಟ್ ಅಕಾಡೆಮಿ’ ಪ್ರಶಸ್ತಿ, ಕಲಾದರ್ಪಣ ಪ್ರಶಸ್ತಿ, ವಿಶ್ವಕರ್ಮ ಚಿತ್ರಕಲಾ ಭೂಷಣ ಪ್ರಶಸ್ತಿ, ವರ್ಣಕಲಾಶ್ರೀ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳು ಇವರನ್ನು ಹುಡುಕಿ ಬಂದಿವೆ.
ನಾಡಿನ ಯಾವುದೇ ಭಾಗದ ಯಾವುದೇ ಕಲಾವಿದರು ಬೆಂಗಳೂರಿಗೆ ಬಂದು ಇವರನ್ನು ಸಂಪರ್ಕಿಸಿದಲ್ಲಿ ಸಹಾಯ ಹಸ್ತ ಗ್ಯಾರಂಟಿ. ಅರಸಿ ಬಂದವರನ್ನು ನಗು ಮುಖದಿಂದಲೇ ನೆರವು ನೀಡುವ ಸಹೃದಯಿ ಬಾಬು ಜತ್ತಕರ್ ಅವರಲ್ಲಿದೆ. ಇಂತಹ ವಿಶಾಲ ಮನೋಭಾವದ ಕಲಾವಿದರಿಗೆ ಈ ರೀತಿಯ ಮತ್ತಷ್ಟು ಅವಕಾಶಗಳು ಹುಡುಕಿ ಬರಲೆಂದು ಆಶಿಸುವ.






0 Comments