ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜಕೀಯ ತಟಸ್ಥ ಬುದ್ಧಿಜೀವಿಗಳು

ಮೂಲ -ಒಟ್ಟೊ ರೆನೆ ಕ್ಯಾಸ್ಟಿಲೊ
ಕನ್ನಡಕ್ಕೆ – ಸುರೇಶ್ ಕಂಜರ್ಪಣೆ

ಒಂದು ದಿನ ನನ್ನ ದೇಶದ
ತಟಸ್ಥ ಬುದ್ಧಿಜೀವಿಗಳನ್ನು
ನಮ್ಮ ಬಲು ಸರಳ‌ಮಂದಿ ವಿಚಾರಣೆಗೊಳಪಡಿಸಲಿದ್ದಾರೆ
.
ದೇಶ ಪುಟ್ಟ ಬೆಂಕಿಯಂತೆ
ನಿಧಾನ ಸಾಯುವಾಗ
ಏನು ಮಾಡುತ್ತಿದ್ದಿರಿ
ಎಂದು ಕೇಳುತ್ತಾರೆ

ಯಾರೂ ಅವರ ದಿರಿಸಿನ ಬಗ್ಗೆ ಕೇಳುವುದಿಲ್ಲ
ಊಟವಾದ ಮೇಲಿನ ಸುದೀರ್ಘ ವಿಶ್ರಾಂತಿ ಬಗ್ಗೆ
ಯಾರಿಗೂ ಆಸಕ್ತಿಯಿಲ್ಲ
” ಶೂನ್ಯದ ಐಡಿಯಾ” ಬಗ್ಗೆ ಅವರ ಶುಷ್ಕ ವಾಗ್ಯುದ್ಧದ
ಬಗ್ಗೆ ಕೇಳುವುದಿಲ್ಲ
ದುಬಾರಿ‌ ವೆಚ್ಚದ ಶಿಕ್ಷಣದ ಬಗ್ಗೆ ಕೇರು ಮಾಡುವುದಿಲ್ಲ
ಗ್ರೀಕ್ ಪುರಾಣಗಳ ಬಗ್ಗೆ ಪ್ರಶ್ನೆಗಳಿರುವುದಿಲ್ಲ
ಅಥವಾ ಅವರೊಳಗೊಬ್ಬ
ಹೇಡಿ ಸಾವನ್ನಪ್ಪಿದಾಗ ಜಿನುಗುವ ಜುಗುಪ್ಸೆ ಬಗ್ಗೆ
.
ಸುಳ್ಳಿನ ನೆರಳಿನಲ್ಲಿ ಹುಟ್ಟುವ ಅವರ ಅಸಂಬದ್ಧ ಸಮರ್ಥನೆಗಳ ಬಗ್ಗೆ ಕೇಳುವುದಿಲ್ಲ

ಆ ದಿನ ಸರಳ ಮನುಷ್ಯರು ಬರುತ್ತಾರೆ
ತಟಸ್ಥ ಬುದ್ಧಿಜೀವಿಗಳ ಪುಸ್ತಕ, ಕವನಗಳಲ್ಲಿ ಜಾಗವಿರದ ಮಂದಿ
ಆದರೆ ದಿನವೂ ಅವರ ಹಾಲು ಬ್ರೆಡ್
ಮೊಟ್ಟೆ ಮನೆಗೆ ಪೂರೈಸಿದವರು
ಅವರ ಕಾರು ಚಾಲನೆ ಮಾಡಿದವರು
ಅವರ ನಾಯಿ, ಹೂತೋಟ ಪಾಲನೆ ಮಾಡಿದವರು
ಅವರಿಗಾಗಿ ದುಡಿದವರು
ಅವರು ಕೇಳುತ್ತಾರೆ

ಬಡವರು ನರಕ ಅನುಭವಿಸಿದಾಗ
ಬದುಕು ಸುಟ್ಟಾಗ
ನೀವೇನು ಮಾಡಿದಿರಿ
ನನ್ನ ಪ್ರೀತಿಯ ದೇಶದ ತಟಸ್ಥ ಬುದ್ಧಿಜೀವಿಗಳೇ
ನೀವು ಉತ್ತರ ಕೊಡಲಾರಿರಿ

ಮೌನದ ಹದ್ದು ನಿಮ್ಮ ನೆಣ ತಿನ್ನಲಿದೆ
ನಿಮ್ಮ ಸಂಕಷ್ಟವೇ
ನಿಮ್ಮ ಆತ್ಮವ ಕುಕ್ಕಲಿದೆ
ನೀವು ಲಜ್ಜೆಯಲ್ಲಿ ಮೂಕವಾಗುವಿರಿ

ಒಟ್ಟೊ ರೆನೆ ಕ್ಯಾಸ್ಟಿಲೊ ಅವನ “ತಟಸ್ಥ ಬುದ್ಧಿಜೀವಿಗಳು” ಕವನ ಜಗದ್ವಿಖ್ಯಾತ. ಜಾನ್ ಅಬ್ರಹಾಂ ಅವರ ಮಲಯಾಳಂ ಚಿತ್ರದಲ್ಲಿ ಈ ಹಾಡು ಇದೆ.

 ಒಟ್ಟೊ ರೆನೆ ಕ್ಯಾಸ್ಟಿಲೊ ( ೧೯೩೬ರಲ್ಲಿ ಜನನ) ಗ್ವಾಟೆಮಾಲಾದ ಕವಿ, ಕ್ರಾಂತಿಕಾರಿ, ಗೆರಿಲ್ಲಾ ಯೋಧ ೧೯೫೪ರಲ್ಲಿ ಸಿಐಎ ಕೈಗೊಂಬೆಗಳು ಅಲ್ಲಿನ ಪ್ರಜಾಸತ್ತಾತ್ಮಕ ಸರಕಾರವನ್ನು ಉರುಳಿಸಿದಾಗ ಕ್ಯಾಸ್ಟಿಲೋ ಎಲ್ ಸಾಲ್ವಡೋರ್ ಗೆ ದೇಶಭ್ರಷ್ಟನಾಗಿ ಹೋದಾಗ ಅಲ್ಲಿನ‌ ಲೇಖಕರು ಅವನ ಕೃತಿಗಳನ್ನು ಪ್ರಕಟಿಸಿದರು.

ಗ್ವಾಟೆಮಾಲಾದ ಸರ್ವಾಧಿಕಾರಿ ೧೯೫೭ರಲ್ಲಿ ಸತ್ತಾಗ ಕ್ಯಾಸ್ಟಿಲೊ ದೇಶಕ್ಕೆ ಮರಳಿದ. ೧೯೫೯ರಲ್ಲಿ ಜರ್ಮನಿಗೆ ತೆರಳಿ ಉಚ್ಛ ಶಿಕ್ಷಣ ಪಡೆದು ೧೯೬೪ರಲ್ಲಿ‌ಮತ್ತೆ ಗ್ವಾಟೆಮಾಲಾಕ್ಕೆ ಮರಳಿ ಕಾರ್ಮಿಕ‌ಪಕ್ಷ ಸೇರಿದ.

ಅದೇ ವರ್ಷ ಆತನನ್ನು ಬಂಧಿಸಿದರೂ ಜೈಲಿನಿಂದ ತಪ್ಪಿಸಿಕೊಂಡು ಗುಪ್ತವಾಗಿ ಯುರೋಪಿಗೆ ಹೋದ. ವರ್ಷದೊಳಗೆ ಮರಳಿ ಜಕಾಪಾ ಬೆಟ್ಟಗಳಲ್ಲಿ ಕ್ರಿಯಾಶೀಲವಾಗಿದ್ದ ಗೆರಿಲ್ಲಾ ಪಡೆ ಸೇರಿದ.

೧೯೬೭ರಲ್ಲಿ ಇತರ ಕ್ರಾಂತಿಕಾರಿಗಳೊಂದಿಗೆ ಕ್ಯಾಸ್ಟಿಲೋನನ್ನೂ ಸೆರೆ ಹಿಡಿದು ಜೀವಂತ ಸುಟ್ಟು ಕೊಲ್ಲಲಾಯಿತು. ೧೮ನೇ ವರ್ಷಕ್ಕೆ ದೇಶಭ್ರಷ್ಟನಾಗಿದ್ದ ಕ್ಯಾಸ್ಟಿಲೊ‌ ಮರಳಿ‌ಕ್ರಾಂತಿಯಲ್ಲಿ ತೊಡಗಿ, ಹುತಾತ್ಮನಾದಾಗ ಅವನ ವಯಸ್ಸು ೩೧.

‍ಲೇಖಕರು Admin

25 July, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading