ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಣಹದ್ದು ಮತ್ತು ಹೆಣಹದ್ದು..

-ಡಾ. ಸಿ ಬಿ ಐನಳ್ಳಿ

1.ದೇಶೋದ್ಧಾರಕನ ಸ್ವಗತ

ಉಗ್ರ ನಕ್ಸಲ ದೇಶದ್ರೋಹಿ
ಪದಗಳ ಪರಿಚಯವೇ ಇಲ್ಲ
ಪತ್ರಿಕೆ ಓದಲಿಲ್ಲ ಟಿವಿ ನೋಡಲಿಲ್ಲ
ನಾಜೂಕು ನಾಗರಿಕತೆ ಗಳಿಸಲಿಲ್ಲ
ಗಮಾರಗಳು

ರಟ್ಟೆ ಮುರಿದು ದವಸಧಾನ್ಯ
ಬೆಳೆಯುತ್ತವೆ ಒಕ್ಕುತ್ತವೆ
ಬೆಳೆದದ್ದ ಹಣವಾಗಿಸುವ ಛಾತಿಯಿಲ್ಲ
ಗುಗ್ಗುಗಳಿಗೆ
ಮಿಕ್ಕವು ನೂರು ಇನ್ನೂರಕ್ಕೆ
ಕತ್ತೆಯಂತೆ ದುಡಿಯುತ್ತವೆ
ಉಳಿಯುವುದೇ ಮೂರು ಕಾಸು
ಅವರಿವರ ಕಷ್ಟಕ್ಕಾಗುವ ಗತ್ತು ಬೇರೆ
ಈಗಂತೂ ಬಿಟ್ಟಿ ಭಾಗ್ಯಗಳ ತಿಂದು
ಕಣ್ಣು ಮುಚ್ಚಿವೆ

ನಗರದ ಬೀದಿಬೀದಿಗಳಲಿ
ತರಕಾರಿ ಕಾಳುಕಡಿ ಹಣ್ಣು
ಮೀನು ಮಾಂಸ ಬಟ್ಟೆಬರಿ ಮಾರುತ್ತವೆ
ರಸ್ತೆ ಹಾಕುತ್ತವೆ
ರಕ್ಕಸ ಕಟ್ಟಡ ಕಟ್ಟುತ್ತವೆ
ಹಣೆಬರಹ ಕೈ ಕೊಟ್ಟರೆ
ರಂಜಿಸಿ ರೊಕ್ಕ ಬೇಡುತ್ತವೆ
ಮಲಗುತ್ತವೆ ಎಲ್ಲೆಂದರಲ್ಲಿ
ದೇಶಕ್ಕೊಂದು ಅಸಹ್ಯ

ಚರಂಡಿ ಪಾಯಿಖಾನೆಗಳ ತೊಳೆಯುತ್ತವೆ
ಬೀದಿಕಸ ಗಲೀಜುಗಳ ಗುಡಿಸುತ್ತವೆ
ಒಂದು ದಿನ ಈ ಕೈಗಳಿಲ್ಲವೆಂದರೆ
ಬಸ್ಟ್ಯಾಂಡು ಬೀದಿ ಕಚೇರಿಗಳು
ಕಳೆದುಕೊಳ್ಳುತ್ತವೆ ಆಕಾರ
ನಾರುತ್ತವೆ ಹೆಣದಂತೆ
ಆದರೂ ಪಂಕ್ಚುಯಾಲಿಟಿಯಿಲ್ಲ
ಪರ್ಸನಲ್ ಹೈಜೀನ್ ನ
ತಿಳುವಳಿಕೆಯಿಲ್ಲ
ಪಶುಗಳು

ಓದು ಇಲ್ಲ ವಿದ್ಯೆ ಇಲ್ಲ
ಓದಿದವಕೆ ಗುಡಿ ಗಡಿ
ಮಡಿಗಳ ಅರಿವಿಲ್ಲ
ಅಡ್ಡದಾರಿಯಲಿ ನೌಕರಿ
ಮುಕ್ಕಾಲು ಪಾಲು ಮಂದಿಗೆ
ಹೋಮ ಪೂಜೆಗಳ ಗಂಧಗಾಳಿ ಇಲ್ಲ

ಬಾವಿ ಮಂದಿರ ರುದ್ರಭೂಮಿಗೆ
ಸಮಾನ ಪ್ರವೇಶ !!!
ಇನ್ನೇನಪ್ಪಾ ಬೇಕು ?
ಚೂರೇಚೂರು ಧರ್ಮಸೂಕ್ಷ್ಮತೆಯಿದ್ದರೆ ಸಾಕು
ಧರ್ಮವೇ ತಿಳಿದಿಲ್ಲವೆಂದರೆ
ದೇಶ ತಿಳಿದೀತೇ ?
ಸಾಕು ಬಿಡಿ ಇಂಥವುಗಳನ್ನ
ಕಟ್ಟಿಕೊಂಡು ಹೆಣಗಿದ್ದು
ದೇಶ ಉದ್ಧಾರ…..

2.ರಣಹದ್ದು ಮತ್ತು ಹೆಣಹದ್ದು

ಎಸೆದಿದ್ದ ಹೆಣದೊಳಗಿನ
ಕಳ್ಳುಪಚ್ಚಿಗಳ ತಂದು ತಿಂದು ತೇಗಿ
ಉಳಿದದ್ದನ್ನ ರಣಹದ್ದು ನಾಳೆಗಿಟ್ಟುಕೊಂಡಿದೆ
ಕೊಂಬೆಯ ತುದಿಯಿಂದಲೇ ನಿಗಾಯಿಟ್ಟಿದೆ
ಮೂಲದ ಉಳಿಕೆ ಪಳಿಕೆಗಳ ಮೇಲೆ
ಹಾಗೇ ಮೈದಡವಿ ಮುತ್ತಿಡುತಿದೆ
ಪಕ್ಕದ ಪ್ರಿಯತಮೆಗೆ
ತುತ್ತಿಡುತಿದೆ ಮರಿಗಳಿಗೆ
ನೀಗುವ ಒಡಲ ಹಸಿವು
ಪ್ರಕೃತಿ

ಬಾಯಿಸತ್ತ ಬಡವರ ಬದುಕುಗಳನ್ನೇ ತಿನ್ನುವ
ಕಾನೂನುಬದ್ಧ ಹೆಣಹದ್ದೊಂದು
ಜಗದೆಲ್ಲೆಡೆ ರೇಗಿ ತಿಂದು ತೇಗಿ ಬೀಗಿ
ಮೈಮುರಿದು ಆಕಳಿಸಿ ನಿದ್ದೆಗಣ್ಣಲ್ಲೇ
ನಾಗರಿಕತೆಯೊಂದನ್ನ ಸೀದಾ
ಜಮಡಿ ನುಂಗಿಬಿಡುವೆನೆನುತಿದೆ
ಮಕ್ಕಳೆಂದರೆ ಗೊತ್ತಿರದ
ಹೆಂಡಿರ ನೆನಪಿರದ
ಸಂಬಂಧಗಳ ಸೋಂಕಿರದ
ಈ ಅಜೈವಿಕ ಮುದಿಹದ್ದುಗಳು
ತಿನ್ನುವುದು ಹಸಿವಿಗಲ್ಲ
ಅಹಂ ಅಗ್ನಿ ತರ್ಪಣಕ್ಕೆ
ನೀಗದ ಅಹಂಕಾಮ
ವಿಕೃತಿ

ದೇವರ ರಣಹದ್ದು ಮತ್ತು ಪೈಶಾಚಿಕ
ಹೆಣಹದ್ದುಗಳ ನಡುವೆ
ಎಷ್ಟು ದಿಟ್ಟಿಸಿ ನೋಡಿದರೂ
ಕೂಡುಗೆರೆಯೇ ಕಾಣುತ್ತಿಲ್ಲ

  1. ಕನವರಿಕೆ

ಲೋಕದ ಜನರೆಲ್ಲ
ಭಾಷೆ ಕಳೆದುಕೊಂಡಿದ್ದಾರೆ
ವೇಷಗಳನ್ನೂ ಕೂಡ
ಬೆತ್ತಲಾಗಿ ಎಲ್ಲೆಡೆ ಸುತ್ತುತ್ತಾರೆ
ಕುಡಿಯುತ್ತಾ ತಿನ್ನುತ್ತಾ
ಕುಣಿಯುತ್ತಾ ಹಾಡುತ್ತಾ
ವಿಸರ್ಜಿಸುತ್ತಾರೆ
ಅಲ್ಲಲ್ಲೇ

ಜೀವನವಿಡೀ ಮೂಸದ
ಸುಗಂಧವೊಂದು ಆವರಿಸಿದೆ
ಕೇಳಿರದ ನೆಲದ ಹಾಡುಗಳು ಝೇಂಕರಿಸಿವೆ
ಜನದನಗಳೆಲ್ಲಾ ಮೇಯ್ದು ಮಿಂದು
ಮೆಲುಕುತ್ತಿವೆ
ಸೂರ್ಯ ಚಂದ್ರರ ಮಾತು
ಬೆಟ್ಟ ಕಣಿವೆ ಕಾಡ ಹಾಡುಗಳು
ಈಗ ತಿಳಿಯುತ್ತಿವೆ
ಇತಿಹಾಸಕ್ಕೆಂದೂ ತಿಳಿಯದ ರೀತಿಯಲ್ಲಿ
ತಿಳಿದವರು ತುಳಿಯುವುದಿಲ್ಲ
ಬೆಳೆಯುತ್ತಾ ಇಳಿಯುತ್ತಾರೆ
ಲೋಕವೆಂಬುದು ಜೀವನಿರ್ಜೀವಗಳ
ಭೇದವೆಣಿಸದ ಅಂತರ್ಜಾಲ
ಚಲಿಸುವುದಷ್ಟೇ ಜೀವವಲ್ಲ
ನಿಲ್ಲುವುದಷ್ಟೇ ಸಾವಲ್ಲ
ಮಾತೊಂದೇ ಅರ್ಥವಲ್ಲ
ಅರ್ಥ ಅನಿವಾರ್ಯವಲ್ಲ

‍ಲೇಖಕರು Admin

11 May, 2026

1 Comment

  1. prathibha nandakumar

    ಕವನಗಳು ಬಹಳ ಚೆನ್ನಾಗಿದೆ. ರಣಹದ್ದು ಮತ್ತು ಹೆಣಹದ್ದು ಸೂಪರ್
    ಪ್ರತಿಭಾ ನಂದಕುಮಾರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading