– ಎಂ ವಿ ಶಶಿಭೂಷಣ ರಾಜು
ಕಳೆದುಹೋಗಬೇಕೆನ್ನಿಸುವುದು!
ಬಲು ಸುಲಭ; ಕಳೆದುಹೋಗಬೇಕೆನ್ನಿಸುವುದು!
ಆದರೆ, ಕಗ್ಗಂಟಾಗಿರುವ ಕಟ್ಟಳೆಗಳ ಮೀರಿ,
ಭಯದಿ ಬಂಧಿಸಿರುವ ಬಂಧನಗಳ ಉರಿಸಿ,
ಭೂಮಿ-ಆಕಾಶಗಳ ಆವರಿಸುವ ಮಾಯೆಯಲಿ
ಸಿಲುಕಿರುವ ಪಂಜರದಿಂದ ಜಾರಿ—
ಹಾರಿಹೋಗುವುದು, ರೆಕ್ಕೆ ಕತ್ತರಿಸಿದಂತೆ!
ಆಸೆಯೊಂದೇ ದುಃಖದ ಮೂಲವಲ್ಲ
ಈಗ, ಆಸೆಯಿಲ್ಲದಿರುವು ದೂ ಶೋಕದ ಸೆಲೆ;
ಸಿಕ್ಕು-ಸಿಕ್ಕಾಗಿರುವ ನೂಲಿನಂತಹ ಹಾದಿಯಲಿ ಸಾಗಿದರೂ,
ಮರಳಿ ಹೊರಟಲ್ಲಿಗೇ ತಲುಪುವ ಗೊಂದಲದ ಭಯ.
ಯಾರದೋ ಗುರಿಗೆ ನಮ್ಮ ಮನಸಿನ ತವಕ,
ಯಾರನ್ನೋ ಮೇಲೆತ್ತಲು ನಮ್ಮ ಹೆಗಲ ಆಸರೆ;
ನಮ್ಮದಲ್ಲದ ಬಯಕೆಗೆ ನೀರುಣಿಸುತ್ತಲೇ
ಅದು ನಮ್ಮದೇ ಬದುಕೆಂದು ನಟಿಸುವುದು!
ಜನಜಂಗುಳಿಯಲಿ ಅಜ್ಞಾತನಾಗುವುದು ಸುಲಭ,
ಆದರೆ ಅಜ್ಞಾತನೆಂಬ ಖ್ಯಾತನಾಗುವುದು ಜನವಿರಳ ಜಾಗದಲಿ;
ಕಳೆದುಹೋಗಿದ್ದೇನೆಂಬ ಭ್ರಮೆಯಲ್ಲಿ
ಎಲ್ಲರಿಗೂ ಸಿಗುತ್ತಾ,
“ಹುಡುಕುತ್ತಿದ್ದಾರೆ” ಎಂಬ ಸುಳ್ಳು ಸಂತಸದಲಿ ತೇಲುವುದು.
ಕಳೆದುಹೋದರೂ ಯಾರೂ ಕಾಳಜಿ ತೋರರು
ಎನ್ನುವ ಅರಿವಿಲ್ಲದೆ ಬಾಳು ಮುಗಿಯುವುದು;
ನೆನಪಿರಲಿ,
ಕಳೆದುಹೋಗುವುದು ಒಂದೇ ಸಲ—
ಆಗ ಯಾರಿಗೂ ಸಿಗುವುದಿಲ್ಲ,
ಯಾರೂ ಹುಡುಕುವುದೂ ಇಲ್ಲ!






0 Comments