
ಮೂಲ ಇಂಗ್ಲಿಷ್: ರವಿಶಂಕರ್ ಎನ್
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ಹೊಕ್ಕುಳ ಯಾತನೆ
ಕಾಗೆಯೊಂದು ಬಂದು ಕೂತೇ ಬಿಟ್ಟಿತು, ಅಮ್ಮ,
ನನ್ನ ಹೊಟ್ಟೆಯ ಮೇಲೆ. ಕುಕ್ಕಿತು,
ಬೇರಿಲ್ಲದೆ ತೇಲುವ ತಾವರೆಯಂತೆ ಆದಿ ಅಂತ್ಯವಿಲ್ಲದ
ನನ್ನ ಹೊಕ್ಕಳ ಬಳ್ಳಿಯನ್ನು.
ಪೋಷಿಸಿದೆ ನನ್ನನ್ನು ಅರವತ್ತೆರಡು ವರ್ಷ.
ಅಸ್ತಿತ್ವದಲ್ಲಿಲ್ಲದ ನಾಳದ ಮೂಲಕ
ನೆನಪುಗಳನ್ನು, ಕಥೆಗಳನ್ನು,
ಬೇರೆ ತಾಯಂದಿರ ಕಥನಗಳನ್ನು ಊಡಿ.
ಈ ಭೀಕರ ಜಗತ್ತಿನ ವಿರುದ್ಧ ಹೋರಾಡಲು
ಹಲ್ಲೂ, ಉಗುರೂ ಇಲ್ಲದ ನನ್ನ ಸೌಮ್ಯ, ನಿಷ್ಕ್ರಿಯ ಬದುಕಿನೆದುರು
ಮುಖಾಮುಖಿಯಾದಾಗ ನಿನ್ನ ಉದ್ವಿಗ್ನ ಚರಿತ್ರೆ,
ಖಂಡಿತಾ ನೋವಾಗುತ್ತದೆ.
ಆತ್ಮಗಳು ಹಸಿದು ಕೂರುತ್ತವೆ,
ಕಣ್ಣುಗಳು ದಿಟ್ಟಿಸುತ್ತವೆ ಕತ್ತಲ ಗೋಡೆಗಳನ್ನು,
ಕಿವಿಗಳ ತುಂಬಾ ನಿರ್ದೋಷಿಗಳ ಕೂಗು,
ಜನರು ಸಂಖ್ಯೆಗಳಾಗುತ್ತಾರೆ ದಾಖಲೆಗಳಲ್ಲಿ,
ಕಣ್ಣೀರು ಬೀಳುತ್ತದೆ ಕಸದ ತೊಟ್ಟಿಯಲ್ಲಿ.
ಹೌದಮ್ಮ, ಬಾ ಹೀರು ನನ್ನ ರಕ್ತ,
ನರ್ತಿಸು ನನ್ನ ಕರುಳ ಮೇಲೆ ,
ಕಿತ್ತು ಹರಿದು ಹಾಕು ನನ್ನ ದೇಹವನ್ನು,
ಹೋರಾಡಲು ಕಲಿಸುವ ನಿನ್ನ ಹಕ್ಕನ್ನು ಚಲಾಯಿಸು.
ಕಳೆದುಹೋದ ನಮ್ಮ ಗೂಡಿನಲ್ಲಿ ಹೊಸ ಮೊಟ್ಟೆ ಇಡು,
ಮತ್ತೆ ಹುಟ್ಟಿಸು ನನ್ನನ್ನು,
ಸಾವಿರ ಹೊಸ ಭಾಷೆಗಳಲ್ಲಿ
ಕಾಗೆಯಂತೆ ಕೂಗಲು.






0 Comments