ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಜಿಯಾ ಅವರ ಸಾಮಾಜಿಕ ಕಳಕಳಿಯ ಕವಿತೆಗಳು

ಡಿ ಬಿ ರಜಿಯಾ ಅವರ ‘ಕೌದಿ ಪ್ರಕಾಶನ’ ಪ್ರಕಟಿಸಿದ ‘ಪರದೆ ಸರಿದಂತೆ’ ಹಾಗೂ ‘ಗೀತಾಂಜಲಿ ಪುಸ್ತಕ ಪ್ರಕಾಶನ’ ಪ್ರಕಟಿಸಿದ ‘ದೀವಟಿಗೆ’

ಈ ಎರಡು ಕವನ ಸಂಕಲನಗಳ ಕುರಿತ ಕೇಶವ ಶರ್ಮ ಕೆ ಅವರ ಅನಿಸಿಕೆ ಇಲ್ಲಿದೆ.

-ಕೇಶವ ಶರ್ಮ ಕೆ

ಚಲನೆ

“ಈ ಮಾತುಕತೆ ಇರದಿದ್ದರೆ
ನೀನ್ಯಾರೋ ನಾನ್ಯಾರೋ
ಈಗ ಸಂವೇದನೆಗಳಿರುವ
ಮನುಷ್ಯರಾಗಿದ್ದೇವೆ
ಅದಕ್ಕೆ ಮಾತಾಡಬೇಕು
ಹಿತವಾಗಿ ಮಿತವಾಗಿ
ಬಾಳಿನ ಎಳೆ ಎಳೆಯೂ
ನೇಯುವ ನೇಕಾರನಂತೆ”

(ಪರದೆ ಸರಿದಂತೆ : ಡಿ ಬಿ ರಜಿಯಾ : ಕೌದಿ ಪ್ರಕಾಶನ : 2017 : ಚಲನೆ : ಕನ್ನಡಿ :ಪು.ಸಂ :34)

ಇದು ರಜಿಯಾ ಅವರ ಕವಿತೆಯಲ್ಲಿ ಬರುವ ಮಾತುಗಳು. ಸಮಾಜದಲ್ಲಿ ಧರ್ಮಕ್ಕಿರುವ ಮೌಲ್ಯ ಮತ್ತು ಸಾಹಿತ್ಯಕ್ಕೆ ಇರುವ ಮೌಲ್ಯವು ಒಂದೇ ರೀತಿಯದು ಅಲ್ಲ. ಕಲೆಯನ್ನು ನಾವು ಧರ್ಮ ಎಂದು ಹೇಳುವುದಿಲ್ಲ. ಆದರೆ ಕಲೆಯೂ ಧರ್ಮವೂ ಅಲ್ಲ. ಅಷ್ಟರ ಮಟ್ಟಿಗೆ ವ್ಯತ್ಯಾಸವಿದೆ. ಯಾವುದನ್ನು ನಾವು ನಂಬಿಕೆ ಎಂದು ಹೇಳುತ್ತೇವೆಯೋ ಅದು ಕೂಡಾ ಒಂದು ಸಾಮಾಜಿಕ ಸಂದರ್ಭದ ಅವಶ್ಯಕತೆಯಾಗಿದೆ. ಅಂದರೆ ಯಾವುದನ್ನೂ ಒಂದೇ ಅರ್ಥದಲ್ಲಿ ನಾವು ಬಳಸಲು ಬರುವುದಿಲ್ಲ. ಆಧುನಿಕ ಸ್ಥಿತಿಯು ಹೇಗೆ ಇದೆಯೆಂದರೆ ಧರ್ಮ ಮತ್ತು ರಾಜಕಾರಣ ಮತ್ತು ಉದಾರೀಕರಣ ಹಾಗೂ ಭಯೋತ್ಪಾದನೆಗಳು ಕಲಬೆರಕೆಯಾಗಿವೆ. ಒಂದಕ್ಕೊಂದು ಜೊತೆಯಲ್ಲಿ ಇರುವುದರಿಂದ ಯಾವುದರ ಅರ್ಥ ಯಾವುದು ಎಂದು ತಿಳಿಯುವುದೂ ಇಲ್ಲ. ಕೋಮುವಾದ ಮತ್ತು ಅದರಿಂದ ಉಂಟಾಗುವ ಹಿಂಸೆಯನ್ನು ನಾವು ಧರ್ಮ ಎಂದು ಕರೆಯಲು ಸಾಧ್ಯವೇ ಇಲ್ಲ. ಆದರೆ ಅದುವೇ ಧರ್ಮ ಎನ್ನುವಂತೆ ಬಿಂಬಿತವಾಗುತ್ತದೆ. ಸಾಮಾನ್ಯ ಮನುಷ್ಯರ ಮೇಲೆ ಸೂಡೋ ತಿಳುವಳಿಕೆಯನ್ನು ಮತ್ತು ಅದರ ಪ್ರತಿಮೆಗಳನ್ನು ಕಟ್ಟಲಾಗುತ್ತದೆ. ಆದ್ದರಿಂದಲೇ ಡಿ.ಬಿ. ರಜೆಯಾ ಅವರ ಮೇಲಿನ ಮಾತಿಗೆ ಒಂದು ತೂಕವೂ ಇದೆ.

ಧರ್ಮವನ್ನು ಕುರಿತು ಹೇಳುವಾಗ ಮತ್ತೊಂದು ಅಂಶವನ್ನು ಕುರಿತು ಹೇಳಬೇಕು : ಧರ್ಮ ಮತ್ತು ಅದರ ಪರಿಣಾಮಗಳು ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರೀತಿಯಲ್ಲಿ ಇರುತ್ತದೆ. ಕಾಲಕ್ಕೆ ಅನುಸಾರವಾಗಿ ಅದು ತನ್ನ ಚಹರೆಗಳನ್ನು ಬದಲು ಮಾಡಿದೆ. ಧರ್ಮವು ತನಗೆ ಅನುಕೂಲವಾದ ನಿಲುವನ್ನು ವ್ಯಕ್ತಪಡಿಸುತ್ತಾ ಬಂದಿದೆ. ಧರ್ಮ ಎಂದರೆ ಅದನ್ನು ಒಂದು ಸೈದ್ಧಾಂತಿಕ ಪ್ರಶ್ನೆ ಎಂದು ಹೇಳಬೇಕಾಗಿಲ್ಲ. ಅನೇಕ ಸಂದರ್ಭದಲ್ಲಿ ಅದರ ಪ್ರಶ್ನೆಯು ಬೇರೆಯಾಗಿರುತ್ತದೆ. ಧಾರ್ಮಿಕ ಯಜಮಾನಿಕೆಯನ್ನು ನೋಡವ ಸಂದರ್ಭದಲ್ಲಿ ಅದರ ಹಿಂದೆ ಇರುವ ಶಕ್ತಿಯು ಯಾವುದು ಮತ್ತು ಅದು ಯಾಕೆ ಹಾಗಾಗಿದೆ ಎಂದು ಯೋಚಿಸಬೇಕಾಗುತ್ತದೆ.

ಅಮಲು
ಈ ಲೋಕ
ಮಗ್ನವಾಗಿದೆ
ಜಾತಿ-ಧರ್ಮ ವಿಚಾರದ
ವಿಕಾರ ವಿಕೃತಿಗಳೊಂದಿಗೆ
ಮಾರಾಟದ ಸರಕುಗಳಂತೆ

(ದೀವಟಿಗೆ : ಡಿ ಬಿ ರಜಿಯಾ : ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ : 2023 ; ಕವಿತೆ : ಅಮಲು : ಪು.ಸಂ :04)

ಶೋಷಕರು ತಮಗೆ ಬೇಕಾದಂತೆ ಧರ್ಮವನ್ನು ಬಳಸುತ್ತಿರುವದನ್ನು ನಾವು ಆಧುನಿಕ ಸಂದರ್ಭದಲ್ಲಿ ಕಾಣುತ್ತೇವೆ. ನಮ್ಮ ಭೌತಿಕ ಅಗತ್ಯ ಮತ್ತು ಅದರ ಸ್ವರೂಪವನ್ನು ಭಿನ್ನವಾದ ಜಾಡಿನಲ್ಲಿಯೂ ನೋಡಬಹುದು ಎನ್ನುವುದನ್ನು ರಜಿಯಾ ಹೇಳುತ್ತಾರೆ. ಅವರಿಗೆ ಮುಖ್ಯವಾಗುವುದು ಕೂಲಿಗೆ ಹೋಗುವ ಹೆಣ್ಣಾಳು.

ಕವಿತೆ

ಮಳೆಯಿಲ್ಲ ಬೆಳೆಯಿಲ್ಲ
ಊರ ಹೊಲದಲ್ಲೀಗ ನಿತ್ಯ ಪ್ರೇತಕಳೆಗೆ
ಕಂಗಾಲಾಗೆ ನಗರಕ್ಕೆ
ವಲಸೆ ಹೊರಟ ಹೆಣ್ಣಾಳು

(ಪರದೆ ಸರಿದಂತೆ ; ಡಿ ಬಿ ರಜಿಯಾ ; ಕೌದಿ ಪ್ರಕಾಶನ : 2017 : ಕವಿತೆ : ಕನ್ನಡಿ ;ಪು.ಸಂ :21)

ಯಾವಾಗ ಯಜಮಾನಿಕೆಯ ವರ್ಗವು ಪ್ರಬಲವಾಯಿತೋ ಆಗ ಅದು ಧರ್ಮವನ್ನು ತನಗೆ ಬೇಕಾದಂತೆ ಬಳಸಿಕೊಂಡಿತು. ಆದರೆ ಧರ್ಮವು ನಮ್ಮನ್ನು ಸ್ವತಂತ್ರವಾಗಿ ಬಿಡುವುದಿಲ್ಲ. ಧರ್ಮವೆನ್ನುವುದು ಯಾವಾಗಲೂ ನಮಗೆ ಅನೇಕ ರೀತಿಯ ಪರಿಣಾಮವನ್ನು ಬೀರುತ್ತದೆ.

ಅದರ ಪರಿಣಾಮಗಳನ್ನೇ ನಾವು ಅನೇಕ ಸರ್ತಿ ಸಂಸ್ಕೃತಿಯೆಂದು ಹೇಳುತ್ತೇವೆ. ಆದರೆ ವಿಷಯವು ಹಾಗೆ ಇಲ್ಲ. ಅದು ತನ್ನನ್ನು ತಾನೇ ಪ್ರಾತಿನಿಧಿಕ ಮಾಡುತ್ತದೆ. ಅದನ್ನು ರಜಿಯಾ ಹೀಗೆ ನೋಡುತ್ತಾರೆ.

ಆ – ಲೋಕ
ಈ ಪಯಣದ
ದಿಕ್ಕು ಯಾವುದು
ನಿರ್ಣಯದ ಕ್ಷಣವಲ್ಲ
ಗೆಲವೂ ಮಹತ್ವದಲ್ಲ
ಹೆಜ್ಜೆ ಹಾಕಿರಲಿಲ್ಲಾ
ಕಣ್ಣುಗಳು ಕೂಡಿರಲಿಲ್ಲಾ…

(ಪರದೆ ಸರಿದಂತೆ ; ಡಿ ಬಿ ರಜಿಯಾ : ಕೌದಿ ಪ್ರಕಾಶನ : 2017 : ಅ – ಲೋಕ : ಕನ್ನಡಿ ;ಪು.ಸಂ :25)

ಹಾಗೆ ನೋಡುವುದಿದ್ದರೆ ಸಂಸ್ಕೃತಿಯಲ್ಲಿ ಅನೇಕ ಸಂಗತಿಗಳು ನಡೆಯುತ್ತವೆ. ಮತ್ತು ಅವುಗಳನ್ನು ಹೀಗೆಯೇ ಇದೆ ಎಂದು ಹೇಳಲು ಬರುವುದಿಲ್ಲ. ಒಂದು ಹಂತದಲ್ಲಿ ಧರ್ಮವು ನಮ್ಮ ಅನೇಕ ಸಮಸ್ಯೆಗಳಿಗೆ ಯಾವುದೇ ರೀತಿಯ ಉತ್ತರವನ್ನು ಕೊಡಲು ಹೋಗುವುದೂ ಇಲ್ಲ. ಧರ್ಮವು ತಾನೇ ಸರಿಯೆಂದು ಅದನ್ನು ನೀವು ಪ್ರಶ್ನಿಸಬಾರದು ಎಂದು ನಿರೂಪಿಸುತ್ತದೆ. ನೀವು ಧರ್ಮದ ದಾರಿಯಲ್ಲಿ ನಡೆಯಿರಿ ಮತ್ತು ಅದನ್ನು ಹೊರತುಪಡಿಸಿ ಉಳಿದ ಯಾವ ಸಂಗತಿಯು ಅಗತ್ಯವಿಲ್ಲವೆಂದು ಒಂದು ರೀತಿಯ ಆಜ್ಞೆಯನ್ನು ಕೊಡುತ್ತದೆ. ಅದು ನೀಡುವುದು ಆಜ್ಞೆ ಮತ್ತು ಆ ಹಾದಿಯಲ್ಲಿ ನಡೆದರೆ ನಮಗೆ ಸಿಗುವುದು ಪರಲೋಕದ ಸುಖ. ಅದು ಜೆಹಾದಿ ಅಥವಾ ಅನ್ಯಧರ್ಮದ ಮೇಲಿನ ಆಕ್ರಮಣವಾಗಿರಬಹುದು. ಅಥವಾ ಬೇರೆ ರೀತಿಯ ಹಿಂಸೆಯೂ ಆಗಿರಬಹುದು. ಅದು ಅಗತ್ಯವೆಂದು ಪ್ರತಿಪಾದಿಸುವ ಮೂಲಕವೇ ಅನೇಕರನ್ನು ಒಂದು ದಾರಿಯಲ್ಲಿ ನಡೆಯುವಂತೆ ಮಾಡುತ್ತದೆ. ಧರ್ಮ ಎನ್ನುವುದು ಈಗ ಒಂದು ಕೋಮು ಎನ್ನುವ ಅರ್ಥಕ್ಕೆ ಇಳಿದಿದೆ. ಇದನ್ನು ಧರ್ಮದ ಸಣ್ಣತನದ ವ್ಯಾಖ್ಯಾನವೆಂದೂ ಹೇಳಬಹುದು. ಧರ್ಮವನ್ನು ಬಳಸಿಕೊಂಡು ರಾಜಕಾರಣವನ್ನು ಮಾಡುವುದು ಬಹಳ ಸುಲಭ ಯಾಕೆಂದರೆ ಧರ್ಮದ ಭ್ರಮೆಯು ಎಲ್ಲರಿಗೂ ಇರುತ್ತದೆ. ಅದನ್ನು ಕೆರಳಿಬಿಟ್ಟರೆ ಸಾಕಾಗುತ್ತದೆ. ಧಾತ್ಮಿಕ ಅನುಸಂಧಾನವೂ ಕೂಡಾ ಅನೇಕರಿಗೆ ಯಾಕೆ ಸುಲಭವಾಗುತ್ತದೆ ಎಂದರೆ ಅದರ ವ್ಯಾಖ್ಯೆಯು ಬಹಳ ಸಂದರ್ಭದಲ್ಲಿ ಸಂವಾದಿಯೇ ಆಗುತ್ತಾ ಹೋಗುತ್ತದೆ. ರಜಿಯಾ ಒಂದು ಅಪೂರ್ವ ಚಿತ್ರವನ್ನು ಕಾಣುತ್ತಾರೆ.

ಪರಿವರ್ತನೆ

ಮೂಡಿಯೂ ಮೂಡಿರದಂತ
ಒಂದು ಚಿತ್ರ
ಅಪೂರ್ವವಾಗಿತ್ತು!
ಮತ್ತೆ. ಯಾಕೋ ಏನೋ
ಕಳಕೊಂಡಂತೆ
ತನ್ನದೇ ನೆರಳೊಳಗೆ ನುಸುಳಿದಂತೆ
ಅಲ್ಲಿ ಹಿಂತಿರುಗಬೇಕಾಯ್ತು

(ಪರದೆ ಸರಿದಂತೆ ; ಡಿ ಬಿ ರಜಿಯಾ : ಕೌದಿ ಪ್ರಕಾಶನ : 2017 : ಪ್ರಜ್ಞೆ: ಕನ್ನಡಿ ;ಪು.ಸಂ :51)

ಧರ್ಮವು ಮನುಷ್ಯನಿಗೆ ತಾನು ಒಳ್ಳೆಯದನ್ನು ಮಾಡುತ್ತೇನೆ ಎಂದು ಬಿಂಬಿಸುತ್ತದೆ. ಧರ್ಮದ ಅರ್ಥವು ಅನೇಕ ಸಂದರ್ಭದಲ್ಲಿ ಸಂವಾದಿಯೇ ಆಗಿರುತ್ತದೆ. ಹಾಗೆಯೇ ಧರ್ಮವು ಹೇಳುವ ಅನೇಕ ಸಂಗತಿಗಳು ತನ್ನ ಯಜಮಾನ್ಯದ ನೆಲೆಯಿಂದ ಮುಖ್ಯವೇ ಆಗುತ್ತಾ ಹೋಗುತ್ತದೆ. ಹಾಗೆ ನೋಡುವುದಿದ್ದರೆ ಧರ್ಮವು ಒಂದು ಅಭಿಪ್ರಾಯ ಮಾತ್ರವೇ ಆಗಿದೆ. ಅದರ ಉದ್ದೇಶವೂ ಕೂಡಾ ಎಲ್ಲ ಜನರನ್ನು ಒಳಗೊಳ್ಳುವುದು ಅಲ್ಲ. ಮತ್ತು ಧರ್ಮವು ಅನೇಕ ವಿಷಯಗಳನ್ನು ಸೆನ್ಸಾರ್ ಮಾಡುತ್ತದೆ. ಮತ್ತು ತನಗೆ ಅನುಕೂಲವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳುತ್ತದೆ.ಅದಕ್ಕೆ ಮನುಷ್ಯರ ಮೇಲಿನ ನಿಯಂತ್ರಣ ಎನ್ನುವುದು ಬಹಳ ಮುಖ್ಯ ಧರ್ಮವೆನ್ನುವುದನ್ನು ನಾವು ಗ್ರಹಿಸುವಾಗ ಅದಕ್ಕೆ ವಿಶಿಷ್ಟತೆಯನ್ನು ಕೊಡುತ್ತೇವೆ. ಅದನ್ನು ಇತರ ಸಂಗತಿಗಳಂತೆ ನೋಡುವುದೂ ಇಲ್ಲ. ರಜಿಯಾ ನೋಡು ಕ್ರಮವು ಬೇರೆಯಾಘಿದೆ. ಅವರಿಗೆ ಸೌಹಾರ್ದ ಮುಖ್ಯ ಧರ ಗ್ರಂಥವನ್ನು ಓದದೆ ಅಹಂ ಎನ್ನುವುದನ್ನು ಓಡಿಸಿದಾಗಲೇ ಮನಸ್ಸು ದೀಪ್ತವಾಗುತ್ತದೆ ಎಂದು ಅವರು ಹೇಳುತ್ತಾರೆ.

ಪಲ್ಲಟ

    “ಮಂದಿರ ಪ್ರವೇಶಮಾಡದೆ
    ಧರ್ಮಗ್ರಂಥ ಓದದೆ
    ಮನಸ್ಸು ಪ್ರಜ್ವಲಿಸಿ
    ಅಹಂ ಓಡಿಸಿದಾಗಲೇ
    ದೀಪ್ತಿಯಾಗುತ್ತೆ.”

    (ದೀವಟಿಗೆ : ಡಿ ಬಿ ರಜಿಯಾ : ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ : 2023 ; ಕವಿತೆ : ಪಲ್ಲಟ : ಪು.ಸಂ :02)

    ಧರ್ಮವು ಒಂದು ಕಾಲಕ್ಕೆ ತನ್ನದೇ ಆದ ನಿಯಮಾವಳಿಯನ್ನೂ ಹೊಂದಿತ್ತು. ರಾಜಕಾರಣ ಮತ್ತು ಅದರ ಪರಿಣಾಮವೂ ಕೂಡಾ ಧರ್ಮವನ್ನು ಅವಲಂಬಿಸಿಕೊಂಡಿತ್ತು. ಒಂದು ಹಂತದಲ್ಲಿ ವಿಜ್ಞಾನವನ್ನು ರಾಜಕಾರಣವು ತಿರಸ್ಕರಿಸಿದ್ದು ಈ ಕಾರಣಕ್ಕೆ ಎನ್ನವುದು ಸ್ಪಷ್ಟ ಧಾತ್ಮಿಕತೆ ಮತ್ತು ರಾಜಕಾರಣವನ್ನು ರಾಜ್ಯ ವ್ಯವಸ್ಥೆ ಆಧಾರ ಸ್ತಂಭ ಎಂದೇ ಕರೆಯಲಾಗುತ್ತಿತ್ತು. ಧರ್ಮವನ್ನು ಜನರ ಸಾಮೂಹಿಕ ಅಭಿಪ್ರಾಯದ ಹಿನ್ನೆಲೆಯಲ್ಲಿ ರೂಪಿಸಲಾಗಿಲ್ಲ. ಸಮಾಜ ಮತ್ತು ಅದರ ಸುಸಂಘಟಿತವಾದ ವ್ಯವಸ್ಥೆಗೆ ಧರ್ಮವು ಒಂದು ಬುನಾದಿಯನ್ನು ರೂಪಿಸಿದ್ದು ರಾಜಕಾರಣಕ್ಕೆ ಸುಲಭವಾಯಿತು. “ಅಮಲು” “ದೀವಟಿಕೆ” “ಸೂಪ್ತಭಾವ” ಪ್ರತಿಬಿಂಬ ( ದೀವಟಿಕೆ) ಒಳ್ಳೆಯ ಕವಿತೆಗಳೂ ಆಗಿವೆ.

    ‍ಲೇಖಕರು Admin

    10 April, 2026

    1 Comment

    1. ಸಿಕಂದರ್ ಅಲಿ ತೋರಣಗಲ್ಲು

      ಅವಲೋಕನ ಚೆಂದ‌ ಮಾಡಿದ್ದೀರಿ ಇಬ್ಬರಿಗೂ ಅಭಿನಂದನೆಗಳು

    Pin It on Pinterest

    Share This

    Discover more from ಅವಧಿ । AVADHI

    Subscribe now to keep reading and get access to the full archive.

    Continue reading