ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂಡಿಗೆರೆಯ ಮಡಿಲಲ್ಲಿ ಮೂರು ದಿನ..

-ಹೆಚ್ ಆರ್ ನವೀನ್ ಕುಮಾರ್

ಸುತ್ತಲೂ ತೇಜಸ್ವಿಯವರ ಹಲವು ಬಗೆಯ ಕಪ್ಪು ಬಿಳುಪಿನ ಫೋಟೋಗಳು. ಆ ಫೋಟೋಗಳ ಮೂಲಕ ತೇಜಸ್ವಿ ನಮ್ಮನ್ನೇ ನೋಡುತ್ತಿದ್ದಾರೇನೋ, ನಮ್ಮೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೇನೋ ಎಂದು ಭಾಸವಾಗುವಂತಹ ಭಾವ. ಇದರ ನಡುವೆ ತೇಜಸ್ವಿಯವರು ನಮ್ಮನ್ನಗಲಿದ ದಿನವಾದ ಏಪ್ರಿಲ್ ೫ ರಂದು ಅವರು ಅತ್ಯಂತ ಪ್ರೀತಿಸಿ, ಬದುಕಾಗಿಸಿಕೊಂಡಿದ್ದ ಪರಿಸರದಲ್ಲಿ ತೇಜಸ್ವಿಯವರ ಬದುಕು, ಬರಹ, ಚಿಂತನೆ ಜೊತೆಗೆ ಅವರ ವಿಶೇಷ ಆಸಕ್ತಿಯ ಕ್ಷೇತ್ರವಾದ ಫೋಟೋಗ್ರಫಿಯ ಕುರಿತು ತರಬೇತಿ, ಮಾತುಕತೆ. ತೇಜಸ್ವಿ ತಮ್ಮ ಜೀವನದಲ್ಲಿ ಫೋಟೋಗಳನ್ನು ತೆಗೆಯುವಾಗ ಅನುಭವಿಸಿದ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ ಮುತ್ತುಗಳನ್ನು ಪೋಣಿಸಿದಂತೆ ಮಾತನಾಡಿದವರು ಡಾ. ಹೆಚ್.ಎಸ್. ಸತ್ಯನಾರಾಯಣ. ಅವರ ಈ ಮಾತುಗಳು ತೇಜಸ್ವಿ ಪ್ರತಿಷ್ಟಾನದಲ್ಲಿ ನಡೆದ ಮೂರು ದಿನಗಳ ಫೋಟೋಗ್ರಫಿ ಕಾರ್ಯಾಗಾರದ ಕೊನೆಯ ದಿನದ ಸಮಾರೋಪ ಸಂದರ್ಭದ ವಿಶೇಷ ಉಪನ್ಯಾಸ.

ವಿಭಿನ್ನ ಚಿಂತನೆ, ಅಭಿರುಚಿ, ಆಸಕ್ತಿ ಮತ್ತು ವಿಭಿನ್ನ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ, ವೈವಿದ್ಯಮಯ ಪರಿಸರದ ಹಿನ್ನೆಲೆಯ ಸುಮಾರು ೨೫ ಜನ ‘ಫೋಟೋಗ್ರಫಿ’ ಎಂಬ ಒಂದು ಸಮಾನ ಆಸಕ್ತಿಯ ಹಿನ್ನೆಲೆಯಲ್ಲಿ ಸೇರಿದ್ದೆವು. ಅದು ಅಚ್ಚ ಹಸಿರಾದ ಮಲೆನಾಡ ಸೆರಗಲ್ಲಿ, ಸುಂದರ ಮತ್ತು ಮನಸ್ಸಿಗೆ ಮುದ ನೀಡುವ ಕೊಟ್ಟಿಗೆಹಾರದ ಪರಿಸರದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಟಾನದ ಆವರಣ. ಇಲ್ಲಿ “ಚಿತ್ತ-ಚಿತ್ರ, ಚಿಂತನೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಏಪ್ರಿಲ್ ೩-೫ ವರೆಗೆ ಮೂರು ದಿನಗಳ ಛಾಯಾಗ್ರಹಣ ಕಾರ್ಯಗಾರ ನಡೆಯಿತು. ಕೊನೆಯಲ್ಲಿ ಎಲ್ಲರೂ ಫೋಟೋಗ್ರಫಿಯ ಕುರಿತಾದ ಸಮಾನ ಆಸಕ್ತಿಗಳನ್ನು ಬೆಳೆಸಿಕೊಳ್ಳುವ ಮತ್ತು ಒಂದು ವಿಶಿಷ್ಟ ದೃಷ್ಟಿಕೋನದಲ್ಲಿ ಎಲ್ಲವನ್ನೂ ನೋಡುವ, ಗ್ರಹಿಸುವ, ಸೆರೆಹಿಡಿಯುವ ಅತ್ಯುತ್ತಮ ತಳಪಾಯವನ್ನು ಈ ಶಿಬಿರ ಹಾಕಿಕೊಟ್ಟಿತು.

ಕೇವಲ ಫೋಟೋಗ್ರಫಿಯ ತಾಂತ್ರಿಕ ವಿಚಾರಗಳು ಮಾತ್ರವಲ್ಲದೇ, ಅದರ ಆಚೆಗೆ ಚಿಂತಿಸುವ, ಚರ್ಚಿಸುವ, ನಮ್ಮ ಸುತ್ತಲಿನ ಪರಿಸರ, ಸಮಾಜವನ್ನು ಅರ್ಥಮಾಡಿಕೊಳ್ಳುವ, ಅಮೂಲ್ಯವಾದ ಅನುಭವಗಳನ್ನು ಹಂಚಿಕೊಳ್ಳುವ ಪ್ರಯತ್ನಕ್ಕೆ ಇದು ಪೂರಕವಾಗಿತ್ತು. ‘ತೇಜಸ್ವಿ’ ಎಂದರೆ ಹಲವು ಅಭಿರುಚಿಗಳು, ಜೀವನೋತ್ಸಾಹ ಮೂಡಿಸಿದ ವಿಶಿಷ್ಟ ವ್ಯಕ್ತಿತ್ವ. ಇಂತಹ ತೇಜಸ್ವಿಯ ನೆನಪಿನಲ್ಲಿ ನಡೆದ ಕಾರ್ಯಾಗಾರ ಅವರ ಅಭಿರುಚಿ, ಆಶಯ ಮತ್ತು ಚಿಂತನೆಗಳನ್ನು ಹೊಸ ತಲೆಮಾರಿಗೆ ದಾಟಿಸಲು ಒಂದು ಸಣ್ಣ ಪ್ರಯತ್ನವಾಗಿತ್ತು.

ಫೋಟೋಗ್ರಫಿಯ ಬಗ್ಗೆ ಕುತೂಹಲ ಮತ್ತು ಆಸಕ್ತಿ ಹೊಂದಿದ್ದ ೧೦ ವರ್ಷದ ಮಗುವಿನಿಂದ ಹಿಡಿದು, ನುರಿತ ಹಲವು ವರ್ಷಗಳು ಫೋಟೋಗ್ರಫಿ ಮಾಡಿರುವ ೬೦ ವರ್ಷ ಮೇಲ್ಪಟ್ಟವರ ವರೆಗೆ ವಿವಿಧ ಹಂತದ ಅನುಭವಗಳನ್ನು ಹೊಂದಿದ್ದವರು ಇಲ್ಲಿ ಭಾಗವಹಿಸಿದ್ದರು. ಮೊದಲ ದಿನ ಏನನ್ನ ಹೇಳಬೇಕು, ಏನನ್ನ ಹೇಳಬಾರದು ಎಂಬ ಅಳುಕಿನಿಂದಲೇ ತಮ್ಮ ಪರಿಚಯವನ್ನು ಮಾಡಿಕೊಂಡ ಶಿಬಿರಾರ್ಥಿಗಳು, ಮೂರನೇ ದಿನ ಕಳೆವಾಗ ಒಬ್ಬರನ್ನೊಬ್ಬರು ಹಲವು ವರ್ಷಗಳ ಪರಿಚಯಸ್ತರಂತೆ ಕಾಣುವ ಮತ್ತು ಇನ್ನು ಜೊತೆಗೆ ಸಮಯ ಹಂಚಿಕೊಳ್ಳಬೇಕೆ೦ಬ ಆಸಕ್ತಿಯವರೆಗೆ ತಂದು ನಿಲ್ಲಿಸಿದ್ದೇ ಕಾರ್ಯಾಗಾರದ ಯಶಸ್ಸನ್ನು ತೋರಿಸುತ್ತದೆ. ಈಗಾಗಲೇ ಹೇಳಿದಂತೆ ಇಲ್ಲಿ ಶಾಲಾ ವಿದ್ಯಾರ್ಥಿಗಳಿದ್ದರು, ಮಗನ ಆಸಕ್ತಿಯನ್ನು ಪ್ರೋತ್ಸಾಹಿಸಬೇಕೆಂದು ಜೊತೆಗೆ ಬಂದ ಪೋಷಕರಿದ್ದರು, ಮೂರನೇ ತಲೆಮಾರು ಫೋಟೋಗ್ರೋಫಿಯಂತ ಆರೋಗ್ಯಕರ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಬಂದಿದ್ದ ತಂದೆ ಮಗಳು ಮೊಮ್ಮಗಳು, ಕಾಲೇಜು ಓದುತ್ತಿದ್ದ ವಿದ್ಯಾರ್ಥಿಗಳಿದ್ದರು, ತಮ್ಮ ಐಟಿ ಕೆಲಸದ ಜೊತೆಗೆ ಫೋಟೋಗ್ರಫಿಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದ ಯುವಕ ಯುವತಿಯರಿದ್ದರು, ಹಲವು ವರ್ಷಗಳ ಕಾಲ ಛಾಯಾಗ್ರಹಣವನ್ನು ಮಾಡುತ್ತಾ ಬಂದಿರುವ ಉಪನ್ಯಾಸಕರುಗಳು, ಅಧಿಕಾರಿಗಳು, ಸಾಮಾಜಿಕ ಚಳುವಳಿಯಲ್ಲಿ ತೊಡಗಿಸಿಕೊಂಡವರು, ಪರಿಸರಪ್ರಿಯರು, ಫೋಟೋಗ್ರಫಿಯನ್ನು ಕಲಿತೇ ನಾನು ಫೋಟೋ ತೆಗೆಯುವುದು ಅಲ್ಲಿಯವರೆಗೆ ಕ್ಯಾಮರಾವನ್ನೇ ಮುಟ್ಟುವುದಿಲ್ಲವೆಂದು ಹಠ ತೊಟ್ಟಿದ್ದ ನಿವೃತ್ತ ಉಪನ್ಯಾಸಕರು, ಮೂರು ದಿನ ಈ ಪರಿಸರದಲ್ಲಿ ಎಲ್ಲರೊಂದಿಗೆ ಕಳೆದರೆ ಸಾಕು ಎಂದು ಕೊಂಡು ಬಂದ ಪರಿಸರಪ್ರಿಯ ತೇಜಸ್ವಿ ಅಭಿಮಾನಿಗಳು, ಪ್ರತಿ ದಿನ ಮದುವೆ ಫೋಟೋಗ್ರಫಿಯನ್ನೇ ಮಾಡಿ ಅದರಿಂದಾಚೆಗೆ ಫೋಟೋಗ್ರಫಿಯಲ್ಲಿ ಏನನ್ನಾದರೂ ಕಂಡುಕೊಳ್ಳಬೇಕೆನ್ನುವವರು, ಫೋಟೋಗ್ರಫಿಯಲ್ಲಿ ತಾಂತ್ರಿಕವಾಗಿ ಪರಿಣಿತನಾಗಬೇಕು ಎಂದು ಕೊಂಡಿದ್ದವರು, ಫೋಟೋಗ್ರಫಿ ಮಾಡಿ ನಾನು ಉತ್ತಮ ಫೋಟೋಗ್ರಾಫರ್ ಆಗಿ ಸಂಪಾದಿಸಬೇಕು ಎಂದು ಬಂದಿದ್ದವರು… ಹೀಗೆ ಹೇಳುತ್ತಾ ಹೋದರೆ ಅಲ್ಲಿ ಬಂದಿದ್ದ ೨೫ ಜನರೂ ಇಪ್ಪತ್ತೈದು ರೀತಿಯಲ್ಲಿಯೇ ಆಲೋಚಿಸುತ್ತಾ ಬಂದಿದ್ದರು.

ಇAತಹ ವೈವಿಧ್ಯಮಯ ಹಿನ್ನೆಲೆಯ ಮತ್ತು ವಿಭಿನ್ನ ಅನುಭವದ ಎಲ್ಲಾ ಶಿಬಿರಾರ್ಥಿಗಳಿಗೆ ಫೋಟೋಗ್ರಫಿಯ ಬಗೆಗೆ ಸರಿಯಾಗಿ ಅರ್ಥ ಮಾಡಿಸಿ, ಅದರ ವ್ಯಾಕರಣವನ್ನು ಕಲಿಸಿ, ಅದನ್ನು ಬಳಸಿ ತಮ್ಮ ಛಾಪನ್ನು ಛಾಯಾಗ್ರಹಣದಲ್ಲಿ ಮತ್ತು ಬದುಕಿನ ವಿವಿಧ ಕ್ಷೇತ್ರಗಳಲ್ಲೂ ಅನ್ವಹಿಸುವಂತೆ ಮಾಡುವಲ್ಲಿ ಸಂಪನ್ಮೂಲ ವ್ಯಕ್ತಿಗಳ ಪಾತ್ರ ಬಹಳ ದೊಡ್ಡದು. ಇಡೀ ಕಾರ್ಯಾಗಾರವನ್ನು ಇಬ್ಬರು ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಟ್ಟರು. ಒಬ್ಬರು ಸುಮಾರು ೩೦ ವರ್ಷಗಳ ಫೋಟೋಗ್ರಫಿ ಅನುಭವವಿರುವ ಆನಂದ್ ಕುಮಾರ್ ಎಸ್ ಮತ್ತು ದೇಶದ ಗಮನ ಸೆಳೆದು ಕರಡಿ ದಾಮದ ಸ್ಥಾಪನೆಗೆ ಕಾರಣೀಕರ್ತರಾದ ಮತ್ತು ಪಕ್ಷಿವೀಕ್ಷಣೆಯಲ್ಲಿ ಅತ್ಯಂತ ಅನುಭವವಿರುವ ಪಂಪಯ್ಯ ಮಳಿಮಠ್. ಇವರುಗಳ ಅನುಭವವನ್ನು ಒಂದು ಚೌಕಟ್ಟಿಗೆ ತಂದು ಅದರ ಮಿಶ್ರಣದೊಂದಿಗೆ ಎಲ್ಲಾ ಹಂತದವರಿಗೂ ಅರ್ಥವಾಗುವಂತೆ ಸರಳವಾಗಿ ಪಾಠ ಮಾಡುವ ಜೊತೆಗೆ, ಅದರ ಬಗ್ಗೆ ಪ್ರಾಯೋಗಿಕವಾಗಿ ನಮ್ಮನ್ನು ತೊಡಗಿಸಿ, ನಮ್ಮ ಫೋಟ್ರೋಗ್ರಫಿಗಳನ್ನು ವಿಶ್ಲೇಷಿಸಿ, ಅವುಗಳನ್ನು ಉತ್ತಮಪಡಿಸಿಕೊಳ್ಳಲು ಸಲಹೆಗಳನ್ನು ನೀಡುವ ಕೆಲಸ ಮಾಡಿದರು.

ಸಂಪನ್ಮೂಲ ವ್ಯಕ್ತಿಯಾದ ಆನಂದ್ ಕುಮಾರ್ ಎಸ್ ರವರು ಕಾರ್ಯಾಗಾರದ ಆರಂಭದಲ್ಲಿ ಕುವೆಂಪುರವರ ಈ ಸಾಲುಗಳ ಮೂಲಕ ಇಡೀ ಕಾರ್ಯಾಗಾರದ ಮೂಲ ಸತ್ಯವನ್ನು ನಮಗೆ ಅರ್ಥಮಾಡಿಸಲು ಪ್ರಯತ್ನಿಸಿದರು. ಆ ಮಾತುಗಳು ಹೀಗಿವೆ. “ಸಾಹಿತ್ಯದ ಕ್ಷೇತ್ರವು ಪರಮ ಭೂಮವಾಗಿದೆ. ಏಕೆಂದರೆ ವಿಶ್ವ ಜೀವನವೆಲ್ಲಾ ಅದರ ಜೀವನಕ್ಕೆ ಕುತ್ತು. ವಿಜ್ಞಾನ, ಆಧ್ಯಾತ್ಮ, ಮತ, ಸಮಾಜ, ರಾಜಕೀಯ ಇತ್ಯಾದಿ ಪ್ರಪಂಚಗಳೆಲ್ಲವೂ ಅದಕ್ಕೆ ಸೊತ್ತು. ಆದ್ದರಿಂದ ಉತ್ತಮ ಸಾಹಿತಿಗೆ ಆ ಎಲ್ಲಾ ಪ್ರಪಂಚಗಳ ಅರಿವೂ, ತಿಳಿವೂ ತಕ್ಕಮಟ್ಟಿಗೆ ಚನ್ನಾಗಿರಬೇಕು. ಪ್ರತಿಯೊಂದು ಶಾಸ್ತçದಲ್ಲಿಯೂ ವಿವರಜ್ಞಾನವಿರುವ ಪ್ರವೀಣನಾಗಬೇಕೆಂದಲ್ಲ. ಅದರ ಸಾರವನ್ನು ಹೀರಿಕೊಂಡಿದ್ದರೆ ಸಾಕು. ಹಾಗಿರದಿದ್ದರೆ ಅವನು ನವೀನಮಾನವನಾಗುವುದಿಲ್ಲ. ಅವನಿಗೆ ಹೊಸ ದೃಷ್ಟಿ ಬರುವುದಿಲ್ಲ. ಅವನಿಂದ ನಿಜವಾದ ಹೊಸ ಸಾಹಿತ್ಯ ಸೃಷ್ಟಿಯಾಗುವುದಿಲ್ಲ.

ಈ ವಿಮರ್ಶೆ ಸೃಷ್ಟಿಕಾರಿಯಾದ ಕವಿಗೆ ಮಾತ್ರ ಅನ್ವಯಿಸುವುದಿಲ್ಲ. ಕಲಾಸೃಷ್ಟಿಯನ್ನು ಸವಿಯಲೆಳಸುವ ಸಹೃದಯರಿಗೂ ಮುಟ್ಟುತ್ತದೆ. ಏಕೆಂದರೆ ಕಾವ್ಯ ರಚನೆಯಂತೆಯೆ ನಿಜವಾದ ಕಾವ್ಯ ರಸಸ್ವಾದನೆಯೂ ಒಂದು ಸೃಷ್ಟಿಕಾರ್ಯವಾಗಿರುತ್ತದೆ.” ಕುವೆಂಪು ರವರ ಈ ಮಾತುಗಳನ್ನು ಛಾಯಾಗ್ರಹಣಕ್ಕೆ ಅಳವಡಿಸಿ ಚಂದವಾಗಿ ವಿವರಿಸಿದರು.

ಆನಂದ್ ಕುಮಾರ್ ರವರ ಬತ್ತಳಿಕೆಯಲ್ಲಿದ್ದ ಅಪಾರವಾದ ಶಸ್ತಾçಸ್ತçಗಳನ್ನ ಪ್ರಯೋಗಿಸುವುದು ಹೇಗೆಂಬುದರ ಕುರಿತು ನಮಗೆ ಮನದಟ್ಟು ಮಾಡಿಕೊಡಲು ಹಲವು ತರಗತಿಗಳನ್ನು ನಡೆಸಿದರು. ಅದರಲ್ಲಿ ಫೋಟೋಗ್ರಫಿಯನ್ನು ಅರ್ಥ ಮಾಡಿಕೊಳ್ಳಲು ಇರುವ ಮೂಲಭೂತ ಅಂಶಗಳನ್ನು ಅವರೇ ಕ್ಲಿಕ್ಕಿಸಿದ ಫೋಟೋಗಳ ಉದಾಹರಣೆ ಸಮೇತ ವಿವರಿಸಿದರು. ಒಂದು ಇಡೀ ದಿನ ಬೆಳಗಿನಿಂದ ರಾತ್ರಿಯವರೆಗೆ ಹಳ್ಳಿಯೊಂದರ ಜನಜೀವನವನ್ನು ಕ್ಯಾಮರಾ ಮೂಲಕ ನೋಡಿ ಕ್ಲಿಕ್ಕಿಸಿದ ಚಿತ್ರಗಳನ್ನು ತೋರಿಸುತ್ತಾ ಹೋದಂತೆಲ್ಲಾ ಫೋಟೋಗ್ರಫಿಯ ಮೂಲಕ ನೋಡಬಹುದಾದ ಅಪಾರ ಸಾಧ್ಯತೆಗಳು ತೆರೆದಂತಾಯಿತು. ಇದರ ಮಧ್ಯದಲ್ಲಿ ‘ನೂಲು’ ಎಂಬ ಒಂದು ವಿಷಯದ ಮೇಲೆ ತೆಗೆದ ಫೋಟೋಗಳನ್ನು ತೋರಿಸಿ ಅವುಗಳ ವಿವರಣೆ ನೀಡಿದರು. ಇವೆಲ್ಲವುಗಳ ನಡುವೆ ನಮ್ಮ ಗಮನ ಸೆಳೆದ ಮತ್ತು ಅತ್ಯಂತ ವಿಶೇಷ ಎನಿಸಿದ್ದು ಇವರು ಕುವೆಂಪುರವರ ಕೆಲವು ಪದ್ಯಗಳಿಗೆ ದೃಶ್ಯ ಸಂಯೋಜನೆ ಮಾಡುವ ಫೋಟೋಗಳನ್ನು ಮತ್ತು ವಿಡಿಯೋ ಮಾಡಿರುವುದನ್ನು ತೋರಿಸಿದರು. ಇದನ್ನು ನೋಡಿದ ಮೇಲೆ ನಮಗಾದ ಅನುಮಾನವೇನೆಂದರೆ ಈ ಫೋಟೋಗಳನ್ನ ನೋಡಿಯೇ ಕುವೆಂಪು ಆ ಸಾಲುಗಳನ್ನು ಪೋಣಿಸಿರಬಹುದೇನೋ ಎನ್ನುವಂತಿದ್ದವು. ಕೊನೆಯಲ್ಲಿ ಕ್ಯಾಮರಾದಲ್ಲಿ ತೆಗೆದ ಫೋಟೋಗಳನ್ನು ಅದರ ಮೂಲಕ್ಕೆ ದಕ್ಕೆಯಾಗದಂತೆ ಆ ಚಿತ್ರವನ್ನು ಮತ್ತಷ್ಟು ಉತ್ತಮಪಡಿಸಲು ಇರುವ ಎಡಿಟಿಂಗ್‌ನ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ನೀಡಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಪಂಪಯ್ಯರವರು ತಮ್ಮ ೩೦ ವರ್ಷಗಳ ಫೋಟೋಗ್ರಫಿ ಅನುಭವವನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ, ವನ್ಯಜೀವಿಗಳು ಅದರಲ್ಲೂ ಪಕ್ಷಿಗಳ ಫೋಟೋಗಳನ್ನು ತೆಗೆಯುವಾಗ ಎದುರಿಸಿದ ಸವಾಲುಗಳನ್ನು ಅವರು ತೆಗೆದ ಫೋಟೋಗಳ ಮೂಲಕವೇ ವಿವರಿಸಿ, ಪಕ್ಷಿ ವೀಕ್ಷಣೆ ಮತ್ತು ಅದರ ಫೋಟೋಗ್ರಫಿಯ ಕುರಿತು ಅತ್ಯುತ್ತಮ ಮಾಹಿತಿ ನೀಡಿದರು.

ಜನಜೀವನದ ಬದುಕು ಮತ್ತು ವೈವಿದ್ಯತೆ ಅವರ ಭಾವನೆಗಳನ್ನು ಸೆರೆೆಹಿಡಿಯಲು ಮೂಡಿಗೆರೆಯ ಸಂತೆಯಲ್ಲಿ ಕ್ಯಾಮರಾ ಹಿಡಿದು ಎಲ್ಲರೂ ಹೊರಟಾಗ ಇಡೀ ಸಂತೆಯೇ ಒಂದು ಕಾರ್ಯಾಗಾರದ ಪ್ರಯೋಗಶಾಲೆಯಂತಿತ್ತು. ಆನಂತರ ಮಲೆನಾಡಿನ ಮೈಸಿರಿಯ ಪ್ರಕೃತಿ ಸೊಬಗನ್ನು ಸೆರೆಹಿಡಿಯುವ, ಅದನ್ನು ಕ್ಯಾಮರಾ ಕಣ್ಣುಗಳ ಮೂಲಕ ಆನಂದಿಸಲೆAದು ದೇವರ ಮನೆ ಪ್ರದೇಶಕ್ಕೆ ಭೇಟಿ ನೀಡಲಾಗಿತ್ತು. ಹೋಗುತ್ತಾ ಹೋಗುತ್ತಾ ಭೂಮಿಯನ್ನು ಬಿಟ್ಟು ಆಕಾಶದ ಕಡೆ ಹೋಗುತ್ತಿದ್ದೇವೆನ್ನುವ ಅನುಭವದ ಜೊತೆಗೆ ಸುತ್ತಲೂ ಪಸರಿಸಿದ್ದ ಮಂಜಿನ ವಾತಾವರಣದಲ್ಲಿ ಎಲ್ಲರೂ ಮೈಮರೆತು ಪೃಕೃತಿಯನ್ನು ಆಸ್ವಾದಿಸಿ, ಅದನ್ನು ದಾಖಲಿಸುವ ಕೆಲಸಗಳಲ್ಲಿ ಮಗ್ನರಾದರು. ಕೊನೆಯಲ್ಲಿ ಪಕ್ಷಿ ವೀಕ್ಷಣೆಯನ್ನು ಕಲಿಯುವ ಮತ್ತು ಅವುಗಳನ್ನು ತಮ್ಮ ಕ್ಯಾಮರಾ ಚೌಕಟ್ಟಿನಲ್ಲಿ ಹಿಡಿದಿಡುವ ಸಾಹಸದ ಕೆಲಸ. ಹೀಗೆ ಒಂದು ಕಡೆ ಅಭ್ಯಾಸದ ಮೂಲಕ ಕಲಿಕೆ ಮತ್ತೊಂದು ಕಡೆ ಅದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಕ್ರಿಯೆ. ಈ ಕ್ರಿಯೆಯಲ್ಲಿ ಕೇವಲ ಕೊಠಡಿಯಲ್ಲಿ ಪಾಠ ಮಾಡುವುದು ಮಾತ್ರವಲ್ಲದೆ ನಮ್ಮ ಜೊತೆಗೆ ಎಲ್ಲಾ ಸಮಯದಲ್ಲೂ ಬಂದ ಆನಂದ್, ಪಂಪಯ್ಯ, ಪೂರ್ಣೇಶ್ ಮತ್ತು ಈ ಕಾರ್ಯಾಗಾರವನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ನಡೆಸಿದ ಪ್ರತಿಷ್ಠಾನದ ಎಲ್ಲರೂ ಅಭಿನಂದನಾರ್ಹರು ಅದರಲ್ಲೂ ಪ್ರಜ್ವಲ್, ನಂದೀಶ್ ಮತ್ತು ಅವಿನಾಶ್‌ರವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಲೇಬೇಕು. ಹತ್ತು ಹಲವು ಕುತೂಹಲದ ಪ್ರಶ್ನೆಗಳಿಗೆ ತಾಳ್ಮೆಯಿಂದ ಒಂದು ಲಯಬದ್ದವಾಗಿ ಸಂಗೀತದ ಸ್ವರದಂತೆ ಆನಂದ್ ರವರ ತರಗತಿಗಳು ನಡೆದವು, ಸುತ್ತಲಿನ ಹಸಿರಿನ ನಡುವೆ ಕೇವಲ ಪಕ್ಷಿಗಳ ಧ್ವನಿಯನ್ನ ಆಲಿಸಿ ಅದು ಇಂತಹದ್ದೇ ಪಕ್ಷಿ, ಇತ್ತಕಡೆಯಿಂದಲೇ ಬರುತ್ತಿದೆ ಎಂದು ನಿಖರವಾಗಿ ಹೇಳುವ ಪಂಪಯ್ಯನವರು ತಮ್ಮ ಕೊರಳಿಗೆ ಬೈನಾಕಿಲರ್ ಹಾಕಿಕೊಂಡು ಮುಂದೆ ಸಾಗುತ್ತಿದ್ದರೆ ಸಲಿಂ ಅಲಿಯವರೇ ನಮ್ಮೊಂದಿಗೆ ಹೆಜ್ಜೆಹಾಕಿದಂತಿತ್ತು.

ನಾನು ಹಲವು ಶಿಬಿರಗಳು, ಕಾರ್ಯಾಗಾರಗಳು, ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದೇನೆ. ಬಹುತೇಕ ಕಡೆ ಭಾಗವಹಿಸಿದವರು ತಮ್ಮ ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳುವುದರಲ್ಲಿ ಅಥವಾ ಸಂಪನ್ಮೂಲ ವ್ಯಕ್ತಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದರಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಆದರೆ ಮೂರು ದಿನದ ಈ ಕಾರ್ಯಾಗಾರದಲ್ಲಿ ಎಲ್ಲರ ಚಿತ್ತ ತಾವು ಕ್ಯಾಮರಾದ ಹಿಂದೆ ನಿಂತು ಅತ್ಯುತ್ತಮ ಚಿತ್ರಗಳನ್ನು ಸೆರೆ ಹಿಡಿಯುವುದು ಹೇಗೆ, ಅದಕ್ಕಿರುವ ತಾಂತ್ರಿಕ ಅಂಶಗಳು, ಬಣ್ಣ, ಆಕಾರ, ಬೆಳಕು ನೆರಳಿನ ಸಂಯೋಜನೆ… ಇಂತಹ ವಿಚಾರಗಳಲ್ಲಿ ಮಗ್ನರಾಗಿದ್ದರೇ ಹೋರತು ಎಲ್ಲರ ಕೈಯಲ್ಲಿ ಅತ್ಯುತ್ತಮ ಕ್ಯಾಮರಾಗಳಿದ್ದರೂ ತಮ್ಮ ಫೋಟೋಗಳನ್ನು ತೆಗೆಸಿಕೊಳ್ಳುವ ಆಸಕ್ತಿ ಯಾರಿಗೂ ಇರಲಿಲ್ಲ. ಇದು ಒಬ್ಬ ಫೋಟೋಗ್ರಾಫರ್‌ನಲ್ಲಿ ಮಾತ್ರ ಕಾಣಲು ಸಾಧ್ಯವಾದದ್ದು.

ಊರಿನಲ್ಲಿ ವಾರಕ್ಕೊಮ್ಮೆ ಸಂತೆ ನೋಡುವ ನಮಗೆ ಅಂದು ಕ್ಯಾಮರಾ ಕಣ್ಣುಗಳ ಮೂಲಕ ನೋಡಿದ ಮೂಡಿಗೆರೆ ಸಂತೆ ವಿಶೇಷವಾಗಿ ಕಾಣಿಸಿತು. ಅಲ್ಲಿ ಮಾರಾಟ ಮಾಡುವವರ, ಕೊಂಡುಕೊಳ್ಳುವವರ ಮುಖಭಾವ, ಬಣ್ಣ ಬಣ್ಣದ ತರಕಾರಿಗಳು ಅವುಗಳನ್ನು ಜೋಡಿಸಿಟ್ಟಿದ ರೀತಿ, ಮಳಿಗೆಯಂತಹ ಅಂಗಡಿಗಳಲ್ಲಿ ಜೋಡಿಸಿದ್ದ ಎಲ್ಲಾ ರೀತಿಯ ಸಾಮಾನುಗಳನ್ನು ಬಯಲಿನಲ್ಲಿ ಚಂದವಾಗಿ ಜೋಡಿಸಿಟ್ಟಿದ ವಿಧಾನ ಕೆಲವರಿಗೆ ವ್ಯಾಪಾರವಾಗುತ್ತಿದೆ ಎಂಬ ನಗು ಮುಖದಲ್ಲಿ ಭಾಸವಾಗುತ್ತಿತ್ತು, ಇನ್ನೂ ಕೆಲವರಿಗೆ ವ್ಯಾಪಾರ ಸರಿಯಾಗಿ ಆಗುತ್ತಿಲ್ಲವಲ್ಲಾ, ಹಾಕಿದ ಬಂಡವಾಳ ವಾಪಸ್ ಬರುವುದಿಲ್ಲವೇನೋ ಎಂಬ ಆತಂಕ, ಕೊಂಡುಕೊಳ್ಳಲು ಬಂದವರಿಗೆ ಎಲ್ಲಿ ಕಡಿಮೆ ಬೆಲೆಗೆ ಉತ್ತಮ ತರಕಾರಿ, ಸಾಮಾನುಗಳು ಸಿಗುತ್ತವೆ ಎಂದು ಹುಡುಕಾಡುವ ಕುತೂಹಲ. ಒಂದೇ ಪ್ರದೇಶದಲ್ಲಿ ಹಲವು ಸಂಗತಿಗಳು ಒಟ್ಟೊಟ್ಟಿಗೇ ನಡೆಯುತ್ತಿದ್ದವು. ಅವುಗಳನ್ನು ನಾವು ಯಾವ ದೃಷ್ಟಿಯ ಮೂಲಕ ನೋಡಬೇಕು ಎಂಬುದನ್ನು ನಿರ್ಧರಿಸಿಕೊಂಡು ಫೋಟೋಗ್ರಫಿಯ ಚೌಕಟ್ಟಿನಲ್ಲಿ ಎಲ್ಲವನ್ನು ಕಣ್ತುಂಬಿಕೊAಡೆವು. ನಮ್ಮ ಸಮಾಜವನ್ನು ಜನಜೀವನವನ್ನು ಅರ್ಥೈಸಿಕೊಳ್ಳಲು ಉತ್ತಮ ವಿಧಾನ ಎಂದೆನಿಸಿತು. ಅಲ್ಲಿಂದ ನಮ್ಮ ಪಯಣ ತೋಟದ ಮಧ್ಯದಲ್ಲಿರುವ ಒಂಟಿ ಮನೆಗೆ. ಇದು ತೇಜಸ್ವಿಯವರು ಓದಿ, ಬರೆದು ಉಸಿರಾಡಿದ್ದ ಮನೆ. ನಾವು ಭೇಟಿ ನೀಡಿದಾಗ ಯಾರೂ ಇರಲಿಲ್ಲ. ಆದರೆ ಅದೇನೋ ಆ ಮನೆ ನಮ್ಮನ್ನು ಭಾವನಾತ್ಮಕವಾಗಿ ಸೆಳೆದು ಹತ್ತಿರವಾಗಿಸಿತು.

ಪರಿಸರವನ್ನು ಆಸ್ವಾಧಿಸುತ್ತಾ, ಅದರ ಮಡಿಲಿನಲ್ಲಿ ಮಿಂದು ನೇರ ಕಣ್ಣುಗಳಿಂದ ಕಂಡದ್ದನ್ನು ಕ್ಯಾಮರಾ ಕಣ್ಣುಗಳಿಂದ ಯತಾವತ್ತಾಗಿ ಸೆರೆಹಿಡಿಯುವ ಕೌಶಲ್ಯದ ಪರೀಕ್ಷೆ ಒಂದೆಡೆಯಾದರೆ ಮತ್ತೊಂದೆಡೆ ಈ ಪರಿಸರದ ನೆನೆಪು ನಮ್ಮ ಜೊತೆ ಸದಾ ಇರುತ್ತದೆ ಮತ್ತು ನಮಗೆ ಮತ್ತಷ್ಟು ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಬೆಳಗಿನ ಜಾವ ೬.೩೦ ಕ್ಕೆ ದೇವರ ಮನೆ ಗುಡ್ಡದ ಪ್ರದೇಶವನ್ನು ಹತ್ತಿದಾಗ ಕಣ್ಣಮುಂದೆ ಕೇವಲ ಮಂಜು ಬಿಟ್ಟರೆ ಬೇರೆನೂ ಕಾಣಿಸುತ್ತಿರಲಿಲ್ಲ. ‘ರವಿ ಕಾಣದ್ದನ್ನು ಕವಿ ಕಂಡ’ ಎಂಬ೦ತೆ ಎದುರು ಕಾಣದ್ದನ್ನು ಕಾಲ ಬುಡದಲ್ಲಿ ನೋಡಲು ಆರಂಭಿಸಿದೆವು. ಇಬ್ಬನಿ ಹಸಿರು ಗಿಡಗಳ ಎಲೆಗಳ ಮೇಲೆ ಬಿದ್ದು ಮುತ್ತಿನ ಮಣಿಗಳನ್ನು ಸೃಷ್ಟಿಸಿತ್ತು. ಇದನ್ನು ಒಂದೊ೦ದು ಕೋನದಿಂದ ನೋಡಿದರೆ ಒಂದೊ೦ದು ರೀತಿ ಭಾಸವಾಗುತ್ತಿತ್ತು. ಅದನ್ನು ಕ್ಲಿಕ್ಕಿಸುತ್ತಿದ್ದಾಗಲೇ ಹಿಮದ ರಾಷಿ ಸರಿದು ಮುಂದಿದ್ದ ಬೆಟ್ಟದ ಸಾಲುಗಳು ಗೋಚರಿಸಲು ಆರಂಭಿಸಿತು. ಒಂದಾದ ಮೇಲೆ ಒಂದರ೦ತೆ ಪಕ್ಕಕ್ಕೆ ಜೋಡಿಸಿಟ್ಟಂತೆ ಬಾಸವಾಗುತ್ತಾ ಸೌಂದರ್ಯ ರಮಣೀಯ ದೃಶ್ಯವನ್ನು ನಮ್ಮದಾಗಿಸಿಕೊಂಡೆವು. ಮತ್ತೆ ಸ್ವಲ್ಪದರಲ್ಲಿ ಮಂಜು ಮುಸುಕಿದ ವಾತಾವರಣ. ಕ್ಷಣಕ್ಷಣಕ್ಕೂ ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ನೋಡುತ್ತಾ ಮೂಕವಿಸ್ಮಿತರಾಗಿ ನಿಂತಿದ್ದಾಗ. ತೇಜಸ್ವಿಯ ಮಾತೊಂದು ನೆನಪಾಯಿತು “ಜಗತ್ತಿನಲ್ಲಿ ಯಾವುದೂ ಜಡವಲ್ಲ” ಈ ಮಾತು ಸತ್ಯ ಎಂದೆನಿಸಿತು.

ಕ್ಷಣಾರ್ಧದಲ್ಲಿ ಮಾಯವಾಗುವ, ನಾವು ಎಷ್ಟೇ ನೋಡಲು ಪ್ರಯತ್ನಿಸಿದರೂ ನಮ್ಮ ಕಣ್ಣಿಗೆ ಗೋಚರಿಸದ ಪಕ್ಷಿಗಳನ್ನು ಸುಲಭವಾಗಿ ಗುರುತಿಸಿ ಅಗೋ ಅಲ್ಲಿ ನೋಡಿ ಈ ಪಕ್ಷಿ ಹಾರುತ್ತಿದೆ. ಇಲ್ಲೊಂದು ಬಂತು ನೋಡಿ ಎಂದು ಅದರ ಕನ್ನಡ ಮತ್ತು ಇಂಗ್ಲೀಷ್ ಹೆಸರುಗಳನ್ನು ಹೇಳುತ್ತಾ ಪಕ್ಷಿ ವೀಕ್ಷಣೆ ಮಾಡಿಸಿ, ಅವುಗಳನ್ನು ಫೋಟೋ ತೆಗೆಯಲು ಪ್ರೇರೇಪಿಸುತ್ತಿದ್ದವರು ಶಿಕ್ಷಕರಾದ ಪೂರ್ಣೇಶ್ ಮತ್ತು ಪಂಪಯ್ಯನವರು. ಕಷ್ಟಪಟ್ಟು ಅವರು ಹೇಳಿದ ಪಕ್ಷಿಯನ್ನು ನೋಡಿ ಕ್ಯಾಮರಾವನ್ನು ಕೈಗೆತ್ತಿಕೊಳ್ಳುವಷ್ಟರಲ್ಲಿ ಅವು ಮಿಂಚಿನAತೆ ಮಾಯವಾಗುತ್ತಿದ್ದವು. ಆಗ ಅವರು ಮಾಡಿದ ಪಾಠಗಳು, ಅನುಭವಗಳು ನೆನಪಿಗೆ ಬಂದವು. ನಾವು ಪಕ್ಷಿಗಳ ಫೋಟೋಗಳನ್ನು ತೆಗೆಯಬೇಕಾದರೆ ಮೊದಲು ಪಕ್ಷಿಗಳ ಬಗ್ಗೆ ತಿಳಿದುಕೊಂಡು, ಅವುಗಳನ್ನು ಅರ್ಥಮಾಡಿಕೊಳ್ಳಬೇಕು. ಅವುಗಳ ಚಲನವಲನ, ಅವುಗಳ ಆಹಾರ ಕ್ರಮ, ವಾಸಿಸುವ ಸ್ಥಳ – ವಿಧಾನ ಇವೆಲ್ಲವುಗಳ ತಿಳಿವಿದ್ದರೆ ಆಗ ಪಕ್ಷಿ ವೀಕ್ಷಣೆ ಬೇರೊಂದು ಪ್ರಪಂಚವನ್ನೇ ಸೃಷ್ಠಿಸುತ್ತದೆ. ಅದರಿಂದ ಆಚೆ ಬರಲು ನಮ್ಮಿಂದ ಸಾಧ್ಯವಾಗುವುದೇ ಇಲ್ಲ. ಪಕ್ಷಿ ವೀಕ್ಷಣೆ ಮತ್ತು ಅದರ ಫೋಟೋಗ್ರಫಿ ಜೀವನದ ಅತ್ಯುತ್ತಮ ಸಂಗಾತಿಯಾಗುತ್ತದೆ. ಮಾತ್ರವಲ್ಲ ಹಲವು ದುಷ್ಚಟಗಳಿಂದ ನಮ್ಮನ್ನು ದೂರಮಾಡಿ ಉತ್ತಮ ಹವ್ಯಾಸಕ್ಕೆ ಪ್ರೋತ್ಸಾಹಿಸುತ್ತದೆ.
ಇನ್ನೇನು ಸಮಾರೋಪ ಸಮಾರಂಭ ಆರಂಭವಾಗಬೇಕು ಅಷ್ಟರಲ್ಲಿ ಪ್ರತಿಷ್ಠಾನದ ಎದುರಿದ್ದ ಮರ ಒಂದಕ್ಕೆ ಒಂದು ಪಕ್ಷಿ ಬಂದು ಕುಳಿತುಕೊಂಡು ಒಳಗಿದ್ದವರನ್ನೆಲ್ಲಾ ‘ಬನ್ನಿ ಬನ್ನಿ ಥಿಯರಿ ಕ್ಲಾಸ್ ಕೇಳಿದ್ದು ಸಾಕು, ಪ್ರಾಕ್ಟಿಕಲ್ಲಾಗಿ ನನ್ನ ಫೋಟೋ ತೆಗೆಯಿರಿ’ ಎಂದು ಹೇಳುವಂತೆ ವಿವಿಧ ಬಂಗಿಗಳನ್ನು ಕೊಡಲು ಆರಂಭಿಸಿತು. ಅದನ್ನು ನೋಡಿದ ಕೆಲವರು ‘ಬನ್ನಿ ಪ್ರತಿಷ್ಠಾನದ ಮುಂದೆಯೇ ಪಕ್ಷಿ ಬಂದಿದೆ’É ಎಂದರು. ಎಲ್ಲರೂ ಕ್ಯಾಮರಾಗಳನ್ನು ಕೈಯಲ್ಲಿಡಿದು ಸಮರಕ್ಕೆ ಸಜ್ಜಾದವರಂತೆ ಮುನ್ನುಗ್ಗಿದರು. ನಮ್ಮನ್ನೆಲ್ಲಾ ನೋಡುತ್ತಾ ಅದು ತನ್ನ ಭಂಗಿಗಳನ್ನು ಬದಲಾಯಿಸಿ ಪೋಸ್ ನೀಡಲು ಆರಂಭಿಸಿತು. ಬೇರೆ ಬೇರೆ ಸೆಟ್ಟಿಂಗ್‌ನಲ್ಲಿ ಫೋಟೋ ಹೊಡೆದು ಅದನ್ನು ಪರೀಕ್ಷಿಸುವ ಸಂದರ್ಭದಲ್ಲಿ ನನ್ನ ಕ್ಯಾಮರಾದ ಮೆಮೋರಿ ಕಾರ್ಡ್ ಫುಲ್ ಎಂದು ಬಂತು. ಒಂದು ಕಡೆ ಪಕ್ಷಿಯ ಒಳ್ಳೆ ಫೋಟೋ ತೆಗೆಯಬೇಕೆನ್ನುವ ಕಾತುರ ಮತ್ತೊಂದೆಡೆ ಮೆಮೋರಿ ಇಲ್ಲ. ತಕ್ಷಣವೇ ಅಲ್ಲೇ ಪಕ್ಕದಲ್ಲಿದ್ದ ಕಾರಿನ ಡಿಕ್ಕಿಯಿಂದ ಲ್ಯಾಪ್‌ಟಾಪ್ ತೆಗೆದುಕೊಂಡು ಮೆಮೋರಿ ಕಾರ್ಡ್ನಿಂದ ಎಲ್ಲವನ್ನು ಟ್ರಾನ್ಸಫರ್ ಮಾಡೋಣವೆಂದು ಡಿಕ್ಕಿ ಓಪನ್ ಮಾಡಿದೆ ಎಡಗೈಯಲ್ಲಿ ಕ್ಯಾಮರಾ ಇತ್ತು, ಬಲಗೈಯಲ್ಲಿ ಕಾರ್ ಕೀ ಇತ್ತು. ಲ್ಯಾಪ್‌ಟಾಪ್ ಬ್ಯಾಗ್ ತೆಗೆದುಕೊಳ್ಳುವ ಆತುರದಲ್ಲಿ ಕೀಯನ್ನ ಕಾರ್‌ನ ಒಳಗೆ ಇಟ್ಟು, ಬ್ಯಾಗ್ ತೆಗೆದುಕೊಂಡು ಅಲ್ಲೇ ಕಟ್ಟೆಯ ಮೇಲೆ ಫೋಟೋಗಳನ್ನು ಟ್ರಾನ್ಸ್ಫರ್ ಮಾಡುತ್ತಲೇ ಪಕ್ಷಿಯನ್ನು ನೋಡುತ್ತಿದ್ದೆ. ಅದು ನನಗಾಗಿಯೇ ಕಾಯುತ್ತಿದೆ ಎಂದು ಭಾಸವಾಗುತ್ತಿತ್ತು. ಕೆಲಸ ಮುಗಿಯುವ ಸಮಯಕ್ಕೆ ಪಕ್ಷಿ ಇನ್ನೂ ಸ್ವಲ್ಪ ಹತ್ತಿರ ಬಂತು. ಆ ಸಂತೋಷಕ್ಕೆ ಬೇಗನೆ ಬ್ಯಾಗನ್ನು ಕಾರ್ ಡಿಕ್ಕಿಗೆ ಇಟ್ಟು ಡೋರ್ ಹಾಕಿದೆ. ನಂತರ ಕೆಲವು ಫೋಟೋಗಳನ್ನು ತೆಗೆದು ಪಕ್ಷಿ ಹೊರಟು ಹೋದ ಮೇಲೆ ಕ್ಯಾಮರಾವನ್ನು ಕಾರ್‌ನಲ್ಲಿ ಇಡಲು ಹೋದರೆ ಕಾರ್ ಲಾಕ್ ಆಗಿದೆ. ಕೀ ಕಾರ್ ಒಳಗೆ ಸೇರಿಕೊಂಡಿದೆ. ಏನು ಮಾಡುವುದೆಂದು ತೋಚದೆ ಅಲ್ಲಿದ್ದವರ ಸಹಾಯ ಕೇಳಿದೆ. ಕೆಲವರು ಮೆಕಾನಿಕ್‌ಗಳಿಗೆ ಫೋನ್ ಮಾಡಿದರು. ಆದರೂ ಏನೂ ಪ್ರಯೋಜನವಾಗಲಿಲ್ಲ. ಬೇರೆ ದಾರಿ ಕಾಣದ ೯೦ ಕಿಲೋಮೀಟರ್ ದೂರದಲ್ಲಿದ್ದ ಹಾಸನದ ಮನೆಯಲ್ಲಿರುವ ಮತ್ತೊಂದು ಕೀ ನೆನಪಿಗೆ ಬಂದು. ಬಾಳಸಂಗಾತಿ ಮಧುಗೆ ಫೋನ್ ಮಾಡಿ ನಡೆದದ್ದನ್ನೆಲ್ಲಾ ವಿವರಿಸಿ ಕೀ ತೆಗೆದುಕೊಂಡು ಬರುವಂತೆ ಮನವಿ ಮಾಡಿದೆ. ಅತ್ಯಂತ ಸಂತೋಷದಿAದ ಒಪ್ಪಿದ ಅವರು ಕೀ ತೆಗೆದುಕೊಂಡು ಪಯಣ ಆರಂಭಿಸಿದರು. ಅಷ್ಟರಲ್ಲಿ ಕಾರ್ಯಾಗಾರದ ಸಮಾರೋಪ ಮುಗಿದಿತ್ತು. ಹಾಸನದಿಂದ ಬಸ್ಸಿನಲ್ಲಿ ಕುಳಿತುಕೊಳ್ಳಲು ಸೀಟ್ ಸಿಗದೆ ೯೦ ಕಿಲೋಮೀಟರ್ ನಿಂದ ನಿಂತೇ ಪ್ರಯಾಣಿಸುತ್ತಿದ್ದಾಗ ನಾನು ಪ್ರತಿಷ್ಠಾನದ ಮೆಟ್ಟಿಲುಗಳ ಮೇಲೆ ಕುಳಿತು ತೇಜಸ್ವಿಯನ್ನೂ ಮತ್ತು ಮೂರು ದಿನದ ಕಾರ್ಯಾಗಾರವನ್ನೂ ಮೆಲುಕುಹಾಕುತ್ತಿದ್ದೆ.

ಒಟ್ಟಾರೆ ಇಡೀ ಕಾರ್ಯಾಗಾರ ಒಂದು ಅತ್ಯುತ್ತಮ ಅನುಭವದ ಸಮಗ್ರ ಪ್ಯಾಕೇಜ್ ನಂತಿತ್ತು. ಇದು ಎಲ್ಲರನ್ನು ತುಂಬಾ ದಿನಗಳವರೆಗೆ ಕಾಡುವುದು ಮಾತ್ರವಲ್ಲ, ಈ ಕಾರ್ಯಾಗಾರದ ಪ್ರತಿಫಲನ ನಮ್ಮ ಆಲೋಚನಾ ವಿಧಾನ, ನಾವು ನೋಡುವ ದೃಷ್ಠಿಕೋನ ಮತ್ತು ನಾವು ತೆಗೆಯುವ ಎಲ್ಲಾ ರೀತಿಯ ಫೋಟೋಗಳ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ. ಇಂತದ್ದೊAದು ಅವಕಾಶವನ್ನು ಕಲ್ಪಿಸಿಕೊಟ್ಟ ತೇಜಸ್ವಿ ಪ್ರತಿಷ್ಠಾನಕ್ಕೆ ಅದರ ಎಲ್ಲಾ ಸಿಬ್ಬಂದಿಗಳಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಮೂರು ದಿನ ನಮ್ಮವರೇ ಆಗಿದ್ದ ಎಲ್ಲಾ ಶಿಬಿರಾರ್ಥಿಗಳಿಗೂ ಅನಂತ ಅನಂತ ಧನ್ಯವಾದಗಳು.

‍ಲೇಖಕರು Admin

10 April, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading