ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಯಾರ ನೆರಳಲ್ಲ..

-ಶಾಲಿನಿ ರುದ್ರಮುನಿ

ಅಜೇಯಳ ಹೆಜ್ಜೆಗಳು

ಮಗಳೇ,
ನಿನ್ನ ಹುಟ್ಟು
ಬರಿ ಒಂದು ಘಟನೆ
ಮಾತ್ರವಲ್ಲ!
ಒಂದು ಪ್ರಶ್ನೆ?,

ಜಗದ ಪದಕೋಶದಲಿ
ಹೆಣ್ಣು ಎಂಬ ಪದಕ್ಕೆ
ಇನ್ನೂ ಎಷ್ಟು
ಗೋಡೆಗಳು ಉಳಿದಿವೆ?
ಎಂದು ನನ್ನೊಳಗೆ
ಕೇಳಿದ ಪ್ರಶ್ನೆ,

ನಿನಗೆ
ಸಮಾಜ ಹಲವಾರು
ಹೆಸರುಗಳನ್ನು ನೀಡಬಹುದು
ಪಾತ್ರಗಳಾಗಿ, ಬಂಧಗಳಾಗಿ,
ನಿರೀಕ್ಷೆಗಳಾಗಿ,
ಆದರೆ,
ಹೆಸರಿಗಿಂತ ದೊಡ್ಡದು
ನಿನ್ನ ಒಳಗೊಂದು
ಮೌನ ಪ್ರಶ್ನೆ,
“ನೀನು ನೀನೇ ಆಗಿರುವೆಯೆ?”

ಹೆಂಡತಿಯಾಗುವುದು
ಒಂದು ಪಾತ್ರದ ನೆರಳು,
ಆದರೆ,
ಒಬ್ಬ ಮನುಷ್ಯಳಾಗುವುದು
ಒಂದು ಜಾಗೃತಿ.

ನಿನ್ನ ದಾರಿ
ಯಾರ ನಕ್ಷೆಯಲ್ಲೂ ಇರುವುದಿಲ್ಲ.
ನದಿ’
ಪರ್ವತವನ್ನು ಕೇಳಿ ಹರಿಯುವುದಿಲ್ಲ;
ಕಲ್ಲುಗಳನ್ನು ತಟ್ಟಿ
ತನ್ನ ದಿಕ್ಕನ್ನು ತಾನೇ
ಕಂಡುಕೊಳ್ಳುತ್ತದೆ.

ಹಾಗೆಯೇ,
ನಿನ್ನ ಕನಸುಗಳು
ಆಕಾಶದ ಅಳತೆಯಲ್ಲಿ ಹುಟ್ಟಲಿ
ಆದರೆ,
ಅವುಗಳನ್ನು ನೆಲದ ಮೇಲೆ
ನಿಲ್ಲಿಸುವ
ಶ್ರಮದ ಕಲ್ಲುಗಳು
ನಿನ್ನ ಹೆಜ್ಜೆಯೇ ಆಗಲಿ.

ಜಗತ್ತು
ಕೆಲವೊಮ್ಮೆ ನಿನ್ನ ಧ್ವನಿಯನ್ನು
ಮೌನದೊಳಗೆ
ಮುಚ್ಚಲು ಯತ್ನಿಸಬಹುದು,
ಆ ಕ್ಷಣದಲ್ಲಿ
ನಿನ್ನ ಸತ್ಯ
ನಿನ್ನ ಕಂಠದಲ್ಲಿ ನಿಂತು
ಒಂದು ಮಾರ್ಧನಿಯಾಗಲಿ.

ಸ್ವಾತಂತ್ರ್ಯ,
ಯಾರೂ ಕೊಡುವ ವರವಲ್ಲ.
ಅದು,
ಭಯದ ಕತ್ತಲನ್ನು
ದಾಟಿದ ಮನಸ್ಸಿನ
ಒಳಗಿನ ಬೆಳಕು,

ಮಗಳೇ,
ನಾನು ನಿನಗೆ ಬಿಟ್ಟು ಹೋಗುವದು
ಆಸ್ತಿ ಅಲ್ಲ, ಹೆಸರು ಅಲ್ಲ,
ಒಂದು ಚಿಕ್ಕ ತತ್ವ!

ತಲೆ ತಗ್ಗಿಸದೆ
ಬದುಕುವ ಧೈರ್ಯ,

ಒಂದು ದಿನ
ನಿನ್ನ ಹೆಜ್ಜೆಗಳು
ಈ ಭೂಮಿಯ ಧೂಳಿನ ಮೇಲೆ ಬರೆದುಕೊಳ್ಳಲಿ,

“ನಾನು ಯಾರ ನೆರಳಲ್ಲ;
ನನ್ನ ಅಸ್ತಿತ್ವವೇ
ನನ್ನ ಜಯ.”…

‍ಲೇಖಕರು Admin

11 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading