ಕಳೆದುಕೊಳ್ಳುತ್ತಿರುವುದನ್ನು ಮರುಶೋಧಿಸುವ ಪ್ರಯೋಗ “ ಸಂತ್ಯಾಗ ನಿಂತಾನ ಕಬೀರ “
-ನಾ ದಿವಾಕರ
ಮರಾಠಿ ನಾಟಕಕಾರ , ರಾಷ್ಟ್ರೀಯ ನಾಟಕ ಶಾಲೆಯ (NSD) ಮಾಜಿ ನಿರ್ದೇಶಕ ವಾಮನ್ ಕೇಂದ್ರೆ ಮುಂಬೈ ವಿವಿಧ್‌ಭಾರತಿಯ ಕಾರ್ಯಕ್ರಮವೊಂದರಲ್ಲಿ, ಸಮಕಾಲೀನ ಸನ್ನಿವೇಶದಲ್ಲಿ ರಂಗಭೂಮಿಯ ಗುರಿ ಏನಾಗಿರಬೇಕು ಎಂಬ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ : “ ನಮ್ಮ ವರ್ತಮಾನದ ಸಮಾಜ ಎದುರಿಸುತ್ತಿರುವ ಅಸಂಗತಿಗಳನ್ನು-ಅಸಾಮಂಜಸ್ಯಗಳನ್ನು ಪರಿಹರಿಸುವ ಮಾರ್ಗಗಳನ್ನು ಶೋಧಿಸಿ ಸಮಾಜದ ಮುಂದೆ ಇರಿಸುವುದು ಹಾಗೂ ಶತಮಾನಗಳಿಂದ ಬೇರೂರಿ ಆಂತರಿಕ ವ್ಯಾಧಿಯಂತೆ ಕಾಡುತ್ತಿರುವ ಸಾಮಾಜಿಕ ಒಳಬೇನೆ-ಹೊರಬೇಗುದಿಗಳಿಗೆ ಕನ್ನಡಿ ಹಿಡಿಯುವುದು ”. (ಇದು ಅವರ ಮಾತುಗಳಲ್ಲಿ ಧ್ವನಿಸುವ ಒಳಾರ್ಥ-ಯಥಾವತ್ ಭಾಷಾಂತರವಲ್ಲ). ಭಾರತೀಯ-ಕನ್ನಡದ ರಂಗಭೂಮಿ ಈ ಗುರಿಯನ್ನು ಮರೆತಿಲ್ಲ.
ಆದರೆ ʼ ಸಮಕಾಲೀನ ʼ (Contemporary) ಎಂದ ಕೂಡಲೇ ನಮಗೆ ವರ್ತಮಾನ (Present) ಎದುರಾಗುತ್ತದೆ. ಭಾರತದ ರಾಜಕಾರಣ, ಸಂಸ್ಕೃತಿ ಮತ್ತು ಸಮಾಜ ಸಾಗುತ್ತಿರುವ ದಾರಿಯನ್ನು ಗಮನಿಸಿದಾಗ, ನಾವು ʼ ಭಾರತೀಯ ಸಂಸ್ಕೃತಿ ʼ ಎಂಬ ವಿಶಾಲಾರ್ಥದ ʼ ಮೂಲ ನೆಲಸಾಂಸ್ಕೃತಿಕ ʼ ನೆಲೆಯಲ್ಲಿ ಇದ್ದ ಹಾಗೂ ಇರಬೇಕಾದ ಜೀವನಮೌಲ್ಯಗಳನ್ನು, ಸಾಮಾಜಿಕ ಔದಾತ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಆತಂಕ ಮೂಡುತ್ತದೆ. ಸಂಸ್ಕೃತಿಯನ್ನು ಸಾಂಸ್ಥಿಕ ಧರ್ಮದೊಡನೆ ಸಮೀಕರಿಸಿ ವಿರೂಪಗೊಳಿಸಿರುವ ಅಸಾಂಗತ್ಯವೇ ಡಿಜಿಟಲ್ ಯುಗದ ಭಾರತೀಯ ಸಮಾಜವನ್ನು ದಿಕ್ಕುಗೆಡಿಸುತ್ತಿದೆ. ಈ ವಿರೂಪವನ್ನು ಸಮಾಜಕ್ಕೆ ತೋರಿಸುವುದು ಹೇಗೆ ? ಇದರಿಂದ ಹೊರಬರುವ ಮಾರ್ಗೋಪಾಯಗಳನ್ನು ಸೂಚಿಸುವುದು ಹೇಗೆ ?
ರಂಗದ ಮೇಲೆ ಉತ್ತರಗಳು
ಈ ಪ್ರಶ್ನೆಗಳಿಗೆ ಕನ್ನಡದ ರಂಗಭೂಮಿ ಸದಾ ತೆರೆದ ಬಾಗಿಲಾಗಿದೆ. ಆವರಿಸುತ್ತಿರುವ ಸಾಂಸ್ಕೃತಿಕ ಫ್ಯಾಸಿಸಂ ಮತ್ತು ರಾಜಕೀಯ ನಿರಂಕುಶಾಧಿಕಾರದ ವಾತಾವರಣದಲ್ಲಿ ಕಳೆದುಹೋಗುತ್ತಿರುವ ಸಾಮಾಜಿಕ ಸಾಮರಸ್ಯ-ಸಹಬಾಳ್ವೆಯ ಔದಾತ್ಯಗಳನ್ನು ಮರಳಿ ಪಡೆಯುವ ಹಾದಿಯಲ್ಲಿ ರಂಗಭೂಮಿಗೆ ಎರಡು ಆಯ್ಕೆಗಳಿರುತ್ತವೆ. ಮೊದಲನೆಯದು, ಇತಿಹಾಸದಲ್ಲಿ ಕಳೆದುಹೋದ ದಾರ್ಶನಿಕರ ವೈಯುಕ್ತಿಕ ಬದುಕಿನ ಪ್ರಸಂಗ-ಘಟನೆಗಳನ್ನು ಸಮಕಾಲೀನಗೊಳಿಸಿ, ಅದರೊಳಗಿನ ಸಾಮರಸ್ಯದ ಸಂದೇಶವನ್ನು ಪ್ರೇಕ್ಷಕರ ಮುಂದಿಡುವುದು. ಎರಡನೆಯದು, ವರ್ತಮಾನದ ಸಾಮಾಜಿಕ ವಿಕೃತಿಗಳಿಂದ ಹೊರಬರುವ ಉಪಾಯಗಳನ್ನು ಕಣ್ಣೆದುರು ಘಟಿಸುತ್ತಿರುವ ವಿನಾಶಕಾರಿ ಪ್ರಸಂಗಗಳ ಹಿನ್ನೆಲೆಯಲ್ಲಿ ಸೂಚಿಸುವುದು. ಸದ್ಯಕ್ಕೆ ಕನ್ನಡ ರಂಗಭೂಮಿ ಹೆಚ್ಚಾಗಿ ಮೊದಲನೆಯ ಆಯ್ಕೆಯನ್ನೇ ಅಪ್ಪಿಕೊಂಡಿರುವುದು ವಾಸ್ತವ.

ಇದೇ ದಾರಿಯಲ್ಲಿ ಮೈಸೂರಿನ ಜಿಪಿಐಇರ್ ರಂಗ ತಂಡದ ಯುವ ನಿರ್ದೇಶಕ ಎಂ.ಪಿ. ಹರಿದತ್ತ ಅರಮನೆನಗರಿ ಅವರ ಸಾರಥ್ಯದಲ್ಲಿ , ಭೀಷ್ಮ ಸಹಾನಿ ಅವರ “ ಕಬೀರ್ ಖಡಾ ಬಾಜಾರ್ ಮೆ” ನಾಟಕದ ಕನ್ನಡ ರೂಪಾಂತರ “ಸಂತ್ಯಾಗ ನಿಂತಾನ ಕಬೀರ” ಕನ್ನಡ ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಮೈಸೂರಿನ ರಂಗಾಸಕ್ತರನ್ನು ಎರಡು ದಿನಗಳ ಕಾಲ ರಂಜಿಸಿದ ಈ ನಾಟಕ ಉತ್ತರ ಕರ್ನಾಟಕದ ಭಾಷೆಯಲ್ಲಿದ್ದು, ಬಿಗಿಯಾದ ನಿರ್ದೇಶನ ಮತ್ತು ಎಲ್ಲ ಕಲಾವಿದರ ಸಹಜ ಅಭಿನಯ, ಅರ್ಥಪೂರ್ಣ ಪದ್ಯಸಾಹಿತ್ಯದೊಂದಿಗೆ ಹೊರಮೂಡಿರುವ “ಸಂತ್ಯಾಗ ನಿಂತಾನ ಕಬೀರ” ಎರಡು ಗಂಟೆಗಳ ಕಾಲ ರಂಗಪ್ರೇಕ್ಷಕರನ್ನು, ವರ್ತಮಾನದ ಸಮಾಜದ ಪ್ರಕ್ಷುಬ್ಧ ಸಂತೆಯಲ್ಲಿ, 15ನೆ ಶತಮಾನದ ಸಂತಕವಿ ಕಬೀರರೊಡನೆ, ಸುಶ್ರಾವ್ಯ ಗಾಯನದ ದಾರ್ಶನಿಕ ಪದ್ಯಗಳ ಜೊತೆಗೆ, ನಿಲ್ಲಿಸಿಬಿಡುತ್ತದೆ.
ಮೂಲ ನಾಟಕದ ಹಂದರ
ಹಿಂದಿ ಸಾಹಿತ್ಯದ ಮೇರು ಪ್ರತಿಭೆ ನಾಟಕಕಾರ, ನಟ ಹಾಗೂ ಲೇಖಕರಾದ ಭೀಷ್ಮ ಸಹಾನಿ ವಿರಚಿತ ಈ ನಾಟಕದ ಮೂಲ ಕಥಾವಸ್ತು ಸಂತ ಕಬೀರ ಮತ್ತು ಆತನ ಸಾಮಾಜಿಕ ಸಂಘರ್ಷ. ಕಬೀರರ ಹುಟ್ಟು ಧಾರ್ಮಿಕ ನೆಲೆಯಲ್ಲಿ ಚಾರಿತ್ರಿಕವಾಗಿ ಇತ್ಯರ್ಥವಾಗದ ವಿದ್ಯಮಾನವಾದರೂ ಮೂಲ ಲೇಖಕರು ಕಬೀರರನ್ನು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಪರಿತ್ಯಕ್ತನಾಗಿ ನೇಕಾರ ಮುಸ್ಲಿಂ ಕುಟುಂಬದ ಪರಿಸರದಲ್ಲಿ ಬೆಳೆದು ಸಂತನಾಗಿ ರೂಪುಗೊಂಡ ದಾರ್ಶನಿಕ ವ್ಯಕ್ತಿಯಾಗಿಯೇ ಚಿತ್ರಿಸಿದ್ದಾರೆ. ಗೋಪಾಲ ವಾಜಪೇಯಿ ಅವರ ಕನ್ನಡ ರೂಪಾಂತರವೂ ಇದೇ ಜಾಡನ್ನು ಅನುಸರಿಸಿದ್ದಾರೆ. ಬ್ರಾಹ್ಮಣ ಜನ್ಮ-ಮುಸ್ಲಿಂ ಪಾಲನೆ ಈ ತಾಕಲಾಟಗಳ ನಡುವೆ ಕಬೀರರಲ್ಲಿ ಕಾಣಬೇಕಿರುವುದು , ಇಂದು ನಾವೆಲ್ಲಾ ತಡಕಾಡುತ್ತಿರುವ, ಹಪಹಪಿಸುತ್ತಿರುವ ʼವಿಶ್ವಮಾನವ ವ್ಯಕ್ತಿತ್ವʼ. ಇದನ್ನು ನಾಟಕದಲ್ಲಿ ಮನಮುಟ್ಟುವಂತೆ ಮೂಡಿಸಲಾಗಿದೆ.
15ನೆಯ ಶತಮಾನದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರ ಕಾಶಿಯಲ್ಲಿ ಜನಿಸುವ ಕಬೀರರು ಪ್ರಪಂಚಕ್ಕೆ ಕಣ್ತೆರೆಯುವ ಮುನ್ನವೇ ಇಳೆಯ ಮಡಿಲಿನಲ್ಲಿ ಮಲಗಿರುವ ಅನಾಥ ಶಿಶುವಿನ ರೂಪದಲ್ಲಿ ನೇಕಾರ ಕಸುಬಿನ ಬಡ ಮುಸ್ಲಿಂ ದಂಪತಿಗೆ ಸಿಗುತ್ತಾರೆ. 2026ರಲ್ಲೂ ನಾವು ಕಾಣುತ್ತಿರುವ ಹಿಂದೂ-ಮುಸ್ಲಿಂ ಸಮುದಾಯದ ಡಾಂಭಿಕ ಧಾರ್ಮಿಕತೆ ಮತ್ತು ಕರ್ಮಠ ಜೀವನ ವಿಧಾನಗಳೇ , ಸಮಾಜದ ಪ್ರಧಾನ ನಾಡಿಯಾಗಿದ್ದ 15ನೆಯ ಶತಮಾನದಲ್ಲಿ ಕಬೀರರು ಈ ಎರಡೂ ಕರ್ಮಠ ವ್ಯವಸ್ಥೆಗಳ ನಡುವೆಯೇ ಬೆಳೆದು ದೊಡ್ಡವನಾಗುತ್ತಾರೆ. ಹೆತ್ತವ್ವನ ಮುಖಪರಿಚಯವೇ ಇಲ್ಲದ ಕಬೀರರಿಗೆ ಬಡ ಮುಸ್ಲಿಂ ದಂಪತಿಗಳಲ್ಲಿ ಹೊಸ ಜಗತ್ತು ಕಾಣಿಸುತ್ತದೆ ಆದರೆ ಈ ಜಗತ್ತನ್ನು ದಶದಿಕ್ಕುಗಳಿಂದಲೂ ಆವರಿಸಿಕೊಂಡಿರುವ ಧಾರ್ಮಿಕತೆ, ಸಂಪ್ರದಾಯ, ಆಚರಣೆಗಳು ಕಬೀರರ ಆಲೋಚನಾ ಕ್ರಮಕ್ಕೆ ಅಪಥ್ಯವಾಗುತ್ತವೆ.
ಸಂವೇದನೆ ಸಾಮರಸ್ಯದ ಶೋಧ
ಈ ತಾಕಲಾಟದೊಂದಿಗೇ ಬೆಳೆಯುವ ಮುಸ್ಲಿಂ ನೇಕಾರ ಕುಟುಂಬದ ಕಬೀರರಿಗೆ ಸಹಜವಾದ ಮಾನವ ಪ್ರೀತಿ-ಬಾಂಧವ್ಯ ಮತ್ತು ಸಂವೇದನೆಗಳಿಗೆ ಅಡ್ಡಬೇಲಿಗಳಾಗಿ ಕಾಣುವ ಕರ್ಮಠ ಧರ್ಮಿಷ್ಟರ ಕಟ್ಟುಪಾಡುಗಳು ತನ್ನದೇ ಆದ ಸಾಮಾಜಿಕ ಸಾಮರಸ್ಯದ ಹಾದಿಯನ್ನು ಕಟ್ಟಿಕೊಳ್ಳಲು ಪ್ರಚೋದಿಸುತ್ತವೆ. ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಪ್ರೀತಿಸುವುದು ಮಹಾಪರಾಧವಾಗಿ ಕಾಣುವ ವರ್ತಮಾನವನ್ನು ನೆನಪಿಸುವಂತೆ, ಈ ನಾಟಕದಲ್ಲೂ ಅಂತರ್ ಧರ್ಮೀಯ ವಿವಾಹದ ಜಂಜಾಟಗಳು ಕಬೀರರಲ್ಲಿ ಮತೀಯ ಸಾಮರಸ್ಯದ ಕಿಡಿಗಳನ್ನು ಹೊತ್ತಿಸುತ್ತದೆ. ಹಿಂದೂ-ಮುಸ್ಲಿಂ ಸಮಾಜಗಳಲ್ಲಿ ಅಂಟುಜಾಢ್ಯವಾಗಿ ಬೇರೂರಿರುವ ಮೂಡ ನಂಬಿಕೆಗಳು, ಜಾತಿ ಭೇದ, ಮತಭೇದ, ಮತದ್ವೇಷ ಮತ್ತು ಕರ್ಮಠ ಧಾರ್ಮಿಕ ಆಚರಣೆಗಳನ್ನು ಬಾಲ್ಯಾವಸ್ಥೆಯಿಂದಲೇ ಪ್ರಶ್ನಿಸಲಾರಂಭಿಸುವ ಕಬೀರರು ಪ್ರೀತಿ , ಬಾಂಧವ್ಯ, ಶಾಂತಿ ಮತ್ತು ಸಮಾನತೆಯ ಸಂದೇಶವನ್ನು ಹರಡಲಾರಂಭಿಸುತ್ತಾರೆ.
ಹಾದಿಗೆ ಅಡ್ಡ ಬಂದ ಕಾರಣಕ್ಕೆ ಕೆಳಜಾತಿ ಬಾಲಕನಿಗೆ ಹೊಡೆಯುವ ಹಿಂದೂ ಧರ್ಮಗುರುವನ್ನು ವಿರೋಧಿಸುವ ಕಬೀರರು, ಧಾರ್ಮಿಕ ಕಟ್ಟಳೆಯನ್ನು ಮೀರಿ ವಿವಾಹವಾಗುವ ಮುಸ್ಲಿಂ ಯುವತಿಯ ದಂಡನೆ ಬಯಸುವ ಮೌಲ್ವಿಯನ್ನೂ ಪ್ರಶ್ನಿಸುತ್ತಾರೆ. ಮತೀಯವಾದವನ್ನು ಕೇವಲ ಹಿಂದೂ-ಮುಸ್ಲಿಂ ಧಾರ್ಮಿಕ ಚೌಕಟ್ಟುಗಳಲ್ಲಿ ನೋಡದೆ, ಸಾಮಾಜಿಕ ವ್ಯಾಧಿಯಂತೆ ನೋಡುವ ಕಬೀರರು ತಳಸಮುದಾಯಗಳ ಪರ ನಿಲ್ಲುವುದೇ ಅಲ್ಲದೆ, ಸಮಾಜಗಳನ್ನು ಬಾಧಿಸುವ ಕಂದಾಚಾರ ಮತ್ತು ಮೌಢ್ಯಗಳನ್ನು ಹೋಗಲಾಡಿಸಲು ಅಧ್ಯಾತ್ಮದ ಹೊಸ ಮಾರ್ಗವನ್ನು ಶೋಧಿಸುತ್ತಾರೆ. ಮನೆ, ಮಠ, ಗುಡಿ ಗುಂಡಾರಗಳಲ್ಲಿ ಕುಳಿತು ತಪಸ್ಸು ಮಾಡುವುದರ ಬದಲು ಸಮಾಜ ಎಂಬ ಮಾನವ ಸಂತೆಯೊಳಗೆ ನುಗ್ಗಿ ಅಲ್ಲಿ ಕಾಣುವ ಅನಿಷ್ಠಗಳ ವಿರುದ್ಧ ಜನಜಾಗೃತಿ ಮೂಡಿಸುವ ಈ ವಿಧಾನ ಎರಡೂ ಧರ್ಮಗಳ ಜನ ಮನ್ನಣೆ ಪಡೆಯುತ್ತದೆ ಆದರೆ ಧಾರ್ಮಿಕ ನೇತಾರರ ಕೆಂಗಣ್ಣಿಗೆ ಗುರಿಯಾಗುತ್ತದೆ.
ಸಮಾಜವೆಂಬೋ ಸಂತೆಯಲ್ಲಿ
ತನ್ನ ಸ್ವಧರ್ಮೀಯರಿಂದ ಬಹುತೇಕ ಬಹಿಷ್ಕೃತನಾಗಿ ಕಾಣುವ ಕಬೀರರು ಹಿಂದೂ ಮತಾಂಧರ ದೃಷ್ಟಿಯಲ್ಲಿ ವಿಭಜಕ ಶಕ್ತಿಯಾಗಿ ಕಾಣತೊಡಗುತ್ತಾರೆ. ಕುಲ ಕಸುಬನ್ನು ಅನುಕರಿಸುವುದಕ್ಕಿಂತಲೂ ಸಮಾಜದಲ್ಲಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಸಂತನಾಗಿ ತನ್ನ ಏಕತಾರಿ ನಾದದೊಂದಿಗೆ ದೋಹಾಗಳನ್ನು (ಪದ್ಯಗಳು) ಹಾಡುತ್ತಾ ಜನಜಾಗೃತಿಗೆ ಕಾರಣನಾಗುತ್ತಾರೆ. ಹಿಂದೂ ದೊರೆ, ಮುಸ್ಲಿಂ ಕೊತ್ವಾಲ ಹಾಗು ದೆಹಲಿಯಿಂದ ರಾಜ್ಯಭಾರ ಮಾಡುವ ಸಿಕಂದರ್ ಲೋಧಿ ಹೀಗೆ ಎಲ್ಲರು ಧರ್ಮ ಸಂರಕ್ಷಕರೇ ಹೊರತು ಮನುಷ್ಯ ಮನುಷ್ಯರ ನಡುವೆ ಪ್ರೇಮವನ್ನು ಪೋಷಿಸುವ ಗೋಜಿಗೆ ಯಾರು ಹೋಗುವುದಿಲ್ಲ. ಜಾತಿ-ಧರ್ಮ, ಮೇಲು-ಕೀಳು ಹೆಸರಿನಲ್ಲಿ ಹೊಡೆದಾಡುವ ಸಾಮಾಜಿಕ ವ್ಯಾಧಿಯ ಬಗ್ಗೆ ಇವರ್ಯಾರಿಗೂ ಚಿಂತೆಯಿಲ್ಲ ಎಂದು ಖಚಿತಪಡಿಸಿಕೊಂಡ ಕಬೀರ ಈ ವ್ಯಾಧಿಗೆ ಚಿಕಿತ್ಸಕ ಸಾಧನವಾಗಿ ತನ್ನ ಬದುಕನ್ನು ಮೀಸಲಿಡುತ್ತಾರೆ.
ತಮ್ಮ ಕೌಟುಂಬಿಕ ಬದುಕನ್ನೂ ಲೆಕ್ಕಿಸದೆ ಈ ಚಿಕಿತ್ಸಕ ಮಾರ್ಗದಲ್ಲಿ ನಡೆಯುವ ಕಬೀರರು ಜ್ಞಾನದ ಪ್ರಸರಣದೊಂದಿಗೆ ದಾಸೋಹವನ್ನೂ ಪ್ರೋತ್ಸಾಹಿಸಿ ಎರಡೂ ಧರ್ಮಗಳ ಯುವಸಮೂಹವನ್ನು ತಮ್ಮ ವಿಮೋಚಕ ನಡೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾರೆ. ಸಿಕಂದರ್ ಲೋಧಿ ಮತ್ತು ಕೋತ್ವಾಲರು ಒಡ್ಡುವ ಆಮಿಷಗಳಿಗೆ ಬಲಿಯಾಗದೆ ರಾಜಿರಹಿತವಾಗಿ ಮತೀಯ ಸಾಮರಸ್ಯಕ್ಕಾಗಿ ಜೀವನ ಮುಡಿಪಾಗಿಡುವ ಕಬೀರರು ಭೌತಿಕವಾಗಿ ಇದಕ್ಕೆ ದಂಡನೆಯನ್ನೂ ಪಡೆಯುತ್ತಾರೆ. ಆದರೆ ಅಂತಿಮವಾಗಿ ಗೆಲ್ಲುವುದು ಕಬೀರರ ಸಾಮರಸ್ಯ ಸಂದೇಶ ಮತ್ತು ಮಾನವ ಪ್ರೀತಿಯ ಸಂದೇಶಗಳು.
ರಂಗದ ಮೇಲೆ ಕಬೀರ
ಮನುಷ್ಯರ ಹುಟ್ಟು-ಸಂಸ್ಕೃತಿ ಮತ್ತು ಸಮಾಜ ಈ ಮೂರರ ನಡುವಿನ ತಾಕಲಾಟಗಳು ಇವತ್ತಿಗೂ ವಾಸ್ತವವೇ ಆಗಿದ್ದು 15ನೆಯ ಶತಮಾನದಲ್ಲೇ ಕಬೀರರ ಬದುಕು ಇಲ್ಲೊಂದು ಸುಂದರ ಮಾನವೀಯ ಪ್ರಪಂಚವನ್ನು ಕಟ್ಟುತ್ತಾರೆ. ಅವರ ಈ ಕಟ್ಟುವಿಕೆ ಕಬೀರ ದೋಹಾಗಳಲ್ಲಿ ಸಕಲ ಆಯಾಮಗಳಲ್ಲೂ ಅನಾವರಣಗೊಳ್ಳುತ್ತವೆ. ಈ ಮೂರೂ ವಿದ್ಯಮಾನಗಳು ಪರಸ್ಪರ ಪೂರಕವಾಗಿರುವುದಿಲ್ಲ ಎಂಬ ಕಟು ವಾಸ್ತವವನ್ನು ಕಬೀರರು ಶತಮಾನಗಳ ಹಿಂದೆ ಸಾಬೀತುಪಡಿಸುವುದು ಈ ನಾಟಕದ ಮೂಲ ಎಳೆ. ಸರಳ ರೇಖೆಯಂತೆ ಕಂಡರೂ ಈ ಎಳೆಯಿಂದ ಕವಲೊಡೆಯುವ ಹಲವು ಸಾಮಾಜಿಕ ವಾಸ್ತವಗಳನ್ನು “ಸಂತ್ಯಾಗ ನಿಂತಾನ ಕಬೀರ” ಎಳೆಎಳೆಯಾಗಿ ಬಿಡಿಸುತ್ತದೆ. ಕಬೀರರ ಪದ್ಯಗಳು ಜೀವನ ಮೌಲ್ಯಗಳ ಸಾಹಿತ್ಯಿಕ ಹೂರಣವಾಗಿ ಹೊರಹೊಮ್ಮುತ್ತವೆ.
ನಿರ್ದೇಶಕ ಹರಿದತ್ತ ಅವರ ನಿರ್ದೇಶನ ಬಿಗಿಯಾಗಿದ್ದು, ನಿಧಾನವಾಗಿ ತೆರೆದುಕೊಳ್ಳುತ್ತಾ ಒಮ್ಮೆಲೆ ಸ್ಫೋಟಿಸುವ ಕಬೀರರ ಸಾಮಾಜಿಕ-ಧಾರ್ಮಿಕ ಸಂಘರ್ಷವನ್ನು ಪ್ರೇಕ್ಷಕರ ಎದೆಗಿಳಿಯುವಂತೆ ನಿರೂಪಣೆ ಮಾಡಿದ್ದಾರೆ. ಯುವ ಕಲಾವಿದರು ಮತ್ತು ನುರಿತ ಕಲಾವಿದರ ಹೂರಣವನ್ನು ರಂಗಪ್ರಯೋಗದಲ್ಲಿ ಬಳಸಿರುವ ನಿರ್ದೇಶಕರು, ಯಾವ ಗಳಿಗೆಯಲ್ಲೂ ನೀರಸ ಎನಿಸದೆ ನಾಟಕದ ಓಘವನ್ನು ಕಾಪಾಡಿಕೊಂಡಿದ್ದಾರೆ. ಕೋತ್ವಾಲ ಪಾತ್ರಧಾರಿ ವಿಜಯ್ ಗೌಡ, ಕಬೀರನ ತಾಯಿ ನೀಮಾ ಪಾತ್ರಧಾರಿ ನಿರ್ಮಲಾದೇವಿ, ಕಾಯಸ್ಥ ಪಾತ್ರಧಾರಿ ಸುಮನ್ ವಿಜಯ್ ಮತ್ತು ಕಬೀರನಾಗಿ ಉಜ್ವಲ್ ನೆನಪಿನಲ್ಲುಳಿಯುವ ಅಭಿನಯದಿಂದ ಗಮನ ಸೆಳೆಯುತ್ತಾರೆ. ಹಾಗೆಂದ ಮಾತ್ರಕ್ಕೆ ಉಳಿದ ಪಾತ್ರಧಾರಿಗಳ ಅಭಿನಯದಲ್ಲಿ ಕೊರತೆಯೇನೂ ಕಾಣುವುದಿಲ್ಲ. ಎಲ್ಲ ಕಲಾವಿದರ ಪಾತ್ರ ತಲ್ಲೀನತೆ, ಸಂಭಾಷಣೆಯ ಮೊನಚು ಮತ್ತು ಸಾಂದರ್ಭಿಕ ತನ್ಮಯತೆ ಇಡೀ ನಾಟಕವನ್ನು ಆಪ್ತವಾಗಿಸುತ್ತದೆ.
ಯುವ ಕಲಾವಿದರಲ್ಲಿ ಸಹಜ-ಭಾವಾಭಿನಯದ ಕೊರತೆ ಕೊಂಚ ಮಟ್ಟಿಗೆ ಕಾಣುತ್ತದೆ. ಕೆಲವು ಕಲಾವಿದರಿಗೆ ಇದು ಮೊದಲ ರಂಗಪ್ರವೇಶವಾಗಿರುವುದರಿಂದ ಮುಂದಿನ ದಿನಗಳಲ್ಲಿ ಸುಧಾರಣೆ ಸಾಧ್ಯವಿದೆ. ಆರಂಭದ ದೃಶ್ಯಗಳು ಸ್ವಲ್ಪ ನೀರಸ ಎನಿಸುತ್ತವೆ, ಕಬೀರರ ಮನವೊಲಿಸಲು ಆಮಿಷಗಳನ್ನು ಮುಂದಿರಿಸುವ ಸನ್ನಿವೇಶದಲ್ಲಿ ಸಂಭಾಷಣೆ ಕೊಂಚ ದೀರ್ಘವಾಯಿತು ಎನಿಸುತ್ತದೆ. ಇದನ್ನು ತುಂಡರಿಸಬಹುದು. ನಾಟಕದಲ್ಲಿ ಬಳಸಿರುವ ಪದ್ಯಗಳು ಪರಿಣಾಮಕಾರಿಯಾಗಿವೆ ಆದರೆ ಕಬೀರರ ದೋಹಾಗಳಿಂದಲೇ ಸಮಕಾಲೀನ ಪ್ರಸ್ತುತತೆ ಪಡೆಯುವ ಹಲವನ್ನು ಆಯ್ದುಕೊಳ್ಳಬಹುದು. ದೀರ್ಘ ಸಂಭಾಷಣೆಗಳನ್ನು ಮೊಟಕುಗೊಳಿಸಿ ಹಿನ್ನೆಲೆಯಲ್ಲಿ ದೋಹಾಗಳನ್ನು ಧ್ವನಿಸುವ ಮೂಲಕ ಕಬೀರರನ್ನು ಮತ್ತಷ್ಟು ಆಪ್ತವಾಗಿ ಪರಿಚಯಿಸುವ ಸಾಧ್ಯತೆಗಳಿವೆ. ನಿರ್ದೇಶಕರು ಹೀಗೆ ಯೋಚನೆ ಮಾಡಬಹುದು.
ರಂಗದ ಹಿಂದೆ- ಆಜುಬಾಜು
ಕಬೀರರನ್ನು ಸಮಕಾಲೀನ ಸಂತೆಯಲ್ಲಿ ಏಕತಾರಿ ಯ ನಾದದೊಂದಿಗೆ ನಿಲ್ಲಿಸುವ ಪ್ರಯತ್ನದಲ್ಲಿ ಎಲ್ಲ ನಟರ ಭಾವುಕ ನಟನೆ ಮತ್ತು ಸಹಜಾಭಿನಯವನ್ನು ಮೆಚ್ಚಲೇಬೇಕು. ಪ್ರೇಕ್ಷಕರ ಸಾಂದರ್ಭಿಕ ಕರಡಾತನಗಳಿಂದಾಚೆಗೂ ಸಹ ಕಲಾವಿದರ ತಲ್ಲೀನತೆ, ಚರಿತ್ರೆಯ ಪುಟಗಳನ್ನು ಭೌತಿಕವಾಗಿ ರಂಗದ ಮೇಲೆ ಅನಾವರಣಗೊಳಿಸುವುದು ನಾಟಕದ ವೈಶಿಷ್ಟಯ ಮತ್ತು ಮೆಚ್ಚುಗೆಯ ಅಂಶ. ಉತ್ತಮ ಹಿನ್ನೆಲೆ ಸಂಗೀತ ಮತ್ತು ಬೆಳಕಿನ ವಿನ್ಯಾಸವನ್ನು ಇನ್ನೂ ಉತ್ತಮಗೊಳಿಸುವ ಅವಕಾಶಗಳಿವೆ. ದೇವಾನಂದ ವರಪ್ರಸಾದ್ ಅವರ ಗಾಯನದ ಸೊಗಸಿಗೆ ಕಬೀರರ ದೋಹಾಗಳನ್ನೇ ಕನ್ನಡೀಕರಿಸಿ ಅಳವಡಿಸಿದರೆ ʼ ಸಂತ್ಯಾಗ ನಿಂತ ಕಬೀರ ʼ ಕಾವ್ಯಾತ್ಮಕವಾಗಿ ನೋಡುಗರ ಮನದಾಳದಲ್ಲಿ ನೆಲೆಸುತ್ತಾರೆ. ವಸ್ತ್ರ ವಿನ್ಯಾಸ ಮತ್ತು ರಂಗ ಸಜ್ಜಿಕೆ ಸಮರ್ಪಕವಾಗಿದೆ.
ಒಟ್ಟಾರೆಯಾಗಿ ನೋಡಿದಾಗ ಹರಿದತ್ತ ನಿರ್ದೇಶನದ ʼ ಸಂತ್ಯಾಗ ನಿಂತಾನ ಕಬೀರ ʼ ಒಂದು ಉತ್ತಮ ಸಮಕಾಲೀನ ಪ್ರಸ್ತುತತೆಯ ರಂಗಪ್ರಯೋಗವಾಗಿ ಹೊರಹೊಮ್ಮುತ್ತದೆ. ಜಾತಿ, ಮತ, ಧರ್ಮ ಮತ್ತು ಲಿಂಗ ಭೇದಗಳು ಸಮಾಜವನ್ನು ಅಡ್ಡಡ್ಡಲಾಗಿ, ಮೇಲಿನಿಂದ ಕೆಳಗಿನವರೆಗೂ ಸೀಳುತ್ತಿರುವಾಗ, ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆಯ ಸಂದೇಶ ಸಾರುವ ಕಬೀರ 21ನೆಯ ಶತಮಾನದ ಡಿಜಿಟಲ್ ಯುಗದಲ್ಲೂ ಪ್ರಸ್ತುತವಾಗುವುದನ್ನು ಈ ನಾಟಕ ಗಟ್ಟಿ ಧ್ವನಿಯಲ್ಲಿ ಹೇಳುತ್ತದೆ. ಮೂಲ ನಾಟಕಕಾರ ಭೀಷ್ಮ ಸಹಾನಿ ಅವರ ಚಿಂತನೆಯ ಮೂಸೆಯಲ್ಲಿ ಮೂಡಿದ ಕಬೀರರನ್ನು ರಂಗದ ಮೇಲೆ ಹೃದಯಸ್ಪರ್ಶಿಯಾಗಿ ನಿಲ್ಲಿಸುವುದರಲ್ಲಿ ನಿರ್ದೇಶಕ ಹರಿದತ್ತ ಅರಮನೆನಗರಿ ಮತ್ತು ಸಂಗಾತಿಗಳು ಯಶಸ್ವಿಯಾಗಿದ್ದಾರೆ.
ಹೆಚ್ಚು ಹೆಚ್ಚು ಜನರು ನೋಡಲೇಬೇಕಾದ ಒಂದು ರಂಗಪ್ರಯೋಗವಾಗಿ “ ಸಂತ್ಯಾಗ ನಿಂತಾನ ಕಬೀರ ” ನಮ್ಮ ಸುತ್ತಲಿನ ಪ್ರಕ್ಷುಬ್ಧ ಮಾನವ ಸಂತೆಯಲ್ಲಿ ಸಾಮರಸ್ಯದ ಹೂಗಳನ್ನು ಅರಳಿಸುವಂತಾಗಲಿ ಎಂದು ಆಶಿಸುತ್ತೇನೆ. ಜಿಪಿಐಇಆರ್ ರಂಗತಂಡ ಮತ್ತು ನಿರ್ದೇಶಕ ಹರಿದತ್ತ ಅರಮನೆನಗರಿ ಮತ್ತು ಮಾರ್ಗದರ್ಶಕರಾದ ಮೈಮ್ ರಮೇಶ್ ಈ ಕಾರಣಕ್ಕಾಗಿ ಅಭಿನಂದನಾರ್ಹರು. ಇನ್ನಷ್ಟು ಯಶಸ್ವಿ ಪ್ರದರ್ಶನಗಳ ಮೂಲಕ ಕಬೀರ ಮತ್ತು ಆತನ ಏಕತಾರಿ ಯ ನಾದ ಕಬೀರರ ದೋಹಾಗಳೊಂದಿಗೆ ವರ್ತಮಾನದ ದುಷ್ಟ ಸಮಾಜಕ್ಕೆ ಮಾನವೀಯ ಚಿಕಿತ್ಸೆ ನೀಡುವಂತಾಗಲಿ.






0 Comments