ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಘಾತ 

ಮೂಲ – ಶಿವಾನಿ
ಕನ್ನಡಕ್ಕೆ – ಶ್ಯಾಮಲಾ ಮಾಧವ

ಅಂದೂ ಇಂದಿನಂತೆ ಇದೇ ಆಸನದಲ್ಲಿ ಕುಳಿತು ಬರೆಯುತ್ತಿದ್ದೆ. ಹೊರಗೆ ಶ್ರಾವಣದ ಮಳೆಯ ಬಿರುಸು ತೀವ್ರಗೊಳ್ಳುತ್ತಿತ್ತು. ಇಂತಹ ಮಳೆಯಲ್ಲಿ ಯಾರೂ ಭೇಟಿಗೆಂದು ಬರುವ ನಿರೀಕ್ಷೆ ಇರಲಿಲ್ಲ. ನಿಷ್ಕ್ರಿಯವಾಗಿದ್ದ ಟೆಲಿಫೋನ್‌ ರಿಂಗುಣಿಸುವ ಆತಂಕವೂ ಇರಲಿಲ್ಲ. ಶಾಂತಿಯಿಂದ ನನ್ನ ಬರವಣಿಗೆಯಲ್ಲಿ ತೊಡಗಿಕೊಳ್ಳಲು ಇಂತಹ ಏಕಾಂತವನ್ನೇ ಬಯಸಿದ್ದೆ. ಆದರೆ ಅಷ್ಟರಲ್ಲೇ ಬಾಗಿಲ ಕರೆಗಂಟೆ ಶಬ್ದಿಸಿತು.  ದೇವರ ಈ ಮಳೆಯಲ್ಲಿ, ಅದೂ ಇಷ್ಟು ರಾತ್ರಿಯಲ್ಲಿ ಹೊರಟು ಬಂದಂತಹ ದುಸ್ಸಾಹಸಿ ಯಾರಿರಬಹುದು?

“ಯಾರು?” ಎಂದೆ. ಕೇಳದೆ ಹಾಗೆಲ್ಲ ಬಾಗಿಲು ತೆರೆಯುವಂತಿರಲಿಲ್ಲ. ಯಾರೂ ಉತ್ತರಿಸಲಿಲ್ಲ. ಮನದಲ್ಲಿ ಶಂಕೆಯೆನಿಸಿತು. ಇಲ್ಲಿ ನನ್ನ ಏಕಾಂತ ವಾಸದ ಬಗ್ಗೆ ಎಲ್ಲರೂ ಅರಿತಿದ್ದರು. ಎಷ್ಟೋ ದುಸ್ಸಾಹಸಿಗಳು ಇಂತಹ ಏಕಾಂಗಿ ಮನೆಯೊಡತಿಯರ ಮನೆ ಹೊಕ್ಕು, ಕತ್ತು ಹಿಸುಕಿ ದರೋಡೆಗೈದು ಎದೆಯುಬ್ಬಿಸಿಯೇ ನಡೆದು ಹೋಗುತ್ತಾರೆ. ಪೊಲೀಸರ ಭಯವೂ ಇಲ್ಲ, ನಿರ್ವೀರ್ಯ ಜನತೆಯ ಭಯವೂ ಇಲ್ಲ. 

“ನಾವು ಬಹನ್‌ಜೀ”, ಸ್ತ್ರೀ ಕಂಠಸ್ವರದಿಂದ ಆಶ್ವಾಸನೆಯೆನಿಸಿ ಬಾಗಿಲು ತೆರೆದೆ.

“ಶಿವಾನೀಜೀ ನೀವೇ ಏನು?”

“ಹೌದು.”

“ನಾವು ಒಳಗೆ ಬರಬಹುದೇ?”

“ಬನ್ನಿ.”

ಬೆಳಕಿನಲ್ಲಿ ಚೆನ್ನಾಗಿ ಗೋಚರಿಸಿದ ಆ ವಿರಾಟ್‌ ದೇಹದಲ್ಲಿ ಕತ್ತಿನಲ್ಲಿ ದಪ್ಪದೊಂದು ಚಿನ್ನದ ಸರ, ಉಂಗುಷ್ಠಗಳ ಹೊರತು ಬೇರೆಲ್ಲ ಬೆರಳುಗಳಲ್ಲಿ ಚಿನ್ನದುಂಗುರಗಳು ರಾರಾಜಿಸಿದ್ದುವು. ಕಡುನೀಲ ವರ್ಣದ ತಂಚೋರಿ ರೇಶಿಮೆ ಸೀರೆ, ವೀಳ್ಯದಿಂದ ಕಡುಕೆಂಪಾದ ತುಟಿಗಳು, ಕಡುಕಪ್ಪಾದ ಮೈಬಣ್ಣ; ಹಣೆಯಲ್ಲಿ ದೊಡ್ಡದೊಂದು ಮಖಮಲ್‌ ಬಿಂದಿ. ಬೈತಲೆಯಲ್ಲಿ ಅರ್ಧ ಪಾವಿನಷ್ಟು ಸಿಂಧೂರದ ಗಾಢ ರೇಖೆ. ಕೋಗಿಲೆ ಗೂಡಿನಲ್ಲಿ ಬೆಂಕಿ ಬಿದ್ದಂತೆ ಕಾಣುತ್ತಿತ್ತು! 

“ನಾವು ಬಹಳ ಹಿಂದಿನಿಂದಲೇ ನಿಮ್ಮ ಅಭಿಮಾನಿಯಾಗಿದ್ದೇವೆ. ಮದುವೆಗೆ ಮುನ್ನಿನಿಂದಲೇ ನಿಮ್ಮ ಕಥೆ, ಕಾದಂಬರಿಗಳನ್ನು ಓದುತ್ತಾ ಬಂದಿದ್ದೇವೆ. ಬಹಳ ಚೆನ್ನಾಗಿ ಬರೆಯುತ್ತೀರಿ, ನೀವು.”

ಅಭಿನಂದನೆಯ ಅರ್ಘ್ಯ ಸಲ್ಲಿಸಲು ಇದೇ ಅಪರ ಸಮಯ ಸಿಕ್ಕಿತೇ ಇವರಿಗೆ, ಎಂದು ನನ್ನ ಮನ ಗೊಂದಲದಲ್ಲಿತ್ತು.

“ವಿಷಯ ಏನೆಂದರೆ ಬಹನ್‌ಜೀ”, ಬಾಳೆಯ ಕಾಂಡದಂತಹ ತನ್ನ ತೊಡೆಯ ಮೇಲೆ ಕೈಯೂರಿ ನನ್ನತ್ತ ಬಾಗಿದಳು, ಆಕೆ., “ನಾವು ತುಂಬ ಆಶೆಯಿಟ್ಟುಕೊಂಡು ನಿಮ್ಮ ಬಳಿಗೆ ಬಂದಿದ್ದೇವೆ.”

ನನ್ನಿಂದ ಅವರ ಯಾವ ಕೆಲಸ ಸಾಧ್ಯವಾದೀತು? ಮೊದಲೆಂದೂ ನಾನು ಅವರನ್ನು ಕಂಡೂ ಇರಲಿಲ್ಲ. 

“ನೀವು ನಮ್ಮವರ ಹೆಸರಂತೂ ಕೇಳಿಯೇ ಇರಬಹುದು. ನೀವೇ ಎಲ್ಲರೂ ಅವರನ್ನು ಆರಿಸಿ ಈ ಪ್ರದೇಶದ ಸಚಿವರಾಗಿಸಿದ್ದೀರಿ. ವರ್ಷಗಳ ಕಾಲ ಜನತೆಯ ಸೇವೆ ಮಾಡಿ ಈಗ ಸೆಂಟರ್‌ನಲ್ಲಿದ್ದಾರೆ.”

ನಾನು ಅಚ್ಚರಿಯಿಂದ ಅವರನ್ನು ನೋಡತೊಡಗಿದೆ. ನಾವು ಆರಿಸಿದ ದುರ್ಲಭ ರತ್ನಗಳಲ್ಲಿ ಯಾರ ಅರ್ಧಾಂಗಿನಿ ಆಗಿರಬಹುದು, ಆಕೆ?

“ಲೋ ರಿಪುದಮನ್‌”, ಅಧೈರ್ಯದಿಂದ ತನ್ನ ಗಂಡುಕಂಠದ ನಗಾರಿ ಬಾರಿಸಿದರಾಕೆ. ತಕ್ಷಣ ಒಬ್ಬ ಬುಂದೇಲ್‌ಖಂಡದ ಹುಲುಸಾದ ಮೀಸೆಯ ಪ್ರಭಾವಶಾಲಿ ಅಂಗರಕ್ಷಕ ರಿಪುದಮನ್‌, ಪರದೆಯನ್ನು ಝಾಡಿಸುತ್ತಾ ತುರತುರನೆ ಒಳ ಬಂದು ಬಂದೂಕುಧಾರಿಯಾಗಿ ಸ್ವಾಮಿನಿಯ ಹಿಂದೆ ನಿಂತ. ನನ್ನತ್ತ ನೋಡಿದ ಅವನ ಬೆಂಕಿಯುಗುಳುವ ಕಣ್ಗಳಲ್ಲಿ ನನ್ನಂಥಾ ಕಿಲುಬುಕಾಸಿನಾಕೆ ಅವನ ಪ್ರಭಾವಶಾಲಿ ಒಡತಿಗೆ ಏನೋ ಅಪಚಾರ ಗೈದಿರಬಹುದೆಂಬ ಭಾವವಿತ್ತು.

“ಅರೆ, ಇವ್ರಿಗೆ ಸ್ವಲ್ಪ ಮಂತ್ರೀಜೀಯ ಹೆಸರು ಹೇಳು. ನಾವು ಹೇಗೆ ಅವರ ಹೆಸರು ಹೇಳುವುದು?”

ತಕ್ಷಣ ಆ ಅಂಗರಕ್ಷಕ ರಾಜನಿಗೆ ಪರಾಕು ಹೇಳುವ ಭಂಗಿಯಲ್ಲಿ ತನ್ನೊಡೆಯನ ಹೆಸರನ್ನು ಉದ್ಘೋಷಿಸಿದ.

“ಈಗ ನೀನು ಹೊರನಡೆ.”

“ಸರಿ, ಬಹನ್‌ಜೀ.”   

ಆಕೆ ಸಂಚಿ ಬಿಚ್ಚಿ ವೀಳ್ಯ, ಸುಣ್ಣ, ಅಡಕೆಯ ಉದಾರ ಮಿಶ್ರಣವನ್ನು ಅಂಗೈಯಲ್ಲಿ ಬಡಿಬಡಿದು ನನ್ನತ್ತ ಜರುಗಿದರು. ಇನ್ನು ನನ್ನ ತೊಡೆಯ ಮೇಲೇ ಕೂರುವರೇನೋ ಎಂದು ಬೆದರಿದೆ, ನಾನು.

“ನಮಗೆ ಒಬ್ಬಳೇ ಮಗಳು. ಸರೋಜ್‌ ಬಾಲಾ. ಸರೋ ಅನ್ತೀವಿ. ಅವಳಿಗೂ ಕಥೆ ಬರೆವ ಅಭಿರುಚಿ ತುಂಬಾ ಇದೆ. ಎಷ್ಟೋ ಪತ್ರಿಕೆಗಳಿಗೆ ಕಳುಹಿಸಿದ್ದಾಳೆ. ಆದ್ರೆ ಆ ಸಂಪಾದಕರು – ಸತ್ತೋದವು – ಪ್ರಕಟಿಸುವುದೇ ಇಲ್ಲ. ತಿರುಗಿ ತಿರುಗಿ ಕಳಿಸ್ತಾರೆ.”

ನನಗೆ ಸ್ವಲ್ಪ ಸ್ವಲ್ಪ ತಿಳಿಯುತ್ತಾ ಬಂತು. ಆದರೂ ಏನೂ ತಿಳಿಯದವಳಂತೆ ಕುಳಿತೇ ಇದ್ದೆ.

“ಬಹನ್‌ಜೀ, ನೀವೇ ಎಲ್ಲಾದರೂ ಪ್ರಕಟವಾಗುವಂತೆ ಮಾಡಿ. ಹಾಗೆ ಅವರ ತಂದೆ ಇಲ್ಲೇ ಯಾವುದಾದರೂ ಪತ್ರಿಕೆಯವರಿಗೆ ಹೇಳಿದ್ರೆ ಕೂಡಲೇ ತಗೊಂಡಾರು. ಆದ್ರೆ ನಮ್ಮ ಸರೋ ಹೊರಗಿನ ಯಾವುದಾದರೂ ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟಿಸಲ್ಪಡಲಿ ಎಂದೇ ಬಯಸುತ್ತಾಳೆ. 

ಧರ್ಮಯುಗವೋ, ಹಿಂದುಸ್ಥಾನ್‌ – “

“ನೋಡಿ”, ನನ್ನ ದನಿ ಕಠೋರವಾಯ್ತು, “ನಾನು ಇಂತಹ ಕೆಲಸ ಎಂದೂ ಮಾಡಿಲ್ಲ. ಅಲ್ಲದೆ ಸಂಪಾದಕರು ನನ್ನ ಮಾತೇಕೆ ಕೇಳುವರು? ಇನ್ನೀಗ ಹಿಂದಿಯ ದೊಡ್ಡ ಪತ್ರಿಕೆಗಳೂ ಎಲ್ಲಿ ಉಳಿದಿವೆ?”

“ಅರೇ! ಹೋಗಿ ಬಹನ್‌ಜೀ, ನನ್ನನ್ನು ಮರುಳು ಮಾಡಬೇಡಿ”, ಆಕೆ ಇನ್ನೂ ಹತ್ತಿರ ಸರಿದು ತನ್ನ ರಂಗಿನ ನಗೆಯನ್ನು ನನ್ನತ್ತ ಸಿಡಿಸಿದಳು, 

“ಧರ್ಮಯುಗದ ಇದೇ ದೀಪಾವಳಿ ಸಂಚಿಕೆಯಲ್ಲಿ ನಿಮ್ಮ ಕಥೆಯನ್ನು ನಾವು ಓದಿದ್ದೇವೆ. ಇಲ್ಲ ಅಂದ್ರೆ ಹೇಗೆ? ಹ್ಞಾಂ ಈಗ ಹೆಸರು ಪ್ರಕಟವಾಗ್ತದೆ, ಕಥೆಯಲ್ಲವೆನ್ನಿ”, ಕಲಕಿದ ಕಂಠದಿಂದ ಆಕೆ ಮುಂದುವರಿದರು, “ನೀವು ನಮ್ಮೊಡನೆ ಇದ್ದು, ಬಿಟ್ಟಿಯು ಬರೆದ ಕಥೆಯನ್ನು ನೇರ್ಪು ಗೊಳಿಸಿ ಸಿಧ್ಧ ಮಾಡಿ ಕೊಡಿ. ಮತ್ತೆ ಹೇಗೆ ಪ್ರಕಟವಾಗದೋ ನೋಡಿಬಿಡುವಾ.” 

ನಾನು ಹತಪ್ರಭಳಾಗಿ ಅವರನ್ನು ನೋಡುತ್ತಾ ಉಳಿದೆ. ಪುನಃ ಆರಂಭಿಸಿದರಾಕೆ, “ಗಂಗಾನದೀ ದಡದಲ್ಲಿ ನಮ್ಮದೊಂದು ದೊಡ್ಡ ಬಂಗಲೆ ಇದೆ. ಆ ಇಡೀ ಗೆಸ್ಟ್‌ ಹೌಸ್‌ ನಿಮ್ಮದೇ. ಕಾರೊಂದು ನಿರಂತರವಾಗಿ ನಿಮ್ಮ ಸೇವೆಗೆ ಸಿಧ್ಧವಾಗಿ ನಿಂತಿರುವುದು. ಊಟ, ತಿಂಡಿಯೆಲ್ಲ ನಮ್ಮೊಡನೇ. ಐದು ಸಾವಿರವೋ, ಆರು ಸಾವಿರವೋ ನೀವು ಕೇಳಿದಷ್ಟು ನಿಮ್ಮದಾಗುವುದು.”

ಮೂವತ್ತೈದು ವರ್ಷಕ್ಕೂ ಮೀರಿ ಲೇಖನಿ ಸವೆಸುತ್ತಾ ಬಂದಿದ್ದೇನೆ. ಆದರೆ ವಾಗ್ದೇವಿಯ ದರ್ಬಾರ್‌ನಿಂದ ಇಂಥ ಉದಾರ ಪ್ರಸ್ತಾಪ ಎಂದೂ ಬಂದಿರಲಿಲ್ಲ. 

ಇನ್ನು ವಿನಮ್ರತೆ ಅಸಾಧ್ಯವೆನಿಸಿ ನಾನೆಂದೆ, “ನೋಡಿ, ನಾನಿಂತಹ ಕೆಲಸ ಎಂದೂ ಮಾಡಿಲ್ಲ. ಇನ್ನು ಮಾಡುವುದೂ ಇಲ್ಲ. ಇಂತಹ ಪ್ರೇತ ಲೇಖನಗಳನ್ನು ಬರೆವ ವೃತ್ತಿನಿರತರು ಎಷ್ಟೋ ಮಂದಿ ನಿಮಗೆ ಸಿಗಬಹುದು. ಅವರಲ್ಲಿಗೇ ಹೋಗಿ.”

ಒಂದುವೇಳೆ ರಿಪುದಮನ್‌ ಅಲ್ಲಿರುತ್ತಿದ್ದರೆ, ತನ್ನ ಸ್ಟೆನ್‌ ಗನ್‌ನನ್ನು ನನ್ನೆದೆಗೆ ಗುರಿ ಹಿಡಿಯುತ್ತಿದ್ದನೋ ಏನೋ! ಆದರೆ ಅವನೊಡತಿ ಸ್ವಲ್ಪವೂ ವಿಚಲಿತಳಾಗಲಿಲ್ಲ. 

“ಸರೋ ತುಂಬ ಚೆನ್ನಾಗಿ ಬರೆಯುತ್ತಾಳೆ, ಬಹನ್‌ಜೀ. ಎಷ್ಟೋ ಬಾರಿ ಅವಳ ಕಥೆ ಓದಿ ನಾವು ಅತ್ತು ಬಿಟ್ಟಿದ್ದೇವೆ. ಹಿಂದೀ ಭಾಷೆ ಮಾತ್ರ ಸ್ವಲ್ಪ ದುರ್ಬಲವಾಗಿದೆ. ಬಾಲ್ಯದಿಂದಲೇ ಇಂಗ್ಲಿಷ್‌ ಶಾಲೆಯಲ್ಲಿ ಕಲಿತವಳು .ತಪ್ಪು ನಮ್ಮದೇ. ನೀವು ಅವಳ ಹಿಂದಿಯನ್ನು ಸುಧಾರಿಸಿ ಸಾಕು. ನೀವೇ ಪೂರ್ಣ ಕಥೆ ಬರೆಯಿರಿ ಎಂದೇನೂ ನಾವು ಹೇಳುವುದಿಲ್ಲ.” ತನ್ನ ಪೂರ್ವ ಪ್ರಸ್ತಾಪದ ಟೊಳ್ಳುತನಕ್ಕೆ ಆಕೆ ನಾಚಿದ್ದರೇನೋ!

“ನನ್ನನ್ನು ಕ್ಷಮಿಸಿ, ನಾನು ಈ ಕೆಲಸ ಮಾಡಲಾರೆ. ಹಿಂದೀ ಸುಧಾರಿಸಲು ಸಾಕಷ್ಟು ಯೋಗ್ಯ ಪಂಡಿತರು ನಿಮಗೆ ಸಿಗಬಹುದು.”

ಆಕೆಯೂ ಅಷ್ಟೇ ಹಟಮಾರಿ. “ಹಾಗಾದರೆ ಈ ಕೆಲಸ ನೀವೇ ಮಾಡಬೇಕು. ಅಂತಹ ಒಳ್ಳೆಯ ಟೀಚರ್‌ ಹುಡುಕಿಕೊಡಿ. ಇದು ನಮ್ಮ ವಿಳಾಸ. ಫೋನ್‌ ನಂಬರ್‌ ಕೂಡಾ ಇದೆ.”

ಆಕೆ ಹೊರಟುಹೋದೊಡನೆ ನನಗೆ ಮಹೇಶ್‌ ಪಂತ್‌ನ ಉದಾಸ, ವೇದನಾಯುಕ್ತ ಮುಖ ನೆನಪಾಯ್ತು. ನನ್ನ ತಂದೆಯ ತವರಿನ ದೂರದ ಬಂಧು. ಕಳೆದ ವಾರವಷ್ಟೇ ನನ್ನನ್ನು ಕಾಣಲು ಬಂದಿದ್ದ. ಪರ್ವತ ಪ್ರದೇಶದ ಹೆಚ್ಚಿನ ಉಚ್ಚಶಿಕ್ಷಣ ಪಡೆದ ಮೇಧಾವಿ ನವಯುವಕರಂತೆ ಕೇವಲ ತನ್ನ ಪ್ರಾಮಾಣಿಕತೆಯ ಬಲದ ಮೇಲೆ ಅಲ್ಲಲ್ಲಿ ನೌಕರಿಗಾಗಿ ಅಲೆದಾಡುತ್ತಿದ್ದ. ಅವನಿಗಿಂತ ಯೋಗ್ಯನಾದ ಗುರು ಬೇರಾರು?

ಹೈಸ್ಕೂಲ್‌ನಿಂದ ಎಮ್.ಎ. ವರೆಗೆ ಸದಾ ಸರ್ವ ಪ್ರಥಮ. ಧನಾಭಾವದ ಕಾರಣ ಟ್ರೈನಿಂಗ್‌ ಸೇರಿಕೊಳ್ಳಲು ಶಕ್ಯನಾಗಿರಲಿಲ್ಲ. ಇದರಿಂದಾಗಿಯೇ ಶಿಕ್ಷಣ ಸಂಸ್ಥೆಗಲು ಧಿಕ್ಕರಿಸಿ ಬಿಟ್ಟುವು. ತಪ್ಪಿಲ್ಲದ ಶುಧ್ಧ ಇಂಗ್ಲಿಷ್‌ ಬರೆಯಬಲ್ಲವನಾಗಿದ್ದರೂ, ಆಡಲಾರದವನಿದ್ದ. ಕುತ್ತಿಗೆಯಲ್ಲಿ ಯಜ್ಞೋಪವೀತವಿದ್ದರೂ, ಗಾಯತ್ರೀ ಮಂತ್ರ ಬರದಿದ್ದರೆ ದ್ವಿಜನಾದಾನೆಂತು, ಎಂಬಂತೆ!

ಜೀರ್ಣವಾದ ಧೋತಿ, ಮಾಸಲು ಜೀರ್ಣ ಕುರ್ತಾ, ಅಷ್ಟೇ ಜೀರ್ಣವಾದ ಕೈಚೀಲವೊಂದು. “ಎಲ್ಲಾದರೂ ಒಂದು ಕೆಲಸ ಕೊಡಿಸಿ ಬಿಡಿ.  ನಿಮ್ಮ ಋಣ ಮರೆಯಲಾರೆ. ತಾಯಿ ಈಗ ಪೂರ್ತಿ ಹುಚ್ಚಳಾಗಿದ್ದಾಳೆ. ಶುಕ್ಲ ಪಕ್ಷದಲ್ಲಂತೂ ಅವಳ ಹುಚ್ಚು ವಿಕಟ ರೂಪ ತಾಳುತ್ತದೆ. ರಾತ್ರಿಯೆಲ್ಲ ವಿವಸ್ತ್ರಳಾಗಿ ಹಳ್ಳಿಯಲ್ಲಿ ಅಡ್ಡಾಡುತ್ತಾಳೆ. ಗದ್ದೆಯೆಲ್ಲ ಏಜೆಂಟರ ಕೈವಶವಾಗಿದೆ. ಪರ್ವತಗ್ರಾಮಗಳಲ್ಲಿ ಬ್ರಾಹ್ಮಣರದು ಬರೀ ದುರ್ದೆಶೆ, ಶಿವಾನೀಜೀ. ಅವರ ಮಕ್ಕಳಿಗೆ ಶಾಲಾಕಾಲೇಜುಗಳಲ್ಲಿ ಪ್ರವೇಶ ಸಿಗುತ್ತಿಲ್ಲ. ಮಕ್ಕಳಿಗೆ ನೌಕರಿ ಸಿಗುತ್ತಿಲ್ಲ. ಎಷ್ಟೊಂದು ಬ್ರಾಹ್ಮಣ ಕುಟುಂಬಗಳು ಇಂದು ತುತ್ತಿಗಾಗಿ ಬಾಯಿ ಬಿಡುತ್ತಿವೆಯೋ! ಅಡಿಗೆ ತಯಾರಿ, ತೋಟ ನೋಡಿಕೊಳ್ಳುವುದು, ಕಾವಲು ಕಾಯುವುದು ಏನೂ ಮಾಡಬಲ್ಲೆ. 

 ಸದಾ ಉಚ್ಚ ಆದರ್ಶಗಳನ್ನು ಪಾಲಿಸಿದ ಪೂರ್ವಜರ ವಂಶದ ಈ ಹುಡುಗ ಇಂತಹ ಮಾತನ್ನಾಡುತ್ತಿದ್ದ! ಋಗ್ವೇದದ ಹತ್ತು ಸಾವಿರಕ್ಕೂ ಅಧಿಕ ಮಂತ್ರಗಳ ಕ್ರಮಪಾಠದಿಂದ, ಪಾಣಿನಿಯ ವ್ಯಾಕರಣ, ನಿರುಕ್ತ, ಛಂದ, ಜ್ಯೋತಿಷ್ಯ ಗ್ರಂಥಗಳ ಅಧ್ಯ್ನ, ಮನನ, ಚಿಂತನೆಯಿಂದ ತಮ್ಮ ಬ್ರಹ್ಮತೇಜಸ್ಸನ್ನು ಬೆಳಗಿದವರ ಈ ವಂಶಜ ಇಂದು ಕಾವಲಿನವನಾಗುವ ಮಾತನ್ನಾಡುತ್ತಿದ್ದಾನೆ. ದಾರಿದ್ರ್ಯ ಹಾಗೂ ಉಚ್ಚ ಆದರ್ಶದ ಆ ಜನರು ಧನ ಇಲ್ಲವೇ ಅಧಿಕಾರಕ್ಕಾಶಿಸಿರಲಿಲ್ಲ. ಅವರ ತ್ಯಾಗ, ಸಾಧನೆಗಳ ಒರತೆ ಇಂದಿಗೂ ಕುಮಾಂವುನಲ್ಲಿ ಬತ್ತಿ ಹೋಗಿಲ್ಲ. ಬೇರು ಕಳಚಿದರೂ ದಿಲ್ಲಿ ದಿಲ್ಲಿಯೇ. ಸಂಸ್ಕಾರದ ಶೃಂಖಲೆ ಸುಲಭವಾಗಿ ಕಳಚುವುದಿಲ್ಲ. 

“ನೋಡಿ, ನಾನು ಕಾವ್ಯತೀರ್ಥ ಪರೀಕ್ಷೆ ಕೂಡಾ ಪಾಸಾಗಿದ್ದೇನೆ. ಸಂಸ್ಕೃತದಲ್ಲಿ ಕವಿತೆಗಳನ್ನೂ ಬರೆಯುತ್ತೇನೆ. ಆದರೆ ಪ್ರಕಟಿಸಲು ಯಾರೂ ಸಿಧ್ಧರಿಲ್ಲ. ಚೆಲುವಾದ ಗಿಡವನ್ನು ನೆಟ್ಟರಷ್ಟೇ ಸಾಲದು. ನೀರೆರೆದು ಪೋಷಿಸದಿದ್ದರೆ ಬಾಡಿ ಹೋಗುವುದೆಂದು ಕಾಳಿದಾಸನೇ ಹೇಳಿದ್ದಾನೆ. ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾದ ನನ್ನ ಸಹಪಾಠಿಗಳೂ ಅತ್ಯುನ್ನತ ಅಧಿಕಾರದಲ್ಲಿರುವುದನ್ನು ಕಾಣುವಾಗ ಸಹಜವಾಗಿಯೇ ಬೇಸರವೆನಿಸುತ್ತದೆ. ಎಲ್ಲಿಗೆ ಹೋಗಲಿ, ನೀವೇ ಹೇಳಿ”, ಎಂದಂದ ಅವನ ಸೌಜನ್ಯ, ಸೌಮ್ಯತೆ, ವಿದ್ವತ್ತಿನಿಂದ ನಾನು ಬಹಳ ಪ್ರಭಾವಿತಳಾಗಿದ್ದೆ. ನೋಡಲಂತೂ ಸಾಕ್ಷಾತ್‌ ಮನ್ಮಥ! ಒಜ್ವಲ ಗೌರವರ್ಣ, ಆಜಾನುಬಾಹು ಶರೀರದಲ್ಲಿ ಕಟ್ಟುಮಸ್ತಾದ ಎದೆ, ನಿಷ್ಕಪಟ, ಶಾಂತ, ಮೋಹಕ ನಗು! ನಗುವಾಗ ಹಲ್ಲೂ ಕಾಣುತ್ತಿರಲಿಲ್ಲ. 

“ನೋಡು, ನನ್ನಿಂದ ಸಾಧ್ಯವಿದ್ದಿದ್ದರೆ ಉನ್ನತೋನ್ನತ ಪದವಿಗೆ ನಿನ್ನನ್ನು ಶಿಫಾರಸು ಮಾಡುತ್ತಿದ್ದೆ. ಆದರೆ ನಾನೂ ಬ್ರಾಹ್ಮಣಳೆಂಬುದನ್ನು ನೀನು ಮರೆತಿರುವೆ. ಒಂದು ಕೆಲಸ ಮಾಡು.”

“ಹೇಳಿ.”

“ಬಹಳ ದಿನಗಳಿಂದ ಪಾಣಿನಿಯ ವ್ಯಾಕರಣ ಕಲಿಯಬೇಕೆಂಬ ಇಚ್ಛೆಯಿದೆ. ನಿನಗಿಂತ ಉತ್ತಮ ಗುರು ಎಲ್ಲಿ ಸಿಕ್ಕಿಯಾರು? ನೌಕರಿ ಸಿಗುವವರೆಗೆ ನನ್ನೊಡನಿರು. ಊಟ, ತಿಂಡಿ ಎಲ್ಲ ಇಲ್ಲೇ. ಒಂದು ಗಂಟೆ ಹೊತ್ತು ನನಗೆ ಕಲಿಸು. ಜೇಬು ಖರ್ಚಿಗೆ ಐನೂರು ಕೊಡುವೆ.”

“ಇಲ್ಲ”, ಅವನು ಪೆಚ್ಚಾದ, “ನಿಮಗೆ ನಾನು ಪಾಠ ಹೇಳಲಾರೆ. “

“ಯಾಕೆ?”

“ನೀವು ದೊಡ್ಡವರು: ಪೂಜ್ಯನೀಯರು. ನಿಮಗೆ ಗುರು ಆಗುವಂತಹ ಧಾರ್ಷ್ಟ್ಯ ಎಂದೂ ತೋರಲಾರೆ.”

“ಸರಿ”, ನಾನು ನಕ್ಕೆ, “ನನ್ನಿಂದಾದಷ್ಟು ಪ್ರಯತ್ನಿಸುತ್ತೇನೆ. ನಿನ್ನ ವಿಳಾಸ ಕೊಟ್ಟಿರು.”

ಇಂದು ಆ ಉದಾಸ ಚಹರೆಯ ನೆನಪಾದೊಡನೆ, “ನೌಕರಿ ಹುಡುಕಿದ್ದೇನೆ. ಬೇಗನೇ ಹೊರಟು ಬಾ”, ಎಂದು ಪತ್ರ ಬರೆದು ಹಾಕಿದೆ. 

ಒಂದಿಲ್ಲೊಂದು ದಿನ ಅವನ ಪಾಂಡಿತ್ಯ, ಸೌಜನ್ಯ ಹಾಗೂ ಅಮೂಲ್ಯ ವ್ಯಕ್ತಿತ್ವವು ಮಂತ್ರೀಗೃಹದ ಬಾಗಿಲನ್ನು ಬಹಳ ಔದಾರ್ಯದಿಂದಲೇ  ಅವನಿಗಾಗಿ ತೆರೆಯುವುದು. ಹಾಗೂ ಆ ಮನೆಯ ಒಡತಿಯು ತನ್ನ ಪ್ರಭಾವದಿಂದ ನೌಕರಿಯನ್ನೂ ಅವನಿಗಾಗಿ ಹುಡುಕಿ ಕೊಡುವರೆಂದು ನಾನರಿತಿದ್ದೆ. 

ತಡಮಾಡದೆ ಹಾಜರಾಗಿದ್ದ ಆ ಬಡಪಾಯಿಯ ಚೀಲವು ಅವನ ಸೀಮಿತ ಸಂಪತ್ತಿನಿಂದ ಪೂರ್ಣ ತುಂಬಿರಲೂ ಇಲ್ಲ. ಒಂದು ಜೊತೆ ಜೀರ್ಣವಾದ ಕುರ್ತಾ, ಪೈಜಾಮಾ ಧರಿಸಿದ್ದರೆ, ಮತ್ತೊಂದು ಜೊತೆ ಚೀಲದಲ್ಲಿತ್ತು. ಸವೆದ ಸಾಬೂನಿನ ತುಣುಕೊಂದು ಕಾಗದದಲ್ಲಿ ಸುತ್ತಿದ್ದು,  ಚಿಕ್ಕದೊಂದು ಬಾಚಣಿಗೆ, ಕ್ಷೌರ ಪರಿಕರ ಮತ್ತು ಮೂರ್ನಾಲ್ಕು ಪುಸ್ತಕಗಳು, ಇಷ್ಟೇ. ನಾನೇ ಗಾಂಧೀ ಆಶ್ರಮಕ್ಕೆ ಹೋಗಿ ಎರಡು ಜೊತೆ ಬಟ್ಟೆ, ಹೊದಿಕೆ, ಜಮಖಾನ, ದಿಂಬು ಕೊಂಡು ತಂದೆ. ಬಣ್ಣ ಮಾಸಿದ, ಬಹುಶಃ ಅವರ ಅಜ್ಜನೂ ಉಪಯೋಗಿಸಿದ್ದಿರಬಹುದಾದ ಶೇವಿಂಗ್‌ ಬ್ರಶ್‌ ಬಿಸುಟು, ಹೊಸ ಕಿಟ್‌ ತಂದಿತ್ತೆ. ಜೊತೆಗೆ ಬ್ರಶ್‌, ಪೇಸ್ಟ್ ಸಹ . 

“ನಾನು ಇದನ್ನೆಲ್ಲ ಎಂದೂ ಉಪಯೋಗಿಸಿಲ್ಲ. ವಜ್ರದಂತಿ ಮಂಜನವನ್ನು ಸ್ವತಃ ತಯಾರಿಸಿ ಕೊಳ್ಳುತ್ತೇನೆ.”

“ಈಗ ನೀನು ಹೋಗುವಲ್ಲಿ ಅದೆಲ್ಲ ನಡೆಯದು.”

ನಾನೇ ಅವನ ಸರಳ ಪೂರ್ವೇತಿಹಾಸದ ಪುಟಗಳನ್ನು ಹರಿದು ಅವನನ್ನು ಕಾನ್ಪುರಕ್ಕೆ ಕಳಿಸಿಕೊಟ್ಟೆ. 

ಹೊರಡುವ ಮುನ್ನ ಶ್ರಧ್ಧಾಭಕ್ತಿಗಳಿಂದ ನನ್ನ ಪಾದಗಳಿಗೆರಗಿ ಅವನಂದ, “ನಾನು ಈ ವರೆಗೆ ನನ್ನ ತಾಯಿ ಮತ್ತು ಮಾವ ಮಾಡಿದ ಅಡಿಗೆಯನ್ನಷ್ಟೇ ಉಂಡಿದ್ದೇನೆ. ನಾನು ಸ್ವಯಂ ಪಾಕ ಮಾಡಿಕೊಳ್ಳುವೆನೆಂದು ಅವರಿಗೆ ತಿಳಿಸಿ.”

“ಸರಿ, ಸರಿ, ಹೇಳುವೆ”, ನಾನಂದೆ. 

ಅವನು ಹೊರಟೊಡನೆ ಆ ಬಗ್ಗೆ ಅವರಿಗೆ ಫೋನ್‌ ಮಾಡಿ ತಿಳಿಸಿದೆ. “ಸ್ವತಃ ಬಸ್‌ಸ್ಟ್ಯಾಂಡ್‌ಗೆ ಹೋಗಿ ಕರೆದೊಯ್ಯಿರಿ. ಪರ್ವತ ಬಿಟ್ಟು ಹೊರಗೆ ಎಂದೂ ಹೋದವನಲ್ಲ. ಬಹಳ ಸರಳ ಹುಡುಗ. ಖದ್ದರ್‌ನ ಬಾದಾಮಿ ಬಣ್ಣದ ಕುರ್ತಾ ತೊಟ್ಟಿದ್ದಾನೆ. ನೋಡಲು ಫಿರಂಗಿಯವರಂತೆ ಬೆಳ್ಳಗಿದ್ದಾನೆ. ಇನ್ನೊಂದು ಮಾತು- ಅವನು ಬೇರೆಯವರು ಮಾಡಿದ್ದನ್ನು ತಿನ್ನುವುದಿಲ್ಲ. ಕೃಪೆಯಿಟ್ಟು ಸ್ಟೌ, ಅಡಿಗೆ ಪಾತ್ರೆ, ಸಾಮಾನು ಒದಗಿಸಿ ಕೊಡಿ. ಶುಲ್ಕ ಎರಡು ಸಾವಿರ. ಆದರೆ ಅವನ ಯೋಗ್ಯತೆ ಹತ್ತುಸಾವಿರಕ್ಕೆ ಸಮ.”

“ಧನ್ಯವಾದ ಬಹನ್‌ಜೀ. ನೀವು ನಿಶ್ಚಿಂತೆಯಿಂದಿರಿ. ಪಂಡಿತ್‌ಜೀಗೆ ಏನೂ ತೊಂದರೆಯಾಗದಂತೆ ನೋಡಿಕೊಳ್ತೇವೆ”, ಎಂದರು ಆಕೆ.

ಮತ್ತೆ ಎಂಟುದಿನಗಳ ಕಾಲ ಅವನಿಂದ ಏನೂ ಸುದ್ದಿ ಬರಲಿಲ್ಲ. ಅಲ್ಲಿ ಹಿಡಿಸಿರಬೇಕು. ಪಾಪ! ಒಳ್ಳೆಯದಾಯ್ತು.ಯಾರಿಗಾದರೂ ಕಲ್ಯಾಣವಾದರೆ ದುರ್ಗತಿ ತಪ್ಪಿದಂತೇ ಎಂಬ ಪ್ರಿಯವಚನವನ್ನು ನೆನೆದೆ. ಆದರೆ ದುರ್ಗತಿ ತಪ್ಪಿತೇ?

ಹೋಗುವಾಗ ನಾನು ಕೇಳಿದ್ದೆ, “ಮಹೇಶ್‌, ನೀನು ಇಷ್ಟು ದೂರ ಇರುವೆ. ನಿನ್ನ ತಾಯಿಯನ್ನು ಯಾರು ನೋಡಿಕೊಳ್ಳುವರು?”

“ಆ ಚಿಂತೆಯಿಲ್ಲ, ಶಿವಾನೀಜೀ, ನನ್ನ ಮಾವ ಒಬ್ರಿದ್ದಾರೆ. ಅವರ ಪತ್ನಿಯನ್ನು ಕಳೆದ ವರ್ಷ ಹುಲಿ ತಿಂದು ಬಿಟ್ಟಿತು. ಮಕ್ಕಳಿಲ್ಲ, ಅವರಿಗೆ. ಅವರನ್ನು ನಾನೇ ಹೋಗಿ ಕರೆತಂದೆ. ಒಂದು – ತಾಯಿ ಅವರಿಗೆ ಅಂಜುತ್ತಾಳೆ. ಎರಡನೆಯದೆಂದರೆ, ನಮ್ಮ ಆರ್ಥಿಕ ಸಂಕಷ್ಟಕ್ಕೆ ಅವರು ಹೆಗಲು ಕೊಟ್ಟಿದ್ದಾರೆ. ಅವರಂಥ ಕರ್ಮಠ ಪಂಡಿತ ಕುಮಾಂವುನಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ. ವಿವಾಹ, ಮರಣ, ಜನ್ಮ, ಶ್ರಾಧ್ಧಗಳನ್ನೆಲ್ಲ ನಡೆಸಿಕೊಟ್ಟು ಸಾಕಷ್ಟು ಸಂಪಾದಿಸುತ್ತಾರೆ. ನನಗೆ ಅವರಂದರು, ಹೋಗು, ಮಗೂ ಹೋಗು; ದೇವರು ನಿನ್ನನ್ನು ಡಿಪ್ಟಿಯಾಗುವಂತೆ ಮಾಡಲಿ. ಮನೆಯ ಚಿಂತೆ ಬೇಡ, ಹೋಗಿ ಹೆಸರು ಗಳಿಸು.”

ಎಂಥಾ ಹೆಸರು ಗಳಿಸಿದ್ದ ಈ ಅಳಿಯ! ಹತ್ತನೇ ದಿನ ಅದೇ ಚೀಲ ತೂಗಿಕೊಂಡು ಮಹೇಶ್‌ ನನ್ನ ಬಾಗಿಲಲ್ಲಿ ನಿಂತಿದ್ದ. ಎಂಟೇ ದಿನಗಳಲ್ಲಿ ಕಿಲುಬು ಕಾಸಿನಂತೆ ಹಿಂದೆ ಬಂದನೇಕೆ? 

ನಿವಾಳಿಸಿದಂತಿದ್ದ ಆ ಮುಖ ನೋಡಿ ಕೇಳಿದೆ, “ಏನಾಯ್ತು ಮಹೇಶ್?”‌

ಚೀಲವನ್ನಲ್ಲೇ ಎಸೆದು, ಜಮಖಾನೆಯ ಮೇಲೆ ಕುಸಿದು, ಮೊಣಕಾಲ್ಗಳಲ್ಲಿ ಮುಖ ಹುದುಗಿಸಿ ಬಿಕ್ಕಿ ಬಿಕ್ಕಿ ಅಳ ಇಒಡಗಿದ. ಫ್ರಿಜ್‌ನಿಂದ ನೀರು ತಂದಿತ್ತು ನಾನಂದೆ, “ಇಕೋ, ತಣ್ಣನೆ ನೀರು ಕುಡಿ ಮೊದಲು; ಮತ್ತೆ ಹೇಳು.”

ಪರ್ವತ ಸೀಮೆಯಿಂದ ಅದುವರೆಗೆ ಹೊರಗೆ ಹೋಗದ ಹುಡುಗ … ಕಾನ್ಪುರದ ಸೆಖೆಯನ್ನು ಸಹಿಸುವುದು ಕಷ್ಟವಾಗಿರ ಬಹುದು. 

“ಯಾಕೆ ಮಹೇಶ್?‌ ಏನಾಯ್ತು? ಯಾರಾದ್ರೂ ಏನಾದರೂ ಹೇಳಿದರೇ?”

ಇಲ್ಲವೆಂದು ತಲೆಯಾಡಿಸಿದ. 

“ಊಟ, ತಿಂಡಿಗೆ ಕಷ್ಟವಾಯ್ತೇ?”

“ಇಲ್ಲ, ರೇಶನ್‌, ಪಾತ್ರೆ, ಸ್ಟೌ ಎಲ್ಲ ಮಾಂಜೀ ಇಡಿಸಿದ್ದಾರೆ.”

“ಮತ್ತೆ?”

“ಶಿವಾನೀಜೀ, ನೀವೇಕೆ ನನ್ನನ್ನು ಅಲ್ಲಿಗೆ ಕಳಿಸಿದಿರಿ?”

“ಯಾಕೆ?”

“ಅವರು ಚರ್ಮಕಾರರು. ನಾನು ಗಂಗೆಯಲ್ಲಿ ಸ್ನಾನಕ್ಕೆ ಹೋದಾಗ ಸಜ್ಜನರೋರ್ವರು ಎಲ್ಲವನ್ನೂ ತಿಳಿಸಿದರು. ಬ್ರಾಹ್ಮಣನಾಗಿದ್ದೂ ಇಲ್ಲಿ ಧರ್ಮಭ್ರಷ್ಟನಾಗಲು ಬಂದೆಯೇಕೆ? ವಾಸ ಕೂಡಾ ಅಲ್ಲೇ ಅಲ್ವೇ? ಛೀ! ಛೀ! ಅಂದರು.”

ಈ ಬಾರಿ ನಾನವನನ್ನು ತಡೆದೆ. “ಸರಿ, ಮಹೇಶ್‌, ಹಿಂದಿರುಗಿ ಹಳ್ಳಿಗೆ ಹೋಗಿ ಕೂಪ ಮಂಡೂಕವಾಗಿರು, ಅಲ್ಲೇ. ಜೀವನವಿಡೀ ವೇದ, ವೇದಾಂಗ ದರ್ಶನದಿಂದ ನೀನು ಏನಾದರೂ ಕಲಿತಿರಬಹುದು, ಅಂದುಕೊಂಡಿದ್ದೆ. ಶಾಸ್ತ್ರಗಳಲ್ಲಿ ಜನ್ಮಬ್ರಾಹ್ಮಣ, ಕರ್ಮಬ್ರಾಹ್ಮಣ ಎಂದು ಎರಡು  ಪ್ರಕಾರಗಳ ಉಲ್ಲೇಖವಿರುವುದು ಅರಿಯೆಯಾ? ಶೂದ್ರನಾಗಿ ಜನಿಸಿಯೂ ಬ್ರಾಹ್ಮಣೋಚಿತ ಕರ್ಮದಿಂದ ಬಾಳುವವನು ಕರ್ಮಬ್ರಾಹ್ಮಣ. ಬ್ರಾಹ್ಮಣನಾಗಿ ಜನಿಸಿ ಹೀನಕಾರ್ಯಗಲನ್ನು ಮಾಡುವವನು ಅತಿಶೂದ್ರನು. ನಿನಗೆ ಎಲ್ಲ ಅನುಕೂಲಗಳಿವೆ. ಅಡಟುಗೆ ನೀನE ಮಾಡಿಕೊಳ್ಳುತ್ತಿರುವೆ. ವಾಸಕ್ಕೆ ಸ್ವಚ್ಛ ಸ್ಥಳವಿದೆ. ಎರಡು ಸಾವಿರ ಸಂಬಳವಿದೆ. ಅದೂ ಬರೇ ಹಿಂದೀ ಸುಧಾರಿಸಲು.”

“ಏನು ಸುಧಾರಿಸುವುದು? ನನ್ನ ತಲೆ ಒಡೆಯಬೇಕೇ? ತಂದೆಗೆ ಪತ್ರ ಬರೆ ಎಂದರೆ ಏನು ಬರೆದಳೆಂದು ಗೊತ್ತೇ? ʻಪೂಜ್ಯ ಪಿತಾಜೀ, ನಾನಿಲ್ಲಿ ಕ್ಷೇಮ. ನಿಮ್ಮ ಕ್ಷೇಮ ಬಯಸುತ್ತೇನೆ.ʼ – ಅಷ್ಟೇ. ಹೀಗಿರುವುದನ್ನು ಹೇಗೆ ಸುಧಾರಿಸಲಿ? ಮತ್ತೊಂದು ವಿಷಯ ಹೇಳಲೇ?”

“ಹೇಳು.”

“ಈ ದೊಡ್ಡ ಮನುಷ್ಯರ ಸೌಜನ್ಯದಲ್ಲಿ ಮುಚ್ಚಿದ ಅಂತರಂಗ ಬಹಳ ಭಯಾನಕವಿರುತ್ತದೆ. ಎಂತೆಂತಹ ಕುಟಿಲ ಮುಖದ ಗೂಂಡಾಗಳು, ಕೊಲೆಗಡುಕರು ಬಂದು ಅಡಗುವ ಸ್ಥಳವದು. ಕತ್ತಲು ತುಂಬಿದ ನೆಲಮಾಳಿಗೆಯೊಂದಿದೆ. ಅಲ್ಲಿಗೆ ಯಮನೂ ಬರುವಂತಿಲ್ಲ. ರಾತ್ರಿಯಿಡೀ ಮೀಟಿಂಗ್‌ಗಳು, ಕುಡಿಯುವುದು, ಕುಡಿಸುವುದು, ಪಿಸುದನಿಯ ಮಾತುಗಳು ನಡೆದಿರುತ್ತವೆ. ಆ ಪಿಶಾಚರ ನಗರದಲ್ಲಿ ನನಗೆ ಉಸಿರಾಡಲೂ ಆಗದು. ನೀವು ಅವರಿಗೆ ಹೇಳಿಬಿಡಿ, ಶಿವಾನೀಜೀ.”

“ಅವರಿಗೆ ತಿಳಿಸದೆ ಬಂದೆಯೇನು?”

“ಇಲ್ಲ, ಮಾಂಜೀಗೆ ಹೇಳಿದೆ, ನನ್ನಮ್ಮನ ಆರೋಗ್ಯ ಚೆನ್ನಾಗಿಲ್ಲ, ನೋಡಿ ಬರಲೇ, ಎಂದು. ಹ್ಞಾ, ಹೋಗಿ ಬಾ ಮಗೂ, ಬೇಗ ಹಿಂದಿರುಗು, ಸರೋನ ಕತೆ ಅರ್ಧದಲ್ಲಿದೆ, ಅಂದರು.”

“ಹಾಗಾದರೆ ನೀನು ಕಾನ್ಪುರಕ್ಕೆ ಹಿಂದಿರುಗು ಮಹೇಶ್‌, ನಿನಗೆ ಒಳಿತೇ ಆದೀತು. ಅವರು ಸಂತುಷ್ಟರಾದರೆ ನಿನ್ನನ್ನು ಎಲ್ಲಿಯಾದರೂ ಸೇರಿಸಿಯಾರು. ನೀನೇನು ಜೀವನಪೂರ್ತಿ ಅಲ್ಲಿ ಇರಲಿದೆಯೇ? ಕಾಲ ತುಂಬ ಬದಲಾಗಿದೆ. ಜುಟ್ಟಿಗೇ ಗಂಟುಬಿದ್ದರೆ ಎಲ್ಲೂ ಸಲ್ಲಲಾರೆ. ಹೋಗು, ಸರೋಳ ಕತೆಯನ್ನು ಪೂರ್ಣಗೊಳಿಸಿ ಬಾ.” 

ಸರೋಳ ಕಥೆ ಹಾಗೇ ಉಳಿದಿದ್ದರೆ! ಮತ್ತೆ ಐದಾರು ತಿಂಗಳ ತನಕ ಅವನ ಸಮಾಚಾರವಿರಲಿಲ್ಲ. ಒಮ್ಮೆ ಫೋನ್‌ ಮಾಡಿದಅಗ ಮಂತ್ರೀಜೀಯ ಪಿ.ಎ. ಹೇಳಿದ, ಅವರೆಲ್ಲರೂ ಬಾಬಾ ಸಾಹೇಬರ ಬೈಪಾಸ್‌ ಸರ್ಜರಿಗೆಂದು ಲಂಡನ್‌ಗೆ ಹೋಗಿದ್ದಾರೆಂದು. 

“ಮತ್ತೆ ಮಹೇಶ್?”‌

“ಪಂಡಿತ್‌ಜೀ? ಅವರೂ ಜೊತೆಗೆ ಹೋಗಿದ್ದಾರೆ.”

ಇರಲಿ, ವಿಸೇಶದ ಮುಕ್ತ ಹವೆ ಮಹೇಶನ ಜುಟ್ಟಿನ ಗಂಟನ್ನು ಸಡಿಲಿಸಬಹುದು, ಎಂದಂದುಕೊಂಡೆ. ಮಂತ್ರಿಪದವಿ ಪ್ರಾಪ್ತವಾದೊಡನೆ 

ಮಂತ್ರಿಹೃದಯ ಹೀಗೆ ತನ್ನ ಬೈಪಾಸ್‌ ಸರ್ಜರಿಗಾಗಿ ಏಕೆ ತುಡಿಯುತ್ತದೆಂಬ ವಿಷಯ ನನ್ನ ಕ್ಷುದ್ರ ಬುಧ್ಧಿಗೆ ಇದುವರೆಗೆ ಅರ್ಥವಾಗಿಲ್ಲ.  ಅದಕ್ಕಿಂತ ನಮ್ಮ ಹೃದಯಗಳೇ ಮೇಲು. ಪ್ರಾಯವೇರಿದರೂ ಗಡಿಯಾರದಂತೆ ನಿರಂತರ ಟಿಕ್‌ ಟಿಕ್‌ ಎನ್ನುತ್ತಿರುತ್ತವೆ. 

ಮತ್ತೆ ನಾನೇ ನನ್ನ ತಿರುಗಾಟದಲ್ಲಿ ವ್ಯಸ್ತಳಾದೆ. ಮೊದಲು ಮಾಸ್ಕೋ, ನಂತರ ಸೈಬೀರಿಯಾ, ತಾಶ್ಕೆಂಟ್‌ಗೆ ಹಿಂದಿರುಗಿದಾಗ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಮಹೇಶ್‌ ಕಾಣಿಸಿದ. ಗುರುತಿಸಲು ನನಗೆ ಸ್ವಲ್ಪ ಸಮಯವೇ ಹಿಡಿಯಿತು. ಆಪಾದಮಸ್ತಕ ಬದಲಾಗಿದ್ದ ಮಹೇಶ್‌ ಯಾವುದೋ ಬಹುರಾಷ್ಟ್ರೀಯ ಸಂಸ್ಥೆಯ ಸೀನಿಯರ್‌ ಎಕ್ಸೆಕ್ಯೂಟಿವ್‌ನಂತೆ ಕಾಣಿಸುತ್ತಿದ್ದ. 

ಅವನು ಎದುರಾದಾಗ ನನಗೆ ಆಕಾಶದಿಂದ ಬಿದ್ದಂತಾಯ್ತು. ನನ್ನನ್ನು ಕಂಡೊಡನೆ ಸಾಷ್ಟಾಂಗವೆರಗಿ ನಮಸ್ಕರಿಸುತ್ತಿದ್ದ ಮಹೇಶ್‌ ಇವನೇ ಏನು?

“ಹೇಗಿರುವಿ?” ನನ್ನ ಸ್ವರ ಬಯಸದಿದ್ದರೂ ವ್ಯಂಗ್ಯಾತ್ಮಕವಾಗಿತ್ತು. 

“ಫೈನ್!”‌ ಎಂದು ಅವನು ನಸುನಕ್ಕ. ನಗು ಈಗಲೂ ಇತ್ತು. ಅದೇ ಸ್ನಿಗ್ಧ ಹಾಸ! 

“ಪಿತಾಜೀ ಅವರ ಬೈಪಾಸ್‌ ಸರಿಯಾಗಿಯೇ ಆಯ್ತು. ನಾನೂ, ಸರೋಜ್‌ಜೀ ಯೂರೊಪ್‌ ಎಲ್ಲ ಸುತ್ತಿ ಬಂದೆವು. ಅಲ್ಲಿಂದ ಹವಾಯಿಗೂ ಹೋದೆವು.”

“ಜುಟ್ಟು ಎಲ್ಲಿ ಹೋಯ್ತು? ಹವಾಯಿಯ ಗಾಳಿಗೆ ಹಾರಿಹೋಯ್ತೇ?” ನಾನು ನಗುತ್ತಾ ಕೇಳಿದೆ.

“ಈಗಿಲ್ಲಿ ವಿದೇಶದಲ್ಲಿ ಜುಟ್ಟು ಕಾಯ್ದುಕೊಂಡಿರುವುದು ಬಹಳ ಕಷ್ಟ, ಶಿವಾನೀಜೀ.”

ಮತ್ತಿನ್ನೇನು ಕಾಯ್ದುಕೊಲ್ಳಲು ಶಕ್ಯನಾದೆ ಮೂರ್ಖ? ಎಂದು ಕೇಳಬೇಕನಿಸಿತು.

“ತಾಯಿ ಮತ್ತು ಮಾವ ಹೇಗಿದ್ದಾರೆ?” ನಾನು ವಿಷಯ ಬದಲಿಸಿದೆ. 

ನನ್ನ ಪ್ರತಿಯೊಬ್ಬ ಕಥಾನಾಯಕಿಯೂ ಅಷ್ಟು ಚೆಲುವೆಯೇಕೆ ಎಂಬ ಪ್ರಶ್ನೆ ವರ್ಷಗಳಿಂದಲೂ ನನ್ನ ಓದುಗರಿಂದ ಬರುತ್ತಿದೆ. ಇಂದು ವಿಧಾತನು ನನ್ನೆದುರು ತಂದು ನಿಲ್ಲಿಸಿರುವ ಕಥಾನಾಯಕಿಯ ಭೀಭತ್ಸತೆಯನ್ನು ಬಯಸಿದರೂ ನನ್ನ ಲೇಖನಿ ಸುಧಾರಿಸಲಾರದು. ಸುಮಅರು ನಾಲ್ಕಡಿ ಎತ್ತರದ ದೇಹ. ಸನಿಹದಿಂದ ದಿಟ್ಟಿಸಿದರೆ ತನ್ನ ಅಡಿಯಿಂದ ಮುಡಿಯ ವರೆಗಿನ ಒಂದೇ ಸ್ಥೂಲತೆಯಿಂದಾಗಿ ಎರಡೂವರೆ ಅಡಿಯಂತೆ ತೋರುತ್ತಿತ್ತು. ಅಗಲವಾದ ದವಡೆ; ಒಂದೂವರೆ ಇಂಚಿನ ಲಲಾಟದಲ್ಲಿ ದೊಡ್ಡ ಮಖಮಲ್‌ ಬಿಂದಿ. ಅಸ್ವಾಭಾವಿಕವಾಗಿ ಉಬ್ಬಿದ ಎದೆಯೇ ದೇಹಕ್ಕೆ ಪ್ರಧಾನವಾಗಿತ್ತು. ಮೇಲೆ ಚಾಚಿದ ಕೋರೆ ಹಲ್ಲುಗಲು. ಅಗಲವಾದ ವಜ್ರದ ನತ್ತು ಹೊಳೆವಾಗ ಕಪಫಲದ ಮಚ್ಚೆ ಇನ್ನೂ ಕೆಟ್ಟದಾಗಿ ಕಾಣುತ್ತಿತ್ತು. ಸಂಕ್ಷೇಪವಾಗಿ ಹೇಳಬೇಕೆಂದರೆ ಹಿಡಿಂಬಿಯೇ ಎದುರು ನಿಂತಂತೆ ಕಾಣುತ್ತಿತ್ತು. 

“ನಿಮ್ಮನ್ನು ಎಂದೂ ಭೇಟಿಯಾಗುವುದಾಗಲಿಲ್ಲ”, ಹಿಡಿಂಬೆ ಹಲ್ಲು ಕಿಸಿದು ಹೇಳಿದಳು. 

ಸೌಭಾಗ್ಯ ನನ್ನದು, ಎಂದು ಮನದಲ್ಲೇ ಹೇಳಿಕೊಂಡೆ. 

“ಹೊರಡೋಣ ಮಹೇಶ್‌, ತಂದೆಯವರು ಕಾರಿನಲ್ಲಿ ಕುಳಿತಿರಬಹುದು, ಅವರಿಗೆ ತ್ರಾಸವಾದೀತು.”. 

ಭಾರವಾದ ಮನದಿಂದ ನಾನು ಹಿಂದಿರುಗಿದೆ. ನಾನೇ ಈ ಅಭಾಗ್ಯನ ಸರ್ವನಾಶ ಮಾಡಿದೆನೇ?

ಇನ್ನೊಮ್ಮೆ ಆಗಸ್ಟ್‌ ಹದಿನೈದರಂದು ರಾಜಭವನದ ಪಾರ್ಟಿಯಲ್ಲಿ ಅವನು ಭೇಟಿಯಾದ. ಇಂತಹ ರಂಗುರಂಗಿನ ಪಾರ್ಟಿಗಳಲ್ಲಿ ಮೊದಲೇ ಉಸಿರು ಕಟ್ಟಿದಂತಾಗುತ್ತದೆ. ಪದಕಗಳನ್ನು ತೊಟ್ಟ ಸೇನಾಧಿಕಾರಿಗಳು, ಖದ್ದರ್‌ ಧೋತಿ ತೊಟ್ಟ ರಾಜಕಾರಣಿಗಳು, ವೆಂಕಟಗಿರಿ, ಘಡ್‌ವಾಲ್‌ ಸೀರೆಗಳನ್ನು ಪ್ರದರ್ಶಿಸುವ ಅಧಿಕಾರಿ ಪತ್ನಿಯರು! ರಸ್‌ಮಲಾಯಿ, ಸಮೋಸಾ, ಪೇಸ್ಟ್ರಿ, ಸೂಪ್‌ಗಳಿಗೆ ಮುತ್ತುವ ಗುಂಪು, ರಾ‌ಜ್‌ಭವನದ  ಬ್ಯಾಂಡ್‌ ಎಲ್ಲವೂ ನಾಟಕೀಯವೆನಿಸುತ್ತದೆ. ನಾನು ಒಂದು ಮೂಲೆಯಲ್ಲಿ ನಿಂತಿದ್ದಾಗ, ಮಹೇಶ್‌ ನನ್ನನ್ನು ಕಂಡು ನಗುತ್ತಾ ಬಳಿ ಬಂದ. ಅವನಿರುವ ಮನೆ ಅವನ ಮೇಲೆ ಪ್ರಭಾವ ಬೀರಿರುವುದನ್ನು ಹೆಚ್ಚಿಕೊಂಡ ಹೊಟ್ಟೆಯ ಪರಿಧಿ ಸೂಚಿಸುತ್ತಿತ್ತು. ಈಗಲೂ ಜನಿವಅರ ಧರಿಸಿ ಮಂತ್ರ ಪಠಿಸಬಲ್ಲನೇ ಬಡಪಾಯಿ?

ಬಳಿ ಬಂದು”ಹಾಯ್!”‌ ಅಂದ ಮಹೇಶ್.‌ ಜೊತೆಗೆ ಪಿತಾಜೀಯ ಮಗಳೂ ಇದ್ದಳು. ನೇರಲೆ ಬನ್ನದ ಸೀರೆ, ಅದೇ ಬಣ್ನದ ಲಿಪ್‌ಸ್ಟಿಕ್‌, ಅಡಿಯಿಂದ ಮುಡಿಯ ವರೆಗಿನ ಸ್ವರ್ಣಾಭರಣಗಳಲ್ಲಿ ನನ್ನೆದುರು ತ್ರಿಭುವನ್‌ದಾಸ್‌ ಜ್ಯುವೆಲ್ಲರಿಯೇ ತೆರೆದಂತಿತ್ತು. 

“ಕಥಾ ಲೇಖನ ಹೇಗೆ ಸಾಗಿದೆ?” ನಾನು ಕೇಳಿದೆ. 

“ಇವರ ಮೂರು ಕಥೆಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅಚ್ಚಾಗಿವೆ. ಈಗ ಕಅದಂಬರಿ ಬರೆಯುತ್ತಿದ್ದಾರೆ. ಅದನ್ನೇ ಬರೆದು ಮುಗಿಸಲೆಂದು ನಾವು ಊಟಿಗೆ ಹೋಗುತ್ತಿದ್ದೇವೆ.” 

ಮಹೇಶ ಉತ್ತರಿಸಿದ. ಅವನೇ ಬರೆಯುತ್ತಿರುವನೆಂಬುದು ಸ್ಪಷ್ಟವಿತ್ತು. 

ಸಂಸ್ಕೃತವನ್ನು ಆಳವಾಗಿ ಮನನ ಮಾಡಿಕೊಂಡ ಅವನನ್ನು ಈ ಪಙ್ತಿಗಳು ಪಥಭ್ರಷ್ಟನನ್ನಾಗಿಸಿರ ಬಹುದೇ? “ಹೇ ಪಥಿಕ! ಗ್ರೀಷ್ಮ ಋತುವಿನ ಮಧ್ಯಾಹ್ನ! ಸೆಕೆ ಸಹಿಸಲಸಾಧ್ಯವಾಗಿದೆ. ಈ ಸ್ಥಿತಿಯಲ್ಲಿ ನಡೆಯುವುದು ಅಸಂಭವ. ನೀನೀಗ ಈ ಸುಂದರ ತರುವಿನ ಶೀತಲ ಛಾಐೆಯಲ್ಲಿ ವಿರಮಿಸು. ನೀನು ಏಕಾಕಿ ನಅನೋ ತರುಣಿ. ಜೊತೆಗೆ ಈ ತಾಣ ನಿರ್ಜನವಾಗಿದೆ. ಹೇಳಲು ನಾಚಿಕೆ ಅನಿಸುತ್ತಿದೆ. ಅದರೆ ಸ್ವಯಂ ಚತುರನಾದ ನೀನು ಕಾಲೋಚಿತವಾಗಿ ಮಾಡಬಹುದಾದ್ದು, ಮಾಡಬಅರದುದೆಲ್ಲ ಅರಿತಿರುವೆ.”

ಅದೇ ನಿರ್ಜನ ಪಥ, ನೂರ್ಮಡಿಯಾದ ಆಘಾತದಿಂದ ಸಹಕರಿಸಿರ ಬಹುದು. ಕಅದಂಬರಿ ಪೂರ್ಣವಾಯ್ತೋ, ಇಲ್ಲವೋ, ಆದರೆ ಆ ಪರ್ವತ ಪುತ್ರ ಬಿದ್ದವ ಮತ್ತೆ ಏಳಲಿಲ್ಲ. ಮನೆಗೆ ಬಂದು ಅವನಿತ್ತ ಕಾರ್ಡ್‌ ನೆನಪಾಗಿ ತೆಗೆದು ನೋಡಿ ಸ್ಥಬ್ಧಳಾದೆ.

 ʻಮಿ. ಮಹೇಶ್‌ ಚರ್ಮಕೇರ್‌ʼ ಎಂದಿತ್ತು.  

ಊಟಿಗೆ ತೆರಳುವ ಮುನ್ನವೇ ಈ ಮೃತ್ಯುಕೂಪಕ್ಕೆ ಲಗ್ಗೆ ಹಾಕಿದ್ದನೇನು? ನಾನು ದೀರ್ಘ ಚಿಂತೆಯಲಿ ಮುಳುಗಿದೆ. ಹಿಂದಿರುಗಲಿಚ್ಛಿಸದ ಅವನನ್ನು ನಾನೇ ಬದಲಾದ ಜೀವನಮೌಲ್ಯದ ಪಾಠ ಹೇಳಿ ಅಲ್ಲಿಗೆ ದಬ್ಬಿದ್ದೆ. ಅಲ್ಮೋರಾಕ್ಕೆ ಹೋದಾಗ ಅಲ್ಲಿ ವಿವಾಹ ಮಂಗಳ ಸಂಪನ್ನವಾಗಿಸಲು ಬಂದಿದ್ದ ಅವನ ಮಾವ ಸಿಕ್ಕಿದರು. ನಮಸ್ಕರಿಸಿದರೆ ಮುಖ ತಿರುಗಿಸಿದರು. 

“ಬಹುಶಃ ಗುರುತು ಹತ್ತಿಲ್ಲವೆಂದು ಕಾಣ್ತದೆ?”

“ಯಾಕಿಲ್ಲ? ಆದರೆ ಒಂದು ಮಾತು ಕೇಳಲೇ? ನಮ್ಮೂರು ನಿನ್ನ ಪತಿಯ ತವರೂ ಆಗಿತ್ತು. ಹಾಗಿದ್ದೂ ಮಹೇಶನಿಗೆ ಇಂತಾ ಕೆಡುಕೇಕೆ ಮಾಡಿದೆ? ಬಲಿಯ ಮೇಕೆಯಾಗಿಸಲು ನನ್ನಳಿಯನೇ ಉಳಿದಿದ್ದನೇ?”

“ನಅನು ಅವನ ಒಳಿತನ್ನೇ ಬಯಸಿದ್ದೆ, ಮಾಮಾಜಿ.”

“ಏನು ಒಳಿತು ಬಯಸಿದೆ? ಅವರ ಮಗಳನ್ನೇ ಮದುವೆಯಾಗಿ ಏಳು ತಲೆಮಾರುಗಳನ್ನು ಮಣ್ಣುಮುಕ್ಕಿಸಿದ ಅಭಾಗ್ಯ!”

“ಅವನ ತಾಯಿ ಹೇಗಿದ್ದಾರೆ?”, ಅಂಜುತ್ತಲೇ ಕೇಳಿದೆ. 

“ಅವಳೆಲ್ಲಿದ್ದಾಳೆ? ವಿವಸ್ತ್ರಳಾಗಿ ಹುಚ್ಚಿಯಂತೆ ಅಲೆಯುತ್ತಿದ್ದಳು. ಸಾಯುವ ಎರಡು ತಿಂಗಳ ಮೊದಲು ಮಗ ಹೀಗೆ ಮದುವೆಯಾಗಿ ಧರ್ಮಭ್ರಷ್ಟನಾದ ಬಗ್ಗೆ ಯಾರೋ ಹೇಳಿದರು. ಅದೇ ಕ್ಷಣ ಹುಚ್ಚು ಬಿಟ್ಟಗಲಿತು. ಮನೆಗೆ ಬಂದು ನನ್ನನ್ನು ಹಿಡಿದುಕೊಂಡು ಅಳಲಾರಂಭಿಸಿದಳು. ನಮ್ಮ ವಂಶವನ್ನೇ ನಿವಾಳಿಸಿ ಒಗೆದ! ಇನ್ನು ಅವನ ಮನಿ ಆರ್ಡರ್‌ ಕೊಡಲು ಬಂದೆಯಾದರೆ ಜಾಗ್ರತೆ!”

ನಿಟ್ಟುಸಿರಿಟ್ಟು ಮುಂದುವರಿಸಿದರು, “ಹುಚ್ಚು ತೊಲಗಲು ಇಲೆಕ್ಟ್ರಿಕ್‌ ಶಾಕ್‌ ಕೊಡಲಾಗುತ್ತದೆಂದು ಕೇಳಿದ್ದೆ. ಇದಕ್ಕೂ ಮೀರಿದ ಶಾಕ್‌ ಬೇರಿನ್ನೇನು? ಕಾಮಾಲೆಯಾಗಿ ಹೊದಿಕೆಯೂ ಹಳದಿ ಬಣ್ಣಕ್ಕೆ ತಿರುಗಿತ್ತು. ಏಕಾದಶಿಯ ಪುಣ್ಯತಿಥಿಯಂದು ಕಂತೆ ಒಗೆದಳು. ನಅನು ಅವನಿಗೆ ಸುದ್ದಿ ಮುಟ್ಟಿಸಲೂ ಇಲ್ಲ. ತನ್ನ ತಾಯಿಯ ಪವಿತ್ರ ಶರೀರ ಮುಟ್ಟುವ ಅಧಿಕಾರ ಅವನೆಂದೋ ಕಳಕೊಂಡ.”

ಖಿನ್ನಚಿತ್ತಳಾಗಿ ಲಖನೌಗೆ ಮರಳಿದೆ. ಮಾವನ ದೃಷ್ಟಿ ಮಾತ್ರವೇಕೆ, ನನ್ನ ದೃಷ್ಟಿಯಲ್ಲೂ ನಾನು ದೋಷಿಯಾಗಿದ್ದೆ. ಪುನಃ ನಾನವನನ್ನು ಕಳಿಸಿದ್ದಲ್ಲದಿದ್ದರೆ, ಅವನು ಮಹೇಶ್‌ ಪಂತ್‌ನಿಂದ ಮಹೇಶ್‌ ಚರ್ಮಕೇರ್‌ ಆಗುತ್ತಿರಲಿಲ್ಲ. ನನ್ನನ್ನೇ ನಾನು ಸಮಾಧಾನಿಸಿಕೊಳ್ಳಲು ಬಹಳಷ್ಟು ಯತ್ನಿಸಿದೆ. ತರ್ಕ, ವಿತರ್ಕಗಳನ್ನು ಮುಂದಿಟ್ಟೆ. ನನ್ನಿಂದಾಗದ್ದನ್ನು ವಿಧಿಯೇ ಅವನಿಗಾಗಿ ಮಾಡಿದೆ. ಮುಂದೆ ಅವನ ಮಕ್ಕಳಾದಲ್ಲಿ ಅವು ತಂದೆಯ ಪ್ರತಿಭೆಯಿಂದ ವಂಚಿತರಾದರೂ, ಪ್ರಸಿಧ್ಧ ಪಬ್ಲಿಕ್‌ ಶಾಲೆಗಳ ಬಾಗಿಲು ʻಖುಲ್‌ ಜಾ ಸಿಮ್‌ ಸಿಮ್‌ʼ ಎಂದೊಡನೆ ಅವರಿಗಾಗಿ ತೆರೆಯುವುದು. ಮುಂದೆ ಮೆಡಿಕಲ್‌, ಇಂಜಿನಿಯರಿಂಗ್‌ ಕಾಲೇಜುಗಳು ಉತ್ಸಾಹದಿಂದ ಅವರನ್ನು ಸ್ವಾಗತಿಸುವುವು. ನೌಕರಿ ಅವರ ಕೈವಶವಾಗಲು ಕಾದಿರುವುದು. ಪ್ರತಿಭಾಶಾಲಿ, ಮೇಧಾವಿ, ಸುಯೋಗ್ಯರಾಗಿದ್ದೂ ನೌಕರಿಯನ್ನರಸುತ್ತಾ ಅವರು ಅಲೆಯುವಂತಾಗದು.

ಏನೆಂಥ ಯತ್ನದಿಂದಲೂ ಮನಸ್ಸಿಗೆ ಸಮಾದಾನವಾಗುತ್ತಿಲ್ಲ. ಆ ಕರ್ಮಠ ಸರಳ ಬ್ರಾಹ್ಮಣನ ವೇದನಾಯುಕ್ತ ದನಿ ಚಾಟಿಯಿಂದ ಹೊಡೆದಂತೆ ಪೀಡಿಸುತ್ತಿದೆ:  “ಬಲಿಯ ಮೇಕೆಯಾಗಿಸಲು ನನ್ನಳಿಯನೇ ಉಳಿದಿದ್ದನೇ?” 

‍ಲೇಖಕರು Admin

10 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading