ರಂಗ ವಿಮರ್ಶೆ ಎನ್ನುವುದರ ಬೆನ್ನು ಹತ್ತಿ

ಇಂದು ಆ ಮಹಾನ್ ಸಾಹಿತಿ ಕುವೆಂಪು ಜನ್ಮ ದಿನ. ಆ ಸಂದರ್ಭಕ್ಕಾಗಿ ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಇಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಭಿನ್ನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅಲ್ಲಿ ಬಸವಲಿಂಗಯ್ಯ ನಿರ್ದೇಶಿಸಿದ ಇಡೀ ರಾತ್ರಿ ನಾಟಕ ಮಲೆಗಳಲ್ಲಿ ಮದುಮಗಳು ನಾಟಕದ ಬಗೆಗಿನ ಪುಸ್ತಕವೂ ಬಿಡುಗಡೆಯಾಗುತ್ತಿದೆ. ‘ಯಾರೂ ಮುಖ್ಯರಲ್ಲ..’ ಎನ್ನುವ ಅರ್ಥಪೂರ್ಣ ಹೆಸರಿನ ಈ ಪುಸ್ತಕದಲ್ಲಿ ನಾನು ಬರೆದಿರುವ ಸಾಲುಗಳು ಇಲ್ಲಿವೆ -ಜಿ ಎನ್ ಮೋಹನ್ ‘ಮಲೆಗಳಲ್ಲಿ ಮದುಮಗಳು’ ಒಂದು ಕಾದಂಬರಿ. ಕನ್ನಡದ ಮನಸ್ಸನ್ನು ದಶಕಗಳಿಂದ ಆಳಿರುವ, ಆಳುತ್ತಿರುವ ಕಾದಂಬರಿ. ಕಿನ್ನರಿ ಜೋಗಿಗಳ ಬಗಲ ಜೋಳಿಗೆಯಿಂದ ಹಿಡಿದು ಮನೆ ಮನೆಯ ಕಪಾಟಿನಲ್ಲೂ, ಹಲವು ಕೈಗಳಲ್ಲೂ ಕಾಣಿಸಿಕೊಳ್ಳುವ ಕಾದಂಬರಿ. ಈ ಕಾದಂಬರಿ ಈಗ ಪ್ರಶ್ನೆ ಎತ್ತುತ್ತಿರುವುದು ಕಾದಂಬರಿ ಲೋಕದ ಬಗ್ಗೆ ಅಲ್ಲ, ರಂಗಭೂಮಿಯ ಬಗ್ಗೆ. ಸಿ ಬಸವಲಿಂಗಯ್ಯ ರಂಗಾಯಣಕ್ಕಾಗಿ ಒಂದು ದೊಡ್ಡ ಸವಾಲು ಮುಂದಿಟ್ಟುಕೊಂಡಿದ್ದೇ ತಡ ಈ ಸವಾಲು ಹಲವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿದೆ. ಇದರಲ್ಲಿ ರಂಗಭೂಮಿಯನ್ನು ನೋಡುವ ಬಗೆ ಹೇಗೆ ಎಂಬ ಪ್ರಶ್ನೆಯೂ ಒಂದು. ಭೈರೇಗೌಡರ ಕಾರಣದಿಂದಾಗಿ ‘ಮಲೆಗಳಲ್ಲಿ ಮದುಮಗಳು’ ಕುರಿತ ಹತ್ತು ಹಲವು ವಿಮರ್ಶೆಯನ್ನು ಓದಬೇಕಾದ ಪ್ರಸಂಗ ಎದುರಾಯಿತು. ರಂಗಭೂಮಿಯ ಬಗ್ಗೆ ಏನನ್ನು ಓದುವುದೂ ಖುಷಿಯ ವಿಚಾರವಾದ ನನಗೆ ಇದು ಅಂತಹ ಮತ್ತೊಂದು ಸಂತಸದ ಕೆಲಸವಾಗಿತ್ತು. ನಾನು ರಂಗಭೂಮಿಯನ್ನು ಒಂದು ಕುತೂಹಲದ ಕಣ್ಣಿನಿಂದ ನೋಡುತ್ತಲೇ ಬಂದಿದ್ದೇನೆ. ಜೊತೆಗೆ ಮಾಧ್ಯಮದ ವಿದ್ಯಾರ್ಥಿಯಾಗಿ ನನಗೆ ರಂಗಭೂಮಿ ಮತ್ತು ಮಾಧ್ಯಮದ ಸಂಬಂಧ ಸಹಾ ಕಾಡುವ ವಸ್ತು. ಭೈರೇಗೌಡರು ಕೈಗಿತ್ತ ಮದುಮಗಳು ವಿಮರ್ಶೆಯ ಕಟ್ಟನ್ನು (..ಅಥವಾ ಕೆ ವಿ ನಾರಾಯಣ್ ಪರಿಭಾಷೆಯಲ್ಲಿ ಹೇಳುವುದಾದರೆ ‘ಕಂತೆ’ಯನ್ನು) ಓದಿದಾಗ ನನಗೆ ಮೊದಲು ಎದ್ದು ಕಂಡಿದ್ದು ಸಾಹಿತ್ಯ ವಿಮರ್ಶೆ ಎನ್ನುವುದು ಇನ್ನೂ ಜೀವಂತವಿದೆ ಎನ್ನುವುದು. ಈ ಸಂತೋಷದ ಬೆನ್ನಲ್ಲೇ ಅರಿವಾದದ್ದು ರಂಗ ವಿಮರ್ಶೆ ಎನ್ನುವುದು ನಾಪತ್ತೆಯಾಗಿದೆ ಎನ್ನುವುದು. ಅಸಲಿಗೆ ರಂಗ ವಿಮರ್ಶೆ ಎನ್ನುವುದು ಎಂದಾದರೂ ಇತ್ತೇ? ಎನ್ನುವ ಪ್ರಶ್ನೆಯೂ ನನ್ನ ಮುಂದಿದೆ. ನಾನು ಹಲವು ವರ್ಷಗಳ ಕಾಲ ರಂಗ ವಿಮರ್ಶೆಯೆಂಬ ಖುಷಿಯಲ್ಲಿ ಮಿಂದವನು. ನನಗೆ ರಂಗಭೂಮಿಯ ಮೂರು ವರ್ಷದ ಪದವಿ ತೆಕ್ಕೆಯಲ್ಲಿತ್ತು. ವರ್ಷಾನುಗಟ್ಟಲೆ ರಂಗ ವಿಮರ್ಶೆ ಬರೆದರೂ ನನಗೆ ಈ ಅತೃಪ್ತಿ ಒಡಲ ಹಸಿವಿನಂತೆ ಉಳಿದೆ ಬಿಟ್ಟಿದೆ. ವಿಮರ್ಶೆ ಎನ್ನುವುದು ಏನು? ಅದರ ತಯಾರಿ ಹೇಗೆ? ಅಥವಾ ಶಾಸ್ತ್ರೋಕ್ತ ತಯಾರಿ ಎನ್ನುವುದು ಬೇಕೇ? ಎನ್ನುವ ಪ್ರಶ್ನೆಯನ್ನೂ ನಾನು ಮೇಲಿಂದ ಮೇಲೆ ಕೇಳಿಕೊಂಡಿದ್ದೇನೆ. ನನಗೆ ರಂಗ ವಿಮರ್ಶೆ ಮಾಡುವಾಗ ಇದ್ದ ದೊಡ್ಡ ವಿಶ್ವಾಸವೆಂದರೆ ಹವ್ಯಾಸಿ ರಂಗಭೂಮಿಯ ಬೆಳವಣಿಗೆಯ ಎಲ್ಲಾ ಹಂತಗಳಿಗೂ ನಾನು ನೋಡುಗನಾಗಿ ಸಾಕ್ಷಿಯಾಗಿದ್ದೆ ಎಂಬುದು. ಬಾಲಭವನದಲ್ಲಿ ಭಿನ್ನ ರಂಗಭೂಮಿಗೆ ಬೀಜ ಇತ್ತ ಪ್ರಸನ್ನರ ‘ಗರೀಬಿ ಹಠಾವೋ’ ಅಥವಾ ಎನ್ ಎಸ್ ವೆಂಕಟರಾಮ್ ಅವರ ‘ಆನೆಮರಿ’ ನಾಟಕಗಳನ್ನು ನಾನು ನೋಡಿಲ್ಲವಾದರೂ ಈಗ ಸಂಸ ಕಲಾಕ್ಷೇತ್ರವಾಗಿ ಎದ್ದು ನಿಂತಿರುವ ಕಲಾಕ್ಷೇತ್ರದ ಹಿಂದಿನ ಬಯಲಿನಲ್ಲಿ ಆಗ ಎದ್ದು ನಿಂತಿದ್ದ ತಾತ್ಕಾಲಿಕ ರಂಗ ಮಂದಿರದಲ್ಲಿ, ಬಿ ವಿ ಕಾರಂತರ ನೇತೃತ್ವದಲ್ಲಿ ರಂಗಭೂಮಿ ಹಿಡಿಸಿಕೊಂಡ ಹುಚ್ಚಿನಿಂದ ಆರಂಭಿಸಿ ಇಲ್ಲಿಯವರೆಗೆ ಬಹುತೇಕ ನಾಟಕಗಳನ್ನು ನೋಡಿದ್ದೇನೆ. ಹಾಗಾಗಿ ಇಷ್ಟಂತೂ ಸತ್ಯ. ಹವ್ಯಾಸಿ ನಾಟಕಗಳ ಪೈಕಿಯೇ ಹೋಲಿಸಿ ನೋಡುವ, ರಂಗದ ಸಾಧ್ಯತೆಗಳನ್ನು ಬೆಳಕಿನಲ್ಲಿಟ್ಟು ನೋಡುವ, ಪ್ರಸಾಧನ, ಬೆಳಕು ಇತ್ಯಾದಿ ರಂಗ ನೇಪಥ್ಯದ ಸಂಗತಿಗಳಲ್ಲಿ ಯಾವುದು ಮುನ್ನೆಲೆಯಲ್ಲಿದೆ ಎಂಬುದನ್ನು ಹತ್ತು ಹಲವು ನಾಟಕಗಳ ಅನುಭವದಲ್ಲಿ ತೂಗಿ ನೋಡುವ ನೋಟವಂತೂ ದಕ್ಕಿದೆ. ಬಹುಷಃ ನಾನು ಮಾತ್ರವಲ್ಲ, ನನ್ನ ಜೊತೆಯೇ ನಾಟಕ ವಿಮರ್ಶೆ ಮಾಡುತ್ತಿದ್ದ ಸಮಕಾಲೀನರ ಅನುಭವವೂ ಇದಕ್ಕಿಂತ ಭಿನ್ನವಾಗಿರುವ ಸಾಧ್ಯತೆಗಳಿಲ್ಲ. ರಂಗ ಚಟುವಟಿಕೆಯಲ್ಲೇ ತೊಡಗಿಸಿಕೊಂಡವರು ವಿಮರ್ಶೆ ಬರೆದಾಗ ನೋಡುವ ಅನುಭವದ ಬದಲಿಗೆ ಒಂದು ಅಕ್ಕಿ ಕಾಳು ತೂಕ ಆಡುವ ಅನುಭವ ಅಲ್ಲಿ ಕಂಡಿದೆ ಎನ್ನುವಷ್ಟು ಮಾತ್ರ ವ್ಯತ್ಯಾಸ ಕಂಡಿದ್ದೇನೆ. ರಂಗ ಶಿಕ್ಷಣದಲ್ಲಿ ರಂಗ ವಿಮರ್ಶೆ ಒಂದು ಭಾಗವಾಗಿದೆಯೇ? ಇಂದು ಡಿಪ್ಲೋಮೋ, ಪದವಿ, ಸ್ನಾತಕೋತ್ತರ ಪದವಿ, ರಂಗಾಯಣದ್ದೇ ದೂರ ಶಿಕ್ಷಣ ಡಿಪ್ಲೋಮೋಗಳೆಲ್ಲಾ ರೂಪುಗೊಂಡಿರುವಾಗ ಅದನ್ನು ಓದಿನ ಒಂದು ಭಾಗವಾಗಿ ಮಾಡಿದ್ದಾರೇನೋ, ಗೊತ್ತಿಲ್ಲ. ಆದರೆ ಬಿ ವಿ ರಾಜಾರಾಂ, ಮುಖ್ಯಮಂತ್ರಿ ಚಂದ್ರು ಆದಿಯಾಗಿ ನಾವೆಲ್ಲಾ ರಂಗಭೂಮಿ ಪದವಿಗೆ ಸಜ್ಜಾಗುತ್ತಿದ್ದಾಗ ಎಚ್ ಕೆ ರಂಗನಾಥ್, ಕ ವೆಂ ರಾಜಗೋಪಾಲ್ ಅವರು ಮುಖ್ಯಸ್ಥರಾಗಿದ್ದಾಗ, ಆರ್ ಟಿ ರಮ, ಸುಧೀಂಧ್ರ ಶರ್ಮ ಪಾಠ ಮಾಡುವಾಗಲೂ ಅದು ಓದಿನ ಭಾಗವಾಗಿರಲಿಲ್ಲ. ಅಷ್ಟೇ ಅಲ್ಲ, ಚರ್ಚೆಯ ವಸ್ತುವೂ ಆಗಿರಲಿಲ್ಲ. ಹಾಗಾದರೆ ರಂಗ ವಿಮರ್ಶೆ ಎನ್ನುವುದು ಎದ್ದು ನಿಂತಿದ್ದು ಎಲ್ಲಿಂದ? ಪತ್ರಿಕೆಗಳ ಒಡಲಲ್ಲಿ. ನಾನು ರಂಗ ವಿಮರ್ಶೆ ಗೆ ಕೈ ಇಡುವುದಕ್ಕೆ ಮಾಡಿಕೊಂಡ ತಯಾರಿಯೂ ಭಿನ್ನ. ನಾನು ಪಿ ಯು ಸಿ ಓದುವ ದಿನಗಳಲ್ಲೇ ನೋಡುತ್ತಿದ್ದ ನಾಟಕಗಳನ್ನೆಲ್ಲಾ ಒಂದು ನೋಟ್ ಬುಕ್ ನಲ್ಲಿ ವಿಮರ್ಶೆಯಾಗಿಸುತ್ತಿದ್ದೆ. ವಿಮರ್ಶೆ ಹೀಗೆ ಬರೆಯಬೇಕು ಎನ್ನುವುದಕ್ಕೆ ನಮಗಿದ್ದ ಮಾದರಿಯಾದರೂ ಏನು? ಎಗೈನ್ ಪತ್ರಿಕೆಗಳಲ್ಲಿ ಬರುತ್ತಿದ್ದ ವಿಮರ್ಶೆಗಳೇ. ಪತ್ರಿಕೆಗಳಲ್ಲಿ ಬರುತ್ತಿದ್ದ ವಿಮರ್ಶೆಯನ್ನು ಓದಿ ಅದರ ನೆರಳಲ್ಲೇ ನಮ್ಮ ವಿಮರ್ಶೆ ರೂಪುಗೊಳ್ಳುತ್ತಿದ್ದ ದಿನಗಳು ಅವು. ಪತ್ರಿಕಾಲಯದೊಳಗೆ ವಿಮರ್ಶೆಯ ಒಂದು ಭಿನ್ನ ಲೋಕವಿದೆ ಎಂದು ನಾನು ಭಾವಿಸಿದ್ದೆ. ನಾವು ಪತ್ರಿಕೆಗೆ ವಿಮರ್ಶೆ ಬರೆಯುವ ವೇಳೆಗೆ ಜಿ ಎಸ್ ಸದಾಶಿವ, ಜಿ ಎನ್ ರಂಗನಾಥ ರಾವ್, ಬಿ ವಿ ವೈಕುಂಠ ರಾಜು ವಿಮರ್ಶೆಯ ಅಂಗಳದಲ್ಲಿದ್ದರು. ಇವರು ಮಾಡುವ ವಿಮರ್ಶೆಯನ್ನು ರಂಗ ಲೋಕ ಕಾದಿದ್ದು ಓದುವ, ವಿಮರ್ಶೆ ಇವರು ಬರೆಯಲಿ ಎಂದು ಹಾರೈಸುವ ಕಾಲ ಇತ್ತು. ಅವರು ವಿಮರ್ಶೆ ಕಲಿತಿದ್ದು ಎಲ್ಲಿಂದ?. ಈ ಮೇಲಿನ ಎಲ್ಲರಿಗೂ ನವ್ಯ ಸಾಹಿತ್ಯ ಚಳವಳಿಯ ಕ್ಯಾನ್ವಾಸ್ ಬೆನ್ನಿಗಿತ್ತು. ಸಾಕಷ್ಟು ಓದಿದವರು, ಅನುವಾದ ಮಾಡಿದವರು, ಈ ಎಲ್ಲರೂ ಸ್ವತಹ ಲೇಖಕರು, ಅಷ್ಟೇ ಅಲ್ಲ ಎಷ್ಟೋ ನಾಟಕಗಳನ್ನು ಕನ್ನಡಕ್ಕೂ ತಂದವರು, ತಾವೇ ಬರೆದವರು. ಹಾಗಾಗಿ ಆ ಬರೆದ, ಓದಿದ ಅನುಭವ ಅವರ ಜೀವ ಜೀವಾಳವಾಗಿತ್ತು. ಆದರೆ ವಿಮರ್ಶೆ ಎಂದರೆ ಅಷ್ಟೇನೆ? ನಾನು ಏಣಗಿ ಬಾಳಪ್ಪನವರ ಸಂದರ್ಶನದಿಂದ ಆರಂಭಿಸಿ, ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ನ ಕಲಾ ಜಾಥಾ, ರವೀಂದ್ರ ಕಲಾಕ್ಷೇತ್ರದ ಹುಟ್ಟಿನ ಕಥೆ ಬರೆದು ಪತ್ರಿಕೆಗಳಿಗೆ ವಿಮರ್ಶೆ ಬರೆಯುವ ವೇಳೆಗೆ ನನಗೆ ಇದ್ದದ್ದು ನಾಟಕ ನೋಡಿದ, ನಾಟಕದ ಗೆಳೆಯರ ಜೊತೆ ಒಡನಾಡಿದ ಅನುಭವ ಮಾತ್ರ. ಈ ಎರಡರ ಹುಮ್ಮಸ್ಸು, ಅದರ ಜೊತೆಗೆ ನಾವು ಪತ್ರಿಕೆಯಲ್ಲಿಯೇ ಇದ್ದ ಕಾರಣ ಅಲ್ಲಿ ವಿಮರ್ಶೆ ಬರೆದರೆ ಒಂದಿಷ್ಟು ಜಾಗ ಇದ್ದೇ ಇದೆ ಎನ್ನುವ ಕಾರಣಕ್ಕೂ ನಾವು ಮೇಲಿಂದ ಮೇಲೆ ಬರೆದೆವು. ಆದರೆ ಪತ್ರಿಕೆಯ ಒಳಗೂ ಅಷ್ಟೇ ರಂಗಭೂಮಿ ವಿಮರ್ಶಕರು ಅಂತೇನಿಲ್ಲ. ಇಂದು ಪತ್ರಿಕೆಯೊಳಗೆ ಕೆಲಸ ಮಾಡುತ್ತಾ ವಿಮರ್ಶೆಯನ್ನೂ ಬರೆಯುತ್ತಿರುವ ಯಾರನ್ನಾದರೂ ಕೇಳಿ ನೋಡಿ. ಅವರ ಪಾಡು ಅವರಿಗೆ ಗೊತ್ತು. ತಮ್ಮ ರಜಾದಿನದಂದೋ ಅಥವಾ ತಮ್ಮ ಎಲ್ಲಾ ಕೆಲಸವನ್ನೂ ಮುಗಿಸಿ ಓಡಿ ಹೋಗಿ ನಾಟಕ ನೋಡುವ, ವಿಮರ್ಶೆ ಬರೆಯುವ ಪ್ರೋತ್ಸಾಹವೇ ಇಲ್ಲದ ವಾತಾವರಣವೇ ಇದೆ. ಇಂದು ಪತ್ರಿಕೆಗಳಲ್ಲಿ ವಿಮರ್ಶೆ ಎನ್ನುವುದು ಇನ್ನೂ ಉಳಿದುಕೊಂಡಿದ್ದರೆ ತಮ್ಮ ವಯಕ್ತಿಕ ಆಸಕ್ತಿಯಿಂದ ನಾಟಕ ನೋಡುತ್ತಿರುವ, ಅದರ ಬಗ್ಗೆ ಬರೆಯುತ್ತಿರುವುದರಿಂದ ಮಾತ್ರವೇ ಹೊರತು ಪತ್ರಿಕೆಗಳಿಗೆ ಸಿನೆಮಾದಂತೆ ನಾಟಕ ವಿಮರ್ಶೆ ಅನಿವಾರ್ಯವಾದ ಅಂಕಣವೇನಲ್ಲ. ಹೀಗಾಗಿಯೇ ಅಂದಿನಿಂದ ಇಂದಿನವರೆಗೂ ನೋಡಿದರೆ ವಿಮರ್ಶೆ ಆರಕ್ಕೇರಿಲ್ಲ, ಮೂರಕ್ಕೆ ಇಳಿದಿಲ್ಲ. ರಂಗ ವಿಮರ್ಶೆ ಎನ್ನುವುದು ಈಗಿನ ಟ್ರೆಂಡ್ ಆಗಿರುವ ಪುಸ್ತಕ ಪರಿಚಯದ ರೀತಿ ಪುಸ್ತಕ ಓದಲು, ಕೊಳ್ಳಲು ಒಂದಿಷ್ಟು ಪ್ರಚಾರ ಒದಗಿಸುವ ಕಾಲುದಾರಿಯಂತೆ. ನಾಟಕ ವಿಮರ್ಶೆಯೂ ತಿಂಗಳ ಕಾಲ ನಡೆಸಿದ ಒಂದು ಪ್ರಾಮಾಣಿಕ ಶ್ರಮಕ್ಕೆ ಸಿಕ್ಕುವ ಒಂದು ಪ್ರಚಾರ, ತಂಡದವರಲ್ಲದ ಇನ್ನೊಬ್ಬರ ನೋಟದ ಪ್ರಯೋಜನ, ಇನ್ನೊಂದು ಪ್ರದರ್ಶನ ನಡೆದಲ್ಲಿ ಅದಕ್ಕೆ ಒಂದಿಷ್ಟು ನೋಡುಗರನ್ನು ಧಕ್ಕಿಸಿಕೊಡುವ ದಾರಿಯಾಗಿ ಉಳಿದು ಬಿಟ್ಟಿದೆ. ಹೀಗೆ ಈ ಎಲ್ಲವನ್ನೂ ಯೋಚಿಸಲು ಅನುವು ಮಾಡಿಕೊಟ್ಟದ್ದು ‘ಮಲೆಗಳಲ್ಲಿ ಮದುಮಗಳು’. ಮಲೆಗಳಲ್ಲಿ ಮದುಮಗಳು ರಂಗ ಪ್ರಯೋಗ ಎಷ್ಟೊಂದನ್ನು ಬದಲು ಮಾಡಿತು. ಕಾದಂಬರಿಯನ್ನೇ ಬದಲು ಮಾಡಿತು, ನಾಟಕ ನೋಡುವ ರೀತಿಯನ್ನು ಬದಲು ಮಾಡಿತು, ನಾಟಕ ಆಡುವವರನ್ನೂ ಬದಲು ಮಾಡಿತು, ರಂಗ ಸಜ್ಜಿಕೆ ಎನ್ನುವುದಕ್ಕೆ ಹೊಸ ಆಯಾಮ ನೀಡಿತು. ಒಟ್ಟಾರೆ ನಾಟಕ ಎನ್ನುವುದಕ್ಕೆ ಇದುವರೆಗೆ ಇದ್ದ ಅರ್ಥವನ್ನೇ ಬದಲಿಸಿ ಹಾಕಿತು. ಹಾಗಾಗಿ ಇದರೊಂದಿಗೆ ನಾಟಕದ ವಿಮರ್ಶೆಯನ್ನೂ ಬದಲಿಸಿ ಹಾಕುತ್ತದೆಯೇ ಎನ್ನುವ ಕುತೂಹಲ ನನಗಿತ್ತು. ರಂಗಭೂಮಿಯನ್ನು ಬದಲಿಸಲು ಹರಿವ ನದಿಗೆ ಮೈಯೆಲ್ಲಾ ಕಾಲು ಎನ್ನುವಂತೆ ಅದು ಇಲ್ಲಿಯವರೆಗೆ ನಡೆದಾಡಿದ ಮೈಲಿಗಲ್ಲುಗಳು ಸಹಕಾರಿಯಾಗಿವೆ. ಆದರೆ ವಿಮರ್ಶೆಯನ್ನು ಗಂಭೀರವಾಗಿ ನೋಡಿದ, ಅದನ್ನು ಪ್ರಯೋಗಕ್ಕೆ ಒಡ್ಡಿದ, ಕಾಲ ಕಾಲಕ್ಕೆ ಮಥನಕ್ಕೆ ಈಡು ಮಾಡಿದ ಉದಾಹರಣೆ ತುಂಬಾ ಕಡಿಮೆ. ಹಾಗಾಗಿಯೇ ಈ ಎಲ್ಲಾ ಪರಿಣಾಮಗಳು ಮದುಮಗಳ ಬಗ್ಗೆ ಏರ್ಪಡಿಸಿದ ನಾಟಕ ವಿಮರ್ಶೆಯಲ್ಲೂ ಎದ್ದು ಕಂಡಿದೆ. ನನ್ನ ಕೈಗೆ ಬಂದ ವಿಮರ್ಶೆಗಳ ಪೈಕಿ ಚೆನ್ನಾಗಿದೆ, ಭಿನ್ನವಾಗಿದೆ ಎಂದು ಒಂದು ಓದಿಗೆ ಅನಿಸಿಬಿಡುವ ವಿಮರ್ಶೆಗಳು ಆಳದಲ್ಲಿ ರಂಗ ವಿಮರ್ಶೆಗಿಂತ ಹೆಚ್ಚಾಗಿ ಸಾಹಿತ್ಯ ವಿಮರ್ಶೆಯಾಗಿದೆ. ಹಲವು ಕಡೆ ಇದು ಕೃತಿ ಮತ್ತು ಪ್ರಯೋಗವನ್ನು ಎಡ ಬಲದಲ್ಲಿಟ್ಟು ತೂಗಿ ನೋಡುವ ವಿಮರ್ಶೆಯಾಗಿದೆ. ಇನ್ನು ಕೆಲವು ಕಾದಂಬರಿ ಓದಿ ತಾವು ಮನೋರಂಗದಲ್ಲಿ ರೂಪಿಸಿಕೊಂಡದ್ದನ್ನು ರಂಗಾಯಣದ ರಂಗದಲ್ಲಿ ಹುಡುಕುವ ಪ್ರಯತ್ನವಾಗಿದೆ. ಒಂದೆರಡು ಸೋಮಾರಿ ವಿಮರ್ಶೆಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲರೂ ಸಾಕಷ್ಟು ಕಾಳಜಿಯಿಂದ ವಿಮರ್ಶೆಗೆ ತೊಡಗಿಸಿಕೊಂಡಿದ್ದಾರೆ ಎಂಬುದಂತೂ ಸ್ಪಷ್ಟ. ನಾಟಕದ ಬಗ್ಗೆ ಇರುವ ರಂಗಪತ್ರವನ್ನು ಓದಿ, ಕಾದಂಬರಿಯನ್ನು ಇನ್ನೊಮ್ಮೆ ಓದಿ, ಈ ನಾಟಕದ ಬಗ್ಗೆ ಬಂದಿರುವ ವಿಮರ್ಶೆಯನ್ನೂ ಕಣ್ಣಾಡಿಸಿ ಹೀಗೆ..ಸಾಕಷ್ಟು ಹೋಂ ವರ್ಕ್ ಅವರ ವಿಮರ್ಶೆಗಳಲ್ಲಿ ಎದ್ದು ಕಾಣುತ್ತದೆ. ಪುಷ್ಪಲತಾ ಹೆಚ್ ಎನ್, ಭೈರಪ್ಪ ಎಂ, ಸಂದೇಶ್ ಎಚ್ ರತ್ನಪುರಿ, ಅಮರನಾಥ್ ಎಂ ಬರಹಗಳು ಇದಕ್ಕೆ ಸಾಕ್ಷಿ. ಇದರೊಂದಿಗೆ ಹುಮ್ಮಸ್ಸಿನಿಂದ ವಿಮರ್ಶೆ ಬರೆದವರು ರಾಶಿ ಎಂ ಆರ್, ನವೀನ್ ಕುಮಾರ್ ಎನ್, ಹೇಮಲತಾ ಪಿ ಎನ್. ಇದರಿಂದ ಒಂದಂತೂ ಸ್ಪಷ್ಟ. ನಾಟಕವನ್ನು ವಿಮರ್ಶಿಸಲು ಬೇಕಾದ ಮನಸ್ಸುಗಳಿವೆ. ಅದಕ್ಕೆ ದಾರಿ ಹುಡುಕಿ ಕೊಡುವ ರಂಗವಿಮರ್ಶಕರನ್ನು ರೂಪಿಸುವ ಆ ಮೂಲಕ ರಂಗಭೂಮಿಯನ್ನು ಇನ್ನಷ್ಟು ಎತ್ತ್ತರಕ್ಕೆ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ. ಹೀಗೆ ಹೇಳುವಾಗ ನನಗೆ ಬಸವಲಿಂಗಯ್ಯ ವಾರ್ತಾ ಇಲಾಖೆಗಾಗಿ ರೂಪಿಸಿದ ‘ಮನುಷ್ಯ ಜಾತಿ ತಾನೊಂದೆ ವಲಂ’ ಭಿನ್ನ ಪ್ರಯೋಗವೂ ಕಣ್ಣ ಮುಂದಿದೆ. ಕೆ ವಿ ನಾರಾಯಣ್ ಹೇಳುವಂತೆ ‘೩೦ ಡಿಗ್ರೀ ಕಣ್ಣಳತೆಯಲ್ಲಿ ನಡೆಯುವ ನಾಟಕಕ್ಕೂ ೧೮೦ ಡಿಗ್ರಿ ಅಳತೆಯಲ್ಲಿ ನಡೆಯುವ ನಾಟಕಕ್ಕೂ’ ಒಂದೇ ವಿಮರ್ಶೆ ಒಗ್ಗುವುದಾದರೂ ಹೇಗೆ? ಸುಖಾಸುಮ್ಮನೆ ‘ಅವಳ ಅಂಗಿ ಇವಳಿಗಿಟ್ಟು ನೋಡಬಯಸಿದೆ’ ಎನ್ನುವಂತೆ ನೋಡಬಯಸುತ್ತಾ ಕೂತರೆ ಮಾಧ್ಯಮಗಳು ರಂಗಭೂಮಿ ಗೆ ತಿರುವು ನೀಡಲು ಸಾಧ್ಯವೇ ಇಲ್ಲ. ಬಸವಲಿಂಗಯ್ಯನವರ ನಾಟಕಗಳು ಹೊಸದೇ ರಂಗ ಪರಿಭಾಷೆಗೆ ಒತ್ತಾಯ ಮಾಡುತ್ತಿದೆ. ಬಸವಲಿಂಗಯ್ಯನವರ ಪ್ರಯೋಗಗಳು ಈವರೆಗಿನ ರಂಗ ಕಲ್ಪನೆಯನ್ನು ಮೀರುವ ಕಾರಣದಿಂದಾಗಿಯೇ ಅವರ ನಾಟಕಗಳನ್ನು ವಿಮರ್ಶಿಸಲೂ ಹೊಸ ತಯಾರಿಯೇ ಬೇಕು. ಹೀಗನ್ನುವಾಗ ತೇಜಸ್ವಿ ಅವರ ಕೃತಿಗಳ ಬಗ್ಗೆ ಬರೆಯುತ್ತಾ ಚಂದ್ರಶೇಖರ ನಂಗಲಿ ಅವರು ಆಡಿದ ಮಾತು ನೆನಪಿಗೆ ಬರುತ್ತಿದೆ. ತೇಜಸ್ವಿ ಸಾಹಿತ್ಯವನ್ನು ವಿಮರ್ಶಿಸಲು ಬೇಕಾದ ಪರಿಕರಗಳು ಆಗಿನ ವಿಮರ್ಶಕರ ಬಳಿ ಇರಲಿಲ್ಲ ಎನ್ನುತ್ತಾರೆ. ಹಾಗೆಯೇ ಬಸವಲಿಂಗಯ್ಯನವರ ನಾಟಕವನ್ನು ಒರೆಗೆ ಹಚ್ಚಿ ನೋಡುವ ಪರಿಕರಗಳೂ ಸಹಾ ನಮ್ಮ ಬಳಿ ಇಲ್ಲ. ಬಸವಲಿಂಗಯ್ಯ ನಿರ್ದೇಶಿಸಿದ ‘ಸಿಂಗಿರಾಜ ಸಂಪಾದನೆ’ ನಾಟಕ ನೆನಪಿಗೆ ಬರುತ್ತಿದೆ. ಎಚ್ ಎಸ್ ಶಿವಪ್ರಕಾಶ್ ಅವರ ಕವಿತೆಯನ್ನು ರಂಗಕ್ಕೇರಿಸಲು ಬಸವಲಿಂಗಯ್ಯ ಆ ಕಾಲದಲ್ಲೇ ಮುಂದಾಗಿದ್ದರು. ಈ ನಾಟಕ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಗಿತ್ತು. ಆಗ ನಾನೂ ಸಹಾ ವಿಮರ್ಶೆಯ ಹೊಸ ಭಾಷೆಗಾಗಿ ತಡಕಾಡುತ್ತಿದ್ದವನು. ಹಾಗಾಗಿಯೇ ನಾಟಕವಾದ ಈ ಕವಿತೆಯನ್ನು ವಿಮರ್ಶಿಸಲು ಹೊಸ ಭಾಷೆ ಹುಡುಕಿಕೊಂಡೆ. ಅದು ‘ಅನ್ವೇಷಣೆ’ಯಲ್ಲಿ ಪ್ರಕಟವಾಯಿತು. ನನ್ನ ಪ್ರಕಾರ ಬಸವಲಿಂಗಯ್ಯನವರು ಯಾವುದನ್ನು ರಂಗದಲ್ಲಿ ಹುಡುಕುತ್ತಿದ್ದರೋ ಅದನ್ನು ನಾನು ರಂಗ ವಿಮರ್ಶೆಯಲ್ಲಿ ಹುಡುಕುತ್ತಿದ್ದೆ. ಇಬ್ಬರೂ ಅಂದಿನವರೆಗಿದ್ದ ಸಿದ್ಧ ಮಾದರಿಗಳನ್ನು ಮುರಿದು ಕಟ್ಟುವ ಉತ್ಸಾಹದಲ್ಲಿದ್ದೆವು. ಆದರೆ ಕಲಾಕ್ಷೇತ್ರದಲ್ಲಿ ಸಿಕ್ಕ ಶೂದ್ರ ಶ್ರೀನಿವಾಸ್ ನಿನ್ನ ವಿಮರ್ಶೆ ಕವಿತೆಯ ಬಗ್ಗೆ ಯಾಕೆ ಮಾತನಾಡಬೇಕು, ಪ್ರಯೋಗದ ಬಗ್ಗೆ ಹೇಳಿದ್ದರೆ ಸಾಕಾಗಿತ್ತು ಎಂದರು. ಒಂದು ಕ್ಷಣ ಇದು ಹೊಸದು ಹುಡುಕುವುದಕ್ಕೆ ಒದಗಿದ ಹಿನ್ನೆಡೆ. ಅಥವಾ ನಾವು ಹೊಸ ವಿಮರ್ಶೆ ಬರೆದಿದ್ದರೆ ಮಾತ್ರ ಸಾಕಿರಲಿಲ್ಲ ಅದಕ್ಕೆ ಹೊಸ ಮನಸ್ಸನ್ನೂ ರೂಪಿಸಬೇಕಾದ ಅಗತ್ಯವಿತ್ತು. ನಾನು ಇಲ್ಲಿನ ವಿಮರ್ಶೆಯ ಬಗ್ಗೆ ವಿಮರ್ಶೆ ಮಾಡಬೇಕಿತ್ತೇನೋ, ಗೊತ್ತಿಲ್ಲ. ಆದರೆ ಈ ವಿಮರ್ಶೆಗಳು ನನ್ನೊಳಗೆ ಹುಟ್ಟಿಸಿದ ಪ್ರಶ್ನೆಗಳನ್ನಂತೂ ಮುಂದಿಟ್ಟಿದ್ದೇನೆ. ಮಲೆಗಳಲ್ಲಿ ಮದುಮಗಳ ಬಗ್ಗೆ ಉತ್ಸಾಹಿ ತರುಣರು ಬರೆದ ವಿಮರ್ಶೆ ಓದುವಾಗ ಇಲ್ಲಿ ಆ ರೀತಿಯ ಹೊಸತೇನೋ ಇರುತ್ತದೆ ಎಂಬ ಭರವಸೆಯಿತ್ತು. ಎಲ್ಲಾ ಹೊಸತುಗಳ ನಾಟಕ ಹೊಸದೇ ವಿಮರ್ಶೆ ಮೂಡಿಸುತ್ತದೆ ಎಂಬ ಆಶಯ. ಆದರೆ ಆ ಭರವಸೆ ನಿಜವಾಗಿಲ್ಲ. ಆದರೆ ಒಂದಷ್ಟು ಬೆಳಕಿನ ಬೀಜಗಳಂತೂ ಈ ವಿಮರ್ಶೆಯಲ್ಲಿ ಕಂಡಿದೆ. ಇಲ್ಲಿ ವಿಮರ್ಶೆ ಗೆ ತೊಡಗಿಕೊಂಡವರಿಗೆ ಹುಮ್ಮಸ್ಸಿದೆ. ಅವರಿಗೆ ಹೊಸ ದಾರಿಗಳನ್ನು ತೋರುವವರಿದ್ದರೆ ಹೊಸ ವ್ಯಾಕರಣವನ್ನೂ ಕಟ್ಟಿಯಾರು.]]>

‍ಲೇಖಕರು G

December 29, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: