ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮ್ಯಾರಥಾನ್!

-ಮತ್ತೂರು ಸುಬ್ಬಣ್ಣ

ಅಮ್ಮ ಕೆಲಸಕ್ಕೆ ಹೊರಟಳು. ಕಾಂತಿ ವiತ್ತು ದೀಪ ಆ ಪುಟ್ಟ ಮನೆಯಲ್ಲೇ ಓದಿಕೊಳ್ಳುತ್ತಿದ್ದರು. ಕಾಂತಿ ಪಿಯುಸಿ ಮುಗಿಸಿ ಮುಂದಿನ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಳು. ದೀಪ, ಹತ್ತನೇ ತರಗತಿಗೆ ಸಿದ್ಧ ಪಡಿಸಿಕೊಳ್ಳುತ್ತಿದ್ದಳು. ಹೇಗಾದರೂ ಸರಿ ಮುಂದಕ್ಕೆ ಓದಲೇಬೇಕೆಂದು ಹೆಣ್ಣು ಮಕ್ಕಳಿಬ್ಬರೂ ನಿರ್ಧರಿಸಿದ್ದರು. ಒಂಟಿ ತಾಯಿಯಾದ ಸರೋಜಮ್ಮ ತನ್ನ ಹೆಣ್ಣುಮಕ್ಕಳಿಬ್ಬರತ್ತ ಒಮ್ಮೆ ನೋಡಿದಳು. ಮಕ್ಕಳ ವಿದ್ಯಾಭ್ಯಾಸವೇ ನನ್ನ ಜೀವನದ ಪರಮ ಧ್ಯೇಯವೆಂದು ದೃಢ ನಿಶ್ಚಯ ಮಾಡಿದ್ದಳು. ʻಅಮ್ಮ, ಟೆಸ್ಟ್ಗೆ ತಯಾರಾಗಲು ಪುಸ್ತಕಬೇಕಿತ್ತುʼ ಎಂದು ಕಾಂತಿ ಹೇಳಿದಳು. ಅಮ್ಮ ಕಾಂತಿಯತ್ತ ನೋಡಿದಳು. ʻಎಷ್ಟು ಆಗುತ್ತೆ?ʼ. ʻಮೂರು ಸಾವಿರʼ. ಮೂರು ಸಾವಿರ ರೂಪಾಯಿ ಅನ್ನುವುದು ಆ ಗಳಿಗೆಗೆ ನುಂಗಲಾರದ ತುತ್ತೆನಿಸಿತು ಸರೋಜಮ್ಮಳಿಗೆ. ʻನಾನೂ ಒಳ್ಳೆಯ ಕಾಲೇಜಿನಲ್ಲಿ ಟೆಸ್ಟ್ ಬರೆಯಬೇಕೆಂದಿದ್ದೇನೆʼ ಎಂದಳು ದೀಪ. ಅಮ್ಮ ಅವಳತ್ತ ನೋಡಿದಳು. ದೀಪ ಸುಮ್ಮನಾದಳು.

ಮೂರು ಸಾವಿರ ರೂಪಾಯಿ ಎಂದು ನಿಟ್ಟುಸಿರು ಬಿಡುತ್ತ ಸರೋಜಮ್ಮ ಮನೆಯಿಂದ ಹೊರ ಬಿದ್ದಳು. ʻಎಲ್ಲಿ ಕೇಳಲಿ? ಮೂರು ಸಾವಿರ ರೂಪಾಯಿ?ʼ ಕಸ-ಮುಸುರೆ ತೊಳೆಯುವ ಮೂರು ಮನೆಗಳಲ್ಲೂ ಮುಂಗಡವಾಗಿ ಹಣ ಪಡೆದಾಗಿತ್ತು. ಇನ್ನೊಮ್ಮೆ ಮುಂಗಡ ಹಣ ಕೇಳುವ ಧೈರ್ಯ ಬರಲಿಲ್ಲ.
ಸರೋಜಮ್ಮ ಪಾತ್ರೆ ತೊಳೆಯುತ್ತಿದ್ದಾಗ ರಾಧಮ್ಮ ಕೇಳಿದರು, ʻಯಾಕೆ ಸರೋಜಮ್ಮ, ಚನ್ನಾಗಿದ್ದೀಯ? ಏನೋ ಯೋಚಿಸುತ್ತಿರುವಂತಿದೆ. ಮಕ್ಕಳು ಚನ್ನಾಗಿದ್ದಾರಾ?ʼ ʻಹೂಂʼಅ೦ದಳು ಸರೋಜಮ್ಮ. ಮೂರು ಸಾವಿರ ಬೇಕಿತ್ತು ಎಂದು ಕೇಳುವ ಧೈರ್ಯಬರಲಿಲ್ಲ. ಮುಂಗಡವಾಗಿ ರಾಧಮ್ಮನವರಿಂದ ಐದು ಸಾವಿರ ಪಡೆದಾಗಿತ್ತು. ತಿಂಗಳು ತಿಂಗಳು ಎರಡು ಸಾವಿರ ಸಂಬಳದಲ್ಲಿ ಮುರಿದುಕೊಳ್ಳಿ ಎಂದೂ ಹೇಳಿಯಾಗಿತ್ತು. ಸರೋಜಮ್ಮ ಸುಮ್ಮನಾದಳು. ತನ್ನ ಕೆಲಸವನ್ನು ಮುಂದುವರೆಸಿದಳು. ಕಾಂತಿಗೆ ಹಣವನ್ನು ಹೇಗೆ ಹೊಂದಿಸುವುದೆ೦ದೇ ಯೋಚಿಸುತ್ತಿದ್ದಳು. ಅದೇ ವೇಳೇಗೆ ರಾಧಮ್ಮಳ ಮಗ ರಘು ಬಂದ. ಆಟವಾಡುವ ಷೂ ಧರಿಸಿದ್ದ. ʻಅಮ್ಮʼ ಅಂದ ಜೋರಾಗಿ. ರಾಧಮ್ಮ ಕಾಣಿಸಿಕೊಂಡರು. ಸರೋಜಮ್ಮ ಪಾತ್ರೆ ತೊಳೆಯುತ್ತಿದ್ದಳು.
ʻಅಮ್ಮ ಇವತ್ತಿನಿಂದ ನಾನು ಓಡಲು ಅಭ್ಯಾಸ ಮಾಡುವ ತರಗತಿಗೆ ಹೋಗಬೇಕು.ʼ
ʻಏನು ಸಮಾಚಾರ?ʼ
ʻಮುಂದಿನ ಭಾನವಾರ ನಮ್ಮ ಕ್ಲಬ್ಬಿನಲ್ಲಿ ‘ಮ್ಯಾರಥಾನ್’ ಸ್ಪರ್ಧೆ ಆಯೋಜಿಸಿದ್ದಾರೆ.ʼ
ʻಹಾಗೆಂದರೇನೋ ರಘು?ʼ
ʻಮ್ಯಾರಥಾನ್ ಎಂದರೆ ಒಂದೇ ಬಾರಿಗೆ ಐದು-ಹತ್ತು ಕಿಲೋಮೀಟರ್ ಓಡುವುದು. ಯಾರು ಬೇಕಾದರೂ ಭಗವಹಿಸಬಹುದಮ್ಮ. ನಾನು ಭಾಗವಹಿಸುತ್ತಿದ್ದೇನೆ. ಮೊದಲನೇ ಬಹುಮಾನ ಮೂರು ಸಾವಿರ ರೂಪಾಯಿ!ʼ ಎಂದು ಹುಬ್ಬೇರಿಸಿದ ರಘು
ಸರೋಜಮ್ಮಳ ಕಿವಿ ಚರುಕಾಯಿತು.

ನೀನೂ ಭಾಗವಹಿಸಬಹುದಮ್ಮ, ಬಿಡದೆ ಓಡಬೇಕಷ್ಟೆ. ನೀನೂ ಓಡಬಹುದು. ನಮ್ಮ ಸರೋಜಮ್ಮನೂ ಓಡಬಹುದು.ʼ ‘ಸರೋಜಮ್ಮ’ ತನ್ನ ಹೆಸರು ಕೇಳಿ ಅಮ್ಮ-ಮಗನತ್ತ ನೋಡಿದಳು. ʻಹೌದು ಸರೋಜಮ್ಮ ನೀವೂ ಓಡಬಹುದು. ಮೂರು ಸಾವಿರ ರೂಪಾಯಿ ಗೆಲ್ಲಬಹುದು.ʼ
ಮನೆಗೆ ಬಂದವಳೇ ಸರೋಜಮ್ಮ, ರಘು ಹೇಳಿದ ಮಾತನ್ನು ಕಾಂತಿ-ದೀಪು ಅವರೊಂದಿಗೆ ಹಂಚಿಕೊ೦ಡಳು. ʻಯಾರು ಬೇಕಾದರೂ ಭಾಗವಹಿಸಬಹುದಂತೆ. ಬರುವ ಭಾನುವಾರ ಸ್ಪರ್ಧೆಯಂತೆ! ನೀವಿಬ್ಬರೂ ಭಾಗವಹಿಸಿ ಗೆದ್ದರೆ ಮೂರು ಸಾವಿರ ರೂಪಾಯಿ ಬರತ್ತೆ.ʼ
ಅಮ್ಮನ ಮಾತಿಗೆ ಮಕ್ಕಳಿಬ್ಬರೂ ನಕ್ಕರು. ಆದರೆ ಸರೋಜಮ್ಮ ನಗಲಿಲ್ಲ. ಓಡುವ ಪಂದ್ಯದಲ್ಲಿ ಭಾಗವಹಿಸಬಾರದೇಕೆ ಎಂದು ಮನಸ್ಸು ಮತ್ತೆ ಮತ್ತೆ ಹೇಳುತ್ತಿತ್ತು. ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವಂತೆ ಸರೋಜಮ್ಮ ಕನಸು ಕಂಡಳು.

ಸ್ಪರ್ಧೆಯ ದಿನದ ಭಾನುವಾರ ಬಂದೇ ಬಿಟ್ಟಿತು. ರಾಧಮ್ಮನವರ ಮನೆ ಕೆಲಸ ಬೇಗ ಮುಗಿಸಿಕೊಂಡು ಕ್ಲಬ್ಬಿನ ಕಡೆ ಸರೋಜಮ್ಮ ನಡೆದಳು. ಮನದಲ್ಲಿ ಅಂಜಿಕೆ ಇತ್ತು. ಯಾರಾದರೂ ಬೇಡ ಅಂದರೆ? ಎ೦ದು ಮನಸ್ಸು ತಿವಿಯುತ್ತಿತ್ತು ನಿರೀಕ್ಷಿಸಿದಂತೆ ರಾಧಮ್ಮನವರ ಮಗ ರಘು ಅಲ್ಲಿ ಕಾಣಿಸುಕೊಂಡಿದ್ದ. ಓಡಲೆಂದೇ ಹಾಕಿಕೊಂಡಿದ್ದ ಷೂ, ಟೀ ಷರ್ಟು, ನಿಕ್ಕರು. ʻಏನು ಸರೋಜಮ್ಮ ಇಲ್ಲಿ? ಓಡುವ ಸ್ಪರ್ಧೆಗೆ ಬಂದಿದ್ದೀರ?ʼ ಅಳುಕುತ್ತಲೇ ʻಹೂಂ ರಘು, ಯಾರಿಗೆ ಹೆಸರು ಕೊಡಬೇಕುʼಎಂದು ಕೇಳಿದಳು. ʻನಾಲ್ಕು ಕಿಲೋ ಮೀಟರ್ ಓಡಬೇಕುʼಎಂದು ಸೇರಿಸಿದ ರಘು.

ʻಇಲ್ಲೇ ಇರಿ, ಕೇಳಿಕೊಂಡು ಬರುತ್ತೇನೆʼಎಂದು ಹೇಳಿ ರಘು ಮರೆಯಾದ. ಹತ್ತು ನಿಮಿಷದ ನಂತರ ಕಾಣಿಸಿಕೊಂಡ ʻನಿಮ್ಮ ಹೆಸರನ್ನು ಬರೆಸಿದ್ದೇನೆ. ಈ ನಂಬರನ್ನು ಅಂಟಿಸಿಕೊಳ್ಳಿʼ ಎನ್ನುತ್ತ ಒಂದು ಸಂಖ್ಯೆಯ ಬಟ್ಟೆಯನ್ನು ಕೊಟ್ಟ. ಸರೋಜಮ್ಮ ಸ್ವಲ್ಪ ದೂರ ಹೋಗಿ ಸಂಖ್ಯೆಯನ್ನು ಅಂಟಿಕೊAಡು ಬಂದಳು. ಎಲ್ಲಿಂದ ಎಲ್ಲಿಯವರೆಗೆ ಓಡಬೇಕೆಂದು ರಘುವನ್ನೇ ಕೇಳಿದ. ಬಹುಮಾನದ ಮೂರು ಸಾವಿರ ಕಣ್ಣಿಗೆ ಕಾಣಿಸುತ್ತಿತ್ತು. ಕಾಂತಿ-ದೀಪ ಕಣ್ಣ ಮುಂದೆ ಸುಳಿಯುತ್ತಿದ್ದರು.

ಓಡುವವರೆಲ್ಲರನ್ನೂ ಒಂದು ಸಾಲಿನಲ್ಲಿ ನಿಲ್ಲಲು ಕೇಳಲಾಯಿತು. ‘ಸಿಟಿ’ ಬಾರಿಸುತ್ತಲೇ ಎಲ್ಲ ಓಡಿದರು. ಸರೋಜಮ್ಮ ಕೂಡ ಓಡಿದಳು. ಓಡಿದಳು. ಬಹುಮಾನದ ಮೂರು ಸಾವಿರ ಕಣ್ಣ ಮುಂದೆ ಕಾಣಿಸಿಕೊಂಡು, ಓಡು ಓಡು ಎನ್ನುತ್ತಿರುವಂತೆ ಭಾಸವಾಯಿತು. ಹಾಕಿದ ಚಪ್ಪಲಿಯಲ್ಲೇ ಓಡಿದಳು. ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದಳು. ಚಪ್ಪಲಿಯಲ್ಲಿ ಓಡುವುದು ಕಷ್ಟವಾಯಿತು. ಚಪ್ಪಲಿಗಳೆರಡನ್ನೂ ಕೈಯಲ್ಲಿ ಹಿಡಿದು ಓಡಿದಳು. ಓಡಿದಳು .
ವಿಜಯದ ವೇದಿಕೆಗೆ ಬರಲು ಸರೋಜಮ್ಮಳ ಹೆಸರನ್ನು ಉದ್ಘೋಷಿಸಲಾಯಿತು! ಸರೋಜಮ್ಮಳಿಗೆ ತನ್ನನ್ನು ತಾನು ನಂಬಲಾಗಲಿಲ್ಲ! ಕೈಯಲ್ಲಿ ಪ್ರಥಮ ಬಹುಮಾನವಾಗಿ ಮೂರು ಸಾವಿರ ರೂಪಾಯಿಗಳನ್ನು ಕಂಡಾಗ ಸರೋಜಮ್ಮಳ ಕಣ್ಣುಗಳಲ್ಲಿ ನೀರು ಹೆಪ್ಪು ಗಟ್ಟಿತ್ತು! ಕಾಂತಿ-ದೀಪರ ಮುಖ ಕಾಣಿಸಿತ್ತು!

‍ಲೇಖಕರು Admin

31 October, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading