ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೌಲ್ಯಗಳಿಗೆ ಮುಖಮಾಡಿದ ಕೃತಿ ‘ಹಾವಳಿ’

ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರ ಕಾದಂಬರಿ ‘ಹಾವಳಿ’

‘ಮನೋಹರ ಗ್ರಂಥ ಮಾಲಾ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಜಿ.ಪಿ.ಬಸವರಾಜು ಅವರ ಬರಹ ಇಲ್ಲಿದೆ.

 -ಜಿ.ಪಿ.ಬಸವರಾಜು

ಸೃಜನಶೀಲ ಕೃತಿಯೊಂದು ಇತಿಹಾಸದ ಸಂಗತಿಗಳನ್ನು ತನ್ನೊಡಲಲ್ಲಿಟ್ಟುಕೊಂಡರೂ, ಅದು ಕೇವಲ ಇತಿಹಾಸ ದಾಖಲೆಗಳ ಅಸ್ತಿಪಂಜರವಾಗಿರುವುದಿಲ್ಲ. ಇತಿಹಾಸ ಅಗತ್ಯ ಸಾಮಗ್ರಿಯನ್ನು ಒದಗಿಸಿದರೂ, ಕೃತಿಕಾರ ತನ್ನ ಸೃಜನಶೀಲ ಸ್ವಾತಂತ್ರ್ಯವನ್ನು, ಪ್ರತಿಭೆಯನ್ನು, ಕಲ್ಪನಾ ವಿಲಾಸವನ್ನು ಬಳಸಿಕೊಂಡು ಕೃತಿಗೆ ಭಿನ್ನ ಆಯಾಮವನ್ನು ಕೊಡುತ್ತಾನೆ ; ಹೊಸ ಬೆಳಕಿನಲ್ಲಿ ಇತಿಹಾಸ ಬೇರೊಂದು ತೆರನಾಗಿಯೇ ಕಾಣುವಂತೆ ಮಾಡುತ್ತಾನೆ. ಇಂಥ ಕೃತಿಯಲ್ಲಿ ಇತಿಹಾಸ ವರ್ತಮಾನವಾಗಿ, ವರ್ತಮಾನ ಇತಿಹಾಸವಾಗಿ ಬದಲಾಗುತ್ತದೆ. ವರ್ತಮಾನದ ಜ್ವಲಂತ ಸಮಸ್ಯೆಗಳಿಗೆ ಇತಿಹಾಸ ಪರಿಹಾರವನ್ನೂ ಸೂಚಿಸಬಹುದು.

ಮಲ್ಲಿಕಾರ್ಜುನ ಹಿರೇಮಠ ಅವರ ಕಾದಂಬರಿ  ʼಹಾವಳಿʼ ಈ ದಿಕ್ಕಿನಲ್ಲಿ ಹೆಜ್ಜೆ ಹಾಕಿರುವ ಕೃತಿ.

ಭಾರತ ಸ್ವಾತಂತ್ರ್ಯವನ್ನು ಪಡೆದರೂ, ಕೊನೆಯ ನಿಜಾಮ ಮೀರ್‌ ಉಸ್ಮಾನ್‌ ಅಲಿ ಖಾನ್‌  ಆಳ್ವಿಕೆಯ ಹೈದರಾಬಾದ್‌ ಭಾರತದಲ್ಲಿ ವಿಲೀನಗೊಳ್ಳಲು ಒಪ್ಪದೆ, ಪ್ರತ್ಯೇಕವಾಗಿಯೇ ಉಳಿಯುವ ನಿರ್ಧಾರ ತಳೆದಿತ್ತು. ಜಿನ್ನಾ ಅವರ ಮುಸ್ಲಿಮರ ಪ್ರತ್ಯೇಕ ರಾಷ್ಟ್ರ ವಿಚಾರ ಮತ್ತು ಇಂಥ ವಿಚಾರಗಳಿಗೆ ಬ್ರಿಟಿಷರು ಕೊಡುತ್ತಿದ್ದ ಕುಮ್ಮಕ್ಕು ಕಾರಣವಾಗಿ ಹೈದರಾಬಾದ್‌ ನಿಜಾಮ ಸ್ವತಂತ್ರ ಭಾರದೊಳಕ್ಕೆ ಬರಲು ನಿರಾಕರಿಸುತ್ತಿದ್ದ. ಜಗತ್ತಿನ ಶ್ರೀಮಂತರಲ್ಲಿ ಏಳನೆಯವನೆಂದು ಗುರುತಿಸಲ್ಪಟ್ಟಿದ್ದಈ ನಿಜಾಮ, ತನ್ನ ಸಂಪತ್ತನ್ನು ಮತ್ತು ಸಿಂಹಾಸನವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಸ್ವತಂತ್ರ ಭಾರತದಲ್ಲಿ ಸೇರುವುದೆಂದರೆ ಇದೆಲ್ಲವನ್ನೂ ಕಳೆದುಕೊಳ್ಳುವುದೇ ಆಗಿತ್ತು.

ಇಂಥ ಹೊತ್ತಿನಲ್ಲಿ ಸೈಯ್ಯದ್‌ ಮುಹಮ್ಮದ್‌  ರಜವಿ ಎಂಬ ವಕೀಲ ಮತ್ತು ರಾಜಕಾರಣಿಯ  ಆಪ್ತ ಸಖ್ಯ ನಿಜಾಮನಿಗೆ ದೊರೆತದ್ದು ದೊಡ್ಡ ಅವಕಾಶದ ಬಾಗಿಲನ್ನೇ ತೆರೆಯಿತು. ರಜವಿಯ ಸಲಹೆ ಮತ್ತು ಬೆಂಬಲಗಳಿಗೆ ತಲೆದೂಗುತ್ತ, ಅವನ ಕೈಗೊಂಬೆಯಂತೆಯೇ ವರ್ತಿಸುತ್ತಿದ್ದ ನಿಜಾಮ ಪ್ರಜಾಹಿತ ಎಂಬುದನ್ನು ಪರಿಗಣನೆಗೇ ತೆಗೆದುಕೊಂಡಿರಲಿಲ್ಲ. ರಜವಿಯ ಚಿಂತನೆ ಕೋಮುವಾದ ಮತ್ತು ಫ್ಯಾಸಿಸ್ಟ್‌ ಶಕ್ತಿಗಳಿಗೆ ಇಂಬುಕೊಟ್ಟಿತ್ತು. ರಜವಿ ಸಾಮಾನ್ಯನಲ್ಲ ಇತ್ತೆಹಾದ್‌ನ ಅಧ್ಯಕ್ಷನಾಗಿದ್ದ. ಧರ್ಮಯುದ್ಧದ ಹೆಸರಿನಲ್ಲಿ ರಜಾಕರ್‌ರ ಸಂಘಟನೆಯೊಂದನ್ನು ಹುಟ್ಟುಹಾಕಿದ್ದ. ಇದೊಂದು ಭಯೋತ್ಪಾದಕ ಸಂಘಟನೆ. ಮುಸ್ಲಿಮರನ್ನು ಸಂಘಟಿಸುತ್ತ, ಅನ್ಯಮತೀಯರನ್ನು ಬಗ್ಗುಬಡಿಯುತ್ತ ಮುಸ್ಲಿಂ ರಾಜ್ಯವನ್ನು ಎಲ್ಲೆಲ್ಲೂ ಹಬ್ಬಿಸುವ ಹುನ್ನಾರ ರಜವಿಯದಾಗಿತ್ತು. ಅದಕ್ಕಾಗಿ ರಜಾಕರರ ಪಡೆಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತ, ಅದಕ್ಕೆ ಮುಕ್ತ ಸ್ವಾತಂತ್ರ್ಯವನ್ನೂ ಕೊಟ್ಟಿದ್ದ.   ರಜಾಕರ ಪಡೆ ಕೊಲೆ, ಸುಲಿಗೆ, ಅತ್ಯಾಚಾರ, ಲೂಟಿ ಮೊದಲಾದ ಅತ್ಯಂತ ಅಮಾನವೀಯ ಕೃತ್ಯಗಳಲ್ಲಿ  ತೊಡಗಿತ್ತು. ಜೊತೆಗೆ ಮತಾಂತರಕ್ಕೂ ಕೈಹಾಕಿತ್ತು.

ವಿಪರ್ಯಾಸ ಎಂದರೆ  ಹೈದರಾಬಾದ್‌ ಕರ್ನಾಟಕದ ಈ ಭಾಗದಲಿ ಧಾರ್ಮಿಕ ಸಹಬಾಳ್ವೆ, ಸಾಮಾಜಿಕ ಮತ್ತು ಆರ್ಥಿಕ ಹೊಂದಾಣಿಕೆ ಶತಶತಮಾನಗಳಿಂದ ಬೆಳೆದುಬಂದಿತ್ತು. ಪರಸ್ತರ ಗೌರವ, ಪ್ರೀತಿ, ಮಾನವೀಯ ಸಂಬಂಧಗಳು, ಬದುಕಿನ ಉನ್ನತ ಮೌಲ್ಯಗಳು ಈ ಭಾಗದ ಜನರಲ್ಲಿ ಸುದೀರ್ಘಕಾಲದ ಸಹಜ ಆಚರಣೆಗಳಾಗಿ ಬದುಕನ್ನು ಸಮೃದ್ಧಗೊಳಿಸಿದ್ದವು. ಶರಣರು, ಸೂಫಿಗಳು, ಸಂತರು, ಅವಧೂತರು ಈ ನೆಲೆಯನ್ನು ಆಧ್ಯಾತ್ಮಿಕ ಮೌಲ್ಯಗಳ ಮೇಲೆ ಗಟ್ಟಿಗೊಳಿಸಿದ್ದರು.  ಇಲ್ಲಿ ಕೋಮುಭಾವನೆಗಳನ್ನು ಕೆರಳಿಸುವುದು ಸುಲಭವಾಗಿರಲಿಲ್ಲ. ಆದರೆ ರಜವಿ ದುಷ್ಟ. ಅವನ ಚಿಂತನೆಯೂ ಕೆಡುಕಿನತ್ತಲೇ ನಡೆಯುವಂಥದ್ದು. ಹೀಗಾಗಿ ಅವನಿಗೆ ರಜಾಕರ ಪಡೆಯನ್ನು ಮುನ್ನಡೆಸುವುದು ಕಷ್ಟವಾಗಲಿಲ್ಲ. ಕೋಮುವಿಷವನ್ನು ರಜಾಕರ ತಲೆಗೇರಿಸಿದ್ದ.

ಹೈದರಾಬಾದ್‌ ಕರ್ನಾಟಕದಲ್ಲಿ ರಜಾಕರ ಈ ದುಷ್ಟಕೃತ್ಯಗಳನ್ನು ಮತ್ತು ಈ ಕೃತ್ಯಗಳಿಂದ ಜನ ಅನುಭವಿಸಿದ ಸಾವು, ನೋವು, ಸಂಕಟ,, ಕೊನೆಯೇ ಇಲ್ಲವೇನೋ ಎನ್ನುವಂಥ ಯಾತನೆಗಳನ್ನು ಕುರಿತು ಅನೇಕ ಕೃತಿಗಳು ಬಂದಿವೆ. ಚಾರಿತ್ರಿಕ ದಾಖಲೆಗಳೂ ಪ್ರಕಟವಾಗಿವೆ. ಹೈದರಾಬಾದ್‌ ಕರ್ನಾಟಕದ ಇತಿಹಾಸ ಭಾಗವಾಗಿಯೂ ಇವು ಉಳಿದುಕೊಂಡಿವೆ. ಇದು ಮರೆಯಲಾಗದ ಇತಿಹಾಸ.

ಮಲ್ಲಿಕಾರ್ಜುನ ಹಿರೇಮಠರ ಈ ಕೃತಿ ಸೃಜನಶೀಲ ಕೃತಿ  ಈ ಇತಿಹಾಸವನ್ನು ನಿರಾಕರಿಸುವುದಿಲ್ಲ. ಅದನ್ನು ವಿರೂಪಗೊಳಿಸುವುದಿಲ್ಲ; ಅತಿ ರಂಜಕವಾಗಿಯೂ ರೂಪಿಸುವುದಿಲ್ಲ. ಈ ಘಟನೆಗಳನ್ನು ಸುಮ್ಮನೆ ಹೇಳಿದ್ದರೂ, ಇಲ್ಲಿ ಹಿಂಸೆ ತಾಂಡವವಾಡುವುದು ಸಾಧ್ಯತೆ ಇತ್ತು. ಹಾಗೆಯೇ ಹಿಂದೂಗಳ ಮೇಲೆ ನಡೆದ ಪೈಶಾಚಿಕ ಕೃತ್ಯಗಳು ಹಿಂದೂ-ಮುಸ್ಲಿಮರ ನಡುವಣ ಸಹಬಾಳ್ವೆಯನ್ನು ಕಲಕಿ ಬದುಕನ್ನು ದುರ್ಭರಗೊಳಿಸುವುದೂ ಸಾಧ್ಯವಿತ್ತು. ಕಾದಂಬರಿಕಾರ ಹಿರೇಮಠರಿಗೆ ಈ ಎಚ್ಚರವಿರುವುದು ಓದುಗರ ಅನುಭವಕ್ಕೆ ಬರುತ್ತದೆ. ಹೀಗಾಗಿಯೇ ಇಲ್ಲಿ ನೆತ್ತರು ನದಿಯಾಗಿ ಹರಿಯುವುದಿಲ್ಲ. ರಜಾಕರ ಹಿಂಸಾಕೃತ್ಯಗಳನ್ನು ಹೇಳಿಯೂ ಅವು ಉದ್ವಿಗ್ನತೆಗೆ ಎಡೆಮಾಡಿಕೊಡದಂತೆ ಸಂಯಮದ ನಿರೂಪಣೆ ಇಲ್ಲಿದೆ. ರೋಚಕ ಸಂಗತಿಗಳ ಸೆಳವಿಗೆ ಸಿಕ್ಕದಂತೆ ಈ ಸೃಜನಶೀಲ ಕೃತಿಯನ್ನು ಮುನ್ನಡೆಸಿರುವುದು, ಇಡೀ ಕೃತಿಯ ನಡೆಯ ಮೇಲೆ ಹಿಡಿತ ಇಟ್ಟುಕೊಂಡಿರುವುದು ಕೃತಿಯ ಘನತೆಯನ್ನು ಹೆಚ್ಚಿಸಿದೆ.

ಇನ್ನೊಂದು ಪ್ರಧಾನ ಅಂಶವೂ ಇಲ್ಲಿದೆ. ಅದು ಗಾಂಧೀಮೌಲ್ಯಗಳಿಗೆ- ಸತ್ಯ, ಅಹಿಂಸೆ, ಸಹಬಾಳ್ವೆ-ಲೇಖಕರಲ್ಲಿರುವ ಅಚಲವಾದ ನಂಬಿಕೆ. ಗಾಂಧೀಮಾರ್ಗ ಬದುಕಿನ ಮಾರ್ಗ ಎಂದು ಒಪ್ಪಿಕೊಂಡೇ ಈ ಕೃತಿ ಸಾಗುವುದರಿಂದ ಇಲ್ಲಿಯ ಫೋಕಸ್‌ ಹಿಂಸಾಕೃತ್ಯಗಳ ಮೇಲಲ್ಲ; ಬದುಕಿನ ಸಹಜ ಪ್ರೀತಿಯನ್ನು, ವ್ಯಕ್ತಿ ಘನತೆ-ಗೌರವವನ್ನು ಬಲಿತೆಗೆದುಕೊಳ್ಳುವ ಕೋಮುದ್ವೇಷದ ಕೃತ್ಯಗಳ ಕಡೆಗಲ್ಲ.

ಹಾಗೆಂದು ಈ ಕೃತಿ ವಾಸ್ತವ ಘಟನೆಗಳ ಮೇಲೆ, ಸತ್ಯದ ಮೇಲೆ ಮುಸುಕೆಳೆಯುವುದಿಲ್ಲ. ರಜಾಕರ ವಿರುದ್ಧದ ಹೋರಾಟವೆಂದರೆ ಅದು ಮುಸ್ಲಿಮರ ವಿರುದ್ಧದ ಬಡಿದಾಟವಲ್ಲ; ಅದು ಫ್ಯಾಸಿಸ್ಟ್‌ ಮತ್ತು ಕೋಮುವಾದೀ ಶಕ್ತಿಗಳ ವಿರುದ್ಧದ ಚಳವಳಿ; ಇಂಥ ಶಕ್ತಿಗಳ ಬೆನ್ನಿಗಿದ್ದ ನಿಜಾಮ ಮತ್ತು ರಜವಿಯ ವಿರುದ್ಧ ನೊಂದಜನ ದೊಡ್ಡ ಪ್ರಮಾಣದಲ್ಲಿ ನಡೆಸಿದ ಚಾರಿತ್ರಿಕ ಬಂಡಾಯ. ಇಲ್ಲಿ ಧರ್ಮ ಧರ್ಮಗಳ ನಡುವಿನ ಸಂಘರ್ಷಕ್ಕೆ ಎಡೆ ಇರಲಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಷಿಯನ್‌ ಹೀಗೆ ವಿಭಿನ್ನ ಧಾರ್ಮಿಕ ನಂಬಿಕೆಗಳ ಜನರೆಲ್ಲರೂ ಒಗ್ಗಟ್ಟಾಗಿ ದುಷ್ಟಶಕ್ತಿಗಳ ವಿರುದ್ಧ ಸಮರ ಸಾರಿದ್ದರು ಎಂಬುದನ್ನು ಈ ಭಾಗದ ಚರಿತ್ರೆಯೂ ಹೇಳುತ್ತದೆ ; ಈ ಕೃತಿಯೂ ಹೇಳುತ್ತದೆ. ಈ ಕಾದಂಬರಿಯ ಕೇಂದ್ರಪ್ರಜ್ಞೆ ಕ್ರಿಯಾಶೀಲವಾಗಿರುವುದು ಈ ನೆಲೆಯಲ್ಲಿಯೇ. ʼಹಿಂದೂ ಇರಲಿ ಮುಸಲ್ಮಾನ ಇರಲಿ ಅವನೊಳಗಿನ ರಜಾಕತರತ್ವವನ್ನು ಖಂಡಿಸೋಣʼ ಎಂಬುದರ ಕಡೆಗೇ ಈ ಕೃತಿಯ ನಡೆ. ಹಾಗೆಯೇ, ʼಎಲ್ಲರೂ ಕೂಡಿಬಾಳುವ ಕಡೆಗೆ.ʼ

ಇದಕ್ಕೆ ಈ ಕಾದಂಬರಿಯಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ:  ಈ ಕೃತಿಯ ಮುಖ್ಯ ಪಾತ್ರಗಳಲ್ಲಿ ಒಂದು ಎಂದು ಪರಿಗಣಿಸಬಹುದಾದ ಶಂಕರನ ಮಾತುಗಳು, ನಡವಳಿಕೆ, ನಂಬಿಕೆ ಮತ್ತು ಬದುಕಿನಲ್ಲಿಟ್ಟ ಅಚಲ ಶ್ರದ್ಧೆ ಎಲ್ಲವೂ ಬಿಂಬಿಸುವುದು ಗಾಂಧೀ ವಿಚಾರಗಳನ್ನೇ. ಇನ್ನೊಂದು ಪಾತ್ರವಾದ ಶೇಖರ ಸೇಡಿಗೆ ಸೇಡು ಎಂಬ ಮನೋಭಾವದವನಾದರೂ, ಶಂಕರ ಹಿಂಸಾ ಕೃತ್ಯಗಳನ್ನು  ಒಪ್ಪುವವನಲ್ಲ. ಅವನ ಎದೆಯಾಳದಲ್ಲಿ ಗಾಂಧೀ ಇರುವುದನ್ನು ಕೃತಿಯ ಉದ್ದಕ್ಕೂ ಕಾಣಬಹುದು. ಕಾದಂಬರಿಯಲ್ಲಿ ಇನ್ನೊಬ್ಬ ಪ್ರಮುಖ ವ್ಯಕ್ತಿಯಾಗಿರುವ ಇಬ್ರಾಹಿಂ ಸಾಹೇಬರನ್ನೇ ನೋಡಿ. ಅವರ ಅನುಭವ, ತಿಳುವಳಿಕೆ, ಧಾರ್ಮಿಕ ನಡವಳಿಕೆ ಎಲ್ಲವೂ ಧರ್ಮಾತೀತವಾದವು; ಜಾತ್ಯತೀತವಾದವು. ಅಲ್ಲಮ, ಶರೀಫ್‌ ಸಾಹೇಬರು, ರಾಮಕೃಷ್ಣ ಬುವಾ, ಬಂದೇ ನವಾಜ್‌ ಹೀಗೆ ಹಲವರನ್ನು, ಅವರ ತತ್ವ ಸಿದ್ಧಾಂತಗಳನ್ನು ಬಲ್ಲವರಾದ ಇಬ್ರಾಹಿಂ ಸಾಹೇಬರು ರಜಾಕರ ಪಡೆ ಸೇರಿದ ನಬಿಗೆ ಹೇಳುವ ಮಾತುಗಳು ಎಲ್ಲ ಧರ್ಮಗಳ ತಿರುಳಿನಂತೆ ಕಾಣುತ್ತವೆ. ತಮ್ಮ ಧರ್ಮ, ನಂಬಿಕೆಗಳನ್ನು ಉಳಿಸಿಕೊಂಡೂ ಮನುಷ್ಯ ಮನುಷ್ಯನನ್ನು ಪ್ರೀತಿಸುವ, ಮನುಷ್ಯರ ನಡುವೆ ಸಂಬಂಧಗಳನ್ನು ಕಟ್ಟಿಕೊಳ್ಳುವ  ಮಹತ್ವದ ವಿಚಾರಗಳನ್ನು ಹೇಳುತ್ತವೆ. ಶೋಯಬುಲ್ಲಾ ಅವರು ತಮ್ಮ ಪತ್ರಿಕೆಯಲ್ಲಿ ಬರೆಯುತ್ತಿದ್ದ ವಿಚಾರಗಳು ಮತೀಯ ಮತ್ತುಫ್ಯಾಸಿಸ್ಟ್‌ ಶಕ್ತಿಗಳನ್ನು ವಿರೋಧಿಸುತ್ತಿದ್ದನೇ ಹೊರತು ರಜಾಕರ ಪರವಾಗಿರಲಿಲ್ಲ. ವಿರೂಪಾಕ್ಷಪ್ಪ ಮಾಸ್ತರ, ʼಮಾನವ ಕುಲಕ್ಕೆ ಸತ್ಯ ಅಹಿಂಸೆಗಳನ್ನು ಬಿಟ್ಟರೆ ವಿನಾಶವೇ ಗತಿʼ ಎಂಬ ಗಾಂಧೀಜಿಯವರ ಮಾತನ್ನು ಪುನರುಚ್ಚರಿಸುವುದು, ಪ್ರವಾದಿಗಳ ಮಾತನ್ನು ನೆನೆಯುವುದು ಎಲ್ಲವೂ ಕೂಡಿ ಬಾಳುವ ಬದುಕಿಗೆ ಪೂರಕವಾದವೇ.

ಕಾದಂಬರಿಕಾರ ತನಗೆ ಬೇಕಾದಂತೆ ಪಾತ್ರಗಳನ್ನು ಕಟ್ಟಿರಬಹುದೇ ಎಂಬ ಅನುಮಾನ ಹುಟ್ಟಬಹುದು. ಆದರೆ ೭೦-೮೦ ವರ್ಷಗಳ ಹಿಂದಿನ ಈ ಪ್ರದೇಶವನ್ನು, ಅಲ್ಲಿ ಬೇರುಬಿಟ್ಟ ಮೌಲ್ಯಗಳನ್ನು, ಕೂಡಿ ಬಾಳುವ ಜನರ ಒಲವು ನಿಲುವುಗಳನ್ನು ಬಲ್ಲವರಿಗೆ (ಇತಿಹಾಸದಿಂದ ತಿಳಿದವರಿಗೆ) ಈ ಪಾತ್ರಗಳು ಸಹಜವಾಗಿ, ನೆಲದ ಗುಣವನ್ನು ಮೈದುಂಬಿಕೊಂಡೇ ರೂಪಿತವಾದ ವ್ಯಕ್ತಿಗಳಾಗಿ ಕಾಣುತ್ತಾರೆ; ಕೃತಿಕಾರನ ಸೃಷ್ಟಿಯಾಗಿ ಕಾಣುವುದಿಲ್ಲ.

ಸಾಮಾನ್ಯ ವ್ಯಕ್ತಿಗಳ  ನಿತ್ಯದ ಬದುಕನ್ನು ನೋಡುವಾಗಲೂ (ಈ ಕೃತಿಯಲ್ಲಿ ಕಾಣಿಸಿರುವಂತೆ) ಇಲ್ಲಿ ಸಹಜತೆಯೇ ಕಣ್ಮುಂದೆ ಬರುತ್ತದೆ. ಉತ್ಪ್ರೇಕ್ಷಿತವಾದದ್ದು ಕಾಣಿಸುವುದಿಲ್ಲ.

ನಬಿಯಂಥ ವ್ಯಕ್ತಿ ರಜಾಕರ ಬಲೆಗೆ ಹೇಗೆ ಸಿಕ್ಕಿಬಿದ್ದ ಎಂಬ ಕಾರಣವನ್ನು ಕಾದಂಬರಿಕಾರರು ಬಹಳ ಸೂಕ್ಷ್ಮರೀತಿಯಲ್ಲಿ ತೋರಿಸಿರುವುದು ಅವರ ಕಲೆಗಾರಿಕೆಯನ್ನು, ಕೃತಿಯನ್ನು ಮುನ್ನಡೆಸುವ ಜಾಣ್ಮೆಯನ್ನು ಹೇಳುತ್ತದೆ. ಇಂಥ ಸೂಕ್ಷ್ಮಗಳು ಈ ಕಾದಂಬರಿಯಲ್ಲಿ ಬೇಕಾದಷ್ಟು ಸಿಗುತ್ತವೆ.

ಕೊಲೆ, ರಕ್ತಪಾತ ಶಂಕರನಂಥವರನ್ನು ಹಿಡಿದು ಅಲ್ಲಾಡಿಸುತ್ತದೆ:  ಸೇಡಿಗೆ ಸೇಡು ಎಂಬ ಸಂಭ್ರಮಕ್ಕೆ ದಾರಿ ಮಾಡಿಕೊಡುವುದಿಲ್ಲ. ತನಗೆ ಜೀವದಾನ ಮಾಡಿದ್ದ ಅಮೀನ್‌ಸಾಬ  ರೋಶನ್‌ರ ಕೊಲೆಗೆ, ಅನಿವಾರ್ಯವಾಗಿ ಮತ್ತು ಅಸಹಾಯಕನಾಗಿ ಕಾರಣನಾದ ಶಂಕರ ತನ್ನ ಕೈಗೆ ಅಂಟಿದ ನೆತ್ತರನ್ನು ತೊಳೆದುಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಪರಿತಪಿಸುವುದು, ನವೆಯುವುದು ಒಂದು ಮಾರ್ಮಿಕ ಚಿತ್ರಣದಂತೆ ಕಾಣಿಸುತ್ತದೆ. ಅಷ್ಟೇ ಅಲ್ಲ, ಇದನ್ನು ಲೇಡಿ ಮ್ಯಾಕ್ ಬೆತ್ತಳ ರಕ್ತಸಿಕ್ತ ಕೈಗಳಿಗೆ ಹೋಲಿಸುವುದು ಮಲ್ಲಿಕಾರ್ಜುನ ಹಿರೇಮಠರ ಓದಿನ ಸೂಕ್ಷ್ಮತೆ ಮತ್ತು ವಿಸ್ತಾರವನ್ನು ಸೂಚಿಸುತ್ತದೆ.

ಸಂಯಮದ ನಿರೂಪಣೆ, ಕೃತಿಯ ಮೇಲಿನ ಸಂಪೂರ್ಣ ಹಿಡಿತ ಈ ಕೃತಿಯನ್ನು ಸರಿದಾರಿಯಲ್ಲಿ ನಡೆಸಿವೆ. ಈ ಕೃತಿಯ ಬೆಡಗನ್ನು ಹೆಚ್ಚಿಸುವಂತೆ ಇಲ್ಲಿಯ ಗ್ರಾಮೀಣ ಬದುಕಿನ ಚಿತ್ರಗಳಿವೆ. ಭಾಷೆಯ ಸೊಗಡು, ಜನರ ನುಡಿಯನ್ನು ಹಾಗೆಯೇ ಹಿಡಿದಿಟ್ಟಿರುವ ರೀತಿ, ಅವರ ಬದುಕಿನ ರಿವಾಜುಗಳು ಸಹಜವಾಗಿ ಅರಳಿ ಕೃತಿಯ ಹೊಳಪನ್ನು ಹೆಚ್ಚಿಸಿವೆ.

ಈ ಕಾದಂಬರಿ ಒಂದು ರೀತಿಯ ರಮ್ಯ ಭಾವನಾತ್ಮಕತೆಯಲ್ಲಿ ಕಟ್ಟಿದ ಕೃತಿಯಲ್ಲ. ಗಾಂಧೀ ಮಾರ್ಗದಲ್ಲಿ ಸಾಗಿ ಹೊಸ ನಾಡೊಂದನ್ನು ಕಟ್ಟುವ ರೀತಿಯಲ್ಲಿ ಈ ಕೃತಿ ಸಾಗಿದರೂ, ಮುಂದೆ ಗಾಂಧೀವೇಷದ ನಕಲಿ ವ್ಯಕ್ತಿಗಳು ಬರುವುದನ್ನೂ ತೋರಿಸುತ್ತದೆ. ಹಳೆಯ ವ್ಯವಸ್ಥೆಯಲ್ಲಿದ್ದ ದೇಸಾಯಿ ಹಾಗೂ ಅವರ ಪಟಾಲಂ ಮತ್ತು ದೇಸಾಯರ ಮುಂದಿನ ತಲೆಮಾರಾದ ಅವರ ಮಗ ವಸಂತ ಹೊಸ ವ್ಯವಸ್ಥೆಯಲ್ಲಿ ಹೊಸ ವೇಷ ತೊಟ್ಟು, ತಮ್ಮನ್ನು ಸ್ಥಾಪಿಸಿಕೊಳ್ಳಲು ನೋಡುವುದು ಕಟು ವಾಸ್ತವ. ಇದನ್ನು ಕೂಡಾ ಲೇಖಕರು ನೋಡಬಲ್ಲವರಾಗಿದ್ದಾರೆ.

ಹಿರೇಮಠರು ಕವಿಯಾಗಿದ್ದರೆ ಹೈದರಾಬಾದ್‌ ಕರ್ನಾಟಕದ ಸೊಬಗನ್ನು ಇನ್ನೂ ಸೂರೆಯಾಡುವ ಸಾಧ್ಯತೆ ಇತ್ತು ಎಂದು ಅನಿಸಿದರೂ, ಇವರು ಕವಿಯಲ್ಲ ಎಂದು ಧೈರ್ಯವಾಗಿ ಹೇಳಲು ಸಾಧ್ಯವಿಲ್ಲ. ಈ ಕೃತಿಯಲ್ಲಿ ಕಾವ್ಯತ್ಮಕ ಅಂಶಗಳು ಅಲ್ಲಲ್ಲಿ ಮಿಂಚಿ ಮರೆಯಾಗಿರುವುದನ್ನು ಸೂಕ್ಷ್ಮ ಓದುಗರು ಗಮನಿಸಬಹುದು.

ಆಗಿ ಹೋದ ಒಂದು ಸಮಾಜವನ್ನು ನೋಡುತ್ತ, ಅದು ಬಿಂಬಿಸಿದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ತನ್ನ ನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತ, ಹೊಸ ಕನಸುಗಳಿಗೆ ಕೈಚಾಚುವುದು, ಹಂಬಲಿಸುವುದು ಈ ಕೃತಿಯನ್ನು ಮುಖ್ಯ ಕೃತಿಯಾಗಿಸಿವೆ.  ಅದಕ್ಕಾಗಿ ಮಲ್ಲಿಕಾರ್ಜುನ ಹಿರೇಮಠರನ್ನು ಅಭಿನಂದಿಸಬೇಕು.

ಅವರಿಗೆ ಅಭಿನಂದನೆಗಳು.

‍ಲೇಖಕರು Admin

20 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading