ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾವಗೊಳಲಿನ ಮಧುರ ನಾದದ ಸುಪುತ್ರ ಬಾಗೂರು ಮಾರ್ಕಾಂಡೇಯ

ಬಾಗೂರು ಮಾರ್ಕಾಂಡೇಯ ಅವರ ಅಭಿನಂದನಾ ಗ್ರಂಥ ‘ಭಾವಗೊಳಲು‘.

ಅಪ್ಪ ಅವ್ವ ಅಕ್ಷರ ಪಬ್ಲಿಕೇಶನ್’ ಈ ಕೃತಿಯನ್ನು ಪ್ರಕಟಿಸಿದೆ.

ಬಾಗೂರು ಮಾರ್ಕಂಡೇಯ ಅವರ ವ್ಯಕ್ತಿತ್ವ, ಕೊಡುಗೆಯ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕಿ ಡಾ. ಜಯಶ್ರೀ ಅರವಿಂದ್ ಅವರ ಬರಹ ಇಲ್ಲಿದೆ.

-ಡಾ. ಜಯಶ್ರೀ ಅರವಿಂದ್

“ಉಸಿರಿನ ಗಾಳಿಯು ಬಿದಿರನ್ನು ಸ್ಪರ್ಶಿಸಿದಾಗ ಕೊಳಲು ನಾದವನ್ನು ಉಸುರುತ್ತವೆ… ಭಾವನೆಗಳು ಹೃದಯವನ್ನು ಸ್ಪರ್ಶಿಸಿದಾಗ ಕಾವ್ಯ ಹುಟ್ಟುತ್ತದೆ.” ಅಂತಹ ಭಾವಗಳ ಕೊಳಲಾಗಿರುವ ವ್ಯಕ್ತಿತ್ವವೇ ಶ್ರೀ ಬಾಗೂರು ಮಾರ್ಕಾಂಡೇಯ ಅವರದ್ದು. ವಿವಿಧ ಭಾವಗಳ ವಿವಿಧ ಕಲೆಗಳ ಭಾವದ ಕೊಳದಂತೆ ಸದಾ ನವೋಲ್ಲಾಸಗಳಿಂದ ಜುಳು ಜುಳು ಹರಿಯುವ ಚೈತನ್ಯದ ಚೇತನವೇ ಅವರ ವ್ಯಕ್ತಿತ್ವ…

ಕೆಲವು ವ್ಯಕ್ತಿಗಳು ನಮ್ಮ ಬದುಕಿನ ಪುಟಗಳಲ್ಲಿ ಹೆಸರುಗಳಾಗಿ ಬರುವುದಿಲ್ಲ, ಭಾವನೆಗಳಾಗಿ ನೆಲೆಗೊಳ್ಳುತ್ತಾರೆ. ಕೆಲವು ಸಂಬ೦ಧಗಳು ರಕ್ತದ ಬಂಧನವನ್ನೂ ಮೀರಿ ಆತ್ಮದ ಅನುಬಂಧವಾಗಿ ಅರಳುತ್ತವೆ. ಅಂತಹ ಅಪರೂಪದ ಆತ್ಮೀಯ ಬಾಂಧವ್ಯವೇ ನನ್ನ ಮತ್ತು ಶ್ರೀ ಬಾಗೂರು ಮಾರ್ಕಾಂಡೇಯ ಅವರ ನಡುವಿನ ಸಂಬAಧ.

ಅವರು ನನ್ನನ್ನು ಪ್ರೀತಿಯಿಂದ “ಅಮ್ಮಾ” ಎಂದು ಕರೆಯುವಾಗ, ಆ ಒಂದು ಪದ ಕೇವಲ ಸಂಬೋಧನೆಯಾಗಿ ಕಿವಿಗೆ ಬೀಳುವುದಿಲ್ಲ, ಅದು ಮಗನ ಮಮತೆಯಾಗಿ ಹೃದಯವನ್ನು ಸ್ಪರ್ಶಿಸುತ್ತದೆ. ಬದುಕಿನಲ್ಲಿ ಇಂತಹ ಆತ್ಮೀಯ ಸಂಬ೦ಧಗಳು ದೇವರ ಕೃಪೆಯಾಗಿ ದೊರೆಯುತ್ತವೆ. ನನಗೂ ಅವರು ಸ್ವಂತ ಮಗನಂತೆಯೇ. ಈ ಸಂಬ೦ಧ ನನ್ನ ಮತ್ತು ಅವರ ಮೂರೂವರೆ ದಶಕಗಳಿಗೂ ಮೀರಿದ ಸಂಗೀತ ಸಾಹಿತ್ಯ ಒಡನಾಟದ ಪ್ರಸಾದ.
ಶ್ರೀ ಬಾಗೂರು ಮಾರ್ಕಾಂಡೇಯ ಅವರು ಪ್ರತಿಭೆಯ ಅನೇಕ ನದಿಗಳು ಸಂಗಮಗೊ೦ಡಿರುವ ಸೃಜನಶೀಲ ವ್ಯಕ್ತಿತ್ವ. ಅವರೊಳಗೆ ಕವಿಯ ಕನಸಿದೆ, ಕಲಾವಿದನ ದೃಷ್ಟಿಯಿದೆ, ಗೀತರಚನೆಕಾರನ ಲಯವಿದೆ, ಸಂಘಟಕನ ನಾಯಕತ್ವವಿದೆ, ಸಮಾಜಸೇವಕನ ಕರುಣೆಯಿದೆ. ಅವರ ವ್ಯಕ್ತಿತ್ವವನ್ನು ಒಂದು ಸಾಲಿನಲ್ಲಿ ಹಿಡಿದಿಡುವುದು ಸಮುದ್ರದ ಆಳವನ್ನು ಅಳೆದಂತೆ.

ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಅವರಿಗೆ ಇರುವ ಅಭಿಮಾನ ಕೇವಲ ಮಾತಿನಲ್ಲಲ್ಲ, ಅದು ಅವರ ಬದುಕಿನ ಧ್ಯೇಯವಾಗಿದೆ. ಸಾಹಿತ್ಯದ ಬೆಳವಣಿಗೆಗಾಗಿ, ಹೊಸ ಪ್ರತಿಭೆಗಳ ಅನಾವರಣಕ್ಕಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗಾಗಿ ಮತ್ತು ಸಮಾಜದಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವುದಕ್ಕಾಗಿ ಅವರು ಸಲ್ಲಿಸಿರುವ ಸೇವೆ ಅಪಾರವಾಗಿದೆ. ಅನೇಕ ಪ್ರತಿಭಾವಂತರಿಗೆ ವೇದಿಕೆಯನ್ನು ಒದಗಿಸಿ, ಅವರನ್ನು ಪ್ರೋತ್ಸಾಹಿಸಿ, ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವುದು ಅವರ ವ್ಯಕ್ತಿತ್ವದ ಮತ್ತೊಂದು ಮಹತ್ವದ ಮುಖ. ಅವರ ಲೇಖನಿ ಮಸಿಯಲ್ಲಿ ನೆನೆದಿಲ್ಲ, ಅನುಭವಗಳಲ್ಲಿ ನೆನೆದಿದೆ. ಆದ್ದರಿಂದಲೇ ಅವರ ಕಾವ್ಯದಲ್ಲಿ ಪದಗಳು ಕೇವಲ ಸಾಲುಗಳಾಗಿ ಕಾಣುವುದಿಲ್ಲ, ಅವು ಹೃದಯದ ಮಿಡಿತಗಳಾಗಿ ಕೇಳಿಸುತ್ತವೆ. ಅವರ ಕವಿತೆಗಳಲ್ಲಿ ಮನುಜತ್ವದ ಉಸಿರಿದೆ, ಪ್ರೀತಿಯ ಪರಿಮಳವಿದೆ, ಬದುಕಿನ ಸತ್ಯಗಳಿವೆ. ಓದುಗನ ಕಣ್ಣಲ್ಲಿ ತೇವವನ್ನೂ, ತುಟಿಗಳಲ್ಲಿ ನಗುವನ್ನೂ ಮೂಡಿಸುವ ಶಕ್ತಿ ಅವರ ಕಾವ್ಯಕ್ಕಿದೆ. ಅವರ ಕಾವ್ಯಲೋಕದಲ್ಲಿ ಭಾವಗಳಿವೆ, ಬದುಕಿನ ಅನುಭವಗಳಿವೆ, ಸಮಾಜದ ಬಗ್ಗೆ ಕಾಳಜಿಯಿದೆ ಮತ್ತು ಮಾನವೀಯತೆಯ ಅನುರಣನವಿದೆ.

ಭಾವಗೀತೆಗಳ ಲೋಕದಲ್ಲಿ ಶ್ರೀ ಬಾಗೂರು ಮಾರ್ಕಾಂಡೇಯ ಅವರ ಹೆಸರು ಒಂದು ಮಧುರ ನಾದ. ಅವರ ಲೇಖನಿಯಿಂದ ಹೊರಹೊಮ್ಮಿದ ನೂರಾರು ಭಾವಗೀತೆಗಳು ಕನ್ನಡಿಗರ ಹೃದಯಗಳಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಅವರ ಪದಗಳಿಗೆ ಸಂಗೀತದ ಸ್ಪರ್ಶ ದೊರೆತಾಗ ಅವು ಹಾಡುಗಳಾಗಿ ಮಾತ್ರ ಉಳಿಯಲಿಲ್ಲ; ಜನಮನಗಳ ಸ್ಪಂದನೆಯಾದವು. ಅನೇಕ ಖ್ಯಾತ ಸಂಗೀತ ನಿರ್ದೇಶಕರು ಅವರ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿ ಅವುಗಳಿಗೆ ಹೊಸ ಜೀವ ತುಂಬಿದ್ದಾರೆ. ಅವರ ಅನೇಕ ಗೀತೆಗಳು ದೂರದರ್ಶನ ಧಾರಾವಾಹಿಗಳ ಶೀರ್ಷಿಕೆ ಗೀತೆಗಳಾಗಿ ಪ್ರಸಾರಗೊಂಡು ಮನೆಮನೆಗೂ ತಲುಪಿವೆ.
ಒಂದು ಧಾರಾವಾಹಿಯ ಕಥೆ ಮುಗಿಯಬಹುದು ಆದರೆ, ಅದರ ಹಾಡು ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಅಂತಹ ನೆನಪುಗಳ ಸರಮಾಲೆ ಅವರ ಸಾಹಿತ್ಯದ ಶಕ್ತಿ. ಅವರ ಗೀತೆಗಳಲ್ಲಿ ಭಾವದ ಆಳವಿದೆ, ಭಾಷೆಯ ಸೌಂದರ್ಯವಿದೆ, ಜೀವನದ ಮಿಡಿತವಿದೆ. ಅದಕ್ಕಾಗಿಯೇ ಅವು ಕಾಲದ ಪ್ರವಾಹದಲ್ಲೂ ಹೊಸದಾಗಿಯೇ ಉಳಿದಿವೆ. ಪದಪದಗಳಲ್ಲಿ ಹೊಸತನವಿದೆ.. ಹೊಸ ಪ್ರತಿಮೆಗಳು ಚಿತ್ರಕಾವ್ಯವನ್ನೇ ಕಣ್ಣ ಮುಂದೆ ತರುತ್ತದೆ..

ಚಿತ್ರಕಲೆಯ ಕ್ಷೇತ್ರದಲ್ಲಿ ಅವರ ಪ್ರತಿಭೆ ಮತ್ತೊಂದು ಅದ್ಭುತ.
ಶ್ರೀ ಬಾಗೂರು ಮಾರ್ಕಾಂಡೇಯ ಅವರು ಒಬ್ಬ ಅಪ್ರತಿಮ ಚಿತ್ರಕಲಾವಿದ. ವಿಶೇಷವಾಗಿ ಚುಕ್ಕಿ ಕಲೆಯ ಮೂಲಕ ವ್ಯಕ್ತಿಗಳ ಭಾವಚಿತ್ರಗಳನ್ನು ರಚಿಸುವ ಅವರ ಸಾಮರ್ಥ್ಯ ಅಪರೂಪದ್ದು. ಸಾವಿರಾರು ಚುಕ್ಕಿಗಳು ಅವರ ಬೆರಳುಗಳ ಸ್ಪರ್ಶದಲ್ಲಿ ಜೀವ ಪಡೆದು ಭಾವಚಿತ್ರಗಳಾಗಿ ಅರಳುತ್ತವೆ. ಅವರು ಬಿಡಿಸುವ ಚಿತ್ರಗಳಲ್ಲಿ ಮುಖವಷ್ಟೇ ಕಾಣುವುದಿಲ್ಲ; ಮನಸ್ಸು ಕಾಣುತ್ತದೆ. ಕಣ್ಣುಗಳಲ್ಲಿನ ಕನಸು, ಮುಖದಲ್ಲಿನ ಅನುಭವ, ಅಂತರ೦ಗದಲ್ಲಿನ ಭಾವನೆ, ಇವೆಲ್ಲವೂ ಚುಕ್ಕಿಗಳ ಮೂಲಕ ಮಾತಾಡುತ್ತವೆ.

ಅನೇಕ ಕಲಾವಿದರು ಚಿತ್ರಗಳನ್ನು ಬಿಡಿಸುತ್ತಾರೆ ಆದರೆ, ಕೆಲವೇ ಕಲಾವಿದರು ಭಾವನೆಗಳನ್ನು ಚಿತ್ರಿಸುತ್ತಾರೆ. ಆ ವಿರಳ ಕಲಾವಿದರ ಸಾಲಿನಲ್ಲಿ ಶ್ರೀ ಬಾಗೂರು ಮಾರ್ಕಾಂಡೇಯ ಅವರ ಸ್ಥಾನ ವಿಶಿಷ್ಟವಾಗಿದೆ. ಅವರ ಕುಂಚದ ರೇಖೆಗಳಲ್ಲಿ ಕೇವಲ ಕಲೆಯಲ್ಲ, ಸಾಧನೆಯಿದೆ, ಕೇವಲ ಬಣ್ಣಗಳಲ್ಲ, ಭಾವನೆಗಳಿವೆ. ಚಿತ್ರವನ್ನು ನೋಡುವವರು ಅದರ ಸೌಂದರ್ಯವನ್ನು ಮಾತ್ರವಲ್ಲ, ಅದರೊಳಗೆ ಅಡಗಿರುವ ಆತ್ಮವನ್ನು ಅನುಭವಿಸುತ್ತಾರೆ.
ಅವರ ಸಂಘಟನಾ ಸಾಮರ್ಥ್ಯವೂ ಶ್ಲಾಘನೀಯ. ಸಾಹಿತ್ಯಿಕ ಕಾರ್ಯಕ್ರಮಗಳು, ಕವಿಗೋಷ್ಠಿಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಅವರು ಅನೇಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳ ಜನರನ್ನು ಒಂದೇ ವೇದಿಕೆಗೆ ತರುವ ಅಪರೂಪದ ಶಕ್ತಿ ಅವರಿಗೆ ಇದೆ. ಸ್ನೇಹ, ಸಹಕಾರ ಮತ್ತು ಸೌಹಾರ್ದತೆಯ ಮೂಲಕ ಜನರನ್ನು ಜೋಡಿಸುವ ಗುಣ ಅವರ ವ್ಯಕ್ತಿತ್ವದ ದೊಡ್ಡ ಆಸ್ತಿ.

ಆದರೆ ಅವರ ಎಲ್ಲಾ ಸಾಧನೆಗಳಿಗಿಂತ ನನ್ನ ಮನಸ್ಸನ್ನು ಹೆಚ್ಚು ಸೆಳೆದಿರುವುದು ಅವರ ಮಾನವೀಯತೆ. ಸಾಧನೆಯ ಶಿಖರದಲ್ಲಿ ನಿಂತಿದ್ದರೂ ಸರಳತೆಯನ್ನು ಕಳೆದುಕೊಳ್ಳದಿರುವುದು, ಜನಪ್ರಿಯತೆಯ ನಡುವೆ ವಿನಯವನ್ನು ಉಳಿಸಿಕೊಂಡಿರುವುದು, ಹಿರಿಯರಿಗೆ ಗೌರವ ನೀಡುವುದು, ಕಿರಿಯರನ್ನು ಪ್ರೀತಿಯಿಂದ ಪ್ರೋತ್ಸಾಹಿಸುವುದು, ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವುದು ಇವೆಲ್ಲವೂ ಅವರನ್ನು ಇನ್ನಷ್ಟು ದೊಡ್ಡವರನ್ನಾಗಿ ಮಾಡಿವೆ. ಬಾಗಿದ ವಿನಯವುಳ್ಳ ಬಾಗೂರರು ಸಮಾಜಕ್ಕೆ ಕನ್ನಡಿಯಾಗಿದ್ದಾರೆ.

ನಾನು ಅವರನ್ನು ಗಮನಿಸಿದಷ್ಟು, ಅವರಲ್ಲಿ ಒಬ್ಬ ಕವಿಯ ಸಂವೇದನೆ, ಗೀತರಚನೆಕಾರನ ಸೃಜನಶೀಲತೆ, ಚಿತ್ರಕಲಾವಿದನ ಸೌಂದರ್ಯದೃಷ್ಟಿ, ಸಂಘಟಕನ ನಾಯಕತ್ವ, ಸಮಾಜಸೇವಕನ ಕಾಳಜಿ ಮತ್ತು ಮಗನ ಪ್ರೀತಿ ಒಂದಾಗಿ ಬೆರೆತಿರುವುದನ್ನು ಕಂಡಿದ್ದೇನೆ. ಆದ್ದರಿಂದಲೇ ಅವರು ನನಗೆ ಕೇವಲ ಪರಿಚಿತರಲ್ಲ, ಹೃದಯದಿಂದ ಹುಟ್ಟಿದ ಸುಪುತ್ರರು.

ಇಂದು ಅವರ ಷಷ್ಟ್ಯಬ್ಧಿ ಸಂಭ್ರಮದ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ “ಭಾವಗೊಳಲು” ಅಭಿನಂದನಾ ಗ್ರಂಥದ ಹೆಸರೇ ಅವರ ವ್ಯಕ್ತಿತ್ವದ ಕನ್ನಡಿಯಾಗಿದೆ.
ಏಕೆಂದರೆ ಮಾರ್ಕಾಂಡೇಯ ಅವರ ಬದುಕೇ ಒಂದು ಕೊಳಲು. ಅದರೊಳಗೆ ಸಾಹಿತ್ಯದ ಸ್ವರವಿದೆ. ಕಾವ್ಯದ ಮಧುರತೆಯಿದೆ. ಭಾವಗೀತೆಗಳ ಲಯವಿದೆ. ಚಿತ್ರಕಲೆಯ ಬಣ್ಣಗಳಿವೆ. ಮಾನವೀಯತೆಯ ಉಸಿರಿದೆ.

ಆ ಕೊಳಲಿನಿಂದ ಹೊರಹೊಮ್ಮಿದ ನಾದ ಅನೇಕ ಹೃದಯಗಳನ್ನು ತಲುಪಿದೆ. ಅನೇಕ ಬದುಕುಗಳನ್ನು ಸ್ಪರ್ಶಿಸಿದೆ. ಅನೇಕ ಕನಸುಗಳಿಗೆ ಸ್ಫೂರ್ತಿಯಾಗಿದೆ. ಭಾವದ ಕೊಳವೇ ಅವರ ವ್ಯಕ್ತಿತ್ವವಾಗಿದೆ.. ಕಲೆ ಮಡುಗಟ್ಟಿ ನಿಂತಿದೆ.

ಇ೦ದು ಅವರ ಷಷ್ಟ್ಯಬ್ಧಿ ಸಂಭ್ರಮದ ಈ ಪವಿತ್ರ ಕ್ಷಣದಲ್ಲಿ ತಾಯಿಯ ಹೃದಯದಿಂದ ಅವರಿಗೆ ಆಶೀರ್ವಾದಗಳನ್ನು ಅರ್ಪಿಸುತ್ತೇನೆ.
ಬಾಗೂರರ ಲೇಖನಿಯಿಂದ ಕಾವ್ಯ ಅರಳಲಿ, ಅವರ ಸ್ವರಗಳಲ್ಲಿ ಭಾವಗೀತೆಗಳು ನಾದಿಸಲಿ; ಅವರ ಕುಂಚದಲ್ಲಿ ಬಣ್ಣಗಳು ಪ್ರಾರ್ಥನೆಯಾಗಲಿ, ಅವರ ಬದುಕು ಮಾನವೀಯತೆಯ ಮಹಾಕಾವ್ಯವಾಗಲಿ.

ಇವರ ಲೇಖನಿಯಿಂದ ಕವಿತೆಗಳು ಹುಟ್ಟಿದವು, ಭಾವಗೀತೆಗಳು ಜನಮನಗಳಲ್ಲಿ ನಾದವಾದವು, ಕುಂಚದಿ೦ದ ಚಿತ್ರಗಳು ಮೂಡಿದವು, ಮಾನವೀಯತೆಯಿಂದ ಹೃದಯಗಳ ಗೆದ್ದವು.

ಅವರ ಸೃಜನಶೀಲತೆಯ ದೀಪ ಇನ್ನೂ ದೀರ್ಘಕಾಲ ಬೆಳಗಲಿ. ಕನ್ನಡ ಸಾಹಿತ್ಯ, ಸಂಗೀತ ಮತ್ತು ಕಲೆಯ ಆಕಾಶದಲ್ಲಿ ಅವರ ಹೆಸರು ಧ್ರುವತಾರೆಯಂತೆ ಚಿರಸ್ಥಾಯಿಯಾಗಿ ಹೊಳೆಯಲಿ. ಅವರ ಸೃಜನಶೀಲತೆಯ ಬೆಳಕು ಇನ್ನೂ ಅನೇಕ ಪೀಳಿಗೆಗಳಿಗೆ ದಾರಿದೀಪವಾಗಲಿ.
ನನ್ನ ಪ್ರೀತಿಯ ಸುಪುತ್ರನಿಗೆ ಹೃತ್ಪೂರ್ವಕ ಆಶೀರ್ವಾದಗಳು.
ಪ್ರೀತಿಯಿಂದ,

‍ಲೇಖಕರು Admin

20 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading