ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನಗಳಲ್ಲಿ ಕನ್ನಡದ ಹಿರಿಮೆಯನ್ನು ಪಸರಿಸಿರುವ ಇವರ ಕವಿತೆಗಳು ವಿವಿಧ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯವಾಗಿವೆ.
ಶಿಕ್ಷಕ ಪ್ರಶಸ್ತಿ ವಿಜೇತರಾದ ಇವರು ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ತುಮಕೂರು ಜಿಲ್ಲೆಯವರಾಗಿದ್ದು, ಪ್ರಸ್ತುತ ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಮುಂದೆ ಅವಧಿಯಲ್ಲಿ ಕವಿತೆಗಳನ್ನು ಕುರಿತ ಹೊಸ ಹೊಳಗಿನ’ಬೆಳಕಿನ ಜಾಡು’ ಅಂಕಣದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಅಂಕಣ – ೫
ಕನ್ನಡದ ನೆಲದ ಹಿರಿಯ ಸಶಕ್ತ ಕವಿ, ತತಾಗತ ಪ್ರಜ್ಞೆಯನ್ನು ಜೀವಿಸುವ ಸುಬ್ಬು ಹೊಲೆಯರ್ ಅವರ ಲೇಖನಗಳ ಕೃತಿ “ದುಃಖ ಆರದ ನೆಲದಲ್ಲಿ”. ‘ಜಗತ್ತಿನ ಅತಿದೊಡ್ದ ಪ್ರಾರ್ಥನೆಯೆಂದರೆ ತಾಳ್ಮೆ’ ಎಂಬ ಬುದ್ಧನ ಮಾತಿನೊಂದಿಗೆ ಲೇಖನಗಳ ಪ್ರಸ್ತುತಿ ಆರಂಭವಾಗಿದೆ. ಒಬ್ಬ ಕವಿಯಾಗಿ ಸುಬ್ಬು ಹೊಲೆಯಾರ್ ಅವರು “ಸೂಜಿಗಾತ್ರದ ಕೊಳವೆಯೊಳಗಿಂದ ಮನುಷ್ಯನೊಬ್ಬನ ಹಾಡು” ಮತ್ತು “ಮಳೆ ಬರಲಿ ಲೋಕದ ಎಲ್ಲರ ಮನೆಯ ಮೇಲೆ” ಎಂಬ ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ನಂತರ “ದುಃಖ ಆರದ ನೆಲದಲ್ಲಿ” ಲೇಖನಗಳ ಸಂಗ್ರಹ ಇದು ಅವರ ಮೂರನೇ ಕೃತಿ. ಕಡಿಮೆ ಬರೆದು ಹೆಚ್ಚು ಬದುಕಿನ ಪ್ರೀತಿಯನ್ನು ಹಂಚುವ ವ್ಯಕ್ತಿತ್ವ ಸುಬ್ಬಣ್ಣ ಅವರದು. ಇವರ ಅಂತಃಕರಣ ಅದು ಬುದ್ಧನ ಕಾರುಣ್ಯದ ಮನೆ, ಏಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಕವಿತೆಗಿಂತ ಕವಿ ಬದುಕಿದರೆ, ಕವಿತೆ ಬದುಕುತ್ತದೆ ಎನ್ನುವ ಮಾತು ನನ್ನದು. ಕವಿ ಬಾಳಬೇಕು ಆಗ ಕವಿತೆ ತಾನಾಗಿಯೇ ಬಾಳುತ್ತದೆ. ಆದ್ದರಿಂದ ಕವಿಯ ವ್ಯಕ್ತಿತ್ವವನ್ನು ಒಂದಿಷ್ಟು ಚರ್ಚಿಸಿ ಮುಖ್ಯ ವಿಷಯಕ್ಕೆ ಬರುತ್ತೇನೆ.
ಅಸ್ಪೃಶ್ಯತೆಯ ನೋವನ್ನು ಅನುಭವಿಸುತ್ತಿರುವ ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಕ್ತಿ ಆತ ನನ್ನ ಸಂಗಾತಿ ಎನ್ನುವ ಸುಬ್ಬಣ್ಣ ಅವರ ಲೇಖನಗಳ ಕೇಂದ್ರ ಪ್ರಜ್ಣೆ ಅಂಬೇಡ್ಕರ್ .
ಬಾಬಾ ಸಾಹೇಬರ ಮೈತ್ರಿ ಮತ್ತು ಹೋರಾಟ, ಬುದ್ಧನ ಕರುಣೆ, ಬಸವಣ್ಣನ ಸಾಮೂದಾಯಿಕ ಚಿಂತನೆ. ತುಳಿತಕ್ಕೊಳಗಾದವರ, ಅವಮಾನಿತರ, ನೊಂದವರ ಪರವಾದ ಅವರ ಧ್ವನಿ ಯಾವಾಗಲೂ ಕ್ರಿಯಾಶೀಲವಾಗಿರುತ್ತದೆ ಎನ್ನುವ ವಾಸ್ತವ ಸತ್ಯವಾಗಿದೆ. ಸುಬ್ಬು ಹೊಲೆಯಾರ್ ಅವರ ಬರಹದ ಸೂಕ್ಷ್ಮ ಮನುಷ್ಯನಾಗದವನು ಕವಿಯಾಗಲಾರ ಎನ್ನುವ ನನ್ನ ಮಾತಿನಲ್ಲಿ ಒಂದು ಸಂವೇದನೆ ಮೂಡಬೇಕಾದರೆ ಅದು ಸುಬ್ಬು ಹೊಲೆಯಾರ್ ಅವರ ಚಿಂತನೆಗಳ ಸ್ವರೂಪ ನನ್ನೊಳಗೆ ಹೊತ್ತಿಸಿದ ಸೂಕ್ಷ್ಮ ಸಂವೇದಿ ಚಿಂತನೆಗಳ ಕಿಡಿ ಎಂಬುದು ನಿರ್ವಿವಾದದ ಸಂಗತಿ.
ಕವಿ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿ ಆತ ಪದ್ಯ ಬರೆಯಲೇ ಬೇಕು ಎಂದೇನಿಲ್ಲ ಬದಲಾಗಿ ಆತ ಪದ್ಯದ ರೀತಿ ಬದುಕಿದರೆ ಸಾಕು ಎನ್ನುವ ಮಾತಿಗೆ ಅನ್ವರ್ಥವಾಗಿ ಸುಬ್ಬಣ್ಣ ಬದುಕುತ್ತಿದ್ದಾರೆ. ನನ್ನಂತ ಅನೇಕ ಕವಿಗಳು ಬದುಕುವಂತೆ ಪ್ರೇರೇಪಿಸಿದ್ದಾರೆ. ಸ್ಪೂರ್ತಿಯ ಸೆಲೆಯಾಗಿದ್ದಾರೆ.
ಬುದ್ಧಪ್ರಜ್ಞೆ ಸುಬ್ಬಣ್ಣ ಅವರ ಕಾವ್ಯದ ಸ್ಥಾಯಿಭಾವ. ಇವರ ಕವಿತೆಗಳೂ ಹಾಗೂ ಗದ್ಯ ಎರಡರಲ್ಲೂ ಒಂದು ಸಾಮ್ಯತೆಯಿದೆ. ಇವರ ಕವನ ಸಂಕಲನಗಳು ‘ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಮತ್ತೊಂದು ಸಂಕಲನ ‘ಮಳೆಬರಲಿ ಲೋಕದ ಎಲ್ಲರ ಮನೆಯಮೇಲೆ’, ಗದ್ಯ ವಿಮರ್ಶೆ ‘ದು:ಖ ಆರದ ನೆಲದಲ್ಲಿ’ ಇವುಗಳನ್ನು ಓದಿದಾಗ ಬುದ್ಧನ ಮೈತ್ರಿ, ಬುದ್ಧನ ಸಹನೆ, ಬುದ್ಧನ ಪ್ರೇಮದ ಸ್ಪರ್ಷವಾದಂತೆ ಅನುಭವವಾಗುತ್ತದೆ. ಏಕೆಂದರೆ ಇವರ ಗದ್ಯಬರಹದಲ್ಲಿ ಕಾವ್ಯದ ಸೌಂದರ್ಯವನ್ನು ಕಾಣಬಹುದು. ಮತ್ತೊಂದು ವಿಶೇಷವೆಂದರೆ ಕಾವ್ಯವನ್ನು ಓದಿದಾಗ ಆಗುವ ಅನುಭವ ಗದ್ಯವನ್ನು ಓದಿದಾಗಲೂ ಅದೇ ರೀತಿ ಭಾವಸ್ಪುರಣವಾಗುತ್ತದೆ. ಏಕೆಂದರೆ ಕವಿಯ ಮನಸ್ಸು ಸದಾ ಲೋಕದ ಗಾಯಗಳಿಗೆ ಔಷದಿಯಾಗುತ್ತಾ, ಮರುಗುತ್ತಾ, ಶಾಂತಿಗಾಗಿ ಪ್ರಾರ್ಥಿಸುತ್ತದೆ. ತನ್ನ ನೋವು ಲೋಕದ ನೋವಿನ ಭಾಗವೆಂದು ಅರ್ಥವಾದಾಗ ಕವಿಯೊಬ್ಬನ ಕಾವ್ಯ ಹೀಗೆ “ದುಃಖ ಆರದ ನೆಲದ” ಬದುಕನ್ನು ಎಲ್ಲರ ಎದೆಗಳಿಗೆ ದಾಟಿಸುತ್ತಾನೆ. ಎನ್ನುವುದು ಸುಬ್ಬಣ್ಣಾವರ ಬರಹಗಳಲ್ಲಿ ಮಾತಿನಲ್ಲಿ ನಡೆ-ನುಡಿಯಲ್ಲಿ ಕಾಣಬಹುದು.
ಯುದ್ಧ ಯುದ್ಧ ಎನ್ನುವ ಮುಂದುವರಿದ ರಾಷ್ಟ್ರಗಳ ದಾಹವು ಲೋಕದ ಜನರ ಎದೆಗಳಿಗೆ ಎಂದೂ ಶಾಂತಿಯನ್ನು ತರುವುದಿಲ್ಲ. ಯುದ್ಧಕ್ಕೆ ಮಿದುಳು ಮಾತ್ರ ಇದೆ ಹೃದಯವಿಲ್ಲ ಎನ್ನುವುದು ಸಾರ್ವಕಾಲಿಕ ಸತ್ಯ ಇಂತಹ ಜಾಗತಿಕ ಆತಂಕಗಳನ್ನು ನಿವಾರಿಸಲು ಕವಿಹೃದಯ ಮತ್ತು ಗಾಂಧೀ ಅಂಬೇಡ್ಕರ್ ಅವರಂತಹ ಮಾತೃಹೃದಯಗಳಿಂದ ಸಾಧ್ಯ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಏಕೆಂದರೆ ಪ್ರತಿಯೊಂದು ದೇಶದ ಬರಹಗಾರನನ್ನು ಆ ಪ್ರದೇಶದ ಜನಜೀವನ ಸಮಾಜ ರೂಪಿಸಲ್ಪಡುತ್ತದೆಯೇ ಹೊರತು ರಾಷ್ಟ್ರ ನಾಯಕರಿಂದ ನೇಮಕವಾಗುವುದಿಲ್ಲ. ರಾಜಕೀಯ ಹೊರತುಪಡಿಸಿದ ಜೀವಪ್ರೇಮ ಕಾವ್ಯ ಮತ್ತು ಕವಿಯನ್ನು ಜನರ ಎದೆಗಳಲ್ಲಿ ನಾಟಿಮಾಡಿಸುತ್ತದೆ. ಹೀಗೆ ಜನರ ಜನಮಾನಸದಲ್ಲಿ ಅಜರಾಮರರಾಗಿ ಉಳಿಯುವ ಕವಿ ಸಹಜ ಜೀವ ಪ್ರೇಮ ಮತ್ತು ರಾಷ್ಟçಪ್ರೇಮದ ಸಶಕ್ತ ಕವಿ ಎನಿಸಿಕೊಳ್ಳುತ್ತಾರೆ ಸೂಕ್ಷ್ಮ ಸಂವೇದಿ ಕವಿ ಸುಬ್ಬು ಹೊಲೆಯಾರ್ ಅವರು ಇಂತಹ ಕವಿಗಳ ಸಾಲಿನಲ್ಲಿ ಅಗ್ರಗಣ್ಯರಾಗಿದ್ದಾರೆ.
ಒಬ್ಬ ಬರಹಗಾರ ಏಕೆ ಮುಖ್ಯ ಎನ್ನುವ ಪ್ರಶ್ನೆಗೆ ಉತ್ತರವನ್ನು “ದುಃಖ ಆರದ ನೆಲ” ಕೃತಿಯ ಲೇಖನಗಳ ಕಟ್ಟಿನಲ್ಲಿ ಪಡೆಯಬಹುದು. “ಕಲ್ಲು ಕೂಡಾ ಕರಗುತ್ತದೆ ಮನುಷ್ಯನೇಕೆ ಚಿಗುರುತ್ತಿಲ್ಲ” ಲೇಖನದಲ್ಲಿ ‘ಒಂದು ಬಳ್ಳಿಯ ಎಲೆಯನ್ನು ಮುರಿದರೆ ಆ ಬಳ್ಳಿಗೆ ನೋವಾಗುತ್ತದೆ. ಎಂಬ ಸಾಮಾನ್ಯ ಜ್ಞಾನ ನಮಗೆ ಬಂದರೆ ನಾವು ಅರ್ಧ ಮನುಷ್ಯರಾದಂತೆ. ನಾವು ಪೂರ್ಣ ಮನುಷ್ಯರಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ’ ಎನ್ನುವ ಸುಬ್ಬಣ್ಣನವರ ಸಾಲುಗಳಲ್ಲಿ ಎನೆಲ್ಲಾ ಸಾಧಿಸುತ್ತಿರುವ ಮನುಷ್ಯಪ್ರಬೇಧ ಮನುಷ್ಯರಾಗುವತ್ತ ಸೋಲುತ್ತಿರುವುದೇಕೆ ? ಎನ್ನುವ ಪ್ರಶ್ನೆಯೂ ಇದೆ. ಇದೇ ಲೇಖನದಲ್ಲಿ ‘ಬಳ್ಳಿಯ ಎಲೆಮುರಿದಾಗ ಬಳ್ಳಿಗೂ ನೋವಾಗುತ್ತದೆ’ ಎನ್ನುವ ವಾತ್ಸಲ್ಯ, ಜೀವಪ್ರೇಮ ಮನುಷ್ಯನಲ್ಲಿ ಬಂದಾಗ ಮಾತ್ರ ಆತ ಮನುಷ್ಯನಾಗಲು ಅರ್ಹ ಎನ್ನುವ ಮಾತು ಸಮರ್ಥವಾಗಿ ಪ್ರತಿಪಾದಿತವಾಗಿದೆ. ಹೀಗೆ ವಾತ್ಸಲ್ಯದ ಗುಣ ಬರದೇ ಹೋದರೆ ಮನುಷ್ಯನಾಗದ ವಿಜ್ಞಾನಿ, ರಾಜಕಾರಣಿ, ಕವಿ, ಬರಹಾಗಾರ, ಹೀಗೆ ಸಮಾಜದ ಮುಖ್ಯವಾಹಿನಿಯ ಮುಖಂಡರು ಹೇಗೆ ಹಿಂಸೆಯ ಮಾರ್ಗದಾತರಾಗಿದ್ದಾರೆ ಎಂಬುದನ್ನು ಕಂಡಾಗ ಸುಬ್ಬಣ್ಣವರಂತಹ ಸೂಕ್ಷ್ಮ ಸಂವೇದಿ ಮನಸ್ಸಿನ ಕವಿಗಳ ಅಗತ್ಯ ಸಮಾಜಕ್ಕೆ ಎಷ್ಟುಬೇಕು ಎಂಬುದನ್ನು ಮಾನಗಾಣಬೇಕಿದೆ.
ಸುಬ್ಬಣ್ಣನವರ ಬದುಕು ಮತ್ತು ಕಾವ್ಯ ಬೇರೆಬೇರೆಯಲ್ಲ ಎನ್ನುವುದಕ್ಕೆ ಒಂದು ಉದಾಹರಣೆ ತಮ್ಮ ಬಳಿ ಹಂಚಿಕೊಳ್ಳುತ್ತೇನೆ. “ಸುಬ್ಬು ಸರ್ ಅವರು ಹೊಸದಾಗಿ ಕಟ್ಟಿಸಿದ ಅವರ ಮನೆಯ ಬಳಿ ಬೀದಿಯ ನಾಯಿಗಳು ವಾಸಿಸುತ್ತಿದ್ದವು. ಇವರ ಮನೆಯ ಸಾಕುನಾಯಿ ಇದ್ದರೂ ಬೀದಿ ನಾಯಿಗಳಿಗೆ ಕವಿಗಳಾದ ತಾಯಿಹೃದಯದ ಸುಬ್ಬಣ್ಣನವರು ಯಾವುದೇ ತಾರತಮ್ಯ ಮಾಡಿರಲಿಲ್ಲ, ತಮ್ಮ ಮನೆ ನಾಯಿಗೆ ಊಟ ಹಾಕಿದಂತೆ ಬೀದಿಯ ನಾಯಿಗಳಿಗೂ ಊಟಟ್ ಹಾಕುತ್ತಿದ್ದರು. ಮಳೆಗಾಲದಲ್ಲಿ ಅವುಗಳು ಮಲಗಲು ಜಾಗಮಾಡಿಕೊಟ್ಟಿದ್ದರು. ಹೀಗೆ ಅವರ ಮಾತೃವಾತ್ಸಲ್ಯವನ್ನು ಕಂಡು ಅನುಭವಿಸಿದವನು ನಾನು. ಒಂದು ದಿನ ಬೀದಿಯಲ್ಲಿದ್ದ ನಾಯಿಯಲ್ಲಿ ಒಂದು ಮರಿ ಹಾಕಿತ್ತು. ಕೆಲವು ಮರಿಗಳನ್ನು ಯಾರೋ ತೆಗೆದುಕೊಂಡು ಹೋಗಿದ್ದರು ಒಂದೆರಡು ತಾಯಿಯಬಳಿ ಇದ್ದವು. ಒಂದು ದಿನ ನೀರಿನ ಟ್ಯಾಂಕರ್ ಒಂದು ಮನೆಯ ಬಳಿ ಮಲಗಿದ್ದ ನಾಯಿಮರಿಗಳ ಮೇಲೆ ತನ್ನ ಪ್ರತಾಪ ತೋರಿಸಿ ಒಂದು ಮರಿಗೆ ಅಪ್ಘಾತವಾಗಿತ್ತು ಸುಬ್ಬಣ್ಣ ಬಂದವರೇ ಆ ನಾಯಿಮರಿಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ ಮನೆಗೆ ಕರೆದು ತಂದಿದ್ದರು. ನಾನು ಅವರ ಮನೆಗೆ ಹೋದಾಗ ಆ ನಾಯಿಮರಿ ಸಾವು ಬದುಕಿನ ನಡುವೆ ಹೋರಾಡಿ ತನ್ನ ಜೀವ ಬಿಟ್ಟಿತ್ತು ಸುಬ್ಬು ಸರ್ ೩ ನೇ ಮಹಡಿಯಲ್ಲಿ ಇದ್ದರು ಕವಿತಕ್ಕ ಅಳುತ್ತಾ ಈ ವಿಷಯ ನಿಮ್ಮ ಸರ್ ಗೆ ತಿಳಿಸಬೇಡಿ ಅವರು ಆತಂಕಕ್ಕೆ ಒಳಗಾಗುತ್ತರೆ ಎಂದು ನನಗೆ ತಿಳಿಸಿದ್ದರಿಂದ ನಾನು ಹಾಗೇ ಮಾಡಿದೆ ಆದರೆ ಏಕೋ ಮನಸ್ಸಿಗೆ ಸಮಾಧಾನ ಇಲ್ಲ ಎಂದ ಸುಬ್ಬಣ್ಣ ಕೆಳಗೆ ಬಂದು ನೋಡಿ ಪ್ರಾಣಬಿಟ್ತ ನಾಯಿ ಮರಿಗೆ ನೀರು ಬಿಟ್ಟು ಮಕ್ಕಳಂತೆ ಅಳುತ್ತಿದ್ದರು. ಆಘಟನೆ ನೋಡಿ ನನಗೆ ದುಃಖವಾದರೂ ಕಣ್ಣೀರು ಬರಲಿಲ್ಲ”. ಸುಬ್ಬು ಸರ್ ಅವರ ಮಾತೃತ್ವ ಗುಣ ನನ್ನಲ್ಲಿ ಇನ್ನು ಮಾಗಲಿಲ್ಲ ಅನ್ನಿಸಿತು. ದಲಿತ ಸಂಘರ್ಷ ಸಮಿತಿ ಹೋರಾಟಗಳಲ್ಲಿ ಬೆಂಕಿಯ ಚೆಂಡಿನAತೆ ಮಾತನಾಡುವ ಅಣ್ಣ ಅವರ ಮನಸ್ಸು ತಾಯಿಯ ಹೃದಯ ಲೋಕದ ಸಮಸ್ಯೆಗಳಿಗೆ ತಾಯಿಯಾಗಿ ಉತ್ತರಿಸುತ್ತದೆ.
ತಮ್ಮ ಅನುಭವಗಳನ್ನು ಬರಹರೂಪಕ್ಕೆ ತರುವ ಸುಬ್ಬಣ್ಣನವರ ಅನುಭವ ಅದು ನೀರಿನಂತೆ ನಿರ್ಮಲ ಮತ್ತು ಗಾಳಿಯಷ್ಟೇ ಕೋಮಲವಾದದ್ದು. ಸುಬ್ಬಣ್ಣನವರು ಅಸ್ಪೃಷ್ಯತೆಯ ಕುರಿತು ಹೋರಾಟ ಮಾಡಿದ್ದರಿಂದ ಮತ್ತು ಹೆಚ್ಚು ಶೋಷಿತರ ಬಗ್ಗೆ ಮಾತನಾಡಿದ್ದರಿಂದ ಅವರನ್ನು ದಲಿತಕವಿ ಎಂದು ಸಾಮಾನ್ಯವಾಗಿ ಕರೆಯುವುದುಂಟು ಆದರೆ ಅವರು ದಲಿತ ಎನ್ನಲು ನನಗೆ ಸಂತೋಷ ಎನ್ನುವಾಗ ನನ್ನ ಸಂತೋಷವೂ ಅಲ್ಲಿ ಅರಳುತ್ತದೆ.
ಸುಬ್ಬಣ್ಣ ದಲಿತರ, ನೊಂದವರ, ಬಡವರ ಜನಸಾಮಾನ್ಯರ ಕವಿಯೂ ಹೇಗೋ ಏಕಕಾಲಕ್ಕೆ ಪ್ರಕೃತಿಯ ಕವಿಯೂ ಹೌದು. ಇವರ ಕಾವ್ಯಗಳಲ್ಲಿ ‘ಮಳೆ’ ಗೆ ವಿಶಿಷ್ಟ ಸ್ಥಾನವಿದೆ. ಸಕಲೇಶಪುರದ ಪ್ರಕೃತಿಯ ಮಡಿಲು ಹೆತ್ತೂರು ಅವರ ಊರು. ಅವರ ಬಾಲ್ಯ ಮತ್ತು ತಮ್ಮ ಹರೆಯದ ದಿನಗಳಲ್ಲಿ ತಾವು ಅನುಭವಿಸಿದ ಮಳೆಯ ಸೌಂದರ್ಯ ಮತ್ತು ಮಾತೃತ್ವವನ್ನು ತಮ್ಮ ಕವಿತೆಗಳಲ್ಲಿ ಅನಾವರಣಗೊಳಿಸಿದ್ದಾರೆ. ‘ಮಳೆ ಬರಲಿ ಲೋಕದ ಎಲ್ಲರ ಮನೆಯಮೇಲೆ’ ಎನ್ನುವ ಅವರ ಕವಿತೆಯ ಸಾಲು ಆ ಮಲೆನಾಡಿನ ಮಳೆಯ ಮಾತೃತ್ವವನ್ನು ಬುದ್ಧ ನೋಡಿದ ಹಾಗೆ ನೋಡಿ ತಾವು ಅನುಭವಿಸಿ ಕಾವ್ಯಬರೆದಿದ್ದಾರೆ ಜೊತೆಯಲ್ಲಿ ಕಾವ್ಯದಂತೆ ಬದುಕಿದ್ದಾರೆ. ಹಾಗಾಗಿ ಲೋಕದ ಎಲ್ಲರಿಗೂ ಒಳಿತನ್ನು ಧ್ಯಾನಿಸುವ ಅವರ ಗುಣ ಕವಿತ್ವ ಮಾತ್ರವಾಗಿರದೆ ನಿಜ ಮನುಷ್ಯನ ಅನುಭೂತಿಯೂ ಸಹ ಆಗಿದೆ.
ಕನ್ನಡದ ವರ್ತಮಾನದ ದಿನಗಳಲ್ಲಿ ಕಾಣುತ್ತಿರುವ ಕಾವ್ಯಲೋಕದ ಹೊಸ ಬೆಳೆಯನ್ನು ಕಂಡಾಗ ಇವರು ಎಂದು ನಿರಾಶರಾಗಿಲ್ಲ, ಬದಲಾಗಿ ಅದನ್ನು ಮತಷ್ಟು ಹುಲುಸಾಗಿ ಬೆಳೆಯಲು ಬೇಕಾದ ಜೀವಪೋಷಕ ತತ್ವವನ್ನು ತಮ್ಮ ಮಾತುಗಳಿಂದ ಹೊಸ ಪಿಳಿಗೆಯ ಬರಹಗಾರರ ಎದೆಗಳಿಗೆ ದಾಟಿಸುತ್ತಾರೆ. ಖಂಡಿತವಾದಿಯಾಗಿಯೂ ಆಶಾವಾದಿಯಾಗಿರುವ ಅವರಲ್ಲಿ ಕಾವ್ಯದ ವಸಂತಕಾಲ ಎಂದೆ೦ದಿಗೂ ಹಾಗೆಯೇಯಿದೆ ಅದು ಬೇಸಿಗೆ ಬರಲಿ, ಮಳೆಗಾಲವಿರಲಿ, ಚಳಿಗಾಲವಿರಲಿ ಎಲ್ಲಾ ಕಾಲಗಳಲ್ಲಿಯೂ ಹೂಬಿಡುವ ವಸಂತನನ್ನು ತಮಗಾಗಿ ಅಲ್ಲ ಇತರರ ಏಳಿಗೆಗಾಗಿ ಕರೆತಂದು ಹೂಮಳೆ ತರಿಸುತ್ತಾರೆ. ಇಂದಿಗೂ ವಿದ್ಯಾರ್ಥಿಗಳ ಪರವಾಗಿ, ಯುವಕರಿಗೆ ಕೆಲಸ ಕೊಡಿಸಲು ತಮ್ಮ ಅನಾರೋಗ್ಯವನ್ನು ಬದಿಗೊತ್ತಿ ವಿದಾನಸೌಧಕ್ಕೆ ಹೋಗಿ ಕೆಲಸಮಾಡಿಸುತ್ತಾರೆ. ತಮಗಾಗಿ ಏನನ್ನೂ ಕೇಳದ ಸುಬ್ಬಣ್ಣ ಲೋಕದ ನೋವಿಗೆ ಪ್ರಾರ್ಥಿಸುತ್ತಾರೆ.
ಪ್ರಾರ್ಥಿಸುವುದು ಮಾತ್ರವಲ್ಲ ತಾವೇ ಸ್ವತಃ ಆ ಕೆಲಸವನ್ನು ಶ್ರಮಪಟ್ಟು ಮಾಡಿಸುತ್ತಾರೆ. ಸುಬ್ಬಣ್ಣ ಎನ್ನುವ ಜೈಭೀಮ್ ಆಲದ ಮರದಲ್ಲಿ ನನ್ನಂತಹ ಅದೆಷ್ಟೋ ಅಲೆಮಾರಿ ಹಕ್ಕಿಗಳು ಆಶ್ರಯ ಪಡೆದು ಅನ್ನದ ಮಾರ್ಗ ಕಂದುಕೊ೦ಡಿವೆ. ಅದೆಷ್ಟೋ ಕ್ರೀಡಾಪಟುಗಳು ತಮ್ಮ ಸಾಧನೆಗೆ ಪ್ರೊತ್ಸಾಹ ಪಡೆದಿದ್ದಾರೆ. ದೇವದಾಸಿಯರ, ನೊಂದವರ ಬಗ್ಗೆ ಕಾಳಜಿಯಿಂದ ಕೆಲಸಮಾಡುವ ಕವಿಹೃದಯದ ಸುಬ್ಬಣ್ಣ : ದುಃಖ ಆರದ ನೆಲದಲ್ಲಿ” ಕುಳಿತು ದುಃಖವನ್ನು ಕಡಿಮೆ ಮಾಡಲು ಪ್ರಾರ್ಥಿಸುತ್ತಾರೆ ಮತ್ತು ಕೆಲಸಮಾಡುತ್ತಾರೆ. ಬುದ್ಧನ ಕರುಣೆಯ ಅಂಶ ಈ ನೆಲದ ದುಃಖವನ್ನು ನೀಗಿಸಲು ಅವರ ಕಾವ್ಯದಲ್ಲಿ ಮತ್ತು ಕ್ರಿಯೆಯಲ್ಲಿ ಒಡಮೂಡಿವೆ ಈ ಒಳಿತಿನ ಬೀಜಗಳು ನಮ್ಮ ಎದೆಯಲ್ಲಿಯೂ ನಾಟಿಮಾಡಲ್ಪಡಲಿ ಅಲ್ಲಿ ಮಳೆಬರಲಿ ಎಂದು ಪ್ರಾರ್ಥಿಸೋಣ : ಇದು ನಾನು ಕಂಡ ಸುಬ್ಬಣ್ಣನವರ ಬದುಕಿನ ಒಂದು ತುಣುಕು ಅಷ್ಟೇ ಆದರೆ ಅವರ ಅಗಾಧ ಆತ್ಮವಿಶ್ವಾಸ, ನೊಂದವರ ಕಣ್ಣೀರನ್ನು ಒರೆಸಲು ಅವರು ಮಿಡಿಯುವ ಹೃದಯ ಎನ್ನುವುದನ್ನು ನನ್ನ ವಿಮರ್ಶೆಯ ಕನ್ನಡಿಯಲ್ಲಿ ನೋಡಿ ಬರೆದಿದ್ದೇನೆ ಎನ್ನುವುದನ್ನು ಓದುಗರು ಪರಿಗಣಿಸಬೇಕು. ಕವಿಗಳ ಆಪ್ತನ ಬರಹ ಎಂದು ಉಪೇಕ್ಷಿಸಬೇಡಿ ಅನ್ಯಾಯದ ಈ ಜಗತ್ತಿನಲ್ಲಿ ತಾನು ನ್ಯಾಯವಾಗಿ ಬದುಕಲು ಮಾತ್ರವಲ್ಲ ಯಾರೂ ಇಲ್ಲದವರಿಗೆ ತಾಯಾಗಿ ಬದುಕುವ ಸುಬ್ಬಣ್ಣನಂತಹ ಕವಿಗಳ ಸಂಖ್ಯೆ ಸಾವಿರವಾಗಲಿ ಎಂದು ಈ ಲೇಖನ ಬರೆದಿದ್ದೇನೆ ನಮಸ್ಕಾರ.






0 Comments