
–ಡಾ.ಎಚ್.ಆರ್.ಸ್ವಾಮಿ
ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನನಾದ ಶಿವಾನಂದ ತಗಡೂರಿಗೆ ಹಾಸನ ಜಿಲ್ಲೆಯ ಪರವಾಗಿ ಎದೆ ತುಂಬಿದ ಅಭಿನಂದನೆಗಳು…
ಒಬ್ಬ ಪತ್ರಕರ್ತ ಜನರ ಬದುಕಿನ ನಡುವೆ ಬೆರೆತಾಗ ಸಾಮಾಜಿಕ ಜವಾಬ್ದಾರಿ ತಾನಾಗಿಯೇ ಬೆನ್ನಿಗೆ ಅಂಟಿಕೊಳ್ಳುತ್ತದೆ ಎಂಬುದಕ್ಕೆ ತಗಡು ಎಂದು ಪ್ರೀತಿಯಿಂದ ನಾನು ಕರೆಯುತಿದ್ದ ಶಿವಾನಂದ ತಗಡೂರು ಅತ್ಯುತ್ತಮವಾದ ಉದಾಹರಣೆ. ಆಗತಾನೆ ಭಾವೈಕ್ಯತೆಗಾಗಿ, ಪರಿಸರದ ಅರಿವು ಮೂಡಿಸುವ, ಅಕ್ಷರದ ಅಗತ್ಯ, ವೈಜ್ಞಾನಿಕ ಮನೋಭಾವ ಕುರಿತು ಹಾಸನ ಜಿಲ್ಲಾದ್ಯಂತ ಜ.ಹೊ.ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ, ಭಾರತ ಜ್ಞಾನ ವಿಜ್ಞಾನ ಜಾಥಾ 1990, ಭಾರತ ಜನ ಜ್ಞಾನ ವಿಜ್ಞಾನ ಜಾಥಾ 1992ರ ಕಾರ್ಯದರ್ಶಿಯಾಗಿ ನಾನು, ಸಂಚಾಲಕರಾಗಿ ಅಪ್ಪಾಜಿ ಗೌಡ ಹಳ್ಳಿಹಳ್ಳಿ ಸುತ್ತಿ ಅದೇ ಗುಂಗಿನಲ್ಲಿ ಇದ್ದೆವು. ರಾಷ್ಟ್ರೀಯ ಸಾಕ್ಷರತಾ ಆಂದೋಲನ 1993 ದೇಶವ್ಯಾಪಿ ಹರಡಿದಾಗ ಸಾಕ್ಷರತೆ ಕುರಿತು ಕಾಳಜಿ ಹೊಂದಿದ್ದ BGVS ಸಂಸ್ಥೆಯನ್ನು ಅಂದಿನ ಜಿಲ್ಲಾಧಿಕಾರಿ ಮಹೇಂದ್ರ ಜೈನ್ ಜಿಲ್ಲಾ ಸಮಿತಿ ರಚಿಸಿ, ನಮಗೆ ಜವಾಬ್ದಾರಿ ವಹಿಸಿದರು. ಜಿಲ್ಲಾ ವಾತಾವರಣ ಸಮಿತಿಯ ಸಂಚಾಲಕನಾಗಿ ಕೆಲಸ ಮಾಡಲು ನನ್ನನ್ನು ಡೆಪ್ಟೇಶನ್ (ಅನ್ಯಕಾರ್ಯ ನಿಮಿತ್ತ) ನಿಯಮಿಸಿದರು. ಜಿಲ್ಲಾದ್ಯಂತ ಎಂಟು ಕಲಾ ತಂಡಗಳನ್ನು ರಚಿಸಿ, ತರಬೇತಿ ನೀಡಿ, ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲು ಸಿದ್ಧರಾದೆವು.

ಹಾಸನದ ಇಂದಿನ ನೂತನ ಜಿಲ್ಲಾ ಪಂಚಾಯಿತಿ ಸ್ಥಳದಲ್ಲಿ ಅಂದು ಇದ್ದ ಹಳೇ ಕಟ್ಟಡವೇ ಜಿಲ್ಲಾ ಸಾಕ್ಷರತಾ ಕಛೇರಿ. ಒಂದು ಸಂಜೆ ಕಛೇರಿಯಲ್ಲಿ ರಂಗ ಕಲಾವಿದ ಷಾಡ್ರಾಕ್, ಚಿತ್ರ ಕಲಾವಿದ ಯಾಕೂಬ್, ಸಂಚಾಲಕಿ ಶ್ರೀಮತಿ ಅನುಪಮ ಕುಳಿತು ಚರ್ಚಿಸುತ್ತಿರುವಾಗ, ಅಂದಿನ ಜನತಾ ಮಾಧ್ಯಮ ದಿನ ಪತ್ರಿಕೆಯ ಸಂಪಾದಕರು, ಸಾಕ್ಷರತಾ ಸಮಿತಿಯ ಸದಸ್ಯರಾದ ಆರ್ ಪಿ ವೆಂಕಟೇಶ್ ಮೂರ್ತಿ ಹಸಿರು ಟಿ ಶರ್ಟ್ ತೊಟ್ಟಿದ್ದ, ಹೆಗಲಲ್ಲಿ ಕೈ ಚೀಲ ಧರಿಸಿದ್ದ ಗಡ್ಡಧಾರಿ ಯುವಕನೊಟ್ಟಿಗೆ ಬಂದು ‘ಇವರು ಸಾಕ್ಷರತಾ ಆಂದೋಲನದಲ್ಲಿ ಸೇವೆ ಮಾಡಲು ಇಚ್ಚಿಸಿದ್ದಾರೆ’ ಎಂದು ಪರಿಚಯಿಸಿದರು. ಆ ಯುವಕನೆ ಇಂದಿನ ಶಿವಾನಂದ ತಗಡೂರು. ಸ್ಥಳೀಯ ದಿನಪತ್ರಿಕೆಗಳಾದ ಜನಮಿತ್ರ, ಜ್ಞಾನ ದೀಪಗಳಲ್ಲಿ ಪತ್ರಕರ್ತನಾಗಿ ಕೆಲಸಮಾಡುತ್ತಿದ್ದ ಇವರಿಗೆ ಸಮಿತಿಯಲ್ಲಿ ಮೌಲ್ಯಮಾಪನ ಸಂಚಾಲಕರಾಗಿ, ಪ್ರಚಾರ ಸಮಿತಿಯ ಜವಾಬ್ದಾರಿ ಕೊಡಲಾಯಿತು. ಕಲಾವಿದನಾಗಿಯೂ ನಮ್ಮೊಟ್ಟಿಗೆ ಬೆರೆತ ಶಿವು, ಹಿರಿಯ ರಂಗಕಲಾವಿದರಾದ ಸಣ್ಣೇಗೌಡ, ಅಪ್ಪಾಜಿ, ಷಾಡ್ರಾಕ್ ಜೊತೆಗೂಡಿ ‘ರಂಗ ಸಿರಿ’ ಕಲಾ ತಂಡವನ್ನು ಹಾಸನದಲ್ಲಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಂಗ್ಯ ಬಾಳ್ಯಾ, ಬಾಗೂರು ನವಿಲೆ ಹೋರಾಟದ ಸಮಸ್ಯೆ ಕುರಿತ ರಾಜಕಾರಣಿಗಳ ಕೈವಾಡವನ್ನು ನಿರ್ಭಯವಾಗಿ ‘ತೆಂಕ ಬಡಗ’ ಎಂಬ ಕೇಸರಿ ಹರವು ನಿರ್ದೇಶನದ ನಾಟಕದಲ್ಲಿ ರಾಜಕಾರಣಿ ಪಾತ್ರ ವಹಿಸಿ, ಚನ್ನರಾಯಪಟ್ಟಣ, ಹಾಸನ, ತಗಡೂರು ಜನರ ಮುಂದಿಟ್ಟರು.

ಕಲಾಭವನ ಕಟ್ಟಡ ಅರ್ಧಕ್ಕೆ ನಿಂತಿದ್ದಾಗ ಪದೇಪದೇ ಪತ್ರಿಕಾ ವರದಿ ಮಾಡಿ, ಕಲಾವಿದರನ್ನು ಒಗ್ಗೂಡಿಸಿ ಸರ್ಕಾರಕ್ಕೆ, ಅಧಿಕಾರಿಗಳಿಗೆ ಒತ್ತಡ ಹೇರಿ ಹಾಸನಾಂಬ ಕಲಾಮಂದಿರಕ್ಕೆ ಹೊಸ ರೂಪ ಕೊಟ್ಟು ಸಂಘಟಿಸಿದವರಲ್ಲಿ ಶಿವಾನಂದ ಪಾತ್ರ ಪ್ರಮುಖವಾಗಿದೆ. ತನಿಖಾ ವರದಿಗಾಗಿ ಕಾಡು ಮನೆಯ ಕಾಡಿನಲ್ಲಿ ಗೆಳೆಯ ಷಾಡ್ರಾಕ್ ನೊಟ್ಟಿಗೆ CD100 ಬೈಕ್ ನಲ್ಲಿ ಸುತ್ತಿ ‘ಈ ವಾರ ಕರ್ನಾಟಕದಲ್ಲಿ’ ವರದಿ ಮಾಡಿದಾಗ ಜೀವಬೆದರಿಕೆಗೆ ಕೇರ್ ಮಾಡದೆ ಇದ್ದವ ತಗಡೂರು.
ಜನ ವಾಹಿನಿ,ವಿಜಯ ಕರ್ನಾಟಕದಲ್ಲಿ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬೆಂಗಳೂರು ಸೇರಿದ ಶಿವು, ವಿಜಯವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷನಾಗಿ ಆಯ್ಕೆಯಾದ. ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಮಟ್ಟದಲ್ಲಿ ತನ್ನ ವೈಯಕ್ತಿಕ ಆರೋಗ್ಯವನ್ನು ಲೆಕ್ಕಿಸದೆ ಅನಾಥ ಶವಗಳ ಕುಟುಂಬಗಳಿಗಾಗಿ ಹೋರಾಡಿ ಸಹಾಯಮಾಡಿಸಿದ ನಿನ್ನ ಸೇವೆಗೆ ಕಾರಣ ನಿನ್ನ ಹಿಂದಣ ಹೆಜ್ಜೆಗಳಾದ ರಂಗಭೂಮಿ, ಅಕ್ಷರ, ರೈತ ಚಳವಳಿಗಳೇ ಆಗಿವೆ. ಹ್ಯಾಟ್ಸ್ ಆಫ್ ಟು ಯು.






0 Comments