-ಜೆ ಶ್ರೀನಿವಾಸ ಮೂರ್ತಿ
ನಲವತ್ತೈದು- ನಲವತ್ತಾರು ವಷ೯ದ ಹಿಂದಿನ ಮಾತು, ಎನ್.ಎಸ್ ಡಿ ಅಲ್ಲಿ ಬಿ. ವಿ. ಕಾರಂತರು ಚಂದ್ರಗುಪ್ತ ನಾಟಕವನ್ನು ಮಾಡಿಸಿದ್ದರು. ಆ ನಾಟಕದಲ್ಲಿ ಚಂದ್ರಗುಪ್ತನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಚಾಣಾಕ್ಯ ನಾಟಕದ ಕೊನೆಗೆ ʼʼನನ್ನ ಕೆಲಸವಾಯಿತು, ನಾನಿನ್ನು ನನ್ನ ಕುಟೀರಕ್ಕೆ ಹೊಗುತ್ತೇನೆ…ʼʼ ಎಂದು ನಿಷ್ಕ್ರಮಿಸುತ್ತಾನೆ, ಎಲ್ಲರಿಗೂ ಒಂದು ರೀತಿ ನಿಟ್ಟುಸಿರು ಬಂದಿರುತ್ತದೆ,, ಆದರೆ ಅಷ್ಟರಲ್ಲಿ ಪಟ್ ಪಟ್ ಮರದ ಹಾವುಗೆ ಶಬ್ದ ಕೇಳಿಸುತ್ತದೆ. ನಿಧಾನಕ್ಕೆ ಮತ್ತೆ ಪ್ರವೇಶ ತೆಗೆದುಕೊಂಡು ರಂಗದ ಮೇಲಿನಿಂದ ಹಿಂದೆ ಒಳಗಡೆ ಹಾಗೇ ಹೊರಟುಹೋಗುತ್ತನೆ ಚಾಣಕ್ಯನ. ಆ ಎತ್ತರ, ಗತ್ತು, ಗಾಂಭೀಯ೯ ಸಂಕೀಣ೯ವಾದ ಆ ಚಾಣಾಕ್ಯನ ಪಾತ್ರ ಮಾಡಿದ್ದವರು ಚಿದಂಬರರಾವ್ ಜೆಂಬೆ. ಕೆಂಪಗೆ ಹೊಳೆಯುವ ಸ್ಫುರದ್ರೂಪಿ, ಜೊತೆಗಾರರ ಮಧ್ಯದಲ್ಲಿಯೂ ಹಿರಿತನದ ಗಾಂಭೀಯ೯, ಸಾಗರದ ಸಣ್ಣ ಹಳ್ಳಿಯಿಂದ ಬೆಂಗಳೂರಿನ ಹೊಟೇಲ್ ಮಾಣಿಯಾಗಿ ಬಂದು ಅದೃಷ್ಟವಶಾತ್ NSD ಗೆ ಹೋಗಿ ಬಿ ವಿ ಕಾರಂತರ ಸಾರಥ್ಯದಲ್ಲಿ ರಂಗ ತರಬೇತಿ ಪಡೆದದ್ದು ಒಂದು ಘಟ್ಟವಾದರೆ, ಅಲ್ಲಿಂದ ಹಿಂತಿರುಗಿ ಊರ ಹತ್ತಿರದ ಹೆಗ್ಗೋಡಿಗೆ ಹೋಗಿ, ಆಗ ತಾನೇ ಕೆ.ವಿ ಸುಬ್ಬಣ್ಣ ಆರಂಭಿಸಿದ ನೀನಾಸಂ ರಂಗ ಶಾಲೆಯ ಪ್ರಾಂಶುಪಾಲರಾಗಿದ್ದು ಮುಂದಿನ ಘಟ್ಟ. ಕನಾ೯ಟಕದಲ್ಲಿ ಸ್ಥಾಪನೆಗೊಂಡ ಮೊದಲ ರೆಸಿಡೆನ್ಸಿಯಲ್ ಪೂಣಾ೯ವಧಿಯ ಶಾಲೆ ಅದಾಗಿತ್ತು.ಇಪ್ಪತ್ತೆರಡು ವಷ೯ ಅದರ ನೇತೃತ್ವ ವಹಿಸಿ, ಅತ್ಯಂತ ಶಿಸ್ತು ಬದ್ದವಾಗಿ ಶಾಲೆ ನಡೆಸಿದ್ದಲ್ಲದೆ, ಆ ತಲೆಮಾರಿನ ರಂಗ ವಿದ್ಯಾಥಿ೯ಗಳಿಗೆ ಅತ್ಯಂತ ಆತ್ಮೀಯರೂ ಆದರು. ತರಗತಿಗಳಲ್ಲಿ ಬೋಧನೆ ಮಾಡುವುದಾಗಲಿ, ಅದರ ಭಾಗವಾಗಿ ಸೀನ್ ವಕ್‌೯ ಮಾಡಿಸುವುದು, ವಷ೯ದಲ್ಲಿ ನಾಟಕವಾಡಿಸುವುದು, ಒಂದು ಭಾಗವಾದರೆ ತರಗತಿಯಲ್ಲಿ ವೃತ್ತಿ ಪರತೆಯನ್ನು ಬೆಳೆಸಿಕೊಂಡ ವಿದ್ಯಾಥಿ೯ಗಳನ್ನು ಸೇರಿಸಿಕೊಂಡು ನೀನಾಸಂ ತಿರುಗಾಟವನ್ನು ರೂಪಿಸಿದಾಗ ವೃತ್ತಿಪರವಾಗಿ ರಂಗ ಕೃತಿಗಳನ್ನು ಕಟ್ಟಿದ್ದು ಇನ್ನೊಂದು ಮಹತ್ವದ ಕೆಲಸ. ರಿಯಲಿಸ್ಟಿಕ್ ನಾಟಕಗಳನ್ನ ಇಷ್ಟಪಟ್ಟು ಮೊದಲು ಗಮನ ಸೆಳೆಯುವ ರಂಗ ಕೃತಿಗಳನ್ನು ನಿಮಿ೯ಸಿದವರು ಜೆಂಬೆ, ಅವರ ಚಿರ ಬಂದೇವಾಡಿ, ಚೆರ್ರಿ ಆಚ್‌೯ರ್ಡ್ ದಶಕಗಳಾದರೂ ನೆನಪಿಡುವಂತಹ ಪ್ರಯೋಗಗಳು. ಇಪ್ಪತ್ತೆರಡು ಬ್ಯಾಚ್ ಗಳ ವಿದ್ಯಾಥಿ೯ಗಳನ್ನು ಕನ್ನಡ ರಂಗಭೂಮಿಯಲ್ಲಿ ಪ್ರಭಾವಗೊಳಿಸಿ ಕೊಟ್ಟ ಕೀತಿ೯ ಇವರದ್ದು.
ಅತ್ಯಂತ ಕಠಿಣವಾದ ಸಂಗತಿಗಳನ್ನು ಸರಳವಾಗಿ ತಿಳಿಸಿಕೊಡಬಲ್ಲವರಾಗಿದ್ದರು. ಬೆಳಗಾವಿಯ ಶಿಬಿರವೊಂದರಲ್ಲಿ ಸೀಮಿಯಾಟಿಕ್ಸ್( ಸಂಜ್ಞಾಶಾಸ್ತ್ರ) ಕುರಿತು ಮಾತನಾಡುವಾಗ ʼʼಸ್ವತಃ ಅಥ೯ವಿಲ್ಲದ ಅಕ್ಷರಗಳಿಂದ ಅಥ೯ವಿರುವ ಪದ, ವಾಕ್ಯಗಳನ್ನು ಕಟ್ಟುವ ಹಾಗೆ ಸಂಜ್ಞೆಗಳನ್ನು ಸೇರಿಸಿ, ಕಲೆಯನ್ನು ಕಟ್ಟುವ ಬಗೆ ಎಂತಹದ್ದುʼʼ ಎನ್ನುವುದನ್ನು ವಿವರಿಸಿದ್ದರು.
ಜೀವನದ ಉತ್ತರಾಧ೯ದಲ್ಲಿ ರಂಗಾಯಣ, ಸಾಣೇಹಳ್ಳಿ ಶಿವಸಂಚಾರ, ಬೆಂಗಳೂರಿನ NSD ಸಂಪನ್ಮೂಲ ಕೇಂದ್ರ ಇವುಗಳ ನಿದೇ೯ಶಕ/ ಮುಖ್ಯಸ್ಥರಾಗಿ ಕಾಯ೯ ನಿವ೯ಹಿಸಿದ್ದರು. ತಮ್ಮಲ್ಲಿ ಕಲಿತವರನ್ನು ಆರಿಸಿ, ಮುಂದೆ ತಮ್ಮ ಜೊತೆಯಲ್ಲಿ ಕಲಿಸುವ ಕೆಲಸಕ್ಕೂ ಸೇರಿಸಿಕೊಂಡು ಬೆಳೆಸಿದರು. ಒಂದು ರೀತಿಯಲ್ಲಿ ಕನಾ೯ಟಕದಲ್ಲಿ ಅತ್ಯಂತ ವ್ಯಾಪಕವಾಗಿ ಗುರುತಿಸಲಾದ ರಂಗ ಗುರು ಇವರೆ. ರಂಗಾಯಣದಲ್ಲಿ ವಿಕ್ರಮೋವ೯ಶಿಯ , ಬೆಂಗಳೂರು NSD ಅಲ್ಲಿ ಉತ್ತರ ರಾಮಚರಿತ, ಮುಂದೆ ಹವ್ಯಾಸಿ ತಂಡದಲ್ಲಿ ಮೃಚ್ಚಕಟಿಕ, ಹೀಗೆ ನಾಟಕಗಳನ್ನು ಮಾಡಿಸುವಾಗ ಅವರ ಜೊತೆಗೂ ಇರುವ ವಿಶೇಷ ಅವಕಾಶ ನನಗಿತ್ತು. ನಾನು ವೇದಿಕೆಯ ಮೇಲೆ ಭಾಷಣ ಮಾಡುವವನು, ಅವರು ರಂಗದ ಮೇಲೆ ನಾಟಕ ಆಡಿಸುವವರು ಆದರೆ ನಾವಿಬ್ಬರೂ ಸೇರಿದಾಗ ಒಂದು ನಾಟಕವನ್ನು ಗ್ರಹಿಸುವ ವಿಧಾನವನ್ನು ಕೆಲವೇ ಸೂಚನೆ ಮತ್ತು ಪ್ರತಿಮೆಗಳ ಮೂಲಕ ಹೇಗೆ ಮಾಡಬೇಕೆನ್ನುವುದನ್ನು ನಾನು ಅವರಿಂದ ಕಲಿತಿದ್ದೇನೆ. ತರಗತಿಯಲ್ಲಿ ವಷ೯ವಿಡೀ ಪಾಠ ಹೇಳಿ ಅಥ೯ ಹೇಳುವುದನ್ನು ಒಂದೆರಡು ಮೂರು ಗಂಟೆಗಳಲ್ಲಿ ರಂಗದ ಮೇಲೆ ತೋರಿಸಬೇಕಾದ ʼʼಅಥ೯ʼʼವಾಗಿ ಪರಿಣಮಿಸುವುದು ಹೇಗೆ? ಇಂತಹ ನಿದೇ೯ಶಕ ಧ್ಯಾನವನ್ನು ಹಲವು ಸಲ ಅವರು ಹಂಚಿಕೊಂಡಿರುವುದಿದೆ.ವೃತ್ತಿಪರರನ್ನೂ ಕಟ್ಟಿಬೆಳೆಸಿದ ಜೆಂಬೆ , ಕಳೆದ ಹತ್ತು- ಹನ್ನೊಂದು ವಷ೯ಗಳಲ್ಲಿ ಹವ್ಯಾಸಿ ತಂಡಗಳ ಜೊತೆಗೂ ಕೆಲಸ ಮಾಡಿದವರು. ಅಲ್ಲಿ ಅವರಿಗಿದ್ದ ದೊಡ್ಡ ತೊಡಕೆಂದರೆ, ಅವರಂದು ಕೊಂಡಂತೆ ಧ್ಯಾನಸ್ಥವಾಗಿ ನಾಟಕ ಕಟ್ಟುವ ಕೆಲಸಕ್ಕೆ ನಟರು , ತಾಂತ್ರಿಕ ವಗ೯, ಸಾವಧಾನವಾಗಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು. ಆದರೂ ಉತ್ಸಾಹಿ ಯುವಕರೊಂದಿಗೆ, ಕೆಲಸ ಮಾಡುವುದನ್ನು ಬಿಡಲಿಲ್ಲ. ಯಾವುದೇ ಒಂದು ರೀತಿಯ ನಾಟಕಗಳಿಗೆ, ಅಥವಾ ಪ್ರಕಾರಗಳಿಗೆ ಕಟ್ಟು ಬೀಳದ ಜೆಂಬೆ, ಸಂಸ್ಕೃತ , ರಷ್ಯನ್, ಮರಾಠಿ, ಹಿಂದಿ, ಯಾವುದೇ ಭಾಷೆಯ ವಿವಿಧ ರೀತಿಯ ನಾಟಕಕಾರರಿಗೆ ತಮ್ಮನ್ನು ತೆತ್ತುಕೊಳ್ಳುತ್ತಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ರಂಗ ಕಾಯಕದಲ್ಲಿ ಎಂದಿಗೂ ಇದನ್ನು ಬಿಟ್ಟು ಬೇರೆದರ ಕಡೆ ಯೋಚಿಸಿದವರೇ ಅಲ್ಲ. ಅವರ ಶಿಷ್ಯರು ಅನೇಕರು ರಂಗಭೂಮಿ, ಮತ್ತು ಚಿತ್ರರಂಗದಲ್ಲಿ, ಕಿರುತೆರೆಗಳಲ್ಲಿ ಸಿದ್ದ-ಪ್ರಸಿದ್ದರಾಗಿದ್ದಾರೆ. ಸುದೀಘ೯ ಕಾಲ ರಂಗದ ಪಾಠವನ್ನೂ ಮಾಡಿ, ನಾಟಕವನ್ನೂ ಆಡಿಸಿದ್ದರೂ, ಆಥಿ೯ಕವಾಗಿ ಅದರಿಂದೇನೂ ದೊಡ್ಡ ಮೊತ್ತವನ್ನೇನು ಸಂಪಾದಿಸಲಿಲ್ಲ, ಆದರೆ ದೊಡ್ಡ ಅಭಿಮಾನಿ ಬಳಗವನ್ನು ಸಂತೋಷವನ್ನು ಗಳಿಸಿಕೊಂಡವರು.
ಹಲವು ಪ್ರಶಸ್ತಿಗಳೂ ಬಂದವೆನ್ನಿ. ಆದರೆ ಕೇಂದ್ರ ಸಂಗೀತನಾಟಕ ಅಕಾಡೆಮಿಯ ಪ್ರಶಸ್ತಿ ಬಂದಾಗ ಬಹಿರಂಗವಾಗಿಯೇ ‘ಒಂದೇ ಊರಿನ ಒಂದೇ ಜಾತಿಯ ಮೂವರಿಗೆ ಒಂದೇ ವರ್ಷ ಈ ಪ್ರಶಸ್ತಿ ಬಂದಿರುವುದು ಮುಜುಗರ ತರಿಸುತ್ತದೆ’ ಎಂದುಬಿಟ್ಟರು.
ಅವರ ತರಬೇತಿ ಶಿಬಿರ, ಶಾಲೆಗಳೆಲ್ಲಕ್ಕೆ ನಾನು ಹೆಚ್ಚು ಕಡಿಮೆ ಖಾಯಂ ಅತಿಥಿ. ಬುದ್ದೀ ಎಂದು ಆತ್ಮೀಯವಾಗಿ ಆಗಾಗ ಮಾತನಾಡಿಕೊಳ್ಳುವುದಿತ್ತು. ಹಾಗೆ ಎರಡು ತಿಂಗಳ ಹಿಂದೆ ಫೋನ್ ಮಾಡಿದಾಗ ಭಾರತಿ ಬುದ್ಧಿಯವರಿಗೆ ಮಾತಾಡೊಕ್ಕಾಗ್ತಾ ಇಲ್ಲ. ನೀವು ಮಾತಾಡಿ ಖುಷಿಯಾಗುತ್ತೇಂದರು. ನನಗೂ ಮಾತು ತಡವರಿಸಿತು. ಮೌನವಾಗುದನ್ನ ನಾನೂ ಕಲಿಯ ಬೇಕಲ್ಲ.
ಕೆಲವು ತಿಂಗಳ ಹಿಂದೆ ಎದೆಯ ಗೂಡಿನಿಂದ ರಸ ಹೀರಿದಾಗ ಮಾತು ನಿಂತು ಹೋಯಿತು, ರಸಾಸ್ವಾದ ತುಂಬಿದ ಎದೆಯಿಂದ ಫ್ಲಂ ರಸ ತೆಗೆದಾಗ ಮಾತು ನಿಲ್ಲಿಸಿದ ಜೆಂಬೆ ಶಾಶ್ವತ ಮೌನಕ್ಕೆ ಜಾರಿದ್ದಾರೆ. ಎಂದಿನಂತೆ ಅಬ್ಬರವಿಲ್ಲದ , ಅವರ ನಾಟಕವೃತ್ತಿ ಹೀಗೆ ಮುಗಿದಿರುವುದೇ ಅವರ ಸತ್ವ್ತದ ದ್ಯೋತಕವೂ ಆಗಿದೆ.
🙏🏼 ಶಿವಾಸ್ತೇ ಪಂಥಾನಃ
ನಡೆಯಿರಿ ನಿಮ್ಮ ಹಿಂದೆ ನಾವಿದ್ದೇವೆ






0 Comments