ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೃಥ್ವಿ ಸೂರಿ ಅಂಕಣ – ಕಕ್ಷಿದಾರರ ಪ್ರತಿಕ್ರಿಯೆಗಾಗಿ (OTHER SIDE TO SAY)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.

ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು

ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.

ಮೂಲ – ರಾಜು ಜೆ಼ಡ್. ಮೊರೆ

ಕನ್ನಡಕ್ಕೆ – ಪೃಥ್ವಿ ಸೂರಿ

ಅಂಕಣ – 6

ಮಹಾರಾಷ್ಟ್ರದ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರಲ್ಲಿ ‘O-S-T-S’ ಎನ್ನುವ ಸಂಕ್ಷಿಪ್ತ ಪದದ ರೂಪ ಬಹಳಷ್ಟು ಜನಪ್ರಿಯವಾಗಿದೆ. ಇದರ ಪೂರ್ಣ ರೂಪ ‘Other Side To Say’ (ಎದುರು ಕಕ್ಷಿದಾರರ ಪ್ರತಿಕ್ರಿಯೆಗಾಗಿ) ಎಂದು.

ಸಾಮಾನ್ಯವಾಗಿ ನ್ಯಾಯಾಧೀಶರು ಪ್ರಕರಣದ ದಿನವಹಿ ಆದೇಶ ಪ್ರತಿಯಲ್ಲಿ ಇದರ ಪೂರ್ಣ ರೂಪವನ್ನು ಬರೆಯುವ ತೊಂದರೆಯನ್ನೂ ತೆಗೆದುಕೊಳ್ಳುವುದಿಲ್ಲ. ಕೇವಲ ಈ ನಾಲ್ಕು ಅಕ್ಷರಗಳನ್ನು ಮಾರ್ಜಿನ್‌ನಲ್ಲಿ ಬರೆದುಬಿಡುತ್ತಾರೆ!

ಇತ್ತೀಚೆಗೆ ಕೆಲವರೊಂತು ಕೇವಲ ‘OS’ ಎಂದಷ್ಟೆ ಬರೆಯುತ್ತಾರೆ. ಹೀಗೆ ಬರೆದ ಇಷ್ಟೆ ಸಾಕು, ಪ್ರಕರಣವನ್ನು ಮುಂದೂಡಲ್ಪಡಲು ಅಥವಾ ಮೂಲೆಗುಂಪಾಗಿಸಲು.

ಬಹುಶಃ ಈ ಪ್ರಕ್ರಿಯೆ ನಿಮಗೆ ಶುದ್ಧ ಸೋಮಾರಿತನ ಎಂದೂ ಅನಿಸಬಹುದು. ಆದರೆ, ಯಾರಿಗೆ ಗೊತ್ತು ಇದೆಲ್ಲವೂ ಒಂದು ರೀತಿಯ ‘ಪರಿಸರ ಪ್ರಜ್ಞೆ’ಯೂ ಆಗಿರಬಹುದು! ನ್ಯಾಯಾಧೀಶರು ಕಡಿಮೆ ಕಾಗದ ಮತ್ತು ಮಿತವಾಗಿ ಶಾಯಿ ಬಳಸುವುದರ ಮೂಲಕ ಭೂಮಿಯನ್ನು ಹಸಿರಾಗಿಡಲು ಅವರು ಕೊಡುಗೆ ನೀಡುತ್ತಿರಲೂಬಹುದು!

ಹೆಚ್ಚಿನ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ‘O-S-T-S’ ಅನ್ನು ಎಷ್ಟು ಪ್ರೀತಿಸುತ್ತಾರೆಂದರೆ; ಆಗಿನ ಸಂದರ್ಭಕ್ಕೆ ಅಗತ್ಯವಿರಲಿ ಅಥವಾ ಇಲ್ಲದಿರಲಿ, ಎಲ್ಲದಕ್ಕೂ ಇದನ್ನೇ ಸಿದ್ಧ ಸೂತ್ರವಾಗಿ ಅನ್ವಯಿಸುತ್ತಾರೆ. ಕೆಲವೊಮ್ಮೆ ಆಸ್ಪತ್ರೆಯ ಕಾಂಪೌಂಡರ್ ಆಗಿದ್ದವರು ಡಾಕ್ಟರ್ ಆದರೆ, ವಿನಾಕಾರಣವಾಗಿ ಎಲ್ಲದಕ್ಕೂ ಮೊದಲೇ ‘ಕ್ರೋಸಿನ್’ ಮಾತ್ರೆ ಬರೆದುಕೊಟ್ಟಂತೆಯೇ ಇರುತ್ತದೆ.


ನನ್ನ ಸಹೋದ್ಯೋಗಿಯೊಬ್ಬರು ‘O-S-T-S’ ನ ಅತಿಯಾದ ಬಳಕೆಯಿಂದಾಗುವ ಹಾನಿಕಾರಕ ಬೆಳವಣಿಗೆಯ ಇತ್ತೀಚಿನ ಉದಾಹರಣೆಯೊಂದನ್ನು ವಿವರಿಸಿದರು.

ತನ್ನ ಗಂಡ ದಾಖಲಿಸಿದ ವಿಚ್ಛೇದನ ಪ್ರಕರಣವನ್ನು ಹೆಂಡತಿ ತನ್ನ ವಾಸಸ್ಥಳಕ್ಕೆ ಹತ್ತಿರವಿದ್ದ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿಸಲ್ಲಿದ್ದರು. ಹೈಕೋರ್ಟ್‌ನ ಕಾನೂನು ನೆರವು ಸಮಿತಿಯ ಮೂಲಕ ಒಬ್ಬ ವಕೀಲರನ್ನು ಆ ಮಹಿಳೆಗೆ ನೇಮಿಸಲಾಗಿತ್ತು. ಆಕೆ ಹೂಡಿದ್ದ ವಿಚ್ಛೇದನ ಪ್ರಕರಣ ತನ್ನ ಹತ್ತಿರದ ನ್ಯಾಯಾಲಯದಲ್ಲಿತ್ತು. ಇದನ್ನು ನಾವು ಸಾಮಾನ್ಯವಾಗಿ ‘ವರ್ಗಾವಣೆ ಅರ್ಜಿ’ ಎನ್ನುತ್ತೇವೆ.

ಹೈಕೋರ್ಟ್ ನ್ಯಾಯಾಧೀಶರು ಮೊದಲ ದಿನವೇ ಆ ಪತ್ನಿಗೆ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ನೀಡಿದರು. ಆದರೆ, ಆ ದಿನದ ಎಲ್ಲ ಪ್ರಕರಣಗಳನ್ನು ಮುಗಿಸುವ ಆತುರದಲ್ಲಿ, ಪತಿಗೆ ಅಧಿಕೃತವಾಗಿ ‘ನೋಟಿಸ್ ಜಾರಿ’ ಮಾಡುವಂತೆ ನಿರ್ದೇಶನ ನೀಡಲು ಮರೆತರು.

ಆದರೆ, ಪತ್ನಿಯ ಪರ ಹಾಜರಿದ್ದ ವಕೀಲರು ಖಾಸಗಿಯಾಗಿ ನೋಟಿಸ್ ಅನ್ನು ಜಾರಿಮಾಡಿ, ತಡೆಯಾಜ್ಞೆಯ ಬಗ್ಗೆ ಪತಿಗೆ ಮಾಹಿತಿ ತಿಳಿಸಿದರು. ವಿಷಯ ತಿಳಿದ ತಕ್ಷಣ ಪತಿಯೂ ಒಬ್ಬ ವಕೀಲರನ್ನು ನೇಮಿಸಿಕೊಂಡು ಹೈಕೋರ್ಟ್ ನಲ್ಲಿ ಹಾಜರಾದರು.

ಹೈಕೋರ್ಟ್‌ನಲ್ಲಿ ಪ್ರಕರಣಗಳ ವಿಷಯದ ಹಂಚಿಕೆ (ರೋಸ್ಟರ್) ಬದಲಾದ ನಂತರ ಆ ಪ್ರಕರಣವು ಮತ್ತೊಬ್ಬ ನ್ಯಾಯಾಧೀಶರ ಎದುರಿತ್ತು. ನ್ಯಾಯಾಧೀಶರು ‘ರೋಜ್ನಾಮ್’ (Order sheet) ನೋಡಿ, “ಹಿಂದಿನ ನ್ಯಾಯಾಧೀಶರು ನೋಟಿಸ್ ಜಾರಿ ಮಾಡದಿದ್ದರೂ ವಕೀಲರು ಹೇಗೆ ಹಾಜರಾದರು!! ಪ್ರಕರಣದಲ್ಲಿ ಸರಿಯಾದ ಪ್ರಕ್ರಿಯೆಯನ್ನು ಪಾಲಿಸಲಾಗಿಲ್ಲ.” ಎಂದು, ನಂತರ ಅವರು “ನೋಟಿಸ್ ಜಾರಿಗೊಳಿಸಲು” ಆದೇಶಿಸಿದರು.

ಇದಾದನಂತರ ಯಾವುದೋ ಕಾರಣಕ್ಕಾಗಿ, ಪತಿಯು ತನ್ನ ವಿಚ್ಛೇದನ ಪ್ರಕರಣವನ್ನು ಹಿಂಪಡೆಯುತ್ತೇನೆಂದು ಸಿವಿಲ್ ಜಡ್ಜ್ ಸೀನಿಯರ್ ಡಿವಿಷನ್ ನಲ್ಲಿ ಅರ್ಜಿ ಸಲ್ಲಿಸಿದನು. ಆ ಪ್ರಕರಣದಲ್ಲಿ ಪತ್ನಿ ಇನ್ನೂ ಹಾಜರಾಗಿರಲಿಲ್ಲ.

ಆದರೆ, ಅಲ್ಲಿನ ಮಹಿಳಾ‌ ನ್ಯಾಯಾಧೀಶರು “ಎದುರು ಕಕ್ಷಿದಾರರ ಪ್ರತಿಕ್ರಿಯೆಗಾಗಿ” (Other side to say) ಎಂದು ಆದೇಶಿಸಿದರು. ಪತಿ ತನ್ನ ಪ್ರಕರಣವನ್ನು ಹಿಂಪಡೆಯಲು ಪತ್ನಿಗೆ ಏನು ಆಕ್ಷೇಪವಿರಲು ಸಾಧ್ಯ?

ನ್ಯಾಯಾಧೀಶರು: “ಹೈಕೋರ್ಟ್‌ನ ತಡೆಯಾಜ್ಞೆಯನ್ನು ಎದುರು ಕಕ್ಷಿದಾರರು ತೆರವುಗೊಳಿಸುವವರೆಗೆ ನಾನು ಏನೂ ಮಾಡಲು ಸಾಧ್ಯವಿಲ್ಲ.”

ವಿಚ್ಛೇದನ ಅರ್ಜಿಯನ್ನು ಹಿಂಪಡೆಯಲೂ ತಾನು ಅನುಮತಿ ನೀಡುವುದಿಲ್ಲ, ಏಕೆಂದರೆ ಹಿಂಪಡೆಯುವಿಕೆಗೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆ ತಡೆಯಾಜ್ಞೆಯನ್ನು ನಿರ್ಲಕ್ಷಿಸಿದರೆ ಅದು ನ್ಯಾಯಾಧೀಶರ ನ್ಯಾಯಾಲಯಕ್ಕೆ, ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳುವುದನ್ನು ಮರೆಯಲಿಲ್ಲ.

ಈ ಕಾರಣಕ್ಕಾಗಿ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಬೇಕಾಯಿತು. ಈ ಬಾರಿ ನ್ಯಾಯಾಧೀಶರು ಎರಡೂ ಕಡೆಯ ವಾದ ಆಲಿಸಿದರು.

ಪತ್ನಿಯ ಪರವಿದ್ದ ಕಾನೂನು ನೆರವು ವಕೀಲರು, ಪತಿಯೇ ತನ್ನ ವಿಚ್ಛೇದನ ಅರ್ಜಿಯನ್ನು ಹಿಂಪಡೆಯುತ್ತಿರುವಾಗ ವರ್ಗಾವಣೆ ಅರ್ಜಿ ತಾನಾಗಿಯೇ ನಿರುಪಯುಕ್ತವಾಗುತ್ತದೆ (infructuous) ಎಂದು ತಿಳಿಸಿದರು. ಗಂಡನ ಪರ ವಕೀಲರು “ವಿಚ್ಛೇದನ ಅರ್ಜಿಯನ್ನು ಹಿಂಪಡೆಯುತ್ತೇವೆ” ಎನ್ನುವ ಹೇಳಿಕೆಯನ್ನು ದಾಖಲಿಸಿಕೊಂಡು ವರ್ಗಾವಣೆ ಅರ್ಜಿಯನ್ನು ವಿಲೇವಾರಿ ಮಾಡಬಹುದು, ಇದರಿಂದ ಪತಿ ತನ್ನ ಪ್ರಕರಣವನ್ನು ಹಿಂಪಡೆಯಲು ಅನುಕೂಲವಾಗುತ್ತದೆ ಎಂದು ವಕೀಲರು ಸೂಚಿಸಿದರು.

ಹೈಕೋರ್ಟ್ ನ್ಯಾಯಾಧೀಶರು ಇದೆಲ್ಲವನ್ನೂ ತಮ್ಮ ಆದೇಶದಲ್ಲಿ ದಾಖಲಿಸಿಕೊಂಡು, ವರ್ಗಾವಣೆ ಅರ್ಜಿಯನ್ನು ವಿಲೇವಾರಿ ಮಾಡಲಿಲ್ಲ. ಬದಲಾಗಿ, ಪತಿಯ ವಕೀಲರಿಗೆ ಈ ಆದೇಶವನ್ನು ವಿಚಾರಣಾ ನ್ಯಾಯಾಲಯಕ್ಕೆ ತೋರಿಸಿ ವಿಚ್ಛೇದನ ಅರ್ಜಿಯನ್ನು ಹಿಂಪಡೆಯಲು ಹೇಳಿದರು.

ನಂತರ ವರ್ಗಾವಣೆ ಅರ್ಜಿಯ ವಿಚಾರಣೆಯನ್ನು ಕೆಲವು ವಾರಗಳ ನಂತರಕ್ಕೆ ಮುಂದೂಡಿದರು.

ಪತಿಯ ವಕೀಲರು ಹೈಕೋರ್ಟ್ ಆದೇಶವನ್ನು ವಿಚಾರಣಾ ನ್ಯಾಯಾಧೀಶರಿಗೆ ತೋರಿಸಿದಾಗ, ಅವರು; “ನ್ಯಾಯಾಧೀಶರು ಇಲ್ಲಿ ತಡೆಯಾಜ್ಞೆ ತೆರವುಗೊಂಡಿದೆ ಎಂದು ಸ್ಪಷ್ಟವಾಗಿ ಎಲ್ಲಿ ಹೇಳಿದ್ದಾರೆ? ಅವರು ಕೇವಲ ವಕೀಲರು ಹೇಳಿದ್ದನ್ನು ದಾಖಲಿಸಿದ್ದಾರೆ ಅಷ್ಟೆ.” ಎಂದರು.

ಹೈಕೋರ್ಟ್ ಆದೇಶವನ್ನು ಓದಿದರೆ ತಡೆಯಾಜ್ಞೆ ತೆರವುಗೊಂಡಿದೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಏಕೆಂದರೆ ವಿಚಾರಣಾ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ವಾಪಸ್ಸು ಪಡೆದ ಹೈಕೋರ್ಟಿಗೆ ವರದಿ ಒಪ್ಪಿಸಬೇಕು ಎಂದೇ ಪ್ರಕರಣವನ್ನು ಮುಂದೂಡಲಾಗಿದೆ ಎಂದು ವಕೀಲರು ವಿವರಿಸಲು ಪ್ರಯತ್ನಿಸಿದರು. ಆದರೆ ನ್ಯಾಯಾಧೀಶರು ಅದನ್ನು ಒಪ್ಪಲಿಲ್ಲ.

ನ್ಯಾಯಾಧೀಶರು ಪತಿಯ ವಕೀಲರಿಗೆ “ನೀವು ಹೈಕೋರ್ಟ್‌ನಿಂದ ತಡೆಯಾಜ್ಞೆ ತೆರವುಗೊಂಡಿದೆ ಎಂದು ಸ್ಪಷ್ಟೀಕರಣ ತನ್ನಿ, ಇಲ್ಲದಿದ್ದರೆ ನಾನು ಅರ್ಜಿ ಹಿಂಪಡೆಯಲು ಬಿಡುವುದಿಲ್ಲ.” ಎಂದರು.

ಈ ಬಾರಿ ‘ಸ್ಪಷ್ಟೀಕರಣ’ಕ್ಕಾಗಿ (clarification) ಮತ್ತೆ ಹೈಕೋರ್ಟ್ ಮೆಟ್ಟಿಲೇರಿದರು. ಪ್ರಕರಣಗಳ ಹಂಚಿಕೆ ಬದಲಾದ ಕಾರಣ ಮತ್ತೊಬ್ಬ ನ್ಯಾಯಾಧೀಶರು ಈ ಪ್ರಕರಣವನ್ನು ಆಲಿಸಿದರು.

ಹಿಂದಿನ ಆದೇಶ ಸ್ಪಷ್ಟವಾಗಿದ್ದರೂ ಸ್ಪಷ್ಟೀಕರಣ ಏಕೆ ಬೇಕು ಎಂಬ ಸುದೀರ್ಘ ಚರ್ಚೆಯ ನಂತರ, ವಕೀಲರು “ನಿಮಗೆ ಮತ್ತು ನಮಗೆ ಸ್ಪಷ್ಟವಾಗಿರುವುದು ಗೌರವಾನ್ವಿತ ವಿಚಾರಣಾ ನ್ಯಾಯಾಧೀಶರಿಗೆ ಸ್ಪಷ್ಟವಾಗಿಲ್ಲ.” ಎಂದರು.

ಹೈಕೋರ್ಟ್ ನ್ಯಾಯಾಧೀಶರಿಗೆ, ಆ ನ್ಯಾಯಾಧೀಶರ ತಿಳುವಳಿಕೆಯ ಬಗ್ಗೆ ಗಾಬರಿಯಾಯಿತು, ಆದರೆ ಎರಡೂ ಕಡೆಯ ವಕೀಲರ ವಿನಂತಿಯ ಮೇರೆಗೆ ಅಂತಿಮವಾಗಿ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ ಎಂದು ಸ್ಪಷ್ಟವಾಗಿ ಬರೆದುಕೊಟ್ಟರು.

ವಕೀಲರಿಗೆ ಸಮಾಧಾನವಾಯಿತು. ಕೊನೆಗೂ ಪತಿಯ ವಿಚ್ಛೇದನ ಅರ್ಜಿ ಹಿಂಪಡೆಯಲ್ಪಡುತ್ತದೆ ಎಂದುಕೊಂಡರು. ಆದರೆ, ಹಾಗೆ ಸುಲಭವಾಗಿ ಆಗಿದ್ದರೆ, ಅದು ಕಥೆಯಾಗುತ್ತಿರಲಿಲ್ಲವಲ್ಲ!

ಸಿವಿಲ್ ಜಡ್ಜ್ ಸೀನಿಯರ್ ಡಿವಿಷನ್ ಅವರು ಹೈಕೋರ್ಟ್ ನೀಡಿದ ಸ್ಪಷ್ಟೀಕರಣದ ಪ್ರತಿಯನ್ನು ಪದೇ ಪದೇ ಓದಿದರು. ಕೊನೆಗೆ, ತಮಗೆ ದೊಡ್ಡದೊಂದು ಸತ್ಯ ದರ್ಶನವಾದಂತೆ ಅತ್ಯಂತ ವಿಜೃಂಭಣೆಯಿಂದ “Other side to say” (ಎದುರು ಕಕ್ಷಿದಾರರ ಪ್ರತಿಕ್ರಿಯೆಗಾಗಿ) ಎಂದು ಬರೆದರು.


ಇದು ಕೇವಲ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಸೀಮಿತವಾದ ಗುಣ ಎಂದು ನೀವು ಭಾವಿಸುವಹಾಗಿಲ್ಲ. ನಮ್ಮ ಗೌರವಾನ್ವಿತ ಹೈಕೋರ್ಟ್‌ನಲ್ಲಿ ನಡೆದ ಇನ್ನೊಂದು ಉದಾಹರಣೆ ಇಲ್ಲಿದೆ.

ವಕೀಲ ವೃಂದದಿಂದ ಒಬ್ಬರನ್ನು ನ್ಯಾಯಾಧೀಶರಾಗಿ ಆಯ್ಕೆಮಾಡಿದರು. ಅವರು ಅತ್ಯಂತ ನಿಧಾನವಾಗಿ ವಿಷಯಗಳನ್ನು ಅರ್ಥೈಸಿಕೊಳ್ಳುವರಾಗಿದ್ದರು. ನ್ಯಾಯಾಧೀಶರಾಗಿ ನೇಮಕಗೊಂಡ ನಂತರ ಅವರನ್ನು ‘ಡಿವಿಷನ್ ಬೆಂಚ್’ನಲ್ಲಿ ದೀರ್ಘಕಾಲದವರೆಗೆ ವೀಕ್ಷಣೆಯ ಕಲಿಕೆಯಲ್ಲಿ ಮತ್ತೊಬ್ಬ ಹಿರಿಯ ನ್ಯಾಯಾಧೀಶರೊಂದಿಗೆ ಪೀಠ ಹಂಚಿಕೊಂಡರು. ಕಾಲಾನಂತರ ಅವರಿಗೆ ಸ್ವತಂತ್ರವಾಗಿ ಪ್ರಕರಣಗಳನ್ನು ನಿರ್ವಹಿಸುವ ಅವಕಾಶದೊರೆಯಿತು.

ಅವರಿಗೆ ಮೊದಲ ಸ್ವತಂತ್ರ ಪೀಠದ ವಿಚಾರಣೆಯ ಸಮಯದಲ್ಲಿ ‘ಆದೇಶ ಪ್ರಕರಣ’ (Order matters) ಗಳನ್ನು‌ ನೀಡಲಾಗಿತ್ತು. ಅಂದರೆ ಮೃತ ಅರ್ಜಿದಾರರ ವಾರಸುದಾರರನ್ನು ಪ್ರಕರಣದ ದಾಖಲೆಗೆ ಸೇರಿಸುವಂತಹ ಸರಳ ಅರ್ಜಿಗಳು. ಅಂತಹ ಪ್ರಕರಣಗಳ ಪೈಕಿ ಮೃತರೊಬ್ಬರ ವಾರಸುದಾರರನ್ನು ಪ್ರಕರಣಕ್ಕೆ ಸೇರಿಸಬೇಕೆನ್ನುವ ಅರ್ಜಿಯೊಂದಿತ್ತು. ಮರಣ ಪ್ರಮಾಣಪತ್ರವೂ ಸೇರಿದಂತೆ ಮಿಕ್ಕೆಲ್ಲ ದಾಖಲೆಗಳೂ ಅರ್ಜಿಯಲ್ಲಿದ್ದವು. ಸಾಮಾನ್ಯವಾಗಿ ಇಂತಹ ಅರ್ಜಿಗಳನ್ನು ತಕ್ಷಣವೇ ಮಂಜೂರು ಮಾಡುತ್ತಾರೆ. ಆದರೆ ಈ ನ್ಯಾಯಾಧೀಶರು ಯಾವುದೇ ಅಪಾಯವನ್ನು ಎದುರುಗೊಳ್ಳಲು ಸಿದ್ಧರಿರಲಿಲ್ಲ.

ವಿಭಾಗೀಯ ಪೀಠದಲ್ಲಿ ಕುಳಿತಿದ್ದಾಗ ಕಲಿತಿದ್ದ ಅತ್ಯಂತ ಸುರಕ್ಷಿತ ಮತ್ತು ನುಣುಪಾದ ಆದೇಶವನ್ನೇ ಇಲ್ಲಿಯೂ ಹೊರಡಿಸಿದರು “Other Side To Say!”

ಅರ್ಜಿದಾರರು ಮೃತಪಟ್ಟು ಬಹಳ ದಿನಗಳಾಗಿತ್ತು. ಅವರನ್ನು ಸುಡುವ ಬದಲು, ಹೂಳಲಾಗಿದ್ದರೆ, ಅವರು ತಮ್ಮ ಸಮಾಧಿಯಲ್ಲೇ ಹೊರಳಾಡುತ್ತಿದ್ದರು! ಆದರೆ, ಇದರಿಂದ ಲಾಭವಾಗಿದ್ದು ಎದುರು ಕಕ್ಷಿದಾರರ ವಕೀಲರಿಗೆ ಮಾತ್ರ. ಸುಖಾಸುಮ್ಮನೆ‌ ಯಾವುದೇ ಕೆಲಸವಿಲ್ಲದೆ ಕೇವಲ ಹಾಜರಾತಿಗಾಗಿಯೇ ಶುಲ್ಕ ಪಡೆಯುವ ಅವಕಾಶ ಸಿಕ್ಕಿತ್ತು.

ಇನ್ನೊಂದು ಪ್ರಕರಣದಲ್ಲಿ, ‘ಹಿರಿಯ ನಾಗರಿಕ’ನಾಗಿದ್ದ ಅರ್ಜಿದಾರರೊಬ್ಬರು ತಮ್ಮ ಪ್ರಕರಣದ ವಿಚಾರಣೆಯನ್ನು ಬೇಗ ನಡೆಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಹಿರಿಯ ನಾಗರಿಕರ ಪ್ರಕರಣಗಳಿಗೆ ಆದ್ಯತೆ ನೀಡಬೇಕೆಂಬ ಆಡಳಿತಾತ್ಮಕ ಸೂಚನೆಗಳಿದ್ದರೂ ಸಹ, ನ್ಯಾಯಾಧೀಶರು “Other side to say.” ಎಂದು ಆದೇಶಿಸಿದರು.

ಇದರ ಫಲಿತಾಂಶವಾಗಿ, ಎದುರು ವಕೀಲರು “ಅರ್ಜಿದಾರರು ಹಿರಿಯ ನಾಗರಿಕರು ಎಂಬುದನ್ನು ನಾನು ಒಪ್ಪುವುದಿಲ್ಲ, ಅವರು ದಾಖಲೆಗಳನ್ನು ಸಾಬೀತುಪಡಿಸಲಿ.” ಎಂದು ಪ್ರತಿಕ್ರಿಯಿಸಿದರು.

ಅಷ್ಟೇ, ಆ ಪ್ರಕರಣ ಮತ್ತೆ ಅನಿರ್ದಿಷ್ಟಕಾಲದವರೆಗೆ ಮುಂದೂಡಲ್ಪಟ್ಟಿತು.

ನಮ್ಮಲ್ಲಿ ಸ್ವತಂತ್ರ ಮತ್ತು ಕ್ರಿಯಾಶೀಲ ನ್ಯಾಯಾಂಗ ವ್ಯವಸ್ಥೆ ಇರುವುದು ನಮ್ಮ ಅದೃಷ್ಟ.

ಇಂತಹ ರತ್ನಗಳನ್ನು ನ್ಯಾಯಪೀಠದಲ್ಲಿ ಕಂಡಾಗ, ‘ಎದುರು ಕಕ್ಷಿದಾರರು’ ಏನು ಹೇಳುತ್ತಾರೆಂಬುದನ್ನು ಬಿಡಿ, ಯಾರಾದರೂ ಸರಿ ಏನು ತಾನೆ ಹೇಳಲು ಸಾಧ್ಯ?

‍ಲೇಖಕರು Admin

22 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading