-ಸರೋಜಿನಿ ಪಡಸಲಗಿ
ಕಾಯ್ವೆ ಯಮುನೆ ದಡದಿ…!!
ಅದೇ ಯಮುನೆಯ ತಟ ಅದೇ ನೆಳಲು
ಹರಿವ ನೀರಲಿ ತೇಲುವ ಕೊಳಲ ಗಾನ
ಕನ್ನನ ಎದೆ ಮಿಡಿತ ತಾನ ಮಂದ ರಿಂಗಣ
ಮ್ಲಾನ ಯಮುನೆ ಮೌನಿ ಒಂಟಿ ರಾಧೆ
ಅರಳುಗಂಗಳ ತುಂಬ ನೆನಪು ಸಣ್ಣ ನಗು
ಒಮ್ಮೊಮ್ಮೆ ಉಬ್ಬರಿಸಿಣುಕೊ ಯಮುನೆ
ಸಣ್ಣ ಮುತ್ತಿನ ಸಾಲು ಅಲ್ಲಿ ಕಣ್ಣಂಚಿನುದ್ದಕೂ
ಕುರುಳು ಹಾಸಿತಗೊ ಅವಕುಂಠನವನಲ್ಲಿ
ಹೇಳಿ ಹೋದನಲ್ಲ ಅದೇನೊ ಆ ಉದ್ಧವ
ಮೊಗವೆತ್ತಿ ನೋಡದೆ ಅಳು ನುಂಗಿದಂತೆ
ಕನ್ನನ ಒಲವು ನಲಿವಿನ ದೇವಿಯಂತೆ ನಾ
ನನಗೊಂದು ಗುಡಿ ಕನ್ನನ ಎದೆಯಲಂತೆ !
ಬೇಡ ಕನ್ನ ಮೆತ್ತಗೆ ನಿನ್ನೆದೆಗೊರಗಲೊಂದು
ಬೇಕು ತಾವು ನಂಗೆ ನಿನ್ನ ಕೆನ್ನೆ ಕೈಗೆಟುಕಂತೆ
ಬಲ್ಲೆ ನೀನಲ್ಲಿ ರಾಜಕುವರ ಅಲ್ಲ ನನ್ನ ಕನ್ನ
ಅಲ್ಲ ನನ್ನ ಗೊಲ್ಲ ಆದರೆ ನಾನದೆ ಗೊಲ್ಲತಿ
ಕನ್ನ ನಾ ಬರಲಾರೆ ಆ ನಿನ್ನರಮನೆ ನೆರಳಿಗೆ
ನನಗಿಲ್ಲುಂಟು ಯಮುನೆಯ ತಟ ಒಡಲು
ಅಲ್ಲಿ ಆ ದೊಡ್ಡ ಮಾಮರದಡಿಯ ಬಯಲು
ಮತ್ತೆ ಬರುವ ಪೂರ್ಣಿಮೆಯ ರಾತ್ರಿ ಗೆಜ್ಜೆ ಸದ್ದು
ಅಲ್ಲಿ ಕಾಯ್ವ ಕೊಳಲ ನಾದ ನನ್ಹೆಜ್ಜೆ ಸದ್ದಿಗೆ
ಕನ್ನ ನಾ ಹಾಕಬಲ್ಲೆನಾದರೂ ನಿನ್ಹೆಜ್ಜೆ ನನ್ನಲ್ಲೆ
ನೀನಿರೊವಾಗ ನಿನ್ನ ಹೆಜ್ಜೆ ಅದೆಲ್ಲಿ ಬೇರೆ ಹೇಳು
ಮತ್ಹೇಗೆ ಬಿಡಲಿ ದಿಕ್ಕು ತಪ್ಪಲು ನಿನ್ನ ಗೋಗಳ
ನೀನೆದ್ದು ಹೋದಂತ್ಹೇಗೆ ಬರಲಿ ನಾ ಮಥುರೆಗೆ
ನೀನಿಲ್ಲೆ ನನ್ನೊಳಿರುವಾಗ ಅಲ್ಲೇನಿದೆ ಕನ್ನ ನಂಗೆ
ಭ್ರಮೆಯೆ ಸರಿ ಕಾಯ್ವೆ ಇಲ್ಲೆ ಯಮುನೆ ದಡದಿ
ಕನ್ನ ಕಾಯ್ವೆ ನಿನ್ನಡಗಿಸಿ ನಗುವೀ ಕಂಗಳ ತೆರೆದು !!






0 Comments