ಎಚ್ ಆರ್ ಸ್ವಾಮಿ ಅವರ ಮಹತ್ಕೃತಿ ‘ಕೊರಚರ ಮಾತುಕತೆ ಕುಡ್ರ್ ವಾತಕತ’
ಈ ಕೃತಿಯು ನಾಳೆ ಬಿಡುಗಡೆಯಾಗಲಿದೆ.
ಈ ಕೃತಿಗೆ ಬರಗೂರು ರಾಮಚಂದ್ರಪ್ಪ ಅವರು ಬರೆದ ಮುನ್ನುಡಿ ಇಲ್ಲಿದೆ.
-ಬರಗೂರು ರಾಮಚಂದ್ರಪ್ಪ
ಗೆಳೆಯರಾದ ಎಚ್.ಆರ್. ಸ್ವಾಮಿಯವರು ಅಸಾಧಾರಣ ಸಾಮಾಜಿಕ ಬದ್ಧತೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದವರು. ಅಷ್ಟೇ ಅಲ್ಲ, ಉಳಿಸಿಕೊಂಡು ಬಂದವರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರ ಪ್ರಮುಖ ಆಸಕ್ತಿ ಮೌಢ್ಯವಿರೋಧಿ ಆಂದೋಲನ ಮತ್ತು ರಂಗಭೂಮಿ. ಈ ಆಂದೋಲನಾಸಕ್ತಿಗೂ ಕನ್ನಡ ಸಾಹಿತ್ಯಾಧ್ಯಯನಕ್ಕೂ ಸಂಬAಧವಿದೆ. ಸಾಹಿತ್ಯದ ಅಧ್ಯಯನವೆನ್ನುವುದು ಲೋಲುಪತೆಯಾಗದೆ ಸಾಮಾಜಿಕತೆಯಾದ ಕ್ರಿಯಾರೂಪವನ್ನು ಎಚ್.ಆರ್.ಸ್ವಾಮಿಯವರಲ್ಲಿ ಕಾಣಬಹುದು. ಅವರು ಸಾಹಿತ್ಯದ ವಿದ್ಯಾರ್ಥಿಯಾಗಿ ಬರೆಯುವ ಬಗ್ಗೆ ಹೆಚ್ಚು ಆಸಕ್ತಿ ವಹಿಸದೆ, ಸಾಹಿತ್ಯದ ಒಳಗಿನ ಚಲನಶೀಲ ಮೌಲ್ಯಗಳಿಗೆ ಸಾಮಾಜಿಕ ಕ್ರಿಯಾರೂಪ ಕೊಡಲು ಬಯಸಿದರು. ಇದರ ಫಲವಾಗಿ ಮೂಢನಂಬಿಕೆ ವಿರೋಧವನ್ನು ಕೇಂದ್ರ ಪ್ರಜ್ಞೆಯಾಗಿಸಿಕೊಂಡರು.
‘ಪವಾಡ’ವೆಂದು ಪ್ರತಿಬಿಂಬಿತವಾದ ರೂಪಿಕೆಗಳ ಗುಟ್ಟನ್ನು ರಟ್ಟು ಮಾಡುವ ಕಲೆಯನ್ನು ರೂಢಿಸಿಕೊಂಡರು. ಉದ್ಯೋಗದಲ್ಲಿದ್ದೂ ಊರೂರು ಸುತ್ತಿದರು. ಹಾಗೆಂದು ಉದ್ಯೋಗದ ಕರ್ತವ್ಯಕ್ಕೆ ಚ್ಯುತಿ ತಂದಿಲ್ಲ. ರಜಾದಿನಗಳನ್ನು ತಮ್ಮ ಆಂದೋಲನಾಶಯಗಳಿಗೆ ಬಳಸಿಕೊಂಡು ರಾಜ್ಯದ ಅನೇಕ ಕಡೆ ಹೋಗಿ ವೈಜ್ಞಾನಿಕ ವಿವೇಕವನ್ನು ಬಿತ್ತುವ ಪ್ರಯತ್ನ ಮಾಡಿದರು. ತಮ್ಮ ರಂಗಭೂಮಿಯ ಆಸಕ್ತಿಯನ್ನೂ ತಮ್ಮ ಮೌಢ್ಯವಿರೋಧಿ ಆಂದೋಲನದ ಭಾಗವಾಗಿಸಿಕೊಂಡು. ಬೀದಿನಾಟಕದ ಭಾಗವಾದರು; ಕಾರ್ಯಾಗಾರಗಳನ್ನು ಏರ್ಪಡಿಸಿದರು. ಇಷ್ಟೆಲ್ಲ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುತ್ತ ಬಂದ ಎಚ್.ಆರ್.ಸ್ವಾಮಿಯವರು ಈಗ ತಮ್ಮ ಜನಾಂಗದ ಆಡುನುಡಿಯಾದ ಕೊರಚ ಭಾಷೆಯನ್ನು ಕುರಿತು ನಿಘಂಟು ಮತ್ತು ಪದವಿವರಣೆಗಳೊಂದಾದ ಗ್ರಂಥವನ್ನು ಬರೆದಿದ್ದಾರೆ. ಇಲ್ಲಿ ಒಂದು ಮಾತನ್ನು ಹೇಳಬೇಕು. ಇವರು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವಾಗ ನನ್ನ ವಿದ್ಯಾರ್ಥಿಯಾಗಿದ್ದರು. ಇದು ನನಗೆ ಹೆಮ್ಮೆಯ ವಿಷಯ.
ಕೊರಚ ಭಾಷೆಯನ್ನು ಕುರಿತ ಈ ಕೃತಿಗೆ ಸಾಹಿತ್ಯಿಕ ಮಹತ್ವವಷ್ಟೇ ಅಲ್ಲ, ಸಾಮಾಜಿಕ ಮಹತ್ವವೂ ಇದೆ. ನಮ್ಮ ಅನೇಕ ಸಣ್ಣ ಸಾಮಾಜಿಕ ಸಮುದಾಯಗಳು ತಂತಮ್ಮ ಜನಾಂಗ ವಲಯದಲ್ಲಿ ಬಳಸುವ ಭಾಷೆಗಳು ಮೌಖಿಕವಾಗಿರುವುದೇ ಹೆಚ್ಚು. ಸಣ್ಣ ಸಮುದಾಯಗಳು ಎನ್ನುವುದು ಸಂಖ್ಯೆಯ ದೃಷ್ಟಿಯಿಂದಲೇ ಹೊರತು ಸಂಸ್ಕೃತಿಯ ದೃಷ್ಟಿಯಿಂದಲ್ಲ. ಸಂಖ್ಯೆಯಲ್ಲಿ ಸಣ್ಣವಾಗಿದ್ದರೂ ಇಂಥ ಸಮುದಾಯಗಳ ಸಂಸ್ಕೃತಿಗಳು ಮಹತ್ವ ಪೂರ್ಣವಾಗಿವೆ. ಬಳಸುವ ಭಾಷೆ, ಅನುಸರಿಸುವ ಆಚರಣೆ, ಒಟ್ಟು ಜೀವನ ವಿಧಾನಗಳಿಂದ ವಿಶಿಷ್ಟವಾಗಿವೆ. ಬಹುತ್ವ ಭಾರತವೆಂದರೆ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತವೆAದು ಅಧಿಕೃತಗೊಂಡ ಸಮುದಾಯಗಳಷ್ಟೇ ಅಲ್ಲದೆ ಬುಡಕಟ್ಟುಗಳು, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳೂ ಸೇರಿವೆ. ಭಾರತದುದ್ದಕ್ಕೂ ಅಲ್ಲಲ್ಲಿ ಹರಡಿಕೊಂಡಿರುವ ಈ ಅಸಂಖ್ಯಾತ ಸಣ್ಣ ಸಮುದಾಯಗಳ ಸಂಸ್ಕೃತಿಗಳೂ ಭಾರತೀಯ ಸಂಸ್ಕೃತಿಯ ಭಾಗವಾಗಿವೆ. ಇಂಥ ಸಮುದಾಯಗಳ ಸಂಸ್ಕೃತಿಯನ್ನು ಅರಿತುಕೊಳ್ಳುವ ಮೂಲಕ ಭಾರತದ ಬಹುಸಂಸ್ಕೃತಿ ಪರಿಕಲ್ಪನೆಗೆ ಹೊಸ ಆಯಾಮ ಲಭ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಚ್.ಆರ್. ಸ್ವಾಮಿಯವರು ಸಿದ್ಧಪಡಿಸಿರುವ ಕೊರಚ ಭಾಷೆಯನ್ನು ಕುರಿತ ಈ ಕೃತಿಗೆ ಸಾಂಸ್ಕೃತಿಕ ಮಹತ್ವವಿದೆ. ಯಾಕೆಂದರೆ ಯಾವುದೇ ಭಾಷೆಯು ಸಾಂಸ್ಕೃತಿಕ ಫಲಿತವೇ ಆಗಿರುತ್ತದೆ. ಇಲ್ಲಿ, ನಾನು ಸಂಸ್ಕೃತಿಯೆAಬ ಪರಿಕಲ್ಪನೆಯನ್ನು ರ‍್ಸ್ಕೋವಿಟ್ಜ್ ನಿರ್ವಚಿಸಿದ ‘ಜನರ ಜೀವನವಿಧಾನ’ ಎಂಬ ನೆಲೆಯಲ್ಲಿ ಪರಿಭಾವಿಸಿದ್ದೇನೆ. ಎಲ್ಲಾ ಸಮಾಜವಿಜ್ಞಾನಿಗಳ ಅಭಿಪ್ರಾಯವೂ ಹೆಚ್ಚು ಕಡಿಮೆ ಇದೇ ನಿರ್ವಚನದ ವ್ಯಾಪ್ತಿಗೆ ಬರುತ್ತದೆ. ಭಾಷೆಯು ಜನರ ಜೀವನವಿಧಾನ ಸಂವಹನ ಸಾಧನವಾದ್ದರಿಂದ, ಅದು ಸಂಸ್ಕೃತಿಯ ಅವಿಭಾಜ್ಯ ಭಾಗವಾಗುತ್ತದೆ. ಜನರು ತಮ್ಮ ಜೀವನವಿಧಾನದಲ್ಲಿ ಬಳಸುವ ಸಾಮಗ್ರಿ, ಕೊಡುವ ಉತ್ಪನ್ನವೇ ಮುಂತಾದ ಅಂಶಗಳು ಭಾಷಿಕ ರೂಪ ತಾಳುತ್ತವೆ. ತಮ್ಮ ಬದುಕಿನಲ್ಲಿ ಇಲ್ಲದ ಅಂಶಗಳು ಭಾಷಿಕ ರೂಪ ತಾಳುವುದಿಲ್ಲ. ಉದಾಹರಣೆಗೆ ಹೇಳುವುದಾದರೆ ನಮ್ಮಲ್ಲಿ ಇರುವ ಕೃಷಿ ಉತ್ಪನ್ನವಾದ ಅಕ್ಕಿಗೆ ಆಂಗ್ಲ ಭಾಷೆಯಲ್ಲಿ ಖiಛಿe(ರೈಸ್) ಎನ್ನುತ್ತಾರೆ. ಆದರೆ ರಾಗಿಗೆ ಆಂಗ್ಲ ಭಾಷೆಯಲ್ಲಿ ಯಾವ ಪದವೂ ಇಲ್ಲ. ಆಶ್ರಮ ಎಂಬುದಕ್ಕೂ ಸಮಾನವಾದ ಆಂಗ್ಲ ಪದವಿಲ್ಲ. ಯಾಕೆಂದರೆ ಆಂಗ್ಲರು ರಾಗಿಯನ್ನು ಬೆಳೆಯುವುದಿಲ್ಲ. ಬಳಸುವುದಿಲ್ಲ ಆಶ್ರಮದ ಕಲ್ಪನೆಯೂ ಅಲ್ಲಿಲ್ಲ. ಹೀಗಾಗಿ ರಾಗಿಯನ್ನು ‘ಖಚಿgi’ ಎಂದೂ ಆಶ್ರಮವನ್ನು ‘ಂshಡಿಚಿm’ ಎಂದೂ ಹೇಳಹೊರಟಿರುವುದು-ಬದುಕಿನಲ್ಲಿ ಇರುವುದು ಮಾತ್ರ ಭಾಷೆಯಾಗಿರುತ್ತದೆ-ಎಂಬ ಅಂಶ. ವಿಭಿನ್ನ ಭಾಷಿಕ ಸಮುದಾಯಗಳ ಸಂಪರ್ಕದಿAದಲೂ ಭಾಷೆಗೆ ಹೊಸಪದಗಳ ಸೇರ್ಪಡೆಯಾಗಿ ಬೆಳೆಯುವುದುಂಟು. ಆದರೆ ಈ ಸೇರ್ಪಡೆಯು ಸಹಜ ಬಳಕೆಯಾಗಿ ರೂಢಿಗತವಾಗಬೇಕೇ ಹೊರತು ಕೃತಕ ಹೇರಿಕೆಯಾಗಬಾರದು. ಅನ್ಯಭಾಷೆ ನಮ್ಮ ಭಾಷೆಯನ್ನು ನುಂಗಿ ನೊಣೆಯಬಾರದು. ಹಾಗೆ ಆಗತೊಡಗಿದರೆ ಪ್ರತಿರೋಧ ಅನಿವಾರ್ಯ. ಆದರೆ ಪರಸ್ಪರ ಜನಸಂಪರ್ಕದಿAದ ಬದುಕಿನಲ್ಲಿ ಬೆರೆತುಹೋದ ಭಾಷಾ ಬಳಕೆಗೆ ಪ್ರತಿರೋಧದ ಮಾತು ಅನ್ವಯಿಸುವುದಿಲ್ಲ. ಭಾಷಾ ಬಳಕೆಯಲ್ಲಿ ಕೆಲವು ಪದಗಳು ಸಹಜವಾಗಿ ಬೆರೆತುಹೋಗುವ ಪ್ರಕ್ರಿಯೆಯು ಗಡಿಪ್ರದೇಶದಲ್ಲಿ ಹೆಚ್ಚು. ಉದಾಹರಣೆಗೆ ಬೆಳಗಾವಿಯನ್ನು ಗಮನಿಸಬಹುದು. ಮರಾಠಿಗರ ಸಂಪರ್ಕದಿAದ ‘ರೊಕ್ಕ’ ಮುಂತಾದ ಪದಗಳು ಕನ್ನಡದಲ್ಲಿ ಸಹಜವಾಗಿ ಬೆರೆತುಹೋಗಿವೆ(ಮರಾಠಿಗರು ಸಹಜವಾಗಿ ಬೆರೆಯಬೇಕು; ಅಷ್ಟೇ!).

ಗಡಿಪ್ರದೇಶದ ವಿಷಯ ಬಂದಾಗ ನನ್ನ ಹುಟ್ಟೂರು ಬರಗೂರು ನೆನಪಾಗುತ್ತದೆ. ನನ್ನೂರಿಗೆ ಆಂಧ್ರದ ಮಡಕಶಿರಾ ತಾಲ್ಲೂಕಿನ ಗಡಿಯು ಕೇವಲ ಐದಾರು ಕಿಲೋಮೀಟರ್ ಸಮೀಪದಲ್ಲಿದೆ. ಆದರೆ ನಮ್ಮೂರಲ್ಲಿ ಆಂಧ್ರ-ತೆಲAಗಾಣಗಳ ತೆಲುಗಿನ ಲವಲೇಶವೂ ಇಲ್ಲ. ಯಾಕೆಂದರೆ ತಮ್ಮ ವ್ಯವಹಾರಗಳಿಗೆ ನಮ್ಮೂರಿನ ಜನರು ಮಡಕಶಿರಾ ಗಡಿಭಾಗಕ್ಕೆ ಹೋಗಬೇಕಾಗಿಲ್ಲ. ಬಸ್ಸು, ಶಾಲೆ ಇತ್ಯಾದಿಗಳ ಸೌಲಭ್ಯ ನಮ್ಮೂರಲ್ಲೇ ಇವೆ. ಆದರೆ ತೆಲುಗು ಭಾಷಿಕರು ಇಂಥ ಭೌತಿಕ ಸೌಲಭ್ಯಗಳಿಗಾಗಿ ನಮ್ಮೂರಿನ ಕಡೆ ಬರುತ್ತಿದ್ದರು. ಹೀಗಾಗಿ ಅವರಿಗೆ ಕನ್ನಡ ಬರುತ್ತದೆ. ನಮ್ಮೂರವರಿಗೆ ತೆಲುಗು ಬರುವುದಿಲ್ಲ. ಇದು ಭಾಷಿಕ ಪ್ರಭಾವದ ಒಂದು ರೂಪ. ನಮ್ಮಲ್ಲಿ ಇಂಗ್ಲಿಷ್ ಬಳಕೆ ಹೆಚ್ಚಾದಂತೆ ಕೆಲವು ಆಂಗ್ಲ ಪದಗಳಿಗೆ ಕನ್ನಡದ ಕೊಂಬು ಹಾಕಿ ನಮ್ಮವನ್ನಾಗಿಸಿಕೊಂಡ ಪ್ರಕ್ರಿಯೆಯು ಇನ್ನೊಂದು ಭಾಷಿಕ ರೂಪ. ಈ ರೂಪಕ್ಕೆ ಉದಾಹರಣೆಯಾಗಿ ಕಾರು(ಅಚಿಡಿ), ಬಸ್ಸು(ಃus), ಲೋಡು(ಐoಚಿಜ) ಮುಂತಾದ ಪದಗಳನ್ನು ನೋಡಬಹುದು. ಆಡಳಿತಾತ್ಮಕ ಪರಿಭಾಷೆಗಳಾದ ಜಮಾಬಂದಿ, ಅಮಲ್ದಾರ್, ತಹಸೀಲ್ದಾರ್ ಮುಂತಾದ ಪದಗಳೂ ಬೇರೆ ಭಾಷೆಯಿಂದ ಬಂದು ಇಂದು ನಮ್ಮವೇ ಆಗಿಬಿಟ್ಟಿವೆ. ಇವೆಲ್ಲ ಸಹಜ ಸೇರ್ಪಡೆ. ಕೃತಕ ಬಳಕೆ ಇಲ್ಲ. ಎಚ್.ಆರ್. ಸ್ವಾಮಿಯವರು ಬರೆದಿರುವ ಕೊರಚ ಭಾಷೆಯನ್ನು ಕುರಿತು ಕೃತಿಯಲ್ಲಿ ವಿವಿಧ ಭಾಷೆಗಳ ಪದಪ್ರಭಾವವನ್ನು ಗಮನಿಸಬಹುದು. ಈ ಕಾರಣಕ್ಕೆ ಇಷ್ಟೆಲ್ಲ ಹಿನ್ನೆಲೆಯನ್ನು ನೀಡಿದೆ.
ಎಚ್.ಆರ್.ಸ್ವಾಮಿಯವರ ಕೃತಿಗೆ ಮತ್ತೊಂದು ಮುಖ್ಯ ಮಹತ್ವವಿದೆ. ಮೌಖಿಕವಾಗಿಯಷ್ಟೇ ಇದ್ದು ಎಲ್ಲೂ ಲಿಖಿತವಾಗಿ ದಾಖಲಾಗದೆ ಕಾಲಾನುಕ್ರಮದಲ್ಲಿ ಕಳೆದುಹೋಗುವ ಭಾಷೆಗಳ ಪಟ್ಟಿಗೆ ಕೊರಚ ಭಾಷೆಯು ಸೇರದಂತೆ ಮಾಡುವ ಮಹತ್ವದ ಕೆಲಸವನ್ನು ಎಚ್.ಆರ್.ಸ್ವಾಮಿಯವರ ಕೃತಿಯು ಮಾಡಿ ತೋರಿಸಿದೆ. ಭಾಷಿಕ ದಾಖಲೀಕರಣಕ್ಕೆ ದೊಡ್ಡ ಕೊಡುಗೆ ನೀಡಿದೆ.
ಎತ್ನೋಲಾಗ್ ಸಂಸ್ಥೆಯ ಸಮೀಕ್ಷೆ ಪ್ರಕಾರ ‘ಈಗ ಜಗತ್ತಿನಲ್ಲಿ ೬೭೦೩ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಜಗತ್ತಿನ ಅರ್ಧದಷ್ಟು ಜನರು ಕೇವಲ ಹತ್ತು ಭಾಷೆಗಳನ್ನು ಬಳಸುತ್ತಾರೆ. ಈಗಾಗಲೇ ೩೦ ಸಾವಿರದಷ್ಟು ಭಾಷೆಗಳು ಇಲ್ಲವಾಗಿವೆ.’ ಆದ್ದರಿಂದ ಹೀಗೆ ಇಲ್ಲವಾಗುವ ಭಾಷೆಗಳ ಚಹರೆಗಳು ಉಳಿಯಬೇಕಾದರೆ ಅವು ಬಳಕೆಯಲ್ಲಿರಬೇಕು. ಇದ್ದವು ಎನ್ನುವ ವಾಸ್ತವಕ್ಕಾಗಿಯಾದರೂ ಲಿಖಿತವಾಗಿ ದಾಖಲೀಕರಣಗೊಳ್ಳಬೇಕು. ಈ ನೆಲೆಯಲ್ಲಿ ನೋಡಿದಾಗ ಎಚ್.ಆರ್.ಸ್ವಾಮಿಯವರ ಕೆಲಸದ ಅನನ್ಯತೆ ಅರಿವಾಗುತ್ತದೆ.
ಎಚ್.ಆರ್. ಸ್ವಾಮಿಯವರ ದಾಖಲೀಕರಣದ ಕ್ರಮವನ್ನು ಈಗ ನೋಡೋಣ. ಇವರು ಮೊದಲಿಗೆ ಕನ್ನಡ ಪದಗಳನ್ನು ಕೊಡುತ್ತಾರೆ. ಕನ್ನಡ ಪದಗಳಿಗೆ ಸಮಾನಾರ್ಥಕ ಕೊರಚ ಭಾಷೆಯ ಪದಗಳನ್ನು ಪಕ್ಕದಲ್ಲೇ ನಮೂದಿಸುತ್ತಾರೆ. ಅದರ ಪಕ್ಕದಲ್ಲಿ ಅದೇ ಅರ್ಥದ ಆಂಗ್ಲ ಭಾಷೆಯ ಪದಗಳನ್ನು ನೀಡುತ್ತಾರೆ. ಅನಂತರ ಆಂಗ್ಲ ಭಾಷಾ ಲಿಪಿಯಲ್ಲಿ ಕೊರಚ ಭಾಷೆಯ ಪದಗಳನ್ನು ಬರೆಯುತ್ತಾರೆ. ಹೀಗೆ ಮೊದಲಿಗೆ ಪದಗಳ ದಾಖಲೀಕರಣ ಮಾಡುತ್ತಾರೆ. ಈ ಪದಗಳನ್ನು ನೋಡುತ್ತ ಹೋದಂತೆ ಕೊರಚ ಭಾಷೆಯು ಸ್ವತಂತ್ರ ಪದಗಳ ಜೊತೆಗೆ ಕನ್ನಡ, ತೆಲುಗು ಮುಂತಾದ ತನ್ನ ಜನಸಂಪರ್ಕದ ಭಾಷೆಗಳ ಪ್ರಭಾವಕ್ಕೆ ಒಳಗಾಗಿರುವುದು ಗೊತ್ತಾಗುತ್ತದೆ. ಉದಾಹರಣೆಗೆ ನೋಡಿ.
ಕನ್ನಡ ಕೊರಚ
ಗುರಿ ಗುರಿ
ಗಾಳಿ ಗಾಳಿ
ಇರುವೆ ಸೀಮ
ಬಿಟ್ಟುಬಿಡು ಉಟ್ಟುಡು
ಹುಚ್ಚ ಪಿಚ್ಚಾಳು
ಎರಡು ರಂಡು
ಮೂರು ಮೂಡು
ಮೂವತ್ತು ಮುಪ್ಪಿದಿ
ತಾಯಿ ಅಮ್ಮ
ಸಣ್ಣಮುಳ್ಳು ಸಿನ್ನ ಮುಳ್ಳು
ಔಷಧಿ ಮೆರ್ದ್
ಇವು ಸ್ವಯಂವೇದ್ಯವಾಗುವ ಕೆಲವು ಪದಗಳು
ಹೀಗೆ ಪದಗಳ ಅರ್ಥವನ್ನು ನೀಡುವಾಗ ಸ್ವಾಮಿಯವರು ವಿಭಾಗೀಕರಣವನ್ನು ಮಾಡಿದ್ದಾರೆ. ಬಣ್ಣಗಳು, ಋತುಗಳು, ಸಂಖ್ಯೆಗಳು, ವಾರಗಳು-ಹೀಗೆ ವಿಭಾಗ ಮಾಡುವುದರ ಜೊತೆಗೆ ವ್ಯಾಕರಣದ ವಿವರಗಳನ್ನು ಪ್ರತ್ಯೇಕವಾಗಿ ಕೊಡುತ್ತಾರೆ. ಏಕವಚನ, ಬಹುವಚನ, ಕರ್ತೃಪದ, ಕ್ರಿಯಾಪದ, ನಾಮಪದ, ಸರ್ವನಾಮ, ವಿಭಕ್ತಿಗಳಲ್ಲದೆ ಭಾವಸೂಚಕ, ಲಿಂಗಸೂಚಕ ವಿವರಗಳನ್ನು ನೀಡಿದ್ದಾರೆ. ನಿಶ್ಚಯಾರ್ಥಕ ಮತ್ತು ನಿಷೇಧಾರ್ಥಕ ವಾಕ್ಯಗಳನ್ನು ಪ್ರತ್ಯೇಕವಾಗಿ ಕೊಟ್ಟಿದ್ದಾರೆ. ಕೊರಚ ಭಾಷೆಯಲ್ಲಿ ಅರ್ಜಿ ಮತ್ತು ಪತ್ರರಚನೆಯ ಮಾದರಿಗಳನ್ನು ರಚಿಸಿದ್ದಾರೆ. ಸಣ್ಣಕತೆಗಳು ಮತ್ತು ಆಯ್ದ ವ್ಯಕ್ತಿವಿವರಗಳನ್ನು ನೀಡುವ ಮೂಲಕ ಸ್ವಾಮಿಯವರ ಕೆಲಸದ ವ್ಯಾಪ್ತಿ ಮತ್ತಷ್ಟು ಹಿರಿದಾಗುತ್ತದೆ. ಸಣ್ಣಕತೆಗಳಿಗಾಗಿ ಇವರು ಆಯ್ದುಕೊಳ್ಳುವುದು ಬುದ್ಧ ಗುರುವಿನ ಕತೆಗಳನ್ನು ಎನ್ನುವುದು ಒಂದು ವಿಶೇಷ.
ಈ ಕತೆಗಳ ಕನ್ನಡ ಮೂಲ ಮಿತ್ರ ಡಾ.ಜಿ.ವಿ.ಆನಂದಮೂರ್ತಿಯವರದು. ಕನ್ನಡ ಮೂಲದ ಬುದ್ಧ ಗುರುವಿನ ಕತೆಗಳನ್ನು ಡಾ.ಜಯಶ್ರೀ ಸಿ. ಕಂಬಾರ, ಅವರು ಆಂಗ್ಲಭಾಷೆಗೆ ಅನುವಾದಿಸಿದ್ದಾರೆ. ಎಚ್.ಆರ್.ಸ್ವಾಮಿಯವರು ಕೊರಚ ಭಾಷೆಗೆ ಅನುವಾದಿಸಿದ್ದಾರೆ. ಹೀಗೆ ಕತೆಗಳು ಮೂರೂ ಭಾಷೆಗಳಲ್ಲಿ ದಾಖಲುಗೊಂಡಿವೆ. ಬುದ್ಧ ಕತೆಗಳಲ್ಲದೆ ಬೇರೆ ಕಥಾವಸ್ತುವುಳ್ಳ ಕತೆಗಳೂ ಇವೆ.
ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಚರಿತ್ರೆಯನ್ನು ಸಂಕ್ಷಿಪ್ತವಾಗಿ ಪ್ರಶ್ನೋತ್ತರಗಳ ಮೂಲಕ ಪರಿಚಯಿಸಿರುವುದು ಈ ಕೃತಿಯ ಇನ್ನೊಂದು ವಿಶೇಷ. ಬುದ್ಧ ಮತ್ತು ಡಾ. ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಚ್.ಆರ್. ಸ್ವಾಮಿಯವರ ಸಾಮಾಜಿಕ ತಾತ್ವಿಕತೆ ಮತ್ತು ಬದ್ಧತೆ ಪ್ರಕಟಗೊಂಡಿದೆ. ಈ ಮೂಲಕ ಇದೊಂದು ಭಾಷಾ ಪದವಿವರಣೆಗೆ ಸೀಮಿತವಾಗದೆ, ಸಾಮಾಜಿಕ ಪ್ರಜ್ಞಾವಾಹಿನಿಯನ್ನು ಒಳಗೊಂಡ ಕೃತಿಯಾಗಿದೆ.
ಡಾ. ಎಚ್.ಆರ್. ಸ್ವಾಮಿಯವರ ಈ ಕೃತಿಯು ಭಾಷಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ದೃಷ್ಟಿಯಿಂದ ಒಂದು ಅದ್ಭುತ ದಾಖಲೆಯಾಗಿದೆ. ಮುಂದಿನ ಅಧ್ಯಯನಾಸಕ್ತಿಗೆ ಅಪೂರ್ವ ಆಕರವಾಗಿದೆ; ಇದೇ ರೀತಿಯಲ್ಲಿ ಕೆಲಸ ಮಾಡುವವರಿಗೆ ಒಂದು ಪರೋಕ್ಷ ಪ್ರೇರಣೆಯೂ ಆಗುತ್ತದೆ. ಈ ಎಲ್ಲ ಕಾರಣಗಳಿಂದ ಗೆಳೆಯ ಎಚ್.ಆರ್. ಸ್ವಾಮಿಯವರು ಅಭಿನಂದನಾರ್ಹರಾಗಿದ್ದಾರೆ.
ಪ್ರೊ. ಬರಗೂರು ರಾಮಚಂದ್ರಪ್ಪ






0 Comments