ಡಾ. ಚನ್ನಬಸವ ಆಸ್ಪರಿ ಅವರ ‘ಸಂತೆಯೊಳಗಣ ಮೌನ’
‘ಸಮೃದ್ಧಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಪಂಪಾರೆಡ್ಡಿ ಎನ್ ಗಚ್ಚಿನಮನಿ ಅವರ ಬರಹ ಇಲ್ಲಿದೆ.
-ಪಂಪಾರೆಡ್ಡಿ ಎನ್ ಗಚ್ಚಿನಮನಿ
ಸಹಾಯಕ ಪ್ರಾಧ್ಯಾಪಕರಾದ ಡಾ. ಚನ್ನಬಸವ ಆಸ್ಪರಿ ಅವರ 42 ಕವಿತೆಗಳ ಚೊಚ್ಚಲ ಕವನ ಸಂಕಲನ. ವಿಶಿಷ್ಟವಾದ ಮುಖಪುಟದಿಂದಾಗಿ ಸಾಹಿತ್ಯಾಸಕ್ತರ ಗಮನವನ್ನು ತಕ್ಷಣವೇ ಸೆಳೆಯುವ ಈ ಕೃತಿ, ನಾಡಿನ ಖ್ಯಾತ ಸಾಹಿತಿಗಳು, ವಿಮರ್ಶಕರೂ ಆದ ಓ.ಎಲ್. ನಾಗಭೂಷಣ ಸ್ವಾಮಿ ಅವರ ಮುನ್ನುಡಿಯೊಂದಿಗೆ ತೆರೆದುಕೊಳ್ಳುತ್ತದೆ. ಓ.ಎಲ್.ಎನ್. ರವರು ಈ ಕೃತಿಯ ಮಹತ್ವದ ಕವಿತೆಯಾದ ‘ಮಾತಿನ ಬಗ್ಗೆ ಒಂದೆರಡು ಮಾತು’ ಎನ್ನುವ ಕವಿತೆಯ ಬಗ್ಗೆ ಮಾತನಾಡುತ್ತಾ, ಕವಿತೆಯ ಕೊನೆಯ ಸಾಲಾದ “ನನ್ನ ಮಾತಿನ ಬಗ್ಗೆ ಮಾತನಾಡಿದರೆ ಹುಷಾರು” ಎನ್ನುವುದನ್ನು ಕವಿಯು ವಿಮರ್ಶಕರಿಗೆ ಸೂಕ್ಷ್ಮವಾಗಿ ಎಚ್ಚರಿಸಿದಂತಿದೆ ಎಂದು ಲಘು ಹಾಸ್ಯದಲ್ಲಿ ಹೇಳಿರುವುದು ಗಮನ ಸೆಳೆಯುತ್ತದೆ. ಶ್ರೀಯುತರು ಕವಿಯ ನವ ರೂಪಕಗಳಾದ ‘ನೀರ ಮೂಟೆ’, ‘ಜೋಮು ಹಿಡಿದ ಕಾಲುಗಳ ಹಡಗು’ ಇತ್ಯಾದಿಗಳನ್ನು ವಿಶೇಷವಾಗಿ ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕವಿಯ ಆಯ್ದ ಶಬ್ದಗಳು ಚಿತ್ರ-ರೂಪಕಗಳಂತೆ ಗಮನ ಸೆಳೆಯುತ್ತವೆ.
‘ಮಧು ಬಟ್ಟಲಲಿದೆ ಪ್ರೀತಿ’ ಕವನವನ್ನು ಇಷ್ಟಪಡುವ ಅವರು ‘ಅವ್ವ’ ಎನ್ನುವ ಕವನವನ್ನು ಈ ಸಂಕಲನದ ಬಹುಮುಖ್ಯ ರಚನೆ ಎನ್ನುತ್ತಾರೆ. ಕನ್ನಡದಲ್ಲಿ ಬಂದಿರುವ ತಾಯಿಯನ್ನು ಕುರಿತ ಉತ್ತಮ ರಚನೆಗಳಲ್ಲಿ ಇದು ಒಂದು ಎನ್ನುವ ಅವರ ಹೇಳಿಕೆ ಯುವ ಬರಹಗಾರನಿಗೆ ಒಂದು ಪ್ರಶಸ್ತಿಯಾಗಿದೆ. ‘ಗೊಂದಲಪುರ’ ಎನ್ನುವ ಕವನ ಅಡಿಗರ ಪ್ರಸಿದ್ಧ ರಚನೆಯನ್ನು ನೆನಪಿಗೆ ತರುತ್ತದೆ.
‘ಬೊಗಸೆ ಬೆಳಕಾದರೂ ಉಳಿಯಲಿ’ ಎನ್ನುವ ಕವನದ ಎರಡು ಸಾಲುಗಳಾದ “ಸುರುಸುರು ಬತ್ತಿಯೂ ಮೈ ಸುಟ್ಟುಕೊಳ್ಳದಿದ್ದರೆ ಬೊಗಸೆ ಬೆಳಕಿನ ಗುರುತಾದರೂ ಉಳಿದೀತು ಹೇಗೆ” ವ್ಯಕ್ತಿಯ ಶಕ್ತಿ ಮತ್ತು ಪರಿಮಿತಿಯನ್ನು ಸೂಚಿಸುತ್ತವೆ. ಈ ಕವನ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಹಣತೆಯ ಕುರಿತ ಪ್ರಸಿದ್ಧ ಸಾಲುಗಳನ್ನು ನೆನಪಿಗೆ ತರುತ್ತದೆ.
ಬೆನ್ನುಡಿಯಲ್ಲಿ ಪ್ರೊ. ಬಸವರಾಜ ಡೋಣೂರ ಅವರು ಕೃತಿಯ ವಸ್ತು ವೈವಿಧ್ಯತೆ, ಆಪ್ತ ಶೈಲಿಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಕವಿಯ ಸಾಮರ್ಥ್ಯ, ಸಾಧ್ಯತೆಗಳ ಕುರಿತು ಮಾತನಾಡುತ್ತಾರೆ. ಹೆಚ್ಚಿನ ಓದು, ಜೀವನಾನುಭವದ ಅಗತ್ಯತೆಯನ್ನು ಒತ್ತಿ ಹೇಳುತ್ತಾ, ಕೃತಿಯ ಕುರಿತು ಅಪೂರ್ವ ಒಳನೋಟಗಳನ್ನು ನೀಡುವುದರ ಜೊತೆಗೆ ಎಂದಿನಂತೆ ಗುರುಗಳಾಗಿ ಆಶೀರ್ವದಿಸಿ ಹಾರೈಸುತ್ತಾರೆ.
ಇನ್ನು ಕೃತಿಯ ಇನ್ನುಳಿದ ರಚನೆಗಳ ಬಗ್ಗೆ ನೋಡುವುದಾದರೆ, ಮಾತು-ಮೌನ, ಅವುಗಳ ಮಹತ್ವದ ಕುರಿತು ಮಾತನಾಡಲೇಬೇಕಾದ ಅನಿವಾರ್ಯತೆಯನ್ನು ಈ ಕವನ ಸಂಕಲನ ಸೃಷ್ಟಿಸುತ್ತದೆ. ಇಲ್ಲಿನ ಕವನಗಳು ಮೌನವನ್ನು ಧ್ಯಾನಿಸಿ ಬರೆದವುಗಳೇ ಆಗಿದ್ದರೂ, ಮೌನವನ್ನು ಧ್ಯಾನಿಸುವ ಮಾಧ್ಯಮವಾದರೂ ಯಾವುದು? ತುಟಿಗಳು ಬಿಗಿಯಾಗಿದ್ದರೂ ಅವು ಎಂದಿಗೂ ಮಾತಿಗೆ ಅಣೆಕಟ್ಟಾಗಲಾರವು. ಅವು ‘ಶಬ್ದ’ವನ್ನು ತಡೆಯಬಲ್ಲವು ಅಷ್ಟೇ. ಆದರೂ ಮೌನವೆಂಬ ವಸ್ತುವೊಂದಿದೆ. ಅದು ಒಂದು ಸ್ಥಿತಿಯೂ ಆಗಿರಬಹುದು.
ಮೌನವೆಂದರೆ ಅನಾವಶ್ಯಕ ಮಾತುಗಳನ್ನಾಡದೆ ಇರುವುದು ಎನ್ನುವುದೇ ಕವಿಯ ಆಶಯವಾಗಿರಬಹುದು. ಅದರಲ್ಲಿಯೂ ಸಂತೆಯಲ್ಲಿ ಇರಬಹುದಾದ ಮೌನ ವಿಶೇಷ. ಸಂತೆಯೆಂಬುದೇ ಗದ್ದಲದ ಕೊಡು-ಕೊಳ್ಳುವಿಕೆಯ ರೂಪಕ. ಆದ್ದರಿಂದಲೇ ಸಂತೆಯೊಳಗಿನ ಮೌನಕ್ಕೆ ಪ್ರಾಮುಖ್ಯತೆ ಹೆಚ್ಚು. ಅದು ದುಬಾರಿ ಕೂಡ. ಸ್ವಾರಸ್ಯವೆಂದರೆ ಇಂದು ಮಾತು ಕೂಡ ದುಬಾರಿಯಾಗಿದೆ. ಜನರಿಗೆ ಸಮಯವಿಲ್ಲ, ಹಣವಿದೆ ಆದರೆ ಸಾಲುತ್ತಿಲ್ಲ.
“ಶಬ್ದಗಳನ್ನು ಒದ್ದು ಹೋದ ಬುದ್ಧ ಲೋಕದ ಮಾತಾದ” – ಹೌದು, ಮೌನ-ಧ್ಯಾನಗಳನ್ನು ಪ್ರತಿಪಾದಿಸಿದ ಬುದ್ಧ ಲೋಕದ ಮಾತಾದ. ಕವಿ ಮತ್ತೆ ಇಲ್ಲಿ ಮೌನದ ಪಕ್ಷದಲ್ಲಿ ನಿಂತು ಮಾತನ್ನು ಬೆಂಬಲಿಸುತ್ತಾರೆ. ಗೌತಮನಿಗೆ ಬುದ್ಧ ದೊರೆತದ್ದು ಮೌನದಿಂದಲೇ, ಆದರೆ ಲೋಕಕ್ಕೆ ಬುದ್ಧ ದೊರೆತದ್ದು ಮಾತಿನಿಂದ. ಇದೇ ಚಮತ್ಕಾರ! ಕವಿ ತನ್ನೆಲ್ಲ ಮಾತಿನ ಕುರಿತಾದ ಕವಿತೆಗಳಲ್ಲಿ ಮಾತಿನ ಪರವಾಗಿಯೇ ಇದ್ದಂತಿದೆ. “ಶಬ್ದಕ್ಕೆ ಅಂಟದ ಮಾತು, ಅಂತಃಕರಣದ ಸೇತುವಾದ ಮಾತು, ಎದೆಯಿಂದ ಎದೆಗೆ ಸಾಗುತ್ತದೆ” ಎನ್ನುವಲ್ಲಿ ಅರ್ಥಪೂರ್ಣವಾದ ಮಾತೇ ಗೆದ್ದಂತಿದೆ ಅಲ್ಲವೇ? ಆದರೆ ಕವಿಯ ಮೌನದ ಬಗ್ಗೆ ನಾವು ಮಾತನಾಡಬೇಕಾಗಿರುವುದು ವಿಪರ್ಯಾಸ! ಒಟ್ಟಿನಲ್ಲಿ ಮಾತಿಲ್ಲದೆ ಮೌನವಿಲ್ಲ. ಮಾತು ದೀಪವಾದರೆ ಮೌನ ಕತ್ತಲೆಯಲ್ಲ, ಏಕೆಂದರೆ ಮಾತಿಲ್ಲದೆಡೆ ಉಳಿದಿರುವುದೇ ಮೌನ.
‘ಮುಂದೊಂದು ದಿನ’ ಎನ್ನುವ ಕವನದೊಂದಿಗೆ ಆರಂಭವಾಗುವ ಈ ಸಂಕಲನ ಪ್ರಸ್ತುತ ಸ್ಥಿತಿಯನ್ನು ದಾಟಿ ಮುಂದೊಂದು ದಿನ ಒಳ್ಳೆಯದಾಗಲಿದೆ ಎನ್ನುವ ಆಶಾಭಾವದಿಂದ ಕೂಡಿದೆ. ‘ತೇಪೆ’ ಎನ್ನುವ ಬಹಳ ಆಕರ್ಷಕ ರಚನೆಯಲ್ಲಿ ‘ತೇಪೆ’ ಎನ್ನುವ ಪದವೇ ಮುಚ್ಚುವುದು, ಸರಿ ಇರದೇ ಇದ್ದುದನ್ನು ಅಡಗಿಸುವುದು ಎನ್ನುವ ಅರ್ಥ ಹೊಂದಿದೆ. ಆದರೆ ಇಲ್ಲಿ ಕವಿ ಸರಿಯಾದದ್ದು ಆದರೆ ಬಹಿರಂಗವಾಗಿ ಹೇಳಿದರೆ ಅಪಾಯವಾಗಬಲ್ಲದ್ದನ್ನು ಮುಚ್ಚುತ್ತಿದ್ದಾನೆ. ಏಕೆಂದರೆ ಸತ್ಯ ಹೇಳುವ ಕಾಲ ಇದಲ್ಲ. ‘ನನ್ನದೇನಿದೆ’ ಎನ್ನುವ ಪದ್ಯ ಬದುಕು ಯಾರ್ಯಾರದೋ ಋಣದ ಸುತ್ತ ಹೆಣೆದ ವೃತ್ತಾಂತವಾಗಿದೆ. ‘ನಂಜು’ ಎನ್ನುವ ಕವಿತೆಯಲ್ಲಿ ಕವಿ ನೋವಿನ ನೆನಪು, ಅದರ ತೀವ್ರತೆಯ ಬಗ್ಗೆ ಹೇಳುತ್ತಾರೆ. ಮನೋವೈಜ್ಞಾನಿಕವಾಗಿ ನಲಿವಿಗಿಂತ ನೋವಿನ ತೀವ್ರತೆ ಹೆಚ್ಚಾಗಿರುತ್ತದೆ. ಆದ್ದರಿಂದ ನಮ್ಮ ಮನೋಭಿತ್ತಿಯಲ್ಲಿ ನೋವಿನ ಪಾಲೇ ಅಧಿಕ. ಇಲ್ಲಿ ನೋವು ನೀಡಿದವರಿಗಿಂತ ನೋವಿನ ನೆನಪೇ ಪ್ರಭಾವಶಾಲಿ. ‘ಹೀಗೂ ಆಗುತ್ತದೆ’ ಎನ್ನುವ ಕವನದಲ್ಲಿ ವೈರುಧ್ಯಗಳ ಚಿತ್ರಣವಿದೆ.
‘ಕವಿತೆ ಹಡೆಯುವುದೆಂದರೆ ಹಗುರ ಮಾತಲ್ಲ’ – ವಾಸ್ತವವಾಗಿದೆ. “Poetry is not everybody’s cup of tea.” ಕಾವ್ಯ ಎಲ್ಲರಿಗೂ ದಕ್ಕುವಂತದ್ದಲ್ಲ, ಇನ್ನೂ ಬರೆಯುವುದೆಂದರೆ ಮಗುವನ್ನು ಹೆತ್ತಂತೆಯೇ ಸರಿ. ಕವನ ಹುಟ್ಟುವಿಕೆಯನ್ನು ಮಗುವಿನ ಹುಟ್ಟುವಿಕೆಯೊಂದಿಗೆ ಹೋಲಿಸಿರುವುದೇ ಬಹಳ ಸುಂದರವಾಗಿದೆ. ಗದ್ಯದಲ್ಲಿ ಬರಹಗಾರ ಓದುಗರನ್ನು ಬರಹದಲ್ಲಿ ಇಳಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಪದ್ಯದಲ್ಲಿ ಓದುಗನೇ ಸ್ವತಃ ಬರಹದಲ್ಲಿ ಇಳಿಯಬೇಕಾಗುತ್ತದೆ.
ಕವಿ ಆಗಾಗ ಶರಾಬು, ಮಧು-ಬಟ್ಟಲು, ಬಿಯರು ಇತ್ಯಾದಿ ಸಂಕೇತಗಳನ್ನು ಬಳಸುತ್ತಾರೆ. ಪ್ರೀತಿ ಅಮಲಿನಂತೆ ಇರಬಹುದು. ಕವಿಗೆ ತಾವು ಬಳಸಿದ ಸಂಕೇತಗಳ ಅನುಭವವೂ ಸೇರಿದರೆ ಇನ್ನೂ ಉತ್ತಮವಾದ ಕವನಗಳನ್ನು ಹಡೆಯಬಹುದು ಅಲ್ಲವೇ? ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ಅನುಭವಿಸಿ ಬರೆಯಬೇಕೆಂದೇನೂ ಇಲ್ಲವಲ್ಲ. ಒಂದು ವೇಳೆ ಹಾಗಿದ್ದರೆ ಯಾರು ತಾನೇ ಸಾಯದೆ ಸಾವಿನ ಬಗ್ಗೆ ಬರೆಯಲು ಸಾಧ್ಯವಾಗುತ್ತಿತ್ತು?
ಈ ಮೊದಲೇ ಉಲ್ಲೇಖಿಸಿದಂತೆ ‘ಅವ್ವ ಎಂಬ ರೇಖಾಚಿತ್ರ’ ಬಹಳ ಅಪರೂಪದ, ಸರ್ವರಿಗೂ ಹತ್ತಿರವಾಗುವ ರಚನೆ. ತಾಯಿಯ ಬಗ್ಗೆ ಏನೇ ಬರೆದರೂ ಅದು ಪೂರ್ಣವಾಗಲಾರದು. ಶಾಲಾ ಬಾಲಕನೋರ್ವ ಬರೆದ ತನ್ನ ಪ್ರೀತಿಯ ಅಮ್ಮನ ಚಿತ್ರದ ಬಗ್ಗೆ ಅವನಿಗೆ ಪ್ರೀತಿಯಿದೆ ಆದರೆ ತೃಪ್ತಿಯಿಲ್ಲ. ಈ ಭಾವನೆ ಬಹಳ ಇಷ್ಟವಾಗುತ್ತದೆ. ಅವ್ವನನ್ನು ಯಾರೂ ಇಷ್ಟೇ ಎಂದು ಚಿತ್ರಿಸಲು ಸಾಧ್ಯವೇ ಇಲ್ಲ.
‘ಅಪ್ಪನೂ ಬೆಂಗಳೂರೂ’ ಕವನದಲ್ಲಿ ಅಪ್ಪನಿಗೆ ಬೆಂಗಳೂರೆಂದರೆ ಪ್ಲಾಸ್ಟಿಕ್ ಹೂ ಬಿಡುವ ಮಾಯನಗರಿ ಎನ್ನುವ ಸಾಲು ಅಪ್ಪನ ಮುಗ್ಧತೆಯನ್ನು ಸೂಚಿಸಿದರೆ, ಕವಿಯ ತಂದೆಯವರನ್ನು, ಅವರ ಲೋಕಜ್ಞಾನವನ್ನು ಬಲ್ಲವನಾದ ನಾನು ಅದು ಅಪ್ಪನ ಬುದ್ಧಿಪೂರ್ವಕ ವಿಡಂಬನೆ ಎಂದು ಭಾವಿಸುತ್ತೇನೆ. ಹೀಗೆ ಕವನ ಸಂಕಲನದ ಗಾಂಧಿ ಯುಗ, ಇಳಿ ಸಂಜೆಯ ಸ್ವಾಗತ, ವರ್ತಮಾನದ ಕೃತ್ರಿಮತೆ ಮತ್ತು ಭೂತದೆಡೆಗಿನ ಪ್ರೇಮವನ್ನು ತೋರಿಸಿದರೆ, ‘ನಿನ್ನೊಳಗೆ ಇಲ್ಲವಾಗುತ್ತಾ’ ಎನ್ನುವ ಕವನ ಶೃಂಗಾರ-ಸರಸವಾಗಿದೆ. Emojiಗಳು ಮಾತಾಡುವಲ್ಲಿ ಬಹಳ ಸಕಾಲಿಕವಾದ ಕವನವಾಗಿದೆ. ಗೊಂದಲಪುರದಂತೆ ಇಲ್ಲಿಯೂ ಕೃತಕ ಭಾವನೆಗಳ ವಿಡಂಬನೆ ಇದೆ. ‘ಸಾವ ಕೊಲುವ ಬದುಕು’ ಕವನದಲ್ಲಿರುವ “ಭವದ ಸಂತೆಯ ಭರದ ವ್ಯಾಪಾರದಲ್ಲಿ ಸಾವು ಹಗ್ಗದ ಸರಕು” ಎನ್ನುವ ಸಾಲು ಮತ್ತು ಸತ್ತ ಮನೆಯ ಚಿತ್ರಣ ಅದ್ಭುತ!
ಈ ಕವನ ಸಂಕಲನದ ವಿಶೇಷತೆಗಳೆಂದರೆ ‘ಹಾಗೆ ಉದುರಿದ ಆತ್ಮದ ಪಕಳೆಗಳು’ ಮತ್ತು ಕೊನೆಯಲ್ಲಿನ ಕೆಲವು ವ್ಯಾಖ್ಯಾನಗಳು. ಬಹುದಿನಗಳ ಕಾಲ ನೆನಪಿನಲ್ಲಿ ಉಳಿಯುವಂತಹವು. ಉದಾಹರಣೆಗೆ:
ಮಾತಿನ ಗೊಡವೆ ಬೇಡವೆಂದು
ಮೌನದ
ಸಂಗ ಮಾಡಿದೆ
ಈಗ
ಮೌನದ ಜೊತೆಗೆ ಮಾತಿಗೆ ಶುರು ಹಚ್ಚಿಕೊಂಡಿದ್ದೇನೆ
ಈ ಕವನ ಸಂಕಲನವನ್ನು ಒಂದು ಕಾರ್ಯಕ್ರಮಕ್ಕೆ ಹೋಲಿಸಿದರೆ, ಬುದ್ಧ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದಾನೆ. ಸದಾ ಮೌನ, ಮಾತು ಇತ್ಯಾದಿಗಳೊಂದಿಗೆ ವೇದಿಕೆ ಮೇಲೆಯೇ ಇರುತ್ತಾನೆ. ಅಲ್ಲಮ ಪ್ರಭು ಮುಖ್ಯ ಅತಿಥಿಯಾಗಿ ಬಯಲು, ಶೂನ್ಯ ಮುಂತಾದ ರೂಪಕಗಳೊಂದಿಗೆ ವಿಶೇಷವಾಗಿ ಆವರಿಸುತ್ತಾನೆ.
ಒಟ್ಟಿನಲ್ಲಿ ಕವಿ ತನ್ನ ಅಪಾರವಾದ ಓದು, ಸೂಕ್ಷ್ಮ ಗ್ರಹಿಕೆ, ಭಾಷೆಯೆಡೆಗಿನ ತೀವ್ರ ಸೆಳೆತ, ಸಹೃದಯತೆ, ನವಿರು ಹಾಸ್ಯ ಇತ್ಯಾದಿ ಗುಣಗಳಿಂದ ಓದುಗರನ್ನು ಸೆಳೆಯುತ್ತಾರೆ. ಸುಲಭವಾಗಿ ಓದಿಸಿಕೊಂಡು ಹೋಗುವ ಕವನಗಳ ಆಕರ್ಷಣೆಗೆ ಒಳಗಾಗದೆ ಬೇರೆ ವಿಧಿಯಿಲ್ಲ. ಇತ್ತೀಚಿನ ದಿನಗಳಲ್ಲಿ ಓದುಗರನ್ನು ಆಕರ್ಷಿಸುವ, ಸೆರೆ ಹಿಡಿಯುವ ಕೆಲವೇ ಕೆಲವು ಕವಿಗಳಲ್ಲಿ ಚನ್ನಬಸವ ಆಸ್ಪರಿ ಕೂಡ ಒಬ್ಬರು, ಅದೂ ಕೂಡ ತಮ್ಮ ಚೊಚ್ಚಲ ಕೃತಿಯ ಮೂಲಕ ಎನ್ನುವುದು ವಿಶೇಷ. ನಿಮ್ಮಿಂದ ಮತ್ತೆ ಮತ್ತೆ ಇಂಥ ಕವನ ಸಂಕಲನಗಳು ಬರಲಿ, ಅಭಿನಂದನೆಗಳು.






0 Comments