-ಸರೋಜಿನಿ ಪಡಸಲಗಿ
ಅಹಂ ದ ಅಸ್ತಿತ್ವವನ್ನ ನಮ್ಮೊಂದಿಗೆ ಬೆಸೆಯುವ ಮುಖ್ಯ ಅಂಶ ” ಅಸಹನೆ” ! ಬಲು ವಿಚಿತ್ರ ವಿಷಯ ಇದು. ಮನ ಒಪ್ಪದಿದ್ರೂ ಅಸಹನೆಯೇ ಅಹಂ ದ ತವರು! ಅದೂ ಯಾವಾಗಿನಿಂದ? ಮನುಷ್ಯನಲ್ಲಿಯ ಅಸಹನೆ – ಹುಟ್ಟಿನಿಂದಲೇ ಏನು ಗರ್ಭಸ್ಥ ಶಿಶುವಾಗಿದ್ದಾಗಿನಿಂದಲೇ ಜೊತೆಗೆ ಇದ್ದ ಅಸಹನೆ! ಹೌದು ಅಲ್ಲಿಂದಲೇ ಶುರು ತನಗೆ ಎನ್ನೋದು! ಯಾವಾಗ ಅಂದ್ರೆ ಅಲ್ಲಿ ತಾಯ ಗರ್ಭದಲ್ಲಿರುವಾಗಲೇ ಏನಾದರೂ ಏರು ಪೇರು ಆದರೆ ಭ್ರೂಣಾವಸ್ಥೆಯಲ್ಲಿರುವ ಶಿಶುವಿನ, ಹಾಗೇ ಕೊಂಚ ಬೆಳೆದ ಶಿಶುವಿನ ಒದ್ದಾಟ ಶುರು ಆಗೋದನ್ನ ಗಮನಿಸಿದರೆ ಕಲ್ಪನೆ ಬಂದೀತು. ಗರ್ಭದ ಆವರಣವನ್ನೇ ಹರಿದು ಬರುವ ರಭಸದ ಆ ಶಿಶುವಿನ ಒದೆಯುವಿಕೆಯನ್ನ ಆ ತಾಯಿ ಮಗುವಿನ ಮಿಸುಕಾಟ ಅಂತ ಆ ಅನುಭವವನ್ನ ಆನಂದಿಸ್ತಾಳೆ! ಗರ್ಭಕೋಶದ ಭಿತ್ತಿಯ ಅಡೆತಡೆ ಶಿಶುವಿಗೆ ಅಸಹನೆ ಉಂಟು ಮಾಡ್ತಿದೆ, ಇದು ಆ ಶಿಶುವಿನ ತಾನು ತನ್ನತನದ ಬೆಳವಣಿಗೆ ಎಂದು ಎಂದೂ ತಪ್ಪಿಯೂ ಅನ್ನದೇ!! ಇದೂ ಸೃಷ್ಟಿಯ ವೈಚಿತ್ರ್ಯವೇ !!
ಹಾಗೇ ಶಿಶು ಬೆಳೆದು ಮಗುವಾಗೋ ಈ ಬೆಳವಣಿಗೆಯಲ್ಲೂ ಕಾಣ್ತೀವಿ ಇದನ್ನ! ಶಿಶುವಿನ ಅಳುವನ್ನ ಗಮನಿಸಲು ತಡವಾದಾಗ ಅಸಹನೆ ಉಬ್ಬರಿಸಿ ತನ್ನತ್ತ ಅಂದ್ರೆ ತನ್ನ ಅಸ್ತಿತ್ವದತ್ತ ಗಮನ ಸೆಳೆಯುವ ಪ್ರಯತ್ನ ಅಳುವಾಗಿ ನಾ ಎಂಬುದರ ಅಸ್ತಿತ್ವದ ಪ್ರಾಧಾನ್ಯತೆಯ ಮುಂದಿನ ಮೆಟ್ಟಿಲು ಅಲ್ಲಿಂದಲೇ ಶುರು ಅನ್ನಬಹುದೋ ಏನೋ!
ಈಗ ಇಲ್ಲಿ ಒಂದು ಮಾತು ಹೇಳಬಹುದು. ಪ್ರತಿ ಅಸಹನೆ ಎಂಬುದು ಬಲು ಆಳ ಆಳದ ಅರ್ಥ ಉಳ್ಳದ್ದು! ಸಾಮಾನ್ಯವಾಗಿ ಅರ್ಥೈಸೋ ಹಾಗೆ ಇನ್ನೊಬ್ಬರ ಸಲುವಾಗಿ, ಇನ್ನೊಂದು ಜಾತಿ,ಧರ್ಮ ಪಂಥ ಇವುಗಳ ಸಲುವಾಗಿ ಇರೋದಲ್ಲ – ಖಂಡಿತವಾಗಿಯೂ ಅಲ್ಲ!! ಈ ಅಸಹನೆ ನಮ್ಮಲ್ಲಿರುವ ನನ್ನ ಸಲುವಾಗಿಯೇ! ಹೌದು ನನ್ನ ಸಲುವಾಗಿ! ಆ ನನ್ನ ಎಂಬುದು ಅಸಾಧ್ಯದ ಹಂಬಲಗಳ ಗೂಡು! ಯಾವಾಗ ಆ ನನ್ನ ಸಲುವಾಗಿ, ನನ್ನದು ಅಂದುಕೊಂಡಿದ್ದರಲ್ಲಿ ವ್ಯತ್ಯಾಸ ಕಾಣ್ತದೋ ಆಗ ಒಂದು ವಿಚಿತ್ರ ಒತ್ತಡದ ಅನುಭವ ಒಳಗೇ ಹುಟ್ಟೋದನ್ನ ಕಾಣಬಹುದು. ಒಂದು ಹಟ,ಛಲ! ಈ ಹಟ ಛಲವೇ ಅಹಂ! ಅಸಹನೆಯ ಕೂಸು!
ಅದು ಯಾವುದೇ ರೂಪದಲ್ಲಿ ಪ್ರಕಟವಾಗ ಬಹುದು! ಇಂಥದೇ ಅಂತ ಇಲ್ಲ; ಈ ಬ್ರಹ್ಮಾಂಡ ಬಲು ವಿಶಾಲ! ಒಂದು ಮಾತು ಕಟುವಾದರೂ ಸತ್ಯ – ಎಲ್ಲ ತೊರೆದ ಯೋಗಿಗೂ ಉಂಟು ಈ ಅಸಹನೆ ; ಅಲ್ಲಿಂದ ಅಹಂ! ಅದು ಪ್ರಕಟವಾಗೋದು ಶಾಪ,ತಾಪಗಳ ರೂಪದಲ್ಲಿ – ಒಳ್ಳೆಯದಕ್ಕೋ,ಕೆಟ್ಟದ್ದಕ್ಕೋ!!
ಈ ನನಗಾಗಿ ಅಂದ್ರೆ ತನಗಾಗಿ ಎಂಬುದು ಬೆಳೆದಂತೆ ಉಬ್ಬರಿಸಿ ಒತ್ತಡಕ್ಕೊಳಗಾದಾಗ ಅಷ್ಟೇ ರಭಸದಿಂದ ಚಿಮ್ಮಿ ನಾನು ಆಗಿ ಹೊಮ್ಮುವುದು ಒಂದು ಸರಳ ಸಹಜ ಪ್ರಕ್ರಿಯೆಯ ಹಾಗೆ ನಡೆದು ಹೋಗ್ತದೆ! ಆ ನಾನು ಎಂಬ ಪ್ರಬಲ ಭಾವನೆ ಬೆಳೆದು ಹೆಮ್ಮರವಾಗಿ ಬದುಕಿನ ಸೂತ್ರವೇ ಅದು ಎಂಬಂತಾಗಲು ಈ ಅಸಹನೆಯೇ ಕಾರಣ ! ಅದು ಉಂಟು ಮಾಡುವ ಒತ್ತಡ ಅಷ್ಟು ತೀವ್ರ! ಅಸಹನೆಯ ರುದ್ರ ತಾಂಡವವನ್ನು ಮೆಟ್ಟಿಲು ಮೆಟ್ಟಿಲಾಗಿ ಬೆಳೆವ ಅಹಂ ದ ಬಲಿಯುವಿಕೆಯಲ್ಲಿ ಕಾಣಬಹುದು!
ಆ ಅಸಹನೆಯ ಒತ್ತಡದ ಅರಿವಾಗೋಷ್ಟು ಅರಿವು ಬೆಳೆದರೆ ಅದು ಒಂದು ಅಪ್ರತಿಮ ಸಾಧನೆ! ಬಹುಶಃ ಒಂದು ಪ್ರಬಲ ಶಕ್ತಿಯಾಗಿ ಆ ಅರಿವು ನಿಂತೀತು ಆ ಒತ್ತಡದ ತೀವ್ರತೆಯನ್ನ ಮೆಟ್ಟಿ ನಿಲ್ಲಲು! ಒಮ್ಮೆ ಈ ಒತ್ತಡದ ತೀವ್ರತೆಯನ್ನು ತುಳಿದು ಮೆಟ್ಟಿ ನಿಂತು ಹಿಮ್ಮೆಟ್ಟಿಸಬಲ್ಲರಾದರೆ ಸ್ಥಿತಪ್ರಜ್ಞತೆ ಸಾಧಿಸೀತು! ಆ ಸ್ಥಿತಪ್ರಜ್ಞರು ಎಲ್ಲ ಲೌಕಿಕ ದುರ್ಬಲತೆಗಳನ್ನ ಮೆಟ್ಟಿ ನಿಂತವರು! ಆ ಒಂದು ಔನ್ನತ್ಯಕ್ಕೆ ಏರೋದು ಒಂದು ಸಾಧನೆಯ ಹಾದಿಯಲ್ಲಿನ ಮೊದಲ ಮೆಟ್ಟಿಲು!!
ಓ ಅಸಹನೆಯೇ ಬಲು ಅವಾಢವಿ ವಿರಾಟ್ ಸ್ವರೂಪಿ ನೀ!! ನಿನ್ನ ಕಬಂಧ ಬಾಹುಗಳ ಹಿಡಿತದಿಂದ ನುಣುಚಿಕೊಳ್ಳುವ ದಾರಿ ಹುಡುಕುವಷ್ಟು ಸಹನೆ ನೀನೇ ನೀಡಬೇಕು!!






0 Comments