ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ – ೨ ೨
ಕೃತಿ – ಕಿಲಿಗ್
ಲೇಖಕರು – ಜಯರಾಮಚಾರಿ
ಕಿಲಿಗ್ – ಜಯರಾಮಚಾರಿ ಅವರ ೧೦೭ ಪುಟದ ಕಿರು ಕಾದಂಬರಿ. ನನಗೆ ಮೊದಲು ಆಕರ್ಷಿಸಿದ್ದು ಕಾದಂಬರಿಯ ಶೀರ್ಷಿಕೆ. “ಕಿಲಿಗ್” ಅದರ ಅರ್ಥ ಗಮನಿಸುವುದಾದರೆ ಭಾವತೀವ್ರತೆ,ಪ್ರೇಮಾನುಭೂತಿ ಅಥವಾ ಒಡಲಲ್ಲಿ ಚಿಟ್ಟೆ ಹಾರಿದ ಭಾವ ಒಟ್ಟಾರೆ ಪ್ರೀತಿ ಪ್ರೇಮದ ಪರಾಕಾಷ್ಠೆ ಎನ್ನಬಹುದೇನೊ…
ಇನ್ನು ಕಾದಂಬರಿಯ ಕಥಾವಸ್ತು ಸಿನಿಮೀಯ ರೀತಿಯಲ್ಲಿದ್ದು,ಕೂತುಹಲದಿಂದ ಓದಿಸಿಕೊಂಡು ಹೋಗುತ್ತದೆ. ಅನಿರೀಕ್ಷಿತ ತಿರುವು ನೀಡುತ್ತಾ,ಕೆಲವೊಮ್ಮೆ ಲಂಬಿಸುತ್ತಾ ಓದುಗನಿಗೆ ನಿರೀಕ್ಷೆ ಮೂಡುವಂತೆ ಮಾಡುತ್ತದೆ. ಇಡೀ ಕಾದಂಬರಿ ಪ್ರೀತಿ ,ಪ್ರೇಮ, ಪ್ರಣಯ,ಕಾಮ ಇದೆಲ್ಲದರ ಕಲಸುಮೇಲೋಗರವಾಗಿದ್ದು,ಯಾವುದು ಕೂಡ ಶುದ್ಧ ಪ್ರೇಮ, ಶುದ್ಧ ಸ್ನೇಹ ಎಂಬ ವ್ಯಾಖ್ಯಾನ ನೀಡುವಂತಿಲ್ಲ. ಯಾವುದೇ ಸಂಬಂಧಕ್ಕೆ ಅರ್ಥವಿಲ್ಲದೆ,ಆ ಕ್ಷಣದ ಬಯಕೆ ಪೂರೈಸುವ ಶಿಥಿಲವಾದ,ಸ್ವಾರ್ಥದ ನಂಟನ್ನು ಕಾಣಬಹುದು. ಇಡೀ ಕಾದಂಬರಿ ಹೆಣ್ಣು ಗಂಡಿನ ದೈಹಿಕ ಕಾಮನೆಗಳ ತೀವ್ರತೆ ಬಗ್ಗೆ ತುಸು ಹೆಚ್ಚಾಗಿಯೇ ವರ್ಣನೆಯನ್ನು ಮಾಡಿದ್ದು ಮಡಿವಂತ ಓದುಗರಿಗೆ ಇರಸು ಮುರಸು ಆಗದೆ ಇರದು. ಸದ್ಯದ ಮೆಟ್ರೋ ಸಂಸ್ಕೃತಿಯ,ಅಲ್ಲಿನ ಬದುಕಿನ,ಕೃತಕ ಸಂಬಂಧಗಳ ಚಿತ್ರಣವನ್ನು ಯಥಾವತ್ತಾಗಿ ಕಟ್ಟಿ ಕೊಟ್ಟಿದ್ದಾರೆ.
ಕಾದಂಬರಿಯಲ್ಲಿ ಮೂರು ಪಾತ್ರಗಳು ಮುಖ್ಯವಾಗಿದ್ದು,ಮಿಕ್ಕವು ಪೂರಕವಾಗಿ ಬರುತ್ತವೆ. ನಾಯಕ ಸತೀಶ್ ನಿಗೆ ಮೆಟ್ರೋ ರೈಲ್ ನಲ್ಲಿ ಕೆಲಸ, ಪ್ರೀತಿಸಿ ಮದುವೆಯಾದ ಹೆಂಡತಿ ರಂಜನಿ. ಅವಳಿಗೆ ಮಕ್ಕಳಿನ ತೀವ್ರ ಹಂಬಲ. ಅವನ ಗೆಳತಿ ಅಕ್ಷತಾ ಅವಳು ಇಂದಿನ ನಗರ ಸಂಸ್ಕೃತಿಯ ಅಥವಾ ಆಧುನಿಕ ಮನೋಭಾವ ಬಿಂಬಿಸುವ ಪಾತ್ರ. ಅವಳನ್ನು ಸತೀಶ್ ನ ಗೆಳತಿ ಎನ್ನಬಹುದೆ ಅಥವಾ ಅನುಕೂಲ ಅವಕಾಶಕ್ಕಾಗಿ ಬೆಸೆದ ಸಂಭಂಧವೆ ವ್ಯಾಖ್ಯಾನಿಸಲು ಆಗದು. ಅಕ್ಷತಾಳ ಅತ್ತೆಯ ಮಗ ಕಾಣೆಯಾದಾಗ ಅವನನ್ನು ಅರಸುವಲ್ಲಿ ಅಕ್ಷತಾನಿಗೆ ಸತೀಶ್ ನೆರವಾಗಿ ಸ್ನೇಹ,ಸಲುಗೆ ಬೆಳೆದರು ಆ ನಂಟು ಬಹಳ ದಿನ ಉಳಿಯುವುದಿಲ್ಲ. ಅವಳು ಅನ್ಯರ ಸ್ನೇಹ ಮಾಡುತ್ತ ಕೊನೆಗೆ ಆಸ್ಟ್ರೇಲಿಯಾದಲ್ಲಿ ದಾಂಪತ್ಯ ಕುದುರಿದರು ಅದು ಕೂಡ ಬಹಳ ದಿನ ನಡೆಯದೆ,ಗಂಡನ ನಡಾವಳಿಗೆ ಬೇಸತ್ತು, ಹೊಂದಿಕೆಯಾಗದೆ ಮಗುವಿನೊಂದಿಗೆ ಮುಂಬಯಿಗೆ ಮರಳಿ ಬರುತ್ತಾಳೆ.
ನಾಯಕ ಸತೀಶ್ ನಿಗೆ ಮದುವೆಯಾಗಿ, ಆತನ ಕುಟುಂಬದಲ್ಲಿ ಮಗುವಿನ ನಿರೀಕ್ಷೆ ಯಲ್ಲಿ ಇದ್ದಾಗ ಮತ್ತೆ ಅನಿರೀಕ್ಷಿತವಾಗಿ ಅಕ್ಷತಾ ಭೇಟಿಯಾಗಿ ಹಳೆಯ ಸಂಬಂಧಕ್ಕೆ ಮರುಜೀವ ಬರುತ್ತದೆ. ಹೆಂಡತಿ ಬಸುರಿಯಾಗಿ ತಾಯಿ ಮನೆಯಲ್ಲಿ ಇದ್ದಾಗ, ಅವನ ಖಾಲಿತನ ತುಂಬಲು ಅಕ್ಷತಾಳನ್ನು ಬಯಸುತ್ತಾನೆ. ಅವಳು ಗಂಡನಿಂದ ದೂರವಾಗಿ ಪುರುಷ ಸಂಗ ಬಯಸುವ ಅವಳಿಗೆ ,ಪ್ರಣಯದ ಉನ್ಮಾದದಲ್ಲಿ(ಕಿಲಿಗ್ ನಲ್ಲಿ) ಇಬ್ಬರೂ ಇದ್ದಾಗ,ಹೆಂಡತಿ ರಂಜನಿಗೆ ಹೆಣ್ಣು ಮಗು ಜನಿಸುತ್ತದೆ.ಆಗ ತನ್ನ ಮಗುವನ್ನು ಕಾಣಲು ಹಂಬಲಿಸಿ, ಅಕ್ಷತಾಳನ್ನು ದಾರಿಯಲ್ಲಿಯೇ ಬಿಟ್ಟು ಬರುತ್ತಾನೆ.ಹೆಂಡತಿ ಮತ್ತು ತನ್ನ ಮಗುವನ್ನು ಕಂಡು ಆತನಲ್ಲಿ ಪಾಪಪ್ರಜ್ಞೆ ಮಾಡುವುದರೊಂದಿಗೆ ಕತೆ ಅಂತ್ಯ ವಾಗುವುದು.ಈ ಮೊದಲು ತಾಯಿ ತೀರುವ ಸಂದರ್ಭದಲ್ಲಿ ಕೂಡ ನಾಯಕ ಜೊತೆಗಿರದೆ, ಅಬ್ಬೆಪಾರಿಯಾಗಿ ಅಲೆಯುವಾಗ ಅಮ್ಮತೀವ್ರ ಹೃದಯಾಘಾತದಿಂದ ತೀರಿ ಹೋಗುವಳು.ಹೀಗೆ ಅವನ ಅವಶ್ಯಕತೆ ಇದ್ದಾಗ ಬೇಡದ ನಂಟಿನಲ್ಲಿ ಸಿಲುಕಿ ಬೇಜವಾಬ್ದಾರಿಯಿಂದ ವರ್ತಿಸುವ ನಾಯಕ ಈತ ಆಧುನಿಕ ಯುವ ಪೀಳಿಗೆಯ ಪ್ರತೀಕ ಎನ್ನಿಸದೆ ಇರದು.
ಒಟ್ಟು ಕತೆ ಆಧುನಿಕ ಜಗತ್ತಿನ ಸ್ವಾರ್ಥದ ಹೆಣ್ಣು ಗಂಡಿನ ಸಂಬಂಧಗಳು, ಮೆಟ್ರೋ ಸಿಟಿಗಳ ಓಟ,ಅಲ್ಲಿನ ಮನುಷ್ಯ ಸಂಬಂಧಗಳಲ್ಲಿನ ವಿಕ್ಷಿಪ್ತತೆ,ಬಯಕೆಗಳಿಗೆ ಕಡಿವಾಣ ಇಲ್ಲದೆ ಮೌಲ್ಯವಿಹೀನ ಜೀವನ. ಅದರಲ್ಲೂ ಗೆಝೆಟ್ ಗಳ ಅತಿಬಳಕೆಯಿಂದ ಮನುಷ್ಯನು ಅದರ ದಾಸನಾಗುವುದನ್ನು ಕಾಣಬಹುದು. ಕತೆಯಲ್ಲಿ ರಿಯಾಲಿಟಿ ಷೊಗಳ ರಿಯಲ್ ಚಿತ್ರಣವನ್ನು ಚೆನ್ನಾಗಿ ಚಿತ್ರಿಸಿದ್ದು, ಅದು ಕತೆಯ ಮುನ್ನಡೆಗೆ ಸಹಕಾರಿ ಆಗಿದೆ.ಇಡೀ ಕಾದಂಬರಿ ನೈಜ ಪ್ರೀತಿ ಅದರ ಹುಡುಕಾಟ ,ನಾಯಕನ ಹಳವಂಡವನ್ನು ಬಣ್ಣಿಸಿದ್ದು,ಚಿಕ್ಕ ಚಿಕ್ಕ ವಾಕ್ಯಗಳಿಂದ ಒಂದೇ ಉಸಿರಿನಲ್ಲಿ ಓದಿಸಿಕೊಂಡು ಹೋಗುತ್ತದೆ.
ಗಂಡು ಹೆಣ್ಣಿನ ಸಂಬಂಧದ ಸೂಕ್ಷ್ಮ ಎಳೆಯನ್ನು ವ್ಯಾಖ್ಯಾನಿಸುವ ಸಣ್ಣ ಪ್ರಯತ್ನ ಲೇಖಕ ಮಾಡಿದ್ದಾರೆ. ಜಯರಾಮಚಾರಿ ಅವರ ಮೊದಲ ಪ್ರಯತ್ನದ ಕಾದಂಬರಿ ಚೆನ್ನಾಗಿ ಮೂಡಿ ಬಂದಿದೆ.






0 Comments