‘ಮೆಟ್ರೊ ಝೆನ್’ ಎನ್ನುವ ಕಾಲವ ಅರಿವ ಪರಿಯ ಕವಿತೆಗಳು

ಎಚ್ ಆರ್ ರಮೇಶ

ಮೆಟ್ರೊಝೆನ್ ಕನ್ನಡ ಕಾವ್ಯಕ್ಕೆ ಸೇರ್ಪಡೆಯಾಗಿರುವ ಹೊಸ ಕವನ ಸಂಕಲನ. ಇಡೀ ಸಂಕಲನದ ತುಂಬಾ ಹೊಸತನದಿಂದ ತುಂಬಿರುವ ಕವಿತಗಳಿಲ್ಲದಿದ್ದರೂ ಕೆಲವು ಕವಿತೆಗಳು ಹೊಸತನದಿಂದ ಕೂಡಿದ್ದು, ಭಾಷೆಯಿಂದಾಗಿ ಪ್ರಸ್ತುತದ ಕನ್ನಡ ಕಾವ್ಯ ಸಂದರ್ಭದಲ್ಲಿ ಗಮನಸೆಳೆಯಬಲ್ಲವಾಗಿವೆ. ಸಮಕಾಲೀನ ಕನ್ನಡ ಕಾವ್ಯ ಸಂದರ್ಭದಲ್ಲಿ ಇದೊಂದು ಪ್ಯಾರಡಿಮ್ ಶಿಫ್ಟ್ ಥರದ ಕೃತಿಯಾಗಿ ಕಾಣದಿದ್ದರೂ ಇಲ್ಲಿ ಬಳಕೆಯಾಗಲ್ಪಟ್ಟಿರುವ ತುಸುಮಟ್ಟಿಗಿನ ಬ್ಯಾಲೆನ್ಸ್ಡ್ ಭಾಷೆಯಿಂದಾಗಿ ಇತ್ತೀಚೆಗೆ ಬರುತ್ತಿರುವ ಅನೇಕ ಹೊಸ ಸಂಕಲನಗಳಲ್ಲಿ ಭಿನ್ನವಾಗಿ ನಿಲ್ಲುತ್ತದೆ. ಕವಿ ಇಲ್ಲಿ ತಾನು ಕಂಡದುದನು ತುಂಬಾ ಸಟಲ್ ಆಗಿ ತೋರಿಸುವ ಕುಶಲ ಮತಿಯನ್ನು ಮೆರೆದಿದ್ದಾರೆ.

ಕವಿತೆಯ ಮೂಲಕ ಬದುಕಿನ ಪರಿಯನ್ನು ಅರಿಯುವ ಕ್ರಮ ಓದುಗರನ್ನು ತುಂಬಾ ಸೂಕ್ಷ್ಮವಾಗಿ, ನಿಧಾನವಾಗಿ ಓದುವಂತೆ ಪ್ರೇರೇಪಿಸುತ್ತವೆ. ಕವಿಯೂ ಸಹ ತುಂಬಾ ಸೂಕ್ಷ್ಮವಾಗಿ ವಿವಿರಗಳ ಮೂಲಕ ಬದುಕಿನ ರೀತಿಯನ್ನು ತುಸು ಪ್ರಜ್ಞಾಪೂರ್ವಕವಾಗಿಯೇ ಹಿಡಿಯಲು ಯತ್ನಿಸಿರುವುದನ್ನು ಗಮನಿಸಬಹುದು. ಅದು ಸಂಪೂರ್ಣ ಸಾಕಾರಗೊಂಡಂತೆ ಕಾಣದಿದ್ದರೂ ಕವಿಯ ಶ್ರದ್ಧೆ, ಪ್ರೀತಿ ಮತ್ತು ಕಾಳಜಿಗಳಿರುವುದು ಪ್ರತಿ ಕವಿತೆಯ ಹಿಂದೆ ನಿಚ್ಚಳವಾಗಿ ಕಾಣುತ್ತದೆ.

ಇಲ್ಲಿಯ ಕವಿತೆಗಳಲ್ಲಿನ ನಿರೂಪಕ ತನ್ನ ಬದುಕು ಜಗತ್ತಿನ ಜೊತೆ ಮತ್ತು ಕಾಲದ ಜೊತೆ ಬೆಸೆದುಕೊಂಡಿರುವ ಪರಿಯನ್ನು ಕೆಲವೊಮ್ಮೆ ನಿರುಮ್ಮಳವಾಗಿ, ಕೆಲವೊಮ್ಮೆ ಮಾತನ್ನು ಮುಂದು ಮಾಡಿಕೊಂಡು ಚಿತ್ರಿಸುತ್ತ ಹೋಗಿರುವುದು ತುಂಬಾ ಚೇತೋಹಾರಿಯಾಗಿ ಮೂಡಿ ಬಂದಿದೆ. ಆದರೂ ಇಡೀ ಕವಿತೆಗಳನ್ನು ಓದಿದ ಮೇಲೆ ಇವು ಏಕ್‍ದಮ್ ಫ್ರೆಶ್ ಅನ್ನಿಸದಿದ್ದರೂ ಕ್ಲೀಷೆಯಲ್ಲದಪರಿಚಿತ ಕವಿತೆಗಳೆನ್ನಿಸುತ್ತವೆ.

ಭಾಷೆಯನ್ನು ಆದಷ್ಟು ಸೋಸಿ, ನಿಧಾನಗತಿಯಲ್ಲಿ ಸಹಜಗತಿಯ ಲಯವನ್ನು ದಕ್ಕಿಸಿಕೊಳ್ಳಲು ಕಷ್ಟಪಡುತ್ತ, ಅನುಭವವನ್ನು ಅಭಿವ್ಯಕ್ತಿಸಲು ಆಸ್ಥೆಯನ್ನು ಕವಿ ತೋರಿಸಿರುವರು. ಅಲ್ಲದೆ, ಕವಿತೆ ಅನುಭವವನ್ನು ದಕ್ಕಿಸಿಕೊಂಡು ಅದನ್ನು ಹೇಳುವುದಕ್ಕಿಂತ ಮಿಗಿಲಾಗಿ ಭಾಷೆಯನ್ನೇ ಹೈಲೈಟ್ ಮಾಡಿದಂತಿದೆ. ಅಥವಾ ಹೀಗೂ ಹೇಳಬಹುದು, ಕವಿ, ಭಾಷೆಗೆ, ಅದು ಹರಿದಂತೆ ಸಾಗಲು, ಸ್ವಾತಂತ್ರ್ಯವನ್ನು ಕೊಟ್ಟಂತಿದೆ. ದೇವರ ನಗು ಕವಿತೆಯಲ್ಲಿ ಹೀಗಾಗುತ್ತದೆ, ಇದು ಉದಾಹರಣೆಯಷ್ಟೆ. ಇನ್ನು ಅನೇಕವುಗಳನ್ನು ಗಮನಸಬಹುದು: ಸಾವಿನಂಚಿನಲಿ ಮಲಗಿರುವವನನು/ನೋಡಲು ಬಂದ ಮಗುವೇ/ನೀನೆಂದಿನಂತೆ ನಗುತಲಿದ್ದೆ/ಲೋಕದ ನಗು ಕರಗಿತು/ಕರಗಿತು ರೋಷ ಆವೇಶ ಕರುಣ.

ಮೆಟ್ರೋಝೆನ್ ಕವಿತೆಗಳ ಮೇಲೆ ಪಾಶ್ರ್ವವಾಗಿ ಎಸ್. ಮಂಜುನಾಥರ ಕವನಗಳ ನೆರಳನ್ನು ಕಾಣಬಹುದಾಗಿದೆ (ಅವರ ಕುರಿತು ಒಂದು ಕವಿತೆಯೂ ಇದರೊಳಗೆ ಇದೆ). ಇದು ಅಂತಹ ದೋಷವೇನಲ್ಲ, ಬದಲಿಗೆ, ಇದೊಂಥರ ಹೆಗ್ಗಳಿಕೆಯೇ ಹೌದು. ಹಿಂದಿನವರ ನೆರಳನ್ನು ಇಂದಿನವರ ಮೇಲೆ, ಇಂದಿನವರ ನೆರಳನ್ನು ಮುಂದಿನವರ ಮೇಲೆ ಕಾಣುವುದನ್ನು ರೋಲಾಂಡ್ ಬಾರ್ಥ್, ಹೆರಾಲ್ಡ್ ಬ್ಲೂಮ್ ನಂತಹ ವಿಮರ್ಶಕರು ಬಹಳ ಹಿಂದಿಯೇ ಗುರುತಿಸಿದ್ದಾರೆ. ಬರವಣಿಗೆಯ ಒಟ್ಟಂದದಲ್ಲಿ ಇದು ನಡೆಯುವಂತಹದ್ದೇ.

ಇಲ್ಲಿ ಗತಕಾಲದ ನೆನಪಿನ ಹಳವಂಡಗಳಿಲ್ಲ, ಬದಲಿಗೆ, ಸದ್ಯವನ್ನು ತೋರಿಸುವ ತುರ್ತು ಇದೆ. ಅದು ಎದ್ದು ಕಾಣುತ್ತದೆ ಕೂಡ. ಸದ್ಯದಲ್ಲಿಯೇ ಸತ್ಯವನ್ನು, ಮತ್ತು ವಸ್ತುವನ್ನು ಅಂದರೆ ಕವಿ ಏನನ್ನು ಧ್ಯಾನಿಸುತ್ತಿದ್ದಾನೋ, ಕಾಣುತ್ತಿದ್ದಾನೋ ಅದನ್ನು ಬದುಕಿನ ಸೌಂದರ್ಯದ ಜೊತೆ ಬೆಸಗೊಂಡಿರುವುದನ್ನು ಕಾಣುವ ತುಡಿತ. ಈ ಅರ್ಥದಲ್ಲಿ ಎಸ್. ಮಂಜುನಾಥರ ಪ್ರಭಾವವಿದೆ ಎಂದು ಹೇಳಿದ್ದು. ಇರಲಿ. ಅದನ್ನು ಮತ್ತೆ ಇನ್‍ವರ್ಟೆಡ್ ಕಾಮದಲ್ಲಿ ತೋರಿಸದೆ, ಗೌಣವಾಗಿಸುವೆ.

ಮೊದಲ ಕವಿತೆ ಕೆಂಡದಲ್ಲಿ ಸುಡು ಜೋಳವು ಬೆವರನ್ನು ಸುರಿಸಿ ಬದುಕನ್ನು ನಡೆಸುವುದಕ್ಕಾಗಿ ಪಾಡನ್ನು ಪಡುತ್ತ ಬದುಕುವ ಜೋಳ  ಸುಟ್ಟು ಮಾರುವ ಹೆಂಗಸೊಬ್ಬಳ ಬದುಕಿನ ಚಿತ್ರಣ ನೇರ ಹೃದಯಕ್ಕೆ ನಾಟುತ್ತದೆ. ಅದನ್ನು ಕವಿ ಸಟಲ್ ಆಗಿ ಚಿತ್ರಿಸಿದ್ದಾರೆ ಕೂಡ. ಎಲ್ಲಿಯೂ ಸಿಂಪಥಿಯನ್ನು ತಾನು ಕವಿತೆಯಲ್ಲಿ ಕಂಡು ತೋರಿಸದೆ, ಅಭಿವ್ಯಕ್ತಿಸಿರುವ ರೀತಿ ಗಮನಾರ್ಹ. ಈ ಕವಿತೆಯಲ್ಲಿ ಬದುಕಿನಲ್ಲಿ ಹೋರಾಟದ ಜೊತೆ ಬದುಕನ್ನು ಪ್ರೀತಿಸುವ ಪರಿ ಮತ್ತು ಮನುಷ್ಯತ್ವದ ದರ್ಶನವನ್ನು ಮಿಂಚಿನಂತೆ ಮಾಡಿಸುತ್ತದೆ ಈ ಕವಿತೆ. ಹಾಗೆ ನೋಡಿದರೆ, ಇಲ್ಲಿಯ ಬಹಳಷ್ಟು ಕವಿತೆಗಳು ಆಥರದ ಬೆರಗನ್ನು ಹುಟ್ಟಿಸುವ ಮಿಂಚಿನ ದರ್ಶನಗಳಿಂದ ಪ್ರೇರೇಪಿತಗೊಂಡಂತಹವಾಗಿವೆ.

ವಾಸ್ತವದ ದಾರುಣ ಚಿತ್ರಗಳು ಅಷ್ಟಾಗಿ ಇಲ್ಲಿನ ಕವಿತೆಗಳಲ್ಲಿ ಕಾಣಬರದಿದ್ದರೂ, ಬೆರಗು, ಕುತೂಹಲಗಳು ಕವಿಯನ್ನು ಪ್ರಭಾವಿಸಿರುವುದೇ ಜಾಸ್ತಿ. ಬಾಡಿಗೆಗೆ ಪಡಕೊಂಡ ಬೆಳಕಿನರಮನೆ ಎಂದು ಚಂದ್ರನನ್ನು ಚಿತ್ರಿಸುವ ಚಂದ್ರ ಕವಿತೆಯಲ್ಲಿ ಚಂದ್ರನನ್ನು ನೋಡಿರುವ ಐದಾರು ಚಿತ್ರಣಗಳ ಪಟ್ಟಿಯೇ ಇದೆ. ಈ ಪಟ್ಟಿಯನ್ನು ಎಷ್ಟು ಬೇಕಾದರೂ ಹಿಗ್ಗಿಸಬಹುದು ಮತ್ತು ಲಂಬಿಸಬಹುದು. ಆದರೆ ಕವಿ, ತಾನು ಕಾಣುವುದನ್ನು ಸತ್ಯವೆಂದು ತೋರಿಸುವ ಕ್ರಮ ಮನೋಜ್ಞವಾಗಿ ಚಿತ್ರತವಾಗಿದೆ.

ದೃಷ್ಟಿಕೋನಗಳು ಬದಲಾದಂತೆ ಇರುವ ವಸ್ತು ಹೇಗೆ ಭಿನ್ನ ಬಗೆಯಲ್ಲಿ ಕಾಣುತ್ತದೆ ಎನ್ನುವುದನ್ನು ಇಲ್ಲಿ ನೋಡಬಹುದಾಗಿದೆ. ಈ ಕವಿತೆ ವಿವಿಧ ಇಮೇಜ್‍ಗಳು ಗುಚ್ಛ. ಅದನ್ನು ಕೊಡುವುದಲ್ಲಿಯೇ ಕವಿ ತೃಪ್ತಿಪಟ್ಟಂತಿದೆ. ಅದರಿಂದಾಗಿ ಈ ಕವಿತೆ ಮುಟ್ಟಬಹುದಾಗಿದ್ದ ಅನೂಹ್ಯ ಸಾಧ್ಯತೆಗಳನ್ನು ಮೊಟಕುಗೊಳಿದುರವಂತೆ ಕಾಣುತ್ತದೆ. ಈ ಕವಿತೆ ನಮ್ಮನ್ನು ಇಡೀಯಾಗಿ ಆವರಿಸಿಕೊಳ್ಳುವುದಿಲ್ಲ.

ವಿಸ್ಮಯವನ್ನು, ಬೆರಗನ್ನು, ಸೌಂದರ್ಯವನ್ನು ತನ್ನೊಡಲಲ್ಲಿ ಹಡಿದಿಟ್ಟುಕೊಂಡೇ ಸದ್ಯವನ್ನು ಅದರ ವಿವಿಧ ಮಜಲುಗಳನ್ನು ತೋರಿಸುವಂತಹ ಕವಿತೆ ಸಿಗಬೇಕೆಂದರೆ ಕಾಲ, ಭಾಷೆ, ಸಂವೇದನೆ, ಸಂದರ್ಭ ಒಟ್ಟುಗೂಡಿ ಅವಕಾಶ ತನ್ನಿಂದ ತಾನೇ ರೂಪುಗೊಳ್ಳಬೇಕು. ಅದಕ್ಕೆ ಕವಿಯೂ ಅದೃಷ್ಟ ಮಾಡಿರಬೇಕು ಮತ್ತು ಓದುಗರೂ ಅದೃಷ್ಟವನ್ನು ಪಟ್ಟಿರಬೇಕು. ಮತ್ತು, ಅಂತಹ ಕವಿತೆಯನ್ನು ಪಡೆಯಲು ಭಾಷೆಗೂ ಸಹ ಅದೃಷ್ಟ ಬೇಕಾದಿತೇನೋ! ಲಕ್ಷ್ಮೀಶ ತೋಳ್ಟಾಡಿಯವರು ಈ ಸಂಕಲನದ ಬಗ್ಗೆ ಹೇಳುತ್ತ ‘ಆ ಮಾತೇ ಬೇರೆ’ ಎನ್ನುತ್ತೇವಲ್ಲ, ಆ ಬಗೆಯ ಕವಿತೆಗಳು ಇವು ಎಂದು ಹೇಳಿರುವುದನ್ನು ಸಂಪೂರ್ಣವಾಗಿ ಒಪ್ಪುವುದಕ್ಕೆ ಆಗುವುದಿಲ್ಲ.

ಎಚ್.ಎಸ್. ಶಿವಪ್ರಕಾಶರ  ಯಾವ ಶಹರು , ಯಾವ ಬೆಳಕು ಥರ ತುಂಬಾ ದೊಡ್ಡದಾದ ಹರಹು ಈ ಕವಿತೆಗಳಿಗೆ ಇಲ್ಲ, ಮತ್ತು ಅವರಲ್ಲಿ ಕಾಣುವಂತಹ ಅನುಭವದ ವಿವಿಧ ಆಯಾಮಗಳೂ ಇಲ್ಲ. ಅವರ ಕವಿತೆಗಳು ಏಕಕಾಲಕ್ಕೆ ರಾಜಕೀಯವೂ, ಆಧ್ಯಾತ್ಮವೂ, ಭಾಷೆ ಬಿಚ್ಚಿಕೊಡುವ ತಾತ್ವಿಕ ದರ್ಶನವೂ, ಲೋಕದ ಟೀಕೆಯೂ ಆಗ ಬಲ್ಲವು. ಲಕ್ಷ್ಮೀಶ ತೋಳ್ಪಾಡಿಯವರ ಮಾತು ಶಿವಪ್ರಕಾಶರ ಯಾವ ಶಹರು , ಯಾವ ಬೆಳಕು ಕವಿತೆಗಳಿಗೆ ಹೆಚ್ಚು ಸಮಂಜಸವೆಂದು ಕಾಣುತ್ತದೆ.

ಕಾರ್ಲೋ ರೊವೆಲ್ಲಿ ತನ್ನ ಆರ್ಡರ್ ಆಫ್ ಟೈಮ್‍ನಲ್ಲಿ ಹೀಗೇಳುತ್ತಾರೆ: we can thank of the world as made up of things. Of substance. Of entities. Of something that is.Or we can think of it as made up of events. Of happenings. Of something that occurs . ಜಗತ್ತನ್ನು ಗ್ರಹಿಸುವುದೆಂದರೆ ಅದು ಕಾಲವನ್ನೇ ಗ್ರಹಿಸುವುದಾಗಿದೆ. ಆದರೆ ಕಾಲವನ್ನು ಸ್ಪಷ್ಟವಾಗಿ ಹೇಗೆ ಅಳೆಯಲು ಆಗುವುದಿಲ್ಲವೋ ಅದೇ ಥರ ಜಗತ್ತನ್ನೂ ಸಹ. ಒಂದಂತೂ ಸತ್ಯ, ಅದು,  ನಾವು ಗ್ರಹಿಸಿದಂತೆ ಜಗತ್ತು ನಮಗೆ ಕಾಣುತ್ತದೆ. ಅದು ಯಾವ ರೀತಿಯಲ್ಲೇ ಇದ್ದರೂ, ಅಥವಾ ರೀತಿಯಲ್ಲಿ ಇಲ್ಲದಿದ್ದರೂ, ನಮ್ಮ ಗ್ರಹಿಕೆಯ ಚೌಕಟ್ಟಿನಲ್ಲಿ ಅದನ್ನು ಇಟ್ಟುಕೊಂಡು ನೋಡಲು ಬಯಸುತ್ತೇವೆ.

ಮೆಟ್ರೊಝೆನ್ ಕವಿತೆಯಲ್ಲಿ ಕವಿ ಕಾಲವನ್ನು ಅರಿಯುವ ಒಂದು ಚೇತೋಹಾರಿ ಯತ್ನವನ್ನು ಮಾಡಿದ್ದಾರೆ. ಇಲ್ಲಿ ಶಹರದ ಧಾವಂತದ ಬದುಕನ್ನು ತೋರಿಸುವುದು ಮುಖ್ಯ ಉದ್ದೇಶ. ಇದಕ್ಕೆ ಐರನಿ, ತರ್ಕ, ವಿಪರ್ಯಾಸಗಳು ಸಾಥ್ ನೀಡಿವೆ. ಹೇಗೋ ಕಷ್ಟಪಟ್ಟು, ಚಾಲುಆಗಿ, ಹೊರಡಲು ಅಣಿಯಾಗಿರುವ ಮೆಟ್ರೋರೈಲನ್ನು ಹತ್ತಿ, ಒಳಗೆ ಹೋಗುವುದನ್ನು ಮತ್ತು ಒಳಗ ಹೋದ ಸಾಹಸಗಾಥೆಯಂತಹ ಕೆಲಸವನ್ನು  ಒಂದು ತತ್ವವದ ರೀತಿಯಲ್ಲಿ  ಹೇಳುತ್ತಾರೆ: ಮುಚ್ಚುತ್ತಿರುವ ಕಾಲದ ಮುಷ್ಟಿಯಿಂದ ತೂರಿಕೊಂಡು/ತಣ್ಣಗಾದೆ ಮೆಟ್ರೊ ರೈಲಿನ ಏಸಿ ಹವೆಗೆ./ ಅದೇ ಮುಚ್ಚಿದ ಬಾಗಿಲಿಗೆ ನಿರಾಳವಾಗಿ ಒರಗಿ ನಿಂತರು ಕೆಲವರು/ಬಾಗಿಲಿಗೆ ಯಾರೂ ಆತುಕೊಳ್ಳಬಾರದೆಂಬ ಎಚ್ಚರಿಕೆಯ ಫಲಕದ ಕೆಳಗೆ.

ಪ್ರಾರಂಭದಲ್ಲಿ ಮತ್ತು ಮಧ್ಯದಲ್ಲಿ ಹೀಗೆ ಹೇಳುತ್ತಾರೆ: ಮುಚ್ಚುತ್ತಿರುವ ಮೆಟ್ರೊ ರೈಲಿನ ಬಾಗಿಲ ನಡು/ನನ್ನ ನಡುವಿನಷ್ಟೆ ಇತ್ತು/ಓರೆಯಾಗಿ ತೂರಿಕೊಂಡು ಒಳಸೇರಿದೆ/.. ಆಕಾಶ ಕರಗುವಾಗ ಕಾಲಕ ಸಾಂದ್ರತೆಯನ್ನು ಕ್ರಿಯೆಯಿಂದಲ್ಲ, ಪ್ರತಿಕ್ರಿಯೆಯಲ್ಲಿ ಮಾತ್ರ ಅನುಭವಿಸಲು ಸಾಧ್ಯವೆಂದು ಹೇಳುತ್ತಾರೆ. ಇದಕ್ಕೆ ವಿರುದ್ಧವಾದಂತಹ ಮತ್ತೊಂದ ಸನ್ನಿವೇಶವನ್ನು ಕಟ್ಟಿಕೊಡುತ್ತಾರೆ. ಅದು ಸಂಗೀತದ ರೂಪಕದ ಮೂಲಕ: ಸಂಗೀತವನ್ನು ಹಿಂಬಾಲಿಸಿಕೊಂಡು ಮಹಡಿಯಿಂದ ಮಹಡಿಗೆ/ಮೆಟ್ಟಿಲೇರುತ್ತ ಇರುವಾಗ/ನಿಂತು ಬಿಡುತ್ತದೆ ಸಂಗೀತ ಇದ್ದಕ್ಕಿದ್ದಂತೆ/ ಸಂಗೀತ ಮತ್ತೆ ಶುರುವಾಗುವವರೆಗೆ/ನಿಂತಿರಬೇಕು ನಿಂತಲ್ಲೇ/ನಿಷ್ಕ್ರಿಯೆಗೆ ನಿಷ್ಕ್ರಿಯೆಯೇ ಪ್ರತಿಕ್ರಿಯೆ.

ಮೆಟ್ರೋ ಅಂತ ಅಷ್ಟೇ ಈ ಕವಿತೆಗೆ ಶೀರ್ಷಿಕೆಯನ್ನು ಕೊಟ್ಟಿದ್ದರೆ ಸಾಕಾಗಿತ್ತೇನೋ. ಯಾಕೆಂದರೆ ಕಾಲ ಮತ್ತು ಯಂತ್ರಗಳ ಅವಲಂಬಿತ ನಗರ ಜೀವನವನ್ನು ಹೇಳುವ ಈ ಕವಿತೆ ಝೆನ್ ನ ಸಂಕೀರ್ಣತೆಯನ್ನೇನು ತನ್ನ ಒಡಲಲ್ಲಿ ಇಟ್ಟುಕೊಂಡಿಲ್ಲ. ಕವಿತೆ ನಾಟಕೀಯ ತಿರುವುಗಳನ್ನು ಪಡೆಯುತ್ತ ಶಹರದ ಬದುಕಿನ ಗ್ರಿಮ್ ಆದಂತಹ ಅನುಭವವನ್ನು ಕೊಟ್ಟರೂ ಏಸ್ತೆಟಿಕ್ ಕಾಂಪ್ಲೆಕ್ಸಿಟಿಯನ್ನು ಪಡೆದುಕೊಳ್ಳಲು ವಿಫಲವಾದಂತಿದೆ. 

ಸಂಕಲನದಲ್ಲಿನ ಕೆಲವು ಸಣ್ಣ ಕವಿತೆಗಳಲ್ಲಿರುವ ಮಿಂಚು ಈ ಸಂಕಲನದ ಘನತೆಯನ್ನು ಹೆಚ್ಚಿಸತ್ತವೆ. ಅಂತಹ ಕವಿತೆಗಳೆಂದರೆ : ದೇವರ ನಗು, ಮಗುವಾಗದೆ, ಮತ್ತು ಶಿಲ್ಪ. ನಕ್ಷತ್ರ ಎನ್ನುವ ಕವಿತೆ ಕವಿಯ ವಿಕಸನವನ್ನಷ್ಟೇ ತೋರಿಸುವುದಿಲ್ಲ; ಬದಲಿಗೆ, ಮನುಷ್ಯನ ಪ್ರಜ್ಞೆ ಮತ್ತು ಕನಸುಗಳು ಕಾಲದ ನದಿಯಲ್ಲಿ ರೂಪ ಪಡೆಯುವ ಬಗೆಯನ್ನು ತೋರಿಸುತ್ತದೆ. ಉದಾಹರಣೆಗೆ- ಇತ್ತು ನಕ್ಷತ್ರಗಳು ಒತ್ತೊತ್ತಾಗಿ/ಇಪ್ಪತ್ತು ವರ್ಷಗಳ ಹಿಂದಿನವರೆಗು..

ಈ ಕವಿತೆ ಕಾಲದ ಸ್ಥಿತ್ಯಂತರವನ್ನು ತೋರಿಸುತ್ತ ಸೃಷ್ಟಿಯ ಸೌಂದರ್ಯವನ್ನು ಅದರ ಬೆರಗನ್ನು ಅರಿಯಲು ಕವಿ ಪ್ರಯತ್ನಸಿರುವುದನ್ನು ಕಾಣಬಹುದು. ಈ ಕವಿತೆಯಲ್ಲಿ ಕೃಷ್ಟರಂಧ್ರ ಎನ್ನುವ ಪದ ಬರುತ್ತದೆ. ಇದಕ್ಕಿಂತ ಕಪ್ಪುಕುಳಿಗಿರುವ ಅರ್ಥ ಸಾಧ್ಯತೆ ಕೃಷ್ಣರಂಧ್ರಕ್ಕೆ ಇಲ್ಲ. ಇದಕ್ಕೆ ಒಂಥರದ ಧರ್ಮದ ನೆರಳು ಬಿದ್ದಂತೆ ಕಂಡು ಬರುತ್ತದೆ. ಆದರೆ ಈ ಕವಿತೆಗೆ ಸಿಕ್ಕಿರುವ ಕ್ಯಾನ್‍ವಾಸ್ ಗೆ ಕವಿಯೇ ಬೆಚ್ಚಿಬಿದ್ದಿರಬೇಕು. ಯಾಕೆಂದರೆ ಅದು ಮುಟ್ಟುವ ಎಲ್ಲೆ ಅದ್ಭುತವಾಗಿದೆ. ಇಮ್ಯಾಜಿನೇಷನ್ ಮಾತ್ರ ಸತ್ಯವನ್ನು ಹಿಡಿಯಲು ಪ್ರಯತ್ನಪಡುವುದು ಎನ್ನುವ ಅರ್ಥದ ಐನ್‍ಸ್ಟಿನ್ ನ ಮಾತುಗಳಿಗೆ ಈ ಕವಿತೆ ತುಂಬಾ ಹತ್ತಿರವಾಗುತ್ತದೆ.

ಶಬ್ದಗಂಧಿ, ಭಾಷೆ, ಆಮೆನಡಿಗೆ, ಪರಿಷೆ, ಸೀರೆ, ಕವಿತೆಗಳು ಈ ಸಂಕಲನದ ಘನೆತೆಯನ್ನು ಹೆಚ್ಚಿಸಿರುವ ಕವಿತೆಗಳು. ವಿಜ್ಞಾನ, ಕಲ್ಪನೆ, ವಾಸ್ತವತೆ, ಸತ್ಯ, ಸೌಂದರ್ಯಗಳನ್ನು ಮಿಳಿತವಾಗಿಸಿಕೊಂಡು ಬದುಕನ್ನು, ಅದರ ಲಯವನ್ನು ಹಾಗೂ ಕಾಲದ ಲಯವನ್ನು ಅದರ ಗತಿಯನ್ನು ಚಿತ್ರಿಸುವ ಕವಿತೆ ಆಮೆ ನಡಿಗೆ. ಕೆಲವು ಸಾಲುಗಳು: ನೂರಾರು ಜ್ಯೋತಿರ್ವರ್ಷ ದೂರದ/ಕತ್ತಲಿಗೆ ಕಾಣುತಿದೆ:/ನಕ್ಷತ್ರ ಕೊಳದೊಳಗೆ/ಭೂಮಿ ಹೊತ್ತಿರುವ ಆಮೆ.

ಮನುಷ್ಯ ತಾನು ಎಷ್ಟೇ ಮುಕ್ತವಾಗಿ ತನ್ನೊಳಗಿನ ಎಲ್ಲವನ್ನೂ ಲೋಕದ ಮುಂದೆ ಹೇಳಿದರೂ ಅವನ ಮನಸ್ಸಿನೊಳಗೆ ಸಾಕಷ್ಟು ಕಪ್ಪು ಕುಳಿಗಳಿರುತ್ತವೆ. ಅವುಗಳಲ್ಲಿ ಯಾರಲೂ ಹೇಳಿಕೊಂಡಿರದ ದುಃಖ, ದುಮ್ಮಾನ, ನಿರಾಸೆಗಳು ಇರುತ್ತವೆ. ಪರಿಷೆ ಕವಿತೆಯಲ್ಲಿ ಸಾಮಾನ್ಯವಾಗಿ ಕಾಣುವ ಜಾತ್ರೆಯ ದರ್ಶನ ವಿದ್ದರೂ ಕವಿಗೆ ಏನೋ ಒಂಥರ ಒಳ ಸಂಕಟ. ಇದು ಮನುಷ್ಯನಿಗೆ ಎಂದು ಬಗೆಯರಿಯದಂತಹದ್ದು. ಅದಕ್ಕೆ ಕಪ್ಪು ಕುಳಿಗಳು ಎಂದದ್ದು. ಅದನ್ನು ಜಾತ್ರೆಯಲ್ಲಿ, ಪರಿಷೆಯಲ್ಲಿ ಹೀಗೆ ಹೊರಗೆ ಹಾಕುತ್ತಾರೆ: ಬೀದಿ ಬೀದಿಯಲಿ ಮೊಳಗಿದೆ ಸಂತೆ ದುಂದುಭಿ/ಮಂದೆಯಲಿ ಕರಗಿದೆ ಒಂದಿನಿತು ದುಃಖ/ಇಂಥ ರಾಶಿಯಲಿ ಕಾಣಲಿಲ್ಲ ಒಂದೂ/ಎಂದಾದರೂ ಕಂಡಿರುವ ಹಳೆಯ ಮುಖ.

ಸಮಾಜದ ಕಟುವಾಸ್ತವಗಳಿಗೆ ತೀವ್ರ ಸ್ಪಂದನೆ ನೇರವಾಗಿ ಕಾಣಿದಿದ್ದರೂ ವ್ತಕಿಗತನೆಲೆಯಲ್ಲಿ ಖಾಸಗಿಯಾಗಿ ಅನುಭವಿಸುವ ವಿಷಾದ, ನೋವು ಈ ಕವಿತೆಗಳಲ್ಲಿ ಅಂತರ್ದಾನವಾಗಿ ಹರಿಯುತ್ತಿದೆ. ಕಲ್ಲಲ್ಲಿ ಖನಿಜವನ್ನು ಸೋಸಿ ತೆಗೆಯುವಂತೆ, ಭಾಷೆಯನ್ನು, ಕವಿ, ಇಲ್ಲಿ ತುಂಬಾ ವ್ಯವಧಾನವಾಗಿ, ವೃಥಾ ವ್ಯಯಮಾಡದೆ ಬಳಿಸಿಕೊಂಡಿದ್ದಾರೆ. ಸತ್ಯ, ಸೌಂದರ್ಯ, ಜೊತೆಗೆ ಸೃಷ್ಟಿಯ ಬೆರಗು ಈ ಕವಿತೆಗಳ ಒಳಗಿನಿಂದ ಹೊರಗಿನ ಓದುಗರನ್ನು ಸೆಳೆಯುತ್ತವೆ.

‍ಲೇಖಕರು Avadhi

April 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: