ಪದ್ಮಿನಿ ನಾಗರಾಜು ಹೊಸ ಕವಿತೆ- ಆತ್ಮ ಬಯಲಾಗಿ ಮಡಕೆ ಉಳಿದಿತ್ತು

ಡಾ ಪದ್ಮಿನಿ ನಾಗರಾಜು

ಹರಿದ ಕೌದಿ ಸೇರಿಸುತಿಹೆ
ಚೂರು ಚೂರು ಚಿಂದಿಗಳಿಂದ
ಕೌದಿ ಸೇರಿಸುವ ಭರದಲಿ
ನನ್ನ ಸಣ್ಣ ಸೀಳೂ
ನೀ ಕಾಣದಾದೆ
ಎಂದಿತು ಸೂಜಿ
ಮುಚ್ಚುವ ಮಾತೆಲ್ಲಿ

ನಿನ್ನ ದಿನ ಎಣಿಸುವ
ಕ್ಯಾಲೆಂಡರ್ ನಾನು
ಸ್ವಚ್ಛಂದದಲಿ ಸ್ವತಂತ್ರವಾಗಿ
ಹಾರಾಡುತ್ತಿದ್ದೆ
ನೀನು ನನ್ನ ಮೊಳೆ
ಹೊಡೆದು ಬಂಧಿಸಿ
ಗೋಡೆಗೆ ನೇತು ಹಾಕಿದೆ
ಬಿಡುಗಡೆ ಇನ್ನೆಲ್ಲಿ

ನಿನ್ನ ಕೈಗೆ ಸಿಕ್ಕ ಗಾಳಿಪಟ
ದೂರದೂರಕೆ ಕಣ್ಣಕೊನೆಗೆ
ಹಾರ ಬೇಕೆಂದು ತೂರಿದರೂ
ನಿನ್ನ ಸೂತ್ರದ ಮೋಡಿಗೆ
ನೀ ಆಡಿಸಿದಂತೆ ಆಟವಾಡಿದೆ
ಸ್ವಚ್ಛಂದ ಮತ್ತೆಲ್ಲಿ

ನೀ ಹಾಕಿದ ಸೆಲ್ಲಿನ ಸದ್ದಿಗೆ
ಟಿಕ್ ಟಿಕ್ ಎಂದು ಸಮಯ
ತೋರುತಿಹೆ ಬೇಡ ಸಾಕೆಂದು
ನಿಲ್ಲಿಸಿ ಸಂಪು ಹೂಡಿದರೂ
ಮತ್ತೆ ಚಾಲನೆ ನೀಡಿದೆ
ಮುಕ್ತಿ ಇನ್ನೆಲ್ಲಿ

ನೀ ಹಚ್ಚಿದ ದೀಪ ನಾನು
ಎಣ್ಣೆಗೂ ಬತ್ತಿಗೂ
ಅವಿನಾಭಾವ ಬಂಧ
ಬೆಳಕು ಹಚ್ಚುವ
ಕಿಡಿಯೂ ನೀನೇ
ಗಾಳಿಯೂ ನೀನೇ
ಅಹಂಕಾರ ಕಳೆವ
ಮಾಯಕಾರ
ಉಳಿವು ಇನ್ನೆಲ್ಲಿ

ಪಾರಿಜಾತದ ಗಿಡದಲಿ
ಮೊಗ್ಗು ಬಿರಿಯುವ ಸಮಯ
ಅದರೊಳಗೆ ಸಾವಿನ ಕ್ಷಣಗಳ ಬರೆದು
ಸುಧೆ ಹರಡಿಸಿ ಸಂಜೆ ತಂಪಾಗಿಸಿ
ಸೂರ್ಯನೊಡಲಲ್ಲಿ ಗೋರಿಯಾಗಿಸುವ
ನಿನ್ನ ಮಾಯಾಜಾಲಕ್ಕೆ
ಬದುಕುವ ಮಾತೆಲ್ಲಿ

ಮೇಲೆಸೆದ ಕೈಗೂಸು
ನಗುತ್ತಿತ್ತು
ಮತ್ತೆ ತನ್ನ ಹಿಡಿವ
ಭದ್ರ ಕೈಗಳಿಹವೆಂದು
ಕಸುವ ತುಂಬಿದವ ನೀನೆ
ಕೈಬಿಡಿಸುವವ ನೀನೆ
ಜೀವ ಕ್ಷಣಾರ್ಧ
ನಂಬದಿಹ ಮಾತೆಲ್ಲಿ

ಕುರುಡ ಕನ್ನಡಿಯಲಿ
ತನ್ನ ಕಾಣುವಂತೆ
ಹರೆಯದ ರೂಹಿನ
ಚೆಲುವು ಕ್ಷಣಾರ್ಧದಲಿ
ಮಾಯವಾಗುವಂತೆ
ಕುಂಭವ ಜತನದಿ
ಕಾಪಾಡುವ ಭರದಲಿ
ಆತ್ಮ ಬಯಲಾಗಿ ಮಡಕೆ ಉಳಿದಿತ್ತು
ನಿನ್ನ ಮಾಯದ ಮೋಡಿಗೆ
ಶರಣಾಗಿ

‍ಲೇಖಕರು Avadhi

April 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: