ಬೀರೇಶ್ ನ್ಯಾನೋ ಕಥೆಗಳು

ಬೀರೇಶ್ ಎನ್ ಗುಂಡೂರು

ಜಾತಿ

ಅವಳ ಮುಗ್ದತೆ, ಸನ್ನಡತೆ ಕಂಡು ಅವನು ದುಂಬಾಲು ಬಿದ್ದನು. ಅವಳು ಒಪ್ಪಲಿಲ್ಲ. ಅವನು ಹಂಬಲಿಸಿದ. ಹೇಗೋ, ಅವಳು ಅವನ ಬಗ್ಗೆ ಎಲ್ಲವೂ ತಿಳಿದಳು; ಅವಳೇ ಸನಿಹ ಬಂದಳು. ಎಲ್ಲವೂ ಬೆರೆತು ಅವಳು ಅವನಾದಳು; ಅವನು ಅವಳಾದನು. ಅವಳ ಪರೀಕ್ಷೆಯೂ ಮುಗಿಯಿತು. ಅವನು ಅವಳ ಮನೆಯವರನ್ನು ಗೌರವಿಸಿ, ಒಪ್ಪಿಗೆ ಬಯಸಿದಕ್ಕಾಗಿ ಬೆನ್ನ ಮೇಲೆ ಬಾಸೂಂಡೆ ಮೂಡಿದವು.

ಏನಾದರಾಗಲಿ, ಅವಳು ನನ್ನವಳೇ ಅಂದುಕೊಂಡ. ಅವಳು ಅಂದಿನಿಂದ ಎದುರುಗೊಳ್ಳಲಿಲ್ಲ; ನೀನು ಯಾರೆಂಬುದೇ ಗೊತ್ತಿಲ್ಲ ಅಂದುಬಿಟ್ಟಳು. ಮರೆಯಲ್ಲಿ, ಎಲ್ಲಾ ನನ್ನವರಿಗಾಗಿ; ನೀನು ನನ್ನ ‘ಜಾತಿ’ಯವನಾಗಬೇಕಿತ್ತು ಅಂತ ಅಳುವಿನ ಇಮೋಜೀ ಹಾಕಿದ್ದಳು. ಅವನು ಹುಚ್ಚನಂತೆ ನಕ್ಕ. 

******

ಜೀವನ ಗೆದ್ದಿತು

ಮದುವೆಯಾದ ಹೊಸತರಲಿ ಎಲ್ಲವೂ ಸರಿಯಾಗಿತ್ತು. ಅದೇ ಆರು ತಿಂಗಳಿಗೆ ಅವಳಿಗೆ ಎಂತದೋ ಖಾಯಿಲೆ ಬಡಿದು ನೆಲ ಹಿಡಿದಳು. ಅವನು ಎದೆಗುಂದದೇ ಅವಳ ಬೆನ್ನಿಗೆ ನಿಂತ. ಸುಮಾರು ಕಾಲ, ಅವಳೇ ಅವನಿಗೆ ಇನ್ನೊಂದು ಮದುವೆಯಾಗಿ ಚೆನ್ನಾಗಿರಿ ಅಂತ ಅಲವಲತ್ತುಕೊಂಡಳು. ಅವನು ಮಿಸುಗಲಿಲ್ಲ; ಅದೆಷ್ಟೋ ವರ್ಷಗಳ ಕಾಲ ಅವಳನ್ನು ಕೈ ಬಿಡಲಿಲ್ಲ. ಹಸಿರು ಹೊದಿಸಿದ ಬಟ್ಟೆಯ ಮೇಲೆ ಅವಳು ಮಲಗಿದಾಗಲೂ ‘ಗೆದ್ದು ಬಾ’ ಅಂದ. ಅವಳು ಗೆದ್ದೆ ಬಿಟ್ಟಳು. ಅವರ ಜೀವನವೂ ಗೆದ್ದಿತು.

******
ಅವಳು ಕಲಿತರೆ

ಇನ್ನೆನು ವಯಸ್ಸಾಯ್ತು ಅವಳನ್ನು ಓದಿಸುವುದು ಬೇಡ. ದಾರಿ ತಪ್ಪುತ್ತೆ; ಒಳ್ಳೆ ಸಂಬಂಧ ನೋಡಿ ಕೈ ತೊಳೆದುಕೊಳ್ಳಿ ಅಂತ ಸ್ವಂತ ಸಂಭಂಧದವರೆ ಅಂದ್ರು. ಅವಳು ಎಂತದೋ ಸಿದ್ದಾಂತಕ್ಕೆ ಬಿದ್ದು ಓದಿಗೆ ನಿಂತಳು. ಈಗವಳು ಉನ್ನತ ಅಧಿಕಾರಿಯಾಗಿ ನೊಂದವರ ಧನಿಯಾಗಿದ್ದಾಳೆ. ತನ್ನ ಮನೆತನವನ್ನೇ ಎಲ್ಲರೂ ಮಾತಾಡಿಕೊಳ್ಳುವ ಹಾಗೆ ಹೆಸರುವಾಸಿಯಾಗಿದ್ದಾಳೆ. ಅಂದವರೆಲ್ಲಾ, ಎತ್ತರಕ್ಕೆ ಏರುವ ದಾರಿ ಕಾಣದೆ ಪರದಾಡುತಿದ್ದಾರೆ. 

******

ಅನಾಥಳು

ಆ ಹುಡುಗಿಗೆ ಮೂರ್ಛೆ ಬಂದು ವಿಪರೀತ ಒದ್ದಾಡತೊಡಗಿದಳು. ಆ ಬುರುಗಿನ ನೊರೆ ಮೈ ಮೆತ್ತಿತ್ತು. ಯಾರೂ ಸನಿಹ ಬರಲಿಲ್ಲ. ವಿಷ್ಯ ಅಧ್ಹೆಗೆ ತಿಳಿಯಿತೋ ಹತ್ತನೇ ಕ್ಲಾಸಿನಲ್ಲಿದ್ದ ಆ ಹುಡುಗ ಓಡಿ ಬಂದ. ಅದಾಗಲೇ ಅವಳ ಕಣ್ಣುಗಳು ಮೇಲೆ ಮಾಡಿ ಸ್ವಾಧೀನವಿಲ್ಲದ್ದಾಗಿದ್ದಳು. ಬಂದವನೇ ಎಬ್ಬಿಸಿ, ಮುಖ ತೊಳೆದು, ಕಬ್ಬಿಣ ಕೊಟ್ಟು, ಬಟ್ಟೆ ಬದಲಿಸಿದ. ಅವನ ನೋಡಿದ್ದೆ ಅವಳು ಗೆಲುವಾದಳು. ಯಾರೋ ಹಿಂದಿನಿಂದ ಅವಳಿಗೆ ಅಪ್ಪ-ಅಮ್ಮ ಇಲ್ಲ ಅಂದ್ರು. ಇಲ್ಲ.., ಅದು ಸುಳ್ಳು; ಅವನೇ ಅವಳಿಗೆ ಎಲ್ಲಾ ಅಂದೆ. ಅವರಿಗೆ ಅರ್ಥವಾಯಿತೋ ಗೊತ್ತಿಲ್ಲ. ಅವರಿಬ್ಬರ ಕಣ್ಣಲ್ಲಿ ನೀರಿತ್ತು.

******

ಅವಳ ಖುಷಿ

ಅವನು ಅವಳನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ. ಅವಳು ಕೂಡ ಅವಳ ಜೀವದಷ್ಟು ಇನ್ನೊಬ್ಬನನ್ನು ಪ್ರೀತಿಸುತಿದ್ದಳು. ಅದು ಅವನಿಗೆ ತಿಳಿಯಿತು. ಅವನು ತನ್ನ ಪ್ರೀತಿಯ ಹೇಳಿಕೊಳ್ಳಲಿಲ್ಲ. ಜಾತಿ ವಾಸನೆಯಲ್ಲಿ ಮನೆಯವರ ವಿರೋಧ ತಿಳಿದು, ಅವರಿಬ್ಬರನ್ನೂ ಒಂದು ಮಾಡಿದ. ಎಲ್ಲರನ್ನೂ ಎದುರು ಹಾಕಿಕೊಂಡು, ಇವನು ಮಾತ್ರ ತನ್ನ ಒಲವ ಹೇಳಿಕೊಳ್ಳದೆ ಅವಳಿಗೆ ಹೆಗಲಾಗಿ ನಿಂತ. ಈಗ ಅವರಿಬ್ಬರೂ ಒಂದಾಗಿ ಜೀವನದಲ್ಲಿ ಸೊಗಸಾಗಿದ್ದಾರೆ. ಅವಳ ಕಣ್ಣಿನಲ್ಲಿನ ಖುಷಿ ಕಂಡು ಇವನೂ ಕೂಡ ತನ್ನ ಒಂಟಿತನದಲ್ಲೂ ತಾನೇ ಗೆದ್ದಷ್ಟು ಖುಷಿಯಾಗಿದ್ದಾನೆ.

******
ತಾಯಿ

ಅವಳ ಗಂಡ ಕುಡುಕ. ಅವಳನ್ನು ಎಂತದೋ ಖಾಯಿಲೆ ಅಂತ ಕೈಬಿಟ್ಟ; ಇನ್ನೊಂದು ಮದುವೆ ಮಾಡಿಕೊಂಡ. ಅವಳು ತನ್ನ ರೋಗವನ್ನೂ ಕೂಡ ಗೆದ್ದು ಬದುಕಿದಳು; ತನ್ನ ಚಿಕ್ಕ ವಯಸ್ಸಿನಲ್ಲೇ ಎರಡು ಮಕ್ಕಳನ್ನೂ ಒಂಟಿಯಾಗಿ ಹೆಗಲಿಗೊತ್ತು ಸರಿ ದಾರಿ ಹಿಡಿಸಿದಳು. ಮಕ್ಕಳು ದೊಡ್ಡವರಾದ ಮೇಲೆ ಸುಖ ಕಂಡಿಯೇನು ಅಂತ ಕನಸು ಕಾಣ ಹತ್ತಿದ್ದಳು.

ಎಷ್ಟೋ ವರ್ಷಗಳಾದ ಮೇಲೆ, ಮಕ್ಕಳಿಗೆ ಮದುವೆ ಮಾಡಿ ಇನ್ನೇನೂ ಸಾರ್ಥವಾಯಿತು, ಸೊಸೆಯಂದಿರು ಬಂದರು ಎನ್ನುವಷ್ಟರಲ್ಲಿ ಬೀದಿಗೆ ಬಿದ್ದಿದ್ದಳು. ಇಳಿ ವಯಸ್ಸಿನಲ್ಲಿ ಸೂರಿಲ್ಲದೆ ಮುಗಿಲು ನೋಡುತ್ತಾ ಕುಳಿತ ಅವಳನ್ನು ಯಾರೋ ಕೇಳಿದರು ನಿನ್ನ ಮಕ್ಕಳೆಲ್ಲಿ ಅಂತ. ಅವಳು ಮತ್ತೆ ಬ್ರಾಂತವಾಗಿ ಮುಗಿಲು ನೋಡುತಾ ಕುಳಿತಳು.   

‍ಲೇಖಕರು Avadhi

April 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: