ಮೆಟ್ಟಿಲು ಹತ್ತಿದ ಸೂತ್ರಧಾರ ರಾಮಯ್ಯ

‘ಸೂತ್ರಧಾರ’ ರಂಗ ಮಾಸಿಕದಲ್ಲಿ ರಾಮಯ್ಯ ಅವರು ಬರೆದ ಕಾಲೆಳೆಯುವ ಲೇಖನಗಳ ಸಂಗ್ರಹವೇ ಮೆಟ್ಟಿಲ ಮಹಿಮೆ. ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಏನೆಲ್ಲಾ ಹುಟ್ಟಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಬರಹಗಳು ನಿಂತಿವೆ. ಈ ಪುಸ್ತಕಕ್ಕೆ ಸೂತ್ರಧಾರ ರಾಮಯ್ಯ ಅವರು ಬರೆದ ‘ನನ್ನುಡಿ’ ಇಲ್ಲಿದೆ

ಹತ್ತು ಕಟ್ಟೋ ಬದಲು ಒಂದು ಮುತ್ತು ಕಟ್ಟಿದಂತೆ ’ಹನ್ನೊಂದನ್ನು’ ಬಳಸುವ ಬದಲು ನೆರವಾಗಿ ’ಪನ್ ಒಂದನ್ನು’ (ಶ್ಲೇಷೆ) ಬಳಸುವ ಮಾರ್ಗ ಕನ್ನಡದ ಕವಿ, ಲೇಖಕ, ಕನ್ನಡಾಂಗ್ಲ ಪನ್ ಡಿತರಿಗೆ ಹೊಸದೇನು ಅಲ್ಲ. ರನ್ನ, ಕುಮಾರವ್ಯಾಸ, ಕೈಲಾಸಂ, ಬೇಂದ್ರೆ, ನಾ.ಕಸ್ತೂರಿ, ವೈಯನ್ಕೆ, ಲಂಕೇಶ್, ಚಂಪಾ ಇದೀಗ ವಿಶ್ವೇಶ್ವರ ಭಟ್, ದುಂಡಿರಾಜ್, ನಾರಾಯಣ ರಾಯಚೂರು ಹೀಗೆ ಪುಂಖಾನುಪುಂSವಾಗಿ ಹೆಸರುಗಳು ಕೇಳಿಬರುತ್ತವೆ. ಇವರಲ್ಲಿ ಕೆಲವರು ಚದುರಿದಂತೆ ಪನ್ ಬಳಕೆ ಮಾಡಿದರೆ, ಕೆಲವರಂತೂ ವ್ಯಾಪಕವಾದ ವಿಶ್ಲೇಷಣೆಯ ಪನ್‌ಥಕ್ಕೆ ಸೇರಿದವರಾಗಿದ್ದಾರೆ.

ಹಲವು ಅರ್ಥಗಳುಳ್ಳ ಒಂದೇ ಪದವನ್ನು ಹಿಡಿದೋ, ಪದದ ಉಚ್ಚಾರಣೆ ಒಂದೆ ಆದರೂ, ಸಂದರ್ಭಕ್ಕೆ ತಕ್ಕಂತೆ ನಾನಾ ಅರ್ಥಗಳನ್ನು ಆರೋಪಿಸಿವ, ವಿವಿಧಾರ್ಥಗಳಿಂದ ಹೊಳೆಯಿಸುವ, ವಿಪರೀತ ಅರ್ಥಗಳನ್ನು ಪದಕ್ಕೆ ತಳುಕು ಹಾಕಿ, ಸಾಮಾನ್ಯ ಅರ್ಥವನ್ನು ತಳಕ್ಕೆ ಹಾಕಿ ಆಯಾ ಸಂದರ್ಭವನ್ನು ವಿಡಂಬಿಸುತ್ತಾ ಬೇರೊಂದು ಅರ್ಥವನ್ನು ತಳ ತಳಿಸುವಂತೆ ಮಾಡುವುದೆ- ಮಾಡಬೇಕಾದುದೇ ಶ್ಲೇಷೆಯ ಗುಣ-ಧರ್ಮ.

ಯಾವುದೇ ಪದವನ್ನು ಹಿಡಿದು ಪನ್ ಮಾಡಲು ಪ್ರಯತ್ನಿಸುವುದು ಪ್ರಾರಂಭಕ್ಕೆ ಹ್ಯಾ-ಬಿಟ್ ಆದರೂ, ಕ್ರಮೇಣ ಅರೆಕ್ಷಣ ಬಿಟ್ ಇರಲಾರದ ’ಸರ್ಚ್-ರೀಸರ್ಚ್’ ಕಸುಬೇ ಆಗಿ, ಪನ್‌ಸ್ಟರ್ ತನಗೆ ತಾನೇ ಪನ್‌ಜ(ಜ್ವ)ರದ ಪಕ್ಷಿಯಾಗಿ ಹೋಗುವುದು ಸಾಮಾನ್ಯ. ಅವನ ತಲೆಯಲ್ಲಿ ’ಇಟ್ ಕೀಪ್ಸ್ ಹ್ಯಾ-ಪನ್ನಿಂಗ್’ ಅಂದರೆ ಅಚ್ಚರಿಯಿಲ್ಲ. ಹಾಗೆಯೇ ಪನ್‌ಸ್ಟರ‍್ಗಳು ಇರುವ ಕಡೆ ’ಪನ್ಯೂಷನ್-ಫ್ರೀ’ ವಾತಾವರಣವೂ ಅಲಭ್ಯವೇ- ಅಹುದಾದರಹುದೆನ್ನಿ.

ಹೆಮ್ಮೆಯ ಸಂಗತಿ ಎಂದರೆ, ಇಂಗ್ಲೀಷಿನಲ್ಲಿ ಬರಿ ’ಪನ್ನಿಂಗ್’ ಎಂದು ಕರೆಯುವ ಈ ಕಸರತ್ತನ್ನು ಪರ್ಯಾಯವಾಗಿ ಕನ್ನಡದಲ್ಲಿ ’ಶ್ಲೇಷಾಲಂಕಾರ’ ಎನ್ನುವ ಉಡುಪಿನಿಂದಲೇ ಶೃಂಗರಿಸಿ ಒಳ್ಳೆಯ’ ಪದ-ವಿ’ಗೇರಿಸುತ್ತಾರೆ ಕನ್ನಡದ ಪನ್‌ಡಿತರು. ಆದರೂ ಕನ್ನಡದಲ್ಲಿ ಈ ಅಲಂಕಾರದ ಪ್ರಯೋಗ ವ್ಯಾಪಕವಾಗಿ ನಡೆದಿಲ್ಲವೆಂದು ಕಾಣುತ್ತದೆ. ಬೇರೆಲ್ಲ ಅಲಂಕಾರ ಸಾಮಾಗ್ರಿಗಳನ್ನು ನಮ್ಮ ಕವಿಶ್ರೇಷ್ಠರು, ಲೇಖಕರು ಲೂಟಿ ಹೊಡೆದರೂ, ’ಶ್ಲೇಷೆ’ ಎಂದಾಗ ಅದ್ಯಾಕೆ ನಿರಾಸಕ್ತರಾಗಿ, ಎಂದೂ ’ಬತ್ತದ ಕಣಜ’ವೇ ಆದ ಈ ’ವರ್ಬಲ್ ಆರ್ಟ್’ನ ಖುಷಿ-ಕೃಷಿಯಲ್ಲಿ ತೊಳಗಿಲ್ಲವೋ, ಸಂಶೋಧಿಸಿ- ಸಂಸ್ಕರಿಸಿ ಬೆಳಗಲಿಲ್ಲವೋ ತಿಳಿಯದು. ಅರ್ಥಗಳನ್ನು ಸದಾ ’un earth’ ಮಾಡುವ ಈ ’ವರ್ಡ್ ಕಲ್ಚರ್’ ’ವರ್ಲ್ಡ್ ಕಲ್ಚರ್’ಗೂ ಇಂಬು ಕೊಡುತ್ತದೆ ಎಂಬುದನ್ನು ಈ ಕಾಲಂನಿಷ್ಠನ ನಂಬುಗೆ.

ಇನ್ನು ಕನ್ನಡಾಂಗ್ಲ ಭಾಷೆಗಳ ಸಾಮ್ಯ, ಸಾಂಗ್-ಗತ್ವ ಸಾಂಗತ್ಯಗಳ ’ಕೈ’ ಹಿಡಿದು ಕರೆದು ತಂದ ಪ್ರಹಸನ ಪಿತಾಮಹನ ಮಹಿಮೆಯ ಮೆಟ್ಟಿಲೇರಿ, ನಮ್ಮ ಜನಕ್ಕೆ ತೀರ ಪರಿಚಿತವಾಗಿ ದಿನನಿತ್ಯ ಬಳಕೆಯಲ್ಲಿರುವ ಅಸಂಖ್ಯ ಕನ್ನಡ- ಇಂಗ್ಲಿಷ್ ಪದಗಳ ಉಚ್ಚಾರಣೆಯಲ್ಲಿನ ಸಾಮ್ಯತೆಯ ಲಾಭ ಪಡೆದು, ಸಂದರ್ಭಾನುಸಾರ ಹೀರಿ ಈ ’ಮೆಟ್ಟಿಲ ಮಹಿಮೆ’ ಅಂಕಣದಲ್ಲಿ ಅಥವಾ ರಂಗ-ಸಮಾಜದ ಆಗುಹೋಗುಗಳ ಬಗ್ಗೆ ವಾರೆನೋಟ ಬೀರುವ ’ಡೊಂಕಣ’ದಲ್ಲಿ ಬಿಡುತ್ತಾ, ಒಳ್ಳೆಯ ಮಾತಿ-ನವನೀತ ಎಂದು ಸಹೃದಯ ಓದುಗರಿಂದ ಅನ್ನಿಸಿಕೊಂಡಿರುವುದು ನನ್ನ ಸುದೈವ. ಇದರಿಂದ ಉತ್ತೇಜಿತನಾದ ನನ್ನ ಪದಗಳೊಡನಾಟ-ನೋಟ ೨೩೧ ಪುಟಗಳಲ್ಲಿ ಇದೋ ನಿಮ್ಮ ಮುಂದಿದೆ.

ಪ್ರಾರಂಭಕ್ಕೆ ’ಸೂತ್ರಧಾರ ವಾರ್ತಾಪತ್ರ’ ಇದೀಗ ’ಈ ಮಾಸ ನಾಟಕ’ಗಳಲ್ಲಿ ಪ್ರಕಟವಾಗುತ್ತ ತನ್ನ ಇಪ್ಪತ್ತೊಂದನೆಯ ವರ್ಷದಲ್ಲೂ ಈ ಕಾಲಂ ಸೇಲ್ ಆಗುತ್ತಿದೆ ಅಂದರೆ, ನನ್ನ ವೆ-ಪನ್ ಇನ್ನೂ ಹರಿತವಾಗಿದೆ ಎಂದೇ ತಿಳಿಯುತ್ತೇನೆ. ನೈಸರ್ಗಿಕವಾಗಿ ಸೃಷ್ಟಿಗೆ ಅನುವಾಗಲು ಮನರಂಜನ ವ್ಯಂಜನಗಳನ್ನು ’ಆದೇವ’ ಇಟ್ಟಿರುವುದರಿಂದಲೇ ಜನ ’ನಾವಾದೇವಾ’ ಅಂದ ಹಾಗೆ, ಮೆಟ್ಟಿಲ ಮಹಿಮೆಯ ಕ್ರಿಯೇಷನ್ ಸಹಾ ಪನ್‌ಗಳ ರಿಕ್ರಿಯೇಷನ್‌ನಿಂದಲೇ-ಅನುವನೀ ಅಂಧ ಹೀಗೆ! ಇಷ್ಟೆಲ್ಲಾ ಹೇಳಿದ ಮೇಲೆ, ಪ್ರಿಯ ಓದುಗ ಮಹಾಶಯ ಒಂದು ಭಿನ್ನಹ ಉಲಿವೆ ಕೇಳು; ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಎಂದು ಹೇಳಲಾಗದಿದ್ದರೂ, ತಾವು ದಯಮಾಡಿ ಓಡಿಸಿಕೊಂಡು ಹೋಗಬೇಡಿ ’pun-gent’ ಆಗಿರೋದ್ರಿಂದ ಅಲ್ಲಲ್ಲಿ ಘಾಟು ಸೆಕ್ಷನ್, ಹೊಗೆ-ನಗೆ ಕರ‍್ವು-ತಿರ‍್ವುಗಳು ಎದುರಾಗುತ್ತವೆ. ಸ್ಸಾರಿ ಫಾರ್ ಪನ್‌ನಿಷ್‌ಮೆಂಟ್!

‍ಲೇಖಕರು avadhi

February 25, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: