ಕಡಿದಾಳ್ ಶಾಮಣ್ಣ ಬರೆದಿದ್ದಾರೆ: ಶಹನಾಯಿಯ ಆರ್ಭಟ

scan0063

ಒಂದು ಅಪರೂಪದ ನೆನಪು ಇಲ್ಲಿದೆ. ಕಡಿದಾಳು ಶಾಮಣ್ಣ ಅವರು ಕುವೆಂಪು ನೆನಪನ್ನು ಹಂಚಿಕೊಂಡಿದ್ದಾರೆ. ‘ಅವಧಿ’ ಕುವೆಂಪು ಸಂಚಿಕೆ ರೂಪಿಸಿದ ಬೆನ್ನಲ್ಲೇ ಕವಯತ್ರಿ ಅಕ್ಷತಾ ಕೆ ಈ ಲೇಖನವನ್ನು ಒದಗಿಸಿದ್ದಾರೆ. ಕಡಿದಾಳು ಶಾಮಣ್ಣ ಹಾಗೂ ಅಕ್ಷತಾ ಇಬ್ಬರಿಗೂ ಥ್ಯಾಂಕ್ಸ್.

ಕಡಿದಾಳು ಶಾಮಣ್ಣ ಹಾಗೂ ಜಿ ಪಿ ಬಸವರಾಜು ದಂಪತಿಗಳು ಕುವೆಂಪು ಅವರೊಂದಿಗಿರುವ ಅಪರೂಪದ ಫೋಟೋ ಸಹಾ ಇದೆ.

-ಕಡಿದಾಳು ಶಾಮಣ್ಣ

ದಂತವಾದ್ಯದ ಕಥೆ ಹೀಗಾಯ್ತಲ್ಲ ಇದೇ ಸಂದರ್ಭದಲ್ಲಿ ಕೆ.ಎಚ್ ಶ್ರೀನಿವಾಸ್ ದೆಹಲಿಗೆ ಹೊರಟಿದ್ರು. ಆವಾಗ ಬಿಸ್ಮಿಲ್ಲಾಖಾನರ ಶಹನಾಯಿ ಇಡೀ ದೇಶದ ತುಂಬಾ ಜನಜನಿತವಾಗಿತ್ತು. ನನಗೂ ಶಹನಾಯಿ ಬಗ್ಗೆ ಆಸಕ್ತಿ ಹುಟ್ಟಿ ಶ್ರೀನಿವಾಸರನ್ನ ಕಾಡಿ ಬೇಡಿ ದೆಹಲಿಯಿಂದ ಒಂದು ಶಹನಾಯಿ ತರಿಸ್ಕಂಡಿದ್ದೆ. ಆದರೆ ಶ್ರೀನಿವಾಸ ಶಹನಾಯಿ ತಂದೋರು ಅದರ ಪೀಪಿ ತರೋದು ಮರ್ತು ಬಿಟ್ಟಿದ್ದರು. ನನಗೆ ಅವರು ತಂದ ಕೂಡ್ಲೇ ಬಾರಿಸಬೇಕು ಅಂತ ಆಸೆ ಆದರೆ ಪೀಪಿ ಇಲ್ಲದೇ ಇರೋದ್ರಿಂದ ಅದನ್ನ ಹ್ಯಾಗೆ ಊದಿದ್ರೂ ಬರೀ ಪುಸ್ ಪುಸ್ ಅಂತ ಬರೋದು. ಅಲ್ಲ ಮಾರಾಯ್ರ ಶಹನಾಯಿ ತರೋರು ಊದಿ ನೋಡಿ ತರೋದಲ್ವಾ ಅಂತೇಳಿ ಶ್ರೀನಿವಾಸ್ಗೆ ಶಾಪ ಹಾಕ್ದೆ.

ನನಗೆ ಶಹನಾಯಿ ಪ್ರತಿಭೆ ಪ್ರದಶರ್ಿಸಿ ಮರಿ ಬಿಸ್ಮಿಲ್ಲಾಖಾನ್ ಅನ್ನಿಸಿಕೊಳ್ಳೋ ತವಕ .ಪೀಪಿ ಇಲ್ಲದೇ ಬಲು ದೊಡ್ಡ ತೊಡಕಾಗ್ಬಿಟ್ಟು ಊದಿದ್ರೂ ಏನೂ ಶಬ್ದ ಹೊಮ್ಮತಾ ಇರ್ಲಿಲ್ಲ. ಆವಾಗ್ಲೇ ಒಂದು ಪ್ಲಾನ್ ಹೊಳಿತು ಪುಟ್ಟಪ್ಪನವ್ರಿಗೆ ಕ್ಷೌರ ಮಾಡಾಕೆ ಅವರ್ಮನೆಗೆ ಒಬ್ಬ ಕ್ಷೌರಿಕ ಬರ್ತಿದ್ದ ಚಾರಿ ಅಂತ. ಅವನು ಮದುವೆ ಮನೇಲೆಲ್ಲ ನಾಗಸ್ವರ ನುಡಿಸ್ತಿದ್ದ. ನಾಗಸ್ವರ ಹಾಗೂ ಶಹನಾಯಿ ಒಂದೆ ತರದ ವಾದ್ಯಗಳಾದ್ದರಿಂದ ನಾಗಸ್ವರದ ಪೀಪಿ ಇದಕ್ಕಾಗಬಹುದು ಅಂದ್ಕೊಂಡು ಅವನನ್ನ ಹುಡ್ಕಂಡು ತೇಜಸ್ವಿ ಮನೆಗ್ಹೋದೆ. ತೇಜಸ್ವಿ ಇದ್ದೋರು ಚಾರಿಯ ಮನೆ ಪಕ್ಕದ ಬೀದಿಯ ಕೊನೆಗಿದೆ. ಊಟ ಮಾಡ್ಕಂಡು ಹೋಗಣ ಅಂದ್ರು. ನನ್ನದು ಊಟ ಆಗಿದೆ ಅಂದೆ. ಸ್ಸರಿ ಹಂಗಿದ್ರೆ ಕೂತ್ಕಂಡಿರಿ ಐದೇ ನಿಮಿಷದಲ್ಲಿ ಊಟ ಮುಗಿಸ್ಕಂಡು ಬರ್ತೀನಿ ಅಂತ ಒಳಗ್ಹೋದರು. ಸದ್ಯಕ್ಕಿರಲಿ ನೋಡೋಣ ಎಂದು ಯಾವುದೋ ಪೀಪಿಯೊಂದನ್ನು ಶಹನಾಯಿಗೆ ಹಾಕ್ಕಂಡಿದ್ದೆ.

ತೇಜಸ್ವಿ ರೂಮಲ್ಲಿ ಕೂತು ಅವರಿಗಾಗಿ ಕಾಯ್ತಾ ಇದ್ನಲ್ಲ. ಕೈಯಲ್ಲಿ ಶಹನಾಯಿಯಿತ್ತು. ಅದು ಏನೂ ನಾದ ಹೊರಡಿಸಲ್ಲ ಅಂತ ತಿಳಿದಿದ್ರೂ ಅದನ್ನ ಪದೇ ಪದೇ ಊದಿ ಏನಾದ್ರೂ ಶಬ್ದ ಮಾಡತ್ತಾ ಅಂತ ನೋಡೋದು ಅಬ್ಯಾಸ ಆಗ್ಬಿಟ್ಟಿತ್ತು. ಅದನ್ನ ಮತ್ತೊಂದು ಸಾರಿ ಊದೇ ಬಿಟ್ಟೆ. ಇಷ್ಟೊತ್ತು ಎಷ್ಟು ಶತಪ್ರಯತ್ನ ಮಾಡಿದ್ರೂ ಕುಂಯಿ ಕುಂಯಿ ಸಹ ಗುಟ್ಟದ ಶಹನಾಯಿ ಈಗ ಒಂದೆ ಸರ್ತಿಗೆ ಪೇಂ ಅಂತ ವಿಕಾರವಾಗಿ ನಾದ ಹೊರಡಿಸಿಯೇ ಬಿಟ್ಟಿತು. ಅದರ ಆರ್ಭಟಕ್ಕೆ ನಾನೇ ಅರೆಕ್ಷಣ ಬೆಚ್ಚಿಬಿದ್ದೆ. ಅಬ್ಬ ಇದನ್ನ ಕೇಳಿ ಯಾರೂ ಭಯ ಬಿದ್ದು ಓಡಿಬರ್ಲಿಲ್ಲ ಸದ್ಯ ಅಂತ ತಲೆ ಎತ್ತಿದರೆ ಅಲ್ಲಿ ನಿಂತಿದ್ದಾರೆ ಪುಟ್ಟಪ್ಪನೋರು. ಪಕ್ಕದ ಕೋಣೆಯಲ್ಲಿ ಧ್ಯಾನಶೀಲರಾಗಿ ಬರವಣಿಗೆಯಲ್ಲಿ ತೊಡಗಿದ್ದ ಅವರು ಈ ವಿಕಾರ ನಾದದಿಂದ ಕಿರಿಕಿರಿಗೊಂಡು ಈ ತೇಜಸ್ವಿ, ಶಾಮಣ್ಣ ಮತ್ತೊಂದು ಯಾವುದೋ ಅವಾಂತರ ಶುರು ಹಚ್ಕಂಡಿದ್ದಾರೆ ಅಂತ ಅಂದಾಜು ಮಾಡ್ಕಂಡು ನಾನಿದ್ದ ರೂಮಿನ ಕಡೆ ಬಂದಿದ್ದಾರೆ. ಅವರಿಗೆ ನನ್ನ ಕೈಯಲ್ಲಿದ್ದ ಶಹನಾಯಿಯನ್ನ ನೋಡಿ ಎಲ್ಲ ಅಂದಾಜಾಗಿದೆ. ಅವರಿದ್ದೋರು ಶಾಮಣ್ಣ, ವಾದ್ಯಗಳಲ್ಲಿ ಬೇರೆ ಬೇರೆ ತರ ಇರ್ತಾವೆ ಕೆಲವನ್ನ ಮಾತ್ರ ಮನೆಯೊಳಗೆ ಬಾರಿಸಬಹುದು. ಮತ್ತೆ ಕೆಲವನ್ನ ರಣವಾದ್ಯ ಅಂತ ಕರೀತಾರೆ. ಅವನ್ನ ಯಾವುದೇ ಕಾರಣಕ್ಕೂ ಮನೆಯೊಳಗೆ ಬಾರಿಸಬಾರದು. ಚಾಮುಂಡಿ ಬೆಟ್ಟಕ್ಕೆ ಹೋಗಿ ಅಲ್ಲಿ ಬಾರಿಸಬೇಕು. ಈಗ ನಿನ್ನ ಕೈಲಿ ಇದ್ಯಲ್ಲ ಅದು ರಣವಾದ್ಯ ಅದನ್ನ ಇಲ್ಲೆಲ್ಲ ಬಾರಿಸಬಾರದು ಅಂತ ಹೇಳಿದ್ರು. ಆದರೆ ನಾನು ಅವರು ಏನು ಹೇಳ್ತಿದಾರೊ ಅದನ್ನ ಸರಿಯಾಗಿ ಕೇಳಿಸ್ಕಳ್ಳೋ ಗೋಜಿಗೂ ಹೋಗದೆ ಅವರನ್ನ ಆಶ್ಚರ್ಯದಿಂದ ಹೊಸ ಮನುಷ್ಯರನ್ನ ನೋಡೋ ತರ ನೋಡೋದ್ರಲ್ಲೆ ಬಿದ್ಬಿಟ್ಟಿದ್ದೆ. ಯಾಕೆಂದ್ರೆ ಯಾವತ್ತ್ತೂ ಪೈಜಾಮ ತೊಡೋ ಪುಟ್ಟಪ್ಪನವ್ರು ಆವತ್ತು ವಿಶೇಷವಾಗಿ ಲುಂಗಿ ಉಟ್ಕಂಡಿದ್ರು ಅದಕ್ಕಿಂತ ಹೆಚ್ಚಾಗಿ ಅವರು ಹಲ್ಲಿನ ಸೆಟ್ ಹಾಕಿಸ್ಕಂಡಿದಾರೆ ಅನ್ನೋ ವಿಷಯವೇ ಗೊತ್ತಿರಲಿಲ್ಲ ಹಲ್ಲಿನ ಸೆಟ್ ಬೇರೆ ಕಳಚಿಟ್ಟಿದ್ರು. ಹಾಗಾಗಿ ನನಗೆ ಅವರು ಹೊಸ ಮನುಷ್ಯರ ತರ ಕಾಣ್ತಾ ಇದ್ದರು. ಒಂದು ವಯಸ್ಸಲ್ಲಿ ನಮಗೆಲ್ಲ ಎಂತೆಂತ ವಿಷಯಗಳೆಲ್ಲ ಮುಖ್ಯವಾಗಿ ಬಿಡುತ್ತಲ್ಲ. ಪುಟ್ಟಪ್ಪನವ್ರು ಹಲ್ಲು ಕಟ್ಟಿಸ್ಕಂಡಿರೋ ವಿಷಯ ನನಗೇ ತಿಳಿದೇ ಇರ್ಲಿಲ್ವಲ್ಲ ಅನ್ನೋದೆ ನನಗೇ ಬಹಳ ದಿನದವರೆಗೆ ಅಚ್ಚರಿ ಉಂಟು ಮಾಡ್ತಿದ್ದ ವಿಷಯವಾಗಿತ್ತು.

ಅದಿರಲಿ, ಪುಟ್ಟಪ್ಪನವ್ರು ಶಹನಾಯಿ ಶಬ್ದದಿಂದ ಕಿರಿಕಿರಿಗೊಂಡು ನನಗೆ ಹೀಗೆ ಬುದ್ದಿವಾದ ಹೇಳ್ತಾ ಇದ್ದ ಸಂದರ್ಭದಲ್ಲೆ ತೇಜಸ್ವಿ ಊಟ ಮುಗಿಸಿ ಬಂದವರು ಏನಣ್ಣಾ ಅಂತ ಕೇಳಿದ್ರು ಪುಟ್ಟಪ್ಪನೋರು ಏನೂ ಇಲ್ಲ ಶಾಮಣ್ಣಂಗೆ ವಾದ್ಯಗಳ ಬಗ್ಗೆ ಹೇಳ್ತಾ ಇದ್ದೆ ಅಂತೇಳಿ ವಾಪಾಸಾದರು. ನಾನು ತೇಜಸ್ವಿ ಚಾರಿ ಮನೆಗೆ ಹೋಗಿ ಪೀಪಿ ಕೇಳಿದ್ರೆ ಅವನಿದ್ದೋನು ಪೀಪಿ ಕೊಡ್ಲಿಕ್ಕೆ ಒಪ್ಪಲೇ ಇಲ್ಲ ನಾವು ಎಂಜಲು ಮಾಡಿದ ಪೀಪಿಯನ್ನ ನೀವು ಊದಬಾರದು ಅಂತ ಅವನ ಹಠ. ಪರ್ವಾಗಿಲ್ಲ ಮಾರಾಯ ನಮಗೆ ಎಂಜಲು ಗಿಂಜಲು ಏನಿಲ್ಲ ಶಹನಾಯಿ ಊದಕ್ಕೆ ಬಂದ್ರೆ ಸೈ ಅಂದ್ರೆ ಅವನು ಕೇಳಂಗೆ ಇಲ್ಲ ನಿಮ್ಮಂತ ಮೇಲ್ಜಾತಿಯವ್ರಿಗೆ ನಾನು ಎಂಜಲು ಮಾಡಿದ ಪೀಪಿ ಕೊಟ್ರೆ ಆ ಪಾಪ ನಮಗೆ ಸುತ್ಕಳತ್ತೆ ಅಂತ ಅವನ ವಾದ. ಕೊನೆಗೆ ನಾನು ತೇಜಸ್ವಿ ಏನೇ ಹೇಳದ್ರೂ ಅವನು ಪೀಪಿ ಕೊಡಕ್ಕೆ ಒಪ್ಪದಿದ್ದಾಗ ನಾವಿಬ್ರೂ ಅವನಿಗೆ ಬಯ್ದು, ಬೆದರಿಕೆ ಹಾಕಿ ಪೀಪಿ ತಗಂಬರಬೇಕಾಯ್ತು.

ಶಹನಾಯಿ ಏನೋ ಊದಕ್ಕೆ ಬಂತು ಆದರೆ ಅದನ್ನ ಎಲ್ಲಿ ಅಬ್ಯಾಸ ನಡೆಸೋದು ಅನ್ನೋದೇ ಸಮಸ್ಯೆ ಆಯ್ತು ಮೊದಲೇ ಹೇಳಿದಂಗೆ ಅದು ರಣವಾದ್ಯ ಆಗಿರದ್ರಿಂದ ನನ್ನ ಹಾಸ್ಟೆಲ್ ಕೋಣೆಯಲ್ಲಿ ಅಭ್ಯಾಸ ಮಾಡಕ್ಕೆ ಶುರುಮಾಡದ್ರೆ ಎಲ್ಲ ಹುಡುಗ್ರಿಗೂ ತೊಂದರೆ ಆಗೋದು. ಆಗ ಸುಬ್ಬರಾಯಾಚಾರ್ಯರನ್ನ ಪರೀಕ್ಷಾ ವಿಭಾಗಕ್ಕೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ರಿಂದ ಕೃಷ್ಣನ್ ಅನ್ನೋ ಸೈಕಾಲಜಿ ಪ್ರೊಫೆಸರ್ ವಾರ್ಡನ್ ಆಗಿದ್ರು. ಅವರು ಸಂಗೀತ ಪ್ರೇಮಿಗಳಾಗಿದ್ರಿಂದ ನನ್ನ ಸಂಗೀತ ಕೈಂಕರ್ಯಕ್ಕೆ ಸುಬ್ಬರಾಯಾಚಾರ್ಯರ ತರ ಪ್ರೋತ್ಸಾಹ ಕೊಡೋರು. ಅವರಿದ್ದೋರು ಶಹನಾಯಿ ಕಲಿಯಕ್ಕೆ ಅನುಕೂಲ ಆಗಂಗೆ ಹಾಸ್ಟೆಲ್ನಲ್ಲಿದ್ದ ಧ್ಯಾನ ಮಂದಿರವನ್ನ ನನಗಾಗಿ ಬಿಟ್ಟುಕೊಟ್ಟರು. ಆ ಕೋಣೆ ಯಾವುದಕ್ಕೂ ಬಳಸದೇ ಖಾಲಿ ಬಿದ್ದಿತ್ತು. ಆ ಕೋಣೆ ಇದೆ ಅನ್ನೋದೆ ಹಾಸ್ಟೆಲ್ ಹುಡುಗರ ಗಮನಕ್ಕೆ ಬಂದಿರಲಿಲ್ಲ ಆದರೆ ನಾನು ಯಾವಾಗ ಅಲ್ಲಿ ಹೋಗಿ ಶಹನಾಯಿ ಊದಕ್ಕೆ ಪ್ರಾರಂಭಿಸಿದೆನೋ ಆ ಕೋಣೆ ಇಡೀ ಹಾಸ್ಟೆಲ್ ಹುಡುಗರ ಕಣ್ಣಿಗಲ್ಲ ಕೆಂಗಣ್ಣಿಗೇ ಗುರಿಯಾಯ್ತು. ಅವರೆಲ್ಲ ಹೋಗಿ ವಾರ್ಡನ್ ಹತ್ರ ಶಹನಾಯಿ ಶಬ್ದದಿಂದ ನಮಗೆ ಓದಿಗೆ ತೊಂದ್ರೆ ಆಗತ್ತೆ ಅಂತ ದೂರು ಕೊಟ್ಟರು. ಕೃಷ್ಣನ್ ಅವರಿಗೆ ತಲೆಬಿಸಿಯಾಯ್ತು. ಯಾಕೆಂದ್ರೆ ಸಂಗೀತಾಭ್ಯಾಸ ಮಾಡಿ ಅಂತ ರೂಮು ಕೊಟ್ಟವರೇ ಅವರು ಈಗ ನೋಡಿದ್ರೆ ಹುಡುಗ್ರು ನನ್ನ ವಿರುದ್ದ ಅವರಿಗೇ ದೂರು ಕೊಟ್ಟಿದ್ದಾರೆ ಇದನ್ನ ತಳ್ಳಿ ಹಾಕೋ ಹಾಗೂ ಇಲ್ಲ ಒಟ್ಟಾರೆ ಅವರು ಏನು ಮಾಡೋದು ಅನ್ನೊ ಗೊಂದಲಕ್ಕೆ ಬಿದ್ರು. ಇದು ತೇಜಸ್ವಿಗೆ ತಿಳಿದು ಅವರಿದ್ದೋರು ಪುಟ್ಟಪ್ಪನವ್ರ ಹತ್ತಿರ ಒಪ್ಪಿಗೆ ಪಡೆದು ವಿಸಿ ಕ್ವಾಟ್ರಸ್ನ ಒಂದು ಕೋಣೆಯನ್ನ ಶಹನಾಯಿ ಅಭ್ಯಾಸಕ್ಕೆ ಬಳಸಲು ವ್ಯವಸ್ಥೆ ಮಾಡಿಕೊಟ್ಟರು.

ಅಲ್ಲಿಂದ ನನ್ನ ಶಹನಾಯಿ ಅಬ್ಯಾಸ ಕುಲಪತಿಗಳ ನಿವಾಸಕ್ಕೆ ಶಿಫ್ಟ್ ಆಯ್ತು. ಆದರೆ ನನ್ನ ಗ್ರಹಚಾರಕ್ಕೆ ನಾನು ಶಹನಾಯಿ ಬಾರಿಸಲು ಶುರುಮಾಡಿದ ಕೂಡಲೇ ಎಲ್ಲೆಲ್ಲೂ ಇದ್ದ ನಾಯಿಗಳೆಲ್ಲ ವಿಸಿ ಕ್ವಾಟ್ರಸ್ ಮುಂದೆ ನೆರೆದು ಶಹನಾಯಿಯ ನಾದವನ್ನೂ ಮೀರಿಸೋ ಹಾಗೆ ಬಳ್ಳಿಕ್ಕಲು ಶುರು ಮಾಡೋವು. ನಾಯಿ ಬಳ್ಳಿಕ್ಕಿಸಿ ಓದಕ್ಕೆ ತೊಂದ್ರೆ ಮಾಡ್ತಾರೆ ಅಂತ ಹಾಸ್ಟೆಲ್ ವಿದ್ಯಾಥರ್ಿಗಳು ಕುಲಪತಿಗಳಿಗೆ ದೂರು ಕೊಟ್ರು. ಹತ್ತಾರು ದೂರುಗಳು ಕುಲಪತಿಗಳನ್ನ ತಲುಪಿದಾಗ ಪುಟ್ಟಪ್ಪನೋರು ತೇಜಸ್ವಿಯನ್ನ ಕರೆದು ವಿಚಾರಣೆ ನಡೆಸದ್ರು. ಆ ದೂರು ಕೊಟ್ಟವರಲ್ಲಿ ಹೆಚ್ಚಿನ ವಿದ್ಯಾಥರ್ಿಗಳು ಕುಲಪತಿಗಳ ನಿವಾಸದ ಪಕ್ಕದಲ್ಲಿರುವ ಅಯ್ಯಂಗಾರರ ಹಾಸ್ಟೆಲ್ ಹಯಗ್ರೀವ ಮಂದಿರದ ವಿದ್ಯಾಥರ್ಿಗಳಾಗಿದ್ದರು. ಈ ರೀತಿ ದೂರುಗಳ ಸರಮಾಲೆಯಲ್ಲಿ ಶಹನಾಯಿ ಕಲಾವಿದ ಆಗ್ಬೇಕು ಅನ್ನೋ ನನ್ನ ದೊಡ್ಡ ಆಸೆ ಕಳಚ್ಕಂಬಿತ್ತು.

ಹಾಸ್ಟೆಲ್ ಹುಡುಗ್ರು ಹಾಗೇ ದೂರು ಕೊಟ್ಟಿದ್ದರಲ್ಲಿ ಬಹಳ ಮಟ್ಟಿಗೆ ಸತ್ಯಾಂಶವೇ ಇತ್ತು. ಪುಟ್ಟಪ್ಪನವ್ರು ಹೇಳಿದ ಹಾಗೆ ಅದು ರಣವಾದ್ಯವೇ, ಅದರ ಕಿವಿಗಡಚಿಕ್ಕುವ ಶಬ್ದದಿಂದಾಗಿ ತಾಲೀಮು ನಡೆಸೋದು ತುಂಬಾ ಕಷ್ಟ. ಬಿಸ್ಮಿಲ್ಲಾ ಖಾನರಿಗೆ ಶಹನಾಯಿ ಅಭ್ಯಾಸ ನಡೆಸ್ಲಿಕ್ಕಾಗೆ ಕಾಶಿಯ ವಿಶ್ವನಾಥ ದೇವಾಲಯದಲ್ಲಿ ನೆಲಮುಚ್ಚಿಗೆ ಇರುವ ಕೋಣೆಯನ್ನ ಬಿಟ್ಟುಕೊಟ್ಟಿದ್ರಂತೆ. ಒಂಚೂರು ಶಬ್ದ ಹೊರ ಹೋಗಬಾರದು ಅಂತ ಶಬ್ದ ನಿರೋಧಕ ಕೋಣೆಯಾಗಿತ್ತಂತೆ ಅದು. ಶಹನಾಯಿಯ ರಣ ಶಬ್ದದ ದಸೆಯಿಂದಾಗಿ ನಾನು ಅದರ ಮೇಲಿನ ವ್ಯಾಮೋಹದಿಂದ ಅನಿವಾರ್ಯವಾಗಿ ಕಳಚಿಕೊಳ್ಳತೊಡಗಿದೆ.

‍ಲೇಖಕರು avadhi

February 24, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಡಾ.ಬಿ.ಆರ್.ಸತ್ಯನಾರಾಯಣ

    ಶಾಮಣ್ಣ ಮತ್ತು ತೇಜಸ್ವಿಯವರ ಶಹನಾಯ್ ಅವಾಂತರಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅಣ್ಣನ ನೆನಪು ಕೃತಿಯಲ್ಲಿ ತೇಜಸ್ವಿಯವರ ಮಾತಿನಲ್ಲಿ ಕೇಳಿದ್ದನ್ನು ಇಲ್ಲಿ ಶಾಮಣ್ಣನವರ ಮಾತಿನಲ್ಲಿ ಕೇಳುವುದಕ್ಕೆ ಖುಷಿಯಾಗುತ್ತಿದೆ. ಅವರ ದಂತವಾದ್ಯದ ಕಲಾಪ್ರತಿಭೆ ಹಲ್ಲುನೋವಿನ ದುರಂತದೊಂದಿಗೆ ಕೊನೆಗೊಂಡಿದ್ದು ಮಾತ್ರ ದುರಂತ! ಶಹನಾಯ್, ಸಿತಾರ್ ಎಲ್ಲವೂ ಶಾಮಣ್ಣನವರ ಕೈಯಲ್ಲಿ ಧ್ವನಿಯಾಗಿ ಅರಳಿವೆ. ತೇಜಸ್ವಿ ಶಾಮಣ್ಣ ಇಬ್ಬರೂ ಸಿತಾರ್ ವಾದಕರಾಗಿದ್ದರು ಎಂದು ಓದಿ ಕೇಳಿ ಬಲ್ಲೆ.

    ಪ್ರತಿಕ್ರಿಯೆ
  2. ರಾಮಚಂದ್ರ ದೇವ

    ತನ್ನ ಬಗ್ಗೆ ತಾನೇ ಹೀಗೆ ತಮಾಷೆ ಮಾಡಿಕೊಂಡು ಟೀಕಿಸಿಕೊಂಡು ನಗುವವರು ಅಪರೂಪ. ಸ್ವಂತದ್ದನ್ನು ವಿಜೃಂಭಿಸಿಕೊಳ್ಳುವವರು ಹೆಚ್ಚಿರುವಾಗ ಈ ಶಾಮಣ್ಣ ಒಬ್ಬ ಅಪರೂಪದ ವ್ಯಕ್ತಿ.
    ರಾಮಚಂದ್ರ ದೇವ

    ಪ್ರತಿಕ್ರಿಯೆ
  3. ಡಾ.ಬಿ.ಆರ್.ಸತ್ಯನಾರಾಯಣ

    ಒಂದೇ ಘಟನೆಯನ್ನು ಇಬ್ಬರು (ತೇಜಸ್ವಿ-ಶಾಮಣ್ಣ) ಅಪರೂಪದ ವ್ಯಕ್ತಿಗಳಿಂದ ಕೇಳುವ ಅವಕಾಶ. ಅಣ್ಣನ ನೆನಪುಗಳನ್ನು ಓದುವಾಗಲೇ ಶಾಮಣ್ಣ ನಮ್ಮನ್ನು ಆವರಿಸಿದ್ದರು. ಈಗ ಮತ್ತೊಮ್ಮೆ ಮನದಂಗಳಕ್ಕೆ ಬಂದಿದ್ದಾರೆ. ಕರೆತಂದ ಅವಧಿಗೆ ನಮನಗಳು.

    ಪ್ರತಿಕ್ರಿಯೆ
  4. Veda

    Oh entha swarasyakaravada lekhana.Illina pratiyondu salugalu kanmunde chitranavannu moodisuthade.Nakku nakku susthaythu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: