ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುತ್ತುಪ್ಪಾಡಿಯ ಹಾಡು..

-ಪ್ರಸಾದ್ ರಕ್ಷಿದಿ

ಬೊಳುವಾರು ಮಹಮ್ಮದ್ ಕುಂಞಿ ಅವರ “ಸ್ವಾತಂತ್ರ್ಯದ ಓಟ” ಕಾದಂಬರಿ.. ರಂಗಕ್ಕೆ ಬಂದಿದೆ. ಮಹಾ ಕಾದಂಬರಿಗಳನ್ನು ರಂಗಕ್ಕೆ ತರುವ ಸವಾಲು ಕೂಡ ದೊಡ್ಡದೇ.

ಇದಕ್ಕೆ ಕನ್ನಡದ್ದೇ ಹಲವು ಉದಾಹರಣೆಗಳಿವೆ. ಅವೆಲ್ಲಾ‌‌ ಆರು, ಏಳು, ಒಂಬತ್ತು ಗಂಟೆಗಳ ಪ್ರಯೋಗಳು..

ಆದರೆ ಇಲ್ಲಿ ಸಾವಿರದ ನೂರು ಪುಟಗಳ ಕಾದಂಬರಿಯನ್ನು ಮೂರುವರೆ ಗಂಟೆಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ.

ಆದ್ದರಿಂದಲೇ ಕಾದಂಬರಿಯ ಮಹಾ ಯಾತ್ರಿಕನಾದ ಚಾಂದ್ ಅಲಿಯ ಪಾತ್ರ ನದಿಯಾಗಿದ್ದು ಉಳಿದೆಲ್ಲವೂ ನದಿಯ ಪಾತ್ರದ ಮೇಲೆ ಮೇಳೈಸುವ ಉಪಕಥೆಗಳಾಗಿ ಬರುತ್ತವೆ.. ಈ ಸಂರಚನೆಯೇ ನಾಟಕಕ್ಕೆ ಒಂದು ಸ್ಪಷ್ಟ ನಿಲುವು ಮತ್ತು ಆಕಾರವನ್ನು ಒದಗಿಸಿದೆ.

ದೇಶ ವಿಭಜನೆಯ ಕಾಲದ ಘಟನೆಗಳನ್ನು ನಿಧಾನ ಗತಿಯಲ್ಲಿ ಯಾವುದೇ ಭಾವಾವೇಶಗಳ ರೋಚಕತೆಯಿಲ್ಲದೆ ತಣ್ಣಗೆ ನಿರೋಪಿಸುತ್ತ ಪ್ರಾರಂಭವಾಗುವ ನಾಟಕ. ಹಂತ ಹಂತವಾಗಿ ವೇಗ ಪಡೆದು ಕೊಳ್ಳುತ್ತಾ ಹೋಗುತ್ತದೆ.

ನಾಟಕದ ಪೂರ್ವಾರ್ಧ ಗಾಂಧಿ ಹತ್ಯೆಯ ತನಕ ಸಾಗಿದರೆ..

ಉತ್ತರಾರ್ಧ ಸಂಪೂರ್ಣ ಗಾಂಧಿ ಕನಸಿನ ಭಾರತದ ಅನಾವರಣ..

ಮುತ್ತುಪ್ಪಾಡಿ ಎನ್ನುವ ಹಳ್ಳಿ ಕಾದಂಬರಿಯ ಲೇಖಕರ ಕನಸಿನ ಕರ್ಮಭೂಮಿ ಹೇಗೋ ಹಾಗೇ ಭಾರತದ ಎಲ್ಲ ಕನಸುಗಾರರ ಕರ್ಮಭೂಮಿಯೂ ಹೌದು.. ಬಹುಶಃ ಗಾಂಧಿ ಕಂಡ ಕನಸಿನ ಗ್ರಾಮೀಣ ಭಾರತ ಹಾಗೂ ಅವರ ಹಿಂದ್ ಸ್ವರಾಜ್ ನ ಭಾರತವೂ ಇರಬಹುದು.

ಆದರೆ ಇದು ಕನಸೇ.. ವಾಸ್ತವದಲ್ಲಿ ಹೀಗಿರಲು ಸಾಧ್ಯವೇ ಇಲ್ಲವೆ?

ಖಂಡಿತ ಇದೆ.. ಮತ್ತು ಇಲ್ಲ..ಎನ್ನುವ ಎರಡೂ ಉತ್ತರಗಳಿವೆ..

ಭಾರತದಲ್ಲಿ ಸಾವಿರಾರು ಮುತ್ತುಪ್ಪಾಡಿಗಳಿವೆ.. ಅದೇ ಕಾಲದಲ್ಲಿಯೇ ಜೊತೆ ಜೊತೆಯಾಗಿ ದ್ವೇಷ, ಅಸಮಾನತೆ, ತಾರತಮ್ಯದ ಕೋಟೆ ಕೊತ್ತಲಗಳಿವೆ..

ಆದರಿಂದಲೇ ನಾವು ಇಂತಹ ಕಾದಂಬರಿಯನ್ನಾಗಲೀ ಅದರ ರಂಗ ಪ್ರಸ್ತುತಿಯನ್ನಾಗಲೀ ಒಂದು ಭಾವ ಪ್ರಪಂಚದ ಭಾಗವಾಗಿ ಮಾತ್ರ ನೋಡಬೇಕಾಗುತ್ತದೆ.

ಇದೇ ಸಂಪೂರ್ಣ ತಾರ್ಕಿಕ ವಾಸ್ತವ ಅಲ್ಲ..ಆದರೆ ಭಾವನಾತ್ಮಕ ವಾಸ್ತವ.. ಈ ಕಾರಣಕ್ಕಾಗಿಯೇ ಈ ಮುತ್ತುಪ್ಪಾಡಿಯ ಹಾಡು ರಂಗಮೇಲೆ ರೂಪ ಪಡೆಯುತ್ತಿರುವಾಗಲೇ ಪ್ರೇಕ್ಷಕರು ಪದೇ ಪದೇ ಕಣ್ಣೊರಸಿಕೊಳ್ಳುತ್ತಿದ್ದರು.

ಕೊನೆಯ ದೃಶ್ಯಗಳಲ್ಲಿ ಪ್ರೇಕ್ಷಕರು ಚಪ್ಪಾಳೆ ಹೊಡೆಯುವುದನ್ನು ಮರೆತು.. ಮೌನವಾಗಿ ಕುಳಿತರು..

ಇಡೀ ನಾಟಕದಲ್ಲಿ ಗಾಂಧಿ ಪಾತ್ರ ರಂಗಕ್ಕೆ ಬರುವುದೇ ಇಲ್ಲ…

ಆದರೆ ಪೂರ್ವಾರ್ಧದಲ್ಲಿ ಬರಿಯ ಒಂದು ರೂಪಕವಾಗಿ ಚರಕದ ಮೂಲಕ ಪ್ರವೇಶ ಪಡೆಯುವ ಗಾಂಧಿ.. ಮತ್ತು ಕೆಲವು ಹೇಳಿಕೆಗಳ ಮೂಲಕ ಗಾಂಧಿಯ ಆಶಯದ ಸೂಚನೆ. ಕೊನೆಗೆ ಗಾಂಧಿ ಹತ್ಯೆ ಮತ್ತು… ಮುಕ್ಕಾದ ಚರಕ.

ಉತ್ತರಾರ್ಧದಲ್ಲಿ ಅದು ಮುತ್ತುಪ್ಪಾಡಿ ಎಂಬ ಊರು ಮತ್ತು ಅಲ್ಲಿನ ಸಾಮಾನ್ಯ ಜನರು ತಮ್ಮ ಎಲ್ಲ ನಿತ್ಯಬದುಕಿನ ನಡುವೆ ಜತನದಿಂದ ಕಾಪಾಡಿಕೊಳ್ಳುವ ನೈತಿಕ ಪ್ರಜ್ಞೆ ಯ ಪ್ರತೀಕವಾಗಿ ಅಥವಾ ಗಾಂಧಿ ಭಾರತದ ಪ್ರಯೋಗ ಶಾಲೆಯಾಗಿ ಮುಂದುವರಿಯುತ್ತದೆ. ಅದೇ ಚಾಂದ್ ಅಲಿ, ಕೈಜುನ್ಬೀಸಾ, ರಾಘಣ್ಣ ,ಪಂಡಿತ, ಸುಮತಿ ಇವರೆಲ್ಲರನ್ನೂ ಸೂತ್ರದಲ್ಲಿ ಹಿಡಿದಂತೆ ಆಡಿಸುವ ಸೂಫಿ ಸಂತನಾದ ಕಾಲಜ್ಞಾನಿ ನಿಜಾಮುದ್ದೀನ್ ( ಬದ್ರುದ್ದೀನ್) ಇವರೆಲ್ಲರ ಲೋಕ.

ಇಷ್ಟೇ ಆಗಿದ್ದರೆ ನಾಟಕ ಒಂದು ರಮ್ಯ ಭಾವುಕ ಪ್ರಸ್ತುತಿಯಾಗಿ ಮುಗಿದು ಹೋಗುತ್ತಿತ್ತೇನೋ.

ಆದರೆ ನಾಟಕದ

ಪೂರ್ವಾರ್ಧದಲ್ಲಿನ ದಟ್ಟ ನೆರಳು ಆ ರೀತಿಯಲ್ಲಿ ಯೋಚಿಸಲು ಬಿಡದೆ.. ” ಸ್ವಾತಂತ್ರ್ಯ ಎಂದರೆ ಒಂದಾಗಿದ್ದ ದೇಶವನ್ನು ಎರಡು ತುಂಡು ಮಾಡುವುದೇ ? ” ಎಂಬ ಚಾಂದ್ ಅಲಿಯ ಪ್ರಶ್ನೆ ನಮ್ಮ ಮುಂದೆ ಬಂದು ನಿಲ್ಲುವಂತೆ ಮಾಡಿ ಪ್ರೇಕ್ಷಕ ವಾಸ್ತವದಲ್ಲಿ ನಿಂತು ಯೋಚಿಸುವಂತೆ ಮಾಡುತ್ತದೆ.

ಇತ್ತೀಚೆಗೆ ನಾನು ನೋಡಿದ ಬೇರೊಂದು ನಾಟಕದಲ್ಲಿ

” ನಮ್ಮ್ ಮನಸ್ಸುಗಳನ್ನು ಹ್ಯಾಕ್ ಮಾಡಲಾಗಿದೆ.. ಆದರೆ ಬುದ್ಧಿಯನ್ನು ಹ್ಯಾಕ್ ಮಾಡಲಾಗದಂತೆ ಕಾಪಾಡಿಕೊಳ್ಳಬೇಕು” ಎಂದಿದ್ದರು..

ಹೌದು ಮನಸ್ಸು ಒಂದು ಭಾವ ಲೋಕಗಳ ತಾಣ.. ಅದನ್ನು ಹ್ಯಾಕ್ ಮಾಡಿಕೊಂಡು ತಮಗೆ ಬೇಕಾದ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಕೆಲಸವನ್ನೀಗ ಮಾಡಲಾಗುತ್ತಿದೆ.

ಇತ್ತೀಚೆಗೆ ನನಗೆ ಪರಿಚಯವಾದ ಯುವಕರೊಬ್ಬರು.. ಸ್ವಾತಂತ್ರ್ಯ ಓಟ ಕಾದಂಬರಿಯ ಬಗ್ಗೆ ಮಾತನಾಡುತ್ತ.. ” ಅದು ನನ್ನನ್ನು ಮತ್ತೆ ಜೀವಪರನಾಗಿ ಯೋಚಿಸುವಂತೆ ಮಾಡಿದ ಕೃತಿ” ಎನ್ನುವ ಅರ್ಥ ದಲ್ಲಿ ಹೇಳಿದ್ದರು.

ಈ ಮೇಲಿನ ಎರಡೂ ಸಂಗತಿಗಳನ್ನು ಗಮನಿಸಿದಾಗ

ಮತ್ತು ನಾವು ಬುದ್ದಿಪೂರ್ವಕವಾಗಿ ನಮ್ಮ ಭಾವ ವಲಯ ವನ್ನು ಚೇತೋಹಾರಿಯಾಗಿ ಜೀವಪರವಾಗಿ ಇಟ್ಟುಕೊಳ್ಳಲು ಇಂತಹ ಪ್ರಯತ್ನಗಳು ಅಗತ್ಯ ಎನ್ನಿಸುತ್ತದೆ.

ಅದು ಸಿದ್ಧಾಂತಗಳನ್ನು ಮೀರಿದ ಭಾವ ಪ್ರಪಂಚ.

ಕೆಲವು ಮಿತಿಗಳ ನಡುವೆಯೂ ಆ ಕೆಲಸವನ್ನು ನಾಟಕ ಸಮರ್ಥ ವಾಗಿ ಮಾಡಿದೆ.

ನಾಟಕದ ನಟರಷ್ಟೇ ಅಲ್ಲ ತಾಂತ್ರಿಕ ವಿಭಾಗವೂ ಚೆನ್ನಾಗಿ ಕೆಲಸ ಮಾಡಿದೆ. ರಂಗ ಸಜ್ಜಿಕೆ ಪರಿಕರ ಮತ್ತು ವಸ್ತ್ರಾಲಂಕಾರ ಗಳು ಪಕ್ಕಾ ಆಗಿವೆ ಆದರೆ ಸಣ್ಣ ರಂಗಮಂದಿರಗಳಲ್ಲಿ ಪ್ರದರ್ಶನಕ್ಕೆ ತೊಡಕಾಗುವ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಇದೆ. ಸಂಗೀತ ಇಡೀ ನಾಟಕದ ಜೀವ.. ಅದು ಉತ್ರರ ದಕ್ಷಿಣ ಭಾರತದ ಸಂಗಮ..( ಆದರೆ ನಿನ್ನೆಯ ಪ್ರದರ್ಶದಲ್ಲಿ ಮಾತು ಗಳು ಸ್ಪಷ್ಟವಾಗಿ ಕೇಳಿ ದಷ್ಟು ಹಾಡುಗಳು ಸ್ಪಷ್ಟವಾಗಿ ಕೇಳಿಸಲಿಲ್ಲ ಮತ್ತು ಸೌಂಡ್ ವಾಲ್ಯೂಂ ಜಾಸ್ತಿ ಅನ್ನಿಸಿತು,ಇದನ್ನು ಗಮನಿಸಬೇಕು ಯಾಕೆಂದರೆ ಇಡೀ ನಾಟಕದ ಹಾಡುಗಳ ಮೇಲೆ ನಿಂತಿದೆ.)

ಇದು ಭಾರತದ ಪಾಡು..

ಹಾಗಾಗಿಯೇ ಇದು ಮುತ್ತುಪ್ಪಾಡಿಯ ಹಾಡು

ಒಟ್ಟಾರೆಯಾಗಿ ಇದು ಎಲ್ಲ ರೀತಿಯ ಪ್ರೇಕ್ಷಕರನ್ನು ತಲುಪಿ ತಟ್ಟಿ ಎದೆಗಿಳಿದ ಪ್ರಯೋಗ.ನಿಜವಾಗಿ ಇದಕ್ಕಾಗಿ ಶಿವಮೊಗ್ಗ ರಂಗಾಯಣಕ್ಜೆ,

ನಾಟಕದ ನಿರ್ದೇಶಕರಿಗೆ, ನಟ ತಾಂತ್ರಿಕ ವರ್ಗಕ್ಕೆ ಅಭಿನಂದನೆಗಳು..

ಹಾಗೇಯೇ ಇದನ್ನು ಹಾಸನದಲ್ಲಿ ಆಯೋಜಿಸಿ ಸಾಧ್ಯ ವಾಗಿಸಿದ.ಗೆಳೆಯರೆಲ್ಲರ ಶ್ರಮ ಸಾರ್ಥಕ.

‍ಲೇಖಕರು Admin

6 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading