ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವಾತಂತ್ರ್ಯ ದ ಓಟ- ಮೊದಲ ಷೋ..

-ಸವಿತಾ ನಾಗಭೂಷಣ

ಮೂರೂವರೆ ಘಂಟೆ ಒಬ್ಬ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವುದು ಅದೂ ಈ ಕಾಲದಲ್ಲಿ ಅಷ್ಟು ಸುಲಭ ಅಲ್ಲ! ಬೋಳುವಾರು ಮಹಮ್ಮದ್ ಕುಂಞ ಅವರ ‘ ಸ್ವಾತಂತ್ರ್ಯದ ಓಟ’ ಕಾದಂಬರಿಯನ್ನು ಅದೂ ಸಾವಿರದ ನೂರು ಪುಟಗಳನ್ನು ರಂಗಕ್ಕೆ ಒಗ್ಗಿಸುವುದು ಕಡಿಮೆ ಸಾಧನೆ ಏನಲ್ಲ, ಆ ನಿಟ್ಟಿನಲ್ಲಿ ನಟರಾಜ ಹೊನ್ನವಳ್ಳಿಯವರ ಅಚ್ಚುಕಟ್ಟಾದ ನಿರ್ದೇಶನದ ಈ ರಂಗ ಪ್ರಯೋಗ ಗೆದ್ದಿದೆ ಎಂದೇ ಹೇಳಬಹುದು!

ಜಗತ್ತಿನಲ್ಲಿ ದುಃಖ ತುಂಬಿರಬಹುದು. ಆದರೆ ಸ್ವರಾಜ್ಯ ಎಂದು ಗಾಂಧಿ ಹೇಳುವರಲ್ಲ…ಅಂತಹ ಪುಟ್ಟ ಗ್ರಾಮ ಮುತ್ತುಪಾಡಿಯಲ್ಲಿ ಬದುಕು ಸಹನೀಯ ಆಗುವಷ್ಟು ಸುಖದ ಪಲಕುಗಳಿವೆ. ದಿನನಿತ್ಯದ ಕೆಲಸ ಬೊಗಸೆ, ಧರ್ಮ ಕರ್ಮ, ಪ್ರೇಮ ಕಾಮ, ಹೊಡೆದಾಟ,ವ್ಯಾಜ್ಯ, ನ್ಯಾಯದಾನ ಎಲ್ಲವಕ್ಕೂ ಅಲ್ಲಿ ಜಾಗೆಯಿದ್ದು ಮನುಷ್ಯನ ಸಣ್ಣಪುಟ್ಟ ಕೊರೆಗಳಿಗೆ , ಮನುಜನ ಹುಟ್ಟು ಕಾಯಿಲೆಗಳಿಗೆ ಅಲ್ಲಿನ ನಿವಾಸಿಗಳೇ ಮದ್ದೆರೆಯುವರು, ಗುಣಮುಖರಾಗುವಂತೆ ಮಾಡುವರು. ದೇಶವಿಭಜನೆಯ ಕತೆ ಹೇಳುತ್ತಲೇ, ಎಲ್ಲಿಂದ ಬಂದವರು ಎಂದು ಕೇಳುತ್ತಲೇ… ಯಾವುದು ಒದಗಿ ಬಂದಿರುವುದೋ ಅದೇ ನನ್ನ ಶಾಂತಿವೀಡು ಎನ್ನುವತ್ತ ನಾಟಕ ಚಲಿಸುತ್ತದೆ. ಮನುಷ್ಯನ ನೆನಪು,ಪಡಿಪಾಟಲುಗಳು, ಭ್ರಮೆ, ಕನಸು ಕಾತರ, ಜೀವಂತವಾಗಿ ರಂಗದ ಮೇಲೆ ಅನಾವರಣ ಗೊಂಡಿವೆ. ಧ್ವನಿ, ಬೆಳಕು, ವಸ್ತ್ರ ವಿನ್ಯಾಸ, ರಂಗ ಸಜ್ಜಿಕೆ ಸಂಗೀತ ನಟರ ಅಭಿನಯ ಎಲ್ಲವೂ ಸಹಜವಾಗಿವೆ. ಸೂಫಿ ಹಾಡುಗಳು ಮೈದುಂಬುತ್ತವೆ.

ಬೋಳುವಾರರ ‘ಸ್ವಾತಂತ್ರ್ಯದ ಓಟ’ ಪ್ರಕಟವಾದ ಹೊಸತರಲ್ಲಿ ನಾನವರಿಗೆ ಕರೆ ಮಾಡಿ ಅದು ಎಲ್ಲಿ ಸಿಗುವುದು? ಎಂದು ಕೇಳಿದ್ದೆ. ಅವರು ಅದರ ಗಾತ್ರದ ಬಗ್ಗೆ ಹೇಳಿ, ಅದನ್ನು ಅಂಚೆಯಲ್ಲಿ ಕಳಿಸಲು ಸಾಧ್ಯವಿಲ್ಲ, ಓದುವ ಎದೆಗಾರಿಕೆ ಇದ್ದರೆ ಮನೆಗೆ ಬನ್ನಿರಿ, ಒಂದೊಳ್ಳೆಯ ಊಟ ಹಾಕಿ ದಕ್ಷಿಣೆಯಾಗಿ ನೀಡುವೆ ಎಂದಿದ್ದರು! ಒಳ್ಳೆಯ ಓದುಗನಾಗಿದ್ದ, ಬೆಂಗಳೂರಿನಲ್ಲಿದ್ದ ನನ್ನ ಕಸಿನ್ ಗೆ ಆ ಭಾಗ್ಯ ದೊರೆಯಿತು. ಅವನು ಅದನ್ನು ಪಡೆದುಕೊಂಡ, ಪುಸ್ತಕ ನನ್ನ ತನಕ ಬರಲಿಲ್ಲ. ಆದರೆ ಇಂದು ರಂಗದ ಮೇಲೆ ಅದರ ಮಿಂಚನ್ನು ಕಾಣುವಂತಾಯಿತು!

ಚಾಂದ್ ಅಲೀಯೋ ಚಂದನನೋ ನಾವು ಇಟ್ಟುಕೊಂಡ ಕೊಟ್ಟುಕೊಂಡ ಹೆಸರುಗಳಷ್ಟೇ… ಸಮಯ ಸಂದರ್ಭ ಒದಗಿಬಂದಾಗ ಎಲ್ಲವೂ ಕರಗಿ, ಮಿಡಿಯುವ ಮಾನವೀಯತೆ ಮೆರೆಯುವ ಕಣಗಳು ಅಷ್ಟೇ…. ಇದೇ ಈ ನಾಟಕದ ಜೀವ- ಭಾವ.

ನಾಟಕ ಮೂರೂವರೆ ಗಂಟೆಯದು. ಕೈಯಲ್ಲಿ ಒಂದು ನೀರಿನ ಬಾಟಲಿ, ಮಧ್ಯಂತರದಲ್ಲಿ ಮೆಲ್ಲಲು ಕುರುಕಲು ಕಡಲೆಕಾಯಿ ಒಯ್ಯಿರಿ.
ನಾಟಕ ಮಿಸ್ ಮಾಡಬೇಡಿ…. ಇವತ್ತೂ ಕೂಡ ಇದೆ, ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಂಜೆ 6.30 ಗೆ ಸರಿಯಾಗಿ ಶುರು ಆಗುವುದು.

‍ಲೇಖಕರು Admin

28 April, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading