-ಬಶೀರ್ ಅಹ್ಮದ್ ಕಿನ್ಯ
“ಅಯ್ಯೋ ಕಾಪಾಡಿ……” ನೀರಿನಿಂದ ಬಂದ ಆ ಅರಚಾಟಕ್ಕೆ ದಡದಲ್ಲಿ ನಿಂತಿದ್ದ ನೂರಾರು ಮೊಬೈಲ್‌ಗಳು ಒಮ್ಮೆಲೆ ಜೀವ ತಳೆದವು. ನಾಟಕೀಯ ದುರಂತವೊಂದು ಎಚ್‌ಡಿಯಲ್ಲಿ ಲೈವಾಗಿ ಸಿಕ್ಕಿದ ಸಂಭ್ರಮ.
“ಪಾಪ, ಹೀಗಾಗಬಾರದಿತ್ತು…” ಕ್ಯಾಮೆರಾಗಳ ಕ್ಲಿಕ್ಕುಗಳ ನಡುವೆ ಗೊಣಗಾಟಗಳು ಕರಗಿ ಹೋದವು. ಎರಡು ಸಲ ಮೇಲೆದ್ದು ಮುಳುಗಿದವಳು ಹತ್ತು ವರ್ಷದ ಹುಡುಗಿ. ಆಕೆಯ ಪುಟ್ಟ ಕೈಗಳು ದೇವರನ್ನೋ ಅಥವಾ ಮನುಷ್ಯರನ್ನೋ ಕರೆದಂತೆ ಮೇಲೆದ್ದಿದ್ದವು.
ಕೈಕಟ್ಟಿ ನಿಂತಿದ್ದವರ ನೂರು ಚಿಂತೆಗಳಲ್ಲಿ ‘ಪ್ಯಾಂಟ್ ಒದ್ದೆಯಾದೀತು’ ಎನ್ನುವುದೂ ಒಂದು. ಆಗ ಗುಂಪನ್ನು ಸೀಳಿಕೊಂಡು ಒಬ್ಬ ಬಂದ. ಇಪ್ಪತ್ತರ ಆಸುಪಾಸು. ಮಾತಿಲ್ಲದೆ ನೀರಿಗೆ ಧುಮುಕಿದ.
“ಛೆ, ಅವನಿಗೆ ಈಜು ಬರುತ್ತೋ ಇಲ್ಲವೋ…?” ಎಂದು ಯಾರೋ ಪಿಸುಗುಟ್ಟಿದರು. “ಈಗ ಇವನನ್ನೂ ಮೇಲೆತ್ತಲು ಅಗ್ನಿಶಾಮಕ ದಳ ಬೇಕು” ಎಂದು ಇನ್ನೊಬ್ಬ ತಮಾಷೆ ಮಾಡಿದ. ಉಳಿದವರು ನಿರ್ಲಿಪ್ತರು — ಎಲ್ಲವನ್ನೂ ನೋಡುವ, ತೀರ್ಪು ಕೊಡದ ನ್ಯಾಯಾಧೀಶರಂತೆ.
ಚಪ್ಪಾಳೆಗೂ, ಕ್ಯಾಮೆರಾದ ಫ್ಲ್ಯಾಷ್‌ಗೂ ಕಿವುಡಾಗಿ ಅವನು ಹುಡುಗಿಯನ್ನು ದಡಕ್ಕೆ ಎಳೆದು ತಂದ. ಅವಳಿಗೆ ಉಸಿರಾಡಲು ಸಾಧ್ಯವಾದಾಗ, ಹುಡುಗಿ ತಾಯಿಯನ್ನು ತಬ್ಬಿಕೊಂಡಳು. ಆಗ ದಡದ ಮೇಲೆ ಮಾನವೀಯತೆ ಮಳೆಯಾಯಿತು — ಯಾರೋ ಟವೆಲ್ ಕೊಟ್ಟರು, ಯಾರೋ ನೀರು ಕೊಟ್ಟರು.
ಅವಳು ಚೇತರಿಸಿಕೊಂಡ ಮೇಲೆ, ಗುಂಪಿನಿಂದ ಹೊಸ ಪ್ರಶ್ನೆಯೊಂದು ಮೇಲೆದ್ದಿತು: “ಆ ಹುಡುಗ ಯಾರು? ಯಾವ ಊರು? ಯಾವ ಧರ್ಮ?”
ಅವನು ಉತ್ತರಕ್ಕಾಗಿ ಕಾಯದೆ ಗುಂಪಿನಲ್ಲಿ ಕಣ್ಮರೆಯಾದ. ಹಿಂತಿರುಗಿ ನೋಡಲೇ ಇಲ್ಲ.
ದಡದಲ್ಲಿ ಉಳಿದದ್ದು ಒದ್ದೆಯಾದ ಪುಟ್ಟ ಹುಡುಗಿ, ಮತ್ತು ಒಣಗಿಹೋದ ನೂರು ಮನುಷ್ಯರು.






0 Comments