‘ಮಾನಸಿಕ ಔಷಧಿ ಹಾಗೂ ಮೌಲ್ಯಗಳ ಸಿರಂಜುಗಳೇ …’ – ಸಂಯುಕ್ತಾ ಪುಲಿಗಲ್

ಮಾನಭಂಗ ಮತ್ತು ಮನಃಶ್ಶಾಸ್ತ್ರ

ಸಂಯುಕ್ತಾ ಪುಲಿಗಲ್

ತೆಲುಗು ಮನೆಮಾತಾದ್ದರಿಂದ, ಎಲ್ಲರೆದುರು ‘ನಾಳೆ’ ಎನ್ನುವುದಕ್ಕೆ ಇರಿಸು ಮುರಿಸಾದಂದಿನಿಂದ, ಶಾಲೆಯ ಟಾಯ್ಲೆಟ್ ಬಾಗಿಲ ಹಿಂದೆ ಯಾರೋ ಕಿಡಿಗೇಡಿಗಳು “ರೇಪ್” ಎಂದು ಬರೆದದ್ದನ್ನು ಕಂಡಾಗಿನಿಂದ, ನನ್ನ ಮನದ ಡಿಕ್ಷನರಿಯಲ್ಲಿ ಅಗೌರವಯುತವಾಗಿಯೇ ಬುಕ್ ಮಾರ್ಕ್ ಮಾಡಿಟ್ಟಿದ್ದೆ. ಸ್ವಲ್ಪ ‘ತಲೆತಗ್ಗಿಸುವ’, ‘ಅಪಹಾಸ್ಯ’ದ ವಿಷಯ ಎನ್ನುವುದನ್ನು ಬಿಟ್ಟರೆ, ‘ರೇಪ್’ನ ತೀವ್ರತೆಯ ಅರಿವಿನ ಬಿಸಿ ತಟ್ಟಿರಲಿಲ್ಲ, ನಾಡಿ ಬಡಿತ ನಿಂತಿರಲಿಲ್ಲ, ಕೈ ತೆಗೆದು ಕೆನ್ನೆಗೆ ಬಾರಿಸಿಕೊಂಡಂತೆ ಭಾಸವಾಗಿರಲಿಲ್ಲ. ಯಾವುದೋ ಮದುವೆಯ ಸಮಾರಂಭದಲ್ಲಿ ನನಗಿಂತ ಸ್ವಲ್ಪ ಹಿರಿಯರು ಎನಿಸಿಕೊಂಡ ನನ್ನ ಸೋದರ ಸಂಬಂಧಿಕರು ‘ಬಂಡಿತ್ ಕ್ವೀನ್’ ಬಗ್ಗೆ ಮಾತನಾಡುತ್ತಾ ನಾನು ಹೋದ ಕೂಡಲೇ ನಿಲ್ಲಿಸಿದಾಗ ಕುತೂಹಲ ತಡೆಯದೆ ಆ ಸಿನೆಮಾ ನೋಡಿ ಬಿಟ್ಟೆ. ಅಂದು ನನ್ನನ್ನು ಕಲಕಿ ಬಿಟ್ಟ ಆ ಹೃದಯವಿಧ್ಧ್ರಾವಕ ವಿಚಾರಗಳು ನನ್ನಲ್ಲಿನ ಹೆಣ್ಣನ್ನು ಮೊತ್ತ ಮೊದಲನೇ ಬಾರಿಗೆ ಕಂಡಿತ್ತು!

ಬಹುಷಃ ಈ ‘ರೇಪ್’ ಎಂಬ ಮಾತನ್ನು ಕನ್ನಡದಲ್ಲಿ ‘ಮಾನಭಂಗ’ ಎಂದು ಉಚ್ಚರಿಸಿದಾಗ ಹೆಚ್ಚು ಅರ್ಥವತ್ತಾಗಿ, ಭಾವಪೂರ್ವಕವಾಗಿ ಕೇಳಿಬರುತ್ತದೆ. ಇದು ಒಬ್ಬ ಹೆಣ್ಣಿನ ಶೀಲ ಹರಣವಷ್ಟೇ ಅಲ್ಲ ಆಕೆಯ ಮಾನಹರಣವೂ ಆಗಿದೆ. ಕೆಲವರ ದೃಷ್ಟಿಯಲ್ಲಿ ಶೀಲವೇ ಮಾನವಾಗಿರಬಹುದು ಆದರೆ ಅದು ಹಾಗಲ್ಲ, ಹೆಣ್ಣು ಯಾವಾಗ ತನ್ನ ಸಮ್ಮತಿ ಇಲ್ಲದೆ ಒತ್ತಡ, ಬಲಾತ್ಕಾರಗಳಿಂದ ಲೈಂಗಿಕ ಕ್ರಿಯೆಗೆ ಒಳಪಡುತ್ತಾಳೋ (ಅಥವಾ ಗುರಿಯಾಗುತ್ತಾಳೋ) ಆಗ ಅದು ಆಕೆಗೆ ಎಸಗಿದ ಅಪಮಾನವಾಗುತ್ತದೆ, ಮಾನಭಂಗವಾಗುತ್ತದೆ. ಈ ರೀತಿಯ ಅತಿಕ್ರಮಣ ಅಥವಾ ಅಸಹಾಯಕತೆ ನಮ್ಮ ಸುಸಂಸ್ಕೃತ ದೇಶ ಎನಿಸಿಕೊಂಡಿರುವ ಭಾರತದಲ್ಲಿಯೂ ಖ್ಯಾತಿ ಪಡೆದಿದೆ. ಇತ್ತೀಚೆಗಷ್ಟೇ ಅವಧಿಯಲ್ಲಿ ಜಗದೀಶ್ ಕೊಪ್ಪರವರ ‘ಮರುಭೂಮಿಯ ಹೂ’ ಬಗೆಗಿನ ಪರಿಚಯಾತ್ಮಕ ಕಿರು ಲೇಖನ (http://avadhimag.online/?p=71250) ಮೈಮನ ನಡುಗಿಸಿತ್ತು. ವಾರಿಸ್ ಡೇರೀ ಎಂಬ ನಾಲ್ಕು ವರ್ಷದ ಹುಡುಗಿ, ಕಥೆ ಕೇಳುವ ಸಲುವಾಗಿ ತನಗೆ ಪರಿಚಯವಿದ್ದ, ತನ್ನ ತಂದೆಯ ಸ್ನೇಹಿತನಿಂದ ಬಲಾತ್ಕಾರಕ್ಕೆ ಬಲಿಯಾಗುತ್ತಾಳೆ. ಈ ವಿಚಾರವನ್ನು ಆಕೆ ಯಾರಲ್ಲಿಯೂ ಹೇಳಿಕೊಳ್ಳಲಾಗದೆ ತನ್ನಲ್ಲಿಯೇ ಕೊರಗಿ ಕೊರಗಿ ಮುದುಡಿಹೋಗುತ್ತಾಳೆ. ಇದನ್ನು ಓದಿ ಇದೆ ಗುಂಗಿನಲ್ಲಿ, ಪರಿಣಾಮ, ಪರಿಹಾರಗಳ ಕುರಿತು ಮನಸ್ಸು ತುಂಬಿದ್ದಾಗಲೇ ಬಂದಿತ್ತು ಮತ್ತೊಂದು ಸುದ್ದಿ ದೆಹಲಿಯಿಂದ! “ಇಪ್ಪತ್ತಮೂರು ವರ್ಷದ ತರುಣಿ ಮಾನಭಂಗಕ್ಕೆ ಬಲಿಯಾಗಿದ್ದಾಳೆ” ಎಂದು. ಇದು ಹೊಸತಲ್ಲ ಬಿಡಿ. ಭಾರತದಲ್ಲಿ 2011 ನೇ ಇಸವಿಯ ಮಾನಭಂಗ ಪ್ರಕರಣಗಳು ಸರಾಸರಿ ಇಪ್ಪತ್ತನಾಲ್ಕು ಸಾವಿರ ಎಂದರೆ ನೀವು ನಂಬುತ್ತೀರಾ!

ಈ ಪೈಶಾಚಿಕ ಕೃತ್ಯದ ಬಗೆಗೆ ನಮ್ಮ ಸುತ್ತಲೂ ಸಾಕಷ್ಟು ಚರ್ಚೆ! ಯಾವ ಟಿವಿ ಚಾನೆಲ್ ಹಾಕಿದರೂ ಇದರದ್ದೇ ವಾರ್ತೆ. ಕೆಲ ಅಸಹಾಯಕ ಮುಗ್ಧ ಮಹಿಳೆಯರು “ನಮ್ಮ ಸಮಾಜಾನೆ ಹೀಗೆ” ಎನ್ನುವುದು, “ಹುಡುಗೀರು ಸರಿಯಾಗಿ ಬಟ್ಟೆ ಹಾಕದೆ ಇದ್ರೆ ಹೀಗೆ”, “ಆತನಿಗೆ ಗಂಡಸುತನವಿಲ್ಲದಂತೆ ಮಾಡಬೇಕು”, “ಆತನು ಈಗಲೇ ನೇಣುಗಂಬವೇರಬೇಕು”, ಹೀಗೆ ಹತ್ತು ಹಲವಾರು ಮಾತುಕತೆ! ನಡುನಡುವೆ, “ಇದ್ಯಾಕೆ ಹೀಗಾಯ್ತು, ಇದರಿಂದ ಆ ಹುಡುಗಿ ಎಷ್ಟು ನೊಂದಿದ್ದಾಳೆ, ಇದಕ್ಕೆ ನಮ್ಮ ಸಿನೆಮಾ ನಟ ಏನು ಉತ್ತರ ಕೊಡುತ್ತಾನೆ, ನೋಡೋಣ ಬ್ರೇಕ್ ನ ನಂತರ…” ಎಂಬ ತಲೆ ರಾಡಿ ಹಿಡಿಯುವ ವ್ಯವಸ್ಥೆಗಳಿಂದ ನಾವೂ ಸಹ ‘ಮಾನಭಂಗ’ಕ್ಕೆ ಒಳಪಡುವುದೂ ಸುಳ್ಳಲ್ಲ! ಈ ಎಲ್ಲಾ ಮಾತುಗಳ ನಡುವೆ ಕೇಳಿಬಂದ ಕೆಲವೇ ಸ್ವಾರಸ್ಯಕರ ಸಲಹೆಗಳು, ಅಭಿಪ್ರಾಯಗಳು ಮತ್ತು ಇವುಗಳ ಬಗೆಗೆ ನನ್ನ ಅನಿಸಿಕೆಗಳನ್ನು ಈಗ ಹಂಚಿಕೊಳ್ಳುತ್ತೇನೆ.

ಈ ರೇಪ್ ಅಥವಾ ಮಾನಭಂಗ ಎನ್ನುವುದು ನಮ್ಮಲ್ಲಿ ಈಗಿಂದೀಗ ಹುಟ್ಟಿ ಬಂದ ಮಾತಲ್ಲ. ನಮ್ಮ ಪುರಾಣಗಳಲ್ಲಿ ಇವುಗಳ ಬಗೆಗೆ ಅನೇಕ ಉಲ್ಲೇಖಗಳಿವೆ ಎಂದು ಕೇಳಿದ್ದೇನೆ. (ಈ ಮಾತು ಹೇಳಿದಾಗ ನನಗೆ ಡಬ್ಲ್ಯು ಬಿ ಯೇಟ್ಸ್ ಕವಿಯ “ಲೆಡಾ ಅಂಡ್ ದಿ ಸ್ವಾನ್” ಪದ್ಯ ನೆನಪಿಗೆ ಬರದೆ ಇರಲಾರದು!). ಆ ಕಾಲದಿಂದಲೂ ನಾವು ಘಟನೆ ನಡೆದ ಸಮಯದಲ್ಲಿ “ಅಯ್ಯೋ”, “ಅನ್ಯಾಯ”, “ಘೋರಾಪರಾಧ”, ಶಿಕ್ಷೆ”, “ಗಲ್ಲು” ಎಂದೆಲ್ಲಾ ಮಾತನಾಡಿ ಕೆಲ ಕಾಲದ ನಂತರ ಮತ್ತೆ ಮರವು, ಮತ್ತೆ ಮಾಮೂಲು. ಇದಕ್ಕಿಂತ ಹೆಚ್ಚಿನದ್ದು ಸಾಧ್ಯವೇ? ನಾವು ಮಾಡಬಲ್ಲೆವೆ? ಸಾಮಾಜಿಕ ಪೌರರಾಗಿ ನಮ್ಮ ಕರ್ತವ್ಯ ಈ ಮೂಗು ಮುರಿಯುವಿಕೆಯಲ್ಲಿ ಮುಗಿಯುತ್ತದೆಯೇ? ಎಂಬೆಲ್ಲಾ ವಿಚಾರಗಳನ್ನು ಚರ್ಚಿಸಬೇಕಾಗಿದೆ, ಚಿಂತಿಸಬೇಕಾಗಿದೆ. ಒಬ್ಬ ಒಳ್ಳೆಯ ನಟ ಹಾಗೂ ಕ್ರೀಡಾ ಪಟು ಟಿವಿಯಲ್ಲಿ ಹೇಳಿಕೆ ನೀಡಿದಂತೆ, ಈ ಚಿಂತನೆ ಮನೆ-ಮನೆಯ ಹಂತದಿಂದ ಮೂಡಬೇಕಾಗಿದೆ. ಮೊಟ್ಟ ಮೊದಲಿಗೆ ನಮ್ಮ ಶಿಕ್ಷಣ ಸ್ವರೂಪ ಬದಲಾಗಬೇಕು. ನಮ್ಮಲ್ಲಿನ ‘ಮಡಿವಂತಿಕೆ’ ಕಡಿಮೆಯಾಗಬೇಕು. ಕೆಲವು ಸೂಕ್ಷ್ಮ ವಿಚಾರಗಳ ಕುರಿತು ಮನೆಯಲ್ಲಿ ಮುಕ್ತವಾಗಿ ಚರ್ಚೆಗಳು ಸಾಧ್ಯವಾಗಬೇಕು. ನಂತರ, ಗಂಡು ಹೆಣ್ಣು ಇಬ್ಬರೂ ಒಂದೇ ಎಂಬ ಭಾವನೆಯಿಂದ ಒಂದು ಮಗುವನ್ನು ಮನೆಯಲ್ಲಿ ಬೆಳೆಸಬೇಕು, ಈ ಮೂಲಕ ನಾವು ಕೆಲವು ಆಘಾತಕಾರೀ ಸಂದರ್ಭಗಳಲ್ಲಿ ಅಸಹಾಯಕತೆ, ಅಗೌರವದ ಕ್ಷಣಗಳನ್ನು ಮೀರಿ ಬೆಳೆಯಲು ಸಾಧ್ಯವಾಗಬಹುದು. ಒಂದು ಹೆಣ್ಣು ಮಗುವಿಗೆ (ಮತ್ತು ಗಂಡು ಮಗುವಿಗೂ ಮುಖ್ಯವಾಗಿ) ತನ್ನ ಲೈಂಗಿಕತೆಯ ಬಗೆಗೆ, ತನ್ನ ಶಕ್ತಿ-ಸಾಮರ್ಥ್ಯಗಳ ಬಗೆಗೆ, ತನ್ನ ಸ್ವಂತಿಕೆಗಳ ಬಗೆಗೆ ಅರಿವು ಮೂಡಿಸಬೇಕು. ಈ ತಿಳಿವಳಿಕೆಯ ಬೀಜವನ್ನು ಬಿತ್ತಿ ನೀರು ಎರೆಯುವುದು ನಮ್ಮೆಲ್ಲರ ಕರ್ತವ್ಯ.

ಇವೆಲ್ಲ ಒಂದು ಬಗೆಯ ಮುಂಜಾಗ್ರತಾ ಕ್ರಮಗಳಾದವು. ಮತ್ತೊಂದು ನಾವು ಯೋಚಿಸಲೇಬೇಕಾದ ವಿಚಾರವೆಂದರೆ, ಈ ರೇಪ್ ಕೇಸ್ ಗಳಲ್ಲಿ ಇರಬಹುದಾದಂತಹ ಅಥವಾ ಇರಬೇಕಾದಂತಹ ಮನಃಶ್ಶಾಸ್ತ್ರದ ಪಾತ್ರ. ಸಾಕಷ್ಟು ಅಧ್ಯಯನಗಳ ಪ್ರಕಾರ, ಮಾನಭಂಗ ಎಂಬ ಪಿಡುಗು ಕಾಮುಕವಾಗಿ ಪ್ರೇರಿತವಾದದ್ದಲ್ಲ. ಇದಕ್ಕೆ ಸಾಮಾಜಿಕ, ಆರ್ಥಿಕ, ಮಾನಸಿಕ, ರಾಜಕೀಯ ಮೌಲ್ಯಗಳು ಬೆನ್ನಟ್ಟಿ ಬಂದಿರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಆತನ ಈಗೋ ಕಾರಣವಾಗಿರುತ್ತದೆ. ತನ್ನ ಈಗೋ ಭಂಗವಾದ್ದಲ್ಲಿ, ಹೊಡೆತಕ್ಕಿಂತಲೂ ಹೆಚ್ಚಾಗಿ ಮಾನಹರಣವನ್ನು ಪ್ರೀತಿಸುತ್ತದೆ ಜೀವ ಮತ್ತು ಅಂತೆಯೇ ನಡೆದುಕೊಳ್ಳುತ್ತದೆ. ಇದಕ್ಕೂ ನಾನಾಗಲೇ ಹೇಳಿದಂತೆ ನಮ್ಮ ಶಿಕ್ಷಣ ಕ್ರಮ ಬದಲಾಗಬೇಕು; ಶಾಲೆಯಲ್ಲೂ, ಮನೆಯಲ್ಲೂ. ಆ ಅಪರಾಧಿಯನ್ನು ನಾವೆಲ್ಲರೂ ಹಿಗ್ಗಾ ಮುಗ್ಗಾ ಬೈದೇ ಬಿಟ್ಟೆವಲ್ಲವೇ? ಆದರೆ ಒಮ್ಮೆ, ಅಟ್ಲೀಸ್ಟ್ ಒಮ್ಮೆಗೆ ಯೋಚಿಸಿದ್ದೀರಾ ಆತನ ಮನಸ್ಸಿನ ಸ್ಥಿತಿ ಹೇಗಿರಬೇಕು ಆ ಸಮಯದಲ್ಲಿ ಎಂದು? ಎಷ್ಟು ಮಾನಸಿಕ ಹಿಂಸೆಗಳಿಗೆ ಒಳಗಾಗಿ ಮನಸ್ಸು ಹಾಗೆ ಒರಟಾಗಿದೆಯೋ? ಆತನೂ ಒಬ್ಬ ಮನುಷ್ಯ ಅಲ್ಲವೇ? ತಾನೂ ಎಲ್ಲರಂತೆ ನವುರಾದ ಭಾವನೆಗಳನ್ನು ಹೊಂದಿರುತ್ತಾನೆ ಅಲ್ಲವೇ? ಅಂತಹ ಪಕ್ಷದಲ್ಲಿ, ಈ ಘೋರ ಕರ್ಮವನ್ನು ಎಸಗುವ ಧೈರ್ಯ ಭಂಡತನ ಅವನಲ್ಲಿ ಹೇಗೆ ತುಂಬಿ ಹೋಗಿರಬೇಕು? ಇದಕ್ಕೆ ಕಾರಣವಿರಲೇಬೇಕಲ್ಲವೇ? ಯಾರೂ ಹುಟ್ಟಾ ಕೆಟ್ಟವರಂತೂ ಅಲ್ಲ! ಇಲ್ಲೇ ನಮ್ಮ ಸೈಕ್ಯಾಟ್ರೀ ಕೆಲಸ ಮಾಡಬೇಕಾಗಿದೆ. ಆತನನ್ನು ಗಲ್ಲಿಗೇರಿಸುವ ಬದಲು, ಆತನ ಒಳಮನಸ್ಸು ಅರಿಯಲು ಪ್ರಯತ್ನಿಸಿ, ಅದರ ಅನುಭವೋಕ್ತಿಯನ್ನು ನಾವು ನಮ್ಮ ಶಿಕ್ಷಣದ ಮರುರೂಪಕ್ಕೆ ಕುರುಹಾಗಿಸಬೇಕು. ಮಾನಸಿಕ ಔಷಧಿ ಹಾಗೂ ಮೌಲ್ಯಗಳ ಸಿರಂಜುಗಳೇ ನಮ್ಮ ಸಮಾಜವನ್ನು ಇಂತಹ ಭಯಾನಕ ಪಿಡುಗುಗಳಿಂದ ಕಾಪಾಡಲು ಸಹಾಯಕ!

 

‍ಲೇಖಕರು G

December 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

21 ಪ್ರತಿಕ್ರಿಯೆಗಳು

  1. bharathi

    ನೀವು ಹೇಳಿದ ಕೆಲವೊಂದು ಮಾತನ್ನು ನಾನು ಒಪ್ಪುತ್ತೇನೆ. ಆದರೆ ಕೊನೆಯಲ್ಲಿ ಗಂಡಿನ ಈ ನಡವಳಿಕೆಗೆ ಯಾವುದೋ ಮಾನಸಿಕ ಕಾರಣವಿರಬೇಕು ಅನ್ನುವುದು ನನ್ನ ಒಪ್ಪಿಗೆ ಪಡೆಯಲಿಲ್ಲ. ಎಲ್ಲ ಅಪರಾಧಕ್ಕೂ ಒಂದು ಅಂಥಾ ಕಾರಣವಿರುವ ಸಾಧ್ಯತೆ ಇದೆಯಲ್ಲವೇ? ಕೊಲೆಗೆ, ಕಳ್ಳತನಕ್ಕೆ ಎಲ್ಲಕ್ಕೂ ಎಂಥದ್ದೋ ಕಾರಣ ಇದ್ದೇ ಇರುತ್ತದೆ. ಉಹೂ, ಹಾಗಂತ ಅವರ ಅಪರಾಧಗಳೆಲ್ಲವನ್ನೂ ಆ ದೃಷ್ಟಿಯಲ್ಲಿ ನೋಡುತ್ತ ಹೋದರೆ ಕೊನೆಗೆ ಯಾರಿಗೂ ಶಿಕ್ಷೆ ಸಲ್ಲಬೇಕಾದ್ದೇ ಇಲ್ಲ ಅನ್ನಿಸಿ ಬಿಡುತ್ತದೆ. ಉಗ್ರ ಶಿಕ್ಷೆ ಇಟ್ಟು ನೋಡಲಿ ನಮ್ಮ ಸರ್ಕಾರ … ಆಗ ಎಲ್ಲರೂ ಬಾಲ ಮುದುರಿ ಕೂತುಕೊಳ್ಳುತ್ತಾರೆ. ಅಮಾನವೀಯತೆಗೆ ಅಮಾನವೀಯತೆಯೇ ಸರಿಯಾದ ಮಾರ್ಗ …

    ಪ್ರತಿಕ್ರಿಯೆ
  2. venki

    ee crimes ishtu mattakke bandu nintirodu namma samajada duraasrushta. idanna tadiyoke kaanoonina shikshe eshtu mukhyavo ashte samaajika shikshana kooda. idakke mane mattu shaale mattadalle niga vahisi olle maanaveeya ‘moulya’galanna tumboke praytana nadeebeku.

    “manegonde magu” anno paristhite samaja hogtha irovaaga makkalige ‘akka’, ‘tangi’, ‘anna, ‘tamma’ andarenu anno arthane gottagolla. intaha indina samajada sooksma paristhitigalu mundina dinagalalli aagabahudaada tondaregalige diksoochi’galu antha tileetheeni.

    ಪ್ರತಿಕ್ರಿಯೆ
  3. Tejaswini Hegde

    Good article ಸಂಯುಕ್ತಾ .. .. but I agree with Bharathi Bv’s thoughts too!! No mercy for Rapist!! ಉಗ್ರ ಶಿಕ್ಷೆ ಇಟ್ಟು ನೋಡಲಿ ನಮ್ಮ ಸರ್ಕಾರ … ಆಗ ಎಲ್ಲರೂ ಬಾಲ ಮುದುರಿ ಕೂತುಕೊಳ್ಳುತ್ತಾರೆ. ಅಮಾನವೀಯತೆಗೆ ಅಮಾನವೀಯತೆಯೇ ಸರಿಯಾದ ಮಾರ್ಗ …>>>> Yes…..

    ಪ್ರತಿಕ್ರಿಯೆ
  4. Aparna Rao..

    ಅಂತಹ ಅಪರಾಧ ಎಸಗಿದ ಕೈದಿಗಳ ಲೇಖನಗಳೆನಾದರು ನಿಮ್ಮಬಳಿ ಇವೆಯೇ..ಅವರ ಮಾನಸಿಕ ಪರಿಸ್ಥಿತಿಗೆ ಕಾರಣವಾದ ಅಂಶಗಳ ನಿವಾರಣೆಗೆ ಯಾವುದಾದರೂ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆಯೇ …ಕೇವಲ ಅನುಕಂಪದ ದೃಷ್ಟಿ ಯಿಂದ ನೋಡುವುದೊಂದೇ ಉಪಯೋಗವಾಗುವುದಿಲ್ಲ.ತಕ್ಷಣಕ್ಕೆ ದಂಡಂ ದಶಗುಣಂ ಒಂದೇ ದಾರಿ ಕಾಣುತ್ತಿರುವುದು.

    ಪ್ರತಿಕ್ರಿಯೆ
  5. Samvartha 'Sahil'

    Some loud thinking.

    May be the translation of rape as ‘maana bhanga’ and ‘sheela bhanga’ is not appropriate. It is almost to, unconsciously, come to believe that the rapist, post-rape, is divorced of ‘maana’ and ‘sheela’, which I cannot agree. The ‘maana’ and ‘sheela’ is not something that a man, even in his extreme beastly behavior such as rape, cannot snatch from women. Rape is violence but not stripping of girl’s dignity. Correct me if I am wrong.

    Thank you.

    ಪ್ರತಿಕ್ರಿಯೆ
  6. Paresh Saraf

    ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಿ, ಇದು ಅನ್ಯರಿಗೆ ಪಾಠವಾಗಲಿ. ಉತ್ತಮ ಲೇಖನ

    ಪ್ರತಿಕ್ರಿಯೆ
  7. SrinidhiRao

    Bharati akka nima maatu nija… ಉಗ್ರ ಶಿಕ್ಷೆ ಇಟ್ಟು ನೋಡಲಿ ನಮ್ಮ ಸರ್ಕಾರ … ಆಗ ಎಲ್ಲರೂ ಬಾಲ ಮುದುರಿ ಕೂತುಕೊಳ್ಳುತ್ತಾರೆ. ಅಮಾನವೀಯತೆಗೆ ಅಮಾನವೀಯತೆಯೇ ಸರಿಯಾದ ಮಾರ್ಗ …

    ಪ್ರತಿಕ್ರಿಯೆ
  8. Chinmay Mathapati

    ಒಟ್ಟಾರೆ ಇಂಥ ಪೈಶಾಚಿಕ ಕೃತ್ಯ ಎಸಗುವವರಿಗೆ ಸರಿಯಾದ ಶಿಕ್ಷೆ ಕೊಡುವಂತಾಗಲಿ…….

    ಪ್ರತಿಕ್ರಿಯೆ
  9. A Ballal

    ಈ ಲೇಖನದ ಸಮತೋಲನ ತುಂಬ ಇಷ್ಟವಾಯ್ತು. ನೋವುಂಡವರ ನೋವನ್ನು acknowledge ಮಾಡುತ್ತಲೇ,ಅಪರಾಧಿಗಳ ವಿಷಯದಲ್ಲಿ ನಾವು ತಳೆಯಬಹುದಾದ “ಯಾರೂ ಹುಟ್ಟಾ ಕೆಟ್ಟವರಂತೂ ಅಲ್ಲ” ಎಂದು ಪ್ರಾರಂಭವಾಗುವ ನಿಲುವು ಅತ್ಯಂತ ಗಮನಯೋಗ್ಯ.

    ಪ್ರತಿಕ್ರಿಯೆ
  10. sri

    (ಆದರೆ ಒಮ್ಮೆ, ಅಟ್ಲೀಸ್ಟ್ ಒಮ್ಮೆಗೆ ಯೋಚಿಸಿದ್ದೀರಾ ಆತನ ಮನಸ್ಸಿನ ಸ್ಥಿತಿ ಹೇಗಿರಬೇಕು ಆ ಸಮಯದಲ್ಲಿ ಎಂದು? ಎಷ್ಟು ಮಾನಸಿಕ ಹಿಂಸೆಗಳಿಗೆ ಒಳಗಾಗಿ ಮನಸ್ಸು ಹಾಗೆ ಒರಟಾಗಿದೆಯೋ? ಆತನೂ ಒಬ್ಬ ಮನುಷ್ಯ ಅಲ್ಲವೇ? ತಾನೂ ಎಲ್ಲರಂತೆ ನವುರಾದ ಭಾವನೆಗಳನ್ನು ಹೊಂದಿರುತ್ತಾನೆ ಅಲ್ಲವೇ? ಅಂತಹ ಪಕ್ಷದಲ್ಲಿ, ಈ ಘೋರ ಕರ್ಮವನ್ನು ಎಸಗುವ ಧೈರ್ಯ ಭಂಡತನ ಅವನಲ್ಲಿ ಹೇಗೆ ತುಂಬಿ ಹೋಗಿರಬೇಕು? ಇದಕ್ಕೆ ಕಾರಣವಿರಲೇಬೇಕಲ್ಲವೇ? ಯಾರೂ ಹುಟ್ಟಾ ಕೆಟ್ಟವರಂತೂ ಅಲ್ಲ!)
    —ಬಹಳ ದೊಡ್ಡ ಮನಸ್ಸು ನಿಮ್ಮದು. ಅದಕ್ಕೊಂದು ದೊಡ್ಡ ನಮಸ್ಕಾರ. ನಿಮ್ಮಂತಹ ಅಭಿಪ್ರಾಯಗಳನ್ನು ಹೊಂದಿರುವವರು ಜಾಸ್ತಿ ಇರುವುದರಿಂದಲೇ ಈಗ ಈ ಪರಿಸ್ಥಿತಿ ಬಂದಿರುವುದು. ನಮ್ಮ ದೇಶ ನಿಮ್ಮಂತಹ ದೊಡ್ಡ ವಿಶಾಲ ಹೃದಯದವರಿಂದ ತುಂಬಿರುವುದರಿಂದಲೇ ಯಾವ ಅಪರಾಧಿಗಳಿಗೂ ತಕ್ಕ ಶಿಕ್ಷೆ ಆಗುತ್ತಿಲ್ಲ. ಏಕೆಂದರೆ ಕಳ್ಳತನ ಮಾಡುವವರೂ, ಕೊಲೆ ಮಾಡುವವರೂ ಅಥವಾ ಯಾರೇ ಕೆಟ್ಟ ಕೆಲಸ ಮಾಡುವವರು ಹುಟ್ಟಾ ಅಪರಾಧಿಗಳಾಗಿರುವುದಿಲ್ಲ. ಅಲ್ಲವೇ?

    ಪ್ರತಿಕ್ರಿಯೆ
  11. samyuktha

    ಶ್ರೀ ಅವರೇ,

    ತಪ್ಪು ತಿಳಿದಿರಿ! ನಾನು ಖಂಡಿತ ಕರುಣೆ ತೋರಿ ಆ ಅಧಮರನ್ನು ಬಿಟ್ಟು ಬಿಡಿ ಎನ್ನುತ್ತಿಲ್ಲ! ಆದರೆ ಈ ಕೃತ್ಯಕ್ಕೆ ಕಾರಣರಾದ ಅವರ ಮನಸ್ಸು ಮತ್ತು ಅದಕ್ಕೆ ಚಿಕಿತ್ಸೆ ಇದೆಯೇ ಎಂದು ಯೋಚಿಸಬೇಕಲ್ಲವೇ ಎಂದು ಆಲೋಚಿಸುತ್ತಿದ್ದೇನೆ ಅಷ್ಟೇ! ನೀವು ಹೇಳಿದಷ್ಟು “ದೊಡ್ಡ ಮನಸ್ಸು” ಖಂಡಿತ ಇನ್ನೂ ಸಂಪಾದಿಸಿಲ್ಲ…

    Guilty should be punished, yes. But, will it eradicate the problem? I am looking at some long term solutions that can do away with such brutal cognitive developments!

    ಪ್ರತಿಕ್ರಿಯೆ
    • sri

      ಕ್ಷಮಿಸಿ ಸಂಯುಕ್ತಾ, ನಾನು ಮೇಲಿನ ಮಾತುಗಳನ್ನು ಬಹಳ ನೋವಿನಿಂದ ಬರೆದಿದ್ದೇನೆ. ಏಕೆಂದರೆ, ಮೊದಲೇ ಈ ಗಂಡಸರು ತಮ್ಮ ಎಲ್ಲಾ ತಪ್ಪುಗಳಿಗೂ ಹೆಂಗಸರೇ ಕಾರಣ ಅಂತಾ ಹೇಳುತ್ತಿರುತ್ತಾರೆ. ಅವರಿಗೆ ಇಷ್ಟು ಸಿಕ್ಕರೆ ಸಾಕು. ತಾವು ಮಾಡುವ ಎಲ್ಲಾ ತಪ್ಪುಗಳಿಗೂ ಸಮಾಜವೇ ಕಾರಣ, ಪರಿಸ್ಥಿತಿಯೇ ಕಾರಣ, ತನ್ನ ಎಲ್ಲಾ ಕ್ರಿಯೆಗಳು ಅದರ ಪರಿಣಾಮ ಮಾತ್ರ ಎಂದು ಹೇಳುತ್ತಾರೆ. ನನ್ನ ಅನುಭವಗಳು ಹೇಗಿವೆ ಎಂದರೆ, ದಾರಿಯಲ್ಲಿ ಹೋಗುವಾಗ ಎದುರು ಬರುವ, ಅಕ್ಕ ಪಕ್ಕ ಓಡಾಡುವ ಎಲ್ಲ ಗಂಡಸರನ್ನು ಸಂಶಯದಿಂದ ನೋಡುವಂತೆ ಆಗಿದೆ. ರಸ್ತೆಯಲ್ಲಿ, ಬಸ್ಸಿನಲ್ಲಿ, ದೇವಸ್ಥಾನದಲ್ಲಿ, ಕಚೇರಿಯಲ್ಲಿ ಎಲ್ಲಿ ನೋಡಿದರೂ ಸದಾ ಕಾಲ ಎಚ್ಚರಿಕೆಯಿಂದ, ಆತಂಕದಿಂದ ಇರುವ ವಾತಾವರಣ ಇದೆಯಲ್ಲ. ನನಗಂತೂ ಸಾಕಾಗಿ ಹೋಗಿದೆ. ಹೆಣ್ಣಾಗಿ ಹುಟ್ಟಿರುವುದೇ ಕಾರಣವಾಗಿ ಯಾವುದನ್ನೂ enjoy ಮಾಡಲು ಆಗುತ್ತಿಲ್ಲ. ಹೆಜ್ಜೆ ಹೆಜ್ಜೆಗೂ ಸಾಮಾಜಿಕವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ ಅವಮಾನವನ್ನು ಅನುಭವಿಸಿದ್ದೇನೆ, ಅನುಭವಿಸುತ್ತಿದ್ದೇನೆ. ಎಂತಹ ಪ್ರಪಂಚದಲ್ಲಿ ಹುಟ್ಟಿದ್ದೇನೆ ಅನ್ನಿಸುತ್ತಿದೆ. ಇನ್ನು ನೀವು ಹೇಳುವಂತೆ long term solutions ಇವೆಯಲ್ಲ, ಅದು ಸಾಧ್ಯವಾಗಬೇಕಾದರೆ, ಆ ದೇವರೇ ಇಂತಹ ಗಂಡಸರ ಮೆದುಳು, ಹೃದಯ, ರಕ್ತವನ್ನು ಶುದ್ಧಗೊಳಿಸಿ ಕಳುಹಿಸಬೇಕು(ಒರಟು ಅಭಿಪ್ರಾಯ ಎಂದುಕೊಳ್ಳಬೇಡಿ). ನಾನಂತೂ ಪರಿಸ್ಥಿತಿ ಸುಧಾರಿಸುವ ಬಗ್ಗೆ ಯಾವ ಆಸೆಯನ್ನೂ ಇಟ್ಟುಕೊಂಡಿಲ್ಲ.

      ಪ್ರತಿಕ್ರಿಯೆ
      • sri

        ನೀವು ಒಪ್ಪಿಕೊಂಡರೂ, ಬಿಟ್ಟರೂ ಹೆಣ್ಣಿನದು ಬಹಳ ದೊಡ್ಡ ಮನಸ್ಸು ಕಣ್ರಿ. ಹೆಣ್ಣು, ಮಣ್ಣಿನ ಮೇಲಿನ ಅತ್ಯಾಚಾರಕ್ಕೆ ಇದೂ ಒಂದು ಕಾರಣವೇನೋ?

        ಪ್ರತಿಕ್ರಿಯೆ
  12. ಮಂಜುನಾಥ ಕೊಳ್ಳೇಗಾಲ

    ಹದಮೀರದ ಲೇಖನ, ಎಂದಿನಂತೆ. ನಿಮ್ಮ ಸಂತುಲಿತ ದೃಷ್ಟಿಕೋನ ಮೆಚ್ಚಬೇಕಾದ್ದೇ. ಮೊದಲನೆಯದಾಗಿ ಇಂಥದ್ದೊಂದು ಪಾತಕವನ್ನು ಮಾಡುವವರು ಸಮಾಜಕ್ಕೊಂದು ರೋಗ. ಅವರನ್ನು ಗಲ್ಲಿಗೇರಿಸುವುದು ಕೇವಲ ಅವರ ತಪ್ಪಿಗೆ ಮಾಡುವ ಶಿಕ್ಷೆಯಲ್ಲ, ಇಡೀ ಸಮಾಜಕ್ಕೊಂದು ಶಕ್ತಿಶಾಲೀ ಸಂದೇಶವಾಗುತ್ತದೆ. ಆದ್ದರಿಂದ ಇಂಥಾ ಅಪರಾಧಕ್ಕೆ ಗಲ್ಲು ಶಿಕ್ಷೆ, ಅದೂ ತಕ್ಷಣದ ಶಿಕ್ಷೆ, ಇವತ್ತಿನ ಜರೂರು, ಅದರಲ್ಲಿ ಎರಡು ಮಾತಿಲ್ಲ. ಇದು ಆರೋಗ್ಯವಂತ ಸಮಾಜವೊಂದರಲ್ಲಿ, ತನ್ನ ಅರೋಗ್ಯದ ಬಗ್ಗೆ ಕಳಕಳಿ ಹೊಂದಿರುವ ಸಮಾಜವೊಂದರಲ್ಲಿ ಇರಲೇಬೇಕಾದ ವ್ಯವಸ್ಥೆ.

    ಮೇಲಿನದು ಕಾನೂನಿನ ಕೆಲಸವಾದರೆ, ರೇಪಿಸ್ಟ್ ಗಳು ಹುಟ್ಟದಂತೆ ತಡೆಯುವುದು ಅಪ್ಪ-ಅಮ್ಮ-ಶಿಕ್ಷಕರನ್ನು ಮೊದಲುಗೊಂಡು ಸಮಾಜದ ಜವಾಬ್ದಾರಿವಂತರ ಕೆಲಸ. ಇಲ್ಲಿ ನೀವು ಹೇಳಿದ ಮನಶ್ಶಾಸ್ತ್ರೀಯ ದೃಷ್ಟಿ ಖಂಡಿತಾ ಅಗತ್ಯ. ’ಅತ್ಯಾಚಾರಿ’ಯೊಬ್ಬನಲ್ಲಿ ಆ ಕೃತ್ಯದ ’ಮೋಜಿ’ನ ಅಂಶದಿಂದ ಹಿಡಿದು, ತಡೆದಿಟ್ಟ ಲೈಂಗಿಕ ಒತ್ತಡ-ನಿರಾಕರಣೆ, ಕುಸಿದ ನೈತಿಕ-ಮಾನವೀಯ ಮೌಲ್ಯ, ಸಿನಿಮಾ-ಕ್ರೈಮ್ ಮನರಂಜನೆ ಮೊದಲಾದ ಸಾಮಾಜಿಕ ಪಿಡುಗುಗಳು ಧಾರಾಳವಾಗಿ ಪಾತ್ರವಹಿಸಿದೆ. ಇಂಥ ಪ್ರಭಾವ-ಅಭಾವಗಳಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಯಾವಯಾವುದೋ ಪ್ರಮಾಣದಲ್ಲಿ ಒಳಪಟ್ಟವರೇ. ಆದರೆ ಇವೆಲ್ಲವುಗಳ ಯಾವುದೋ ಒಂದು ಮಿಶ್ರಣ, ಜೊತೆಗೆ ಶಿಕ್ಷೆಯೇ ಇಲ್ಲದಂಥಾ ನಿರ್ಭಯದ ವಾತಾವರಣ ಇವು ನೈತಿಕವಾಗಿ ಕುಸಿದ ವ್ಯಕ್ತಿಯೊಬ್ಬನನ್ನು ಇದ್ದಕ್ಕಿದ್ದ ಹಾಗೆ ರೇಪಿಸ್ಟ್ ಆಗಿ ಪರಿವರ್ತಿಸಿಬಿಡಬಲ್ಲವು. ಇದು ನಿಜಕ್ಕೂ ಅರಿಯಬೇಕಾದ, ಮತ್ತು ಸರಿಪಡಿಸಬೇಕಾದ ಅಂಶ.

    ಪ್ರತಿಕ್ರಿಯೆ
  13. Santhosh

    ಸಂಯುಕ್ತ ರವರೇ,
    ಬಹುಶ ಅವಧಿಯಲ್ಲಿ ಪ್ರಕಟವಾದ ಈ ವಿಶೇಷ ಸಂಚಿಕೆಯಲ್ಲಿ ಇರುವ ಎಲ್ಲ ಲೇಖನಗಳಲ್ಲಿ ಬಹಳ ವಿಭಿನ್ನ ಲೇಖನವೆಂದರೆ ನಿಮ್ಮದು.
    ಏಕೆಂದರೆ ಉಳಿದೆಲ್ಲ ಲೇಖನಗಳು ಬರೀ ಆಕ್ರೋಶವನ್ನು ವ್ಯಕ್ತಪದಿಸುತ್ತಿವೆಯೇ ಹೊರತು ಎಲ್ಲಿಯೂ ಅವುಗಳ ಮೂಲವನ್ನು ಹೇಗೆ ಬಗೆಹರಿಸಬಹುದು ಎನ್ನುವುದನ್ನು ವಿಶ್ಲೇಷಿಸುತ್ತಿಲ್ಲ.
    ನಿಮ್ಮ ಲೇಖನ ಆ ದಿಟ್ಟಿನಲ್ಲಿ ಮುಂದಿದೆ. ನಿಮ್ಮ ಅಭಿಪ್ರಾಯದ ಬಗ್ಗೆ ನನ್ನ ಸಹಮತವಿದೆ.

    ಇಲ್ಲಿ ಕೆಲವರು ನಿಮ್ಮನ್ನು ಸ್ತ್ರೀ ದ್ವೇಷಿ ಎನ್ನುವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿರುವುದು ನನಗೆ ಬೇಸರ ತಂದಿದೆ.
    ಶಿಕ್ಷೆಯೊಂದೇ ಎಲ್ಲದ್ದಕ್ಕೂ ಪರಿಹಾರವಲ್ಲ.
    ಸಂತಾನಹರಣ ಶಿಕ್ಷೆ ಅದೇ ಅಪರಾಧಿಯನ್ನು ಬಹಳ ವಿಕ್ರುತನನ್ನಾಗಿಸಿ ಕೊಲೆಗಡುಕನನ್ನಾಗಿಯೂ ಪರಿವರ್ತಿಸಬಹುದು, ಅದಕ್ಕೆಲಿದೆ ಪರಿಹಾರ??
    ಶಿಕ್ಷೆಯನ್ನು ನೀಡೋಣ , ಜೊತೆಗೆ ಆ ವ್ಯಕ್ತಿ ಅಂತಹ ಹೇಯ ಕೃತ್ಯಕ್ಕೆ ಇಳಿಯಲು ಕಾರಣಗಳೇನು ಎಂದು ತರ್ಕ ಮಾಡಿ, ಆ ದಿಟ್ಟಿನಲ್ಲಿ ಮುಂದುವರೆಯಬೇಕಿದೆ!!

    ಪ್ರತಿಕ್ರಿಯೆ
  14. ಆಸು ಹೆಗ್ಡೆ

    ಕಾಮಾತುರತೆ ಅನ್ನುವುದು ಒಂದು ಮಾನಸಿಕ ಖಾಯಿಲೆ ಅನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಕಾಮಾತುರನಾದವನಿಗೆ ಭಯವೂ ಇರುವುದಿಲ್ಲ ಲಜ್ಜೆಯೂ ಕಾಡುವುದಿಲ್ಲ. ಈ ನಿಟ್ಟಿನಲ್ಲಿ ವೈದ್ಯಕೀಯ ಹಾಗೂ ಶೈಕ್ಷಣಿಕ ಪ್ರಯೋಗಗಳು ನಡೆಯಬೇಕಿವೆ. ಅಪರಾಧಿಯನ್ನು ಶಿಕ್ಷಿಸುವ ನಿಟ್ಟಿನಲ್ಲಿ ಯೋಚಿಸುವ ಬದಲು ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಚಿಸಬೇಕು. ಪ್ರತಿಯೊಂದು ಹೆಣ್ಣೂ ದ್ರೌಪದಿ (ಸೈರಂಧ್ರಿ)ಯ ಸಮಯ ಪ್ರಜ್ಞೆ ಹಾಗೂ ಧೈರ್ಯವನ್ನು ಹೊಂದಿರಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: