ಮಾಧವಿ ಭಂಡಾರಿ ಕಥೆ: ‘ನಮ್ಮನೆ ಅವ್ರ ಸಾಟಿ ಸೀರೆ’

ಮಾಧವಿ ಭಂಡಾರಿ ಕೆರೆಕೋಣ

‘ಅಕಾ ಸರೋಜತ್ತೆ ಬಂತಲೆ’ ಅಂದ್ರೆ ಸಾಕು. ‘ಆs ಸರೋಜತ್ತೆನಾ?’ ‘ಹೇss ಸರೋಜತ್ಬಂತು’ ‘ನಿಲ್ಲೆ, ಸರೋಜತ್ಬಂತು’ ಎನ್ನುವ ಹೆಂಗಳೆಯರ ಗಮನವೆಲ್ಲ ಸರೋಜತ್ತೆಯ ಕಡೆಗೇ. ಅದು ನಿಶ್ಚಿತಾರ್ಥವಾಗಿರಲಿ, ಮದುವೆ ಮನೆಯಾಗಿರಲಿ, ಆರತಕ್ಷತೆಯಾಗಿರಲಿ, ಸೋಬನದ ಕಾರ್ಯವಾಗಿರಲಿ, ಕೊನೆಗೆ ತೊಟ್ಟಿಲು ತುಂಬುವ ಶಾಸ್ತ್ರವಾಗಿರಲಿ ಸರೋಜತ್ತೆ ಇಲ್ಲದೆ ಅದಕ್ಕೆ ಕಳೆಯೇ ಬರುತ್ತಿರಲಿಲ್ಲ. ಬರೀ ಹೆಂಗಸರೇ ಯಾಕೆ ‘ಸರೋಜತ್ತೆ ಬಂತು’ ಎನ್ನುವ ಮಾತು ಕಿವಿಗೆ ಬಿದ್ದ ಮೇಲೆ ಯಾವ ಗಂಡಸಾದರೂ ಒಂದು ಕ್ಷಣ ನಿಂತು ಅಡಿಯಿಂದ ಮುಡಿಯವರೆಗೂ ಒಮ್ಮೆ ಕಣ್ಣಾಯಿಸಿ, ಯಾರೂ ನಮ್ಮನ್ನು ನೋಡಿಲ್ಲವೆಂಬುದನ್ನು ಖಾತ್ರಿ ಮಾಡಿಕೊಂಡೇ ಮುಂದೆ ಅಡಿಯಿಡುವುದು ಕಾಮನ್ನಾಗಿತ್ತು.
‘ಏಯ್, ಎಂತಾ ಸೀರೆ ಉಟ್ಕಂಡ ಬಂದದ್ಯೆ ಅತ್ತೆ?’
‘ಅಂಚು ಸೆರಗಿನ್ದಾ?’
‘ಮೈ ತುಂಬಾ ಹೂವಿರೋ ನೈಲೆಕ್ಸಾ?’
‘ತೋಪಿನ ಸೆರ್ಗಾ?’
‘ಏ..ಬಿಡೆ, ತೋಪಿನ ಸೆರ್ಗಿನ ಸೀರೆ ಉಡೂಕೆ ಸರೋಜತ್ತೆ ಏನ್ ನಿಮ್ಮಂಗೆ ಅಜ್ಜೀನಾ? ಮಾಡರ್ನು ಮಾಡರ್ನ್ ಅತ್ತೆ ನಮ್ದು’.
‘ಹೌದ್ಬಿಡೆ, ನಿಮ್ಮತ್ತೆಗೇನ್ ಈಗ ಪ್ರಾssಯಾ’ ಹೀಗೆ ಸಾಗುವ ಮಾತಿನ ಧಾಟಿಗೆ ಕಾರಣವಾದ ಸರೋಜತ್ತೆ ಮುದುಕರಿಂದ ಹರೆಯದ ಹುಡುಗಿಯರ ತನಕ ಆಕರ್ಷಣೆಯ ಬಿಂದು.
‘ಅತ್ತೆ, ನೀನು ಬಿ.ಜೆ.ಪಿ.’
‘ಎಂತಕೆ? ಮೈಮೇಲೆ ದೆವ್ವಗಿವ್ವ ಬಂತಾ ಏನೆ?’
‘ನೀ ಕಮಲ ಅಲ್ವಾ?’
‘ನಾನಾ? ಇದ್ಯಾ ನಮ್ನ್ಯೆ ನಿಂದು? ಈಗ ಹೊಸ ಹೆಸ್ರ ಇಡೂಕ್ ಹೊರಟಿದ್ಯಾ ನಂಗೆ?’
‘ಹಂಗಲ್ಲ ಅತ್ತೆ, ಸರೋಜ ಅಂದ್ರೆ ಎಂತದು ಗೊತ್ತದ್ಯಾ? ಕಮಲಾ ಹೇಳಿ. ಅದಕ್ಕೆ ನೀನು ಬಿ.ಜೆ.ಪಿ. ಅಂದೆ.
‘ಸಾಕ್ ನಿಲ್ಸೆ. ಹನಿ ಹುಂಡರೂ ಹಾಲಿಲ್ದೆ ಬದ್ಕೂಕಾಗುದಾ? ಆಕಳು ಕರ ಇಲ್ದೆ ನನಗಂತೂ ಆಗ. ದಿನ್ ಬೆಳ್ಗಾದ್ರೆ ಹಾಲ್ಕರ್ಕಂಡು ಈಗ ಮೊಕ ತಿರ್ಗಸಿದ್ರೆ ಮೋಸ ಮಾಡ್ದಂಗಲ್ವನೆ?’ ಎಂದು ಇಂದಿರಾಜಿಯ ಪ್ರೀತಿ ಮೆರೆದವಳು, ಮನೆಯಲ್ಲಿ ಎಲ್ಲರ ಮನೋಭಾವ ಬದಲಾದರೂ, ಒತ್ತಾಯ ತಂದರೂ, ತನ್ನ ನಿಲುವು ಬದಲಿಸದೆ ‘ಎಂತಾ ಕರ್ಮದ ಚುನಾವಣೆನಾ, ಎಂತಾ ವೋಟಾ. ಅಂತೂ ಒಂದ್ ಪರ್ವ ಮುಗೀತು. ಮುಂದನ್ಸಾರಿ ಅನ್ನೂತಂಕ ಯಾರಿರ್ತ್ರ ಯಾರಿರೂದಿಲ್ವಾ ಯಾರ್ಗ್ ಗುತ್ತೆ? ಯಾವ್ದಕ್ಕೆ ಗುದ್ದಿದ್ನಾ ಏನ್ ಕರ್ಮಾನಾ’
‘ಅತ್ತೆ, ಖರೇ ಹೇಳು ನೀ ಯಾವ್ದುಕ್ ವೋಟ್ ಹಾಕ್ದೆ?’
‘ನಾ ಸುಳ್ ಯಾವಾಗ ಹೇಳೀನೆ? ನೀನೊಂದ್ ಮರಾಯ್ತಿ ವಿಶ್ರೂಪ. ಬಿಸ್ಲಲ್ಲಿ ಹೋದ್ನಾ, ಕಣ್‍ಕತ್ಲೆ ಬಂದಂಗಾಯ್ತು ನೋಡು. ಎಲ್ಲಿ ಏನು ಹೇಳಿ ಕಾಣ್ಲೇ ಇಲ್ಲ. ಅದ್ಕೇ ಮೊದ್ಲ ಕಂಡದ್ಕೇ ಒತ್ ಬಂದ್ಬುಟ್ಟೆ. ಅಜಮಾಸು ಆಕ್ಳಕರೂಗೆ ಬಿದ್ದಿರೂದೆ’ ಎಂದು ಬಾಯಿಗೆ ಸೆರಗೊತ್ತಿ ಗಿಸಿಗಿಸಿ ನಗುತ್ತ ದೇವರಾಣೆಗೂ ಅಪಚಾರವಾಗದಂತೆ, ಗಂಡನ ಭಾಷೆಗೂ ಚ್ಯುತಿ ಬಾರದಂತೆ ತನ್ನ ನಿಷ್ಠೆ ಮರೆದವಳು; ಸ್ವಂತಿಕೆ ಹೊತ್ತವಳು ಅತ್ತೆ.
ನಮ್ಮತ್ತೆ ನಿಜವಾಗಿಯು ಕಮಲದಂತವಳೆ. ಉರೂಟು ಮುಖ, ಸ್ವಲ್ಪ ಮೊಂಡು ಮೂಗು, ಅವಳು ನಗುತ್ತಿದ್ದಂತೆ ನೀರು ತುಂಬಿಕೊಂಡು ಅವಳ ಆನಂದವನ್ನು ಪ್ರತಿನಿಧಿಸುವ ಹೊಳಪುಗಣ್ಣು, ತುಸು ನಾಚಿಕೊಂಡರೆ ರಕ್ತರಂಗೇರುವ ನಯ ಕೆನ್ನೆ, ಎಷ್ಟು ಬಂಗಾರ ಹೇರಿದರೂ ಜಗ್ಗಲಾರೆ ಎನ್ನುವ ನೀಳ ಕತ್ತು, ಮೆಟ್ಟಿಲು ಮೆಟ್ಟಲಾದ ಕೂದಲು ಹಣೆಗೆ ಕಿರೀಟ ಹಚ್ಚಿದಂತಿತ್ತು.
‘ನಿಂಗೆಷ್ಟ್ ವರ್ಷ್ ಆಯ್ತು ಅತ್ತೆ?’
‘ತಕಾ, ಎಂತ ರೋಗ್ ಶುರುವಾಯ್ತೆ ನಿಂಗೆ? ನೋಡು, ತಲೇಲಿ ಒಂದ್ ಕೂದ್ಲಾದ್ರೂ ಹಣ್ಣಾಗದ್ಯಾ? ನಾ ವಯಸ್ಸಾದಾಂಗ ಕಾಣ್ತ್ನಾ? ಮತ್ ನಿಂಗೆಂತಕೆ ನನ್ ವಯಸ್ಸಿನ್ ಚಿಂತೆ?’
‘ಅದು ಈಗಿನ ಬಣ್ಣದ ಪ್ರಭಾವಳಿ… ಹೆ ಹೆ ಹೇ…’
‘ಸೊಲ್ಪ ಸುಮ್ನಾಗಾ ಮಾರಾಯಾ… ಎಲ್ಲರೆದ್ರಿಗೆ ಮರ್ಯಾದಿ ತೆಗೆಬೇಡ’
‘ಅಂವನ್ಗೆ ಹೆಂಗೊತ್ತಾಯ್ತು ಅತ್ತೆ?’
‘ಸಾಯ್ಲಿ ಮರ್ಯಾದಿ ತೆಗೆತ. ಯಾರ್ಗೂ ಹೇಳ್ಬೇಡ ಹೇಳಿನಲ. ಮತ್ಯಾರು ಇಂವ್ನೆಯಾ. ಇಂವ್ನ ಅಮ್ಮ ತಂದ್ಕಂಡದ್ದ ಆವಾಗಾವಾಗೆಲ್ಲಾರೂವಾ ಹಚ್ಕೊಡ್ತಾ. ಬಗೇಲಿ ಹರ್ಕ್ ಬಾಯಿ ಬಿಟ್ರೆ ಗಾನಾ ಹುಡ್ಗನೆ’ ಎನ್ನುತ್ತ ಮತ್ತೆ ಸೆರಗ ಬಾಯಿಗೊತ್ತಿ ಮುಸಿಮುಸಿ ನಗುತ್ತ ಮೊಮ್ಮಗನ ಹುಸಿ ಗದರುವ ಅತ್ತೆ ಮಕ್ಕಳು, ಮೊಮ್ಮಕ್ಕಳು, ಸೊಸೆಯರಿಗೆಲ್ಲ ಅಚ್ಚುಮೆಚ್ಚು.


ಎಲ್ಲದಕ್ಕೂ ಸಂಭ್ರಮ. ಆ ಸಂಭ್ರಮಕ್ಕೆ ಹೂವಿಲ್ಲದೆ ಇದ್ದರೆ ಅದು ಅಪೂರ್ಣ ಅಂದುಕೊಂಡವಳು. ಮದುವೆ, ಜಾತ್ರೆ ಏನೇ ಇರಲಿ ಹಿಂದಿನ ದಿನ ಹೂವಿನ ದಂಡೆಯ ತಯಾರಿಯೇ ಜೋರು. ಅಂಗಳದ ಕಟ್ಟೆಯ ಬದಿಗೆ ಸಾಲಾಗಿ ನೆಟ್ಟ ಅಬ್ಬಲಿಗೆ ಹೂವನ್ನು ಗೆರಸಿಯ ತುಂಬ ಕೊಯ್ದು ತಂದು, ಮೂರೆಳೆ ಬಳ್ಳಿ ರೆಡಿ ಮಾಡಿ, ಆಚೆಗೆ ಮೂರು ಈಚೆಗೆ ಮೂರು ಹೂವಾಕಿ, ಮಧ್ಯಮಧ್ಯ ಚೌಡಿಗಿಡದ ಹಸಿರೆಲೆ, ಮಾಗಿ ಮಲ್ಲಿಗೆ ಹಾಕಿ ಕಟ್ಟಿದ ದಂಡೆ. ಅಥವಾ ಅಂಗಳದ ಎದುರಿಗೆ ಚಲೋ ಗೊಬ್ಬರದ ಹುಡಿಯನ್ನು ಹಾಕಿ ಬೆಳೆಸಿದ ಸೇವಂತಿಗೆ ಹೂವನ್ನು ಸೀರೆ ಮಡಿಲಲ್ಲಿ ತಂದು ಹೊಳ್ಳಿಯ ಮೇಲೆ ಕೂತು ಎರಡಳೆ ಬಾಳೆಪಟ್ಟೆ ಬಳ್ಳಿ ತಂದು ಕಾಲಿನ ಹೆಬ್ಬರಳಿಗೆ ಸುತ್ತಿ, ಆ ಎರಡೆಳೆಯ ಮಧ್ಯೆ ಹೂವ ತೂರಿಸಿ ಬಳ್ಳಿ ಬಿಗಿದು ಬಿಗಿಯಾಗಿ ಕಟ್ಟಿದ ದಂಡೆ, ಅಥವಾ ಬಾಳೆ ಮರದ ಬುಡದಲ್ಲಿ ಗಿಡ ತುಂಬ ಅರಳಿದ ಅರಿಶಿಣ ಬಣ್ಣದ ಗೊಂಡೆ ಹೂವು ಬೊಗಸೆಯಲ್ಲಿ ತಂದು ಮಜಬೂತಾಗಿ ಕಟ್ಟಿದ ವಾರವಾದರೂ ಬಾಡದ ಗೊಂಡೆದಂಡೆ. ಹೀಗೆ ದಂಡೆ ಚಕ್ರಾಕಾರವಾಗಿ ಮುಡಿಗೇರಿದರೇನೆ ಅತ್ತೆಗೊಂದು ಶೋಭೆ. ಅದಾವುದೂ ಇಲ್ಲವೆಂದಾದರೆ ತೋಟದ ನೀರೊಂಡದಲ್ಲರಳಿದ ತಾವರೆ, ಹಳ್ಳದ ಬದಿಯ ಕೇದಗೆ, ಕೊಟ್ಟಿಗೆ ಹಿಂದಿನ ಸಂಪಿಗೆ, ಬಾವಿ ಪಕ್ಕದ ಪಾರಿಜಾತ, ಬಟ್ಟೆ ತೊಳೆಯುವ ಕಲ್ಲಿನ ಹತ್ತಿರ ಇರುವ ನಂಜಟ್ಲೆ, ಕೊನೇ ಪಕ್ಷ ಬೂದಿಗುಡ್ಡೆಯಲ್ಲಿ ಅರಳಿದ ತೊಟ್ಟು ತೊಟ್ಟೇ ಹೆಣೆದು ಕೈಯಲ್ಲೇ ಕಟ್ಟಿದ ಕೆಂಪು ಹಳದಿ ಮಧ್ಯಾಹ್ನ ಮಲ್ಲಿಗೆ ಹೂವಾದರೂ ಸರಿ. ಒಟ್ಟಿನಲ್ಲಿ ಹೂವಿಲ್ಲದೆ ಬದುಕೇ ಇಲ್ಲ. ಕಮಲದ ಹೂವೊಂದು ಸಿಕ್ಕಿಲ್ಲ ಅಷ್ಟೆ. ಹೆಸರಿಗೆ ತಕ್ಕಂತೆ ನಮ್ಮತ್ತೆ ಹೂವಿನ ಮಳ್ಳಿ. ತಾನು ಮುಡಿಯುವುದಷ್ಟೇ ಅಲ್ಲ ಬಂದವರಿಗೂ ಮುಡಿಸಿ ಖುಷಿ ಪಡಬೇಕು ಅತ್ತೆಗೆ.

‘ಈಗಿನ್ ಕಾಲ್ದ ಹೆಣ್ಮಕ್ಳಗೆ ಹೂ ಮುಡ್ಯೂದು ಒಂದ್ ವಜ್ಜನೆಯಾ. ಚಿಪ್ರಿ ಹಾಂಗೆ ಮಂಡೆ ಕೂದ್ಲ ಹರ್ಡಕಂಡಿ, ಕಾಲ್ಗೊಂದು ಮರ್ಕಾಲ ಕಟ್ಕಂಡ್ ಹೊರಟ್ರೆ ಎದ್ರಿಗೆ ಯಾರ್ಬಂದ್ರೂ ದಾತಿರುದಿಲ್ಲ. ಪಾಪ, ಅವ್ರ ತಪ್ಪಲ್ಲ ಬಿಡು ಎಲ್ಲ ಆ ವಯ್ಸನ ತಪ್ಪು. ಅದೇನೋ ಗಾದೆ ಹೇಳ್ತಾರಲ್ಲೆ, ಮೀಸ್ ಬಂದಾಗ್ ದೇಶ್ ಕಾಣೂದಿಲ್ಲ, ಮೊಲೆ ಬಂದಾಗೆ ನೆಲ ಕಾಣೂದಿಲ್ಲ ಹೇಳಿ. ಹಂಗೆ ಹಂಗ್ ಓಡಾಡ್ತ್ರು. ನೀ ಹಾಂಗಲ್ವೇ, ಬೇಜಾರ್ಮಾಡ್ಕಬೇಡ ಒಂದ್ಮಾತ್ಗಂದೆ. ಬಾ ಇಲ್ಲಿ ಕೂತ್ಕ, ಚಂದ ಮಾಡಿ ಬಾಚಿ ಹೂ ಮುಡ್ಸ ಕೊಡ್ತೆ. ಒಂದ್ಗಳ್ಗ್ ನೆಟ್ಗೆ ಕುಂತ್ಕಳೆ ಹೆಣ್ಣೆ. ಬರೀ ಆಚೀಚೆಗ್ ನೋಡ್ತ್ಯಲ್ಲೆ ಬೆಳ್ಚಿಮಂಗನಾಂಗೆಯ. ಕುಂತ್ಕ, ಸರಿ ಕುಂತ್ಕ ನೋಡ್ವಾ. ಎಂತ ಚಂದಿ ಜಡೇನೆ ನಿಂದು. ಮತ್ ಕೂದ್ಲ್ ನೋಡ್ದವ್ರ್ಯಾರು ನಿನ್ ಬೇಡ ಅನ್ನೂಕಿಲ್ಲ ಹಾಂ. ಅತೀ ಶಿಸ್ತ್ ಮಾಡೂಕೋಗಿ ಕೂದ್ಲ ಕತ್ರಸ್ಕಂಡು ಗಿತ್ರಸ್ಕಂಡ್ ಸುಟ್ ವೇಷ ಮಾಡ್ಕಬೇಡ. ದೇವ್ರ ಕೊಟ್ಟ ರೂಪ ಉಳಿಸ್ಕೋಬೇಕು. ನಾಳೆ ಗಂಡ್ರು ಮಕ್ಳು ಎಲ್ಲ ಆಗ್ಬೇಕಲ್ಲೆ. ನಾ ಸತ್ತೋದ್ರೇ ಹೋಯ್ತು. ಇಲ್ಲಾರೆ ನಾನೇ ನಿನ್ ಮದ್ವೆಗೆ ಹೂ ಮೂಡಿಸೂದು. ಮತ್ ನಿಂದೇ ಜಡೆ ನೋಡ್ಕಂತ ಗಂಡನ ಜುಟ್ ಬಿಟ್ಬುಡ್ವೆ. ಗಂಡ್ನ ಜುಟ್ಟು ಯಾವಾಗ್ಲೂ ಹೆಂಡ್ರ ಕೈಲೇ ಇರಬೇಕು, ಆಗ್ಲೇ ಮಜಾ ಏನೆ’ ಎನ್ನುತ್ತಾ ಮಾತಿನ ಕೊನೆಗೊಂದು ವೇದಾಂತ ಹೇಳಿ ಅದು ತಮಾಷೆಗೆನ್ನುವಂತೆ ನಕ್ಕು, ಮಾವಿನ ಮರಕ್ಕೆ ಮಲ್ಲಿಗೆ ಬಳ್ಳಿಯಿಂದ ಅಂಗೈಯಲ್ಲಿ ಬಿಡಿಸಿ ತಂದ ಮೊಗ್ಗಿನ ಕತ್ರದಂಡೆಯನ್ನು ದಪ್ಪ ಜಡೆಗೆ ಉದ್ದಕ್ಕೆ ಮುಡಿಸಿ ‘ಅಡ್ಡಿಲ್ವೆ ನಿನ್ ಅತ್ತೆ ಹೂ ಮೆಡೂದ್ ಮಾತ್ರ ಚಲೋ ಕಲ್ತದ್ಯೆ’ ಎಂದು ತನ್ನನ್ನೇ ತಾನು ಹೊಗಳಿಕೊಳ್ಳುತ್ತ ಮುಟ್ಟಿ ಮುಟ್ಟಿ ನೊಡುತ್ತಿದ್ದ ಅತ್ತೆಗೆ ನನ್ನ ಉದ್ದನೆಯ ಕಪ್ಪು ಕೂದಲು ಅವಳ ಎಲ್ಲ ದಂಡೆಗಳ ಪ್ರಯೋಗ ಶಾಲೆಯಾಗಿರುತ್ತಿತ್ತು.

ರಜಾ ಸಿಕ್ಕಾಗಲೆಲ್ಲಾ ಅತ್ತೆಯ ಮನೆಗೆ ಹೋಗುವುದೆಂದರೆ ಸಂಭ್ರಮ ನಮಗೆ. ಅವಳ ಬೆನ್ನು ಬಿಡದೆ ಸುತ್ತುವುದು ನಮ್ಮ ರೂಢಿ. ಬೆಳಗಾಗೆದ್ದು ದನ ಕರೆಯಲು ಹೊರಟರೆ ಅವಳ ಹಿಂದೆ, ಪಾತ್ರೆ ತೊಳೆಯಲು ಹೊರಟರೆ ಅವಳ ಹಿಂದೆ, ನೆಲ ಸಾರಿಸಲು ಹೊರಟರೆ ಅವಳ ಹಿಂದೆ, ಬಟ್ಟೆ ತೊಳೆಯಲು ಹೊರಟರೆ ಅವಳ ಹಿಂದೆ, ನೀರು ಬಾರಿಗೆ ತೋಟಕ್ಕೆ ಹೊರಟರೆ ಅವಳ ಹಿಂದೆ, ಕೊನೆಗೆ ‘ಗುಡ್ಡೆಗೆ ಹೋಗಿ ಬರ್ತ್ನೆ’ ಅಂದರೆ ನಾನೂ ಕೈಲೊಂದು ಚೊಂಬು ಹಿಡಿದು ರೆಡಿ. ‘ಅಲ್ಲೂ ಬರ್ವಳೆಯಾ ನೀನು. ನಂಗೊಂದು ಬಾಲ. ನಡೆ ಹೋಗು’ ಎಂದು ಅತ್ತೆ ಗ್ರೀನ್‍ಸಿಗ್ಮಲ್ ಕೊಟ್ಟು ಬಿಟ್ಟರೆ ಗುಡ್ಡೆ ಸುತ್ತುವ ಮಜಾ ಹೇಳತೀರದು. ಅತ್ತೆಗೂ ಅಷ್ಟೇ ನಾನು ಹೊರಟಿದ್ದು ಮನಸಿನೊಳಗೆ ಬಾರೀ ಖುಷಿ. ಆದರೆ ಮುಖದಲ್ಲಿ ಹುಸಿ ಗಾಂಭೀರ್ಯ, ಮಾತಿನಲ್ಲಿ ತುಸು ಸಿಡುಕು ಇವೆಲ್ಲ ಅವರ ವ್ಯಕ್ತಿತ್ವದ ವಜನು ಅಷ್ಟೇ. ಗುಡ್ಡೆ ಹತ್ತುವಾಗ ಏರು ಆದುದರಿಂದ ಅಷ್ಟಾಗಿ ಮಾತಿಲ್ಲ. ಸ್ವಲ್ಪ ಸಮಜಾಗ ಸಿಕ್ಕ ಮೇಲೆ ‘ನೀ ಆಕಡೆಗೆ ಹೋಗು, ನಾ ಈ ಕಡೆಗೆ ಹೋಗ್ತೆ’ ಎಂದು ಕವಲಾಗಿ ಹೋದರೆ ಒಂದಿಷ್ಟು ಹೊತ್ತು ನಮ್ಮದೆ.

ಆಗೆಲ್ಲ ಮನೆಮನೆಗೆ ಪಾಯಿಖಾನೆ ವ್ಯವಸ್ಥೆ ಇರಲಿಲ್ಲ. ಬಹಿರ್ದೆಸೆಗೆ ಮನೆಯ ದಣಪೆಯಾಚೆಯ ಗುಡ್ಡವೇ ಪ್ರಸಕ್ತ ತಾಣ. ಮುಂಜಾನೆಯಿಂದ ಕುಂಡೆಯೂರಲು ಪುರುಸೊತ್ತಿಲ್ಲದ ಹೆಂಗಸರಿಗೆ ಇಳಿ ಸಂಜೆಯ ಆ ಒಂದು ಗಳಿಗೆಯೇ ವಿಶ್ರಾಂತಿಯ ಗಳಿಗೆಯೂ ಆಗಿರುತ್ತಿತ್ತು. ಹರಡಿದ ಮರದಡಿಯಲ್ಲಿ ಎತ್ತರದ ಕಲ್ಲೇರಿ ಕುಳಿತು ಬಿಟ್ಟರೆ ಕಲ್ಲು ಕೇವಲ ಕಲ್ಲಾಗಿರುತ್ತಿರಲ್ಲಿಲ್ಲ. ನಮ್ಮ ಕಷ್ಟಸುಖಕ್ಕೆ ಮಿಡಿವ ಜೊತೆಗಾತಿಯಾಗುತ್ತಿತ್ತು. ಅದು ಕೇವಲ ಬಹಿರ್ದೆಸೆಯಾಗಿರದೆ ಅಂತರಂಗದ ಭಾವಗಳ ಹರದಾರಿಯೂ ಆಗುತ್ತಿತ್ತು. ಹೊಟ್ಟೆತುಂಬ ಬಡಿಸದ ಅತ್ತೆಯ ಕಾಟದ ಕಣ್ಣೀರು, ಅದಕ್ಕೊಂದಿಷ್ಟು ತುಪ್ಪ ಸುರಿವ ನಾದಿನಿಯ ಚಾಡಿಯ ಸಂಕಟ, ಚಂದದ ಹೆಂಡತಿಯಿದ್ದೂ ಅಡಿಕೆ ಸುಲಿಯಲು ಬರುವ ಹೆಂಗಸಿನ ಮೇಲೆ ಕಣ್ಣು ಹಾಯಿಸುವ ಗಂಡನ ಮೇಲಿನ ಸೆಡವು, ಸರಿಯಾಗಿ ವಿಚಾರಿಸದೆ ಹೊಂಡಕ್ಕೆ ನೂಕಿದ ಅಪ್ಪನ ಮೇಲಿನ ಅಸಹನೆ ಎಲ್ಲವೂ ಗುಡುಗು ಮಿಂಚಾಗಿ ಹರಿದ ಮೇಲೆ ಮೂಗೇರಿಸಿಕೊಳ್ಳುತ್ತ ಗುಡ್ಡ ಇಳಿದರೆ ಮತ್ತೆ ನಾಳೆಯವರೆಗೂ ಹೇಳಿದ್ದನ್ನೆಲ್ಲ ಹೇಳಿಸಿಕೊಳ್ಳಲು ಮನಸ್ಸಿನಲ್ಲಿ ಜಾಗ ತನ್ನಿಂದ ತಾನೇ ಸಿದ್ಧವಾಗುತ್ತಿತ್ತು. ಇನ್ನು ನಮ್ಮಂತವರಿಗೆ ಕಂಡವರೆಲ್ಲ ನಮ್ಮನ್ನೇ ಮೋಹಿಸಿದಂತೆ ಕಾಣುವ ಕನಸುಗಳಿಗೆ, ಪ್ರೀತಿ ಅಭಿವ್ಯಕ್ತಿಯ ಮಾರ್ಗವಾಗಿ ಕವನದ ಸಾಲುಗಳು ರೂಪುಗೊಳ್ಳುವ ಸೃಜನಶೀಲ ತಾಣವೂ ಆಗಿತ್ತು. ಖಂಡಿತವಾಗಿಯೂ ಸಂಜೆಯ ವಾಯು ವಿಹಾರದ ಖುಷಿಯ ತಾಣ ನಮ್ಮೆಲ್ಲರಿಗೂ ನಮ್ಮೂರ ಗುಡ್ಡವೇ ಆಗಿತ್ತು ಎನ್ನುವುದು ಸುಳ್ಳಲ್ಲ.

‘ಇಷ್ಟೊತ್ತಾದರೂ ಮುಗಿಲಿಲ್ವನೆ ಮಾರಾಯ್ತಿ ನಿಂದು. ಹುಷಾರು, ಹಾವ್‍ಗೀವ್ ಹೊಕ್ಬುಡೂದು. ಹೌದು ಮತ್ತೆ ಸರಿ ಚಡ್ಡಿ ಕಟ್ಕ’
‘ಅತ್ತೆ ನಿಂಗಂತೂ ಒಂಚೂರು ನಾಚ್ಕೇನೂ ಇಲ್ಲ ಬಿಡು’
‘ಅಯ್ಯೋ ದೇವ್ರೆ ನಾಯಂತ ಹೇಳ್ದ್ನೆ. ಇದ್ದದ್ದ ಇದ್ದಾಂಗೆ ಹೇಳ್ದರೆ ಕುಂಡೆಗೆ ಒದ್ದಂಗಾಯ್ತು ಅಂತ್ರಲೆ ಹಂಗಾಯ್ತು ನಿನ್ನ ಕತೆ. ಎಲ್ಲ ನಾ ಕಂಡದ್ದಯೆ. ಈಗಾ ನಾ ನಿನ್ನ ನೋಡ್ತಿರೂದು ಸಣ್ಣ ಹಿಳ್ಳೆ ಆದಾಗಿಂದ ನೋಡ್ತಿದ್ದೆ. ನಾಚ್ಕ್ಯಂತೆ ನಾಚ್ಕೆ. ನಡೆ ನಡೆ. ಆ ಹಿಂಡಲ್ಲಿ ಎಷ್ಟೊಂದು ಗರಜಲ ಕಾಯಿ ಆಗದೆ ನೋಡು. ನಾಕು ತಗಂಡೋದ್ರೆ ಒಳ್ಳೆ ಅಡಗಾಯಿ ಮಾಡಾಕ್ತೆ ನಿಂಗೆ’.
‘ಅಯ್ಯೋ ಅತ್ತೆ ಕೈಯಿsss……’
‘ಹೇಳಿದ್ನಲೆ ನಿಂಗೆ ಹಗೂರ್ಕ್ ಕೊಯ್ಯಿ ಮುಳ್ಳ ಚುಚ್ಚಸ್ಕ ಬೇಡ ಹೇಳಿ. ಚುಚ್ಚಸ್ಕಂಡ್ಯಾ? ಎಂತದು ಆಗ್ಲಿಲ್ಲ ಬಿಡೆ. ಆ ಹನಿ ಹುಂಡ ರಕ್ತಕ್ಕೆಲ್ಲ ಹೆದ್ರದ್ರೆ ಮುಗೀತು. ಮುಂದೆ ಎಂತೆಂತ ರಕ್ತ ಎಲ್ಲ ನೋಡ್ಬೇಕು. ಕೈ ಗಟ್ಟಿ ಅಬಗೊತ್ತಿ ಹಿಡ್ಕ. ನಡೆ ಪಡಹೊಡ್ದೆ. ಅರಸನ ಮಗಳ್ಗೆ ಸುಂಗ್ ಹೆಟ್ಟದಂಗಾಯ್ತು’ ಎಂದು ಸೀರೆ ಸೆರಗೊತ್ತಿ ಬಾಯಿಗೊತ್ತಿ ನಗ್ತಾ ಮನೆ ದಾರಿ ಹಿಡಿಯುವಾಗ ಎತ್ತರ ತಗ್ಗು ತಿಳಿಯದಷ್ಟು ಕತ್ತಲಾಗಿರುತ್ತಿತ್ತು. ರಾತ್ರಿಯಾಯಿತೆಂದರೆ ಅತ್ತೆಯ ಬಾಯಿಂದ ಒಂದೊಂದೆ ಕತೆ ಬಿಚ್ಚಿಕೊಳ್ಳುತ್ತಿತ್ತು.
‘ಒಂದಲ್ಲ ಒಂದೂರಲ್ಲಿ ಒಬ್ಬ ರಾಜಕುಮಾರ ಇದ್ದ…. ನನ್ ಗಂಡ ಹೇಂಗಿದ್ರು ಗೊತ್ತದೆಯಾ ನಿಂಗೆ? ರಾಜಕುಮಾರ ಒಳ್ಳೆ ರಾಜಕುಮಾರ ಇದ್ದಂಗಿದ್ರು. ಸುತ್ತೇಳು ಗ್ರಾಮದಲ್ಲೂ ಯಾರಿರ್ಲಿಲ್ಲ ನಮ್ಮನೆ ಅವ್ರಂಗೆ. ರಕ್ತ ರಕ್ತ ವಡೆತಿತ್ತು ಮೊಕದ ಮೇಲೆ. ಬೆಳೀ ನೆಹರೂ ಶರ್ಟ್ ಹಾಯ್ಕಂಡು ಬೆಳೀ ದೋತ್ರಪಂಚೆ ಉಟ್ಕಂಡು ಹೊರಟ್ರು ಅಂದ್ರೆ ಊರ ಹೆಂಗಸ್ರ ಕಣ್ಣೆಲ್ಲ ನನ್ ಗಂಡನ್ಮೇಲೆ….’
‘ಅರೆ ಹೆಂಗ್ಸರೆಲ್ಲ ನಿನ್ ಗಂಡನ್ ನೋಡ್ದ್ರೆ ನಿಂಗೆ ಹೊಟ್ಟೆಕಿಚ್ಚು ಬರ್ತಿರ್ಲಿಲ್ವಾ?’
‘ಒಳ್ಳೆ ಕತೆ ಆಯ್ತಲೆ ನಿಂದು. ನೋಡ್ದ್ರೆ ಎಷ್ಟ್ ಹೊತ್ ನೋಡೂರೆ. ಹಗ್ಲೆಲ್ಲ ಊರ್ ಸುತ್ತುದ್ರೂ ರಾತ್ರೆಗೆ ನನ್ ಮಗ್ಲಗೆ ಬಂದ್ ಬೀಳ್ಬೇಕಲ್ಲೆ ಪಾಪ!’
‘ಅತ್ತೆ, ಮಾವ ತುಂಬ ಪ್ರೀತಿ ಮಾಡ್ತಾ ಇದ್ನಾ ನಿಂಗೆ?’
‘ಅಯ್ಯೋ ಮಾಡ್ದೆಯಾ. ದಿನಾ ರಾತ್ರೆ ಬರ್ಬೇಕಾರೆ ಮಲ್ಗೆ ಹೂ ತಕಂಡೆ ಬರೂರು, ಬಾಯ್ ವಾಸ್ನೆ ನಂಗೆ ಹೋಡುಕಾಗ ನೋಡು ರಸಿಕ ಶಿಖಾಮಣಿ.
‘ಮತ್ತೆ ನಿಂಗೆ ತ್ರಾಸಾಗ್ತಿರ್ಲಿಲ್ವಾ?’
‘ತ್ರಾಸಾದ್ರೇನ್ಬಂತು? ಕೈಯಲ್ಲಿ ಮಲ್ಗೆ ಹೂವಿರ್ತಿತ್ತಲೆ, ಮೂಗಿಗೆ ಒತ್ಕಂಡಿ ಬಿದ್ದಿರ್ತಿದ್ದೆ. ಹ್ಞಾsss ಅಷ್ಟೂ ಮಾಡ್ದೆ ಇದ್ರೆ ಈ ಗಂಡ್ಸ್ರು ನಮ್ ಕೈಲಿರೂರಾ? ಅದೆಲ್ಲ ನಿಂಗೆಲ್ ಗೊತ್ತಾಗ್ತದ್ಯೆ? ಮದುವೆ ಅಂದ್ರೆ ಮಾರ್ ದೂರ್ ಓಡ್ತೆ ನೀನು. ಆಗೆ ಮಾರಾಯ್ತಿ, ಅದೆಲ್ಲ ಆಗೇ ನೋಡ್ಬೇಕು ಹೇಳೂಕಾಗ್ತದ್ಯಾ? ಮಜಾ ಇರ್ತದ್ಯೆ…….’
‘ಹೋಗೆ ಅತ್ತೆ ನೀನು’

‘ನಾ ಎಲ್ಲಿಗ್ ಹೋಗ್ಲೆ? ಈಗೆಲ್ಲ ಹೇಳೂದ್ ಹಾಂಗೆಯ, ಕಡೆಗೆ ಗಂಡ್ನ ಗಳ್ಗೂ ಬಿಟ್ಟಿರೂಕೆ ತಯಾರೇ ಇರೂದಿಲ್ಲ ಈಗಿನ ಹೆಣ್‍ಮಕ್ಳು. ಎಲ್ಲ ಗೊತ್ತಿದ್ದಿದ್ದೆಯಾ ಬಿಡು. ಮತ್ತೆ ಗಂಡ ಗಂಡ ಹೇಳಿ ತಲೆ ಮೇಲೆ ಕೂಡ್ಸ್ಕ ಬಿಡ್ಬೇಡಾ, ಬಗಲಲ್ಲಿ ಚೂರೀನೂ ಇರ್ತದೆ ತಿಳ್ಕ’ ಎಂದು ಮತ್ತೆ ಸೀರೆ ಸೆರಗ ಬಾಯಿಗೊತ್ತಿ ಮುಸಿಮುಸಿ ನಗುವುದು. ಅತ್ತೆಯ ಸೆರಗ ತುದಿ ಬಾಯಿಗೋದಾಗಲೇ ಅವಳ ಮಾತು ಪೂರ್ಣವಾಯಿತೆಂದು ಅರ್ಥ. ಇಲ್ಲದಲ್ಲಿ ಇನ್ನೂ ಏನೋ ಹೇಳುವದಿದೆಯೆಂದು ಎಲ್ಲರೂ ಅತ್ತೆಯ ಮುಖವನ್ನೆ ನೋಡುತ್ತಿರುತ್ತಿದ್ದೆವು.
ಅತ್ತೆ ಹಾಡಿನ ಹಬ್ಬವೂ ಆಗಿದ್ದಳು. ಅತ್ತೆಯ ಹಾಡುಗಳಿಲ್ಲದೆ ಮದುವೆ, ಮುಂಜಿ, ಮಂಗಳಾರತಿ, ಸೋಬ್ನಗಳೆಲ್ಲ ಕಳೆ ಕಟ್ಟುತ್ತಲೇ ಇರಲಿಲ್ಲ. ಬದನೆಕಾಯಿ ಬಣ್ಣದ ಅಂಚು ಸೆರಗಿನ ಸೀರೆ ಉಟ್ಟು, ಒಳ್ಳೆ ಗಡುತರವಾದ ಅಬ್ಬಲಿ ದಂಡೆ, ಹಗುರವಾದ ಮಲ್ಲಿಗೆ ದಂಡೆಯನ್ನು ಮುಡಿ ಸುತ್ತ ಚಕ್ರಾಕಾರವಾಗಿ ಸುತ್ತಿ ಕುಳಿತು ಬಿಟ್ಟರೆ ಎಲ್ಲರ ಕಣ್ಣೂ ನಮ್ಮ ಅತ್ತೆಯ ಮೇಲೆಯೆ.
ಮೊದಲೆಲ್ಲ ಹಾಡಿನ ಸ್ಪರ್ಧೆಯೇ ನಡೆಯುತ್ತಿತ್ತು. ಹೆಣ್ಣು ಹಾಗೂ ಗಂಡಿನ ಕಡೆಯವರು ಎದುರು ಬದುರಾಗಿ ಕುಳಿತುಕೊಳ್ಳುತ್ತಿದ್ದರು. ಅದರಲ್ಲೂ ಮುಖ್ಯ ಹಾಡುಗಾರ್ತಿ ಚಕ್ಕಳ ಬಕ್ಕಳ ಹೊಡೆದು ಮಧ್ಯದಲ್ಲಿ ಕುಳಿತುಕೊಂಡರೆ ಉಮೇದು ಕೊಡಲು ಉಳಿದವರೆಲ್ಲ ಸುತ್ತುವರಿದಿರುತ್ತಿದ್ದರು. ಗಂಡನ್ನು ಎದುರುಗೊಂಬುವ ಹಾಡು, ಕನ್ಯದಾನದ ಹಾಡು, ಹೆಣ್ಣೊಪ್ಪಿಸುವ ಹಾಡು, ಬಾಗಿಲು ತಡೆದ ಹಾಡು, ಶೋಬನದ ಹಾಡು ಹೀಗೆ ಹಾಡಿನಲ್ಲೇ ಮದುವೆ ಮುಗಿಯುತ್ತಿತ್ತು. ಒಮ್ಮೊಮ್ಮೆ ತಮಾಶೆಯ ರಂಗೂ ಬರುತ್ತಿತ್ತು. ಅಂತೂ ಅತ್ತೆಯಿಲ್ಲದ ಮದುವೆ ಮದುವೆಯಲ್ಲ ಎನ್ನುವಷ್ಟರ ಮಟ್ಟಿಗೆ ಅತ್ತೆ ಬಂಧು ಬಳಗಕ್ಕೆಲ್ಲ ಮನೆಮಾತಾಗಿದ್ದರು.
ಒಮ್ಮೆ ಅತ್ತೆಯನ್ನು ಮಿಸ್ ಮಾಡಿಕೊಳ್ಳುವ ಸಂದರ್ಭವೂ ಬಂತು. ಅತ್ತೆ ತಮ್ಮ ಅವಿವಾಹಿತ ಕಿರಿ ಮಗನ ಸಹಾಯಕ್ಕಾಗಿ ದೂರದ ಬೆಂಗಳೂರನ್ನು ಸೇರಿದರು. ಮಗನಿಗೆ ರಜಾ ಇರುವಾಗ ಮಾತ್ರ ಊರು. ಅದೂ ಒಂದು ವಾರವೋ ಹತ್ತು ದಿವಸವೋ ಅಷ್ಟೇ. ಬಂದಾಗ ಸಿಕ್ಕಿದಷ್ಟು ಕಾರ್ಯಕಟ್ಟಳೆಗಳನ್ನು ಮುಗಿಸುತ್ತಿದ್ದರು. ಮತ್ತೆ ಒಮ್ಮೊಮ್ಮೆ ಬಂದಾಗಲೂ ಒಂದೊಂದು ಹೊಸ ಹೊಸ ಸುದ್ದಿಯನ್ನು ತಂದು ಬಿತ್ತರಿಸುತ್ತಿದ್ದರು.
‘ಎಂತಾ ಬೆಂಗ್ಳೂರ್ ಮಂದ್ಯಾ, ಮಣ್‍ಮಸೀನೂ ಗೊತ್ತಿಲ್ಲ’
‘ಎಂತಕೆ ಅತ್ತೆ?’

‘ಅದೇ ಮೊನ್ನೆ ಬರಬೇಕಾದ್ರೆ ನಮ್ಮನೆ ಮಾವ್‍ನೋರ ಪ್ರಸ್ಥ, ಊರಿಗೆ ಹೋಗ್ತಿದ್ದೆ, ಹ್ಯಾಂಗೂ ಹೋಗೊದ್ ಹೋಗ್ತೆ ಎಂಟ್ಹತ್ ದಿವ್ಸ ಇದ್ದೇ ಬಂದ್ಬುಡ್ತೆ ಅಂದೆ. ಆಚೆಮನೆ ಲಕ್ಷ್ಮಮ್ಮ, ಈಚೆ ಮನೆ ಮಾದೇವಮ್ಮ, ಎದ್ರಗಡೆ ಮನೆ ಬಸವಣ್ಣೆಮ್ಮ, ಹಿಂದ್ಗಡೆ ಮನೆ ಕಾವೇರಮ್ಮ ಎಲ್ಲರೂ ದಂಗ್‍ಬಡ್ದು ಹೋಗುರಾ. ಒಬ್ರ ಮೊಕ ಒಬ್ರ ನೋಡ್ತಾ ಕಂಗಾಲು. ‘ಕಮಲಮ್ಮ, ನಿಮ್ಮ ಮಗ್ನ ಪ್ರಸ್ಥಾನಾ, ನಿಮ್ಮ ಮೊಮ್ಮಗ್ನ ಪ್ರಸ್ಥಾನಾ ಅನ್ಬೇಕನೆ? ನಮ್ ಯಜಮಾನ್ರ ಅಪ್ಪನ ಪ್ರಸ್ಥ, ತೀರ್ಕಂಡ್ ಹತ್ತ್ ವರ್ಷಾಯ್ತು ಅಂದೆ. ಆಗ ಬಾಲವಾಡಿ ಟೀಚರ್ ಮಂಗ್ಳಮ್ಮನೋರು ಕಿಸಕ್ಕನೆ ನಗೆ ಯಾಡಿ ‘ಓಹ್ ತಿಥಿನಾ?’ ಅಂದ್ಮೇಲೆ ಎಲ್ಲರ್ಗೂ ಹೋದ್ ಜೀವಾ ಬಂದಂಗಾಯ್ತು. ಒಳ್ಳೆ ಲಿಪ್‍ಕಿಟ್ ಹಚ್ಚಂಡು ಪೇಟೆ ಸುತ್ತೂಕಡ್ಡಿಲ್ಲ, ಎಂತ ಕರ್ಮನೂ ಗೊತ್ತಿಲ್ಲ ಮಾರಾಯ್ತಿ’
‘ಅತ್ತೆ ಅದು ಲಿಪ್‍ಕಿಟ್ ಅಲ್ಲ ಲಿಪ್‍ಸ್ಟಿಕ್ಕು’
ಎಂತ ಸುಡಗಾಡೋ, ಇಷ್ಟು ಬಣ್ಣ ಮೆತ್ಕಂಡು ಥೇಟ್ ನಮ್ಮ ಯಕ್ಷಗಾನದ ಹೆಣ್ವೇಷ ಕಂಡಂಗ ಕಾಣ್ತ್ರು ನೋಡು’ ಎಂದಾಗ ಬಿದ್ದೂ ಬಿದ್ದೂ ನಗುವ ಪಾಳಿ ನಮ್ಮದು.
ಮಾವನ ಪ್ರಸ್ಥ ಮುಗಿಸಿ ಪುರುಸೊತ್ತಾಗಿ ಎಲ್ಲ ಎಲೆ ಅಡಿಕೆ ಹಾಕುತ್ತ ಕುಳಿತಾಗ ಸಣ್ಣತ್ತೆಯ ಮಗಳು ರಾಧೆ ಎಂಟ್ರಿ ಕೊಟ್ಟಳು. ಅವಳನ್ನು ಕಂಡಿದ್ದೇ ತಡ ‘ಈಗೆ ತಂಗೀಗೆ ಮದ್ವೆ ಮಾಡೂಕೆ ಅಡ್ಡಿಲ್ಲ ನೋಡು. ಮೊದ್ಲೆಲ್ಲ ಸಾಪಿತ್ತು, ಈಗ್ ಎದೆ ಮೇಲೆಲ್ಲ ಗಜನಿಂಬೆ ಗಾತ್ರಕೆ ಬೆಳ್ದದೆ. ಅಪ್ಗೆ ಹೇಳೂದೆ ಆಯ್ತು.’ ಎಂದು ಕಣ್ಣು ಮುಚ್ಚುವುದರಲ್ಲಿ ಹೇಳಿ ಮುಗಿಸಿ ನನ್ನ ಭುಜದ ಹಿಂದೆ ಮುಖ ಅಡಗಿಸಿ ನಗುವ ಅತ್ತೆ ಅವಳಲ್ಲಿ ಹುಸಿಕೋಪವನ್ನೂ ಕೆನ್ನೆಗೆ ರಂಗನ್ನೂ ತುಂಬಿದ್ದರು.

ಆಚೆಕೇರಿಯ ದೊಡ್ಡಮಾವನ ಮಗಳ ಮದುವೆಗೆ ಇಡೀ ಬಂಧು ಬಳಗವೆಲ್ಲ ಸೇರಿತ್ತು. ಗೌಜಿ ಗಲಾಟೆಯ ನಡುವೆ ನಮ್ಮ ಅತ್ತೆ ಬಂದಾಗ ಮಾಮೂಲಿಯಂತೆ ನಮ್ಮ ದೃಷ್ಟಿಯೆಲ್ಲ ರಾಜಧಾನಿಯ ಸ್ಪೆಶಲ್ ಹೊತ್ತು ತರುವ ಅತ್ತೆಯ ಕಡೆಗೆ
‘ಹೊಸಾ ಫ್ಯಾಶನ್ ಸೀರೇನೇ ಇರಬೇಕೆ’
‘ಹ್ಞೂ, ನೋಡ್ದ್ರೆ ಹಾಗೆ ಕಾಣ್ತದೆ. ನೀ ಕೇಳೆ’
‘ಅತ್ತೆ, ಸೀರೆ ಮಾತ್ರ ಬಾಳ್ ಲೈಕ್ ಅದೆ. ಬಣ್ಣ, ಡಿಸೈನು ಎಲ್ಲ ಬೆಸ್ಟ್ ಅದೆ ನೋಡು. ಹೊಸ ಫ್ಯಾಶನ್ ಸೀರೆ ಇದ್ದಂಗದೆ’
‘ಖರೆ ಹೇಳ್ದೆ ನೋಡು. ಬೆಂಗ್ಳೂರು ಜನ ಎಲ್ಲ ಈಗ ಇಂತದೇ ಸೀರೆ ಊಡೂದು. ನಾನೂ ಮದ್ವೆಗೆ ಬರೂದು ಹೇಳಿ ಒಂದ್ ಹೊಸ ಸೀರೆ ತಕಂಡೆ. ಹ್ಯಾಂಗದ್ಯೆ ಸೀರೆ?’
‘ಒಳ್ಳೆ ನೈಸ್ ಅದೆ. ಉಡೂಕು ಚಲೋ ಬರೂದು ಅಲ್ವಾ? ಅಂದಂಗೆ ಹೆಸ್‍ರ್ರೆಂತದೆ ಅತ್ತೆ ಸೀರೇದು?’
‘ನಮ್ಮನೆ ಅವ್ರ ಸಾಟಿ ಸೀರೆ. ಈಗೆಲ್ಲರೂ ಉಡೂದು ಅದೆಯಾ, ನೀನು ಒಂದು ತಕ’.
‘ಎಂತ ಅಂದೆ ಎಂತ ಅಂದೆ, ಎಂತದೊ ಹೆಸ್ರ ಹೇಳ್ದ್ಯಲೆ ಅತ್ತೆ?
‘ಅದೆಯೇ, ನಮ್ಮನೆ ಅವ್ರ ಸಾಟಿ ಸೀರೆ’
‘ಎಂತೊ ಹೊಸ ಹೆಸ್ರ ಇದ್ದಂಗದ್ಯಲೆ ಅತ್ತೆ. ಮರ್ತೆ ಹೋಗ್ತದೆ, ಎಂತ ಅಂದೆ?’
‘ಎಂತಾ ಕರ್ಮಕ್ಕೆ ಓದಿದ್ಯೆ ಮಾರಾಯ್ತಿ? ಹೇಳಿದ್ದೊಂದೂ ಅರ್ಥಾಗೂದಿಲ್ಲ ನಿಂಗೆ. ಸರಿ ಕೇಳ್ಕ. ಇದು ನಮ್ಮನೆ ಅವ್ರ ಸಾಟಿ ಸೀರೇನೇ’
ನಾವೆಲ್ಲ ಕಂಗಾಲು. ಅವ್ರು….. ಸಾಟಿ…… ಸೀರೆ ಕೊನೆಗೂ ತಿಳಿಯಲೇ ಇಲ್ಲ. ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುತ್ತ ಕುಳಿತಾಗ ಬೆಂಗಳೂರಿನಲ್ಲಿಯೇ ನೆಲೆ ನಿಂತ ರಮೇಶಣ್ಣನ ಹೆಂಡತಿ ಸರಿತಾ ಅತ್ತಿಗೆ ಅದೇ ಸೀರೆ ಉಟ್ಟು ಬಂದರು. ನಮ್ಮ ಕಣ್ಣಿನ ಕುತೂಹಲದ ಪ್ರಶ್ನೆಗೆ ಅವರು ಉತ್ತರಿಸಿದರು, ಅದು ‘ಶಂಭು ಸ್ಯಾಟಿನ್ ಸೀರೆ’ ಎಂದು. ಆದರೂ ‘ನಮ್ಮನೆ ಅವ್ರ ಸಾಟಿ’ ಇನ್ನೂ ಗೊಂದಲವೇ ನಮಗೆ.


‘ಮತ್ತೆ ನಮ್ ಅತ್ತೆ ಬೇರೆ ಏನೋ ಹೆಸ್ರ ಹೇಳ್ತು’
‘ನಿನ್ತಲೆ ನಿಂದು, ನಮ್ಮನೆ ಅವ್ರ ಹೆಸ್ರೆಂತದೆ’
‘ಶಂಭು, ಶಂಭು ಧಾರೇಶ್ವರ’
‘ಮತ್ತಷ್ಟೂ ಗೊತ್ತಾಗೂದಿಲ್ವನೇ ನಿಂಗೆ, ನನ್ ಗಂಡ್ನ ಹೆಸ್ರ ನಾ ಹೇಳೂಕಾಗ್ತದ್ಯಾ? ಅದ್ಕೆ ನಮ್ಮನೆ ಅವ್ರ ಸಾಟಿ ಸೀರೆ ಅಂದೆ’. ಎಂದು ಅದೇ ಮಾಮೂಲಿ ಸೀರೆ ಸೆರಗನ್ನು ಬಾಯಿಗೊಡ್ಡಿದರೆ, ನಮಗೆಲ್ಲ ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಯಿತು. ‘ಶಂಭು’ ನಮ್ಮನೆ ಅವ್ರಾಗಿ, ‘ಸ್ಯಾಟಿನ್’ ಅದು ಸಾಟಿ ಆಗಿ ಒಂದು ಹೊಸ ಹೆಸರು ರೂಪುಗೊಂಡಿತ್ತು. ಅಂದಿನಿಂದ ನಮ್ಮತ್ತೆಗೆ ‘ಅವ್ರ ಸಾಟಿ’ ಎಂದೇ ಹೆಸರಾಯಿತು. ಅದು ಹಿಂದಿನಿಂದ ಮಾತ್ರ.
ಎಲ್ಲರೂ ಕಡಿಮೆ ಹಣ ಕೊಟ್ಟು ಹೆಚ್ಚು ರೇಟ್ ಹೇಳಿದರೆ ಅತ್ತೆ ಮಾತ್ರ ಸೀರೆಗೆ ಹೆಚ್ಚು ದುಡ್ಡು ಕೊಟ್ಟು ಕಡಿಮೆ ರೇಟನ್ನು ಹೇಳುವವರು. ಇದು ವಿಚಿತ್ರವಾದರೂ ಸತ್ಯವಾಗಿತ್ತು. ಇದು ಯಾಕೆ ಎಂದರೆ ತಾನು ಹಳ್ಳಿ ಹೆಂಗಸಾದರೂ ಆ ಪೇಟೆ ಜನರನ್ನು ಸರಿ ಬಗ್ಗಿಸಿದೆ ಎನ್ನುವುದು ಅವರ ಹೆಚ್ಚುಗಾರಿಕೆಯಾಗಿತ್ತು.
‘ಎಂತಾ ಪಲ್ಕ ಹಾಯ್ಕಂಡ ಬಂದಿದ್ಯೆ ನೀನು? ಈಗಿನ ಕಾಲದ ಹುಡ್ಗೀರು ನೀವೆಲ್ಲ ಹೆಂಗಿರಬೇಕು. ಕಾಲಕ್ಕೆ ತಕ್ಕಂಗೆ ನಾವೂ ಬದಲಾಗಬೇಕು ನನ್ ನ್ನೋಡಿ ಕಲ್ತ್ಕ. ನನ್ನ ಬ್ಲೋಜ್ ನೋಡು, ಒಪ್ತದ್ಯಾ ನಂಗೆ?’
‘ಇದೆಂತದೆ ಅತ್ತೆ, ಬ್ಲೌಸ್ ಮೇಲ್ಮೇಲೆ ಸೇರೋಗದೆ, ಎಂತಾ ಮೇಗಾಸ್ಲೀವಾ?’

‘ಸಾಕ್-ಸುಮ್ನಿರೆ. ಬರೀ ಪಾರ್ಸ್ ಮಾಡೂದೇ ಆಗೋಯ್ತು ನಿಂಗೆ. ಆ ಸುಟ್ಟ ಟೇಲರಾ ಹೇಂಗ್ ಹೇಳ್ಕಳ್ಸುದ್ರುವಾ ನಾವೆಲ್ಲಾ ವಯಸ್ಸಾದವ್ರು ಹೇಳಿ ಕೈ ಗಂಟಿನ ತಕಾ ಹೊಲ್ದು ಕಳ್ಸಂವಾ. ಅದ್ಕೆ ನಾನೇ ಒಂದಿವ್ಸ ಎಲ್ರೂ ಮಧ್ಯಾಹ್ನ ಮಲ್ಗದಾಗೆ ಸುಮ್ನ ಹೋಗಿ ಖುದ್ದಾಗಿ ನಿಂತು ಅಳ್ತೆ ಕೊಟ್ಟು ಬಂದೆ. ತಂದ ಹಾಯ್ಕಂಡ್ ಮೇಲೆ ಮನೇಲಿ ಎಲ್ಲರ ಕಣ್ಣೂ ‘ಇವಳ್ಗಾಕ್ಯ್ ಬೇಕಿತ್ತು ಈ ವಯಸ್ಸಲ್ಲಿ’ ಅನ್ನೂ ಹಂಗ ನೋಡಿದ್ರು. ನಾ ಬಿಡ್ತ್ನಾ? ಈ ಹಾಳ್ ಟೇಲರ್ ಮಂದಿ ನಾವ್ ಹೇಳೂದ್ ಒಂದಾದ್ರೆ ಅವ್ರು ಮಾಡೂದೆ ಒಂದು….. ಅಳ್ತೆ ಕೊಟ್ಟ ಪಲ್ಕಿನ ಹಾಂಗೆ ಹೊಲ್ಯೂಕ್ ಎಂತ ದಾಡಿ ಇಂವ್ಗೆ?’ ಹೇಳಿ ಗೊಣ್ಗದಾಂಗ ಮಾಡಿ ಹಿಂಗೆಂಗೆ ತೋಳ್ ಎಳ್ಕಂಡೆ. ಎಲ್ಲ ನಂಬಿ ಅವ್ರವ್ರ ಕೆಲ್ಸಕ್ಕೆ ಹೋದ್ರು. ಹೀಂಗೆ ಒಂದೊಂದ್ ಬಾಂಬ್ ಹಾಕ್ತಾನೇ ಇರಬೇಕು ಏನೆ’ ಎಂದು ನಕ್ಕಾಗ ನಾನು ಅತ್ತೆಯನ್ನೇ ಎವೆಯಿಕ್ಕದೆ ನೋಡಿದೆ. ಸದಾ ಹೊಸದಕ್ಕೆ ತೆರೆದುಕೊಳ್ಳುವ, ಎಲ್ಲವನ್ನೂ ಸಮ ಚಿತ್ತದಿಂದ ಸ್ವೀಕರಿಸುವ, ಕೊನೆಗೆ ಸ್ವಂತಿಕೆಯನ್ನು ಮೆರೆಯುವ ಅವಳ ಜೀವನ ಪ್ರೀತಿಗೆ ಬೆರಗುಗೊಂಡಿದ್ದೇನೆ.

ಸುಮಾರು ಹದಿನೈದು ವರ್ಷಗಳ ಹಿಂದೆ ಅತ್ತೆ ಗಂಡನನ್ನು ಕಳೆದುಕೊಂಡ ಗಳಿಗೆ. ಆ ಕ್ಷಣದ ಹೆಣ್ಣಿನ ಮನಸ್ಥಿತಿಯನ್ನು ಅರಿಯುವ ಯಾವ ಪ್ರಯತ್ನವನ್ನೂ ಮಾಡದ ಜನ ಶಾಸ್ತ್ರಕಾರ್ಯಕ್ಕೆ ಮಾತ್ರ ಮುಂದಾಗುತ್ತಾರೆ. ‘ಗಂಡ ಸತ್ತ ನೋವು ಬೇರೆ, ಬಡ್ಡು ಕೂಪಿನ ಉರಿ ಬೇರೆ’ ಎನ್ನುವ ಹಾಗೆ ಒಡೆಯುವ, ಒರೆಸುವ, ಹರಿಯುವ ಅಮಾನವೀಯ ಕಾರ್ಯಗಳು ಒಂದೊಂದಾಗಿ ಪ್ರಾರಂಭ. ಅತ್ತೆ ಮಾತ್ರ ಯಾವುದನ್ನು ಮಾಡಗೊಡಲಿಲ್ಲ. ಬಂದ ದಂಡನ್ನು ಅಲ್ಲೇ ತಡೆದು, “ನಮ್ಮನೇವ್ರು ಯಾವಾಗ್ಲೇ ಹೇಳವ್ರೆ. ಒಂದಲ್ಲ ಹತ್‍ಸಾರಿ ಹೇಳವ್ರೆ. ನಂಗೆನಾದ್ರೂ ಆದ್ರೆ ನೀನು ಕುಂಕ್ಮ, ಕರಿಮಣಿ ತೆಗೆಯೂಕಿಲ್ಲ ಹೇಳಿ. ನನ್ನತ್ರ ಭಾಷೆನೂ ತಕಂಡವ್ರೆ. ಮತ್ ಈಗ ತೆಗೆದ್ರೆ ನಾ ಸುಳ್ಳೇಳ್ದಾಂಗಾಗೂದಿಲ್ವಾ. ಅವ್ರ ಆತ್ಮಕ್ಕಾರೂ ಶಾಂತಿ ಸಿಕ್ಕೂದೆಂಗೆ. ಅವ್ರು ಇರುತಂಕಾನೂ ಅವ್ರು ಹೇಳ್ದಾಂಗೆ ನಡ್ಕಂಡೆ, ಸತ್ಮೇಲು ಅವ್ರ ಹೇಳ್ದಂಗೆ ನಾ ಇರೂದು. ನನ್ ಆತ್ಮ ಶುದ್ದಿ ಹಂಗೇ ನಾ ಬದುಕೂದು. ಮತ್ ನಂಗೆ ಒತ್ತಾಯ ಮಾಡಬೇಡಿ” ಅಂದವಳು ದಡಕ್ಕನೆ ಎದ್ದು ಯಾರ ಹಡಂಗವಿಲ್ಲದೆ ತನ್ನ ಕೋಲಿ ಸೇರಿ ಮುಸುಕು ಹೊಡೆದು ಎರಡು ದಿನ ಅನ್ನ ನೀರು ಬಿಟ್ಟು ಮಲಗಿದವಳು. ಹಾಗೂ ತನ್ನ ಮೈಮೇಲಿನದೆಲ್ಲವನ್ನೂ ಉಳಿಸಿಕೊಂಡವಳು. ಅಂಗಳದ ಚಿಟ್ಟೆಯಾಚೆಗಿನ ಹೂವು ಎಂದೂ ಬಾಡದಂತೆ ಸದಾ ಅರಳಿಸಿದವಳು ಅತ್ತೆ.

ಉದ್ಯೋಗ ಸಿಕ್ಕಿ ದೂರದೂರು ಸೇರಿದ ಮೇಲೆ ಅತ್ತೆಯ ಭೇಟಿ ಕಡಿಮೆಯಾಯಿತು. ಜೀವ ಏಕೋ ಎಳೆಯುತ್ತಿತ್ತು. ಐದಾರು ವರ್ಷಗಳ ಬಳಿಕ ಒಂದು ದಿನ ಅವರ ಮನೆಗೆ ಹೋಗಿ ಅಂಗಳಕ್ಕೆ ಕಾಲಿಟ್ಟರೂ ಯಾರ ಸುಳಿವಿಲ್ಲದ್ದನ್ನು ಕಂಡು ಥಟ್ಟನೆ ಅವರ ಸೊಸೆಯ ತಂಗಿಯ ಮಗಳ ಮದುವೆಯ ದಿನಾಂಕ ನೆನಪಿಗೆ ಬಂದು ದಿಬ್ಬಣವೆಲ್ಲ ಅಲ್ಲೇ ಹೋಗಿರಬಹುದೆಂದುಕೊಂಡೆ. ತಿಳಿನೀಲ ಬಣ್ಣ ಬಳಿದ ಶಿರವಾಳ್ತೆಯನ್ನು ದಾಟಿ ಮೆಟ್ಟಿಲೇರಿ ಹೊಳ್ಳಿಗೆ ಕಾಲಿಟ್ಟೆ. ಯಾವಾಗಲೂ ಕವಳ ಜಪ್ಪುವವರನ್ನು ತಮಾಶೆ ಮಾಡುವ ಅತ್ತೆ ಹೊಳ್ಳಿಯ ಎಡಮೂಲೆಯಲ್ಲಿ ಹಾಕಿದ ಮಂಚದ ಹಾಗೂ ಅಡುಗೆ ವೋರಿಯ ಬಾಗಿಲಲ್ಲಿ ನಡುವಿನ ಗೋಡೆಗೆ ಒರಗಿ ಕವಳ ಜಪ್ಪುವ ಕಲ್ಲು ಗುಂಡು, ಹಿಡಿದು ಲೋಕವನ್ನೇ ಮರೆತು ಬಿಡಿಸಿಟ್ಟ ಚಿತ್ರದಂತೆ ಕೂತಿದ್ದಳು. ‘ಅತ್ತೆ’ ಎಂದರೂ ಎಚ್ಚರಿಲ್ಲ. ಒಮ್ಮೆ ಭಯವಾವರಿಸಿತು, ‘ಅರೆ ಅತ್ತೆss’ ಎಂದು ಭುಜ ಅಲುಗಿಸಿದಾಗ ಬೆಚ್ಚಿಬಿದ್ದಂತೆ ಕಣ್ತೆರೆದಳು. ಸದ್ಯ ನನ್ನದೆಯ ಡವಡವ ನಿಂತಿತು.

‘ಏನತ್ತೆ, ನಿನ್ನ ರಾಜಕುಮಾರ್ನ ಕನ್ಸ ಕಾಣ್ತಾ ಇದ್ಯಾ ಹೆಂಗೆ?’

‘ಯಾವಾಗ್ಲೂ ನಿಂದ್ ತಮಾಶ್ಯೆಯಾ, ಎಲ್ಲಿ ರಾಜಕುಮಾರ, ಎಲ್ಲಿ ಅತ್ತೆ? ನಿನ್ ಮಾವಾ ಚಂದ್ಕೊಂದಿದ್ರು ಅಷ್ಟೆಯಾ. ಬರೀ ಚಂದ ಇದ್ರೆ ಆಯ್ತಾ, ಅಷ್ಟೇ ಬೇಡಾದ ಚಟಾನೂ ಇತ್ತು. ಮೂರ್ ಸಂಜೆಯಾದ್ರೆ ಮನೆ ಬಿಟ್ಟೋರು ಮಧ್ಯರಾತ್ರಿಯಾದ್ರೂ ಮನೆ ದಾರಿ ಕಾಣ್ತಿರಲಿಲ್ಲ. ಮೈಮೇಲ್ನ ದಾತಿದ್ರಲ್ವ ದಾರ್ ಕಾಣೂದು. ನಾನೇ ಮನೇನೂ ನೋಡ್ಕಂಡ್, ಮಕ್ಳನೂ ನೋಡ್ಕಂಡ್, ಇವ್ರೂನೂ ಸಂಭಾಳ್ಸದೆ. ಇದ್ದಾಗೂ ಏನು ಕೊಡ್ಲಿಲ್ಲ, ಮತ್ತೆ ಹೋದ್ಮೇಲೆ ಎಂತಾಕ್ ಕಳ್ಕಬೇಕೆ? ಈ ಕುಂಕ್ಮ, ಈ ಬಳೆ. ಈ ಹೂವು ಇದೆಲ್ಲ ಎಂತ್ ಗಂಡ ಕೊಟ್ಟದ್ದಾ? ಹುಟ್ಟಾಗಿಂದ ಹಾಕಿದ್ದಪ್ಪಾ. ಊರವ್ರಗೆಂತ ಉಸಾಬರಿ? ಅದ್ಕೆ ಉಪಾಯ ಮಾಡಿ ಇಟ್ಕಂಡದ್ದು. ಭಾಷೆ ತಕ್ಕಂಬೂಕೆ ನಿನ್ ಮಾವ್ಗೆ ಮೈಮೇಲ್ನ ನದ್ರಿದ್ರಾ? ಸಲ್ಪಾ ಹೆಳ್ಸಕಂಡ್ನಾ ನಾನು, ಹೊಸಾ ಸೀರೆ ಉಡ್ಕಂಡ್, ಕರಿಮಣಿ ಮೇಲಾಕ್ಕಂಡು ಹೋದ್ರೆ ‘ಅತ್ತೆಗೆ ಅರವತ್ತಕ್ಕೆ ಅರ್ಳುಮರ್ಳು. ಈಗ್ ಪ್ರಾಯ ಬಂದಾಗಾಡ್ತದೆ’ ಅಂದ್ರು. ಬೇರೆವ್ರ ಸುದ್‍ಯೆಂತಕೆ ನನ್ ಸೊಸೆನೇ ತಕ, ಜಡೆಗೆ ಚವ್ಲಿ ಹಾಕಿ ಮುಡಿ ಹಾಕಿ, ಹೂವ್ನದಂಡೆ ಸುತ್ತಿ, ಕನ್ನಡಿ ನೋಡಿ ಕುಂಕ್ಮ ಇಡ್ಕಂಡ್ರೆ ‘ನಮ್ಮತ್ತೆಗೆ ಮಳ್ ಹಿಡ್ದದೆ, ಪಾಶನ್ ಮಳ್ಳು, ವಯಸ್ಸಾದ್ರೂ ಒಂದಿಷ್ಟ್ ಬುದ್ಧಿ ಬೇಡ್ವಾ’ ಅಂದ್ಳು. ಅನ್ಸಕಂಡೆ. ಅದು ನಂಗ್ಬೇಕು ಹೇಳಿ ನಾ ಮಾಡೂದು. ಈ ಕರಿಮಣಿ ತೆಗ್ದಾಕದ್ರೆ ಮದ್ವೆ ಆಗಿದ್ದೇ ಸುಳ್ಳಾಗ್ತದ್ಯಾ? ಗಂಡ್ನ ಜೊತೆಗೆ ಬದ್ಕದ್ದೇನು ಸುಳ್ಳ್ಳಾಗ್ತದ್ಯಾ? ಅವ್ರಷ್ಟಕ್ಕೆ ಅವ್ರು ಹೇಳ್ಕಂತ್ರು, ಬಾಯ್ ಚಪ್ಲ ತೀರ್ಬೇಕಲ್ಲೆ. ಈಗ್ನೋಡು ಕಿರಿ ಮಗ್ನೂ ಅದೇ ದಾರಿ ತುಳ್ದವ್ನೆ. ಹೆರಿ ಮೊಮ್ಮಗ್ಳು ವಯಸ್ಸೂ ಮೀರಿದ್ರೂ ಇದ್ದೂ ಇಲ್ದಾಂಗೆ ನನ್ಕಾಲ್ ಸುತ್‍ತದೆ. ಎರ್ಡ್ನೆ ಮಗ್ನ ಮಗ ಮೈಯಲ್ಲಿ ಭೂತ್ ಹೊಕ್ದಾಂಗೆ ಗಾಡಿ ಓಡ್ಸಿ ತನ್ ಸಾವ್ ತಾನೇ ತಂದ್ಕಂಡ. ಒಬ್ಳೇ ಮಗ್ಳು ಹೇಳಿ ಕಾಲ್ಬುಡ್ಕೆ ಕೊಟ್ಕಂಡಿದ್ದೆ. ಅದು ನನ್ ಕಣ್ಮುಂದೆ ಗಂಡ್ನ ಕಳ್ಕಂತು. ಒಂದ್ ಬೆಳ್ಗಿಂದ ಸಂಜೆ ತಂಕ ಮನೆ ಚಾಕ್ರಿ ಮಾಡೋ ಆಳಾಗದೆ. ಹೆತ್ತ ಕರಳಲ್ವಾ, ನಾ ತಯಾರಾಗಿ ಹೂ ಮುಡಿಬೇಕಾರೆ ಅದ್ರ ನೆನ್ಪಾಗಿ ಕಣ್ ತುಂಬ್ತದೆ. ಯಾರ್ಗೇಳ್ಳಿ ಎದೆ ಸಂಕ್ಟಾನಾ? ಬದ್ಕಬೇಕಲ್ಲೆ. ನಗ್ತೆ ಇಪ್ಪತ್ನಾಕ್ ತಾಸೂ ನೆಗೆಯಾಡ್ತೆ. ಅಯ್ಯೋ ದೇವ್ರೇ, ಯಾರೂ ಇಲ್ಲ ಹೇಳಿ ಹಲ್‍ಸೆಟ್ ತೆದ್ಗಿಟ್ಟಿದ್ದೆ. ಹೋಗಿ ಹೋಗಿ ನೀ ಬಂದ್ಬುಟ್ಯಾ ನನ್ ಅಭಿಮಾನಿ. ತಡೆ, ಒಂದ್ಗಳ್ಗು ನಿಲ್ಲು ಹಾಕ್ಕಂಡ್ಬರ್ತೆ’ ಎಂದು ಮಂಡಿಗೆ ಕೈಕೊಟ್ಟು ಎದ್ದು ಕೂತಲ್ಲೆ ಕೂತು ಜುಂಗುರು ಹಿಡಿದ ಕಾಲನ್ನು ಕುಂಟುತ್ತ ನಡೆದಾಗ ತಾನು ತನ್ನವರೆನ್ನದೆ ಎಲ್ಲರನ್ನೂ ಅಪ್ಪಿ ನಡೆದ ಅತ್ತೆ ಥೇಟ್ ‘ಅಳುವ ಕಡಲೊಳು ತೇಲಿ ಬಂತು ನಗೆಯ ಹಾಯಿ ದೋಣಿ’ ಎಂಬ ಅಡಿಗರ ಕಾವ್ಯದ ಸಾಕಾರ ರೂಪದಂತೆ ಕಂಡಳು.

ಈಗಿನ್ನೂ ಮೊನ್ನೆ ಮೊನ್ನೆ ಅತ್ತೆಯನ್ನು ಬಹಳ ವರ್ಷಗಳ ನಂತರ ನೋಡುವ ಅವಕಾಶ ಸಿಕ್ಕಿತು. ಅದೇ ನಗೆಯ ಎದುರುಗೊಳ್ಳುವಿಕೆ. ಅಪ್ಪಿಕೊಂಡಳು ಪ್ರೀತಿಯೇ ಬಂದು ಅಪ್ಪಿಕೊಂಡಂತೆ.
‘ಅತ್ತೆ ಆರಾಮಿದ್ಯಾ? ಬಗೇಲಿ ದಪ್ಪ ಆಗ್ಬಿಟ್ಟಿದ್ಯಲೆ?’
‘ಹೌದೆ ನಿನ್ನತ್ತೆಗೇನ್ ಪ್ರಾಯಾ ನಿನ್ನಂಗೆ ಬಳ್ಕೂಕೆ. ಈಗೆ ಮೊದ್ಲನಂಗೆ ಕೆಲ್ಸ ಮಾಡೂಕಾಗುದಿಲ್ವೆ.
‘ಈ ವಯಸ್ನಲ್ಲೆಂತಾ ಕೆಲ್ಸ ಅತ್ತೆ, ಒಳ್ಗೆ ಹೊರ್ಗೆ ಓಡಾಡ್ಕಂಡಿದ್ರಾಯ್ತು ಅದೇ ಖುಷಿ’
‘ಸುಳ್ ಹೇಳ್ದ್ರೆ ನಂಗೆ ಪಾಪ ಬರೂದು ತಂಗಿ, ಮನೇಲಿ ಎಲ್ರೂ ನಂಗಷ್ಟೇ ಪ್ರೀತಿ ಮಾಡ್ತ್ರು. ನಂಗೇ ಕುಂತ್ಕಂಡುಂಬೂಕೆ ಬೇಜಾರು’
‘ನಿಂಗ್ ಪ್ರೀತಿ ಮಾಡ್ದೆ ಏನಾರು ಅಂದ್ರೆ ಹೇಳ್ದವ್ರಗೆ ಪಾಪ ಬರೂದು ನೋಡು, ಖುಷ್‍ಖುಷ್ಯಾಗಿರು’.
‘ಇನ್ನೆಷ್ಟ್ ವರ್ಷ ಎಂಬತ್ತಾರು ವರ್ಷ ಆಯ್ತು. ಎಲ್ಲರೂ ಬೇಕುಬೇಕು ಹೇಳ್ಬೇಕಾದ್ರೆ ಹೋಗ್ಬುಡ್ಬೇಕೆ’
ವಯಸ್ಸನ್ನೇ ಮರೆಸುವಂತೆ ಸೆರಗ ಬಾಯಿಗೊತ್ತಿದ ಅತ್ತೆಯ ಅಗಲ ಹಣೆಯಲ್ಲಿ ದಪ್ಪ ಕೊರಳಲ್ಲಿ ನಾಲ್ಕಾರು ನೆರಿಗೆಗಳು ಬಿಟ್ಟರೆ ಅವಳ ಜೀವ ಚೈತನ್ಯ ಎಳ್ಳಷ್ಟೂ ಬತ್ತಿದಂತೆ ಕಾಣಲಿಲ್ಲ. ಎದುರು ನಾವೇ ನಾಚಬೇಕಷ್ಟೇ.
ಬಂದ ಬೆನ್ನಲ್ಲೇ ಅತ್ತೆ ನಮ್ಮನ್ನಗಲಿದಳೆಂದರೆ ಹೇಗೆ ನಂಬುವುದು? ಈ ಸಾವು ಸುಳ್ಳಾಗಲಿ ಎಂದುಕೊಂಡರೂ ಸಾವು ಸತ್ಯವೆ. ಆಕಸ್ಮಿಕವಾದರೂ ಒಮ್ಮೆ ಅವರನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯವೆನಿಸುತ್ತಿದೆ. ಅಂದು ಬರುವಾಗ ಆದಷ್ಟು ಬೇಗ ಅತ್ತೆಗೆ ಒಂದು ಹೊಸಾ ಸೀರೆಯನ್ನು ಉಡಿಸಬೇಕೆಂದುಕೊಂಡಿದ್ದೆ. ಆದರೆ ಸೀರೆಯ ನೆನಪಷ್ಟೆ ಉಳಿಸಿ ಅತ್ತೆ ಹೋಗಿ ಬಿಟ್ಟರು, ಬೇಕು ಬೇಕು ಎನ್ನುವಾಗಲೆ.
ಈಗ ಸೀರೆ ಆರಿಸಲು ವಿನಾಯಕ ಸ್ಟೋರ್‍ಗೆ ಹೋಗಿ ಸೀರೆ ಬಿಕ್ಕಿಕೊಂಡು ಯಾವುದನ್ನಾಯಲೆಂದು ಮುಟ್ಟಿ ಮುಟ್ಟಿ ತಲೆಕೆಡಿಸಿಕೊಂಡು ಕುಳಿತಾಗ ಅತ್ತೆ ಮಧ್ಯೆ ನಿಂತು ‘ನಮ್ಮನೆ ಅವ್ರ ಸಾಟಿ ಸೀರೇನಾ?’ ಎಂದು ನಕ್ಕಂತೆ ಭಾಸವಾಗಿ ಎಲ್ಲ ಸೀರೆಯೂ ಅತ್ತೆಯಷ್ಟೇ ಚಂದವಾಗಿ ಕಂಡು ಎಲ್ಲವನ್ನೂ ಬಾಚಿ ತಬ್ಬಿಕೊಂಡು ಬಿಡಬೇಕೆನಿಸುತ್ತದೆ, ಪಕ್ಕಾ ನನ್ನ ಅತ್ತೆಯನ್ನು ಅಪ್ಪಿಕೊಂಡಂತೆ.

‍ಲೇಖಕರು nalike

May 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. hanumakshi gogi

    ಅಪ್ಪಟ ಚೆಲುವಿನ ಜೀವನ್ಮುಖಿ ಕರಾವಳಿ ಚೆಲುವೆ ನಮ್ಮ ಸರೋಜತ್ತೆಯನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿತು ಮಾಧವಿಯವರ ಬರಹ. ಖುಷಿಯಾಯಿತು

    ಪ್ರತಿಕ್ರಿಯೆ
  2. Vinod

    ಎಷ್ಟು ಚಂದವಾಗಿ ಬರ್ದಿದ್ದೀರ್ರೀ!! ಬೊಂಬಾಟಾಗಿದೆ..ಓದ್ತಾ ಓದ್ತಾ ವೈದೇಹಿ ಅವರ ಒಂದು ಕತೆ ಜ್ಞಾಪಕ ಬಂತು..
    ಇದು High Quality ..Caliber ಬರಹ..ಪ್ರತಿಭೆ ಪಾಂಡಿತ್ಯ..empathy ಇರುವ, ಅನುಭವಿಸಿ ಬರೆಯುವ ಬರವಣಿಗೆ.
    ಈಗ ಗೊತ್ತಾಯ್ತು..ನಾನು ಅವಧಿಗೆ ಕಳಿಸಿದ ಕತೆ/ ಲೇಖನ ಯಾವುದೂ ಏಕೆ ಪ್ರಕಟಗೊಳ್ಳಲಿಲ್ಲಾ ಅಂತ..
    ಹೀಗೆ ಬರೀತಾ ಇರಿ..ನಿಮ್ಮ ಕತೆಗಳಿಂದ ನಮ್ಮನ್ನು ರಂಜಿಸುತ್ತಿರಿ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: