ಲಾಕ್ಡೌನ್ ಟೈಮಲ್ಲಿ ಫ್ರೀ?!

 ಎಸ್.ಜಿ.ಶಿವಶಂಕರ್

“ಹಲೋ?”
ಸುಬ್ಬು ಫೋನಿನಲ್ಲಿ ಹೆಣ್ಣು ಧ್ವನಿ ಕೇಳಿ ಬೆಚ್ಚಿದೆ! ಸುಬ್ಬು ಫೋನಿನಿಂದ ಸುಬ್ಬು ಫೋನ್ ಮಾಡಬೇಕು, ಆದರೆ ಕೇಳಿದ್ದು ಯಾರ ದನಿ? ಕೆಲವು ಕ್ಷಣಗಳ ನಂತರ ದನಿಯ ಗುರುತು ಸಿಕ್ಕಿತು. ಅದು, ಸುಬ್ಬು ಅರ್ಧಾಂಗಿ, ಶಾಲಿನಿ!
“ಹಲೋ? ಅತ್ತಿಗೆ ಏನು ಸಮಾಚಾರ?”
ಅತ್ತಿಗೆ ನನಗೆ ಫೋನ್ ಮಾಡಬೇಕು ಅಂದ್ರೆ ಏನೋ ತೊಂದರೆ ಇರಬೇಕು. ಬಹುಶಃ ಸುಬ್ಬು ಮನೆಯಲ್ಲಿ ಇಲ್ಲ. ಇದ್ದಿದ್ರೆ ಅತ್ತಿಗೆ ನನಗೆ ಫೋನ್ ಮಾಡುತ್ತಿರಲಿಲ್ಲ! ಆದರೆ ಮಾತಾಡಿದ್ದು ಸುಬ್ಬು ಪೋನಿನಿಂದ! ಸುಬ್ಬು ಜೀವನಾದ್ರೂ ಬಿಟ್ಟಾನು ಆದ್ರೆ ಫೋನು ಬಿಡೋನಲ್ಲ! ಅತ್ತಿಗೆ ಫೋನು ಮಾಡಿದ್ದು ವಿಚಿತ್ರ ಎನ್ನಿಸಿತು!
“ಹಲೋ ಅರ್ಜೆಂಟಾಗಿ ನಮ್ಮನೆಗೆ ಬನ್ನಿ. ಇದ್ದ ಕೆಲಸ ಇದ್ದಲ್ಲೇ ಬಿಟ್ಟು ತಕ್ಷಣ ಬನ್ನಿ! ಇದು ಮಾನ ಮರ್ಯಾದೆ ವಿಷಯ” ಮೆಟ್ಟಿಬಿದ್ದೆ! ಕೇಳಿದ್ದು ತಪ್ಪಿರಬಹುದೆನ್ನಿಸಿ, ಕಿವಿಗೆ ಬೆರಳು ಹಾಕಿ ಸ್ವಚ್ಛ ಮಾಡಿಕೊಂಡೆ! ಅತ್ತಿಗೆ ಮಾತಿಗೆ ಪರಮಾಶ್ಚರ್ಯವಾಯಿತು ಇದ್ದದ್ದು ಇದ್ದ ಹಾಗೆ ಬಿಟ್ಟು ತಕ್ಷಣ ಬನ್ನಿ ಅಂದರಲ್ಲ? ಅದೂ ಮರ್ಯಾದೆ ಹೋಗೋ ವಿಷಯ? ಯಾರ ಮರ್ಯಾದೆ ಹೋಗುತ್ತಿದೆ..? ನನ್ನದೇ..? ಇಲ್ಲಾ ಸುಬ್ಬೂದೇ..ಇಲ್ಲ ಪಲ್ಲಿ ಮಗ ಏನಾದ್ರೂ ಲೌವ್ವು ಗಿವ್ವೂಂತ ಫಜೀತಿ ಮಾಡ್ಕೊಂಡಿದಾನಾ? ಯೋಚನೆ ಮಾಡಿದೆ!
“ಏನು ಮಾಡ್ತಾ ಇದ್ದೀರಾ? ಹೊರಟರಾ?”
“ಸುಬ್ಬು ಹುಷಾರಾಗಿದ್ದಾನೆ ತಾನೇ?”
ಅವರಿಗೇನೂ ದಾಡಿ! ಗುಂಡುಕಲ್ಲು! ಆಗಿರೋದು ನಮಗೇ.. ಅವರನ್ನ ಕಟ್ಕೊಂಡ ತಪ್ಪಿಗೆ! ಮಾತಲ್ಲಿ ಟೈಮ್ ವೇಸ್ಟ್ ಮಾಡಬೇಡಿ ತಕ್ಷಣ ಬನ್ನಿ”
“ಅಲ್ಲ ಸುಬ್ಬು ಎಲ್ಲಿದ್ದಾನೆ?” ವಿಷಯದ ಹಿಂದು ಮುಂದು ತಿಳಿಯದೆ ಕನಲಿದೆ.
“ಕೋರೋನ ಲಾಕ್ಡೌನ್ ಟೈಮಲ್ಲಿ ಇನ್ನೆಲ್ಲಿಗೋ ಹೋಗ್ತಾರೆ? ಮನೆಯಲ್ಲೇ ಕುಕ್ಕುರು ಬಡ್ದಿದ್ದಾರೆ! ಮುಸುಕು ಹಾಕೊಂಡು ಕೂತಿದಾರೆ! ನೀವು ಟೈಮ್ ವೇಸ್ಟ್ ಮಾಡ್ತಿದ್ದೀರ! ಇಲ್ಲಿ, ನಮಗೆ ತಲೆ ಹೋಗ್ತಿದ್ದೆ”
ಅತ್ತಿಗೆ ಮಾತಿಗೆ ಕೊರೊನಾ ಲಾಕ್ಡೌನ್ ಟೈಮಲ್ಲಿ ದಂಡಿಯಾಗಿ ಬರುತ್ತಿದ್ದ ಕನ್ನಡ ಸಿನಿಮಾಗಳು ನೆನಪಾದುವು. ಯಾವನೋ ದುರುಳ ಸುಬ್ಬು ಸಂಸಾರ ನಾಶ ಮಾಡಲು ಹೊರಟಿದ್ದಾರೆ… ಇಲ್ಲದಿದ್ದರೆ ಅತ್ತಿಗೆ ತಲೆ ಹೋಗ್ತಾ ಇದೆ ಅಂತ ಹೇಳ್ತಿರಲಿಲ್ಲ!!
“ಹೊರಟ್ರಾ? ಇಲ್ಲವಾ?” ಅತ್ತಿಗೆ ಮಾತು ಪ್ರಜ್ಞೆ ಚುಚ್ಚಿತು!
“ಇಲ್ಲ ಹೊರಟೆ”
“ಇಲ್ಲ? ಹೊರಟೆ? ಇವೆರಡರಲ್ಲಿ ಯಾವುದು?”
“ಹೊರಟೆ” ಎನ್ನುತ್ತಲೇ ಮನೆಯಿಂದ ಹೊರಬಿದ್ದೆ. ನಾನು ಆಚೆ ಕಾಲಿಟ್ಟಿದ್ದು ಕಿಟಕಿಯಿಂದ ನೋಡಿದ ನನ್ನವಳು ಕೂಗಿದಳು.
“ಏನ್ರೀ? ಆಚೆ ಹೋಗ್ತಾ ಇದ್ದೀರ? ಶರ್ಟ್ ಆದ್ರೂ ಹಾಕಿಕೊಂಡು ಹೋಗಿ”
ನಾನು ಅಕ್ಷರಶಃ ಶಾಲಿನಿ ಅತ್ತಿಗೆಯ ಮಾತನ್ನು ಪಾಲಿಸಲು ಹೊರಟಿದ್ದೆ. ಮೈಮೇಲೆ ಶರ್ಟ್ ಇಲ್ಲದಿರುವುದರ ಅರಿವಿಲ್ಲದೆ ಬೀದಿಗಿಳಿದಿದ್ದೆ! ವಾಪಸ್ಸು ಬಾಗಿಲಿಗೆ ಓಡಿ ಮನೆಯವಳು ಕೊಟ್ಟ ಶರ್ಟ್ ಧರಿಸಿ ಆತುರದಿಂದ ಸುಬ್ಬು ಮನೆ ಕಡೆ ಹೊರಟೆ.
ಎರಡು ಬೀದಿ ದಾಟಿದರೆ ಸುಬ್ಬು ಮನೆ.
ಸುಬ್ಬು ನನ್ನ ಚಡ್ಡಿ ದೋಸ್ತ್. ಸುಬ್ಬುಗೂ, ಅವನ ಪತ್ನಿಗೂ, ಮಕ್ಕಳಿಗೂ ಆಗಾಗ್ಗೆ ತಾತ್ವಿಕ ಹೋರಾಟಗಳು, ತಾಕಲಾಟಗಳು, ಹಿತಾಸಕ್ತಿಗಳ, ಹಗ್ಗಜಗ್ಗಾಟಗಳ ಬಿರುಗಾಳಿ ಬೀಸುತ್ತಿತ್ತು! ಕೆಲವೊಮ್ಮೆ ಅದು ಬೆಂಕಿಯಾಗಿ ಉರಿಯುತ್ತಿತ್ತು! ಅಂಥ ಪರಿಸ್ಥಿತಿಯಲ್ಲಿ ನಾನು ಬೆಂಕಿ ಆರಿಸುವ ಕೆಲಸ ಮಾಡುತ್ತಿದ್ದೆ. ಕೆಲವೊಮ್ಮೆ ಅವರ ನಡುವಿನ ಜಗಳಕ್ಕೆ ಅಂಪೈರ್ ಆಗುತ್ತಿದ್ದ್ದೆ!
ಅತ್ತಿಗೆಯ ಮಾತನ್ನು ನನ್ನ ಜೊತೆಗೆ ನನ್ನ ಕಾಲುಗಳೂ ಪಾಲಿಸುತ್ತಿದ್ದವು. ನಡಿಗೆ ವೇಗ ಹೆಚ್ಚಿತ್ತು. ಕಾರ್ಪೊರೇಷನಿನ್ನವರು ರಸ್ತೆ ಮಧ್ಯೆ ಎಬ್ಬಿಸಿದ್ದ ಚೈನಾ ಗೋಡೆಯಂತ ಸ್ಪೀಡ್ ಬ್ರೇಕರ್ ಎಡವಿ ಮುಗ್ಗರಿಸಿ ಬಿದ್ದೆ! ‘ಬಿದ್ದರೂ ಸರಿ ಎದ್ದು ಬನ್ನಿ’ ಎಂದು ಅತ್ತಿಗೆಯ ಆಶರೀರವಾಣಿ ಮೊರೆಯಿತು.
ಎದ್ದು ಧೂಳು ಕೊಡವಿಕೊಂಡು ಹಟ ಬಿಡದ ತ್ರಿವಿಕ್ರಮನಂತೆ ಸುಬ್ಬು ಮನೆ ಕಡೆಗೆ ಧಾವಿಸಿದೆ. ಸುಬ್ಬು ಮನೆ ಗೇಟಿನಾಚೆ ಒಬ್ಬರು ಹೆಂಗಸರು ಸುಬ್ಬು ಮಗ ಪಲ್ಲಿ ಯಾನೆ ಪ್ರಹ್ಲಾದನ ಜೊತೆ ಮಾತನಾಡುತ್ತಿದ್ದರು.
“ಏನೋ ಪಲ್ಲಿ? ನಿಮ್ಮಮ್ಮ ಅರ್ಜೆಂಟಾಗಿ ಬರೋಕೆ ಹೇಳಿದ್ರಲ್ಲ? ಸುಬ್ಬು ಎಲ್ಲಿ?” ಎಂದು ಕೇಳಿದೆ. ನನ್ನ ಮಾತು ನಿರ್ಲಕ್ಷಿಸಿ ಆ ಹೆಂಗಸಿಗೆ ಪಲ್ಲಿ ಹೇಳಿದ.
“ನೋಡಿ ಆಂಟಿ, ಸುಬ್ಬು ಅವರು ಮನೇಲಿಲ್ಲ”
“ಕೊರೋನಾ ಲಾಕ್ಡೌನ್ ಟೈಮಲ್ಲಿ ಎಲ್ಲಿಗ್ರಿ ಹೋಗೋಕೆ ಆಗುತ್ತೆ? ಸುಳ್ಳು ಹೇಳ್ತಾ ಇದ್ದೀರಿ ಅವರು ಮನೆಯಲ್ಲೇ ಇದ್ದಾರೆ ಅವರು ಈಚೆ ಬರೋತನಕ ಕಾಯುತ್ತೇನೆ ಗೇಟ್ ತೆಗೆಯಿರಿ”
“ಏನೋ ಪಲ್ಲಿ? ಇವರು ಯಾರು?”
“ಅಯ್ಯೋ ಅಂಕಲ್! ಸುಮ್ಮನೆ ಒಳಗೆ ಹೋಗಿ ಎಲ್ಲ ಗೊತ್ತಾಗುತ್ತೆ!”
ಅವನು ಮಾತು ವಿಚಿತ್ರವಾಗಿತ್ತು! ಇರಲಿ, ಒಳಗೆ ಹೋದಾಗ ವಿಷಯ ಗೊತ್ತಾಗುತ್ತೆ ಎಂದು ಗೇಟು ತೆಗೆದು ಒಳಗೆ ನಡೆದೆ. ನನ್ನ ಹಿಂದೆಯೇ ಆ ಹೆಂಗಸು ಬುಡುಬುಡು ನಡೆದು ನನಗಿಂತ ಮುಂಚೆ ಮನೆ ತಲುಪಿದ್ದರು.
ಮನೆಯೊಳಗೆ ಕಾಲಿಟ್ಟಾಗ ಆಚೆ ವರಾಂಡದ ಕುರ್ಚಿಗಳಲ್ಲಿ ನಾಲ್ಕು ಜನ ಹೆಂಗಸರು ಕುಳಿತಿದ್ದರು.
ನನ್ನನ್ನು ನೋಡುತ್ತಲೇ ಎದ್ದು ನಿಂತು ಕೇಳಿದರು.
“ನೀವೇನಾ ಸುಬ್ಬು? ಸುಭಾಷ್?”
“ಇಲ್ಲ, ನಾನು ಸುಬ್ಬೂ ಅಲ್ಲ..” ನಾನು ಪೆಚ್ಚಾಗಿದ್ದೆ. ಅಲ್ಲ.. ಸುಬ್ಬು ಒಳಗಿರುವಾಗ ನನ್ನನ್ನೇಕೆ ಇವರು ಸುಬ್ಬು ಎಂದು ತಿಳಿದರು?
“ಏ.. ಇವರಲ್ಲ ಬಿಡಿ.. ಇವರ ತಲೆ ನೋಡಿ.. ಪೂರಾ ಬೆಳ್ಳಗಾಗಿದೆ..”
ಒಬ್ಬಾಕೆಗೆ ನನ್ನ ತಲೆ ಮೇಲೆ ಕಣ್ಣು ಬಿದ್ದಿತ್ತು.“ಹೌದು, ಫೋಟೋದಲ್ಲಿ ಸುಬ್ಬು ಅವರದು ಕಪ್ಪು ತಲೆ”
“ಇವರು ತಲೆ ಕೂಡ ಬಾಚಿಕೊಂಡಿಲ್ಲ.. ಹೇರ್‍ಕಟ್ಟೂ ಇಲ್ಲ”
ನಾನು ತಲೆ ಮುಟ್ಟಿಕೊಂಡೆ! ಹೌದು ಹೊರಡುವ ಅರ್ಜೆಂಟಲ್ಲಿ ತಲೆ ಕೂಡ ಬಾಚಿರಲಿಲ್ಲ! ಲಾಕ್ಡೌನಿಂದ ಹೇರ್‍ಕಟ್ ಮಾಡಿಸಿರಲಿಲ್ಲ!
“ಅಯ್ಯೋ..ಇವರ ಕಣ್ಣು ನೋಡಿ..ಲಾಕ್ಡೌನ್ ಕಾಲದಲ್ಲಿ ಟಿವೀಲಿ ಬರೋ ಎಲ್ಲಾ ಸಿನಿಮಾ ನೋಡಿರೋ ಹೇಗೆ ಊದಿಕೊಂಡಿದೆ ನೋಡಿ”
ಅವರುಗಳು ತಲೆಗೊಂದರಂತೆ ಮಾತಾಡುತ್ತಿದ್ದರು.


“ಹಲೋ..? ಯಾರು ನೀವು?” ಗದರಿದೆ.
“ನಾವು ಯಾರಾದ್ರೂ ಇರ್ಲಿ ನೀವು ಯಾರು?”
“ನಾನು ಸುಬ್ಬು ಸ್ನೇಹಿತ..”
“ಹಾಗಿದ್ರೆ ಅವರನ್ನ ಕರೀರಿ?”
“ಕರೀತೀನಿ. ಆದ್ರೆ ಯಾಕೆ?”
“ಇನ್ಯಾಕೆ? ಮದ್ವೆ ಮಾಡ್ಕೊಳ್ಳೋಕೆ”
ಅವರಲ್ಲಿ ಒಬ್ಬಾಕೆ ಹೇಳಿದಳು. ಅವರು ಮುಸಿಮುಸಿ ನಕ್ಕರು. ಅವರಲ್ಲಿ ಮೂವರು ನಡುವಯಸ್ಸಿನವರು. ಇಬ್ಬರು ಮಾತ್ರ ಯುವತಿಯರು! ಅವರ ಮಾತು ಕೇಳಿ ಕಕ್ಕಾಬಿಕ್ಕಿಯಾದೆ! ಮದುವೆ? ಸುಬ್ಬೂಗೆ..? ಪಲ್ಲೀಗೆ ಮದುವೆ ಮಾಡೋ ವಯಸ್ಸು! ಈಗ ಸುಬ್ಬೂಗೆ ಮದುವೇನಾ..?
“ಅವರಿಗಾಗಲೇ ಮದ್ವೆಯಾಗಿದೆ..” ಎಚ್ಚರಿಸಿದೆ.
“ಪರ್ವಾಗಿಲ್ಲ”
“ಅವರಿಗೆ ಇಬ್ಬರು ಮಕ್ಕಳಿದ್ದಾರೆ..”
“ಅವರ ಪಾಡಿಗೆ ಅವರು ಇರ್ತಾರೆ! ನಿಮ್ಮದೇನು ಸಮಸ್ಯೆ?”
“ನೀವು ಇವರ ಹತ್ರ ಯಾಕೆ ಮಾತಾಡ್ತಿದ್ದೀರ? ಒಳಗೆ ಹೋಗಿ ಅಂಕಲ್” ಪಲ್ಲಿ ಒಳಗೆ ಬರುತ್ತಾ ಗುರ್ರೆಂದ!
ಪಲ್ಲಿ ಎಂದೂ ಹೀಗೆ ನನ್ನ ಮೇಲೆ ಗುರ್ರೆಂದಿರಲಿಲ್ಲ! ಏನೋ ಹೆಚ್ಚೂಕಮ್ಮಿಯಾಗಿದೆ ಎನ್ನುವುದು ಸ್ಪಷ್ಟವಾಗಿತ್ತು! ಈ ಹೆಂಗಸರು ಸುಬ್ಬುವನ್ನೇ ಮದ್ವೆಯಾಗುವುದಕ್ಕೆ ಬಂದಿದ್ದೀವಿ ಅನ್ನುತ್ತಿರೋದು ಹುಚ್ಚುತನ ಎನ್ನಿಸಿತು. ರಿಟೈರ್ ಆದ ಮುದುಕನನ್ನ ಯಾರು ಮದ್ವೆಯಾಗ್ತಾರೆ..? ಇದಕ್ಕೆ ಉತ್ತರ ಶಾಲಿನಿ ಅತ್ತಿಗೆ ಇಲ್ಲಾ ಸ್ವತಃ ಸುಬ್ಬು ಹೇಳಬಲ್ಲರು ಎಂದುಕ್ಕೊಳ್ಳುತ್ತಾ ಡ್ರಾಯಿಂಗ್ ರೂಮಿಗೆ ಕಾಲಿಟ್ಟೆ.
“ಅಂತೂ ಕೊನೆಗೂ ಬಂದ್ರಾ..? ಇವರು ಮಾಡ್ಕೊಂಡಿರೋ ಫಜೀತಿ ಹೇಳೋಕಾಗೊಲ್ಲ! ಮಾನ-ಮರ್ಯಾದೆ ಎಲ್ಲಾ ಮಣ್ಣು ಪಾಲು ಮಾಡಿಬಿಟ್ಟರು” ಶಾಲಿನಿ ಅತ್ತಿಗೆ ಕಣ್ಣಲ್ಲಿ ಉತ್ತರದ ಗಂಗೆ, ದಕ್ಷಿಣದ ಕಾವೇರಿ ಇಬ್ಬರೂ ಒಟ್ಟಿಗೇ ಕಾಣಿಸಿದರು!
“ಸುಬ್ಬು ಎಲ್ಲಿ..?”
ಅತ್ತಿಗೆಯ ಕಣ್ಣೀರ ಪ್ರವಾಹಕ್ಕೆ ಮಾತಿನ ಡ್ಯಾಮ್ ಕಟ್ಟಿದೆ.
“ಒಳಗೆ ರೂಮಲ್ಲಿ ಮುಖ ಮುಚ್ಕೊಂಡು ಕೂತಿದಾರೆ..ಹೋಗಿ ಎಲ್ಲಾ ಅವರ ಬಾಯಲ್ಲೇ ಕೇಳಿ”
ಅತ್ತಿಗೆಯ ಮೈಮೇಲೆ ಉಗ್ರ ರೂಪದ ಹೆಣ್ಣು ದೇವತೆಯ ಆವಾಹನೆಯಾದಂತಿತ್ತು!
“ಅಲ್ಲಾ..ಏನಿದೆಲ್ಲಾ..? ಅಚೆ ಇರೋ ಆ ಹೆಂಗಸರು ಯಾರು..? ಅವರು ಏನೋ ವಿಚಿತ್ರವಾಗಿ ಮಾತಾಡ್ತಿದ್ದಾರಲ್ಲ?”
“ಎಲ್ಲ ಸಚಿತ್ರವಾಗಿ ಹೇಳ್ತಾರೆ ನಿಮ್ಮ ಸ್ನೇಹಿತರು” ಅತ್ತಿಗೆ ಕರಕರ ಹಲ್ಲು ಕಡಿದರು!
ಇಂತಾ ಸೀನು ಎಂದೂ ಕಂಡಿರಲಿಲ್ಲ! ಅತ್ತಿಗೆ ರೌದ್ರಾವತಾರಕ್ಕೆ ಬೆದರಿ ಸುಬ್ಬು ಇದ್ದ ರೂಮಿನೊಳಕ್ಕೆ ಹೋದೆ!
ಅತ್ತಿಗೆ ಮಾತು ನಿಜವಾಗಿತ್ತು! ಸುಬ್ಬು ಆಕಾಶ ತಲೆ ಮೇಲೆ ಬಿದ್ದವನಂತೆ ತಲೆಗೆ ಕೈಕೊಟ್ಟು ಕೂತಿದ್ದ.
“ಏನೋ..ಇದೆಲ್ಲಾ..?” ಸಹಾನುಭೂತಿ ವ್ಯಕ್ತಪಡಿಸಿದೆ.
“ಏನಂತಾ ಹೇಳ್ಲಿ..?” ಸುಬ್ಬು ಕನಲಿದ. ಟೆಸ್ಟ್ ಮ್ಯಾಚಲ್ಲಿ ಮೊದಲ ಬಾಲಿಗೇ ಬೋಲ್ಡ್ ಆದ ಸ್ಟಾರ್ ಬ್ಯಾಟ್ಸ್ಮನ್ನಿನಂತೆ ಕಂಡ!
“ಏನೋ ಫಜೀತಿ ಮಾಡ್ಕೊಂಡಿದ್ದೀಯ ಅಲ್ವಾ..?”
“ಅದನ್ನ ಯಾವ ಬಾಯಿಂದ ಹೇಳ್ಲಿ…?”
“ಎಲ್ರಿಗೂ ಇರೋದೊಂದೇ ಬಾಯಿ. ಅದರಿಂದಾನೇ ಹೇಳು”
“ಇಲಿಗೆ ಪ್ರಾಣ ಸಂಕಟವಾದ್ರೆ ಬೆಕ್ಕಿಗೆ ಚೆಲ್ಲಾಟವಂತೆ” ಸುಬ್ಬು ಸೋತು ಸುಣ್ಣವಾದವನಂತೆ ಕನಲಿದ.
“ನಾನು ಹುಲಿ ಅಂತ ಕೊಚ್ಕೋತಿದ್ದೆ? ಈಗ ಇಲಿಯಾಗಿಬಿಟ್ಟೆಯಾ..?” ಸುಬ್ಬುವನ್ನು ಹಂಗಿಸುವ ಅವಕಾಶ ಬಿಡಲಿಲ್ಲ! ಸದಾ ನನ್ನನ್ನೇ ಹಂಗಿಸುತ್ತಿದ್ದವನ ಮೇಲೆ ಸೇಡು ತೀರಿಸಿಕೊಂಡೆ!
“ಏನೋ..ಮಾಡೋಕೆ ಹೋಗಿ ಏನೋ ಮಾಡ್ಕೊಂಡ್ಬಿಟ್ಟೆ..” ಸುಬ್ಬು ಹಲುಬಿದ.
“ಆಚೆ ಇರೋರು ನಿನ್ನ ಮದ್ವೆ ಮಾಡ್ಕೊಳ್ಳೋಕೆ ಬಂದಿದ್ದೀವಿ ಅಂತಿದಾರೆ..?”
“ಅದು..ಅದು..?” ಸುಬ್ಬು ಬಡಬಡಿಸಿದ.
“ಅವರೆಲ್ಲಿ ಹೇಳ್ತಾರೆ..? ಹೇಳೋಕೆ ಮುಖ ಇದೆಯಾ..?”
ಶಾಲಿನಿ ಅತ್ತಿಗೆ ಕಾಫಿ ಕಪ್ಪು ಹಿಡಿದು ಬಂದು ನನ್ನೆದುರಿನ ಟೀಪಾಯ್ ಮೇಲೆ ಕುಕ್ಕಿದರು!
“ನನಗಿಲ್ಲವೇನೆ ಕಾಫಿ?” ಸುಬ್ಬು ಕೊರಗಿದ.
“ನಿಮಗೆ ಕಾಫಿ ಬೇರೆ ಕೇಡು. ಈಗ ಮಾಫಿ ಹೇಗೆ ಮಾಡಿಸ್ಕೊಬೇಕು ಯೋಚಿಸಿ. ಮಾಡ್ಕೊಂಡಿರೋ ಫಜೀತಿ ಹೇಗೆ ಸಾಲ್ವ್ ಮಾಡೋದೂಂತ ಯೋಚಿಸಿ”
“ಅದಕ್ಕೆ ಇವನಿದಾನಲ್ಲ…?” ಸುಬ್ಬು ಹೆದರುತ್ತಾ ಉಸುರಿದ.
“ಅಲ್ಲಾ..ಏನಾಗಿದೇಂತ ಹೇಳಬಾರದೆ ಸುಬ್ಬೂ..” ಹಿಂದೆ ಮುಂದೆ ತಿಳಿಯದೆ ನಾನು ಪರಿತಪಿಸಿದೆ.
“ಅವರೆಲ್ಲಿ ಹೇಳ್ತಾರೇ..? ನಾನು ಹೇಳ್ತೀನಿ. ಮೊನ್ನೆ ಬೆಳಗ್ಗೆ ಗಡದ್ದಾಗಿ ತಿಂಡಿ ತಿಂದು ಮಹಾಭಾರತ ನೋಡ್ತಾ ಕೂತಿದ್ದರು. ನೋಡ್ತಾ ನೋಡ್ತಾ ಮೊಬೈಲಲ್ಲಿ ಏನೋ ಮಾಡ್ತಿದ್ದರು. ಏನೋ ವಾಟ್ಸಪ್ ಇಲ್ಲಾ ಗೇಮೋ ಆಡ್ತಿರಬಹುದೂಂತ ನಾನೂ ಪಲ್ಲಿ ಸುಮ್ಮನಿದ್ದೊ.. ಆದ್ರೆ ಇವರೇನು ಮಾಡಿದಾರೆ ಗೊತ್ತಾ..?”
ಶಾಲಿನಿ ಅತ್ತಿಗೆ ಸುಬ್ಬುವನ್ನು ದುರುಗುಟ್ಟಿ ನೋಡಿದರು.
“ನೀನು ಹೇಳ್ದಿದ್ರೆ ಇವನಿಗೇನು ಗೊತ್ತಾಗುತ್ತೆ? ಇವನೇನು ಬೃಹಸ್ಪತೀನಾ..?”
“ಬೃಹಸ್ಪತಿ ಅಲ್ಲದಿದ್ರೂ ಪರ್ವಾಗಿಲ್ಲ. ನಿಮ್ಮ ತರಾ..ಎಡವಟ್ಟಲ್ಲ.. ನೋಡಿ ಇಂತಾ ಮಾತಿಗೆ ಇವರ ಹತ್ರ ಬರ ಇಲ್ಲ. ಮಹಾಭಾರತ ಮುಗಿಯೋದ್ರಲ್ಲಿ ಇವರಿಗೆ ಫೋನ್ ಕಾಲುಗಳು ಬರೋಕೆ ಶುರು ಮಾಡಿದವು..ಅವೂ ಎಲ್ಲಾ ಹೆಂಗಸರವು!”
“ಯಾರು ಅವರು..?”
“ಇವರು ಮೊಬೈಲಲ್ಲಿ ಏನೋ ಮಾಡ್ತಿದ್ರಲ್ಲ..? ಅದೇನು ಗೊತ್ತಾ? ಮೆಟ್ರಿಮೋನಿಯಲ್ ವೆಬ್‍ಸೈಟಿಗೆ ರಿಜಿಸ್ಟರ್ ಮಾಡ್ಕೊಂಡಿದ್ದರು! ಈ ವಯಸ್ಸಲ್ಲಿ..ಇವರಿಗೆ ಇದು ಬೇಕಿತ್ತಾ..? ಇರೋ ಹೆಂಡತಿ ಮಕ್ಕಳನ್ನ ಏನು ಮಾಡಬೇಕೂಂತಿದ್ದಾರೆ..? ಕೇಳಿ..”
“ಏನೋ ಸುಬ್ಬು ಇದು..?”
“ಕೊರೊನಾ ಲಾಕ್ಡೌನ್ ಇರೋವರೆಗೂ ಮೆಟ್ರಿಮೋನಿಯಲ್ ಸೈಟಲ್ಲಿ ರಿಜಿಸ್ಟ್ರೇಶನ್ ಫ್ರೀ ಅಂತ ಇತ್ತು..ಅದಕ್ಕೆ..”
ಸುಬ್ಬು ಕನಲಿದ.
ನನ್ನ ಕಿವಿಯನ್ನು ನಾನೇ ನಂಬಲಿಲ್ಲ! ಮೆಟ್ರಿಮೋನಿಯಲ್ ಸೈಟಲ್ಲಿ ರಿಜಿಸ್ಟ್ರೇಶನ್ ಫ್ರೀ ಎಂದು ಟಿವಿಯಲ್ಲಿ ಬರುತ್ತಿದ್ದ ಜಾಹೀರಾತು ನೋಡಿದ್ದೆ!
“ಕೇಳಿದ್ರಾ..? ಸುಮ್ಮನೆ ರಿಜಿಸ್ಟರ್ ಮಾಡಿದ್ರಂತೆ..ಈಗ ಆಚೆ ಇವರನ್ನ ಮದ್ವೆಯಾಗೋಕೆ ರೆಡಿಯಾಗಿ ಬಂದಿದ್ದಾರಲ್ಲ…ಅವರನ್ನ ಏನು ಮಾಡೋದು..?”
ಚಾಟಿ ಬೀಸಿದರು ಅತ್ತಿಗೆ.
“ಸಾರಿ ಕಣೆ..ಹೀಗಾಗುತ್ತೇಂತ ನಾನು ಅಂದ್ಕೊಂಡಿರಲಿಲ್ಲ…ನನ್ನಂತವನ್ನ ಯಾರೂ ಮದ್ವೆಯಾಗೋಕೆ ಬರೊಲ್ಲ ಅಂದ್ಕೊಂಡಿದ್ದೆ..”
ಸುಬ್ಬು ತಪ್ಪೊಪ್ಪಿಕೊಂಡಿದ್ದ.
“ಅಷ್ಟು ಹೇಳಿಬಿಟ್ರೆ..ಎಲ್ಲಾ ಸರಿಯಾಗುತ್ತಾ..? ಆ ಹೆಂಗಸರು ಇವರನ್ನ ನೋಡದೆ ಹೋಗೋದಿಲ್ಲಾಂತ ಪಟ್ಟು ಹಿಡಿದಿದ್ದಾರೆ.. ನಾವು ಇವರನ್ನ ಬಂಧನದಲ್ಲಿಟ್ಟಿದ್ದೀವೀಂತ ಪೊಲೀಸಿಗೆ ಫೋನ್ ಮಾಡಿದಾರೆ!”
“ನೀನೇನೂ ಯೋಚನೆ ಮಾಡಬೇಡ..ಇವನು ಅದಕ್ಕೇನಾದ್ರೂ ಉಪಾಯ ಹುಡುಕ್ತಾನೆ..ಅಲ್ಲವೇನೊ..?”
ಎಂದಿನಂತೆ ಸುಬ್ಬು ಅವನ ಸಮಸ್ಯೆಯನ್ನು ನನಗೇ ಗಂಟು ಹಾಕಿದ.
“ನಾನು ಟ್ಯೂಬ್‍ಲೈಟು, ಕೆಲಸಕ್ಕೆ ಬಾರದವನು..ಕವಿಯಲ್ಲ ಕಪಿ ಅಂತ ಅಣಕಿಸ್ತಿರ್ತೀಯ..?” ಜೋರು ಮಾಡಿದೆ.
“ಇನ್ಮೇಲೆ ಹಾಗೆ ಮಾಡೊಲ್ಲ. ಪ್ಲೀಸ್ ಏನಾದ್ರೂ ಮಾಡಿ ಅವರನ್ನ ಮನೆಯಿಂದಾಚೆ ಕಳಿಸು..”
“ಹೌದು, ನೀವೇ ಏನಾದ್ರೂ ಮಾಡಿ..ಬೀಸೋ ದೊಣ್ಣೆ ತಪ್ಪಿಸಿ..” ಅತ್ತಿಗೆ ಕೇಳಿದರು.
“ಆಗಲಿ..ನೀವು ಹೇಳಿದ್ರೀಂತ ಒಪ್ಪಿದೀನಿ..ಸುಬ್ಬು ನೀನು ಈಗ ಈಚೆ ಬಾ..”
“ಅಯ್ಯೋ..ಮತ್ತೆ ಅವರಲ್ಲಿ ಯಾರಾದ್ರೂ ಇವರನ್ನ ಮದುವೆಗೆ ಒಪಿಬಿಟ್ಟರೆ..?”
“ಹಾಗಾಗೊಲ್ಲ..ಆದ್ರೆ ನೀನು ಕೆಮ್ತಾ, ತಟ್ಟಾಡ್ತಾ ಈಚೆ ಬರಬೇಕು..”
“ಆಮೇಲೆ..?”
“ಉಳಿದದ್ದು ನನಗೆ ಬಿಡು..ಈಗ ಎದ್ದು ಆಚೆ ಬಾ..ಆದ್ರೆ ಮರೀದೆ ಕೆಮ್ಮುತ್ತಾ ಬಾ..”
ಇದ್ದಕ್ಕಿದ್ದಂತೆ ಅತ್ತಿಗೆ ಸುಬ್ಬು ಕಪಾಳಕ್ಕೆ ಬಾರಿಸಿದರು. ಸುಬ್ಬು ಕಣ್ಣು ಕೆಂಪಡರಿತು!
“ಯಾಕೆ ಹೊಡೆದೆ?” ಸುಬ್ಬು ಕನಲಿದ. ಕಣ್ಣಲ್ಲಿ ನೀರಿಳಿಯಿತು.
“ನಾಚುರಲ್ಲಾಗಿರುತ್ತೆ ಈಗ ಹೋಗಿ” ಅತ್ತಿಗೆ ಕೂಲಾಗಿ ಹೇಳಿದರು.
ಸುಬ್ಬು ಎದ್ದು ಕೆಮ್ಮುತ್ತಾ, ತಟ್ಟಾಡುತ್ತಾ ಈಚೆ ಬಂದ.
ಆಚೆ ಕುಳಿತಿದ್ದ ಐವರು ಮಹಿಳೆಯರು ಎದ್ದು ನಿಂತರು.
“ನೋಡಿ, ಇವರೇ ಸುಭಾಶ್ ನಾವು ಸುಬ್ಬೂಂತ ಕರೀತೀವಿ..”
“ನಾವೂ ಬೇಕಾದ್ರೆ ಹಾಗೇ ಕರೀತೀವಿ! ಆಗಬಹುದೆ?” ಎಂದರು ಇಬ್ಬರು!!
“ಆಗಬಹುದು. ಇವರಿಗೆ ನೆನ್ನೆ ಕೊರೋನಾ ಟೆಸ್ಟ್ ಆಗಿತ್ತು! ಈಗ್ತಾನೆ ರಿಸಲ್ಟ್ ಬಂದಿದೆ! ಪಾಸಿಟೀವ್ ಅಂತೆ! ಈಗ ಟ್ರೀಟ್ಮೆಂಟಿಗೆ ಕರ್ಕೊಂಡು ಹೋಗ್ತಿದ್ದೀವಿ..ನಿಮ್ಮಲ್ಲಿ ಯಾರು ಇವರನ್ನ ಮದ್ವೆಯಗೋಕೆ ಸಿದ್ಧರಿದ್ದೀರೋ ಅವರು ನಮ್ಮ ಜೊತೆ ಬನ್ನಿ..?” ನಾನು ಅವರನ್ನು ಕೇಳಿದೆ.
“ಏನು..? ಕೊರೊನಾನೇ..?” ಅವರೆಲ್ಲರ ಮುಖದಲ್ಲಿ ಭಯ ಕಾಣಿಸಿತು.
“ಹಾ..ಕೊರೊನಾ..ಪಾಸಿಟೀವ್”
“ಹೌದಾ..ಹಾಗಾದ್ರೆ ನಾವು ಇವರಿಗೆ ವಾಸಿಯಾಗಿ ಉಳಿದರೆ ಬರ್ತೀವಿ..”
ಅವರೆಲ್ಲ ಪರಸ್ಪರ ಮುಖ ನೋಡಿಕೊಂಡು ಒಬ್ಬೊಬ್ಬರಾಗಿ ಆಚೆ ಹೋದರು!
ಸುಬ್ಬು ಇನ್ನೂ ಕೆಮ್ಮುತ್ತಲೇ ಇದ್ದ.
“ಸಾಕು ನಿಲ್ಲಿಸೋ..ಅವರೆಲ್ಲಾ ಹೋದ್ರಲ್ಲ..?”
“ಆದ್ರೆ ಕೆಮ್ಮು ಹೋಗ್ತಿಲ್ಲ ಕಣೊ..”
ಸುಬ್ಬು ಮಾತಿಗೆ ಅತ್ತಿಗೆಯಾದಿಯಾಗಿ ಎಲ್ಲ ಬೆಚ್ಚಿದೆವು!

‍ಲೇಖಕರು nalike

May 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: