ಮಾತು ಮೀಟಿ ಹೋಗುವ ಹೊತ್ತು…

ಕಲಾ ಭಾಗ್ವತ್

ಆ ಬಿಸಿಲ ಝಳಕ್ಕೆ ನದಿ
ಬಡಕಲಾಗಿ ಹೆಸರು ಕಳೆದುಕೊಂಡಿದೆ
ಕೆರೆ ಬತ್ತಿ ಬಯಲಾಗಿದೆ
ನೆಲದ ಒಣಗಿದೆದೆಯ ಮೇಲೆಲ್ಲಾ
ಒಡಕು ಮೂಡಿದೆ
ಮೋಡಿ ಇದೇ ಎಂಬಂತೆ ಇಷ್ಟಗಲದ ಹೂ ಮಾತ್ರ
ಅಷ್ಟಗಲ ನಕ್ಕಿದ್ದಕ್ಕೆ ನಾಲ್ಕು ದಿಕ್ಕಿನಲ್ಲೂ ಪರಿಮಳ ಹುಟ್ಟಿದೆ

ಆ ಝಡಿ ಮಳೆಗೆ
ಗಿಡ ಮರದ ರೆಂಬೆ ಕೊಂಬೆಗಳೆಲ್ಲಾ
ಟೊಂಗೆ ಮುರಿದುಕೊಂಡು ಕಣ್ಣೆದುರೇ ಹರಡಿಕೊಂಡ
ಕನಸುಗಳೆಲ್ಲಾ ಚದುರಿ ಚಲ್ಲಾಪಿಲ್ಲಿ
ಪವಾಡ ಜರುಗಿದಂತೆ ಮನೆಯ ಮುಂದಿನ
ಅಂಗಳದ ಪುಟ್ಟ ಹೂ ಮಾತ್ರ ಬಿರು ಮಳೆಗೆ ಒಡ್ಡಿಕೊಳ್ಳುತ್ತಲೇ ಸುಖಿಸುತ್ತಿದೆ.
ಒಂದೇ ಒಂದು ದಳವೂ ಘಾಸಿಗೊಳ್ಳಲಿಲ್ಲ ಯಾಕೆ?
ಯಕ್ಷಪ್ರಶ್ನೆಯಾಗಿದೆ

ಈ ಹಾಳು ಚಳಿಗೆ
ಗದಗುಟ್ಟುವ ದೇಹ
ಮಂಜಿನ ಹೊದಿಕೆ ಹೊದ್ದ
ಬೆಟ್ಟ ಬಯಲು
ಒಡೆದ ಅಂಗೈ ಪಾದ
ಎದೆ ತೆರೆದುಕೊಂಡು ನಿಂತೇ ಇದೆ
ಕೋಮಲ ಹೂವು

ಕಾಲ ತಿರುವು ಮುರುವಾಗಿ
ಗಿರಿಗಿಟ್ಟಿ ಹೊಡೆದರೂ ಯಾವುದೂ
ಹೂ ಹೃದಯವ ಘಾಸಿಗೊಳಿಸುವುದಿಲ್ಲವಲ್ಲ
ಶುದ್ಧ ಹೂ ಮನಸ್ಸಿನ ಹೂ ಹೃದಯದ

ಮುಂದೆ ದೈತ್ಯ ಶಕ್ತಿಯೂ ತಲೆಬಾಗುತ್ತದಾ..?
ತರ್ಕಕ್ಕೆ ನಿಲುಕದ ಹೂವೊಂದು
ತೊನೆದಾಡುತ್ತಿದೆ ತನ್ನಷ್ಟಕ್ಕೆ.

ಇದು ಶ್ರೀಮತಿ ಸ್ಮಿತಾ ಅಮೃತರಾಜ್ ಅವರ ‘ಮಾತು ಮೀಟಿ ಹೋಗುವ ಹೊತ್ತು’ ಕವನ ಸಂಕಲನದ ಕವಿತೆ. ಶ್ರೀಮತಿ ಸ್ಮಿತಾ ಅಮೃತರಾಜ್ ಅವರು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಸಿರು ಬನದ ನಡುವೆ ಇರುವ ಸಂಪಾಜೆಯ ಕೃಷಿಕ ಮಹಿಳೆ. ಹಳ್ಳಿಯ ಬದುಕಿನ ಸಾರವನ್ನೆಲ್ಲ ಸೆರೆಹಿಡಿಯುತ್ತಾ ಅದರೊಂದಿಗೆ ತನ್ನ ಭಾವಗಳನ್ನು ಬೆಸೆಯುತ್ತ ಕವಿತೆ ಪ್ರಬಂಧಗಳ ಮೂಲಕ ಕಟ್ಟಿಕೊಡುವಲ್ಲಿ ಸಿದ್ಧಹಸ್ತರು.

ಸರಳ ಸಹಜ ನಿರೂಪಣೆಯೊಂದಿಗೆ ಎಷ್ಟೋ ವಿಷಯಗಳನ್ನು ಒಳಗೊಂಡು ಅಕ್ಷರಗಳನ್ನು ಪೋಣಿಸುವ ಇವರು ಒಬ್ಬ ಕವಿಯಾಗಿ ಪ್ರಬಂಧ ಕಾರರಾಗಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕನ್ನಡದ ಪ್ರಸಿದ್ಧ ಸಾಹಿತಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈಗಾಗಲೇ ಮೂರು ಕವನಸಂಕಲನ, ಎರಡು ಪ್ರಬಂಧ ಸಂಕಲನ, ಒಂದು ಕೃತಿ ವಿಶ್ಲೇಷಣ ಪುಸ್ತಕ ಪ್ರಕಟವಾಗಿವೆ. ಇನ್ನೊಂದು
ಅಂಕಣ ಬರಹ ಕೃತಿ ಅಚ್ಚಿನ ಮನೆಯಲ್ಲಿದೆ.

ಮನಸ್ಸು ಮುದುಡಿದೆ, ಕಲ್ಲಾಗಿದೆ, ಮಡುಗಟ್ಟಿದೆ, ಇಂತಹ ಸಾಮಾನ್ಯ ನುಡಿಗಟ್ಟುಗಳು ಸಮಾಜದಲ್ಲಿ ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ‘ಮನಸ್ಸು ಹೂವಾಗಿದೆ’ ಎಂಬ ಶೀರ್ಷಿಕೆ ಏನೋ ಕುತೂಹಲ, ಉತ್ಸಾಹ ಮೂಡಿಸುವಂತದ್ದು. ಈ ಕವಿತೆಯಲ್ಲಿ ಮೌನದಲ್ಲಿ ಅರಳಿದ ಅಂಗಳದ ಪುಟ್ಟ ಹೂವಿನ ಮೂಲಕ ಕವಿ ಅನೇಕ ಸಂಗತಿಗಳನ್ನು ತೆರೆದಿಡುತ್ತಾರೆ. ಕವಿತೆಯ ಆರಂಭ ಪ್ರಸ್ತುತದಲ್ಲಿ ನೈಸರ್ಗಿಕ ವಿಕೋಪಗಳಿಂದ ಪ್ರಕೃತಿಯಲ್ಲಿ ಉಂಟಾದ ವಿಷಾದನೀಯ ಬದಲಾವಣೆಗಳ ಭೌತಿಕ ನೋಟದಂತಿದೆ. ಆದರೆ ಕವಿತೆಯಲ್ಲಿ ಮುಂದುವರಿದ ಸಾಲುಗಳೊಂದಿಗೆ ಜೋಡಿಸಿ ಓದುವಾಗ ಮಾನವನಲ್ಲಾದ ಗುಣಸ್ವಭಾವಗಳ ಬದಲಾವಣೆಯನ್ನು ಇವು ಸೂಕ್ಷ್ಮವಾಗಿ ತಿಳಿಸುತ್ತವೆ.

ಮನುಷ್ಯ ಸ್ವಭಾವದ ಎರಡು ಮಗ್ಗಲುಗಳು ಮುಖಾಮುಖಿಯಾಗಿವೆ. ಬಿಸಿಲು ಝಳ, ಝಡಿ ಮಳೆ, ಹಾಳು ಚಳಿ, ಇವು ಧ್ವನಿಸುವ
ಸ್ವಭಾವಗಳು ಒಂದು ಬಗೆಯದಾದರೆ ನದಿ, ಕೆರೆ, ಹೂವು ಇವು ಇನ್ನೊಂದು ಬಗೆಯ ಸ್ವಭಾವಗಳನ್ನು ಬಿಂಬಿಸುತ್ತವೆ. ಪ್ರಕೃತಿಯಲ್ಲಿ ಯಾವುದೂ ನಿಕೃಷ್ಟವಲ್ಲ. ಎಷ್ಟೆಲ್ಲ ಬಗೆಯ ವೈಪರೀತ್ಯಗಳಲ್ಲೂ ‘ಇಷ್ಟಗಲ ಹೂವು ಅಷ್ಟಗಲ ನಕ್ಕಿದೆ ನಾಲ್ಕು ದಿಕ್ಕಿನಲ್ಲೂ ಪರಿಮಳ ಹುಟ್ಟಿದೆ’ ಎನ್ನುವ ಆಶಾದಾಯಕ ಮನೋಭಾವವನ್ನು ಅರಳಿಸುತ್ತ ‘ಝಡಿ ಮಳೆಗೆ ಗಿಡ ಮರದ ರೆಂಬೆ ಕೊಂಬೆಗಳೆಲ್ಲಾ ಮುರಿದು ಕೊಂಡಿವೆ ಕಣ್ಣೆದುರೇ ಹರಡಿಕೊಂಡ ಕನಸುಗಳೆಲ್ಲಾ ಚದುರಿ ಚೆಲ್ಲಾಪಿಲ್ಲಿ’ ಯಾಗುವಂತಹ ಪ್ರಸ್ತುತ ಸನ್ನಿವೇಶಗಳ ಚಿತ್ರಣವನ್ನು ಕಟ್ಟಿಕೊಡುತ್ತಾರೆ.

‘ಹಾಳು ಚಳಿಗೆ ಕೋಮಲ ಹೂವು ಎದೆ ತೆರೆದುಕೊಂಡು ನಿಂತೇ ಇದೆ’ ಕೋಮಲ ಮನಸ್ಸಿಗೆ ಕೆಡುಕುಗಳು, ಸಮಾಜ ಘಾತುಕಗಳು ತಾಕಲಾರವು. ಎಲ್ಲವನ್ನೂ ಸಹಿಸಿ ಎದ್ದು ನಿಲ್ಲುವ ತಾಕತ್ತನ್ನು ಹೂವಿನಂತೆ ಕವಿತೆಯಲ್ಲಿ ಅರಳಿಸಲಾಗಿದೆ. ಋತುಮಾನಗಳ ಅತಿರೇಕತೆಯಿಂದ ನಿಸರ್ಗದಲ್ಲಾಗುವ ಬದಲಾವಣೆ, ಅಂತಹ ಪರಿಸ್ಥಿತಿಯಲ್ಲೂ ಮೃದು ದಳಗಳ ಹೂವು ಅರಳಿ ಸಂತಸದಿಂದ ಪರಿಮಳ ಸೂಸುವುದು ಕವಿಗೆ ಪವಾಡವೆಂಬಂತೆ ಕಾಣುತ್ತಿದೆ. ಮೊದಲ ಮೂರು ಪರಿಚ್ಛೇದಗಳ ಧ್ವನಿ ಅನೇಕ ಬಗೆಯ ಚಿಂತನೆಗೆ ಹಚ್ಚುವಂತಿದೆ. ಹೂವನ್ನು ಹೆಣ್ಣಿಗೂ ಹೋಲಿಸಬಹುದೇ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಕೊನೆಯಲ್ಲಿ ಕಂಡುಬರುವ ಕವಿಯ ಆಶಯವೆಂದರೆ ಲೋಕದ ಮನುಷ್ಯ ಸ್ವಭಾವಗಳಲ್ಲಿ ಎಷ್ಟೇ ತಿರುವುಮುರುವುಗಳಾದರೂ ಶುದ್ಧ ಹೂ ಹೃದಯ ಬಾಗದೇ ತನ್ನಷ್ಟಕ್ಕೆ ತಾನು ಕರ್ತವ್ಯನಿರತ ನಾಗಿರಲಿ ಎಂಬುದು. ಆದರೆ ಇದು ಕವಿಗೇ ಯಕ್ಷ ಪ್ರಶ್ನೆಯಾಗಿದೆ! ತರ್ಕಕ್ಕೆ ನಿಲುಕದ ಪ್ರಶ್ನೆಯಾಗಿದೆ. ಒಮ್ಮೆ ಸಹೃದಯರು ತಮ್ಮೊಳಗನ್ನು ನೋಡಿಕೊಳ್ಳಬಹುದಲ್ಲವೇ? ಎನ್ನುವ ಸೂಕ್ಷ್ಮವನ್ನು ಕಟ್ಟಿಕೊಡುವ ಸರಳ ಶೈಲಿಯ ಕವಿತೆಯ
ಕೊನೆಯಲ್ಲಿ ‘ತರ್ಕಕ್ಕೆ ನಿಲುಕದ ಹೂವೊಂದು ತನ್ನಷ್ಟಕ್ಕೆ ತೊನೆದಾಡುತ್ತ’ ಕವಿಗೆ ತರ್ಕಕ್ಕೆ ಸಿಗದೆಯೇ ಅವರ ಕವಿತ್ವವನ್ನು ಎತ್ತಿ ಹಿಡಿದಿದೆ.

‍ಲೇಖಕರು Avadhi

April 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

    • Smitha Amrithraj.

      ಧನ್ಯವಾದಗಳು.ಅವಧಿಗೆ ಮತ್ತು ಗೆಳತಿ ಕಲಾಗೆ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: