ಅರ್ಥ ವ್ಯವಸ್ಥೆಯೂ.. ಶ್ರೀಸಾಮಾನ್ಯರೂ..

ಅರ್ಥ ಲೋಕದ ಬಗ್ಗೆ ಇರುವ ಅರ್ಥಪೂರ್ಣ ಕೃತಿಗಳು ಬೆರಳೆಣಿಕೆಯಷ್ಟು. ಅಂತಹ ಸಾಲಿಗೆ ಸೇರುತ್ತಿರುವ ಒಂದು ಮುಖ್ಯ ಪುಸ್ತಕ ಎಂ ಎಸ್ ಶ್ರೀರಾಮ್ ಪುನರ್ ರೂಪಿಸಿರುವ ಡಾ ವೈ ವಿ ರೆಡ್ಡಿ ಅವರ ಕೃತಿ- ಭಿನ್ನ ಅಭಿಪ್ರಾಯ.

ಈ ಕೃತಿ ಮೂಡಿ ಬಂದ ರೀತಿ ಹಾಗೂ ಅದರ ಮಹತ್ವದ ಬಗ್ಗೆ ಶ್ರೀರಾಮ್ ತಮ್ಮ ಮಾತುಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ಅದನ್ನೂ ಹಾಗೂ ಕೃತಿಯ ಒಂದು ಭಾಗವನ್ನು ‘ಅವಧಿ’ಯ ಓದುಗರಿಗಾಗಿ ಪ್ರಸ್ತುತಪಡಿಸುತ್ತಿದ್ದೇವೆ

ಪುಸ್ತಕ ಕೊಳ್ಳಲು- ಇಲ್ಲಿ ಕ್ಲಿಕ್ಕಿಸಿ

ಎಂ ಎಸ್ ಶ್ರೀರಾಮ್

ಅರಿಕೆ ಮತ್ತು ಕೃತಜ್ಞತೆಗಳು

ಜನವರಿ 2017ರಲ್ಲಿ ಡಾ.ವೈವಿ ರೆಡ್ಡಿಯವರು ತೆಲುಗಿನಲ್ಲಿ ತಮ್ಮ ಆತ್ಮಕಥೆಯನ್ನು ‘ನಾ ಜ್ಞಾಪಕಾಲು’ (ನನ್ನ ನೆನಪುಗಳು) ಎನ್ನುವ ಹೆಸರಿನಲ್ಲಿ ಪ್ರಕಟಿಸಿದರು. ತಮ್ಮ ಬಾಲ್ಯಕಾಲದ ನೆನಪುಗಳು, ಬೆಳೆದ ರೀತಿ ಮತ್ತು ತಮ್ಮ ವೃತ್ತಿಜೀವನದ ಬಗೆಗಿನ ಈ ಪುಸ್ತಕ ಹಲವು ಮಜಲುಗಳಲ್ಲಿ ಮುಖ್ಯವೆಂದು ನನಗೆ ಅನ್ನಿಸಿತ್ತು.

ಮೊದಲ ಹಂತದಲ್ಲಿ ಪುಟ್ಟ ಪಟ್ಟಣದ ಮಧ್ಯಮವರ್ಗದಲ್ಲಿ ಬೆಳೆದವರೊಬ್ಬರ ಆಶಯ, ಒಂದು ಉತ್ತಮ ವೃತ್ತಿಜೀವನದ ಆಕಾಂಕ್ಷೆ, ವಿದ್ಯೆಯ ಮಹತ್ವ ಮತ್ತು ಅದಕ್ಕೆ ಬೇಕಾದ ತಯಾರಿಯ ಬಗೆಗಿನ ಅನುಭವಗಳಿದ್ದುವು.

ಎರಡನೆಯ ಹಂತದಲ್ಲಿ ಭಾರತೀಯ ಆಡಳಿತ ಸೇವೆಗೆ ಸೇರಿದ ವ್ಯಕ್ತಿಯೊಬ್ಬ ತನ್ನ ವೃತ್ತಿಜೀವನದ ಅನೇಕ ವಿರೋಧಾಭಾಸಗಳನ್ನು ನಿಭಾಯಿಸಿದ ಕಥೆ ಇದರಲ್ಲಿತ್ತು – ಆಡಳಿತದಲ್ಲಿರುತ್ತಲೇ ತಮ್ಮ ವೈಶಿಷ್ಟ್ಯ ಮತ್ತು ವೃತ್ತಿಪರತೆಯನ್ನು ಕಾಪಾಡಿಕೊಳ್ಳುವುದು, ರಾಜಕೀಯ ಮತ್ತು ಅಧಿಕಾರಶಾಹಿಗಳಿಂದ ಬರುವ ಒತ್ತಡಗಳನ್ನು ನಿಭಾಯಿಸುವುದು, ಹಾಗೂ ನ್ಯಾಯ, ನೈತಿಕತೆಗೆ ರಾಜಿಯಾಗದಂತೆ ನಿಭಾಯಿಸುವುದರ ಕುರಿತ ಅಂಶಗಳಿದ್ದುವು.

ಮೂರನೆಯ ಹಂತದಲ್ಲಿ ದೇಶದ ಆರ್ಥಿಕ ನಿರ್ವಹಣೆಯ ಆಡಳಿತದಲ್ಲಿರುವ ಸವಾಲುಗಳನ್ನು ಈ ಪುಸ್ತಕ ಚರ್ಚಿಸಿತ್ತು – ವಿದೇಶಿ ವಿನಿಮಯ, ಬ್ಯಾಂಕಿಂಗ್, ಹಣಕಾಸು ನೀತಿ ಮತ್ತು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳನ್ನು ಡಾ.ರೆಡ್ಡಿ ವಿವರವಾಗಿ ಬಿಡಿಸಿಟ್ಟಿದ್ದರು. ಅದನ್ನು ಓದಿದಾಗ ಇದು ಕನ್ನಡಕ್ಕೂ ಬರಲೇಬೇಕಾದ ಮುಖ್ಯ ಪುಸ್ತಕ ಎಂದು ನನಗನ್ನಿಸಿತ್ತು. ಹೀಗಾಗಿ ನಾನು ಬೇಗನೇ ಈ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಒಂದು ಭಾಷೆಯು ಸಮೃದ್ಧವಾಗಿ ಬೆಳೆಯಲು ನಾವು ಆಧುನಿಕ ಮತ್ತು ತಾಂತ್ರಿಕ ವಿಚಾರಗಳು ನಮ್ಮಲ್ಲಿಗೆ ಬರುವುದಕ್ಕೆ ಬಾಗಿಲು ಕಿಟಕಿಗಳನ್ನು ತೆರೆದಿಟ್ಟಿರಬೇಕೆಂದು ನಂಬಿದ್ದರಿಂದ ಈ ಪುಸ್ತಕವನ್ನು ಕನ್ನಡದಲ್ಲಿ ಲಭ್ಯವಾಗಿಸುವುದು ಮುಖ್ಯವೆಂದು ನನಗನ್ನಿಸಿತು. ಡಾ.ರೆಡ್ಡಿಯಯವರು ಈ ಕೆಲಸಕ್ಕೆ ತಮ್ಮ ಒಪ್ಪಿಗೆಯನ್ನು ಖುಷಿಯಿಂದಲೇ ನೀಡಿದರು.

ಜುಲೈ 2017ರ ವೇಳೆಗೆ ಡಾ.ರೆಡ್ಡಿಯವರ ಮತ್ತೊಂದು ಪುಸ್ತಕ ‘Advice and Dissent’ (ಸಲಹೆ ಮತ್ತು ಭಿನ್ನಮತ) ಇಂಗ್ಲೀಷಿನಲ್ಲಿ ಪ್ರಕಟವಾಯಿತು. ಅವರ ತೆಲುಗು ಪುಸ್ತಕದಲ್ಲಿದ್ದ ಮಹತ್ವದ ಭಾಗಗಳು ಈ ಪುಸ್ತಕದಲ್ಲಿದ್ದುವು. ಆದರೆ ತೆಲುಗು ಪುಸ್ತಕವನ್ನು ಹಣಕಾಸಿನ ವಿಷಯದಲ್ಲಿ ತಾಂತ್ರಿಕ ಪರಿಣಿತಿ ಇಲ್ಲದವರನ್ನೂ ಗಮನದಲ್ಲಿಟ್ಟುಕೊಂಡು ಬರೆಯಲಾಗಿತ್ತು.

ಇಂಗ್ಲೀಷ್ ಪುಸ್ತಕದಲ್ಲಿ ಇನ್ನಷ್ಟು ಒಳನೋಟಗಳಿದ್ದುವು. ಇದರಲ್ಲಿ ತಾಂತ್ರಿಕವಾದ ಸಂಕೀರ್ಣ ವಿಷಯಗಳೂ ಇದ್ದುವು. ಮುಖ್ಯವಾಗಿ ಅಂತರರಾಷ್ಟೀಯ ಮಟ್ಟದ ಅರ್ಥವ್ಯವಸ್ಥೆ ಮತ್ತು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ವಿವರಗಳೂ, ಹಾಗೂ ಹದಿನಾಲ್ಕನೇ ಹಣಕಾಸು ಆಯೋಗದ ಪ್ರಕ್ರಿಯೆಯ ಬಗೆಗಿನ ಒಂದು ಅಧ್ಯಾಯವೂ ಆ ಪುಸ್ತಕದಲ್ಲಿತ್ತು. ಅದನ್ನು ಓದಿದಾಗ ಅಷ್ಟೇನೂ ಸುಲಲಿತವಲ್ಲದ ಆದರೆ ಒಳನೋಟಗಳನ್ನು ಕೊಡುವ, ತಾಂತ್ರಿಕ ಹಾಗೂ ಸಂಕೀರ್ಣ ವಿವರಗಳು ಕನ್ನಡದಲ್ಲೂ ಲಭ್ಯವಿರಬೇಕೆಂದು ನನಗೆ ಅನ್ನಿಸಿತು.

ಹೀಗಾಗಿ ನಾನು ತೆಲುಗಿನಿಂದ ತಂದಿದ್ದ ಕನ್ನಡಾವತರಣದಲ್ಲಿ ಇಂಗ್ಲೀಷಿನ ಕೆಲವು ಭಾಗಗಳನ್ನು ಸೇರಿಸುತ್ತಾ ಹೋದೆ. ಇದು ಕಷ್ಟದ ಕೆಲಸವೇ ಆಗಿತ್ತು. ಎರಡೂ ಪುಸ್ತಕಗಳನ್ನು ಡಾ.ರೆಡ್ಡಿ ಭಿನ್ನ ಶೈಲಿಯಲ್ಲಿ ಭಿನ್ನ ಓದುಗರಿಗಾಗಿ ಬರೆದಿದ್ದರು. ಕೆಲವು ಘಟನೆಗಳ ವಿವರಗಳು ಪ್ರಾಸಂಗಿಕವಾಗಿ ಒಂದೆಡೆ ಹೆಚ್ಚೂ, ಮತ್ತೊಂದೆಡೆ ಕಮ್ಮಿಯೂ ಇತ್ತು. ಎರಡೂ ಪುಸ್ತಕಗಳನ್ನು ಸೇರಿಸಿ ಘಟನೆಗಳೂ ವಿಚಾರಗಳೂ ಪುನರಾವರ್ತೆನೆಯಾಗದಂತೆ ಜೋಡಿಸುವುದು ನನ್ನ ಮುಂದೆ ಸವಾಲಾಗಿ ನಿಂತಿತು. ಅದನ್ನೂ ನಿಭಾಯಿಸಿದೆ ಎಂದುಕೊಳ್ಳುವ ಹೊತ್ತಿಗೆ ಪುಸ್ತಕದ ಗಾತ್ರ ಸುಮಾರು 600 ಪುಟಗಳದ್ದಾಗಿತ್ತು.

ಈ ಗಾತ್ರದ ಬರವಣಿಗೆಯನ್ನು ಅದರ ಹೂರಣ ತಪ್ಪದಂತೆ ನಿಮ್ಮ ಕೈಯಲ್ಲಿರುವ ಪುಸ್ತಕದ ಗಾತ್ರಕ್ಕೆ ಇಳಿಸುವುದು ಸರಳವಾದ ಕೆಲಸವೇನೂ ಅಲ್ಲ. ನೀವು ಈಗ ಕೈಯಲ್ಲಿ ಹಿಡಿದಿರುವುದು ಡಾ.ರೆಡ್ಡಿಯವರ ವೃತ್ತಿಜೀವನದ ಕಥೆ. ಎರಡೂ ಪುಸ್ತಕಗಳಲ್ಲಿದ್ದ ಖಾಸಗಿ ಮತ್ತು ವ್ಯಕ್ತಿಗತ ಟಿಪ್ಪಣಿಗಳನ್ನು, ಘಟನೆಗಳನ್ನು ಕತ್ತರಿಸಿ ಕೇವಲ ಅವರ ವೃತ್ತಿಜೀವನದ ವೈವಿಧ್ಯವನ್ನು ಗ್ರಹಿಸಲು ಪ್ರಯತ್ನಿಸಿದ್ದೇನೆ. ಇದು ಕನ್ನಡ ಓದುಗರಿಗೆ ದಕ್ಕಬೇಕಾದ ಮುಖ್ಯ ಪುಸ್ತಕವೆಂದು ನಾನು ನಂಬಿದ್ದೇನೆ.

ರಿಜರ್ವ್ ಬ್ಯಾಂಕು ಕಂಡ ಅತ್ಯಂತ ಪ್ರತಿಭಾಶಾಲಿ ಮತ್ತು ಸ್ವತಂತ್ರ ಚಿಂತನೆಯ ಗವರ್ನರ್ ಎನ್ನುವ ಹೆಸರು ಡಾ.ರೆಡ್ಡಿ ಅವರಿಗಿದೆ. ಸ್ವತಂತ್ರ ಎಂದಾಗ ಬಂಡೇಳುವ ಎನ್ನುವ ಅರ್ಥ ಬರಬಹುದು. ಆದರೆ ಸರಕಾರದ ಯಂತ್ರಾಂಗದಲ್ಲಿಯೇ ಇದ್ದು ತಮ್ಮ ತರ್ಕದ ಮತ್ತು ವಿಚಾರದ ಬಲದಿಂದ, ವ್ಯವಸ್ಥೆಯ ಒಳಗಿನಿಂದಲೇ ಸುಧಾರಣೆಗಳನ್ನು ತಂದ ವ್ಯಕ್ತಿ ಎನ್ನುವ ಕೀರ್ತಿ ಅವರಿಗೆ ಸಲ್ಲುತ್ತದೆ. ಆಡಳಿತ ಮತ್ತು ಆರ್ಥಿಕ ರಂಗದಲ್ಲಿ ಡಾ.ರೆಡ್ಡಿಯವರಿಗೆ ದೊಡ್ಡ ಹೆಸರು ಮತ್ತು ಗೌರವಗಳಿವೆ.

ದೇಶದ ಆರ್ಥಿಕ ನೀತಿಯನ್ನು ರೂಪಿಸುವಲ್ಲಿ ಮೊದಲಿಗೆ ಸರಕಾರದ ವಿತ್ತವಿಭಾಗದ ಅಧಿಕಾರಿಯಾಗಿ, ರಿಜರ್ವ್ ಬ್ಯಾಂಕಿನ ಉಪಗವರ್ನರ್ ಮತ್ತು ಗವರ್ನರ್ ಆಗಿ, ಹದಿನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಡಾ.ರೆಡ್ಡಿ, ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅದಲ್ಲದೇ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದರೆ. ಈ ಪುಸ್ತಕವನ್ನು ಓದಿದಾಗ ಆರ್ಥಿಕ ಜಗತ್ತಿನ ನಿರ್ವಹಣೆ ಅತ್ಯಂತ ಸಂಕೀರ್ಣ ಹಾಗೂ ಗೋಜಲಿನ ವಿಚಾರವೆಂದು ಮನವರಿಕೆಯಾಗುವುದರ ಜೊತೆಗೆ ಅದನ್ನು ಅರ್ಥಮಾಡಿಕೊಂಡು ಒಂದು ನಿಖರ ಮತ್ತು ಸ್ಪಷ್ಟ ನಿಲುವಿನೊಂದಿಗೆ ಹೇಗೆ ನಿಭಾಯಿಸಬಹುದೆನ್ನುವುದೂ ಗೋಚರಿಸುತ್ತದೆ. ಡಾ.ರೆಡ್ಡಿಯವರ ಮಹತ್ವ ಇರುವುದು ಇಲ್ಲಿ. ಹೀಗಾಗಿಯೇ ಇದೊಂದು ಮಹತ್ವದ ಪುಸ್ತಕ ಮತ್ತು ಕನ್ನಡಕ್ಕೆ ಬರಲೇಬೇಕಾದ ಪುಸ್ತಕ ಎನ್ನುವುದು ನನ್ನ ನಂಬಿಕೆ.

ಈ ಪುಸ್ತಕ ಪ್ರಕಟವಾದ ಬಳಿಕ ನಮ್ಮ ಅರ್ಥಜಗತ್ತಿನಲ್ಲಿ ಅನೇಕ ಮಹತ್ವದ ವಿಷಯಗಳು ಘಟಿಸಿವೆ. ನೋಟು ಬಂದಿಯಿಂದ ನಮ್ಮ ಅರ್ಥವ್ಯವಸ್ಥೆ ಕೆಲದಿನಗಳ ಮಟ್ಟಿಗೆ ನಿಂತೇ ಹೋಗಿ ಅದರ ಪ್ರಭಾವದಿಂದ ನಾವು ಇನ್ನೂ ಚೇತರಿಸಿಕೊಳ್ಳತ್ತಲೇ ಇದ್ದೇವೆ. ಜಿಎಸ್‌ಟಿ ತೆರಿಗೆಯ ಆಡಳಿತದ ಚೌಕಟ್ಟಿನಲ್ಲಿ ಒಂದು ಪ್ರಗತಿಪರ ಹೆಜ್ಜೆಯಾದರೂ, ಅದರ ಜಾರಿಯಲ್ಲಿನ ಕಷ್ಟಗಳನ್ನು ಅನುಭವಿಸುತ್ತಲೇ ಇದ್ದೇವೆ. ಸಾಲದ್ದಕ್ಕೆ ಆರ್ಥಿಕ ಪ್ರಗತಿ ಮಂದತಿಯಲ್ಲಿದೆ. ಈ ಘಟ್ಟದಲ್ಲಿ ಡಾ. ರೆಡ್ಡಿಯವರಂತಹ ವ್ಯಕ್ತಿಗಳ ಮಹತ್ವವನ್ನು ನಾವು ಗುರುತಿಸಬೇಕು. 1991ರ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರಕಾರಿ ಅಧಿಕಾರಿಯಾಗಿ ಡಾ.ರೆಡ್ಡಿಯವರ ಪಾತ್ರ ಮಹತ್ವದ್ದು. ಹಾಗೇ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು ನಮ್ಮನ್ನ ತಟ್ಟದಂತೆ ಕಾಪಾಡಿದವರೂ ಇವರೇ.

ಈ ಪುಸ್ತಕವನ್ನು ಕನ್ನಡಕ್ಕೆ ತರುವ ಪ್ರಕ್ರಿಯೆಯಲ್ಲಿ ನಾನು ನಿರಂತರವಾಗಿ ಡಾ.ರೆಡ್ಡಿಯವರೊಂದಿಗೆ ಸಂಬಾಷಣೆಯಲ್ಲಿದ್ದೆ. ನನಗೆ ಆಗುತ್ತಿರುವ ಕಷ್ಟಗಳನ್ನು ತೋಡಿಕೊಳ್ಳುತ್ತಿದ್ದೆ. ಈ ಪುಸ್ತಕವನ್ನು ಪುನರ್ರಚನೆ ಮಾಡಲು, ಮರುನಿರೂಪಿಸಲು ಡಾ. ರೆಡ್ಡಿ ಖುಷಿಯಿಂದ ಅನುಮತಿ ನೀಡಿದ್ದಲ್ಲದೇ, ನನ್ನ ಮೇಲೆ ನಂಬಿಕೆಯಿಟ್ಟರು. ಅದು ದೊಡ್ಡ ಮಾತು. ಅನುವಾದವೆಂದು ಪ್ರಾರಂಭವಾದ ಈ ಕೆಲಸ ಈಗ ಸಂಪೂರ್ಣವಾಗಿ ಎರಡು ಭಿನ್ನ ಪುಸ್ತಕಗಳಿಂದ ಮರುನಿರೂಪಣೆಗೊಂಡ ಸ್ವತಂತ್ರ ಪುಸ್ತಕವಾಗಿದೆ. ಇದು ಓದಿಸಿಕೊಳ್ಳುತ್ತದೆನ್ನುವ ನಂಬಿಕೆ ನನಗಿದೆ. ನನ್ನನ್ನು ನಂಬಿ ನನಗೆ ಅನುಮತಿಯನ್ನು ನೀಡಿದ ಡಾ.ರೆಡ್ಡಿಯವರಿಗೆ ನಾನು ನಿಜಕ್ಕೂ ಕೃತಜ್ಞನಾಗಿದ್ದೇನೆ.

ಜೊತೆಗೆ ಗೆಳೆಯನಿಗಿಂತ ಹೆಚ್ಚಾಗಿ ಗುರು ಎಂದು ಪರಿಗಣಿಸುವ ಎನ್.ಎ.ಎಂ.ಇಸ್ಮಾಯಿಲ್ ಅವರಿಗೆ ನಾನು ನನ್ನ ಕೃತಜ್ಞತೆಯನ್ನು ಸೂಚಿಸಬೇಕು. ಈ ರೀತಿಯ ಪುಸ್ತಕಗಳು ಕನ್ನಡಕ್ಕೆ ಬರಬೇಕು ಅನ್ನುವ ನಂಬಿಕೆಯಿಂದಲೇ ಇದರ ಪ್ರಗತಿಯ ಬಗೆಗೆ ಆಗಾಗ ವಿಚಾರಿಸಿದ್ದಲ್ಲದೇ ಈ ಪುಸ್ತಕದ ಕರಡನ್ನು ಓದಿ, ಅದರ ತರ್ಕವನ್ನು ಪರೀಕ್ಷಿಸಿ, ಘಟನಾಕ್ರಮವನ್ನು ಪರಿಶೀಲಿಸಿ, ನನ್ನ ಭಾಷೆಯನ್ನು ತಿದ್ದಿ ಉತ್ತಮಪಡಿಸಿದ ಕೀರ್ತಿ ಅವರಿಗೇ ಸಲ್ಲಬೇಕು.

ಮೇಲಾಗಿ ಕೆವಿ ಅಕ್ಷರ. ಮಾರಾಟವಾಗಲೀ ಆಗದಿರಲೀ, ತಾವು ಓದಬಯಸುವಂತಹ ಪುಸ್ತಕಗಳನ್ನು ಪ್ರಕಟಿಸುವ ಬದ್ಧತೆ ತೋರುವ ಈ ಹೃದಯವಂತರನ್ನು ನಾನು ನೆನೆಯದೇ ಇರಲು ಸಾಧ್ಯವೇ ಇಲ್ಲ. ಅವರ ಬೆಂಬಲವಿಲ್ಲದಿದ್ದರೆ ಇದು ಸಾಧ್ಯವೇ ಆಗುತ್ತಿರಲಿಲ್ಲ. ಅವರಿಗೂ ನನ್ನ ಕೃತಜ್ಞತೆಗಳು. ಮನೆಯಲ್ಲಿ ನನ್ನನ್ನು ಯಾವಾಗಲೂ ಪ್ರೋತ್ಸಾಹಿಸುವ ಬಾಳಸಂಗಾತಿ ಗೌರೀ, ಗೆಳೆಯ-ಮಗ ಅರ್ಜುನರನ್ನು ಈ ಸಂದರ್ಭದಲ್ಲಿ ಕೃತಜ್ಞತಾಪೂರ್ವಕವಾಗಿ ನೆನೆಯುತ್ತೇನೆ.

ಈ ಪುಸ್ತಕ ಮುಖ್ಯವಾಗಿ ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ, ಆಡಳಿತ ಸೇವೆಗಳನ್ನು ಸಲ್ಲಿಸುತ್ತಿರುವ ಯುವ ಅಧಿಕಾರಿಗಳಿಗೆ, ಬ್ಯಾಂಕರುಗಳಿಗೆ ಮತ್ತು ಅರ್ಥಜಗತ್ತಿನ ಆಡಳಿತವರ್ಗದವರಿಗೆ ಆಸಕ್ತಿಯ ಪುಸ್ತಕವಾಗುವುದೆಂದು ಆಶಿಸುತ್ತೇನೆ. ಇದನ್ನು ಕೈಗೆತ್ತಿ ಓದುತ್ತಿರುವ ನಿಮಗೆಲ್ಲರಿಗೂ ನನ್ನ ವಂದನೆಗಳು, ಕೃತಜ್ಞತೆಗಳು.

ಅರ್ಥ ವ್ಯವಸ್ಥೆಯೂ ಶ್ರೀಸಾಮಾನ್ಯರೂ

ಮನಮೋಹನ ಸಿಂಗ್ ಪ್ರಧಾನಿಯಾದಾಗ. ‘ನಾವು ಐಎಂಎಫ್ ಸಹಾಯವನ್ನು ಎಂದಿಗೂ ಕೇಳಬಾರದು’ ಎಂದರು. ‘ಖಂಡಿತವಾಗಿ ಹಾಗಾಗದಂತೆ ನೋಡಿಕೊಳ್ಳುತ್ತೇನೆ’ ಅಂದೆ. ವಿದೇಶಿ ವಿಭಾಗದ ಬಗ್ಗೆ ವಿಶೇಷ ಶ್ರದ್ಧೆ ವಹಿಸಿದೆ. ಅಲ್ಲಿ ಎಲ್ಲ ಪ್ರಶ್ನೆಗಳೇ: ಬೆಲೆಯೇರಿಕೆ ಅಂಕುಶದಲ್ಲಿಡಬೇಕಾ, ಪ್ರಗತಿಯನ್ನು ಗಮನಿಸಬೇಕಾ? ರೂಪಾಯಿ ಬೆಲೆ ಹೆಚ್ಚಿದರೆ ಒಳಿತಾ, ಇಲ್ಲವಾ? ತಕ್ಷಣದ ಲಾಭವಾ, ದೀರ್ಘಕಾಲದ ಪ್ರಯೋಜನವಾ? ಉಳಿತಾಯ ಪ್ರೋತ್ಸಾಹಿಸಬೇಕಾ, ಸಾಲದ ಬೆಳೆವಣಿಗೆ ಸಾಧಿಸಬೇಕಾ? ಬ್ಯಾಂಕುಗಳ ಪರವಾಗಿರಬೇಕಾ, ಆರ್ಥಿಕ ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕಾ? ಯಾವುದಕ್ಕೂ ಉತ್ತರವಿಲ್ಲ. ಏನು ಮಾಡಿದರೂ ಮತ್ತೊಂದಕ್ಕೆ ಪೆಟ್ಟು ಬೀಳುತ್ತದೆ. ಇವುಗಳ ನಡುವೆ ಇರುವುದು ತೆಳು ವಿಭಜನಾ ರೇಖೆ. ಸಮತೋಲನಕ್ಕೆ ಪೆಟ್ಟು ಬೀಳದಂತೆ ನೋಡಿಕೊಳ್ಳಬೇಕು. ಯಾವುದಕ್ಕೂ ಪೂರ್ಣ ಮಾಹಿತಿಯಿಲ್ಲ, ತಕ್ಷಣಕ್ಕೆ ನಿರ್ಧರಿಸುವುದು ಸಾಧ್ಯವೂ ಇಲ್ಲ.

ಅಭಿವೃದ್ಧಿಗೆ ಬೇಕಾದ ನಿಧಿಗಳನ್ನು ಹೊಂದಿಸುವುದು, ಬೆಲೆಗಳನ್ನು ಹದ್ದುಬಸ್ತಿನಲ್ಲಿಡುವುದು, ಎರಡೂ ಹಣಕಾಸು ನೀತಿಯ ಉದ್ದೇಶವೇ. ಇದರಲ್ಲಿ ಯಾವುದು ಮುಖ್ಯ? ಸಂದರ್ಭಕ್ಕೆ ಒಗ್ಗಿ ಪ್ರಾಮುಖ್ಯತೆ ಬದಲಾಗುತ್ತದೆ. ನಾನು ವ್ಯವಸ್ಥೆಯ ಸ್ಥಿರತೆಗೆ ಒತ್ತು ಕೊಟ್ಟೆ. ಬೆಲೆಗಳ ಸ್ಥಿರತೆಯೇ ನೀತಿಯ ಕೆಲಸವೆನ್ನುವ ನಂಬಿಕೆ ವ್ಯಾಪಕವಾಗಿತ್ತು.

ಸರ್ಕಾರ ಬೆಲೆಯೇರಿಕೆಯ ಸ್ತರವನ್ನು ಸೂಚಿಸಿದರೆ, ಅದನ್ನು ಸಾಧಿಸುವ ನೀತಿಯಿರಬೇಕೆನ್ನುವ ಚಿಂತನೆಯಿತ್ತು. ನನ್ನ ಮೇಲೂ ಅದೇ ಒತ್ತಡವಿತ್ತು. ಬೆಲೆಯೇರಿಕೆಯೇ ಗುರಿಯಾಗುವುದನ್ನು ಜಲಾನ್ ವಿರೋಧಿಸಿದ್ದರು. ನಾನೂ ಅದೇ ದಾರಿಯಲ್ಲಿ ನಡೆದೆ. ಬೆಲೆಯೇರಿಕೆಗೆ ಒಂದು ವ್ಯಾಪ್ತಿಯನ್ನು ಕೊಡಬಹುದು. ವ್ಯವಸ್ಥೆಯ ಸ್ಥಿರತೆಗೆ, ಜನರ ನೆಮ್ಮದಿಗೆ ಬೆಲೆಗಳು ಸ್ಥಿರವಾಗಿರಬೇಕು. ‘ಬೆಲೆಯೇರಿಕೆ ಬಡವರ ಮೇಲಿನ ತೆರಿಗೆ’ ಎನ್ನುತ್ತಾರೆ. ಇದು ಬಡವರಿಗೆ ದುಸ್ತರವಾಗದಂತೆ ನೋಡಿಕೊಳ್ಳಬೇಕು. ‘ನಿರೀಕ್ಷೆಯ ಮಟ್ಟದ ಹಣದುಬ್ಬರ’ ನೀತಿಯೇ ಮುಂದಕ್ಕೆ ಮಾದರಿಯಾಯಿತು. ಸಂಸ್ಥೆಗಳಲ್ಲೇ ಆರ್‌ಬಿಐನ ಸ್ಥಾನ ವಿಶಿಷ್ಟವಾದ್ದು.

ಅಂತರರಾಷ್ಟ್ರೀಯವಾಗಿ ಆರ್‌ಬಿಐಗೆ ಹೆಸರು, ಘನತೆಯಿದೆ. ಸಂಸ್ಥೆಯ ನಾಯಕನಾಗಿ ಸಂಪ್ರದಾಯವನ್ನು ಕಾಪಾಡುತ್ತಾ ಸಂಸ್ಥೆಯ ಬಲವರ್ಧನೆ ಮಾಡಬೇಕು. ಹಿಂದಿನದ್ದು ಒಳ್ಳೆಯದೆಂದು ಸುಮ್ಮನಿರದೇ ಕಾಲಕ್ಕೆ ಅನುಗುಣವಾಗಿ ಸಮರ್ಪಕ ಬದಲಾವಣೆಗಳನ್ನು ಕೈಗೊಳ್ಳಬೇಕು. ಏನು ಮಾಡಿದರೂ ತಕ್ಷಣದ ಒಳಿತು ಮತ್ತು ದೀರ್ಘಕಾಲಕ್ಕೆ ವ್ಯವಸ್ಥೆಯನ್ನು ಬಲಪಡಿಸುವ ಪೀಠಿಕೆಯಿಂದ ದೇಶದ ಒಳಿತನ್ನು ಕಾಣಬೇಕು. ಸ್ಥಿರವಾದ ಅರ್ಥವ್ಯವಸ್ಥೆಯನ್ನು ಜಲಾನ್ ಬಿಟ್ಟುಹೋಗಿದ್ದರು. ನಾನು ಸೇರುವ ಕಾಲಕ್ಕೆ ಜಾಗತೀಕರಣ, ಉದಾರ ನೀತಿಯ ಪ್ರಭಾವದ ಹಲವು ಸವಾಲುಗಳಿದ್ದುವು. ಹಿಂದೆ ನಾವು ಈ ಗತಿಯ ಬೆಳವಣಿಗೆಯನ್ನು ಕಂಡಿರಲಿಲ್ಲ. ಓವರ್‌ಹೀಟಿಂಗ್ ಎದುರಿಸಲು ಆವರ್ತಕ ವಿರೋಧಿ ನೀತಿಯನ್ನು ಪಾಲಿಸುವುದು ಹೊಸ ವಿಚಾರವಾಯಿತು. ಮಾರುಕಟ್ಟೆಗಳನ್ನು ಹೆಚ್ಚು ನಿಯಂತ್ರಿಸಬಾರದೆನ್ನುವ ಅಭಿಪ್ರಾಯ ಅಂತರರಾಷ್ಟ್ರೀಯವಾಗಿ ಪ್ರಚಲಿತವಿದ್ದಾಗಲೇ ಅದನ್ನು ವಿರೋಧಿಸಿದ್ದೆ.

ಒಂದಲ್ಲ- ಮೂರು ಸವಾಲುಗಳು
ನನ್ನ ಮುಂದೆ ಮೂರು ಸವಾಲುಗಳಿದ್ದುವು. ಒಂದು – ಜಾಗತಿಕ ಏಕೀಕರಣದಿಂದಾಗಿ ವಿದೇಶಿ ವಲಯವನ್ನು ನಿಭಾಯಿಸಬೇಕಿತ್ತು. ಹಿಂದೆ ಜಾಗತೀಕರಣವಿರಲಿಲ್ಲ, ಬ್ರೆಜಿಲ್, ಟರ್ಕಿ, ಆರ್ಜೆಂಟೀನಾಗಳು ಪೆಟ್ಟು ತಿಂದದ್ದು ಬಿಟ್ಟು ಬೇರೆ ಉದಾಹರಣೆಗಳಿರಲಿಲ್ಲ. ತಕ್ಕ ದಿಶಾ ನಿರ್ದೇಶನಗಿರಲಿಲ್ಲ. ಎರಡು – ವಿನಿಮಯದ ಅಭಾವ ನೋಡಿದ್ದೆವೇ ಹೊರತು ಪ್ರವಾಹದಂತೆ ಹರಿದಾಗ ನಿಭಾಯಿಸುವ ಅನುಭವವಿರಲಿಲ್ಲ. ಇದನ್ನು ತಡೆಯಬಾರದೆಂದು ತಜ್ಞರು ಹೇಳಿದರು. ಮೂರು – ಅಂತರರಾಷ್ಟ್ರೀಯ ಸ್ತರದಲ್ಲಿ ವೇಗದ ಬದಲಾವಣೆಯಾದಾಗ ನೀತಿಯನ್ನು ಉದಾರೀಕರಿಸಿದ್ದೆವು. ವಿನಿಮಯದ ಒಳಹರಿವಿತ್ತು. ಆದರೆ, ವಿತ್ತೀಯ ಮಾರುಕಟ್ಟೆಯ ನಿಯಂತ್ರಣದಿಂದ ಸ್ಥಿರತೆಯನ್ನು ಕಾಪಾಡಬೇಕಿತ್ತು.

ಅಂತರರಾಷ್ಟ್ರೀಯವಾಗಿ ಅನುಕೂಲ ಸ್ಥಿತಿಯಿತ್ತು. ಆಕ್ರಣಕಾರಿ ನೀತಿಯಿಂದ ವೇಗವಾಗಿ ಬೆಳೆಯುಬಹುದಿತ್ತಾದರೂ ನಾನು ಉತ್ಸಾಹ ತೋರಲಿಲ್ಲ. ಸಂಪ್ರದಾಯವಾದಿಯೆಂದು ಟೀಕಿಸಿದರು. ವೇಗದ ಬೆಳವಣಿಗೆಗೆ ಸರ್ಕಾರ ತಯಾರಿತ್ತು. ಮಾರುಕಟ್ಟೆಯ ವಿಶ್ವಾಸವೂ ಇತ್ತು. ಆದರೆ ಹುಚ್ಚನೆಂದರೂ ಪರವಾಗಿಲ್ಲ, ಈ ರಿಸ್ಕಿನಿಂದ ನಷ್ಟವಾಗಿ ಆ ಭಾರ ಬಡಜನರ ಮೇಲೆ ಬಿದ್ದರೆ ಅದನ್ನು ಯಾರೂ ಭರಿಸಲಾರರೆಂದು ಯೋಚಿಸಿದೆ.

ಇವು ನನಗೆ ಮುಖ್ಯ
ನಮ್ಮ ದೇಶ ದೊಡ್ಡದು. ನಮ್ಮಲ್ಲಿ ಆರ್ಥಿಕ ಬಿಕ್ಕಟ್ಟಾದರೆ ಭೌಗೋಳಿಕ ಮತ್ತು ರಾಜಕೀಯವಾಗಿ ನಮ್ಮನ್ನು ಕಾಪಾಡಲು ಯಾರೂ ಬರುವುದಿಲ್ಲ. ವಿದೇಶಿ ವಿಭಾಗದ ಸಮತೋಲನ ಕಾಪಾಡುವ ಜವಾಬ್ದಾರಿಯನ್ನು ನಾವೇ ಹೊರಬೇಕು. ಬೆಲೆಗಳನ್ನು ಹದ್ದುಬಸ್ತಿನಲ್ಲಿಡುವುದು, ಅರ್ಥವ್ಯವಸ್ಥೆ ಸ್ಥಿರವಾಗಿಸುವುದು ಮುಖ್ಯ. ಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆಗಳು ಸಿಗಬೇಕು. ಬ್ಯಾಂಕಲ್ಲಿ ಇಟ್ಟ ಠೇವಣಿಗಳು ಸುರಕ್ಷಿತವಾಗಿರಬೇಕು. ಮಾರುಕಟ್ಟೆಯನ್ನು ಜಾಗರೂಕವಾಗಿ ಬೆಳೆಸಬೇಕು. ಅರ್ಥವ್ಯವಸ್ಥೆಯನ್ನು ಸಮಗ್ರವಾಗಿ ಕಾಪಾಡಲು, ಸರ್ಕಾರದೊಂದಿಗೆ ಕೆಲಸ ಮಾಡಬೇಕು.
ಉಳಿತಾಯ ಹೆಚ್ಚಿಸಲು ಪ್ರೋತ್ಸಾಹವಿರಬೇಕು. ಅವು ಭದ್ರವಾಗಿರಬೇಕು. ಬ್ಯಾಂಕಿನ ವ್ಯವಹಾರ ಸರಳವಾಗಬೇಕು.

ಅಂತರರಾಷ್ಟ್ರೀಯ ಸ್ತರದಲ್ಲಿ ಆತ್ಮವಿಶ್ವಾಸವಿರಬೇಕು. ಅದಕ್ಕೆ ವ್ಯವಸ್ಥೆ, ಮೇಲ್ವಿಚಾರಣೆ, ಮಾರುಕಟ್ಟೆ, ತಂತ್ರಜ್ಞಾನ ಎಲ್ಲ ಉತ್ತಮವಾಗಬೇಕು. ನಮ್ಮಲ್ಲಿದ್ದ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ನೀತಿ ನಿರೂಪಣೆಯಲ್ಲಿ ವಾಸ್ತವತೆ, ಸ್ಥಿರತೆಗೆ ಒತ್ತು ನೀಡಿ ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯನ್ನು ಸಾಧಿಸಬೇಕಿತ್ತು. ಸುಧಾರಣೆಯ ಪಥದಲ್ಲಿ ಮಾರುಕಟ್ಟೆಯ ಶಿಸ್ತೂ ಮುಖ್ಯವೆನ್ನುವುದನ್ನು ಕಂಡಿದ್ದೆವು. ಸ್ಪರ್ಧೆಯನ್ನು ಪ್ರೋತ್ಸಾಹಿಸಲು ನಿಯಂತ್ರಣ ಸಡಿಲಿಸುವುದು ಅವಶ್ಯವಾದರೂ ನಿಯಂತ್ರಣವಿಲ್ಲದಂತಾಗುವುದು ಸರಿಯಲ್ಲ. ವಿತ್ತೀಯ ಕ್ಷೇತ್ರ ಪ್ರಬುದ್ಧತೆಯತ್ತ ಹೋಗುತ್ತಿದ್ದರೆ ನಿಯಂತ್ರಣವನ್ನು ಸಡಿಲಿಸುವುದು ಸರಿ. ಆದರೆ ಆ ಸಂದರ್ಭದಲ್ಲಿ ವಿವಿಧ ವಿತ್ತೀಯ ಸಂಸ್ಥೆಗಳು, ಹಾಗೂ ವಿತ್ತವ್ಯವಸ್ಥೆ ಸ್ಥಿರವಾಗಿರಬೇಕು. ಸೂಕ್ಷ್ಮ ನಿಯಂತ್ರಣದಿಂದ ಜಾಗರೂಕ ನಿಯಂತ್ರಣದತ್ತ ಸಾಗುವಾಗ ವಿತ್ತೀಯ ಸ್ಥಿರತೆ ಮತ್ತು ಅಪಾಯಗಳನ್ನು ನಿರ್ವಹಿಸುವುದಕ್ಕೆ ಒತ್ತು ಕೊಟ್ಟು ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಬೆಳೆಸುವ ಪಥವನ್ನು ಕ್ರಮಿಸಬೇಕಿತ್ತು.

1998ರಿಂದ ಹಣಕಾಸು ನೀತಿ ಘೋಷಣೆಯ ಭಾಗವಾಗಿ ನಾವು ಕೈಗೊಳ್ಳುತ್ತಿರುವ ಸುಧಾರಣೆಯ ವಿವರಣೆ, ದುಡ್ಡುಕಾಸು, ವಿನಿಮಯ, ಸರ್ಕಾರಿ ಬಾಂಡುಗಳ ಮಾರುಕಟ್ಟೆ, ಜಾಗರೂಕತಾ ಕ್ರಮಗಳು, ಋಣ ವಿತರಣೆ ಮತ್ತು ಸಂಸ್ಥಾಗತ ಬೆಳವಣಿಗೆಯ ಮಾಹಿತಿಯನ್ನೂ ಕೊಡುತ್ತಿದ್ದೆವು. ನಿಯಂತ್ರಣ ಮತ್ತು ಪ್ರಗತಿಯ ನಡುವಿನ ಒಂದನ್ನು ಆಯಬೇಕೆನ್ನುವ ತುರ್ತನ್ನು ಇಲ್ಲವಾಗಿಸಿ, ಕೇವಲ ಈ ಐದು ಸೂತ್ರಗಳನ್ನು ಪಾಲಿಸಿದೆವು. ಒಂದು, ಪ್ರಭಾವಬೀರುವ ನಿಯಂತ್ರಣ, ಎರಡು, ಬೆಳವಣಿಗೆಯ ಕಾಲದ ಹಣಕಾಸು ನೀತಿಯ ಜೊತೆ, ಅರ್ಥವ್ಯವಸ್ಥೆ ಜಾರಿದಾಗ ಕೈಗೊಳ್ಳುವ ನಿಯಂತ್ರಣ, ಮೂರು, ಆರ್ಥಿಕ ಒಳಗೊಳ್ಳುವಿಕೆಯನ್ನೂ ನಿಯಂತ್ರಣದ ಭಾಗವಾಗಿಸುವುದು. ನಾಲ್ಕು, ಬ್ಯಾಂಕುಗಳು ವಿಧಿಸುವ ಶುಲ್ಕದ ಸಮರ್ಪಕತೆ. ಐದು, (ಇದರಲ್ಲಿ ಗೆಲ್ಲಲಿಲ್ಲವಾದರೂ) ಸಾಲ-ಮರುಪಾವತಿಯ ಆರೋಗ್ಯಕರ ಸಂಸ್ಕೃತಿಯನ್ನು ಬೆಳೆಸುವುದು.

ಆರ್ಥಿಕ ಒಳಗೊಳ್ಳುವಿಕೆ
‘ಕೆಲಸದವಳು ಕುಡುಕ ಗಂಡನಿಂದ ಹಣ ಕಾಪಾಡಿಕೊಂಡರೆ ಆರ್ಥಿಕ ಒಳಗೊಳ್ಳುವಿಕೆ ನೆರವೇರಿದಂತೆಯೇ.’ ಎಂದು ಹೇಳಿದ್ದೆ. ಸಾಧಾರಣವಾಗಿ ಬ್ಯಾಂಕುಗಳು ‘ಸಾಲಗಳನ್ನು ವಿಸ್ತರಿಸುವ’ ಕೆಲಸಮಾಡುತ್ತವೆ. ಸಾಲ ಕೊಡಬೇಕಾದರೆ ಠೇವಣಿಗಳಿರಬೇಕು. ‘ಸೇವೆಗಳನ್ನು ವಿಸ್ತರಿಸಿದರೆ ತಾನೇ ತಾನಾಗಿ ಠೇವಣಿಗಳೂ, ಸಾಲದ ಸೌಲಭ್ಯವೂ ಬೆಳೆಯುತ್ತದೆ’ ಎನ್ನುವ ನಂಬಿಕೆಯಿಂದ ಮುನ್ನಡೆದು ಆರ್ಥಿಕ ಒಳಗೊಳ್ಳುವಿಕೆಯ ಪರಿಭಾಷೆಯನ್ನು ವಿಸ್ತರಿಸಿದೆ. ಆರ್ಥಿಕ ಒಳಗೊಳ್ಳುವಿಕೆ ದೊಡ್ಡ ಮಾತು. ಆದರ ಆಶಯ ಸರಳ.

ಪ್ರಜೆಗಳಿಗೆ ಬ್ಯಾಂಕಿಂಗ್ ಮತ್ತಿತರ ಆರ್ಥಿಕ ಸೇವೆಗಳು ತಲುಪಬೇಕು. ಆದರೆ ಈ ವ್ಯವಹಾರಕ್ಕೆ ತಗಲುವ ಖರ್ಚು ಕಮ್ಮಿಯಾಗಬೇಕು. ಒಬ್ಬ ಹಳ್ಳಿಗ ಪಟ್ಟಣದಲ್ಲಿ ಕೂಲಿ ಮಾಡಿ, ಮನೆಗೆ ಹಣ ಕಳಿಸಬೇಕೆಂದರೆ ಅದಕ್ಕೆ ಖರ್ಚಾಗಬಾರದು. ಆರ್‌ಬಿಐ ಮತ್ತು ಬ್ಯಾಂಕುಗಳು ಜನತೆಗೆ ಒದಗಿಸುವ ಸೇವೆ ಮತ್ತು ಅದರ ಗುಣಮಟ್ಟವನ್ನು ತಿಳಿಯುವುದಕ್ಕೆಂದೇ ಅಧ್ಯಯನವನ್ನು ಮಾಡಿಸಿದೆ. ಆರ್ಥಿಕ ವಲಯದ ಸೇವೆಗಳು ಜನರಿಗೆ ಒಳಿತನ್ನು ಮಾಡಬೇಕೆಂದು ಮೊದಲಿನಿಂದಲೂ ಅನ್ನಿಸಿತ್ತು. ಬ್ಯಾಂಕಿನ ವ್ಯವಹಾರಗಳಲ್ಲಿ ಜನ ಕಷ್ಟಗಳನ್ನು ಎದುರಿಸುತ್ತಿದ್ದುದನ್ನು ನೋಡುತ್ತಿದ್ದೆ. ನನ್ನ ಮೊದಲ ಋಣ ನೀತಿಯ ವಿಚಾರಗಳು ಹೊಸದೇನೂ ಅಲ್ಲವಾದರೂ ನಾವು ಗ್ರಾಹಕರನ್ನು ಕಾಣುವ ರೀತಿ ಬದಲಾಯಿತು.

ಬ್ಯಾಂಕಿನ ಸೇವೆಗಳು ಸಾಮಾನ್ಯರ ಕೈಗೆಟುಕುವಂತಿರುವುದು ವಿತ್ತೀಯ ಸುಧಾರಣೆಯೆಂದು ಪರಿಗಣಿಸಿ, ಹಲವು ಕ್ರಮಗಳನ್ನು ಕೈಗೊಂಡೆವು. ಆ ಉದ್ದೇಶದ ಬಗ್ಗೆ ಬದ್ಧತೆ, ಮುಂದಾಲೋಚನೆ ಮತ್ತು ಸರಿಯಾದ ಕ್ರಿಯೆ ನಮ್ಮನ್ನು ಆರ್ಥಿಕ ಒಳಗೊಳ್ಳುವಿಕೆಯ ಉದ್ದೇಶದತ್ತ ಒಯ್ದು, ಇದೊಂದು ಆಂದೋಲನವಾಯಿತು. ನವಂಬರ್ 2006ರಲ್ಲಿ ‘ಆರ್ಥಿಕ ಒಳಗೊಳ್ಳುವಿಕೆ: ಬ್ಯಾಂಕುಗಳಿಗೆ ವಿತ್ತೀಯ ತಂತ್ರ’ ಎನ್ನುವ ಲೇಖನದಲ್ಲಿ ‘ಆರ್‌ಬಿಐನ ಬಲವಂತಕ್ಕೆ ಬಿದ್ದು ಕಡೆಗೂ ಬ್ಯಾಂಕುಗಳು ಆರ್ಥಿಕ ಒಳಗೊಳ್ಳುವಿಕೆಯ ವ್ಯಾಪಾರವನ್ನು ಇಷ್ಟವಿಲ್ಲದಿದ್ದರೂ ತಮ್ಮದಾಗಿಸಿಕೊಳ್ಳಬಹುದು.’ ಎಂದು ಬಿಸಿನೆಸ್ ಲೈನ್‌ನ ಹೆಸರಾಂತ ಪತ್ರಕರ್ತರಾದ ಮುರಳಿ ಬರೆದಿದ್ದರು. ಆದರೆ ಇದನ್ನು ಬಲವಂತವೆಂದು ನೋಡದೇ, ಈ ಬಗ್ಗೆ ಬ್ಯಾಂಕುಗಳು ಒಲವು ತೋರಬೇಕೆಂದು ಬಯಸಿದೆವು. ಬ್ಯಾಂಕಿಂಗ್ ಸೇವೆಗಳ ಆಳ-ಅಗಲಗಳನ್ನು ಅಳೆಯಲು ಪುದುಚೇರಿಯಲ್ಲೊಂದು ಸರ್ವೆ ಮಾಡಿಸಲು ಇಂಡಿಯನ್ ಬ್ಯಾಂಕಿಗೆ ಸಲಹೆ ಕೊಟ್ಟೆವು. ತಮ್ಮ ಮೂಲಭೂತ ಕೆಲಸವನ್ನು ಮೀರಿದ ಜವಾಬ್ದಾರಿಯನ್ನು ಬ್ಯಾಂಕಿನ ಉದ್ಯೋಗಿಗಳು ವಿರೋಧಿಸುತ್ತಿದ್ದಾರೆಂದು ಗೊತ್ತಾಯಿತು.

ಅಕ್ಟೋಬರ್ 2005ರ ಹಣಕಾಸು ನೀತಿಯಲ್ಲಿ ಆರ್ಥಿಕ ಒಳಗೊಳ್ಳುವಿಕೆಯ ಬಗ್ಗೆ ಚರ್ಚೆಯಿತ್ತು. ಸಾಂಸ್ಥಿಕ ಸಾಲ ವಂಚಿತರಾದವರಿಗೆ ಹೆಚ್ಚು ಸಾಲ ಸಿಗುವಂತೆ ಮಾಡುವ ಸಂಸ್ಥಾಗತ ಚೌಕಟ್ಟಿನ ಚರ್ಚೆ ಮಾಡಿದ್ದೆವು. ಸರಳ ಮೂಲಭೂತ ಸೇವೆಗಳಿಗೆ ಶೂನ್ಯ ಶಿಲ್ಕಿನ ಖಾತೆಗಳನ್ನು ತೆರೆಯಲು ಅನುವು ಮಾಡಿಕೊಟ್ಟೆವು. ವ್ಯವಸ್ಥೆಯು ಎಲ್ಲರ ಕೈಗೆಟುಕುವಂತಾಗಬೇಕು. ಆರ್ಥಿಕ ಒಳಗೊಳ್ಳುವಿಕೆಯ ಭಾಗವಾಗಿ ವಿತ್ತೀಯ ಸೇವೆಗಳು ಮತ್ತು ಋಣ ವಿತರಣೆಯನ್ನು ಜಾಗರೂಕವಾಗಿ ಕೈಗೊಳ್ಳಬೇಕಿತ್ತು. ‘ಬ್ಯಾಂಕಿಂಗ್ ಕರಸ್ಪಾಂಡೆಂಟ್’ ಮಾದರಿಯನ್ನೂ ಆ ಸಮಯದಲ್ಲೇ ಪ್ರಾರಂಭಿಸಿದೆವು. ಬ್ಯಾಂಕಿನ ಶಾಖೆಗಳಿಲ್ಲದ ಜಾಗಗಳಲ್ಲಿ ಒಬ್ಬ ವ್ಯಕ್ತಿ ಬ್ಯಾಂಕಿನ ಪ್ರತಿನಿಧಿಯಾಗಿ ಇರಬಹುದು. ಬ್ಯಾಂಕಿನ ಯಾವುದೇ ಕೆಲಸವಿದ್ದರೂ ಆ ವ್ಯಕ್ತಿಯೇ ಮಾಡುತ್ತಾನೆ. ರಾಜಾಸ್ಥಾನ, ಉತ್ತರ ಪ್ರದೇಶಗಳಲ್ಲಿ ಈ ಯೋಜನೆ ಕೆಲಸ ಮಾಡಿತಾದರೂ ದೇಶವ್ಯಾಪಿಯಾಗಿ ಯಶಸ್ವಿಯಾಗಲಿಲ್ಲ.

ಆರ್ಥಿಕ ಒಳಗೊಳ್ಳುವಿಕೆಯ ಮಾತು ವಿಸ್ತಾರವಾಗಿ ಹಬ್ಬಿ, ರಂಗರಾಜನ್ ಅಧ್ಯಕ್ಷತೆಯಲ್ಲಿ ಸರ್ಕಾರ ಒಂದು ಸಮಿತಿಯನ್ನು ಏರ್ಪಡಿಸಿತು. ನಾವು ಸೇವೆಗಳ ವಿಸ್ತರಣೆಯ ಬಗ್ಗೆ ಗಮನವನ್ನಿಟ್ಟಿದ್ದೆವು. ಆ ಸಮಿತಿಯೂ ಹೆಚ್ಚು ಸಾಲದ ಬಗ್ಗೆಯೇ ಗಮನ ಹರಿಸಿದಂತಿತ್ತು. ಆರ್ಥಿಕ ಒಳಗೊಳ್ಳುವಿಕೆಯಡಿ ಅತಿಯಾಗಿ ಸಾಲ ಕೊಟ್ಟರೆ ಮುಂದೆ ಸಮಸ್ಯೆಗಳಾಗುವ ಅಪಾಯವಿತ್ತು. ಅಮೆರಿಕದಲ್ಲಿ ಅತಿಯಾಗಿ ಕೊಟ್ಟ ಗೃಹಸಾಲದ ಗುಳ್ಳೆ ಸ್ಫೋಟಿಸಿ, ಈ ಅಭಿಪ್ರಾಯವನ್ನು ಸಾಬೀತು ಪಡಿಸಿತ್ತು! ಹಾಗೇ ಬ್ಯಾಂಕುಗಳ ವಿಷಯದಲ್ಲಿ ಯಾವಾಗಲೂ ನರಳುತ್ತಿರುವ – ಆದ್ಯತಾ ವಿಭಾಗದ ಸಾಲ ವಿತರಣೆಯ ಬಗೆಗೂ ನಿಗಾ ಇರಿಸಿದ್ದೆವು.

ಚಿಕ್ಕಸಾಲದ ದೊಡ್ಡ ಸಮಸ್ಯೆಗಳು
ಮೈಕ್ರೋಫೈನಾನ್ಸ್ ಸಂಸ್ಥೆಗಳು ಬಂದದ್ದರಿಂದ ಬಡವರಿಗೆ ಸಾಲ ಸಿಗುತ್ತಿದ್ದ ರೀತಿ ಬದಲಾಯಿತು. ಈ ಸಾಲ ಕೊಡಲೆಂದೇ ಸ್ವಯಂಸೇವಾ ಸಂಸ್ಥೆಗಳೂ ಹುಟ್ಟಿದವು. ಆಂಧ್ರಪ್ರದೇಶದಲ್ಲಂತೂ ಇವು ಶರವೇಗದಲ್ಲಿ ಬೆಳೆದುವು. ಅವನ್ನು ಪ್ರೋತ್ಸಾಹಿಸಿ ಆದ್ಯತಾ ವಿಭಾಗದ ಪಟ್ಟಿಯಲ್ಲಿ ಸೇರಿಸಿದೆವು. ಅವು ಹೆಚ್ಚಿನ ಬಡ್ಡಿಯನ್ನು ಹೇರುತ್ತಿದ್ದರೂ ತಮ್ಮ ಕಾರ್ಯನಿರ್ವಹಣೆಯಿಂದಾಗಿ ಬ್ಯಾಂಕುಗಳಿಗೆ ಎಟುಕದವರನ್ನು ಅವು ಸಾಲದ ಮೂಲಕ ತಲುಪಿದುವು. ಎಂಎಫ್ಐಗಳಿಂದ ಬಡ್ಡಿವ್ಯಾಪಾರಿಗಳಿಗೆ ಏಟು ಬೀಳುವುದೆಂದು ನಾವು ಆಶಿಸಿದೆವು. ಆಗ ಎಂಎಫ್ಐಗಳು ದತ್ತಿ ಸಂಸ್ಥೆಗಳು, ಲಾಭಾಪೇಕ್ಷೆಯಿಲ್ಲದ ಕಂಪನಿ ಅಥವಾ ಸ್ವಯಂಸೇವಾ ಸಂಘಗಳಾಗಿದ್ದುವು. ನಮ್ಮ ಪ್ರೋತ್ಸಾಹದಿಂದ ಎಂಎಫ್ಐಗಳು ಗಮನಾರ್ಹವಾಗಿ ಬೆಳೆದುವು. ಈ ಸಂಸ್ಥೆಗಳು ಚುರಾಕಾಗಿರಬೇಕೆನ್ನುವ ಉದ್ದೇಶದಿಂದ ಹೆಚ್ಚಿನ ನಿಯಂತ್ರಣವನ್ನೂ ಹೇರಿರಲಿಲ್ಲ. ಅವು ಲಾಭವನ್ನಾರ್ಜಿಸುವ ಸಂಸ್ಥೆಗಳಾಗಿ ಪರಿವರ್ತಿತಗೊಳ್ಳುವುದನ್ನು ನಾವು ನಿರೀಕ್ಷಿಸಿರಲಿಲ್ಲ.

ಲಾಭದ ದಾರಿಯಲ್ಲಿ ನಡೆಯುತ್ತಿದ್ದ ಎಂಎಫ್ಐಗಳು ಬಡ್ಡಿವ್ಯಾಪಾರಿಗಳಂತೆ ವರ್ತಿಸುತ್ತಿದ್ದಾರೆಂಬುದು ನಂತರ ತಿಳಿಯಿತು. ಲಾಭಾಪೇಕ್ಷೆಯಿಲ್ಲದೆ ಆರಂಭಿಸಿ, ವ್ಯಾಪಾರಿ ಸಂಸ್ಥೆಯಾಗಿ ಪರಿವರ್ತನೆಯಾಗಿ, ಷೇರು ಮಾರುಕಟ್ಟೆಯಲ್ಲಿಯೂ ನೋಂದಾಯಿಸಿಕೊಂಡಿದ್ದವು. ಅವು ಲಾಭಕೇಂದ್ರಿತ ಸಂಸ್ಥೆಗಳಾದಾಗ ಸಮಸ್ಯೆಗಳಾದುವು. ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್ ಆರ್‌ಬಿಐಗೆ ಭೇಟಿನೀಡಿದ್ದಾಗ ಹೇಳಿದ್ದರು: ‘ಲಾಭಕೇಂದ್ರಿತ ಎಂಎಫ್ಐಗಳು ಬಡ್ಡಿ ವ್ಯಾಪಾರಿಗಳಿಗಿಂತ ಭಿನ್ನವಲ್ಲ’ ಶ್ರೀಸಾಮಾನ್ಯರಿಗೆ ಕಡಿಮೆ ದರದಲ್ಲಿ ಹೆಚ್ಚು ಸಾಲ ಕೊಡುವುದರಲ್ಲಿನ ಅಪಾಯ ಗೊತ್ತಿತ್ತು.

ಹೀಗಾಗಿ ಸರ್ಕಾರವನ್ನು ಬಿಟ್ಟು ಭಿನ್ನ ಸಂಸ್ಥಾಗತ ಚೌಕಟ್ಟಿನಲ್ಲಿ ವಿತ್ತೀಯ ಸೇವೆಗಳನ್ನು ಒದಗಿಸುವ ಬಗ್ಗೆ ಯೋಚಿಸಿದ್ದೆವು; ಹೀಗೆ ನೀಡಬೇಕಾದ ಅನೇಕ ಸೇವೆಗಳಲ್ಲಿ ಸಾಲವೂ ಒಂದು, ಅಷ್ಟೇ. ಹಿಂದೆ ಸಮತಾವಾದಕ್ಕೆಂದು ಬ್ಯಾಂಕುಗಳನ್ನು ಉಪಯೋಗಿಸಿದ್ದಕ್ಕೆ ತೆತ್ತ ಬೆಲೆಯ ಅರಿವಿತ್ತು. ಬ್ಯಾಂಕುಗಳ ಮೂಲಕ ಚಿಕ್ಕಸಾಲವನ್ನು ಗೃಹನಿರ್ಮಾಣಕ್ಕೂ, ಮೂಲಭೂತ ಸೌಕರ್ಯಕ್ಕೂ ಕೊಡಬೇಕೆನ್ನುವ ತೀವ್ರ ಒತ್ತಡ ನಮ್ಮ ಮೇಲಿತ್ತು. ಅದು ಸರಿಯಲ್ಲ, ಬ್ಯಾಂಕುಗಳು ವ್ಯವಹಾರಿಕ ಸಾಲದ ಬಗ್ಗೆ ಶ್ರದ್ಧೆಯನ್ನು ತೋರಿಸಬೇಕೆನ್ನುವುದು ನಮ್ಮ ವಿಚಾರವಾಗಿತ್ತು.

ತಾಂತ್ರಿಕತೆಯಿಂದ ಒಳಗೊಳ್ಳುವಿಕೆ: ಎಟಿಎಂಗಳು
ಅಭಿವೃದ್ಧಿಗೆ ತಾಂತ್ರಿಕತೆ ಬಳಸಬೇಕು. ಬ್ಯಾಂಕಿಂಗ್ ತಂತ್ರಜ್ಞಾನ ವಿಕಸನ ಸಂಶೋಧನಾ ಸಂಸ್ಥೆ (ಐಡಿಆರ್‌ಬಿಟಿ) ಸಹಾಯದಿಂದ ಆಂಧ್ರಪ್ರದೇಶದಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ಪಾವತಿಯ ಪ್ರಯೋಗ ಮಾಡಿದೆವು. ಅದರಿಂದ ಆರ್ಥಿಕ ಒಳಗೊಳ್ಳುವಿಕೆ ಬೆಳೆಯಿತು. ನಮಗೆ ಬಂದ ದೂರುಗಳನ್ನು ಪರಿಗಣಿಸಿ ಬ್ಯಾಂಕುಗಳು ಗ್ರಾಹಕರಿಂದ ಯಾವ ಸೇವೆಗೆಷ್ಟು ಶುಲ್ಕ ವಿಧಿಸುತ್ತಿದ್ದಾರೆ ಎನ್ನುವ ಬಗ್ಗೆ ಸಮೀಕ್ಷೆ ಕೈಗೊಂಡೆವು.

ಎಟಿಎಂಗಳ ಉಪಯೋಗಕ್ಕೆ ಬ್ಯಾಂಕುಗಳು ವಿಧಿಸುತ್ತಿದ್ದ ಶುಲ್ಕ, ನೋಟು ಮುದ್ರಣಕ್ಕಾಗುವ ಖರ್ಚು, ಬ್ಯಾಂಕುಗಳಿಗೆ ಆಗುವ ಅನುಕೂಲ, ಗ್ರಾಹಕರ ಅನುಕೂಲ ಎಲ್ಲವನ್ನೂ ಪರಿಶೀಲಿಸಿದೆವು. ಅನೇಕ ಶುಲ್ಕಗಳಿಗೆ ತರ್ಕ ಕಾಣಲಿಲ್ಲ. 2006ರ ನೀತಿ ಘೋಷಣೆಯಲ್ಲಿ ಒಂದು ಕಾರ್ಯಕಾರಿ ಗುಂಪನ್ನು ರಚಿಸಿದೆವು. ಆ ಗುಂಪಿನಲ್ಲಿ ಭಾರತೀಯ ಬ್ಯಾಂಕುಗಳ ಒಕ್ಕೂಟದ ಪ್ರತಿನಿಧಿ ಹಾಗೂ ಗ್ರಾಹಕರ ಮೂವರು ಪ್ರತಿನಿಧಿಗಳಿದ್ದರು. ಬ್ಯಾಂಕುಗಳು ವಿಧಿಸುವ ಶುಲ್ಕದ ಸಮರ್ಪಕತೆಯನ್ನು ಪರಿಶೀಲಿಸಿ ನ್ಯಾಯ ಸಮ್ಮತವಾದ ವಿಧಾನವೊಂದನ್ನು ರೂಪಿಸುವ ಕೆಲಸವನ್ನು ಆ ಗುಂಪು ಕೈಗೊಂಡಿತು. ಪ್ರತಿ ಬ್ಯಾಂಕು ಈ ವಿಧಾನವನ್ನು ಪಾಲಿಸಿ ಗ್ರಾಹಕರಿಗೆ ನೀಡುತ್ತೇವೆಂದ ಸೇವೆಗಳನ್ನು ನಿಭಾಯಿಸುತ್ತಿವೆಯೇ ಎನ್ನುವುದನ್ನು ಭಾರತೀಯ ಬ್ಯಾಂಕಿಂಗ್ ಸಂಹಿತೆ ಮತ್ತು ಸೇವಾ ಮಂಡಲಿ (Banking Code and Services Board of India -BCSBI) ಗಮನಿಸಬೇಕಿತ್ತು. ಫೆಬ್ರವರಿ 2006ರಲ್ಲಿ ಆ ಮಂಡಳಿಯನ್ನು ಸ್ಥಾಪಿಸಿದೆವು.

ಕಾರ್ಯಕಾರಿ ಗುಂಪಿನ ವರದಿಯನ್ನು ಸೆಪ್ಟೆಂಬರ್ 2006ರಲ್ಲಿ ಪ್ರಕಟಿಸಿದೆವು. ಬ್ಯಾಂಕುಗಳ ಸೇವೆಗೆ ಸಮರ್ಪಕವಾದ ಶುಲ್ಕಗಳನ್ನು ಆ ಗುಂಪು ಸಲಹೆ ಮಾಡಿತ್ತು. ಎಲ್ಲ ಬ್ಯಾಂಕುಗಳ ಶುಲ್ಕಗಳನ್ನು ನಾವು ಸಮರ್ಪಕತೆಯ ಸೂತ್ರವನ್ನು ಆಧಾರವಾಗಿಟ್ಟುಕೊಂಡು ಪರೀಕ್ಷಿಸಿದೆವು. ಸೇವೆಗಳನ್ನೊದಗಿಸಲು ಎಷ್ಟು ಖರ್ಚಾಗುತ್ತೆದೆನ್ನುವ ವಿವರವನ್ನು ಬ್ಯಾಂಕುಗಳು ಮುಕ್ತವಾಗಿ ತಿಳಿಸಲಿಲ್ಲ. ಆದರೆ ಶುಲ್ಕದಲ್ಲಿ ಬ್ಯಾಂಕುಗಳ ನಡುವೆ ಇದ್ದ ಅಂತರ ಯಾವ ವಿವರಣೆಗೂ ನಿಲುಕದಂತೆ ಆಗಿತ್ತು. ಗ್ರಾಹಕರನ್ನು ಕಪಿಮುಷ್ಠಿಯಲ್ಲಿ ಹಿಡಿದು ಹೆಚ್ಚು ಶುಲ್ಕಗಳನ್ನು ವಿಧಿಸುತ್ತಿರುವುದು ಕಂಡಿತ್ತು. ಈ ಸಂದರ್ಭದಲ್ಲಿ ಶುಲ್ಕಗಳನ್ನು ನಿರ್ಧರಿಸುವ ಪ್ರಕ್ರಿಯೆ ಹೇಗಿರಬೇಕೆನ್ನುವ ಒಂದು ಆಶಯ ಪತ್ರವನ್ನು ಆರ್.ಬಿ.ಐ. ಚರ್ಚೆಗೆ ಮಂಡಿಸಿತು. ಅದರಿಂದ ಬಂದ ಕಲಿಕೆಯಂತೆ ಎಟಿಎಂಗಳ ಬಳಕೆಯನ್ನು ಪ್ರೋತ್ಸಾಹಿಸಬೇಕೆಂದು ನಿರ್ಧರಿಸಿ, ನಾವು ಎಟಿಎಂ ಶುಲ್ಕವನ್ನು ರದ್ದು ಮಾಡಿದೆವು.

ಮಾರ್ಚ್ 2008ರ ಸುತ್ತೋಲೆಯಲ್ಲಿ ಎಟಿಎಂ ಶುಲ್ಕವನ್ನು ರದ್ದು ಮಾಡುತ್ತಾ ಈ ಮಾತನ್ನು ಹೇಳಿದ್ದೆವು: ‘ಬ್ಯಾಂಕಿನ ಗ್ರಾಹಕರು ಬಿಳಿ ಲೇಬಲ್ ಅಥವಾ ಬ್ಯಾಂಕೇತರ ಸಂಸ್ಥೆಗಳಲ್ಲದೇ ಮಿಕ್ಕ ಬ್ಯಾಂಕಿನ ಎಟಿಎಂನಿಂದ ನಗದು ತೆಗೆದರೆ ಯಾವ ಶುಲ್ಕವನ್ನೂ ವಿಧಿಸುವುದಿಲ್ಲ. ಬ್ಯಾಂಕಿನ ಗ್ರಾಹಕರು ದೇಶದಲ್ಲಿ ನಿಶ್ಶುಲ್ಕವಾಗಿ ಯಾವುದೇ ಎಟಿಎಂ ಸೇವೆಯನ್ನುಪಯೋಗಿಸಲು ಬ್ಯಾಂಕುಗಳು ಅನುವು ಮಾಡಬೇಕು’ ಇದರಿಂದ ಆರ್‌ಬಿಐಗೆ ನೋಟುಗಳ ಮುದ್ರಣದ ಕೆಲಸ ಕಮ್ಮಿಯಾಯಿತು.

ಬ್ಯಾಂಕುಗಳ ಮೇಲಿನ ಭಾರವೂ ಇಳಿಯಿತು. ಅಲ್ಲಿಯವರೆಗೂ ಖಾತೆದಾರರು ತಮ್ಮ ಬ್ಯಾಂಕಿನ ಎಟಿಎಮ್ಮನ್ನು ಸೀಮಿತ ವ್ಯವಹಾರಗಳಿಗೆ ಬಳಸಬಹುದಿತ್ತು. ಹತ್ತಿರದಲ್ಲಿ ತಮ್ಮ ಬ್ಯಾಂಕಿನ ಎಟಿಎಂ ಇರದಿದ್ದರೆ ಆ ಸೌಕರ್ಯ ಇಲ್ಲದಂತೆಯೇ. ಇದನ್ನು ಬದಲಿಸಿ, ಯಾವುದೇ ಬ್ಯಾಂಕಿನ ಖಾತೆದಾರರು ಮತ್ಯಾವುದೇ ಬ್ಯಾಂಕಿನ ಎಟಿಎಮ್ಮನ್ನು ಶುಲ್ಕವಿಲ್ಲದೇ ಉಪಯೋಗಿಸಲು ಸಾಧ್ಯವಾಗುವ ಆದೇಶ ಹೊರಡಿಸಿದೆವು. ಸಾಮಾನ್ಯರಿಗೆ ಶುಲ್ಕದ ಭಾರವಿರಲಿಲ್ಲ. ಇದರಿಂದ ಎಟಿಎಂಗಳ ಸಂಖ್ಯೆ ಬೆಳೆಯಿತು!

ಹೆಚ್ಚು ಎಟಿಎಂಗಳಿರುವ ಬ್ಯಾಂಕುಗಳಿಗೆ ಇದರಿಂದ ನಷ್ಟವಾಗುತ್ತದೆ ಎಂದು ಒತ್ತಡ ಹೇರಲು ಬ್ಯಾಂಕುಗಳು ಪ್ರಯತ್ನಿಸಿದುವು. ಬ್ಯಾಂಕುಗಳಿಗೆ ಇದರಿಂದ ನಷ್ಟವೆಂದು ನಿರೂಪಿಸಿದರೆ ಅದನ್ನು ಆರ್.ಬಿ.ಐ. ತುಂಬಿಸಿಕೊಡುತ್ತದೆ ಎಂದೆವು. ಅದಕ್ಕೆ ತರ್ಕವಿತ್ತು. ನಾವು ಮುದ್ರಿಸಿದ ಹಣವನ್ನು ನಮ್ಮ ಖರ್ಚಿನಲ್ಲಿ ಬ್ಯಾಂಕಿಗೆ ತಲುಪಿಸುತ್ತಿದ್ದೆವು; ಇದನ್ನು ಎಟಿಎಂಗೂ ನಾವೇ ತಲುಪಿಸಬಹುದು. ಎಟಿಎಂನಿಂದ ಸುಲಭವಾಗಿ ಹಣ ಸಿಗುವ ಭರವಸೆಯಿಂದ ಜನ ಬಳಸುವ ನೋಟಿನ ಪ್ರಮಾಣ ಕಡಿಮೆಯಾದರೆ ಅದನ್ನು ಮುದ್ರಿಸಿ ಸಾಗಿಸುವ ನಮ್ಮ ಖರ್ಚು ಕಮ್ಮಿಯಾಗುತ್ತಿತ್ತು.

ಬ್ಯಾಂಕುಗಳು ಪರಸ್ಪರತೆಯ ಆಧಾರದಲ್ಲಿ ಒಪ್ಪಿತವಾದ ಶುಲ್ಕವನ್ನು ವಿಧಿಸಿಕೊಳ್ಳಬಹುದೇ ಹೊರತು ಗ್ರಾಹಕರ ಮೇಲೆ ಹೇರುವಂತಿಲ್ಲ ಎನ್ನುವ ನಿಯಮವನ್ನು ರೂಪಿಸಿದೆವು. ಬ್ಯಾಂಕುಗಳಿಗೆ ಬಾಧೆ ಉಂಟಾಗಬಾರದೆಂದು ತಮ್ಮ ನಡುವಿನ ವಹಿವಾಟುಗಳನ್ನು ಒದಗಿಸಿಕೊಡುತ್ತಿದ್ದ ಮಧ್ಯವರ್ತಿ ಸಂಸ್ಥೆಯ ಸ್ವಿಚ್ ಶುಲ್ಕವನ್ನು ರದ್ದು ಮಾಡಿದೆವು. ಎಟಿಎಂ ಶುಲ್ಕವನ್ನು ನಿಯಂತ್ರಣದಲ್ಲಿಡುವುದರ ತತ್ವ ಹೀಗಿತ್ತು. ಬ್ಯಾಂಕುಗಳಿಗೆ ಕೊಟ್ಟಿರುವ ಲೈಸೆನ್ಸೇ ಒಂದು ಸವಲತ್ತು.

ಪಾವತಿ ವ್ಯವಸ್ಥೆಯ ಮೇಲೆ ಬ್ಯಾಂಕುಗಳಿಗೆ ಏಕಾಧಿಪತ್ಯವಿದ್ದು ಅಡಮಾನವಿಲ್ಲದೇ ಸಾರ್ವಜನಿಕ ಠೇವಣಿಗಳನ್ನು ತೆಗೆದುಕೊಳ್ಳುವ ಅಧಿಕಾರವಿದೆ. ಹೀಗಿರುವಾಗ ನಿಯಂತ್ರಕರು ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವು ನಿಶ್ಶುಲ್ಕ ಸೇವೆಗಳನ್ನು ಕೊಡಬೇಕು ಎಂದು ಆದೇಶಿಸುವುದರಲ್ಲಿ ತಪ್ಪಿಲ್ಲ. ಸ್ಪರ್ಧೆ ಮತ್ತು ದಕ್ಷತೆಗೆ ಧಕ್ಕೆ ಬರದಂತೆ ಶುಲ್ಕವನ್ನು ನಿಯಂತ್ರಿಸುವುದು ಸರಿ. ತಂತ್ರಜ್ಞಾನವು ಗ್ರಾಹಕರನ್ನು ಬ್ಯಾಂಕಿನಿಂದ ದೂರ ತಳ್ಳಿದರೂ, ತಾರತಮ್ಯವಿರುವ ನಮ್ಮ ಪರಿಸ್ಥಿತಿಯಲ್ಲಿ ಇದಕ್ಕೆ ವಿಶೇಷ ಮಹತ್ವವಿತ್ತು.

ಪಾವತಿ ವ್ಯವಸ್ಥೆಯನ್ನು ಬೆಳೆಸಲು ಧನಸಹಾಯ ಮಾಡಿ ಅದಕ್ಕೊಂದು ತಾಂತ್ರಿಕ, ಸಂಸ್ಥಾಗತ, ಕಾನೂನಿನ ಚೌಕಟ್ಟನ್ನು ಒದಗಿಸಿಕೊಟ್ಟಿದ್ದರಿಂದ ಇದು ಸಾಧ್ಯವಾಯಿತು. ಪಾವತಿ ವ್ಯವಸ್ಥೆಯ ಮಧ್ಯಕಾಲೀನ ದೃಕ್ಪಥದ ಬಗ್ಗೆ ಒಂದು ಪತ್ರವನ್ನು ಬಿಡುಗಡೆ ಮಾಡಿದ್ದೆವು. 2000ದ ಮೊದಲ ಭಾಗದಲ್ಲಿ ಆಧುನಿಕ ಪಾವತಿ ವ್ಯವಸ್ಥೆ ಸಮರ್ಥವಾಗಿ ನಡೆಯಲು ಬೇಕಾದ ಕಾನೂನಿನ ಬಗ್ಗೆ ಯೋಚಿಸಿದ್ದೆವು. 2005ರಲ್ಲಿ ಪಾವತಿ ವ್ಯವಸ್ಥೆಯನ್ನು ಕಟ್ಟಿ, 2007ರಲ್ಲಿ ಕಾನೂನು ಜಾರಿಯಾಯಿತು. ಈ ವಿಷಯದಲ್ಲಿ ಐಡಿಆರ್‌ಬಿಟಿ ಮತ್ತು ಭಾರತೀಯ ಕ್ಲಿಯರಿಂಗ್ ಸಂಸ್ಥೆಯ ಪೂರ್ಣ ಪ್ರಯೋಜನವನ್ನು ಪಡೆದೆವು. 2008ರ ವೇಳೆಗೆ ನಾವು ರಾಷ್ಟ್ರೀಯ ಪಾವತಿ ಸಂಸ್ಥೆಯನ್ನು ಸ್ಥಾಪಿಸಿ ಆ ಕೆಲಸವನ್ನು ಅವರಿಗೆ ವರ್ಗಾಯಿಸಿದೆವು. ತಂತ್ರಜ್ಞಾನದಲ್ಲಿನ ಹೂಡಿಕೆಗೆ ಎರಡು ಉದ್ದೇಶಗಳಿದ್ದುವು. ಬ್ಯಾಂಕಿಂಗ್‌ಗೆ ಆಧುನಿಕ ಸೇವೆಗಳನ್ನೊದಗಿಸುವುದು ಹಾಗೂ ಶ್ರೀಸಾಮಾನ್ಯರಿಗೆ ಸುಲಭದಲ್ಲಿ ಸೇವೆಗಳನ್ನೊದಗಿಸುವುದು.

ಸಾಲಮನ್ನಾ ಭಾರ ಯಾರಮೇಲೆ?
2008ರ ಆಯವ್ಯಯದಲ್ಲಿ ದೊಡ್ಡ ಮಟ್ಟದ ರೈತರ ಸಾಲ ಮನ್ನಾವನ್ನು ಸರ್ಕಾರ ಘೋಷಿಸಿತು. ರೈತರಿಗೆ ಸಾಲ ಕೊಡುವುದರಲ್ಲಾಗಲೀ, ಮರಳಿ ಪಡೆಯುವುದರಲ್ಲಾಗಲೀ ಯಾವುದೇ ಪಾತ್ರವಿರದ – ತೆರಿಗೆ ಕೊಡುವ ಸಾಮಾನ್ಯ ಜನತೆಯ ಮೇಲೆ ಈ ಭಾರವೆಲ್ಲಾ ಬಿದ್ದಿತ್ತು. ಇದನ್ನು ತೀವ್ರವಾಗಿ ವಿರೋಧಿಸಿ ವಿತ್ತ ಮಂತ್ರಿಗಳ ಜೊತೆ ಚರ್ಚಿಸಿದೆ. ಇಬ್ಬರೂ ಪ್ರಧಾನ ಮಂತ್ರಿಗಳ ಬಳಿಗೂ ಹೋದೆವು.

ಸಾಮಾಜಿಕ ಮತ್ತು ನೈತಿಕ ಕಾರಣಕ್ಕೆ ಇದನ್ನು ಮಾಡಬೇಕೆಂದು ಅವರು ಹೇಳಿದರು! ಚರ್ಚೆಯ ನಡುವಿನಲ್ಲಿ ಹಿಂದೆ ಮಾಡಿದ್ದ ಸಾಲಮನ್ನಾ ಘಟನೆಗಳು, ಗ್ರಾಮೀಣ ಮತ್ತು ನಗರ ಪ್ರಾಂತಗಳ ನಡುವಿನ ಅಂತರ, ರೈತರ ಆತ್ಮಹತ್ಯೆ ಮತ್ತು ಸಾಮಾಜಿಕ ಅಶಾಂತಿಯ ವಿಷಯಗಳು ಬಂದುವು. ದೇಶದ ವಿತ್ತವ್ಯವಸ್ಥೆಯ ಶೇಕಾಡಾ 15ರಷ್ಟನ್ನು ಭರಿಸುವವರ ಸಂಖ್ಯೆ ಶೇಕಡಾ 50ರಷ್ಟಿದೆ. ಅವರ ಆದಾಯ ವರ್ಷಕ್ಕೆ ಶೇಕಡಾ 2ರಷ್ಟು ಮಾತ್ರ ಬೆಳೆಯುತ್ತಿದೆ. ಮಿಕ್ಕವರು ತೀವ್ರಗತಿಯಲ್ಲಿ ಬೆಳೆಯುತ್ತಿರುವಾಗ ಈ ಜನಕ್ಕೆ ಯಾವುದೇ ಪರಿಹಾರ ಕೊಡದಿರುವುದು ಅನ್ಯಾಯ. ಇದಕ್ಕೆ ಸಾಲಮನ್ನಾ ಕೂಡಾ ಒಂದು ಕ್ರಮವೆಂದು ವಾದಿಸಿದರು.

ಸಾಮಾಜಿಕ-ರಾಜಕೀಯ ನೆಲೆಯಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತ್ತು. ಈ ಆರ್ಥಿಕ ಭಾರದಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಚಾವು ಮಾಡಬೇಕು ಎಂದು ಪ್ರತಿಪಾದಿಸಿದೆ. ಜನರ ಠೇವಣಿಗಳ ಮೇಲೆ ನಡೆಯುವ ಬ್ಯಾಂಕುಗಳು ಈ ಭಾರವನ್ನು ಭರಿಸುವುದು ಸರಿಯಲ್ಲ. ರೈತರ ಸಾಲದ ಮೊತ್ತವನ್ನು ಸರ್ಕಾರವೇ ಬ್ಯಾಂಕುಗಳಿಗೆ ತುಂಬಿಸಬೇಕೆಂದೆ.

ಸರ್ಕಾರದ ಖೋತಾ ಸ್ಥಿತಿಯನ್ನು ಕಂಡಾಗ ಈ ಮೊತ್ತವನ್ನು ಕೊಡಲು ಆ ವರ್ಷದ ಆಯವ್ಯಯದಿಂದ ಸಾಧ್ಯವಿಲ್ಲವೆನ್ನಿಸಿತ್ತು. ಹೀಗಾಗಿ ಎರಡು ವರ್ಷಗಳ ಆಯವ್ಯಯ ಪತ್ರಕ್ಕೆ ಈ ಖರ್ಚನ್ನು ಹಂಚಿ ಆರು ತಿಂಗಳುಗಳ ಒಳಗೆ ಹಣವನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಪೂರೈಸಬೇಕೆಂದು ಸೂಚಿಸಿದೆವು. ಈ ವಿಷಯವನ್ನು ಪರಿಗಣಿಸಿ ಆರ್‌ಬಿಐನಿಂದ ಸರ್ಕಾರಕ್ಕೆ ಹೆಚ್ಚಿನ ಲಾಭಾಂಶವನ್ನ ವಿತರಿಸಲು ಸಾಧ್ಯವೆಂದೂ ಹೇಳಿದೆ. ಯೋಜನೆಯನ್ನು ಹಾಗೆಯೇ ನಿಭಾಯಿಸಿದೆವು. ಹಣಕಾಸು ಮತ್ತು ಋಣದ ವಿಚಾರದಲ್ಲಿ, ಗವರ್ನರಾಗಿ ವಿಚಾರವನ್ನು ಮಂಡಿಸಿದ್ದೆ.

ರಾಜಕೀಯ ಸಾಮಾಜಿಕ ವಿಚಾರಗಳನ್ನು ಪ್ರಸ್ತುತ ಪಡಿಸಿದ್ದ ಸರ್ಕಾರದ ವಿಚಾರದ ಬಗ್ಗೆ ಟಿಪ್ಪಣಿ ಮಾಡುವುದು ಸರಿಯಿರಲಿಲ್ಲ. ಆ ಸಂದರ್ಭದಲ್ಲಿ ನಾನು ಅಸಹಾಯಕನಾಗಿದ್ದೆ! ಸರ್ಕಾರ ತೀರ್ಮಾನ ಕೈಗೊಂಡಿದ್ದರಿಂದ ಅದನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ನಮ್ಮ ಮೇಲಿತ್ತು. ವಿತ್ತೀಯ ವ್ಯವಸ್ಥೆಯ ಸುಧಾರಣೆಗೆ ವಿರುದ್ಧವಾಗಿ, ಅರ್ಥವ್ಯವಸ್ಥೆಯ ಆರೋಗ್ಯಕ್ಕೆ ಧಕ್ಕೆ ತರುವ ಈ ಕ್ರಮ ದೊಡ್ಡ ಗಾತ್ರದ್ದಾಗಿತ್ತು. ಗಮ್ಮತ್ತಿನ ಮಾತೆಂದರೆ – ಇದನ್ನು ಬ್ಯಾಂಕುಗಳು ಸ್ವಾಗತಿಸಿದ್ದುವು. ಸಣ್ಣಪುಟ್ಟ ಮೊತ್ತಗಳನ್ನು ಮರುಪಾವತಿಸಿರೆಂದು ರೈತರ ಹಿಂದೆ ಬೀಳುವುದಕ್ಕೆ ಬದಲಾಗಿ, ಒಂದೇ ಬಾರಿಗೆ ತಾವು ಕೊಟ್ಟ ಸಾಲವೆಲ್ಲಾ ತಿರುಗಿ ಬರುವುದಾದರೆ ಬ್ಯಾಂಕುಗಳಿಗೆ ಸಂತೋಷವಾಗದಿರುತ್ತದೆಯೇ?

ಮೂಲತಃ ನಮ್ಮ ಸಂಸ್ಕೃತಿ ಏನು?
ಬ್ಯಾಂಕುಗಳಲ್ಲಿ ಠೇವಣಿಯಿಡುವವರು ಇದ್ದರೆ ಅದರಿಂದ ಜನರಿಗೆ ಅವಶ್ಯಕವಾದ ಸಾಲಗಳು ದೊರಕುತ್ತವೆ. ಹಾಗೆಯೇ ಖಾತೆಯನ್ನು ತೆರೆದವರಿಗೆ ಬೇಕಾದಾಗ ಅವರ ಠೇವಣಿಗಳು ಮರುಪಾವತಿಯಾದಾಗ ಮಾತ್ರ ಬ್ಯಾಂಕಿನ ಮೇಲೆ ವಿಶ್ವಾಸವಿರುತ್ತದೆ. ಸಾಲ ತೆಗೆದುಕೊಳ್ಳುವವರು ಸರಿಯಾಗಿ ಮರುಪಾವತಿಸಿದಾಗ ಮಾತ್ರ ಬ್ಯಾಂಕು ಸುಸೂತ್ರವಾಗಿ ಕೆಲಸಮಾಡುತ್ತದೆ. ಸಾಲ ಪಡೆದು ಜವಾಬ್ದಾರಿಯಿಂದ ಮರುಪಾವತಿಸುವವರಿಗೆ ಬ್ಯಾಂಕುಗಳು ಹೆಚ್ಚಿನ ಸವಲತ್ತುಗಳನ್ನು ಕೊಡಬೇಕು. ಕೆಲವರು ಅಪಾಯದ ವ್ಯಾಪಾರಕ್ಕೆ ಸಾಲ ಪಡೆಯುತ್ತಾರೆ. ಅವು ತೊಂದರೆಗೆ ಬಿದ್ದರೆ ಸಾಲವನ್ನು ಮಾಫಿ ಮಾಡಬೇಕೆಂದು ಕೇಳುತ್ತಾರೆ. ಇಂಥ ಅಪಾಯದ ವ್ಯಾಪಾರಗಳಿಗೆ ಕೊಡುವ ಸಾಲದ ಬಡ್ಡಿದರ ಹೆಚ್ಚಿರಬೇಕು.

ಬ್ಯಾಂಕುಗಳಲ್ಲಿ ದೊಡ್ಡ ಸಾಲ ಪಡೆದ ಬಡಾ ಉದ್ಯಮಿಗಳ ಸಾಲದ ಪುನರ್ರಚನೆಯ ಪ್ರಯತ್ನವಾಗುತ್ತದೆ. ಇದನ್ನು ಪ್ರೋತ್ಸಾಹಿಸಬಾರದು. ಇಂಥ ‘ದೊಡ್ಡಮನುಷ್ಯರ’ ವಿಷಯಕ್ಕೆ ನ್ಯಾಯಾಲಯದ ಆದೇಶವಿದ್ದರೂ ದುಡ್ಡು ವಾಪಸ್ಸು ಬಾರದ ಅಪಾಯವಿದೆ. ಆಗ ಬ್ಯಾಂಕುಗಳು ನಿಸ್ಸಹಾಯವಾಗಿ ಕೈಕೈ ಹಿಸುಕಿಕೊಳ್ಳಬೇಕೇ ಹೊರತು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಮರುಪಾವತಿಯ ಸಂಸ್ಕೃತಿಯಲ್ಲಿ ನ್ಯಾಯವೂ ಇದೆ. ಜನ ತಮ್ಮ ನೈತಿಕತೆಯ ನೆಲೆಯಲ್ಲಿ ಮರುಪಾವತಿ ಮಾಡುತ್ತಾರೆ. ನ್ಯಾಯವಾಗಿ ನಡೆಯದಿದ್ದರೆ ನೈತಿಕತೆ ನಶಿಸುತ್ತದೆ.

ಕಾನೂನು ಮತ್ತು ಸಂಸ್ಥಾಗತ ಬದಲಾವಣೆಯ ಜೊತೆಯಲ್ಲಿ ಮರುಪಾವತಿಯ ಸಂಸ್ಕೃತಿಯ ಬಗ್ಗೆ ಯೋಚಿಸಬೇಕು. ಉಳಿತಾಯ ಮಾಡುತ್ತಿರುವವರ ಬಗ್ಗೆ ನಾವು ನೈತಿಕತೆಯನ್ನು ತೋರುತ್ತಿದ್ದೇವೆಯೇ? ಸಾಲ ಪಡೆದವರ ಹಿತಾಸಕ್ತಿಗಳನ್ನು ನ್ಯಾಯವಾಗಿ ಕಾಪಾಡುತ್ತಿದ್ದೇವೆಯೇ? ಉದ್ಯೋಗಿಗಳ ವಿಷಯದಲ್ಲಿ ನ್ಯಾಯವಾಗಿ ನಡೆದುಕೊಳ್ಳುತ್ತಿದ್ದೇವೆಯೇ? ಎಲ್ಲ ಹಿತಾಸಕ್ತಿಗಳ ಪರಸ್ಪರತೆಯಲ್ಲೆಷ್ಟು ನ್ಯಾಯವಿದೆ? ಆ ಸಮಯಕ್ಕೆ ಸುಸ್ತಿ ಸಾಲಗಳು ಕಡಿಮೆ ಮಟ್ಟದಲ್ಲಿತ್ತು. ಹೆಚ್ಚೆಚ್ಚು ಸಾಲಗಳನ್ನು ಕೊಟ್ಟದ್ದೇ ಅದಕ್ಕೆ ಕಾರಣವಾಗಿತ್ತು. ಬರ, ಅತಿವೃಷ್ಟಿಯಂತಹ, ಅನಿರೀಕ್ಷಿತ ನಷ್ಟಗಳು ವ್ಯಾಪಾರಕ್ಕಾದಾಗ, ಸಾಲದ ಪುನರ್ರಚನೆ ಸಮರ್ಪಕ. ಆದರೆ ದುರುದ್ದೇಶಕ್ಕೆ ಬಳಸಿಕೊಳ್ಳುವುದು ಅನ್ಯಾಯ. ಕೆಲ ಕಹಿ ಅನುಭವಗಳ ನಂತರ, ದೊಡ್ಡ ಉದ್ಯಮಿಗಳ ಸಾಲ ಪುನರ್ರಚನಾ ಕ್ರಮವನ್ನು ಬದಲಾಯಿಸಿದೆವು.

ಒಂದು ಸಂಸ್ಥೆಯ ಬಳಿ ಎಷ್ಟು ಆಸ್ತಿಯಿದೆ – ಅದರಿಂದ ಠೇವಣಿದಾರರ ಮತ್ತು ಇತರರ ಬಾಧ್ಯತೆಗಳನ್ನು ತೀರಿಸಲು ಸಾಧ್ಯವೇ ಎಂದು ಕಂಡುಕೊಳ್ಳುವುದೂ ನಿಯಂತ್ರಕರ ಕೆಲಸವೇ. ಸುಸ್ತಿ ಸಾಲಗಳ ಪರಿಭಾಷೆಯನ್ನು ಬ್ಯಾಂಕಿಂಗ್ ಕ್ಷೇತ್ರದ ನಿಯಂತ್ರಕರು ಹೆಚ್ಚಾಗಿ ಉಪಯೋಗಿಸುತ್ತಾರೆ. ಸಲ್ಲಿಸಬೇಕಾದ ದಿನಾಂಕ ಮೀರಿ ಅಸಲು ಅಥವಾ ಬಡ್ಡಿ ಬಾಕಿ ಉಳಿದಾಗ ಅದನ್ನು ಸುಸ್ತಿ ಎನ್ನುತ್ತೇವೆ. ಇಲ್ಲಿ ಸಾಲ ಕೊಟ್ಟವರಿಗೆ ವಸೂಲಿ ಮಾಡುವ ಸಮಸ್ಯೆಯಿದೆ ಎಂದು ತಿಳಿದುಬರುತ್ತದೆ.

ಸೂಚಿಸಿದ ದಿನಾಂಕದ ನಂತರ 90 ದಿನಗಳ ಕಾಲ ಪಾವತಿಯಾಗದ ಸಾಲವನ್ನು ಅಂತರರಾಷ್ಟ್ರೀಯವಾಗಿ ಸುಸ್ತಿ ಎನ್ನುತ್ತಾರೆ. ಮೊದಲು ನಮ್ಮ ಪದ್ಧತಿ ಕಟ್ಟುನಿಟ್ಟಾಗಿರಲಿಲ್ಲ, ಈಗ ನಾವೂ, ಈ ವ್ಯಾಖ್ಯಾನವನ್ನು ಒಪ್ಪಿದ್ದೇವೆ, ಕೃಷಿ ಸಾಲದ ವಿಷಯದಲ್ಲೂ ಎರಡು ಕೊಯ್ಲುಗಳ ಕಾಲ ಮರುಪಾವತಿಯಾಗದಿದ್ದರೆ ಅದನ್ನು ಸುಸ್ತಿ ಎಂದು ವರ್ಗೀಕರಿಸುತ್ತೇವೆ.

ಸುಸ್ತಿ ಸಾಲಗಳನ್ನು ಮೂರು ಉಪ ಪ್ರಬೇಧದಲ್ಲಿ ವರ್ಗೀಕರಿಸುತ್ತೇವೆ. ಸುಸ್ತಿಯಾಗಿ ಎಷ್ಟು ಕಾಲ ಉಳಿದಿರುತ್ತೋ ಅಥವಾ ಅದರ ಮರುಪಾವತಿ ಎಷ್ಟು ಕಷ್ಟವೋ, ಅದೇ ಈ ವರ್ಗೀಕರಣಕ್ಕೆ ಆಧಾರ. ಹನ್ನೆರಡು ತಿಂಗಳುಗಳು ಸುಸ್ತಿಯಾಗಿ ಉಳಿದ ಸಾಲವು ಅಧಮ ಗುಣಮಟ್ಟದ ಸಾಲವಾಗುತ್ತದೆ; 12 ತಿಂಗಳುಗಳ ಕಾಲ ಅಧಮ ಗುಣಮಟ್ಟದ ಸಾಲವಾಗಿ ಉಳಿದ ಸಾಲವನ್ನು ಅನುಮಾನಸ್ಪದ ಸಾಲವೆನ್ನುತ್ತೇವೆ, ಎಂದಿಗೂ ವಾಪಸ್ಸು ಬರಲಾರದೆಂದು ಬ್ಯಾಂಕು ಅಥವಾ ಲೆಕ್ಕಪರಿಶೋಧಕರು ಅಭಿಪ್ರಾಯ ಕೊಟ್ಟ ಸಾಲಗಳಿಗೆ ನಷ್ಟದ ಸಾಲವೆನ್ನುವ ವರ್ಗೀಕರಣವಿದೆ. ಸಾಲದ ನಷ್ಟವನ್ನು ಪರಿಗಣಿಸಿ ಲೆಕ್ಕದಿಂದ ಅಳಿಸಿದರೆ ಅದನ್ನು ಸುಸ್ತಿ ಎಂದು ಪರಿಗಣಿಸುವುದಿಲ್ಲ. ಸಂದರ್ಭಾನುಸಾರವಾಗಿ ನಿಯಂತ್ರಕರು ಈ ನಿಯಮಗಳನ್ನು ಸಡಿಲಗೊಳಿಸಬಹುದು.

ಸುಸ್ತಿಯಿಲ್ಲದ ಬ್ಯಾಂಕುಗಳಿಲ್ಲ. ಯಾವುದೇ ಬ್ಯಾಂಕು ಸಾಲವನ್ನು ಕೊಡುವಾಗ ಅದು ಸುಸ್ತಿಯಾಗುವ ಅಪಾಯವಿದೆ. ಆದರೆ ಇವನ್ನು ಬ್ಯಾಂಕುಗಳು ಬಹಿರಂಗ ಪಡಿಸಿವೆಯೇ, ಇವು ಒಟ್ಟಾರೆ ಒಪ್ಪಿತವಾಗಿರುವ ಮಿತಿಯಲ್ಲಿವೆಯೇ ಎನ್ನುವುದು ಮುಖ್ಯ ಪ್ರಶ್ನೆಗಳು. ಸಾಲಗಳು ಸುಸ್ತಿಯಾಗಲು ಅನೇಕ ಕಾರಣಗಳಿವೆ, ಎಲ್ಲವೂ ಅನ್ಯಾಯ-ದಗಾದಿಂದ ಸುಸ್ತಿ ಆಗುವುದಿಲ್ಲ. ವ್ಯಾಪಾರದಲ್ಲಿನ ಅಪಾಯವನ್ನು ಗುರುತಿಸದಿರುವುದು, ಅಂದಾಜು ಕೈತಪ್ಪುವುದು, ವ್ಯಾಪಾರ ಕೈಕಚ್ಚುವಂಥ ಯಾವುದು ಬೇಕಾದರೂ ಸುಸ್ತಿಗೆ ಕಾರಣವಾಗಬಹುದು.

ಒಮ್ಮೊಮ್ಮೆ ಸುಸ್ತಿದಾರರೊಂದಿಗೆ ಕೈಜೋಡಿಸಿ ಬ್ಯಾಂಕುಗಳು ತಪ್ಪು ವರ್ಗೀಕರಣ ಮಾಡಿ ಆಡಳಿತಾತ್ಮಕ ಅಥವಾ ನ್ಯಾಯಾಂಗ ತನಿಖೆಗಳಲ್ಲಿ ಸಿಕ್ಕಿಬೀಳುವುದೂ ಉಂಟು. ಸಾಲ ಪಡೆದವರು ಸರಿಯಾದ ಉದ್ದೇಶದಿಂದಲೇ ಪ್ರಾರಂಭಿಸಿದರೂ, ವ್ಯಾಪಾರದ ವೈಫಲ್ಯವನ್ನು ನೋಡಿದಾಕ್ಷಣ ಅಲ್ಲಿಂದ ಹಣ ತೆಗೆಯಲು ಆರಂಭಿಸುತ್ತಾರೆ. ಆ ವ್ಯಾಪಾರದಲ್ಲೇನಾಗುತ್ತಿದೆ ಎನ್ನುವುದು ಬ್ಯಾಂಕಿಗಿಂತ ಹೆಚ್ಚಾಗಿ ಸಾಲ ಪಡೆದವರಿಗೇ ಗೊತ್ತು. ಹಾಗೇ ಬ್ಯಾಂಕೂ ಈ ವಿಷಯವನ್ನು ತಕ್ಷಣ ಪರಾಕಾಷ್ಠೆಗೆ ಒಯ್ಯುವುದಿಲ್ಲ. ಹೀಗೆ ಸಮಯ ಮತ್ತು ವ್ಯಾವಹಾರಿಕ ಖರ್ಚು ಹೆಚ್ಚಾಗುತ್ತಾ ಪರಿಸ್ಥಿತಿ ಅನಿಶ್ಚಿತತೆಯತ್ತ ಹೊರಳುತ್ತದೆ. ಬ್ಯಾಂಕಿಂಗ್ ವ್ಯವಸ್ಥೆ ಗಟ್ಟಿಯಾಗಿ ನಿಲ್ಲಬೇಕೆಂದರೆ ಸರಿಯಾದ ಮರುಪಾವತಿಯ ಸಂಸ್ಕೃತಿಯಿರಬೇಕು. ಹೆಚ್ಚು ಸುಸ್ತಿ ಸಾಲಗಳು ಮತ್ತು ಸಾಲಮನ್ನಾ ಬ್ಯಾಂಕಿಂಗ್ ವ್ಯವಸ್ಥೆಗೆ ಒಳ್ಳೆಯದಲ್ಲ.

‍ಲೇಖಕರು Avadhi

April 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: