ಅಲರಕನ ಬೆಂಕಿಯುಗುಳುವ ಚಹಾದಂಗಡಿ ಕಥೆ…

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಬಹಳಹಿಂದೆಅಂದರೆ ಬಹುಶಃ ಐದೋ ಆರನೆಯೋಕ್ಲಾಸಿನಲ್ಲಿರಬೇಕು. ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಟೀಚರು ಕೇಳುವ ಪ್ರಶ್ನೆಗಳಿಗೆಲ್ಲ ಉತ್ತರ ಕೊಟ್ರೆ ಹೆಚ್ಚಿನ ಓದಿಗಾಗಿ ಶಾಲೆಯ ಕೈತೋಟಕ್ಕೆ ಹೋಗುವ ಅವಕಾಶ ಸಿಗುತ್ತಿತ್ತು. ನಾವು ಮೂರ್ನಾಲ್ಕು ಹುಡುಗಿಯರೂ, ಒಂದಿಬ್ಬರು ಹುಡುಗರೂ ಒಂದೇ ನೆಗೆತಕ್ಕೆ ಕ್ಲಾಸಿಂದ ತೋಟಕ್ಕೇ ಹಾರುತ್ತಿದ್ದೆವು.

ಮಾವಿನ ಮರಕ್ಕೇ ಕಾಂಪಿಟೀಷನ್‌ ಕೊಡುವಂತೆ ಅಡ್ಡಕ್ಕೂ ಎತ್ತರಕ್ಕೂ ಬೆಳೆದು ಭರಪೂರ ಹಣ್ಣು ಕೊಡುತ್ತಿದ್ದ ಕಡು ಹಸಿರ ಛಾವಣಿ ಹೊದ್ದು ತಂಪು ತಂಪು ನೆಳಲ ನೀಡುತ್ತಿದ್ದ ಚಿಕ್ಕಿನ ಮರ ಏರಿ ಪುಸ್ತಕ ಅಡ್ಡ ಹಿಡಿದು ಪಿಸಿಪಿಸಿ ಮಾತಾಡುತ್ತಾ, ನಗುತ್ತಾ ಮಂಗಗಳ ಹಾಗೆ ಅರೆಹಣ್ಣಾದ ಚಿಕ್ಕು ಅರ್ಧಂಬರ್ಧ ತಿಂದು  ಬಾಯಲ್ಲೆಲ್ಲ ಮೇಣ ಮೆತ್ತಿಕೊಂಡು, ಬೆಲ್‌ ಆದಾಗ ಗಂಟಲು ಕಟ್ಟಿ ನೀರು ನುಂಗಲೂ ಆಗದೆ ಚಡಪಡಿಸುತ್ತಿದ್ದೆವು.

ಅಂಥ ದಿನಗಳಲ್ಲಿ ನಮ್ಮ ಈ ಗ್ಯಾಂಗಿನ ಗೆಳೆಯನೊಬ್ಬ ತನ್ನ ರೈಲು ಪ್ರಯಾಣದ ಕಥೆ ಹೇಳುತ್ತಾ, ʻಪ್ರತಿ ಸ್ಟೇಷನ್ನಿನಲ್ಲೂ ಚಹಾ ಮಾರುವವರು ಚಾ… ಟೀ… ಟೀ… ಚಾ… ಅಂತ ಮಾರ್ತಾ ಹೋಗ್ತಿರ್ತಾರೆ. ಮಜಾ ಅಂದ್ರೆ, ನಂಗೆ ಅವರು ಹೇಳೋದು ಒಮ್ಮೆ ಚಾಟೀ ಅಂತ ಕೇಳಿಸ್ತಿತ್ತು, ಮತ್ತೊಮ್ಮೆ ಟೀಚಾ ಅಂತ ಕೇಳಿಸ್ತಿತ್ತು. ನೀವೆಲ್ಲ ಹುಡ್ಗೀರು ಟೀಚರ್‌ ಹಿಂದಿಂದೆ ಸುತ್ತಿ ಟೀಚಾ ಟೀಚಾ ಅನ್ನೋವಾಗ್ಲೆಲ್ಲ ನಂಗೆ ಚಹಾ ಮಾರೋನನ್ನೇ ನೆನಪಾಗುತ್ತೆʼ ಅಂತ ಹೇಳಿ ನಕ್ಕು ಬಿಟ್ಟಿದ್ದ. ಆಗ ಅಲ್ಲಿಯವರೆಗಿನ್ನೂಒಮ್ಮೆಯೂ ರೈಲು ಹತ್ತಿರಲಿಲ್ಲವಾದ ನನಗದು ಹೊಸ ವಿಷಯವಾಗಿತ್ತು.

ಆ ಕಾಲದಲ್ಲಿ ನಮ್ಮ ಪುಟ್ಟ ಊರಲ್ಲೆಲ್ಲ ಚಹಾ ಮಾರೋರು ಅನ್ನೋ ಕಾನ್ಸೆಪ್ಟೇ ನೋಡಿರಲಿಲ್ಲ. ನೀಲಿ ಬಣ್ಣ ಬಳಿದ ಪೆಟ್ಟಿಗೆ ಅಂಗಡಿಗಳಲ್ಲೆಲ್ಲ ಮೂರೂ ಹೊತ್ತು ಚಹಾ ಕುದಿಸುವ ದೃಶ್ಯವೆಲ್ಲ ಆಗ ನಮ್ಮೂರಲ್ಲಿ ಇರಲಿಲ್ಲ. ಬಹುಶಃ ಈಗಲೂ ಇಲ್ಲ. ನಮ್ಮ ನಮ್ಮ ಮನೆಯ ಚಹಾ, ಇಲ್ಲವೇ ನೆಂಟರ ಮನೆಯದ್ದು ಬಿಟ್ಟರೆ ಬೇರೆ ಚಹಾ ರುಚಿಯನ್ನು ಕಲ್ಪಿಸಿಕೊಂಡಿದ್ದೇ ಇಲ್ಲ.

ನಾಲ್ಕು ದಿಕ್ಕಿಗೆ ಹೋಗುವ ನಾಲ್ಕು ಮಾರ್ಗಗಳಲ್ಲಿ ಎಡಕ್ಕೆ ಹೋದರೊಂದು ಬ್ರಾಹ್ಮಣರ ಹೋಟೆಲ್ಲೂ, ಶಾಲಾ ರಸ್ತೆಯಲ್ಲಿ ಹೋದರೆ ಬನ್ಸು, ಗೋಳಿ ಬಜೆ ಸಿಕ್ಕುವ ಇನ್ನೊಂದು ಹೋಟೆಲ್ಲು ಬಿಟ್ಟರೆ ನಮ್ಮ ಪ್ರಪಂಚ ಎಂಬ ಫ್ರೇಮು ಚಿಕ್ಕದಾಗಿತ್ತು. ಅಲ್ಲೆಲ್ಲ ಚಹಾ ಕುಡಿದ ನೆನಪಂತೂ ನನಗಿಲ್ಲ. ಹಾಗಾಗಿ ಚಹಾ ಮಾರುವಾತನ ಚಿತ್ರವೊಂದು ನನ್ನ ಫ್ಯಾಂಟಸಿ ಲೋಕದಲ್ಲೊಂದು ಚಿತ್ರವಾಗಿ ಉಳಿದು ವಿಚಿತ್ರ ಕುತೂಹಲ ಬಂದಿತ್ತು.

ಆಗೆಲ್ಲ ಬೆಳಗಾದ ಕೂಡಲೇ ಅಮ್ಮ ಅತ್ತ ಪೂರ್ತಿ ಬೆಳ್ಳಗೂ ಅಲ್ಲದ, ಇತ್ತ ಕಂದೂ ಅಲ್ಲದ, ಕಲಗಚ್ಚು ಬಣ್ಣದ ಚಹಾ ಮಾಡಿಕೊಡುತ್ತಿದ್ದರು. ಆಗಿನ ಬೆಳಗುಗಳಿಗೂ ಆ ಬೆಳ್ಳಗಿನ ಚಹಾಕ್ಕೂ ಅದೇನು ಲಿಂಕೋಗೊತ್ತಿಲ್ಲ. ದಿನ ಕಳೆದಂತೆ ನನ್ನ ಕುತೂಹಲ ಇದ್ದಿದೆಲ್ಲ, ಅದಕ್ಕೆ ಅಮ್ಮ ಚಹಾಪುಡಿ ಹಾಕಿರುತ್ತಿದ್ದರೋ ಇಲ್ಲವೋ ಎಂಬುದು. ನಾನು ಏಳುವ ಹೊತ್ತಿಗಾಗಲೇ ಅಪ್ಪನೂ ಅಮ್ಮನೂ ಚಹಾ ಕುಡಿದು ನಮ್ಮ ಚಹಾ ರೆಡಿ ಮಾಡಿ, ಅದು  ತುಂಬಿದ ಸ್ಟೀಲ್‌ ಲೋಟವನ್ನು ಬಿಸಿಯಾಗಿರಲಿ ಎಂದು ಒಲೆಯಲ್ಲಿ ಮೈಬಿಸಿ ಮಾಡಿಕೊಂಡಿರುತ್ತಿದ್ದ ಮುಚ್ಚಳ ಮುಚ್ಚಿದ ಪಾತ್ರೆಯ ಮೇಲೆ ಇಟ್ಟು, ಸದಾ ತರಗೆಲೆ ಹೊದ್ದುಕೊಂಡು ಬೆಳಗು ಸ್ವಾಗತಿಸುತ್ತಿದ್ದ ಅಂಗಳ ಗುಡಿಸಲು ಹೋಗಿರುತ್ತಿದ್ದರು. ಹೀಗಾಗಿ ಅಮ್ಮನ ಚಹಾ ರಹಸ್ಯ ಬಹಳ ಕಾಲದವರೆಗೆ ರಹಸ್ಯವಾಗಿಯೇ ಉಳಿದಿತ್ತು.

ಚಹಾ ಮಾಡಿ ಸೋಸಿ ಉಳಿದ ಚಹಾ ಸೊಪ್ಪಿನಲ್ಲಿ ಮತ್ತೆ ಹಾಲೆರೆದು ಕುದಿಸಿ ನಮಗಾಗಿ ಆ ಚಹಾ ಮಾಡುತ್ತಿದ್ದರು ಎಂಬ ಅಮ್ಮನ ʻಸೀಕ್ರೆಟ್‌ ಆಫ್‌ ಮೇಕಿಂಗ್‌ ಕಲಗಚ್ಚಹಾʼ ನನಗೊಮ್ಮೆ ಗೊತ್ತಾಗಿ, ʻನನ್ನಂಥ ಮುಗ್ಧಳನ್ನು ಎಷ್ಟು ಕಾಲ ಯಾಮಾರಿಸಿ ಬಿಟ್ಟೆಯಲ್ಲ ಅಮ್ಮʼ ಎಂದು ಅಮ್ಮನನ್ನು ಕೊಂಡಾಡಿದರೆ, ಅಮ್ಮ ಮಾತ್ರ ತಾನು ಮಾಡುತ್ತಿದ್ದ ಸೆಕೆಂಡ್‌ ಹ್ಯಾಂಡ್‌ ಚಹಾವನ್ನು ʻಮಕ್ಕಳಿಗೆಲ್ಲ ನಾವು ಕುಡಿಯೋವಂಥ ಸ್ಟ್ರಾಂಗು ಚಹಾ ಕೊಡುತ್ತಾರೇನು?ʼ ಎಂದು ಸಮರ್ಥಿಸಿಕೊಂಡಿದ್ದಳು.

ಈಗ ಅಮ್ಮನ ಕಾಳಜಿ ಅರ್ಥವಾಗಿ ಆಕೆ ಮಾಡಿದ ಹಿಕ್ಮತ್ತನ್ನು ನಾನು, ನಮ್ಮ ಮುಂದಿನ ಪೀಳಿಗೆಗೂ ಧಾರೆ ಎರೆವ ಸದುದ್ದೇಶದಿಂದ ಪ್ರಯತ್ನ ಮಾಡಿದರೂ, ನನ್ನ ಮಗನ ಪ್ರಪಂಚವೆಂಬ ಫ್ರೇಮಿನೊಳಗಿನ ಚಿತ್ರಗಳು ಬದಲಾದ್ದರಿಂದ, ತಿರುಗಿದ ಊರು, ಹತ್ತಿದ ಬೆಟ್ಟಗಳಲ್ಲೆಲ್ಲ ನಾನಾ ನಮೂನೆಯ ಚಹಾ ಕುಡಿದು ಸ್ಮಾರ್ಟಾಗಿದ್ದಾನೆ.

* * * *

ಹೆಚ್ಚು ನಾಸ್ಟಾಲ್ಜಿಕ್‌ ಆದರೆ ನನ್ನ ವಯಸ್ಸಿನ ಮೇಲೆಯೇ ನನಗೆ ಡೌಟಾಗೋದ್ರಿಂದ ಸದ್ಯಕ್ಕೆ ಆ ವಿಚಾರ ಅಲ್ಲಿಗೆ ನಿಲ್ಲಿಸಿ ಬಿಡುವ. ಇದೆಲ್ಲ ನೆನಪಾಗಲು ಕಾರಣವೂ ಇದೆ. ಭಾರತದ ಉತ್ತರ ಗಡಿಯ ಕೊನೆಯ ಟೀಸ್ಟಾಲ್‌ನಲ್ಲೀಗ ನಾವು ಚಹಾ ಕುಡಿತ್ತಿದ್ದೇವೆಂಬ ರೋಮಾಂಚನದಿಂದ ಹಿಡಿದು, ದಕ್ಷಿಣ ತುದಿಯ ಫಿಲ್ಟರ್‌ ಕಾಫಿವರೆಗೆ ಸಾಕಷ್ಟು ನಮೂನೆಯ ಟೀ ಕಾಫಿಗಳು ಹೊಟ್ಟೆಗಿಳಿದಿವೆ.

ಈ ಚಹಾ ಹಾಗೂ ಪ್ರಯಾಣ ಎಂಬುದು ಅವಳಿ ಜವಳಿಗಳ ಹಾಗೆ. ಜೊತೆಗಿದ್ದರೆ ಚಂದ. ಯಾವುದೇ ಪ್ರಯಾಣವನ್ನು ಮಧುರವಾಗಿಸುವಂತ ತಾಕತ್ತು ಒಂದು ಹತ್ರುಪಾಯಿ ಚಹಾದಲ್ಲಿದೆ. ಪ್ರಯಾಣದುದ್ದಕ್ಕೂ ಸಿಗುವ ಪುಟ್ಟ ಪುಟ್ಟ ಊರುಗಳ ನೆನಪುಗಳೆಲ್ಲ ಈ ಚಹಾವೆಂಬ ಪೇಯದೊಳಗೆ ಅಡಗಿರುತ್ತದೆ. ರಾಜಸ್ಥಾನದ ಮರುಳುಗಾಡಿನಿಂದ ಹಿಡಿದು ಹಿಮಾಚಲ, ಕಾಶ್ಮೀರ, ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹೀಗೆ ಭಾರತದ ಉತ್ತರದ ರಾಜ್ಯಗಳೆಲ್ಲವುಗಳ ಚಹಾಗಳು, ಆ ಚಹಾ ಹೊತ್ತ ಮಣ್ಣಿನ ಲೋಟದ ಘಮ ಎಂದಿಗೂ ಮಣ್ಣಾಗುವುದೇ ಇಲ್ಲ. ಇನ್ನು ಅಂದು ಫ್ಯಾಂಟಸಿಯಾಗಿ ಕಂಡಿದ್ದ ರೈಲಿನ ʻಚಾಯ್‌ʼ ರುಚಿ ಮಾತ್ರ ಇಂದು ದುಃಸ್ವಪ್ನ.

* * * *

ವಿಷಯ ಹೇಳಲು ಹೊರಟಿದ್ದೇನು ಎಂದು ನೇರವಾಗಿ ಪಾಯಿಂಟಿಗೆ ಬರುತ್ತೇನೆ. ಈವರೆಗೆ ನೋಡಿದೆಲ್ಲ ಚಹಾಕ್ಕಿಂತ ಭಿನ್ನವಾಗಿ ಕಂಡದ್ದು ಈಗ್ಗೆ ಕೆಲ ತಿಂಗಳ ಹಿಂದೆ ಭೇಟಿಕೊಟ್ಟ ಅಲರಕನ ಟೀ ಸ್ಟಾಲ್.‌ ಅಲರಕ! ನಾನೇನಾದ್ರೂ ಅಕ್ಷರ ಕಲಸು ಮೇಲೋಗರ ಮಾಡಿ ಹೇಳ್ತಿದೀನೋ ಅಥವಾ ಹೆಸರೇ ಹಾಗೆಯೋ ಎಂದು ಡೌಟಾಗಿಬಿಡುವಂಥ ವಿಚಿತ್ರ ನಾಮಧೇಯ. ಈ ಹೆಸರಿನ ವ್ಯಕ್ತಿಗೊಂದು ಸದಾ ಗಿಜಿಗುಟ್ಟುವ ಟೀ ಸ್ಟಾಲ್!‌ ಆತನ ಹೆಸರಿನಂತೆ ಆತ ಚಹಾ ಮಾಡುವ ಪ್ರಕ್ರಿಯೆಯೂ ವಿಚಿತ್ರವೇ.

ಗುಜರಾತಿನ ಕಚ್‌ ಬಿಟ್ಟು ದ್ವಾರಕೆಗೆ ಹೊರಟಿದ್ದೆವು. ಹೊಟ್ಟೆ ಖಾಲಿ. ಬೆಳ್ಳಂಬೆಳಗ್ಗೆ ಹಾಗೆ ಹೊರಟು ದಾರಿ ಮಧ್ಯೆ ಏನಾದರೂ ಸಿಕ್ಕಿದರೆ ತುಂಬಿಸಿಕೊಂಡರಾಯ್ತು ಎಂದುಕೊಂಡು ಹೊರಟಿದ್ದಾಗಿತ್ತು. ಏಳುವರೆಯೂ ದಾಟಿರಲಿಲ್ಲ. ರಸ್ತೆಬದಿಯ ಆ ಸಣ್ಣ ಅಂಗಡಿ ತುಂಬ ಜನ. ಇಲ್ಲೇನು ಮದುವೆ ನಡೀತಿದ್ಯಾ ಎಂಬಷ್ಟು! ಸಣ್ಣ ಅಂಗಡಿ ಮುಂದೆ ಜನ ಜಾತ್ರೆ ತುಂಬಿದ್ದರೆ, ಕೇಳಬೇಕಾ! ಖಂಡಿತ ಬಹಳ ರುಚಿಯಾದ್ದು ಏನೋ ಆ ಊರಲ್ಲೇ ವಲ್ರ್ಡು ಫೇಮಸ್ಸು ಪಕ್ಕಾ ಅಂತ ಲೆಕ್ಕ.

ಸರಿ, ನಾವೂ ಒಂದು ಬ್ರೇಕ್‌ ಕೊಟ್ಟು ಒಳ ಹೊಕ್ಕರೆ, ಎಲ್ಲರೂ ಚಹಾ ಕುಡೀತಿದ್ದಾರೋ, ಪಾಯಸವೋ ಎಂದು ಡೌಟು ಬರುವ ಹಾಗೆ ಬೋಗುಣಿ ಬಾಯಿಗಿಟ್ಟು ಕುಡಿಯುವವರೇ! ಮದುವೆ ಮನೆಯಲ್ಲಿ ಜಗ್‌ ಹಿಡಿದು ಬಿಸ್ನೀರೋ, ತಣ್ಣೀರೋ ಎಂದು ಊಟಕ್ಕೆ ಕೂತವರಿಗೆ ಕೇಳುತ್ತಾ ಹೋಗುತ್ತಾನಲ್ಲ, ಆ ಥರ ಒಬ್ಬಾತ ಮಾತ್ರ ಅತ್ತಿಂದಿತ್ತ ಇತ್ತಿಂದತ್ತ ಜಗ್‌ ಹಿಡಿದು ಸುತ್ತುತ್ತಿದ್ದಾನೆ.

ಈ ಚಹಾ ಪ್ರಪಂಚವೇ ಮಜವಾಗಿದೆಯಲ್ಲ ಅಂತ ನಾನು ಹಾಗೆಯೇ ನೋಡುತ್ತಿದ್ದರೆ, ಆ ಮೂಲೆಯಲ್ಲಿ ಒಬ್ಬಾತ, ಯಮಲೋಕದಲ್ಲಿ ಕೊತ ಕೊತ ಎಣ್ಣೆ ಕುದಿಸಿ ಇನ್ನೇನು ನಮ್ಮನ್ನೆಲ್ಲ ಅದಕ್ಕೆ ಹಾಕಿಬಿಡುತ್ತಾನೋ ಎಂಬ ಹಾಗೆ ದೊಡ್ಡ ಪಾತ್ರೆಯಲ್ಲಿ ಎತ್ತರೆತ್ತರಕ್ಕೆ ಚಿಮ್ಮುವ ಬೆಂಕಿಯೆಡೆಯಲ್ಲಿ ನಿಂತಿದ್ದಾನೆ. ಆ ಕೆನ್ನಾಲಿಗೆಯ ಎಡೆಯಲ್ಲಿ ಅಗ್ನಿಪರೀಕ್ಷೆಯಲ್ಲಿ ಎದ್ದು ಬಂದವನಂತೆ ಬೆಳಗ್ಗಿನ ಸೂರ್ಯನ ಹೊಂಬಣ್ಣವೂ ಸೇರಿ ಕೆಂಪಗೆ ಹೊಳೆಯುತ್ತಿದ್ದಾನೆ. ಅರೆ, ಈತ ನಿಜಕ್ಕೂ ಚಹಾ ಮಾಡುತ್ತಿದ್ದಾನೋ ಇಲ್ಲವೋ ಅನಿಸುತ್ತಿತ್ತು.

ನಾನು ಹಾಗೆ ಅಂದುಕೊಳ್ಳುತ್ತಿರುವಾಗಲೇ, ಎಲ್ಲರ ಬಳಿ ಜಗ್‌ ಹಿಡಿದು ಸುತ್ತುತ್ತಿದ್ದಾತ ನನ್ನ ಬಳಿಯೂ ಬಂದ. ʻನಂಗೊಂದು ಪೇಪರ್‌ ಕಪ್‌ಲಿ ಹಾಕಿ ಕೊಡಿʼ ಅಂದೆ. ಕಪ್‌ ಕೈಗಿಟ್ಟು ಅದರ ತುಂಬ ಚಹಾ ಸುರಿದು ಬಂದಷ್ಟೇ ವೇಗದಲ್ಲಿ ಮತ್ತೊಬ್ಬನ ಬಳಿಗೆ. ಚಹಾ ಖಾಲಿಯಾಯಿತೆಂದು ಎಸೆಯುವ ಮೊದಲೇ ಕರೆಕ್ಟಾಗಿ ಆತ ಮತ್ತೊಮ್ಮೆ ಪ್ರತ್ಯಕ್ಷ. ʻಹಾಕ್ಲಾʼ ಎಂದು ಅದೇ ಮದುವೆ ಮನೆಯ ಬಂಧುವಂತೆ ವಿಚಾರಿಸಿ ಕಪ್ಪಿಗೆ ಸುರಿಸುರಿದು  ಕೊಡುತ್ತಾನೆ. ಆ ಕಪ್‌ ಮುಗಿದರೆ ಮತ್ತೊಮ್ಮೆ. ಅಲ್ಲಿದ್ದ ಅಷ್ಟೂ 40-50 ಮಂದಿಯಲ್ಲಿ ಪ್ರತಿಯೊಬ್ಬನೂ ಕನಿಷ್ಟ ಮೂರು ಬಾರಿ ಚಹಾ ಹಾಕಿಸಿಕೊಳ್ಳದಿದ್ದರೆ ಕೇಳಿ.

ನಾನು  ಆಗಲೇ ಅಮೋಘ ಮೂರನೇ ಬಾರಿ ಚಹಾ ಹಾಕಿಸಿಕೊಂಡು, ಯಾವುದಕ್ಕೂ ಅಲರಕ ಬೆಂಕಿಯ ನಡುವಲ್ಲಿ ಚಹಾ ಮಾಡುವ ಒಂದು ಫೋಟೋ ತೆಗೆದುಬಿಡುವ ಅಂತ ಹತ್ತಿರ ಹೋದರೆ, ಆತ ತದೇಕ ಚಿತ್ತದಿಂದ ಚಹಾ ಕುದಿಸುತ್ತಿದ್ದಾನೆ. ನನ್ನ ಕುತೂಹಲ ತಣಿಸಿಕೊಳ್ಳಲು ಒಂದೆರಡು ಪ್ರಶ್ನೆ ಕೇಳಿದರೆ, ಮಾತಿಲ್ಲ.

]ಸುಮ್ಮನೆ ನನ್ನ ಮುಖವನ್ನೊಮ್ಮೆ ದಿಟ್ಟಿಸಿ ಮತ್ತೆ ತನ್ನ ಕಾಯಕ. ಬಹುಶಃ ಈತ ಕೆಲಸ ಮಾಡೋವಾಗ ಮಾತಾಡೋದಿಲ್ವಾ ಅಂತ ಡೌಟು ಬಂದರೆ, ಪಕ್ಕದಲ್ಲಿರೋ ಸಹಾಯಕ ಅಲರಕನಿಗೆ ಮಾತು ಬರಲ್ಲ, ಕಿವಿಯೂ ಕೇಳಲ್ಲ ಎಂಬ ಸತ್ಯ ಅರುಹಿದ. ನನಗೆ ನಿಜಕ್ಕೂ ಶಾಕ್!

ಇದ್ದಿಲಿನ ಒಲೆಯಲ್ಲಿ ಚಹಾ ಮಾಡುವ ಅವರದ್ದೇ ಒಂದು ಸ್ಟೈಲ್.‌ ದಶಕದಿಂದಲೇ ಅಲರಕ ಹೀಗೇ ಇಲ್ಲಿ ಚಹಾ ಮಾರುತ್ತಿದ್ದಾನೆ. ಜೊತೆಗೆ ಇಬ್ಬರು ಸಹಾಯಕರು. ಹೆದ್ದಾರಿಯ ಬದಿಯಲ್ಲೇ  ಅಂಗಡಿಯಾದ್ದರಿಂದ ದಿನವಿಡೀ ಗಿಜಿಗುಡುತ್ತದೆ. ಒಂದು ದಿನವೂ ಖಾಲಿ ಕೂತಿದ್ದಿಲ್ಲ. ಪಕ್ಕದಲ್ಲೇ ಇನ್ನೂ ೨೫ ದಾಟದ ಸಹೋದರರಿಬ್ಬರ ದಬೇಲಿ ಸ್ಟಾಲ್.‌ ಅವರ ದಬೇಲಿಯೂ ಅಷ್ಟೇ, ದಾರಿಹೋಕರ ಹಾಟ್‌ ಫೇವರಿಟ್.‌ ಇವೆರಡೇ ಸಿಗುವ ಅಲ್ಲಿ ಜನರ ಗೌಜಿಯೋ ಗೌಜಿ. ದಬೇಲಿಯನ್ನೂ ಮುಕ್ಕಿ ಚಹಾವನ್ನೂ ಹೊಟ್ಟೆಗಿಳಿಸಿ, ಇನ್ನೇನು ಬಿಲ್‌ ಕೊಡಬೇಕು ಎಂದರೆ ಮತ್ತೂ ಒಂದು ಆಶ್ಚರ್ಯ ಕಾದಿತ್ತು.

ಅಷ್ಟೂ ಜನರಿಗೆ ಭರಪೂರ ಸುರಿಯುತ್ತಿದ್ದ ಜಗ್‌ ಹಿಡಿದು ಸುತ್ತುವಾತನ ಜ್ಞಾಪಕಶಕ್ತಿಗೊಂದು ಪ್ರಶಸ್ತಿ ಕೊಡಬೇಕು. ಏನೂ ಬರೆದುಕೊಳ್ಳದೆ, ಮನಸ್ಸಲ್ಲೇ ಅಷ್ಟೂ ಮಂದಿ ಪ್ರತಿಯೊಬ್ಬರೂ ಎಷ್ಟೆಷ್ಟು ಬಾರಿ ಚಹಾ ಕುಡಿದರೆಂದು ಪಟಪಟನೆ ಹೇಳುವ ಚಾಕಚಕ್ಯತೆಗೆ ದಂಗಾಗಿ ಹೋದೆ. ʻನೀವೆಲ್ಲರೂ ಒಟ್ಟು ಒಂಭತ್ತು ಚಹಾ ಕುಡಿದಿದ್ದೀರಿ, ಹಾಗಾಗಿ ತೊಂಭತ್ತು ರುಪಾಯಿʼ ಎಂದ. ʻನಿಮ್ಮ ಮೆದುಳು ಭಯಂಕರʼ ಎಂದು ನಾನೂ ಸರ್ಟಿಫಿಕೆಟ್‌ ಕೊಡುತ್ತಾ ಈ ಕಡೆ ತಿರುಗಿ ʻಎಷ್ಟಾಯ್ತಪ್ಪ ದಬೇಲಿಗೆʼ ಎಂದೆ. ಒಂದಕ್ಕೆ ೧೨ ರುಪಾಯಿ ಎಂದ. ʻಅಷ್ಟೇ? ಕೇವಲ ೧೨?ʼ ಎಂದೆ. ನನಗೆ ನಾನಿನ್ನೂ ಅದೇ ಚಿಕ್ಕಿನ ಮರದಲ್ಲೇ ಇದ್ದೇನಾ ಅಂತ ಡೌಟಾಯಿತು.

* * * *

ಯಾವತ್ತೋ ಎಲ್ಲೋ ಓದಿದ ಯಾವುದೋ ಊರಿನ ಚಹಾ ಮಾರುವಾತ ಹೇಳಿದ ಮಾತು ಇಲ್ಲಿ ನೆನಪಾಗುತ್ತಿದೆ. ಯಾರೋ ಒಬ್ಬರು, ʻನಿನ್ನ ಬದುಕಿನ ಅತ್ಯಂತ ಖುಷಿಯ ಕ್ಷಣ ಯಾವುದು?ʼ ಅಂತ ಕೇಳಿದಾಗ ಆತ ಹೇಳಿದ್ದು ಇಷ್ಟು. ʻಒಂದು ದಿನ ಯಾವತ್ತಿಗಿಂತ ಹೆಚ್ಚು ಸಂಪಾದಿಸಿದ್ದೆ. ನಾನು ಚಹಾ ಮಾರುವ ರಸ್ತೆಯ ಎದುರು ಮೆಕ್‌ ಡೊನಾಲ್ಡ್ಸ್‌ ಇತ್ತು. ದಿನವೂ ಜನ ಅಲ್ಲಿ ಮುಗಿಬಿದ್ದು ತಿನ್ನುವುದು ನೋಡಿದ್ದೆ. ಹೆಚ್ಚು ಸಂಪಾದಿಸಿದ ಖುಷಿಗೆ ಆ ದಿನ ನಾನು ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅವರಿಗೆ ಬರ್ಗರ್‌ ಕೊಡಿಸಿದೆ. ಮಕ್ಕಳು ಖುಷಿಯಿಂದ ತಿಂದು ನನ್ನ ಮುಖ ನೋಡಿದರು. ಅವರು ನನ್ನನ್ನು ಹೀರೋನಂತೆ ನೋಡಿದ ಅವರ ಸಂತೃಪ್ತಿಯ ಭಾವ ಯಾವತ್ತೂ ಮರೆಯಲಾಗದ್ದು. ಅದು ನನ್ನ ಬದುಕಿನ ಅತ್ಯಂತ ಖುಷಿಯ ಕ್ಷಣ.ʼ

ನಮಗೋ ಎಲ್ಲ ಬಿಟ್ಟು, ಅದ್ಯಾವುದೋ ಬೆಟ್ಟದೂರಿನ ಕಿರಾಣಿ ಅಂಗಡಿಯ ಚಹಾದ ಕನಸು. ಆತನಿಗೋ ಝಗಮಗಿಸುವ ಅಂಗಡಿಯ ಕನಸು. ಖುಷಿಗೆ ಡೆಫಿನಿಷನ್ನಿನ ಹಂಗಿಲ್ಲ. ಒಬ್ಬೊಬ್ಬರ ಖುಷಿಯ ಪರಿಧಿ ಒಂದೊಂದು ಅಷ್ಟೇ. ಅದು ಹತ್ರುಪಾಯಿಯದ್ದೇ ಇರಬಹುದು, ಹತ್ತು ಸಾವಿರದ್ದೇ ಇರಬಹುದು!

‍ಲೇಖಕರು ರಾಧಿಕ ವಿಟ್ಲ

March 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: