ಶ್ರೀನಿವಾಸ ಪ್ರಭು ಅಂಕಣ: ಬರಸಿಡಿಲಿನಂತೆ ಬಂತು ಈ ಸುದ್ದಿ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 125
— — — —
ಈ ಸಮಯದಲ್ಲಿಯೇ ಬರಸಿಡಿಲಿನಂತೆ ಬಂದೆರಗಿದ ಒಂದು ವರ್ತಮಾನ ಕುಟುಂಬದವರೆಲ್ಲರಿಗೂ ಭಾರೀ ಆಘಾತವನ್ನೇ ಉಂಟುಮಾಡಿಬಿಟ್ಟಿತು. ಅದಾಗ ಅಣ್ಣ (ನನ್ನ ತಂದೆಯವರು) ಬಸವೇಶ್ವರ ನಗರದ ಕುಮಾರಣ್ಣಯ್ಯನ ಮನೆಯಲ್ಲೇ ಮೊದಲ ಮಹಡಿಯಲ್ಲಿ ಅಣ್ಣಯ್ಯ ಕಟ್ಟಿಸಿಕೊಟ್ಟಿದ್ದ ಒಂದು ಪುಟ್ಟ ಸ್ವತಂತ್ರ ಮನೆಯಲ್ಲಿಯೇ ವಾಸವಾಗಿದ್ದರು. ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ್ದರಿಂದ ಕುಟುಂಬದವರೊಂದಿಗೆ ಅವರು ವಾಸಿಸುವುದು ನಿಷಿದ್ಧವಾಗಿತ್ತು.

‘ನಿಮಗೆ ವಯಸ್ಸು ಎಂಬತ್ತು ದಾಟಿದೆ; ನೀವು ಎಲ್ಲೋ ಸ್ವತಂತ್ರವಾಗಿ ಇದ್ದುಕೊಳ್ಳುತ್ತೇನೆಂದು ಹೊರಟುಬಿಟ್ಟರೆ ನಾವು ಯಾರೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ನಮ್ಮ ಮನೆಯಲ್ಲೇ ಮೇಲೊಂದು ಪುಟ್ಟ ಸ್ವತಂತ್ರ ಮನೆಯಿದೆ. ನೀವು ಅಲ್ಲಿದ್ದುಕೊಂಡು ನಿಮ್ಮ ಅಧ್ಯಯನ—ಪ್ರವಚನ—ಸತ್ಸಂಗಗಳನ್ನು ಸಂತೋಷವಾಗಿ ನಡೆಸಿಕೊಳ್ಳಿ. ಪುಟ್ಟ ಅಡುಗೆಮನೆಯೂ ಇರುವುದರಿಂದ ಸ್ವಯಂಪಾಕ ಮಾಡಿಕೊಳ್ಳಲೂ ಅಡ್ಡಿ ಇಲ್ಲ. ಪೂರ್ವಾಶ್ರಮದ ಮಗನ ಮನೆಯಲ್ಲಿದ್ದೇನೆಂಬ ಹಳಹಳಿಕೆ ಬೇಡ.. ನಿಮ್ಮ ಶಿಷ್ಯರ ಬಗ್ಗೆ ಹೇಗೆ ನೀವು ವಾತ್ಸಲ್ಯ-ಪ್ರೀತಿಯಿಂದಿರುತ್ತೀರೋ ಹಾಗೇ ನಮ್ಮನ್ನೂ ಶಿಷ್ಯರೆಂದು ಪರಿಗಣಿಸಿ ಇಲ್ಲಿ ನಿರಾಳವಾಗಿರಿ. ಅದುಬಿಟ್ಟು ಹೊರಗೆಲ್ಲೋ ಮನೆ ಮಾಡಿಕೊಂಡಿರುತ್ತೇನೆಂದರೆ ನಾವು ಯಾರೂ ಖಂಡಿತ ಒಪ್ಪುವವರಲ್ಲ” ಎಂದು ಖಡಾಖಂಡಿತವಾಗಿ ನುಡಿದು ಅಣ್ಣನನ್ನು ಕಟ್ಟಿಹಾಕಿದ್ದ.

ಅಕ್ಕ- ಭಾವಂದಿರೂ ಸಹಾ ಅಣ್ಣಯ್ಯನ ಮಾತಿಗೆ ಬೆಂಬಲವಾಗಿ ನಿಂತಿದ್ದರಿಂದ ಅಣ್ಣ ವಿಧಿಯಿಲ್ಲದೆ ಅಣ್ಣಯ್ಯನ ಮಾತನ್ನು ಒಪ್ಪಿಕೊಳ್ಳಬೇಕಾಗಿ ಬಂದಿತ್ತು. ಅಣ್ಣ ಮುಂದೆ ಅಲ್ಲಿ ಸಾಕಷ್ಟು ಸಂತೋಷವಾಗಿಯೇ ಇದ್ದರು ಎನ್ನಬೇಕು. ಅಲ್ಲೇ ಸುತ್ತಮುತ್ತ ಇದ್ದ ಅನೇಕ ಶಿಷ್ಯರು ಆಗಾಗ್ಗೆ ಬಂದು ಅಣ್ಣನನ್ನು ನೋಡಿ ಮಾತಾಡಿಸಿಕೊಂಡು ಹೋಗುತ್ತಿದ್ದರು. ಪಾಠ-ಪ್ರವಚನಗಳು, ಗೀತಾ ತರಗತಿಗಳು, ವೇದೋಪನಿಷತ್ತುಗಳ ಪಾಠ.. ಎಲ್ಲವೂ ನಿಯಮಿತವಾಗಿಯೇ ನಡೆಯುತ್ತಿತ್ತು. ಹೀಗೆ ಎಲ್ಲವೂ ಸರಿಯಾಗಿದೆ ಎಂದು ನೆಮ್ಮದಿಯಿಂದಿರುವಾಗಲೇ ಆ ಧೃತಿಗೆಡಿಸುವ ಸುದ್ದಿ ಬಂದದ್ದು: ಅಣ್ಣನಿಗೆ ಬೋನ್ ಕ್ಯಾನ್ಸರ್.. ಅದೂ ನಾಲ್ಕನೆಯ ಹಂತ!

ಕೆಲವಾರು ದಿನಗಳಿಂದ ಅಣ್ಣ ಮೈ ಕೈ ನೋವುಗಳಿಂದ ಒದ್ದಾಡುತ್ತಿದ್ದರೂ ಚಿಕಿತ್ಸೆಯೂ ನಡೆಯುತ್ತಲೇ ಇದ್ದರೂ ವಯೋಸಹಜವಾದ ನೋವುಗಳೆಂಬುದು ಡಾಕ್ಟರ್ ಗಳ ಎಣಿಕೆಯಾಗಿತ್ತು. ನೋವು ಯಾವಾಗ ಶಮನವೇ ಆಗದೆ ತೀರಾ ಉಲ್ಬಣಗೊಂಡಿತೋ ಆಗ ಹೆಚ್ಚಿನ ಮಟ್ಟದ ತಪಾಸಣೆಗಳು ನಡೆದು ಈ ಕ್ಯಾನ್ಸರ್ ನ ಆಘಾತಕರ ವಿಷಯ ಬೆಳಕಿಗೆ ಬಂದದ್ದು. ಅಣ್ಣನಂತೂ ವಿಷಯ ತಿಳಿದು ತೀರಾ ಕುಸಿದುಹೋಗಿಬಿಟ್ಟರು. ಬೆಳಗಿನ ಜಾವ ಮೂರೂವರೆಗೆ ಎದ್ದು ರಾತ್ರಿ ಒಂಬತ್ತಕ್ಕೆ ಮಲಗುವ ಹೊತ್ತಿನ ತನಕ ಎಳ್ಳುಕಾಳಿನಷ್ಟೂ ವ್ಯತ್ಯಾಸವಾಗದ ಕ್ರಮಬದ್ಧ ಶಿಸ್ತಿನ ಜೀವನ ನಡೆಸುತ್ತಿದ್ದ, ಅತ್ಯಂತ ಕಟ್ಟುನಿಟ್ಟಾದ ಆಹಾರ ಪದ್ಧತಿ ಅನುಸರಿಸುತ್ತಿದ್ದ, ನಿಯಮಿತವಾಗಿ ಯೋಗ ಇತ್ಯಾದಿ ಶಾರೀರಿಕ ವ್ಯಾಯಾಮವನ್ನೂ ಮಾಡುತ್ತಿದ್ದ ಅಣ್ಣನಂಥಾ ಅಣ್ಣನಿಗೆ ಇಂಥದೊಂದು ಮಾರಿ ಕಾಯಿಲೆ ಮೆಟ್ಟಿಕೊಂಡಿದೆಯೆಂದರೆ ನಂಬುವುದೇ ಕಷ್ಟದ ಮಾತಾಗಿತ್ತು.

ಬದುಕು ಧುತ್ತೆಂದು ಎದುರೊಡ್ಡುವ ಪ್ರಶ್ನೆಗಳೇ ಹೀಗೆ! ಅಣ್ಣನ ಈ ಕಾಯಿಲೆಗೆ ಕಾರಣವನ್ನಾದರೂ ಏನೆಂದು ಹೇಳುವುದು? ಯಾವುದೇ ಜೀವಿಗೂ ಒಂದಿಷ್ಟೂ ನೋವುಂಟುಮಾಡದ, ಪರಿಶುದ್ಧ ಜೀವನಕ್ರಮದ ಅಣ್ಣನ ಈ ಕಾಯಿಲೆಗೆ ಬಹಳ ಸುಲಭವಾಗಿ ಹೇಳಿ ಸಮಾಧಾನಪಟ್ಟುಕೊಳ್ಳಬಹುದಾದ ಒಂದೇ ಒಂದು ಉತ್ತರವೆಂದರೆ , ಅಣ್ಣನೇ ಹೇಳುತ್ತಿದ್ದಂತೆ, ಬಹುಶಃ ಪ್ರಾಚೀನ ಕರ್ಮಫಲ. ಯಾಕೋ ಮನಸ್ಸಿಗೆ ತುಂಬಾ ಕಸಿವಿಸಿಯಾಗಿಬಿಟ್ಟಿತು. ಮರುದಿನದಿಂದಲೇ ಅಗತ್ಯ ಚಿಕಿತ್ಸೆಗಳು ಪ್ರಾರಂಭವಾದರೂ ವಯೋಮಾನದ ಕಾರಣದಿಂದಾಗಿ ಹೆಚ್ಚಿನ ಎಚ್ಚರ ವಹಿಸುವ ಅಗತ್ಯವಿತ್ತು. ಒಟ್ಟಿನಲ್ಲಿ ಅಣ್ಣ ಹೀಗೆ ನೋವು ಅನುಭವಿಸುವುದನ್ನು ನೋಡಲು ತುಂಬಾ ಕಷ್ಟವಾಗುತ್ತಿತ್ತಲ್ಲದೆ ಇಡೀ ಮನೆಯನ್ನು ಒಂದು ವಿಷಾದದ ಛಾಯೆ ಆವರಿಸಿಕೊಂಡುಬಿಟ್ಟಿತು.

ಈ ಒಂದು ಕಾಲಘಟ್ಟದಲ್ಲಿಯೇ ನಾನು ಸಾಲುಸಾಲು ಧಾರಾವಾಹಿಗಳಲ್ಲಿ ನಟಿಸತೊಡಗಿದ್ದು.. ನಡುನಡುವೆ ಕೆಲವು ಚಿತ್ರಗಳಲ್ಲಿಯೂ ಅಭಿನಯಿಸಿದ್ದು.. ಒಮ್ಮೊಮ್ಮೆ ರಂಗಚಟುವಟಿಕೆಯಲ್ಲೂ ಭಾಗಿಯಾದದ್ದು! ಅವು ನನ್ನ ಬದುಕಿನ ಅತ್ಯಂತ ಚಟುವಟಿಕೆಯ ದಿನಗಳು. ಒಂದು ದಿನದ ಬಿಡುವಿಗೂ ಹಾತೊರೆಯುತ್ತಿದ್ದ ದಿನಗಳು. ಆಗ ನಾನು ಮುಖ್ಯಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಧಾರಾವಾಹಿಗಳೆಂದರೆ ಮುಕ್ತ, ನಾಕುತಂತಿ, ತಕಧಿಮಿತಾ, ಕುಟುಂಬ, ಗುಪ್ತಗಾಮಿನಿ, ಕಾದಂಬರಿ, ಗೀತಾಂಜಲಿ ಹಾಗೂ ಪುಣ್ಯಕೋಟಿ. ಇವಿಷ್ಟೂ ಧಾರಾವಾಹಿಗಳಲ್ಲಿ ನನ್ನದು ವೈವಿಧ್ಯಮಯ ಪಾತ್ರಗಳು. ಈ ಸಮಯದಲ್ಲಿಯೇ ಒಂದೆಡೆ ಶ್ಯಾಮಲಾ ಭಾವೆಯವರಲ್ಲಿ ಹಿಂದೂಸ್ತಾನಿ ಸಂಗೀತ ಹಾಗೂ ಉಪಾಸನಾ ಮೋಹನ್ ಅವರಲ್ಲಿ ಸುಗಮ ಸಂಗೀತದ ತರಗತಿಗಳಿಗೂ ನಾನೂ ರಂಜನಿಯೂ ಹೋಗುತ್ತಿದ್ದೆವು!

ಒಮ್ಮೆ ಉಪಾಸನಾ ಮೋಹನ್ ಅವರ ಶಾಲೆಯ ಒಂದು ಕಾರ್ಯಕ್ರಮಕ್ಕೆ ನಾನು ಮುಖ್ಯ ಅತಿಥಿಯಾಗಿ ಹೋಗಿದ್ದೆ. ಆ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಸಿದ್ಧ ಸಾಹಿತಿ, ಪತ್ರಕರ್ತ, ಅಂಕಣಕಾರ ಎ.ಆರ್. ಮಣಿಕಾಂತ್ ಅವರು ‘ವಿಜಯ ಕರ್ನಾಟಕ’ ಪತ್ರಿಕೆಯ ತಮ್ಮ ‘ಉಭಯ ಕುಶಲೋಪರಿ ಸಾಂಪ್ರತ’ ಅಂಕಣದಲ್ಲಿ ನನ್ನ ಬಗ್ಗೆ ಒಂದು ವಿಶೇಷ ಲೇಖನವನ್ನೇ ಬರೆದು ಪ್ರಕಟಿಸಿಬಿಟ್ಟರು. ಅತ್ಯಂತ ನಮ್ರತೆಯಿಂದ ಮಣಿಕಾಂತ್ ಅವರ ಆ ಪ್ರೀತಿಯ ಬರಹವನ್ನು ಇಡಿಯಾಗಿ ತಮ್ಮೊಂದಿಗೆ ಹಂಚಿಕೊಂಡುಬಿಡುತ್ತೇನೆ!

“ಉಭಯ ಕುಶಲೋಪರಿ ಸಾಂಪ್ರತ”

“ನಿನ್ನೆ ಬಸವನಗುಡಿಯ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ಅಂಗಳದಲ್ಲಿ ಸಂಗೀತದ ಉಪಾಸನೆ ಇತ್ತು.. ಮಕ್ಕಳ ಗಾಯನಕ್ಕೆ ರಾಗ, ತಾಳ, ಹಿಮ್ಮೇಳವಾಗಿ, ಒಂದು ಸಾಕ್ಷಿಯಾಗಿ , ಚಪ್ಪಾಳೆಯ ಶಬ್ದವಾಗಿ ಸಭಿಕರು ಉಳಿದಿದ್ದಾಗಲೇ ವೇದಿಕೆಗೆ ಬಂದ ಗಾಯಕ ಉಪಾಸನಾ ಮೋಹನ್ ಅವರು ಹೇಳಿದರು: ‘ನಟ, ನಿರ್ದೇಶಕ, ನಿರೂಪಕ ಎಂದೆಲ್ಲ ಹೆಸರು ಮಾಡಿರುವ ಶ್ರೀನಿವಾಸ ಪ್ರಭು ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿ. ಪ್ರಭು, ನಿನ್ನೆಯಷ್ಟೇ ತಮ್ಮ 52 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಒಂದು ದಿನ ತಡವಾಗಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ತುಂಬಾ ಸಂತೋಷವಾಗ್ತಿದೆ.’ ಅವರ ಮಾತಿನ್ನೂ ಮುಗಿದಿರಲಿಲ್ಲ.. ಅಷ್ಟರಲ್ಲಿಯೇ ಸಭೆಯಲ್ಲಿದ್ದ ಹಿರಿಯರೊಬ್ಬರು ಬೆರಗಿನಿಂದ ಹೇಳಿದರು: ‘ಏನು? ಶ್ರೀನಿವಾಸ ಪ್ರಭುಗೆ ಆಗಲೇ ಐವತ್ತೆರಡು ವರ್ಷವಾ? ಆಗಿರಲಿಕ್ಕಿಲ್ಲ ಬಿಡ್ರಿ..ನೋಡಿದರೆ ಈಗಷ್ಟೇ ನಲವತ್ತು ದಾಟಿದವರ ಥರ ಇದ್ದಾರೆ. ಅವರ ಧ್ವನಿಯಲ್ಲಿ 25 ರ ಹುಡುಗನ ಬಿರುಸಿದೆ.. ಕಂಗಳಲ್ಲಿ ಈಟಿಯ ಮೊನೆಯಂಥ ಚೂಪು ನೋಟವಿದೆ. ಎಲ್ರೂ ನೋಡ್ತಿದೀವಲ್ಲಾ, ಉದಯ ಟಿ ವಿ ಯಲ್ಲಿ ನಾಲ್ಕು, ಈಟಿವಿಯಲ್ಲಿ ಮೂರು ಮತ್ತು ಝೀ ಟಿವಿಯಲ್ಲಿ ಒಂದು- ಹೀಗೆ ಒಟ್ಟು 8 ಧಾರಾವಾಹಿಗಳಲ್ಲಿ ದಿನವೂ ಪ್ರಭು ಕಾಣಿಸಿಕೊಳ್ತಿದಾರೆ. ಒಂದೇ ಮಾತಿನಲ್ಲಿ ಹೇಳೋದಾದರೆ- ಈ ಚಾನಲ್ ಗಳಲ್ಲಿ ಸರ್ವಂ ಶ್ರೀನಿವಾಸ ಮಯಂ! ಆದ್ರೂ ಪ್ರಭುಗೆ ಆಗಲೇ 52 ಅಂದ್ರೆ ನಂಬೋಕಾಗಲ್ಲ ರೀ. ಯಾಕಂದ್ರೆ ಅವರು 10 ವರ್ಷ ಚಿಕ್ಕವರಾಗಿ ಕಾಣ್ತಿದಾರೆ.’

ಪ್ರೀತಿಯ ಪ್ರಭು ಸಾಹೇಬರೇ, ಮೊನ್ನೆ ಇಂಥವೇ ಮೆಚ್ಚು ಮಾತುಗಳನ್ನು ಕೇಳಿದಾಗ ಖುಷಿಯಾಯಿತು. ನಿಮ್ಮ ಬಗೆಗೆ ಹೆಮ್ಮೆ ಅನ್ನಿಸಿತು. ಶುಭಾಶಯ ಕೋರುವ ಮನಸ್ಸಾಯಿತು. ಒಂದಿಷ್ಟು ಹರಟುವ, ಸುಮ್ಮನೇ ಒಮ್ಮೆ ಕಾಲೆಳೆಯುವ ಯೋಚನೆ ಬಂತು. ಆದರೆ ಆ ಗಿಜಿಗಿಜಿಯ ಮಧ್ಯೆ ನೀವು ಸಿಗಲೇ ಇಲ್ಲ. ಮೊನ್ನೆ ಹೇಳದೇ ಉಳಿದ ಮಾತುಗಳನ್ನೆಲ್ಲಾ ಪಟಾಕಿ ಸರದಂತೆ ಪೋಣಿಸಿ- ದೀಪಾವಳಿಯ ನೆಪದಲ್ಲಿ ನಿಮ್ಮೆಡೆಗೆ ರಾಕೆಟ್ ಮಾಡಿ ಹಾರಿಬಿಡಬಾರದೇಕೆ ಅನ್ನಿಸಿತಲ್ಲಾ- ಅದೇ ನೆಪದಲ್ಲಿ ಈ ಪತ್ರ..

ಸರ್, ನಿಮ್ಮ ವಾರಿಗೆಯ ಜನರಂತೂ ತುಂಬ ಸಂಭ್ರಮದಿಂದ ಧಾರಾವಾಹಿಯ ಕಥೆಯ ರೂಪದಲ್ಲೇ ನಿಮ್ಮ ಪರಿಚಯ ಹೇಳ್ತಾರೆ- ಅದು ಹೀಗೆ: ‘ಗೊತ್ತೇನ್ರೀ, ಹಾಸನಜಿಲ್ಲೆ ಅರಕಲಗೂಡು ತಾಲ್ಲೂಕು ಕಟ್ಟೇಪುರದವರು ಶ್ರೀನಿವಾಸ ಪ್ರಭು. ಬೆಂಗಳೂರು ವಿ.ವಿ.ಯಲ್ಲಿ ಬಿ.ಎ.(ಆನರ್ಸ್) ಮುಗಿಸಿದ ಪ್ರಭು, ಅಲ್ಲೇ ಕನ್ನಡ ಎಂ ಎ ಮಾಡಿದ್ರು.. ಮೊದಲ rank ತೊಗೊಂಡ್ರು. ಆದರೆ ಮೂರು ವರ್ಷ ಅವರಿಗೆ ಎಲ್ಲೂ ಕೆಲಸ ಸಿಗಲಿಲ್ಲ. ಪತ್ರಕರ್ತನ ಹುದ್ದೆಗೂ ಅರ್ಜಿ ಹಾಕಿದ್ರು.. ಅದೂ ಕ್ಲಿಕ್ ಆಗಲಿಲ್ಲ. ಆದರೆ ನಾಟಕದ ಹುಚ್ಚಿಗೆ ಬಿದ್ದ ಪ್ರಭು, 1977ರಲ್ಲಿ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಸೇರಿದ ಮೇಲೆ ಹಿಂತಿರುಗಿ ನೋಡಲೇ ಇಲ್ಲ. ಅಲ್ಲಿಂದ ಮರಳಿ ಬಂದವರೇ ‘ಎಂಪರರ್ ಜಾನ್ಸ್ ‘ ನಾಟಕವನ್ನು ವೈಎನ್ಕೆ ಮಾರ್ಗದರ್ಶನದಲ್ಲಿ ಅನುವಾದಿಸಿದ್ರು ನೋಡಿ, ಆ ಅನುವಾದದ ಭಾಷೆಗೆ ನಟ ಅನಂತನಾಗ್ ಬೋಲ್ಡ್ ಆಗಿಬಿಟ್ರು. ತುಂಬಾ ಇಷ್ಟಪಟ್ಟು ನಟಿಸಿದರು ಕೂಡಾ. ನೆನಪಿರಲಿ, ಅದು ಅನಂತನಾಗ್ (ಬೆಂಗಳೂರಲ್ಲಿ ) ಅಭಿನಯಿಸಿದ ಮೊದಲ ನಾಟಕ..
ಆಮೇಲೆ ಪ್ರಭು ದೂರದರ್ಶನದಲ್ಲಿ ಪ್ರೋಗ್ರಾಂ ಆಫೀಸರ್ ಆದರು.. ನಾಟಕಗಳನ್ನು ನಿರ್ದೇಶಿಸಿದರು.. ನಟಿಸಿದರು. ಈ ಮಧ್ಯೆ ದೂರದರ್ಶನದ ‘ಪ್ರಿಯ ವೀಕ್ಷಕರೆ’ ಕಾರ್ಯಕ್ರಮದಿಂದ ಮನೆಮಾತಾದರು.

ಸಾಹಿತ್ಯ ಕುರಿತ ಚರ್ಚೆಗೆ ವೇದಿಕೆ ಒದಗಿಸಿಕೊಟ್ಟರು. ಇನ್ನೊಂದು ಕಡೆಯಲ್ಲಿ ಇಪ್ಪತ್ತು ಚಿತ್ರಗಳಲ್ಲಿ ರವಿಚಂದ್ರನ್ ಗೆ ದನಿಯಾದರು. ನಿಮಗೆ ಗೊತ್ತಿರಲಿ, ಪ್ರಭು ನಿರ್ದೇಶಿಸಿದ ‘ಅಜಿತನ ಸಾಹಸಗಳು’ ದೂರದರ್ಶನದ ಮೊತ್ತಮೊದಲ ಧಾರಾವಾಹಿ.

ಸರ್ , ಇದೆಲ್ಲಾ ನಿಮ್ಮ ಗೆಳೆಯರ ಮಾತು. ಆದರೆ ನಿಮ್ಮನ್ನು ಧಾರಾವಾಹಿಯ ಒಂದು ಪಾತ್ರವಾಗಿ, ನಾಟಕಗಳ ಒಂದು ದೃಶ್ಯವಾಗಿ ಕಂಡವರ ವಾದವೇ ಬೇರೆ. ಅವರ ಪ್ರಕಾರ ಸಿಡಿಗುಂಡಿನಂಥ ಮಾತು, ಚೂಪು ನೋಟದ ಬೆಕ್ಕಿನ ಕಣ್ಣು, ಒಪ್ಪವಾಗಿ ಎತ್ತಿ ಬಾಚಿದ ತಲೆ, ಬೆಳದಿಂಗಳಿನಂಥ ಮುಖ, ಮಾತುಮಾತಿಗೂ ಪ್ರತ್ಯಕ್ಷವಾಗುವ ಹಣೆಯ ಮೇಲಿನ ನಿರಿಗೆ… ಇವೆಲ್ಲವುಗಳ ಒಟ್ಟು ಮೊತ್ತವೇ ಶ್ರೀನಿವಾಸ ಪ್ರಭು! ಹೇಳಿ ಸರ್ , ಈ ಮಾತಿಗೆ ನೀವು ಹೂಂ ಅಂತೀರಾ ಉಹೂಂ ಅಂತೀರಾ?

ಹೌದಲ್ವಾ ಸರ್? ನೀವು ಕಿರುತೆರೆಗೆ ಬಂದು 8 ವರ್ಷಗಳಾಗಿವೆ. ಕಾಕತಾಳೀಯ ಅನ್ನೋ ಹಾಗೆ ನಿಮಗೆ ಈಗ ಎಂಟು ಧಾರಾವಾಹಿಗಳಲ್ಲಿ ಅಭಿನಯಿಸೋ ಅವಕಾಶ ಸಿಕ್ಕಿದೆ. ಒಂದೊಂದು ಧಾರಾವಾಹಿಯಲ್ಲೂ ಒಂದೊಂದು ಬಗೆಯ ಪಾತ್ರ. ನಟನೊಬ್ಬ ಏಕಕಾಲಕ್ಕೆ ಐದಾರು ಪಾತ್ರಗಳಲ್ಲಿ ಅಭಿನಯಿಸಲು ನಿಂತರೆ ಒಂದು ಪಾತ್ರದ ಛಾಯೆ ಇನ್ನೊಂದರ ಮೇಲೆ ಬೀಳುವ, ಆ ಮೂಲಕ ಒರಿಜಿನಾಲಿಟಿಯೇ ಮಾಯವಾಗುವ ಅಪಾಯ ಇದೆ. ಆದರೆ ನಿಮ್ಮ ವಿಷಯದಲ್ಲಿ ಈ ಮಾತು ಉಲ್ಟಾ! ಒಂದೊಂದು ಪಾತ್ರದಲ್ಲೂ ನೀವು ಸಖತ್ ಮಿಂಚ್ತಾ ಇದೀರಾ. ಪಾತ್ರವೇ ನೀವಾಗಿಬಿಟ್ಟಿದೀರಾ. ಆ ಮೂಲಕ ಮನೆಮನೆಯ ಮಾತಾಗಿ ಉಳಿದುಬಿಟ್ಟಿದೀರಾ. ಸರ್, ಇಂಥಾ ಮ್ಯಾಜಿಕ್ಕು ನಿಮಗೆ ಹೇಗೆ ಸಾಧ್ಯ ಆಯ್ತು? ಇದೆಲ್ಲಾ ಯೋಗದಿಂದ ದಕ್ಕಿದ ಗೆಲುವಾ? ಧ್ಯಾನದಿಂದ ಲಭಿಸಿದ ವರವಾ ಅಥವಾ ಎಲ್ಲವೂ ದೇವರ ಆಟವಾ?
ಸರ್, ಒಂದೇ ಮಾತಲ್ಲಿ ಹೇಳಿಬಿಡುವುದಾದರೆ- ನೀವು ಕಿರುತೆರೆಯ ಸಾರ್ವಭೌಮ!

ಅದೇ ಹಿರಿತೆರೆಯತ್ತ ಹೊರಳಿ ನೋಡಿದರೆ- ಛೆ! ಪಾಪ! ನಿಮಗಿರುವ ಟ್ಯಾಲೆಂಟ್ ಗೆ ಅಪರೂಪದ ಪಾತ್ರಗಳು ಹುಡುಕಿಕೊಂಡು ಬರಬೇಕಿತ್ತು. ಆದರೆ ಹೀಗಾಗಲೇ ಇಲ್ಲ. ಅದನ್ನ ನೆನಪು ಮಾಡಿಕೊಂಡಾಗಲೆಲ್ಲಾ ನಮಗೇ ಪಿಚ್ಚೆನಿಸುತ್ತೆ. ಆದ್ರೆ ನೀವು- ಅಯ್ಯೋ ಬಿಡ್ರಿ.. ಸಿನಿಮಾದಲ್ಲಿ ಸಿಗದೇ ಹೋದ್ರೆ ಕತ್ತೆ ಬಾಲ. ನಾನು ಕಿರುತೆರೆಯಲ್ಲೇ ಸುಖವಾಗಿದೀನಿ ಅಂತೀರಾ ಸರಿ. ಆದ್ರೂ.. ಆಗೊಮ್ಮೆ ಈಗೊಮ್ಮೆ ಹಿರಿತೆರೆಯಲ್ಲಿ ಮಿಂಚಲಿಲ್ಲ ಅನ್ನೋ ನೋವು ನಿಮ್ಮನ್ನು ಕಾಡ್ತಾನೇ ಇರುತ್ತೆ ನಿಜ ತಾನೇ?

ನಾವು ಹಾಗೇನೇ. ಕಲಾವಿದರನ್ನ ಬೆರಗಿನಿಂದ ನೋಡ್ತೀವಿ, ಒಂದೊಂದು ಪಾತ್ರವನ್ನೂ ಆಸೆಯಿಂದ ನೋಡಿ- ಅರರೆ, ಹೀಗೆಲ್ಲಾ ಅಭಿನಯಿಸುವುದು ಹೇಗೆ ಅಂತ ಯೋಚಿಸ್ತೀವಿ. ಧಾರಾವಾಹಿ- ನಾಟಕ ಮುಗಿದ ಮೇಲೆ ಅದನ್ನೇ ‘ಕಾಪಿ’ ಮಾಡ್ತೀವಿ. ಹೇಳಿ, ದಿನಕ್ಕೊಂದು ಪಾತ್ರದಲ್ಲಿ ಅಭಿನಯಿಸುವಾಗ ನಿಮಗೆ ಏನನ್ನಿಸುತ್ತೆ? ‘ನಿಮ್ಮ ವ್ಯಕ್ತಿತ್ವದಲ್ಲೇ ಇರದ’ ಪಾತ್ರವೇ ಆಗಿಬಿಡಲು ಮನಸ್ಸಾದ್ರೂ ಹೇಗೆ ಬರುತ್ತೆ? ಸತ್ಯ ಹೇಳಿ ಸರ್ , ‘ಇತಿ ನಿನ್ನ ಅಮೃತಾ’ ನಾಟಕದಲ್ಲಿ ಅಮರಪ್ರೇಮಿಯಾಗಿ ನಟಿಸಿದಿರಲ್ಲ, ಆ ಪಾತ್ರದ ಒಂದೊಂದು ಡೈಲಾಗ್ ಹೇಳುವಾಗಲೂ ನಿಮ್ಮ ಟೀನೇಜ್ ಲವ್ ನೆನಪಾಗಲಿಲ್ಲವಾ? ಆ ದಿನಗಳಲ್ಲಿ ದಕ್ಕದೇ ಹೋದ ಹುಡುಗಿಯ ನೆನಪು ಬಿಟ್ಟೂ ಬಿಡದೆ ಕಾಡಲಿಲ್ಲವಾ? (ನೀವು ‘ಅಮೃತ’ಳ ನೆನಪಲ್ಲಿ ಇದ್ದಾಗಲೇ ‘ಯಾರ್ರೀ ಅವಳು ಅಮೃತಾ’ ಎಂದು ನಿಮ್ಮ ಮನೆಯವರು ಜೋರು ಮಾಡಲಿಲ್ಲವಾ?) ಅದೇ ಕಾರಣದಿಂದ ನೀವು ಅದ್ಭುತದ್ಭುತ ಅನ್ನೋ ಹಾಗೆ ನಟಿಸಿ ನಾಟಕ ಭರ್ಜರಿಯಾಗಿ ಯಶಸ್ವಿಯಾಯ್ತು, ನಿಜ ಅಲ್ಲವಾ?

ಕಡೆಯ ಮಾತೇನು ಗೊತ್ತಾ? ನೋಡಲಿಕ್ಕೆ ನೀವು ರಫ್ ಅಂಡ್ ಟಫ್ ಇದೀರಾ. ಸಮಾರಂಭಗಳಲ್ಲಿ ನಿಮ್ಮ ಮಾತು ಕೇಳಿದವರು- ಆ ಸಿಂಹವಾಣಿಗೆ ಬೆಚ್ಚಿ- ಅಯ್ಯಯ್ಯೋ, ಈ ಮಾರಾಯ ಹೀಗೆ ಮಾತಲ್ಲೇ ಹೆದರಿಸ್ತಾನಲ್ಲಾ, ಅವರ ಹೆಂಡ್ತಿ ದಿನಕ್ಕೆ ಎಷ್ಟು ಹೆದರ್ತಾರೋ ಏನೋ ಅಂತಿರೋವಾಗ್ಲೇ- ನೀವು ಮಧುರಾತಿಮಧುರ ದನಿಯಲ್ಲಿ ಭಾವಗೀತೆ ಹಾಡಲು ಶುರುವಿಟ್ಟಿದೀರಾ! ಹೌದು, ನಿಮ್ಮ ಮನದೊಳಗೊಂದು ಮಗುವಿದೆ, ಪ್ರೀತಿಯ ಗುಲಾಬಿಯಿದೆ.. ಹಾಡಿದೆ.. ಎಂದೆಂದೂ ಮುಗಿಯದ ರಾಗವಿದೆ. ಈ ಸಂಭ್ರಮದ ನಡುವೆ 52 ನೇ ವರ್ಷವೂ ಬಂದು ಕೈಹಿಡಿದಿದೆ.

ಈ ಕ್ಷಣದ ಸಂಭ್ರಮ ನಿಮಗೆ ಬದುಕು ಪೂರಾ ಇರಲಿ ಎಂಬ ಶುಭ ಹಾರೈಕೆಯೊಂದಿಗೆ-
ಪ್ರೀತಿ ಮತ್ತು ಪ್ರೀತಿಯಿಂದ

ಎ.ಆರ್. ಮಣಿಕಾಂತ್.

ಆ ಸಮಯದಲ್ಲಿ ನನ್ನ ಬಗ್ಗೆ ಬಂದ ಹಲವಾರು ಲೇಖನಗಳಲ್ಲಿ ಮಣಿಕಾಂತ್ ಅವರ ಈ ಲೇಖನ ನನಗೆ ತುಂಬಾ ಪ್ರಿಯವಾದದ್ದು. ಈ ಲೇಖನವನ್ನು ಇಲ್ಲಿ ಹಂಚಿಕೊಂಡದ್ದಕ್ಕೆ ಕಾರಣ, ಲೇಖನದ ಅನೌಪಚಾರಿಕ, ಆಪ್ತ ಧಾಟಿ. ತುಂಬು ಸ್ನೇಹ- ಪ್ರೀತಿಯಿಂದ ಮಣಿಕಾಂತ್ ಅವರು ಬರೆದಿದ್ದ ಈ ಬರಹವನ್ನು ಅಷ್ಟೇ ಪ್ರೀತಿಯಿಂದ,ಮಿಗಿಲಾದ ಸಂಕೋಚ- ವಿನಮ್ರತೆಗಳಿಂದ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇಂತಹ ಶುದ್ಧ ಪ್ರೀತಿಯ ಬರಹಗಳು ಅಹಮಿಕೆಯನ್ನು ಹೆಚ್ಚಿಸುವ ಬದಲು ಸಂತಸದ ಜತೆಗೆ ಒಂದು ಬಗೆಯ ಎಚ್ಚರವನ್ನೂ ನೀಡುತ್ತಾ ಹೊಣೆಗಾರಿಕೆಯನ್ನು ಹೆಚ್ಚಿಸುತ್ತವೆಂಬುದು ನನ್ನ ನಂಬಿಕೆ. ಅಂತೆಯೇ ಇಷ್ಟು ವರ್ಷಗಳ ನಂತರವೂ ಈ ಲೇಖನದ ಪತ್ರಿಕೆಯ ಪುಟ ತುಂಬಾ ಜತನವಾಗಿ ನನ್ನ ಕಡತದಲ್ಲಿದೆ!

ತುಂಬು ಹೃದಯದ ಧನ್ಯವಾದಗಳು ಮಣಿಕಾಂತ್ ಸರ್!!

‍ಲೇಖಕರು avadhi

February 16, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: