ಪಾರ್ವತಿ ಜಿ ಐತಾಳ್ ಓದಿದ ‘ಕಾಳಿ ಗಂಗಾ’

ಪಾರ್ವತಿ ಜಿ ಐತಾಳ್

**

ಖ್ಯಾತ ಸಾಹಿತಿ ಗೀತಾ ಶೆಣೈ ಅವರ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ’ ಪುರಸ್ಕೃತ ಕೃತಿ ‘ಕಾಳಿ ಗಂಗಾ’.

ಈ ಪುಸ್ತಕವನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.

**

ಖ್ಯಾತ ಲೇಖಕಿ ಡಾ.ಗೀತಾ ಶೆಣೈಯವರು ಅನುವಾದಿಸಿದ ‘ಕಾಳಿ ಗಂಗಾ’ ಕನ್ನಡದ ‘ಗ್ರಾಮಾಯಣ’ವನ್ನು ನೆನಪಿಸುವ ಒಂದು ವಿಶಿಷ್ಟ ಕಾದಂಬರಿ. (ಪ್ರಸಿದ್ಧ ಕೊಂಕಣಿ ಮತ್ತು ಮರಾಠಿ ಲೇಖಕ, ಸರಸ್ವತಿ ಸಮ್ಮಾನ ವಿಜೇತ ಮಹಾಬಳೇಶ್ವರ ಸೈಲ್ ಅವರ ಕಾದಂಬರಿಯ ಅನುವಾದ). ಒಮ್ಮೆ ಓದಲು ಆರಂಭಿಸಿದರೆ ಮುಗಿಸದೆ ಕೆಳಗಿಡಲಾರದಂಥ  ಆಕರ್ಷಣೆ ಇದಕ್ಕಿದೆ.‌ ಗ್ರಾಮೀಣ ಸಂಸ್ಕೃತಿಯ ವಿವರಗಳನ್ನು ಎಳೆ ಎಳೆಯಾಗಿ ಚಿತ್ರಿಸುವ ಇದು ಆಧುನಿಕತೆಯ ದಾಳಿಯಿಂದಾಗಿ ಅವನತಿಯತ್ತ ಸಾಗುತ್ತಿರುವ ಕೃಷಿ ಕುಟುಂಬಗಳ ದಾರುಣ ಸ್ಥಿತಿಯನ್ನು ವರ್ಣಿಸುವ ಪರಿ ಓದಿದ ನಂತರ ಮನಸ್ಸನ್ನು ಬಹುವಾಗಿ ಕಾಡುತ್ತದೆ. ಇದು ಕಾರವಾರ ಸಮೀಪದ ಕಡಲತೀರದ ಕೆಲವು ಗ್ರಾಮಗಳ ಕಥೆ. 

ಬಹಳ ಹಿಂದೆ ಗೋವಾದಿಂದ ವಲಸೆ ಬಂದು  ಈ ಹಳ್ಳಿಯಲ್ಲಿ ಅಪ್ಪಟ ಕೃಷಿಕರಾಗಿ ನೆಲೆಯೂರುವ ಒಂದು ಜನಾಂಗ ಇಲ್ಲಿ ಮುನ್ನೆಲೆಯಲ್ಲಿದೆ. ಲೇಖಕರು ಹೆಂಡತಿಯನ್ನು ಕಳೆದುಕೊಂಡು ಅನಾಥರಾದ ಗಣೇಶ ಮತ್ತು ಮಂಜುಳಾ- ಸುಮನಾ ಎಂಬ ಅವನ ಇಬ್ಬರು ಹೆಣ್ಣುಮಕ್ಕಳ ಕಥೆಯನ್ನು ಹೇಳಲಿಕ್ಕೆ ಹೊರಟರೂ  ಕುಟುಂಬ ಬಂಧುಗಳು, ಅಕ್ಕಪಕ್ಕದ ಮನೆಯವರು, ನೆರೆಯ ಹಳ್ಳಿಗಳ ಮಂದಿಯೂ ಇಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ.‌ ಅಮ್ಮನನ್ನು ಕಳೆದುಕೊಂಡಾಗ ಕೇವಲ ಒಂಬತ್ತು ವರ್ಷದವಳಾಗಿದ್ದ ಮಂಜುಳಾ ಮೂರು ತಿಂಗಳ ಮಗುವಾಗಿದ್ದ ತನ್ನ ತಂಗಿಗೆ ತಾಯಿಯಾಗಿ ಗೃಹಕೃತ್ಯಗಳನ್ನು ನಿಭಾಯಿಸುವ ಪುಟ್ಟ ಗೃಹಿಣಿಯಾಗಿ, ಹೊಲದಲ್ಲಿ ದುಡಿಯಲು ಅಪ್ಪನಿಗೆ ಸಹಾಯ ಮಾಡುವವಳಾಗಿ ಹೇಗೆ ಯಶಸ್ವಿಯಾಗುತ್ತಾಳೆ ಅನ್ನುವುದು ಒಂದು ಅಚ್ಚರಿಯ ಕಥೆ.

ಆದರೆ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಜಿಪುಣಿ ತಂದೆಯ ಮಗ ಶ್ರೀಧರ್ ನನ್ನು ಮದುವೆಯಾದದ್ದು ಅವಳ ಪಾಲಿಗೆ ಶಾಪವಾಗಿ ಪರಿಣಮಿಸುತ್ತದೆ. ಸೇನೆಯಲ್ಲಿದ್ದಾಗ ರಮ್ ಕುಡಿಯಲು ಆರಂಭಿಸಿ ಮುಂದೆ ಮಹಾ ಕುಡುಕನಾಗುವ ಶ್ರೀಧರನ ನಿರ್ಲಕ್ಷ್ಯದಿಂದಾಗಿ ತನ್ನ ಇಬ್ಬರು ಹಸುಗೂಸುಗಳನ್ನು ಬಿಟ್ಟು ಮಂಜುಳಾ ಸಾಯುತ್ತಾಳೆ. ಅವಳ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಸುಮನಾ ಮೇಲೆ ಬೀಳುತ್ತದೆ. ಹಿರಿಯರ ವಿರೋಧದಿಂದಾಗಿ ಅವಳು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಅವಳ ಬಾಲ್ಯದ ಗೆಳೆಯ ಗೋವಿಂದನನ್ನು ಮದುವೆಯಾಗುವುದು ಅವಳಿಗೆ ಅಸಾಧ್ಯವಾಗುತ್ತದೆ. ಸಂಪ್ರದಾಯದ ನೆಪ ಹೇಳಿ ಮದುವೆಗೆ ಅಡ್ಡಿ ಒಡ್ಡುವ ಸಮಾಜದ ಧೋರಣೆಯನ್ನು ಧೈರ್ಯದಿಂದ ಪ್ರತಿಭಟಿಸುವ ಕ್ರಾಂತಿಕಾರಿಯಾಗಿ ಅವಳು  ಗಟ್ಟಿ ನಿಂತರೆ ಮೃದು ಮನಸ್ಸಿನ ಗೋವಿಂದ ಈ ಆಘಾತವನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಇಲ್ಲಿ ನೆಪ ಮಾತ್ರಕ್ಕೆ ಒಂದು ಕಥಾ ಹಂದರವಿದೆ. 278 ಪುಟಗಳ ಈ ಕಾದಂಬರಿಯ ಉದ್ದಕ್ಕೂಇರುವುದು ಬರೇ ಗ್ರಾಮಾಯಣ. ಚೀನಾ-ಭಾರತ ಯುದ್ಧ ಮತ್ತು ಭಾರತ-ಪಾಕಿಸ್ತಾನ ಯುದ್ದಗಳನ್ನು ಪಾತ್ರಗಳು ಅಲ್ಲಲ್ಲಿ ಉಲ್ಲೇಖಿಸುವುದರಿಂದ ಕಥೆಯ ಕಾಲ 1960 ರ ದಶಕವೆನ್ನಬಹುದು. ಮೂಲೆ ಮೂಲೆಯ ಹಳ್ಳಿಗಳಿಗೆ ವಿದ್ಯುತ್ ಬಾರದಿದ್ದ ಕಾಲ. ಹಳ್ಳಿಗರು ಬೆಳಕಿಗೆ ಚಿಮಿಣಿ ದೀಪ-ಲಾಟೀನುಗಳನ್ನು ಬಳಸುತ್ತಿದ್ದ ಕಾಲ.‌ ಹಳ್ಳಿಗರಲ್ಲಿ ಯಾರಿಗಾದರೂ ಅಸೌಖ್ಯವಾದರೆ ಊರಲ್ಲಿ ವೈದ್ಯರಿಲ್ಲ. ಚಿಕಿತ್ಸೆ ಬೇಕಿದ್ದರೆ ಕಾಳಿ ನದಿಯನ್ನು ದಿವಸದಲ್ಲಿ ಒಮ್ಮೆ ಮಾತ್ರ ಬರುತ್ತಿದ್ದ ಲಾಂಚ್ ನಲ್ಲಿ ದಾಟಿ ಬಸ್ಸು ಹಿಡಿದು ಕಾರವಾರಕ್ಕೋ ಪಣಜಿಗೋ ಹೋಗಬೇಕು. ಕಡು ಕಷ್ಟದ ಪರಿಸ್ಥಿತಿ.

ಹಗಲಿರುಳೆನ್ನದೆ ಹೊಲದಲ್ಲಿ ಕಷ್ಟ ಪಟ್ಟು ದುಡಿಯುವ ಕೃಷಿಕರೇ ಇಲ್ಲಿನ ಹೆಚ್ಚಿನ ಪಾತ್ರಗಳು. ಹಾಗೆಂದು ಅವರು ಅಸಂತೋಷಿಗಳಲ್ಲ. ಜಾತ್ರೆಗಳಿವೆ. ಎಲ್ಲರೂ ಒಟ್ಟಾಗಿ ಎಳೆಯುವ ರಥೋತ್ಸವವಿದೆ.‌ ಹಬ್ಬ-ಹರಿದಿನಗಳ ಆಚರಣೆಗಳಿವೆ, ನಂಬಿಕೆಗಳಿವೆ, ನೃತ್ಯ-ಕುಣಿತಗಳಿವೆ. ಎಲ್ಲರೂ ಒಟ್ಟಾಗುವ ಸಂದರ್ಭ ಬಂದಾಗ ತಮ್ಮ ವೈಯಕ್ತಿಕ ಅಸಮಾಧಾನಗಳೇನಿದ್ದರೂ ಅವೆಲ್ಲವನ್ನೂ ಮರೆತು ಅವರು ಒಂದಾಗುತ್ತಾರೆ.  ಹಳ್ಳಿಯ ಎಲ್ಲಾ ಕುಟುಂಬದವರೂ ಪರಸ್ಪರರಿಗೆ ಸಹಾಯ ಮಾಡುವ ಪರಿಯೇ ಚೆಂದ. ಆಧುನಿಕರಿಗೆ ಈ ರೀತಿಯ ಜೀವನ ಶೈಲಿ ತೀರಾ ಅಪರಿಚಿತ. ಆಧುನಿಕ ವೈದ್ಯಕೀಯ ಸವಲತ್ತು ಸೊನ್ನೆಯೇ ಆಗಿದ್ದರೂ ಹಳ್ಳಿಗರಿಗೆ ಅವರದ್ದೇ ಆದ ನಾಟಿ ವೈದ್ಯರ ವ್ಯವಸ್ಥೆಯಿದೆ. ಸೊಪ್ಪು -ನಾರು-ಬೇರು-ಕಷಾಯಗಳ ಮೂಲಕ ಅಂಥ ವೈದ್ಯರು ಬಹಳ ಗಂಭೀರ ಕಾಯಿಲೆಗಳನ್ನೂ ಗುಣಪಡಿಸಬಲ್ಲರು. ಹೆರಿಗೆ ಮಾಡಿಸುವ ಸೂಲಗಿತ್ತಿಯೂ ಅಲ್ಲಿ ಇದ್ದಾಳೆ. ವಂಶದಿಂದ ವಂಶಕ್ಕೆ  ರಹಸ್ಯವನ್ನು ಬೇರೆ ಯಾರಿಗೂ ಬಿಟ್ಟು ಕೊಡದೆ ಮುಂದುವರಿಯುವ ಅದ್ಭುತ ಜ್ಞಾನ ಸಂಪತ್ತು ಇದು.

ಕಾದಂಬರಿಯ ಗಟ್ಟಿಯಾದ ಸ್ತ್ರೀ ಪಾತ್ರಗಳು ಸ್ತ್ರೀಯರು ಪುರುಷರಿಗಿಂತ ಕೆಳಗೆ ಎನ್ನುವ ರೂಢಿಗತ ನಂಬಿಕೆಯನ್ನು ಮುರಿಯಲೆಂದೇ ಹುಟ್ಟಿಕೊಂಡಿವೆ.  ಧೈರ್ಯ, ದಿಟ್ಟತನ, ಛಲ, ದುಡಿಮೆ, ಚಿಂತನೆ, ಅನ್ಯಾಯಕ್ಕೆ ತಲೆಬಾಗದೆ ಪ್ರಶ್ನಿಸುವ ಎದೆಗಾರಿಕೆ ಮೊದಲಾದ ಹಲವು ಧನಾತ್ಮಕ ಗುಣಗಳನ್ನು ಅವರು ಪುರುಷರಿಗಿಂತ ಹೆಚ್ಚು ಬೆಳೆಸಿಕೊಂಡಿದ್ದಾರೆ. ತಾನು ಶ್ರೇಷ್ಠನೆಂದು ಮೆರೆಯುವ ಗಂಡಿನ ಜೀವನದ ಮುಖ್ಯ ಆಧಾರ ಸ್ತಂಭವೇ ಹೆಣ್ಣು ಅನ್ನುವುದನ್ನು ಕಾದಂಬರಿ ಅಲ್ಲಲ್ಲಿ ಸಾಕ್ಷಿ ಸಮೇತ ಸಾದರ ಪಡಿಸುತ್ತದೆ.‌ ಎಲ್ಲಕ್ಕಿಂತ ಹೆಚ್ಚು ಕಾಳಿ ನದಿಯ ವರ್ಣನೆಯ ಬಗ್ಗೆ ಲೇಖಕರು ಓದುಗರ ಗಮನ ಸೆಳೆಯುತ್ತಾರೆ. ಎಲ್ಲ ಹೆಣ್ಣು  ಮಕ್ಕಳಿಗೂ ಕಟು ಮತ್ತು ಕೋಮಲ ಎಂಬ ಎರಡು ಮುಖಗಳು ಇರುವಂತೆ ಕಾಳಿಯೂ ಸಾಂದರ್ಭಿಕವಾಗಿ ಬಣ್ಣ ಬದಲಾಯಿಸುತ್ತಾಳೆ. ಹಳ್ಳಿಗರ ನೋವು-ನಲಿವುಗಳಿಗೆ ಸ್ಪಂದಿಸುತ್ತ  ಕೆಲವೊಮ್ಮೆ ಪ್ರಸನ್ನಳಾಗಿ ಜೀವದಾಯಿನಿ ಗಂಗೆಯಾದರೆ ಇನ್ನು ಕೆಲವೊಮ್ಮೆ ನಿರ್ದಾಕ್ಷಿಣ್ಯವಾಗಿ ಭೀಕರಳಾಗಿಯೂ ಕಾಣುತ್ತಾಳೆ. ಜೀವ ಹೋಗುವಂಥ ಪರಿಸ್ಥಿತಿ ಇದ್ದರೂ ಹಳ್ಳಿಗರನ್ನು ಸುಲಭವಾಗಿ ಹೊರಗೆ ಹೋಗಲು ಬಿಡದೆ ಅವರನ್ನು ಒಂದು ದ್ವೀಪವಾಗಿಸುತ್ತಾಳೆ. ಹಾಗಾಗಿ ಕಾಳಿಯೂ ಇಲ್ಲಿ ಒಂದು ಸಶಕ್ತ ಸ್ತ್ರೀ ಪಾತ್ರವೇ ಆಗಿದ್ದಾಳೆ. ತಾವು ವಾಸಿಸುವ ಪುಟ್ಟ ಗ್ರಾಮವನ್ನು ಬಿಟ್ಟು ಬೇರೆ ಪ್ರಪಂಚವೇ ತಿಳಿಯದ ಮುಗ್ಧ ಹಳ್ಳಿಗರ ಪಾಲಿಗೆ ಕಾಳಿಯೂ ಆಗಿದ್ದಾಳೆ. ಗಂಗೆಯೂ ಆಗಿದ್ದಾಳೆ.

ಕಾದಂಬರಿಯ ಕಥನ ಶೈಲಿ ಸುಂದರವಾಗಿದೆ. ನಿಸರ್ಗದ ವರ್ಣನೆ ಮತ್ತು ಭಾವೋತ್ಕರ್ಷದ ಸಂದರ್ಭಗಳು ಬಂದಾಗ ಅದು ಒಂದು ದೃಶ್ಯ ಕಾವ್ಯವೇ ಆಗಿಬಿಡುತ್ತದೆ. ಅನುವಾದ ತುಂಬಾ ಹೃದ್ಯವಾಗಿದೆ. ಮೂಲದ ಕಾವ್ಯಾತ್ಮಕತೆಯನ್ನು ಅನುವಾದಕಿ ಉಳಿಸಿಕೊಂಡಿದ್ದಾರೆ. ಕಥೆಯ ಅನುವಾದ ಮಾತ್ರವಲ್ಲದೆ ಮೂಲ ಸಂಸ್ಕೃತಿಯ ಪರಿಚಯವನ್ನು ಕೆಲವು ಶಬ್ದಗಳನ್ನು ಹಾಗೆಯೇ ಉಳಿಸಿಕೊಳ್ಳುವುದರ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಕೊನೆಯಲ್ಲಿ ಅವುಗಳ ವಿವರಣೆಯನ್ನು ಟಿಪ್ಪಣಿಯಲ್ಲಿ ಕೊಟ್ಟಿದ್ದಾರೆ.‌ ಅನುವಾದದ ಉದ್ದೇಶವೇ  ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಗಳ ಪರಿಪೋಷಣೆ. ಅದನ್ನು ಗೀತಾ ಬಹಳ ಸಮರ್ಥವಾಗಿ ಮಾಡಿದ್ದಾರೆ.‌

‍ಲೇಖಕರು Admin MM

February 16, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: