ನಂದಿನಿ ಹೆದ್ದುರ್ಗ ಹೊಸ ಕವಿತೆ: ಅಳತೆ-ಆಯ್ಕೆ

ನಂದಿನಿ ಹೆದ್ದುರ್ಗ

ಇದಕ್ಕಿಂತ ಅದು
ಚಂದವಿದೆ ಎಂದ  ಮಾತ್ರಕ್ಕೆ
ಇದು ಚಂದವಿಲ್ಲ
ಎಂದರ್ಥವಲ್ಲ

ಅಳತೆಗೂ ಆಯ್ಕೆಗೂ ಇದು
ಮೊದಲು ಸೂಕ್ತ ಎಂದಷ್ಟೆ..
ಅವನ ಪ್ರೀತಿಸುತ್ತೇನೆ ಎಂದರೆ
ನಿನ್ನ ಪ್ರೀತಿಸಲಾರೆ ಎಂದಲ್ಲ

ಬಹಳ ರುಚಿಯಿದೆ ಅದು
ಎಂದಾಗ ಹಳಸಿದೆಯಾ ಇದು
ಎಂಬ ಹಳಹಳಿಕೆ ಯಾಕೆ?

ಚಂದಮಾಮ ಚಂದ ಇದೆ ಎಂದಿದ್ದಕ್ಕೆ
ಚುಕ್ಕಿ ಬಿಕ್ಕಬೇಕೆ?

‘ಅದು’ ಶುದ್ದ , ಶ್ವೇತ, ಮುದ್ದು..
ಕಡುಕೆಂಪು,
ಗಗನ ನೀಲಿ, ಅಚ್ಚಗಪ್ಪು
ಸುಂದರವಾದ ಒಂದೇ ಬಣ್ಣ
ಥಟ್ಟನೇ ಸೆಳೆದಂತೆ ಕಣ್ಣ

‘ಆದರಿದು’ ಹಾಗಲ್ಲ
‘ಕಪ್ಪು’ ‘ಬಿಳುಪು’ ಪರಸ್ಪರ
ಒಪ್ಪಿ ಅಪ್ಪಿದ ಹಾಗೆ.
ಮುಗಿಲು ಬಸುರಾದ ಬಣ್ಣ

ಕಡುಗೆಂಪು ಅಚ್ಚಗಪ್ಪು ಪರಸ್ಪರ
ಮೆಚ್ಚಿದರೆ ಅದು ‘ಕಂದು’
ಚೌಕಟ್ಟು ಮುಖದೊಳಗೆ ಹೊಳೆವ
ಅವನ ಪುಟ್ಟ ಕಣ್ಣಿನ ಒಳಸುಳಿಯ ಬಣ್ಣ.
ಹೆಚ್ಚು ಬರೆಯಲಾರೆ ಅದರ ಬಗ್ಗೆ..
ಮುಳುಗಿದರೆ ಮುತ್ತಿಟ್ಟು ಎತ್ತುವವರೇ
ಇಲ್ಲ ನನ್ನ ಪಾಲಿಗೆ



ಮುಗಿಲು ಬಸುರಾದ ಇಂತಹದ್ದೇ ಒಂದು ದಿನ
ತಿಳಿಗುಲಾಬಿ ಕಮೀಝು ತೊಟ್ಟಾಗ
ನೋಡಿದ್ದು ನಾನವನ!

‘ಕರಿಯ’ ಎನ್ನುತ್ತಲೇ ಎಷ್ಟರ ಮಟ್ಟಿಗೆ ಹಚ್ಚಿ ಕೊಂಡೆ ನಾನು.
ಆ ಅಚ್ಚಗಪ್ಪು ನನ್ನೊಳಗೆ
ಎಬ್ಬಿಸಿದ ಪುಳಕಕ್ಕೆ ಎಣೆಯುಂಟೆ, ಗೆಳೆಯ?!

‘ಮುದ್ದು ಬಿಳಿ‌ಪಾರಿವಾಳ’
ಎನ್ನುತ್ತ ನನ್ನ ಶುದ್ಧಾತಿಶುದ್ಧ ಬಣ್ಣವನ್ನೂ
ಭಟ್ಟಿ ಇಳಿಸಿದ್ದ

ಅಚ್ಚಗಪ್ಪು, ಮುದ್ದುಬಿಳಿಯೂ
ಮುದ್ದಿಸಿ ಮೂಡಿತ್ತು ಮುಗಿಲು
ಇನ್ನೇನು ಗರ್ಭ ಕಟ್ಟೀತೆನ್ನುವಾಗ
ಕಪ್ಪು ಕೇಸರಿಯ ಕದ ತಟ್ಟುತಿತ್ತು
ಇದೇನೆಂದರೆ.., ಅವ ಕ್ರುದ್ಧ!
‘ಅಲ್ಲಿ ಅಪ್ಪಿರುವೆನೆಂದರೆ
ಇಲ್ಲಿ ಒಪ್ಪಿಲ್ಲವೆಂದಲ್ಲ’
ಎಂಥಾ ಮಾತು..

ಬಸುರಾಗದೇ ಮುಗಿಲು
ವಾಕರಿಕೆಯ ಸುಖ ಬೇಕೆಂದರೆ ಹೇಗೆ…!

ಇಲ್ಲಿ ಇದೂ ಚಂದ ಇಲ್ಲ
ಅದೂ ಚಂದವಿಲ್ಲ.
ಅಥವಾ
vice versa…

‍ಲೇಖಕರು Avadhi

April 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: